ನಿಮಗೆ ಬೇರೆ ಯಾರನ್ನಾದರೂ ಮೆಚ್ಚಿಸಬೇಕೆಂದಿರುವಾಗ, ನೀವು ಅವರಿಗಾಗಿ ಯಾವುದೇ ಕೆಲಸವನ್ನು ಮಾಡಲು ತಯಾರಿದ್ದು, ಪ್ರತಿಕ್ಷಣವೂ ನಿಮ್ಮ ಕಾಲ್ಬೆರಳುಗಳ ಮೇಲೆಯೇ ನಿಂತಷ್ಟು ಚುರುಕಾಗಿರುತ್ತೀರಿ ಹಾಗೂ ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಅಷ್ಟೇ ಸಂತೋಷವೂ ಇರುತ್ತದೆ! ಆದರೆ ನಿಮ್ಮ ಗುರಿಯು ನಿಮ್ಮನ್ನಷ್ಟೇ ಮೆಚ್ಚಿಸುವುದಾಗಿದ್ದರೆ, ನಿಮಗೆ ಖಂಡಿತವಾಗಿಯೂ ಖಿನ್ನತೆಯು ಉಂಟಾಗುವುದು.
ಖಿನ್ನತೆಯನ್ನು ತಂದುಕೊಳ್ಳುವ ಮಂತ್ರವೇ- ‘ನನ್ನ.. ಬಗ್ಗೆ ..ಏನು’? ‘ನನ್ನ.. ಬಗ್ಗೆ.. ಏನು’?, ಎಂಬುದಾಗಿ ಸದಾಕಾಲವೂ ತನ್ನ ಸ್ವಂತದ ಬಗ್ಗೆಯೇ ಚಿಂತಿಸುವುದಾಗಿದೆ. ಈಗ ನಾವೆಲ್ಲರೂ ಇದರಿಂದ ಹೊರಗೆ ಬರಬೇಕಾಗಿದೆ ,ಹಾಗೂ ನಮ್ಮಲ್ಲಿ ಪ್ರತಿಯೊಬ್ಬರೂ ಮೇಲ್ಮಟ್ಟದ ಸುಂದರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ.
ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ನಾವು ಖಂಡಿತವಾಗಿಯೂ ಖಿನ್ನತೆಯಿಂದ ಹೊರಬರಲು ಸಾಧ್ಯವಾಗುತ್ತದೆ . ‘ಸಮಾಜಕ್ಕೆ ನಾನೇನು ಮಾಡಬಲ್ಲೆ?’ ಎಂದು ದೊಡ್ಡದಾಗಿ ಯೋಚಿಸಿ! ಒಂದು ದೊಡ್ಡ ಉದ್ದೇಶಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಟ್ಟರೆ, ಅದು ನೀವು ಬದುಕುವ ದಿಕ್ಕನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ. ಹಾಗೆಯೇ ‘ನನ್ನ.. ಬಗ್ಗೆ.. ಏನು?’ ಎನ್ನುವ ಜಾಡಿನಿಂದಲೂ ನಿಮ್ಮನ್ನು ಬಿಡುಗಡೆಗೊಳಿಸುತ್ತದೆ. ಯಾವ ಸಮಾಜದಲ್ಲಿ -ಸೇವೆ, ತ್ಯಾಗ ಮತ್ತು ಸಮುದಾಯದಲ್ಲಿ ಸಹಭಾಗಿತ್ವದೊಂದಿಗೆ ಬಾಳುವ ಮೌಲ್ಯಗಳು ಬೇರೂರಿವೆಯೋ, ಅಲ್ಲಿ ಖಿನ್ನತೆ ಮತ್ತು ಆತ್ಮಹತ್ಯೆಗಳಂತಹ ಸಮಸ್ಯೆಗಳು ಇರುವದಿಲ್ಲ.
ಖಿನ್ನತೆಯು, ಜೀವನವು ಹೀಗೆಯೇ ಸ್ಥಿರವಾಗಿ ಯಾವಾಗಲೂ ಒಂದೇ ರೀತಿ ಇರುವುದು, ಎಂದು ಭಾವಿಸುವುದರ ಸಂಕೇತವಾಗಿದೆ. ಜೀವನದಲ್ಲಿ ಎಲ್ಲವೂ ಮುಗಿದು ಹೋಗಿದೆ; ಪ್ರತಿಯೊಂದು ಕೂಡ ಸ್ಥಿರವಾಗಿ ಬಿಟ್ಟಿದೆ ;ಇದರಲ್ಲಿ ಇನ್ನು ಹೆಚ್ಚೇನೂ ಉಳಿದಿಲ್ಲ; ಇಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ; ಎಂದು ನೀವು ಭಾವಿಸಿದರೆ, ಆಗ ನೀವು ಖಿನ್ನತೆಗೆ ಒಳಗಾಗುತ್ತೀರಿ.
ನಿಮ್ಮಲ್ಲಿ ಪ್ರಾಣಶಕ್ತಿಯು ಕಡಿಮೆಯಾದಾಗ, ನೀವು ಖಿನ್ನತೆಗೆ ಒಳಗಾಗುತ್ತೀರಿ. ಪ್ರಾಣವು ಅಧಿಕ ಪ್ರಮಾಣದಲ್ಲಿರುವಾಗ, ನೀವು ಹೆಚ್ಚು ಸಂತೋಷವಾಗಿರುತ್ತೀರಿ. ಉಸಿರಾಟದೊಂದಿಗೆ ಮಾಡುವ ಸರಿಯಾದ ವ್ಯಾಯಾಮಗಳಿಂದ, ಕೆಲವು ಧ್ಯಾನಗಳ ಅಭ್ಯಾಸದಿಂದ ಮತ್ತು ಒಳ್ಳೆಯ ಹಾಗೂ ಪ್ರೀತಿಯ ಒಡನಾಟದ ಮೂಲಕ, ನಿಮ್ಮ ಪ್ರಾಣಶಕ್ತಿಯ ಸೆಲೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ದೊಡ್ಡದಾಗಿ ಚಿಂತಿಸಿ
ನಿಮ್ಮದೇ ಸ್ವಂತ ಜೀವನವನ್ನು ನೀವು ಅವಲೋಕಿಸಿ ನೋಡಿಕೊಳ್ಳಿ. ನೀವು ಸುಮಾರು ಎಂಭತ್ತು ವರ್ಷಗಳ ವರೆಗೆ ಈ ಭೂಗ್ರಹದಲ್ಲಿ ವಾಸಿಸುತ್ತಿರುವಿರಿ ಎಂದಾದರೆ, ಅದರಲ್ಲಿ ನಲುವತ್ತು ವರ್ಷಗಳು ನಿದ್ರೆ ಮತ್ತು ವಿಶ್ರಾಂತಿಯಲ್ಲಿ ಕಳೆದು ಹೋಗುತ್ತದೆ. ಸ್ನಾನಗ್ರಹ ಮತ್ತು ಶೌಚಾಲಯಗಳಲ್ಲಿ ಹತ್ತು ವರ್ಷಗಳಷ್ಟು ಸಮಯವು ಕಳೆದಿರುತ್ತದೆ. ಎಂಟು ವರ್ಷಗಳನ್ನು ತಿನ್ನುವುದರಲ್ಲಿ ಮತ್ತು ಕುಡಿಯುವುದರಲ್ಲಿ ಹಾಗೂ ಇನ್ನೆರಡು ವರ್ಷಗಳನ್ನು ಟ್ರಾಫಿಕ್ ಜಾಮ್‌ನಲ್ಲಿ ಕಳೆದಿರುತ್ತೀರಿ. ಜೀವನವು ತುಂಬಾ ವೇಗವಾಗಿ ಓಡುತ್ತಿದೆ, ಮತ್ತು ಇದ್ದಕ್ಕಿದ್ದಂತೆ, ಒಂದು ದಿನ ನೀವು ಎಚ್ಚೆತ್ತುಗೊಂಡು ಎಲ್ಲವನ್ನೂ ಕನಸಿನಂತೆ ನೋಡುತ್ತೀರಿ. ನೀವು ಈ ವಿಶಾಲವಾದ ದೃಷ್ಟಿಯನ್ನು ಹೊಂದಿರುವಾಗ, ಸಣ್ಣ ಪುಟ್ಟ ವಿಷಯಗಳು ನಿಮ್ಮನ್ನು ವಿಚಲಿತಗೊಳಿಸುವುದಿಲ್ಲ.
ನಾವು ತಲೆಕೆಡಿಸಿಕೊಳ್ಳುವುದು ಸಣ್ಣ ಪುಟ್ಟ ವಿಷಯಗಳಿಗಾಗಿ ಮಾತ್ರವೇ ಆಗಿದೆ. ಜಾಗತಿಕ ತಾಪಮಾನವು ಯಾಕೆ ಹೆಚ್ಚಾಗುತ್ತಿದೆ ಎಂಬುದರ ಬಗ್ಗೆ ನಾವು ಚಿಂತಿಸುತ್ತೇವೆಯೇ?
ಅನಂತತೆಯ ವಿಶಾಲತೆಯು ಕಣ್ಣಿಗೆ ಕಾಣದಂತೆ, ನಮ್ಮ ದೃಷ್ಟಿಯನ್ನು ಅಸ್ಪಷ್ಟಗೊಳಿಸಲು, ಒಂದೇ ಒಂದು ಚಿಕ್ಕ ಧೂಳಿನ ಕಣವೇ ಸಾಕಾಗುವುದು. ಅದೇ ರೀತಿಯಲ್ಲಿ, ನಿಮ್ಮ ಅಂತರಾಳದಲ್ಲಿ ಅಗಾಧವಾದ ಸಂಪತ್ತು ತುಂಬಿ ತುಳುಕು ತ್ತಿದೆಯಾದರೂ, ನಿಮ್ಮ ಮನಸ್ಸಿನಲ್ಲಿರುವ ಕ್ಷುಲ್ಲಕ ವಿಷಯಗಳು ಎಲ್ಲವನ್ನೂ ನಿಮ್ಮಿಂದ ಮರೆ ಮಾಡುತ್ತಿವೆ.
ಆದರೆ ನಮ್ಮಲ್ಲಿ ವಿಶಾಲವಾದ ದೃಷ್ಟಿಕೋನವು ಇರುವಾಗ ,ನೀವು ಸಣ್ಣ ಪುಟ್ಟ ಸಮಸ್ಯೆಗಳನ್ನು ಸವಾಲುಗಳ ರೂಪದಲ್ಲಿ ನೋಡುತ್ತೀರಿ. ಯಾಕೆಂದರೆ ಈ ಜಗತ್ತಿನಲ್ಲಿರುವ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ನಿಮ್ಮ ಗಮನವು ಸರಿದಾಗ, ನಿಮಗೆ ಈ ಜಗತ್ತನ್ನು ಒಂದು ಆಟದ ಮೈದಾನದಂತೆ ನೋಡಲು ಸಾಧ್ಯವಾಗುತ್ತದೆ. ನಿಮಗೆ ಜವಾಬ್ದಾರಿಯ ಪ್ರಜ್ಞೆಯು ಬರುತ್ತದೆ; ಮತ್ತು ನಿಮ್ಮಲ್ಲಿ ವಿವೇಕವು ಜಾಗೃತವಾಗುತ್ತದೆ. ನಮ್ಮಮುಂದಿನ ಪೀಳಿಗೆಗೆ ಈ ಗ್ರಹವನ್ನು ಹೇಗೆ ಉತ್ತಮವಾದ ರೀತಿಯಲ್ಲಿ ಉಳಿಸಿಕೊಡ ಬಹುದು ಎನ್ನುವ ನಿಟ್ಟಿನಲ್ಲಿ ನೀವು ಯೋಚಿಸಲು ಪ್ರಾರಂಭಿಸುತ್ತೀರಿ.
ಜೀವನವು ಅರ್ಥಹೀನ, ಎನ್ನುವ ಭಾವನೆಯು ನಿಮ್ಮಲ್ಲಿದ್ದಾಗ, ಶೂನ್ಯತೆ ಯು ನಿಮ್ಮನ್ನು ಆವರಿಸಿಕೊಳ್ಳುತ್ತದೆ ಹಾಗೂ ಆಗ ನೀವು ಖಿನ್ನತೆಗೆ ಒಳಗಾಗುತ್ತೀರಿ. ಇಂದು ಇದು ವಿಶ್ವದಾದ್ಯಂತವೂ ಇರುವ ಒಂದು ಗಂಭೀರ ಸಮಸ್ಯೆಯೇ ಆಗಿದೆ. ಬ್ರಿಟನ್ ನಲ್ಲಿ ಶೇಕಡಾ 18 ರಷ್ಟು ಜನರು ಒಂಟಿತನ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ ಹಾಗೂ ಇದನ್ನು ಬಗೆಹರಿಸಲಿಕ್ಕಾಗಿ, ಅವರು ಪ್ರತ್ಯೇಕವಾಗಿ‘ಏಕಾಂಗಿತನದ ಮಂತ್ರಿ’ಯ ಹುದ್ದೆಯನ್ನು ನೇಮಕ ಮಾಡಿದ್ದಾರೆ.
ಇಡೀ ವಿಶ್ವದಲ್ಲಿಯೇ -ಈ ಖಿನ್ನತೆಯು ಜನತೆಯ ಮಾನಸಿಕ ಆರೋಗ್ಯದ ಮೇಲೆ ಅತಿದೊಡ್ಡ ಪರಿಣಾಮವನ್ನು ಬೀರಲಿದೆ, ಎಂಬುದಾಗಿ ಇತ್ತೀಚೆಗೆ ವಿಶ್ವ ಆರ್ಥಿಕ ವೇದಿಕೆಯು ಪ್ರಕಟಪಡಿಸಿದೆ.ವಾಣಿಜ್ಯ ಸಮುದಾಯಕ್ಕೂ ಇದು ಅರಿವಿಗೆ ಬರುತ್ತಿರುವುದು, ನಿಜವಾಗಿಯೂ ಒಂದು ಸ್ವಾಗತಾರ್ಹವಾದ ಉತ್ತಮ ಸಂಕೇತವಾಗಿದೆ.
ಇಂದಿನ ಯುವಕರಲ್ಲಿ ಖಿನ್ನತೆಯುಂಟಾಗಲು ಮುಖ್ಯ ಕಾರಣವೇ ಅವರಲ್ಲಿರುವ ಆದರ್ಶವಾದದ ಕೊರತೆಯಾಗಿದೆ! ಪ್ರಪಂಚದಾದ್ಯಂತ ತುಂಬಿರುವ ಸ್ಪರ್ಧಾತ್ಮಕ ಮನೋಭಾವದಿಂದಾಗಿ ಎಷ್ಟೋ ಮಕ್ಕಳು ಹೆದರಿ ಕಂಗಾಲಾಗುತ್ತಿದ್ದಾರೆ ಅಥವಾ ಅತ್ಯಂತ ಪ್ರಬಲವಾಗಿರುವ ಪ್ರಚೋದನಕಾರೀ ವಸ್ತುಗಳಿಂದಾಗಿ ಕುಸಿದು ಹೋಗುತ್ತಿದ್ದಾರೆ. ಇವರಿಗೆಲ್ಲಾ,’ಈ ಜೀವನವೇ ಅರ್ಥಹೀನ’ವೆಂದು ಕಾಣುತ್ತದೆ. ಈ ಸ್ಥಿತಿಯಲ್ಲಿ ಅವರಿಗೆ ಬೇಕಾಗಿರುವುದು ಸ್ಪೂರ್ತಿ! ಆಧ್ಯಾತ್ಮವೊಂದೇ ಅವರಲ್ಲಿ ಚೈತನ್ಯವನ್ನು ಉದ್ದಿಪನಗೊಳಿಸುವ ಮೂಲಕ ಅವರಿಗೆ ಈ ಸ್ಫೂರ್ತಿಯನ್ನು ತಂದುಕೊಡಬಲ್ಲುದು!
ಖಿನ್ನತೆಯ ವಿರುದ್ಧ ಹೋರಾಡಿ
ಆಕ್ರಮಣಶೀಲತೆಯು ಖಿನ್ನತೆ ಯನ್ನು ಪ್ರತಿರೋಧಿಸುವ ವಿಷಹಾರಿ ವಸ್ತುವಿನಂತೆ ಕೆಲಸ ಮಾಡುತ್ತದೆ. ಹೋರಾಡಲು ಹುರುಪಿನ ಕೊರತೆಯಿರುವಾಗ ಖಿನ್ನತೆಯುಂಟಾಗುತ್ತದೆ. ಖಿನ್ನತೆಯು ಪ್ರಾಣಶಕ್ತಿಯ ಕೊರತೆಯನ್ನು ಸೂಚಿಸುತ್ತದೆ. ಕೋಪ ಮತ್ತು ಆಕ್ರಮಣಕಾರೀ ಪ್ರವೃತ್ತಿಗಳು ಶಕ್ತಿಯ ಒರತೆಗಳಾಗಿವೆ. ಭಗವದ್ಗೀತೆಯಲ್ಲಿ, ಅರ್ಜುನನು ಖಿನ್ನತೆಗೆ ಒಳಗಾದಾಗ, ಕೃಷ್ಣನು ಅವನಿಗೆ ಹೋರಾಡಲು ಪ್ರೇರೇಪಿಸಿದನು ಹಾಗೂ ಅವನಲ್ಲಿ ಮತ್ತೆ ಪುನ: ಜೀವಸೆಲೆಯು ಚಿಗುರುವಂತೆ ಮಾಡಿದನು. ನೀವು ಖಿನ್ನತೆಗೆ ಒಳಗಾಗಿದ್ದರೆ, ಯಾವುದಾದರೂ ಕಾರಣಕ್ಕಾಗಿ ಹೋರಾಟ ಮಾಡಿ. ಅದು ಯಾವ ಕಾರಣಕ್ಕಾಗಿ ಆಗಿದ್ದರೂ ಸರಿ!ಆದರೆ ಆಕ್ರಮಣಶೀಲತೆಯು ಒಂದು ನಿರ್ದಿಷ್ಟ ಮಿತಿಯನ್ನು ದಾಟಿದಾಗ, ಅದು ಮರಳಿ ನಿಮ್ಮನ್ನು ಖಿನ್ನತೆಗೆ ದೂಡುತ್ತದೆ. ಇದೇ ಕಾರಣದಿಂದಾಗಿ ಕಳಿಂಗ ಯುದ್ಧದಲ್ಲಿ ಗೆದ್ದುಬಂದ ಅರಸನಾದ ಅಶೋಕನು ಖಿನ್ನತೆಗೆ ಒಳಗಾದನು. ಆಗ ಅವನು ಬುದ್ಧನ ದಿವ್ಯ ಸಾನಿಧ್ಯದಲ್ಲಿ ಆಶ್ರಯವನ್ನು ಪಡೆದುಕೊಂಡನು.
ಯಾರು ಆಕ್ರಮಣಕಾರೀ ಮನೋಭಾವವಿಲ್ಲದೆ ಹಾಗೂ ಖಿನ್ನತೆಗೂ ಒಳಗಾಗದೆ ಇರುತ್ತಾರೋ ಅವರು ನಿಜವಾಗಿಯೂ ಬುದ್ಧಿವಂತರು. ಇದುವೇ ಒಬ್ಬ ಯೋಗಿಯ ಸುವರ್ಣ ರೇಖೆಯಾಗಿದೆ. ಎಚ್ಚೆತ್ತುಕೊಳ್ಳಿ! ಮತ್ತು ನೀವು ಕೂಡ ಒಬ್ಬ ‘ಯೋಗಿ’ ಎನ್ನುವುದನ್ನು ಅಂಗೀಕರಿಸಿ!
ಆಧ್ಯಾತ್ಮಿಕತೆಯು ಧ್ಯಾನ, ಸೇವೆ, ಜ್ಞಾನ ಮತ್ತು ವಿವೇಕದ ಮೂಲಕ ,ಒಬ್ಬ ವ್ಯಕ್ತಿಯ ಚೈತನ್ಯವನ್ನು ಹೆಚ್ಚಿಸುವುದು. ಆದುದರಿಂದ ಆಧ್ಯಾತ್ಮಿಕತೆಯು ಖಿನ್ನತೆಯನ್ನು ಹೊಡೆದೋಡಿಸಬಲ್ಲುದು.
ಹಿಂದಿನ ದಿನಗಳಲ್ಲಿ ನವಯುವಕರಿಗೆ, ತಾವು ಏನನ್ನಾದರೂ ಅನುಕರಣೆ ಮಾಡಬೇಕು ಎನ್ನುವ ಧ್ಯೇಯವೊಂದು ಇರುತ್ತಿತ್ತು. ಅವರು ಅನ್ವೇಷಣೆ ಮಾಡಲು ಇಡೀ ಪ್ರಪಂಚವನ್ನೇ ಹೊಂದಿದ್ದರು ಹಾಗೂ ಅವರು ಸಾಧಿಸಬೇಕಾದ ಗುರಿಗಳು ಕೂಡಾ ಎಷ್ಟೋ ಇದ್ದುವು. ಆದರೆ ಆಧುನಿಕ ಪ್ರಪಂಚದಲ್ಲಿ , ಯಾವುದೇ ರೀತಿಯ ಪರಿಶ್ರಮವಿಲ್ಲದೆ, ಎಲ್ಲಾ ವಿಧದ ಅನುಭವಗಳು, ನಮ್ಮ ಯುವಜನತೆಗೆ ಬೆರಳ ತುದಿಯಲ್ಲಿ ಲಭ್ಯವಾಗುವಂತಿವೆ. ಅಂತರ್ಜಾಲದಿಂದಾಗಿ (ಇಂಟರ್ನೆಟ್) ಈಗ ಅವರು ಪ್ರಪಂಚದಾದ್ಯಂತ ದೊರೆಯುವ ಎಲ್ಲಾ ಅನುಭವಗಳನ್ನೂ ಪಡೆದುಕೊಳ್ಳುತ್ತಿದ್ದಾರೆ. ಇಂದಿನ ಮಕ್ಕಳು ಕೂಡಾ, ತಾವು ಇಡೀ ಜಗತ್ತನ್ನೇ ನೋಡಿದವರ ಹಾಗೆ ಮಾತನಾಡುತ್ತಾರೆ.
ಇಂದಿನ ಯುವಕರು ತಮ್ಮ ಮನಸ್ಸು ಮತ್ತು ಇಂದ್ರಿಯಗಳ ಸಾಮರ್ಥ್ಯಕ್ಕೆ ಮೀರಿದ ಅನುಭವಗಳನ್ನು ಪಡೆಯುತ್ತಿದ್ದಾರೆ. ಆದುದರಿಂದಲೇ ಅವರು ಪ್ರತಿಯೊಂದರ ಬಗ್ಗೆ ,ಅಷ್ಟೇ ಬೇಗ ಭ್ರಮನಿರಸನಗೊಳ್ಳುವುದೂ ಆಗುತ್ತಿದೆ. ಇವರಿಗೆ ಸರಿಯಾದ ಮಾರ್ಗದರ್ಶನವು ದೊರೆತರೆ ಮಾತ್ರ ಎಲ್ಲರೂ ಸಕ್ರಿಯವಾದ ರೀತಿಯಲ್ಲಿ ಅನ್ವೇಷಣೆಯನ್ನು ಮಾಡಿಕೊಂಡು, ಹೆಚ್ಚು ಸೃಜನಶೀಲರಾಗುತ್ತಾರೆ. ಈ ಮಾರ್ಗದರ್ಶನವನ್ನು ಅವರಿಗೆ ಸರಿಯಾದ ರೀತಿಯಲ್ಲಿ ನೀಡದಿದ್ದರೆ, ಅವರೆಲ್ಲರೂ ಚಿಕ್ಕ ವಯಸ್ಸಿನಲ್ಲಿಯೇ ಆಕ್ರಮಣಶೀಲತೆ ಮತ್ತು ಖಿನ್ನತೆಗಳಿಗೆ ತುತ್ತಾಗುತ್ತಾರೆ.
ಇವರಿಗೆಲ್ಲ ಸ್ವಲ್ಪ ಆಧ್ಯಾತ್ಮಿಕ ತಳಹದಿಯೊಂದಿಗೆ, ಮೌಲ್ಯಾಧಾರಿತ ಶಿಕ್ಷಣವನ್ನು ಕೊಟ್ಟು, ಮಾನವೀಯ ಮೌಲ್ಯಗಳು ಇವರ ಮನಸ್ಸಿನಲ್ಲಿ ಚೆನ್ನಾಗಿ ಬೇರೂರುವಂತೆ ಮಾಡಿದರೆ, ಆಗ ಸಂಪೂರ್ಣವಾಗಿ ಧನಾತ್ಮಕವಾದ ಫಲಿತಾಂಶವು ದೊರೆಯುವುದು. ಈ ಮಾನವೀಯ ಮೌಲ್ಯಗಳ ಕೊರತೆಯಿಂದಾಗಿ, ಯುವ ಪೀಳಿಗೆಯು ಹೆಚ್ಚಾಗಿ ಕೆಟ್ಟ ವ್ಯಸನಗಳಿಗೆ ಬಲಿಯಾಗುತ್ತಿದೆ. ತತ್ಪರಿಣಾಮವಾಗಿ ಇವರ ಸುತ್ತಲೂ ಆಕ್ರಮಣಶೀಲತೆ, ಖಿನ್ನತೆ ಮತ್ತು ಸಮಾಜವಿರೋಧಿಯಂತಹ ಪ್ರವೃತ್ತಿಗಳು ಹುಟ್ಟು ಹಾಕುತ್ತಿವೆ.
ಒಂಟಿತನವನ್ನು ಪರಮಾನಂದವಾಗಿ ಪರಿವರ್ತಿಸಿ
ಸಂಸ್ಕೃತದಲ್ಲಿ ‘ಒಂಟಿತನ’ ಎನ್ನುವ ಪದವನ್ನು ‘ಏಕಾಂತ’ ಎಂದು ಕರೆಯುತ್ತಾರೆ . ಏಕಾಂತ ಎನ್ನುವ ಪದದ ಅರ್ಥವು ‘ಒಂಟಿತನದ ಅಂತ್ಯ’ ಎಂಬುದಾಗಿದೆ.ಒಂಟಿತನದ ಭಾವನೆಯು, ಒಡನಾಡಿಗಳನ್ನು ಬದಲಾಯಿಸುವ ಮೂಲಕ ಅಥವಾ ಸಹಾನುಭೂತಿಯುಳ್ಳ ಹಾಗೂ ತಿಳುವಳಿಕೆಯುಳ್ಳ ಜನರ ಒಡನಾಟದಿಂದ ಕೊನೆಗೊಳ್ಳುವುದಿಲ್ಲ. ನೀವು ನಿಮ್ಮ ನೈಜ ಸ್ವಭಾವವನ್ನು ಕಂಡುಕೊಂಡಾಗ ಮಾತ್ರ ಅದರ ಅಂತ್ಯವಾಗುತ್ತದೆ. ಆಧ್ಯಾತ್ಮಿಕವಾಗಿ ನೀಡುವ ಸಾಂತ್ವನದಲ್ಲಿ ಮಾತ್ರ, ಮತ್ತೊಬ್ಬರನ್ನು ಹತಾಶೆ ಮತ್ತು ದುಃಖಗಳಿಂದ ಪಾರು ಮಾಡುವ ಸಾಮರ್ಥ್ಯವು ಅಡಗಿದೆ.
ನೀವು ನಿಮ್ಮ ಒಳಗಿನ ಅಸಂತೃಪ್ತಿಯನ್ನು ಹತ್ತಿಕ್ಕಲು, ಸಂಪತ್ತು,ಮೆಚ್ಚುಗೆ ಹಾಗೂ ಪ್ರಶಂಸೆಗಳನ್ನು ಪಡೆಯಲು ಮಾಡುವ ಯತ್ನವಾಗಲೀ ಅಥವಾ ಬಾಹ್ಯದ ಜಗತ್ತಿನಲ್ಲಿ ಇತರರಿಂದ ಗೌರವವನ್ನು ಪಡೆಯುವುದಾಗಲೀ , ಪರ್ಯಾಯವಾಗಿ ನಿಮ್ಮ ಮನಸ್ಸಿಗೆ ಸಮಾಧಾನವನ್ನು ತಂದುಕೊಡಲು ಸಾಧ್ಯವಿಲ್ಲ. ನೀವು ದುಃಖಕ್ಕೆ ವಿದಾಯವನ್ನು ಹೇಳಬೇಕೆಂದಾದರೆ, ಸಂಪೂರ್ಣವಾಗಿ ವಿಭಿನ್ನವಾಗಿ ನಿಮ್ಮಲ್ಲಿಯೇ ಇರುವ ಆಯಾಮವೊಂದನ್ನು ಸಂಪರ್ಕಿಸ ಬೇಕು. ನಿಮ್ಮೊಳಗಿದ್ದು, ‘ನೀವೇ’ ಆಗಿರುವ , ಶಾಶ್ವತವಾಗಿರುವುದರ ಒಂದು ನೋಟವನ್ನು ನಿಮಗೆ ತಂದು ಕೊಡುವ, ಮೌನದಲ್ಲಿಯೇ ಪರಮಾನಂದದ ದಿವ್ಯಅನುಭವವನ್ನು ನೀಡುವ, ನಿಮ್ಮ ಆತ್ಮನಲ್ಲಿ ನೀವು ಒಂದಾಗಿ ಸೇರಿ ಹೋಗಬೇಕು!
ಅದು ನಿಮ್ಮಲ್ಲಿಯೇ ಇರುವುದರಿಂದ ನೀವು ಸುಮ್ಮನೆ ಅದರೊಂದಿಗೆ ಒಂದಾಗ ಬೇಕು ಅಷ್ಟೇ!
ಕೈಪಿಡಿಯ ಸಹಾಯವು ಇಲ್ಲದೆ ಚಲಾಯಿಸಲು ಸಾಧ್ಯವಾಗದ ಯಂತ್ರವನ್ನು ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ.ಆಧ್ಯಾತ್ಮಿಕ ಜ್ಞಾನವು ನಮ್ಮ ಬದುಕಿಗೆ ಒಂದು ಕೈಪಿಡಿ ಇದ್ದಂತೆ. ಕಾರನ್ನು ಚಲಾಯಿಸಲು, ನಾವು ಸ್ಟೀರಿಂಗ್ ವೀಲ್, ಕ್ಲಟ್ಚ್, ಬ್ರೇಕ್ ಮುಂತಾದವುಗಳ ನಿರ್ವಹಣೆಯನ್ನು ಕಲಿತಂತೆ , ನಮ್ಮ ಮನಸ್ಸಿನ ಸ್ಥಿರತೆಯನ್ನು ಸಾಧಿಸಬೇಕಾದರೆ , ನಮ್ಮ ಪ್ರಾಣಶಕ್ತಿಯ ಮೂಲ ತತ್ವಗಳನ್ನು ನಾವು ತಿಳಿದಿರಬೇಕು. ಇದುವೇ ಪ್ರಾಣಾಯಾಮದ ಹಿಂದಿರುವ ಸಂಪೂರ್ಣ ವಿಜ್ಞಾನವಾಗಿದೆ.
ನಮ್ಮ ಪ್ರಾಣಶಕ್ತಿಯು ಹೆಚ್ಚು ಅಥವಾ ಕಡಿಮೆಯಾದಾಗ, ಅದಕ್ಕನುಗುಣವಾಗಿ ನಮ್ಮ ಭಾವೋದ್ವೇಗಗಳಲ್ಲಿಯೂ ಏರಿಳಿತಗಳು ಉಂಟಾಗುತ್ತವೆ. ತತ್ಪರಿಣಾಮವಾಗಿ ನಮ್ಮ ಮನಸ್ಸು ಕೂಡ ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ. ನಾವು ಮನಸ್ಸಿನ ಮಟ್ಟದಿಂದ ನಮ್ಮ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಧನಾತ್ಮಕ ಆಲೋಚನೆಗಳನ್ನು ಮನಸ್ಸಿನ ಮೇಲೆ ಹೊರಿಸುವ ಪ್ರಯತ್ನವು ನಿರರ್ಥಕವಾದುದು. ಯಾಕೆಂದರೆ ಇದರಿಂದಾಗಿ ಮತ್ತೆ ಮನಸ್ಸಿನಲ್ಲಿ ಪ್ರತಿರೋಧವೇ ಉಂಟಾಗುತ್ತದೆ.
ಖಿನ್ನತೆಯನ್ನು ಶಮನಗೊಳಿಸಲು ಸೇವಿಸುವ ಔಷಧಗಳು ಪ್ರಾರಂಭದ ಹಂತದಲ್ಲಿ ಮಾತ್ರ ಸಹಕಾರಿಯಾಗುತ್ತವೆ. ಆದರೆ ಅಂತಿಮವಾಗಿ, ಕಾಯಿಲೆಗೆ ಒಳಗಾದ ವ್ಯಕ್ತಿಯು ತನ್ನ ಕಾಯಿಲೆಯಿಂದ ಗುಣಮುಖವಾಗುವ ಬದಲು, ಈ ಔಷಧಿಗಳ ಮೇಲೆಯೇ ಆತನು ಸಂಪೂರ್ಣವಾಗಿ ಅವಲಂಬಿಸುವಂತಾಗುತ್ತದೆ. ಇಂತಹ ಸಂದರ್ಭಗಳಲ್ಲಿ ,ನಾವು ಉಸಿರಾಟದ ರಹಸ್ಯವನ್ನು ತಿಳಿದುಕೊಳ್ಳುವುದರಿಂದ, ನಿಜವಾಗಿಯೂ ಅಮೋಘವಾದ ರೀತಿಯಲ್ಲಿ , ನಮ್ಮ ಜೀವನದಲ್ಲಿ ಪರಿವರ್ತನೆಯನ್ನು ತಂದುಕೊಳ್ಳಬಹುದಾಗಿದೆ.
ಸುದರ್ಶನ ಕ್ರಿಯೆಯಂತಹ ಉಸಿರಾಟದ ಪ್ರಕ್ರಿಯೆಗಳು ನಮ್ಮ ಪ್ರಾಣಶಕ್ತಿಯನ್ನು ಸ್ಥಿರಗೊಳಿಸುತ್ತವೆ. ಹಾಗೂ ಇದರಿಂದಾಗಿ ನಮ್ಮ ಮನಸ್ಸು ಕೂಡ ಸ್ಥಿರವಾಗುತ್ತದೆ. ಧ್ಯಾನದ ಅಭ್ಯಾಸದಿಂದ ಅನಾವರಣಗೊಂಡ ನಮ್ಮ ಆಂತರಿಕ ಆಯಾಮವು ನಮ್ಮನ್ನು ಆಳವಾಗಿ ಶ್ರೀಮಂತಗೊಳಿಸುತ್ತದೆ ಮತ್ತು ಇದು ನಿಧಾನವಾಗಿ ನಮ್ಮಜೀವನದ ಎಲ್ಲಾ ಅಂಶಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ.
ಏಕೆ ಆತ್ಮಹತ್ಯೆ ಒಂದು ಪರಿಹಾರವಲ್ಲ
ಜೀವನವು ‘ಸಂತೋಷ ಮತ್ತು ನೋವು’, ಇವೆರಡರ ಸಂಯೋಜನೆಯಾಗಿದೆ. ನೋವು ಅನಿವಾರ್ಯ; ಆದರೆ ಸಂಕಟ ಪಡುವುದು ಐಚ್ಛಿಕ. ಜೀವನದ ಬಗ್ಗೆ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದರೆ, ಅದು ನೋವಿನ ಸಮಯದಲ್ಲಿ, ನೋವನ್ನು ಎದುರಿಸಿ ,ಮುಂದುವರಿಯಲು ನಿಮಗೆ ಶಕ್ತಿಯನ್ನು ನೀಡುತ್ತದೆ. ಈ ಜಗತ್ತಿನಲ್ಲಿ ನಿಮ್ಮ ಇರುವಿಕೆಯು ತುಂಬಾ ಅಗತ್ಯವಾಗಿದೆ, ಎನ್ನುವುದನ್ನು ತಿಳಿದುಕೊಳ್ಳಿ. ಈ ಜೀವನವು ಎಲ್ಲಾ ವಿಧಗಳಲ್ಲಿ, ತನ್ನ ಅನಂತ ಸಾಧ್ಯತೆಗಳೊಂದಿಗೆ, ನಿಮಗೆ ಒಂದು ಉಡುಗೊರೆಯ ರೂಪದಲ್ಲಿ ಲಭಿಸಿದೆ. ಏಕೆಂದರೆ ಅದು ನಿಮಗೆ ಮಾತ್ರವಲ್ಲದೆ , ನಿಮ್ಮ ಮೂಲಕ ಇತರ ಅನೇಕ ಜನರಿಗೆ ಆನಂದದ ಚಿಲುಮೆಯಾಗಿ ,ಸಂತೋಷವನ್ನು ತಂದು ಕೊಡುವ ಎಲ್ಲಾ ಸಾಧ್ಯತೆಗಳೂ ಇವೆ.
ಜನರು ದುಃಖದಿಂದ ಪಾರಾಗಲು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಆದರೆ ಅದು ಅವರನ್ನು ಮತ್ತಷ್ಟು ಹೆಚ್ಚಿನ ದುಃಖಕ್ಕೆ ತಳ್ಳುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಇದು ಹೇಗೆಂದರೆ, ಯಾರೋ ಒಬ್ಬರು ಚಳಿಯಲ್ಲಿ ಗಡಗಡನೆ ನಡುಗುತ್ತಿದ್ದವರು .ಹೊರಗೆ ಹೋಗಿ ತಾನು ಧರಿಸಿರುವ ಜಾಕೆಟ್ ನ್ನು ಕೂಡ ತೆಗೆದು ಎಸೆದಂತೆ! ಹೀಗೆ ಮಾಡಿದಾಗ ಎಂದಾದರೂ ಚಳಿಯು ಕಡಿಮೆಯಾಗುವ ಸಾಧ್ಯತೆ ಇದೆಯೇ?
ಆತ್ಮಹತ್ಯೆ ಮಾಡಿಕೊಳ್ಳುವ ಜನರು ಅಲ್ಲಿ ತಮ್ಮನ್ನು ತಾವೇ ಕಂಡುಕೊಳ್ಳುತ್ತಾರೆ. ಏಕೆಂದರೆ ಅವರು ತಮ್ಮ ಜೀವನಕ್ಕೆ ತುಂಬಾ ಅಂಟಿಕೊಂಡಿರುತ್ತಾರೆ. ಅವರು ಕೆಲವೊಂದು ವಿಧಾನಗಳ ಮೂಲಕ ತಮಗೆ ದೊರೆಯುವ ಸಂತೋಷಕ್ಕೆ ಮತ್ತು ಆನಂದಕ್ಕೆಎಷ್ಟೊಂದು ಅಂಟಿಕೊಂಡಿರುತ್ತಾರೆಂದರೆ, ತಮ್ಮನ್ನು ತಾವೇ ಸಾಯಿಸಿ ಕೊಳ್ಳಬೇಕು ಎಂದು ಬಯಸುತ್ತಾರೆ. ತಮ್ಮ ಬದುಕಿಗೆ ತಾವೇ ಅಂತ್ಯವನ್ನು ಹಾಕಿಕೊಂಡ ಬಳಿಕ ಅವರಿಗೆ, ತಾವು ಇನ್ನೂ ದೊಡ್ಡ ಕಂದಕದಲ್ಲಿ ಬಿದ್ದಿರುವುದು ಗೋಚರವಾಗುತ್ತದೆ. ಆಗ ಅವರಿಗೆ ಅನಿಸುತ್ತದೆ, “ಅಯ್ಯೋ ದೇವರೇ, ಈ ಚಡಪಡಿಕೆ ಹಾಗೂ ನನ್ನೊಳಗೆ ಇಷ್ಟು ತೀವ್ರವಾದ ಸಂಕಟವನ್ನು ಸೃಷ್ಟಿಸಿದ ಆಸೆಗಳು ಮಾತ್ರ ಇನ್ನೂ ಹೋಗಲಿಲ್ಲ. ನನ್ನ ದೇಹವು ಹೊರಟು ಹೋಯಿತು, ಆದರೆ ಸಂಕಟವು ಹಾಗೆಯೇ ಉಳಿದಿದೆ”.
ದೇಹದ ಮೂಲಕ ಮಾತ್ರವೇ ನೀವು ಸಂಕಟವನ್ನು ಹೋಗಲಾಡಿಸಲು ಮತ್ತು ದುಃಖವನ್ನು ತೊಡೆದುಹಾಕಲು ಸಾಧ್ಯವಾಗುವುದು. ಇದಕ್ಕೆ ಬದಲಾಗಿ, ನಿಮ್ಮ ಶರೀರಕ್ಕೆ ತಿಲಾಂಜಲಿಯನ್ನು ಹಾಕಿಕೊಂಡಾಗ , ಸಂಕಟವನ್ನು ತೊಡೆದುಹಾಕುವ ಸಾಧನವನ್ನೇ ನೀವು ನಾಶಪಡಿಸಿದಂತಾಗುವುದು. ನಿಮ್ಮಲ್ಲಿ ಪ್ರಾಣಶಕ್ತಿಯು ಕಡಿಮೆಯಾದಾಗ, ನೀವು ಖಿನ್ನತೆಗೆ ಒಳಗಾಗುತ್ತೀರಿ ಮತ್ತು ಅದು ಮತ್ತಷ್ಟು ಕಡಿಮೆಯಾದಾಗ, ಆತ್ಮಹತ್ಯಾ ಪ್ರವೃತ್ತಿಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಪ್ರಾಣಶಕ್ತಿಯು ಹೆಚ್ಚಾಗಿರುವಾಗ, ನಿಮಗೆ ಈ ರೀತಿಯ ಯೋಚನೆಗಳು ಬರುವ ಸಾಧ್ಯತೆಯೇ ಇಲ್ಲ. ನಿಮ್ಮಲ್ಲಿ ಪ್ರಾಣಶಕ್ತಿಯ ಪ್ರಮಾಣವು ಅಧಿಕವಾಗಿರುವಾಗ, ನೀವು ನಿಮ್ಮ ಮೇಲೆ ಅಥವಾ ಇತರರ ಮೇಲೆ ಹಿಂಸಾತ್ಮಕವಾಗಿ ವರ್ತಿಸುವುದಿಲ್ಲ. ಸರಿಯಾದ ಉಸಿರಾಟದ ವ್ಯಾಯಾಮಗಳನ್ನು ಮತ್ತು ಸ್ವಲ್ಪ ಧ್ಯಾನವನ್ನು ಮಾಡುವುದರ ಮೂಲಕ ಹಾಗೂ ಒಳ್ಳೆಯ ಮತ್ತು ಪ್ರೀತಿಯ ಒಡನಾಟದಿಂದ ನಿಮ್ಮ ಪ್ರಾಣಶಕ್ತಿಯು ಹೆಚ್ಚಾಗುತ್ತದೆ.
ಯಾರಲ್ಲಾದರೂ ಆತ್ಮಹತ್ಯೆಯ ಪ್ರವೃತ್ತಿಯು ನಿಮಗೆ ಕಂಡು ಬಂದರೆ , ನೀವು ತಕ್ಷಣವೇ ಅವರನ್ನು ,ಧ್ಯಾನವನ್ನು ಕಲಿಸುವವರ ಬಳಿಗೆ ಕರೆದೊಯ್ಯಬೇಕು. ಕೆಲವೇ ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿಸುವುದರ ಮೂಲಕ, ತಕ್ಷಣವೇ ಅವರ ಪ್ರಾಣಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದಾಗಿದೆ. ಪ್ರತಿದಿನವೂ, ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿದರೆ, ತಮ್ಮ ಮನಸ್ಸು ಖಾಲಿಯಾಗಿ ಪೊಳ್ಳಾದ ಅನುಭವದೊಂದಿಗೆ ಅವರು ನಿರಾಳವಾಗುತ್ತಾರೆ. ನಾವು ಈಗ ಒತ್ತಡ ಮತ್ತು ಹಿಂಸಾಚಾರಗಳಿಂದ ಮುಕ್ತವಾದ ಸಮಾಜವನ್ನು ರಚಿಸಬೇಕಾಗಿದೆ ಮತ್ತು ಅದಕ್ಕೆ ಧ್ಯಾನವೇ ಸರಿಯಾದ ಮಾರ್ಗವಾಗಿದೆ. ಅನೇಕ ಬಾರಿ, ನಾವು ಧ್ಯಾನಕ್ಕೆ ಕುಳಿತಾಗ, ನಮ್ಮಮನಸ್ಸು ಎಲ್ಲಾ ಕಡೆಗಳಿಗೆ ಹೋಗುತ್ತದೆ. ಅಂತಹ ಸಮಯದಲ್ಲಿ ಉಸಿರಾಟದ ಪ್ರಕ್ರಿಯೆಯಾದ ಸುದರ್ಶನ ಕ್ರಿಯೆಯನ್ನು ಮತ್ತು ಯೋಗಾಭ್ಯಾಸಗಳನ್ನು ಮಾಡುವುದರಿಂದ ನಮ್ಮ ಮನಸ್ಸು ಶಾಂತವಾಗಿ ಪ್ರಸನ್ನವಾಗುತ್ತದೆ.
ಒಂದು ವೇಳೆ ನಿಮಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ಬಂದರೆ, ಈ ಕೆಳಗಿನವುಗಳನ್ನು ನೆನಪಿಸಿಕೊಂಡು ನಿಮ್ಮ ಮನಸ್ಸನ್ನು ಜಾಗೃತಗೊಳಿಸಿ.
1. ಇದು ಕೇವಲ ನಿಮ್ಮ ಪ್ರಾಣ ಶಕ್ತಿಯು ಕಡಿಮೆಯಾದುದರ ಪರಿಣಾಮ, ಎನ್ನುವುದನ್ನು ಅರಿತುಕೊಳ್ಳಿ ಹಾಗೂ ಪ್ರಾಣಶಕ್ತಿಯನ್ನು ಹೆಚ್ಚಿಸಲು, ಹೆಚ್ಚು ಪ್ರಾಣಾಯಾಮವನ್ನು ಮಾಡಿ.
2. ಈ ಜಗತ್ತಿನಲ್ಲಿ ನಿಮಗಿಂತ ಹೆಚ್ಚು ಕಷ್ಟದಲ್ಲಿದ್ದು ಸಂಕಟಪಡುವ ಲಕ್ಷಾಂತರ ಜನರಿದ್ದಾರೆ; ಅವರನ್ನು ನೋಡಿ! ಅವರಿಗೆ ಹೋಲಿಸಿದಾಗ ನಿಮ್ಮ ಸಂಕಟವು ಕಡಿಮೆಯೆಂದು ಕಾಣುವುದರಿಂದ, ನೀವು ಆತ್ಮಹತ್ಯೆಯ ಬಗ್ಗೆ ಯೋಚಿಸುವುದಿಲ್ಲ.
3. ಇಲ್ಲಿ ನಿಮ್ಮ ಇರುವಿಕೆಯು ಅಗತ್ಯವಾಗಿದೆ; ನಿಮ್ಮಿಂದ ಎಲ್ಲರಿಗೂ ಸಾಕಷ್ಟು ಪ್ರಯೋಜನವಿದೆ; ನೀವು ಈ ಜಗತ್ತಿನಲ್ಲಿ ಏನಾದರೂ ಮಾಡಬೇಕಾಗಿದೆ; ಎನ್ನುವುದನ್ನು ನೆನಪಿಸಿಕೊಳ್ಳಿ.
ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಮರೆತುಬಿಡಿ. ಸಾಮಾನ್ಯವಾಗಿ, ತಾವು ತಮ್ಮ ಪ್ರತಿಷ್ಠೆ ಮತ್ತು ಸ್ಥಾನಮಾನವನ್ನು ಕಳೆದುಕೊಂಡಿದ್ದೇವೆ, ಎಂದು ಭಾವಿಸಿಕೊಂಡು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾವ ಸ್ಥಾನಮಾನ? ಯಾವ ಪ್ರತಿಷ್ಠೆ? ನಿಮ್ಮ ಪ್ರತಿಷ್ಠೆಯ ಬಗ್ಗೆ ಯೋಚಿಸಲು ಯಾರಿಗೆ ಸಮಯವಿದೆ? ಪ್ರತಿಯೊಬ್ಬರೂ ತಮ್ಮದೇ ಆದ ಸಮಸ್ಯೆಗಳೊಂದಿಗೆ, ಅವರ ಸ್ವಂತ ಮನಸ್ಸಿನಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅವರಿಗೆ ತಮ್ಮ ಸ್ವಂತ ಮನಸ್ಸಿನಿಂದಲೇ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ನಿಮ್ಮ ಬಗ್ಗೆ ಯೋಚಿಸಲು ಅವರಿಗೆ ಸಮಯವಾದರೂ ಎಲ್ಲಿದೆ? ಸಮಾಜವು ನಿಮ್ಮ ಬಗ್ಗೆ ಏನು ಯೋಚಿಸುತ್ತದೆ ಎಂದು ಚಿಂತೆ ಮಾಡುವುದು ವ್ಯರ್ಥ. ಜೀವನವು ,ಕೇವಲ ಕೆಲವು ಭೌತಿಕ ವಸ್ತುಗಳನ್ನು ಪಡೆದುಕೊಳ್ಳುವುದಕ್ಕಿಂತ ಬಹಳಷ್ಟು ಹೆಚ್ಚಿನದು; ಯಾವುದೋ ಒಬ್ಬ ವ್ಯಕ್ತಿಯ ನಿಂದನೆ ಅಥವಾ ಮೆಚ್ಚುಗೆಗಿಂತ ಅತ್ಯಂತ ಮೇಲ್ಮಟ್ಟದ್ದು; ಲೌಕಿಕ ಸಂಬಂಧಗಳು ಅಥವಾ ಒಂದು ಉದ್ಯೋಗಕ್ಕಿಂತ ಅತ್ಯಂತ ಅಮೂಲ್ಯವಾದದ್ದು.
ಸಂಬಂಧಗಳ ನಡುವಿನ ವೈಮನಸ್ಯದಿಂದಾಗಿ ಉಂಟಾದ ವೈಫಲ್ಯ, ಉದ್ಯೋಗದಲ್ಲಿ ಅನುಭವಿಸಿದ ಸೋಲು, ಬಯಸಿದ್ದನ್ನು ಸಾಧಿಸಲು ಸಾಧ್ಯವಾಗದಿರುವುದು, ಮುಂತಾದ ಕಾರಣಗಳಿಂದಾಗಿ ಆತ್ಮಹತ್ಯಾ ಪ್ರವೃತ್ತಿಯು ಚಿಗುರುವುದು. ಆದರೆ ಈ ಜೀವನವು ನಿಮ್ಮ ಪ್ರಜ್ಞೆಯಲ್ಲಿ, ನಿಮ್ಮ ಮನಸ್ಸಿನಲ್ಲಿ ಮೂಡುವ ಸಣ್ಣ ಪುಟ್ಟ ಆಸೆಗಳಿಗಿಂತ ಬಹಳಷ್ಟು ಹೆಚ್ಚಿನದು. ಜೀವನದ ಬಗ್ಗೆ ನಿಮ್ಮಲ್ಲಿ ಸಾಧ್ಯವಾದಷ್ಟು ವಿಶಾಲವಾದ ದೃಷ್ಟಿಕೋನವಿರಲಿ ಮತ್ತು ಕೆಲವು ರೀತಿಯ ಸಾಮಾಜಿಕ ಚಟುವಟಿಕೆ ಅಥವಾ ಸೇವಾ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸೇವೆಯು ಜನರ ಬುದ್ಧಿಯನ್ನು ತೀಕ್ಷ್ಣಗೊಳಿಸಿ, ಅವರನ್ನು ವಿವೇಕದಿಂದ ವರ್ತಿಸುವಂತೆ ಮಾಡುತ್ತದೆ. ಮತ್ತು ಅವರನ್ನು ಈ ಮಾನಸಿಕ ಖಿನ್ನತೆಯಿಂದ ದೂರವಿರಿಸುತ್ತದೆ.
ಮೇಲೆ ವಿವರಿಸಿದ ವಿಷಯಗಳ ನಿರೂಪಣೆಯು, ಯಾವುದೇ ವಿಧದ ವೃತ್ತಿಪರ ವೈದ್ಯಕೀಯ ಸಲಹೆಗಳಿಗೆ, ರೋಗನಿರ್ಣಯಕ್ಕೆ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಉಪಯೋಗಿಸುವ ಉದ್ದೇಶದಿಂದ ಸೂಚಿಸಿದ್ದಲ್ಲ. ನಿಮ್ಮ ಮನಸ್ಸಿನಲ್ಲಿ ವೈದ್ಯಕೀಯ ವಿಷಯಗಳಿಗೆ ಸಂಬಂಧ ಪಟ್ಟ ಯಾವುದಾದರೂ ಪ್ರಶ್ನೆ ಗಳಿದ್ದರೆ, ನೀವು ಯಾವಾಗಲೂ ನಿಮ್ಮ ವೈದ್ಯರು ಅಥವಾ ಇತರ ಅರ್ಹ ಆರೋಗ್ಯ ವೃತ್ತಿಪರರ ಸಲಹೆಯನ್ನು ಪಡೆದುಕೊಳ್ಳಬಹುದು.