ಸಮಾಜದ ಒಳಿತಿಗಾಗಿ ತಲೆಮಾರಿನಿಂದ ತಲೆಮಾರಿಗೆ ಜ್ಞಾನವನ್ನು ವರ್ಗಾಯಿಸಿದ ಗುರುಗಳ ಸರಣಿಯನ್ನು ಗುರು ಪರಂಪರೆ ಎನ್ನುತ್ತಾರೆ. ಗುರುವಿನಿಂದ ಶಿಷ್ಯನಿಗೆ ಜ್ಞಾನವನ್ನು ವರ್ಗಾಯಿಸುವ ಸಂಪ್ರದಾಯವಿದು. ಇದು ಭಾರತೀಯ ಉಪಖಂಡದ ಪ್ರಮುಖ ಗುರುಕುಲಗಳು ಜ್ಞಾನವನ್ನು ಉಳಿಸಿಕೊಳ್ಳಲು ಬಳಸಿದ ಪದ್ಧತಿಯೂ ಹೌದು.
ಗುರುಪರಂಪರೆಯ ಮಹತ್ವ
ಪ್ರತಿಯೊಂದು ಪೀಳಿಗೆಗೂ ಸಾಮಾನ್ಯವಾಗಿರುವ ಮಾನಸಿಕ ತೊಂದರೆಗಳನ್ನು, ತೊಳಲಾಟವನ್ನು ದೂರಮಾಡಲು ಬೇಕಾದ ಜ್ಞಾನವು ಆ ಎಲ್ಲ ಪೀಳಿಗೆಗಳಿಗೂ ಲಭ್ಯವಿರುವಂತೆ ಮಾಡುವ ವ್ಯವಸ್ಥೆ ಈ ಗುರು-ಶಿಷ್ಯ ಸಂಪ್ರದಾಯ.
ಗುರು ಪರಂಪರೆಯ ಪ್ರತಿಯೊಬ್ಬ ಗುರುವೂ ಸನಾತನವಾದ ಜ್ಞಾನವನ್ನು ತಮ್ಮ ತಲೆಮಾರಿಗೆ ಸೂಕ್ತವಾಗಿ ಅನ್ವಯಿಸುವಂತೆ ಪ್ರಸ್ತುತಪಡಿಸಿದ್ದಾರೆ. ಪ್ರತಿಯೊಂದು ಗುರು ಪರಂಪರೆಯೂ ಜಗತ್ತಿಗೆ ಅಪಾರವಾದ ಕೊಡುಗೆಗಳನ್ನು ನೀಡಿದೆ. ಅವರಿಂದ ಶ್ರೇಷ್ಠ ಗ್ರಂಥಗಳು ರಚಿತವಾಗಿವೆ. ಪ್ರತಿ ಸಂಪ್ರದಾಯದ ಗುರುಗಳೂ ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ಹೊಂದಿದ್ದರು. ಅವರನ್ನು ಅಷ್ಟಿಷ್ಟು ಸ್ಮರಿಸಿಕೊಂಡರೂ ಅವರ ಗುಣಗಳು ನಮ್ಮಲ್ಲಿ ಜೀವಂತವಾಗುತ್ತವೆ.
ಅದ್ವೈತ ಗುರು ಪರಂಪರೆ
“ವಿಶ್ವದ ಪ್ರತಿಯೊಂದೂ ಪ್ರತಿಯೊಬ್ಬರೂ ಒಂದೇ ವಿಶಾಲವಾದ ಪ್ರಜ್ಞೆಯ ಭಾಗ ಎಂದು ಅದ್ವೈತ ತತ್ತ್ವವು ಪ್ರತಿಪಾದಿಸುತ್ತದೆ. ʼಜಗತ್ತಿನಲ್ಲಿ ಎಲ್ಲವೂ ತರಂಗವೃತ್ತಿಗಳುʼ ಎಂದು ಪ್ರತಿಪಾದಿಸುವ ಪರಿಮಾಣ ಭೌತಶಾಸ್ತ್ರಕ್ಕೆ ಅದ್ವೈತ ತತ್ತ್ವವನ್ನು ಹೋಲಿಸಬಹುದು. ರಸಾಯನಶಾಸ್ತ್ರದಲ್ಲಿ ಅನೇಕ ಮೂಲಧಾತು ಮತ್ತು ಐಸೊಟೋಪ್‌ಗಳಿವೆ. ಆದರೆ ಪರಿಮಾಣ ಭೌತವಿಜ್ಞಾನಿಯು ಆವರ್ತಕ ಕೋಷ್ಟಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವನಿಗೆ ಮಟ್ಟಿಗೆ ಎಲ್ಲವೂ ಪರಮಾಣು ಮಾತ್ರವಾಗಿ ಕಾಣಿಸುತ್ತವೆ” ಎಂದು ಗುರುದೇವ ಶ್ರೀ ಶ್ರೀ ರವಿ ಶಂಕರರು ವಿವರಿಸುತ್ತಾರೆ.
ಪವಿತ್ರವಾದ ಅದ್ವೈತ ತತ್ತ್ವವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿದ ಗುರು ಪರಂಪರೆಯೇ ಅದ್ವೈತ ಗುರು ಪರಂಪರೆ. ಆದಿ ಶಂಕರಾಚಾರ್ಯರು, ವೇದವ್ಯಾಸರು, ಮತ್ತು ಮಹರ್ಷಿ ವಸಿಷ್ಠರಂತಹ ಪ್ರಖ್ಯಾತ ಗುರುಗಳು ಈ ಪರಂಪರೆಗೆ ಸೇರಿದವರು.
ಅವರ ಕೊಡುಗೆಗಳು ಅದ್ವೈತ ಜ್ಞಾನವನ್ನು ಯುಗಯುಗಗಳಿಂದಲೂ ಜೀವಂತವಾಗಿಟ್ಟಿವೆ. ಉಪನಿಷತ್ತುಗಳು ಮತ್ತು ಭಗವದ್ಗೀತೆಯಂತಹ ಗ್ರಂಥಗಳ ಜ್ಞಾನವನ್ನೂ ಇತರ ಆಧ್ಯಾತ್ಮಿಕ ಅನುಭವಗಳನ್ನು ಉಂಟುಮಾಡುವ ಇತರ ಆಕರಗಳನ್ನೂ ಈ ಪರಂಪರೆಯ ಗುರುಗಳು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದಾರೆ.
ಅದ್ವೈತ ಗುರುಗಳ ರೋಚಕ ಕಥೆಗಳು
ಆರಂಭದಲ್ಲಿ ಶಾಶ್ವತ ಪ್ರಜ್ಞೆಯಾದ ಶಿವನೊಬ್ಬನೇ ಇದ್ದನು – ಇವನೇ ಮೊತ್ತಮೊದಲ ಗುರು. ಅರಿವಿನ ಪ್ರತೀಕವಾದ ಆದಿಶೇಷನ ಮೇಲೆ ಪವಡಿಸಿದ ನಾರಾಯಣನು ಈ ಪ್ರಜ್ಞಾಸಾಗರದಲ್ಲಿ ವಿಹರಿಸುತ್ತಿದ್ದನು. ನಾರಾಯಣನು ತನ್ನ ಸುತ್ತಲಿನ ಪ್ರಜ್ಞೆಯೊಂದಿಗೆ ಏಕೀಭವಿಸಿದಾಗ, ಜಗತ್ತನ್ನು ಸೃಷ್ಟಿಸಿದ ಬ್ರಹ್ಮನ ಜನನವಾಯಿತು. ಅನಂತರ ಬ್ರಹ್ಮನು ಅನೇಕ ರೂಪಗಳಾಗಿ ಸ್ವಯಂ ಪರಿವರ್ತಿತನಾದನು. ಶಿವ, ನಾರಾಯಣ ಮತ್ತು ಬ್ರಹ್ಮ, ಈ ಮೂರು ಸೂಕ್ಷ್ಮಶಕ್ತಿಗಳು, ಸೃಷ್ಟಿಯನ್ನು ನಿಯಂತ್ರಿಸುತ್ತಿವೆ.
ಈ ಬ್ರಹ್ಮನು ಮಾನಸ ಪುತ್ರನ ಅಥವಾ ವೈಯಕ್ತಿಕ ಪ್ರಜ್ಞೆಯ ಹುಟ್ಟಿಗೆ ಕಾರಣನಾದನು. ಹಾಗೆ ಹುಟ್ಟಿದವರು ಮಾನವರಲ್ಲೇ ಅತ್ಯಂತ ಜ್ಞಾನಿಗಳೆನಿಸಿಕೊಂಡ ವಸಿಷ್ಠ ಮಹರ್ಷಿಗಳು. ಈ ಜಗತ್ತಿನಲ್ಲಿ ಏಕಾಗ್ರತೆಯಿಂದ ಮತ್ತು ಸಮಚಿತ್ತತೆಯಿಂದ ಕರ್ತವ್ಯ ನಿರ್ವಹಿಸುವ ಬಗೆಯನ್ನು ಮಹರ್ಷಿ ವಸಿಷ್ಠರು ಶ್ರೀರಾಮನಿಗೆ ತಿಳಿಸಿದರು. ವಸಿಷ್ಠರು ಮತ್ತು ಶ್ರೀರಾಮನ ನಡುವಣ ಸಂಭಾಷಣೆಯು ಯೋಗವಾಸಿಷ್ಠದಲ್ಲಿ ಸಂಗ್ರಹಿತವಾಗಿದೆ. ಯೋಗವಾಸಿಷ್ಠವು ಪ್ರಪಂಚದ ಮಾಯಾಸ್ವರೂಪವನ್ನು ವಿವರಿಸುವ ಅದ್ಭುತ ಗ್ರಂಥವಾಗಿದೆ.
ಮಹರ್ಷಿ ವಸಿಷ್ಠರ ಮಗ ಶಕ್ತಿ, ಶಕ್ತಿಯ ನಂತರ ಪರಾಶರರು. ಪರಾಶರರು ಕಾಲ, ಖಗೋಳಶಾಸ್ತ್ರ, ಜ್ಯೋತಿಷ್ಯ, ಆಯುರ್ವೇದ ಮತ್ತು ವೈದಿಕ ಆಚರಣೆಗಳ ಪರಿಪೂರ್ಣ ಜ್ಞಾನವನ್ನು ಹೊಂದಿದ್ದರು. ಋಷಿ ಪರಾಶರರಿಗೆ ಬೆಸ್ತರ ಮಹಿಳೆಯಲ್ಲಿ ಜನಿಸಿದವರು ಕೃಷ್ಣ ದ್ವೈಪಾಯನ ವ್ಯಾಸರು. ಇವರು ಮುಂದೆ ಅದ್ವೈತ ಗುರು ಪರಂಪರೆಯ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು ಎಂದು ಪರಿಗಣಿತರಾದವರು.
ಮಹರ್ಷಿ ವ್ಯಾಸರು ವೇದಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಭಾರತದ ಉದ್ದಗಲ ತಿರುಗಾಡಿ ವಿವಿಧ ಪ್ರದೇಶಗಳ ಋಷಿಗಳನ್ನು ಭೇಟಿ ಮಾಡಿದರು. ತನ್ಮೂಲಕ ಅವರು ವೇದಗಳ 1180 ಶಾಖೆಗಳ ಜ್ಞಾನವನ್ನು ಪಡೆದು ವೇದಾಂತ ಸೂತ್ರಗಳನ್ನು ಅಂದರೆ ಉಪನಿಷತ್ತುಗಳ ಸಾರವನ್ನು, ಭಗವದ್ಗೀತೆಯು ಅಡಕವಾಗಿರುವ ಮಹಾಭಾರತವನ್ನು, ಯೋಗಸೂತ್ರಗಳನ್ನು, ವ್ಯಾಸಭಾಷ್ಯ ಮತ್ತು ಶ್ರೀಮದ್ ಭಾಗವತವನ್ನು ರಚಿಸಿದರು.
ಮಹರ್ಷಿ ವ್ಯಾಸರ ನಂತರ ಗುರುಪರಂಪರೆಯಲ್ಲಿ ಬಂದವನು ಅವರ ಮಗ, ಶುಕದೇವ. ಶುಕದೇವನ ಕುರಿತು ಒಂದು ಕುತೂಹಲಕಾರಿ ಕಥೆಯಿದೆ. ಒಮ್ಮೆ ಶಿವನು ಪಾರ್ವತಿದೇವಿಗೆ ಹೇಳುತ್ತಿದ್ದ ಕಥೆಯನ್ನು ಕೇಳುತ್ತಿರುವಾಗಲೇ ಆಕೆ ನಿದ್ದೆಹೋದಳು. ಆದರೆ ಗಿಳಿಯೊಂದು ಶಿವನು ಹೇಳುತ್ತಿದ್ದ ಕಥೆಯನ್ನು ಕೇಳಿಸಿಕೊಳ್ಳುತ್ತಿತ್ತು. ಕಥೆಯಲ್ಲಿ ಅಡಗಿದ್ದ ಜ್ಞಾನದಿಂದ ಆಕರ್ಷಿತವಾಗಿದ್ದ ಗಿಳಿಯು ಶಿವನು ಕಥೆಯನ್ನು ಮುಂದುವರಿಸಲಿ ಎಂಬ ಆಸೆಯಿಂದ ಪಾರ್ವತಿದೇವಿಯಂತೆಯೇ ಪ್ರತಿ ವಾಕ್ಯದ ಕೊನೆಯಲ್ಲಿ ಹ್ಞೂಗುಟ್ಟುತ್ತಿತ್ತು. ಭಗವಂತ ಕಥೆಯನ್ನು ಹೇಳಿ ಮುಗಿಸಿದಾಗ ಪಾರ್ವತಿಯು ನಿದ್ರಿಸುತ್ತಿರುವುದನ್ನು ಗಮನಿಸಿದ, ಆಗಲೇ ತನ್ನ ಕಥೆಗೆ ಹ್ಞೂಗುಟ್ಟುತ್ತಿದ್ದವರು ಬೇರೆಯೇ ಎಂದು ಅವನಿಗೆ ತಿಳಿಯಿತು.
ಅದು ಯಾರೆಂದು ಗಮನಿಸಿದರೆ ಅದೊಂದು ಗಿಳಿ! ಕುಪಿತನಾದ ಶಿವ ಅದನ್ನು ಅಟ್ಟಿಸಿಕೊಂಡು ಓಡಿದ. ಆ ಗಿಳಿಯು ವ್ಯಾಸ ಮತ್ತು ಅವರ ಹೆಂಡತಿ ವಾಸವಾಗಿದ್ದ ಕುಟೀರದೊಳಗೆ ಅಡಗಿಕೊಂಡಿತು. ವ್ಯಾಸರು ಗಿಳಿಗೆ ಆಶ್ರಯವನ್ನು ನೀಡಿ ಅದನ್ನು ಕ್ಷಮಿಸುವಂತೆ ಶಿವನನ್ನು ಬೇಡಿಕೊಂಡರು. ಗಿಳಿಯ ಆತ್ಮವು ಋಷಿ ವ್ಯಾಸರ ಹೆಂಡತಿಯ ಗರ್ಭಕ್ಕೆ ವರ್ಗಾಯಿಸಲ್ಪಟ್ಟಿತು. ಮುಂದೆ ಶುಕದೇವ ಎಂದು ಪ್ರಸಿದ್ಧವಾದ ಆ ಆತ್ಮವು ಪ್ರಪಂಚದ ಮಾಯೆಯಲ್ಲಿ ಸಿಕ್ಕಿಬೀಳುವ ಭಯದಿಂದ ಗರ್ಭದಿಂದ ಹೊರಬರಲು ನಿರಾಕರಿಸಿತು. ಬದಲಿಗೆ, ಗರ್ಭವಾಸದಲ್ಲಿರುವಾಗಲೇ ತಂದೆಯ ಪ್ರವಚನಗಳನ್ನು ಕೇಳುತ್ತ ಜ್ಞಾನವನ್ನು ಗ್ರಹಿಸಲು ಆದ್ಯತೆ ನೀಡಿತು. 16 ವರ್ಷಗಳ ನಂತರ, ಆ ಆತ್ಮವು ಶುಕದೇವನಾಗಿ ಜನಿಸಿತು. ನಂತರ ಶುಕದೇವನು ಅರ್ಜುನನ ಮೊಮ್ಮಗನಾದ ಪರೀಕ್ಷಿತ್ ರಾಜನಿಗೆ ಶ್ರೀಮದ್ಭಾಗವತ ಪುರಾಣದ ಕಥೆಯನ್ನು ಹೇಳಿದನು. ಭಗವಾನ್ ವಿಷ್ಣುವಿನ ಅವತಾರಗಳ ಅದರಲ್ಲೂ ಕೃ಼ಷ್ಣಾವತಾರದ ಕಥೆಗಳ ಗುಚ್ಛವು ಕಲಿಯುಗದ ಸಮಸ್ಯೆಗಳಿಗೆ ಆತ್ಯಂತಿಕ ಪರಿಹಾರ ಎಂದೂ ಪರಿಗಣಿತವಾಗಿದೆ.
ಅದೇ ರೀತಿ, ಅನೇಕ ಗುರುಗಳು ಅದ್ವೈತ ಗುರು ಪರಂಪರೆಯ ಭಾಗವಾಗಿದ್ದಾರೆ. ಅದ್ವೈತ ತತ್ತ್ವವು ತನ್ನ ಮಹತ್ತ್ವ ಹಾಗೂ ಗಹನತೆಯ ಹೊರತಾಗಿಯೂ, ಕಾಲಾಂತರದಲ್ಲಿ ಕರ್ಮಾಂಗಗಳಿಗೇ ಪ್ರಾಧಾನ್ಯ ದೊರೆತುದುದರಿಂದ ಜನಪ್ರಿಯತೆಯನ್ನು ಕಳೆದುಕೊಂಡಿತು.
ಆದಿ ಶಂಕರಾಚಾರ್ಯ: ಅದ್ವೈತ ದರ್ಶನವನ್ನು ಪುನರುಜ್ಜೀವನಗೊಳಿಸಿದ ಗುರು
7 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಇಂದಿನ ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿ ಭೇಟಿಯಾದರು. ಆಗ ಗುರು ಗೋವಿಂದರು ‘ನೀನು ಯಾರು?’ ಕೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ, ಆದಿ ಶಂಕರಾಚಾರ್ಯರು ನಿರ್ವಾಣ ಶತಕವನ್ನು ರಚಿಸಿದರು. ಅದರ ಪ್ರಾರಂಭದ ಶ್ಲೋಕ ಈ ಕೆಳಗಿನಂತಿದೆ.
मनोबुद्ध्यहङ्कार चित्तानि नाहं
न च श्रोत्रजिह्वे न च घ्राणनेत्रे ।
न च व्योम भूमिर्न तेजो न वायुः
चिदानन्दरूपः शिवोऽहम् शिवोऽहम् ॥१॥
ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ
ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ
ಚಿದಾನಂದರೂಪಃ ಶಿವೋsಹಮ್ ಶಿವೋsಹಮ್ ||
ನಾನು ಮನಸ್ಸು, ಬುದ್ಧಿ, ಅಹಂಕಾರ ಮತ್ತು ಮನಸ್ಸುಗಳಲ್ಲ; ನಾನು ಕೇಳುವ ಕಿವಿಯಲ್ಲ, ರುಚಿನೋಡುವ ನಾಲಿಗೆಯಲ್ಲ, ಆಘ್ರಾಣಿಸುವ ನಾಸಿಕವಲ್ಲ ಅಥವಾ ನೋಡುವ ಕಣ್ಣುಗಳೂ ಅಲ್ಲ.
ನಾನು ಆಕಾಶವಲ್ಲ, ನಾನು ಭೂಮಿಯೂ ಅಲ್ಲ. ನಾನು ಅಗ್ನಿಯಲ್ಲ, ನಾನು ವಾಯುವೂ ಅಲ್ಲ. ನಾನು ಸಚ್ಚಿದಾನಂದ ಸ್ವರೂಪನಾದ ಶಿವನು, ಶಿವನು.
ಈ ಉತ್ತರವನ್ನು ಕೇಳಿದ ಗುರು ಗೋವಿಂದ ಭಗವತ್ಪಾದರಿಗೆ ಸಂತೋಷವಾಯಿತು. ಅವರು ಶಂಕರರಿಗೆ ಸನ್ಯಾಸದೀಕ್ಷೆಯನ್ನು ನೀಡಿದರು. ಕಾಲಾಂತರದಲ್ಲಿ ಅವರಿಗೆ ಸನಾತನ ಧರ್ಮದ ಪುನರುತ್ಥಾನದ ಜವಾಬ್ದಾರಿಯನ್ನೂ ವಹಿಸಿದರು. ಅಳಿವಿನ ಅಂಚಿನಲ್ಲಿದ್ದ ಅದ್ವೈತದರ್ಶನದ ಗ್ರಂಥಗಳನ್ನು ಶಂಕರಾಚಾರ್ಯರು ಪರಿಶೋಧಿಸಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಿದರು. ಅವರು ಭಾರತದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ನಾಲ್ಕು ಜ್ಯೋತಿರ್ಮಠಗಳನ್ನು ಸ್ಥಾಪಿಸಿದರು.
ಅದ್ವೈತ ದರ್ಶನದ ಜ್ಞಾನವನ್ನು ರಕ್ಷಿಸಿಕೊಳ್ಳಲು ಶಂಕರಾಚಾರ್ಯರ ಶಿಷ್ಯರು ಬಹಳ ಕೆಲಸ ಮಾಡಿದ್ದಾರೆ. ಅವರ ಪ್ರಯತ್ನಗಳ ಫಲವಾಗಿ ಇಂದಿಗೂ ನಾವೆಲ್ಲ ಒಂದೇ ಎಂಬ ಅದ್ವೈತ ತತ್ತ್ವದ ಅನುಭವವನ್ನು ಪಡೆಯಲು ಸಾಧ್ಯವಾಗಿದೆ.
ಈ ಲೇಖನವು ಸ್ವಾಮಿ ಹರಿ ಹರರು ನೀಡಿದ ಮಾಹಿತಿಯನ್ನು ಆಧರಿಸಿದೆ.