ನಾನು ಯಾವಾಗ ಮಲಗಬೇಕು?
ಧರ್ಮವೇ ಪ್ರಕೃತಿಯಾಗಿದೆ. ದೇಹಕ್ಕೆ ಅದರದ್ದೇ ಆದ ಒಂದು ಧರ್ಮವಿದೆ. ದೇಹವು ಮಲಗಲು ಬಯಸಿದರೆ ನೀವು ಅದಕ್ಕೆ ವಿಶ್ರಾಂತಿ ನೀಡಬೇಕು. ಆದರೆ ದೇಹವು ಮಲಗಲು ಬಯಸಿದರೂ, ನಾವು ಏನು ಮಾಡುತ್ತೇವೆ? ಒಂದು ಆಸಕ್ತಿದಾಯಕ ಚಲನಚಿತ್ರ ಇರುವುದರಿಂದ ನಾವು ದೂರದರ್ಶನವನ್ನು ಹಾಕುತ್ತೇವೆ. ಆಗ ನಾವು ನಮ್ಮ ದೇಹಕ್ಕೆ ವಿರುದ್ಧವಾಗಿ ಹೋಗುತ್ತೇವೆ. ದೇಹಕ್ಕೆ ತನ್ನದೇ ಆದ ಬೇಡಿಕೆಗಳಿವೆ; ಹಾಗೂ ನಾವು ನಮ್ಮ ದೇಹದ ಬೇಡಿಕೆಗಳಿಗೆ ಸ್ಪಂದಿಸಬೇಕು.
ನಾವು ಎಷ್ಟು ಮಲಗಬೇಕು?
ಶಕ್ತಿಯ ನಾಲ್ಕು ಮೂಲಗಳಿವೆ:
-
ಆಹಾರ: ಪ್ರಾಚೀನ ಭಾರತದಲ್ಲಿ, ಯಾರಾದರೂ ತಮಾಷೆಯಾಗಿ, ಹಗುರವಾದ ರೀತಿಯಲ್ಲಿ ನಡೆದುಕೊಂಡರೆ, ‘ನೀನೇಕೆ ಈ ರೀತಿ ವರ್ತಿಸುತ್ತಿರುವೆ?’ ಎಂದು ಕೇಳುವ ಬದಲು, ಜನರು ಕೇಳುತ್ತಿದ್ದರು, ‘ನೀವು ಅವನಿಗೆ ಏನು ತಿನ್ನಿಸಿದ್ದೀರಿ?’ ಅಥವಾ ‘ನೀವು ಏನು ತಿಂದಿದ್ದೀರಿ?’. ಒಂದು ರೀತಿಯಲ್ಲಿ ಇದು ನಿಜವೂ ಹೌದು. ಆಹಾರವು ನಮ್ಮ ಶಕ್ತಿಯ ಮೊದಲ ಸ್ರೋತವಾಗಿದೆ.
-
ನಿದ್ರೆ: ಯಾವುದೇ ಬುದ್ಧಿವಂತ ವ್ಯಕ್ತಿಯನ್ನು, ನೀವು ಎರಡು ದಿನಗಳ ವರೆಗೆ ಮಲಗಲು ಬಿಡದಿದ್ದರೆ, ಅವನು ಯಾವಾಗಲೂ ಇರುವಂತೆ ಸಹಜವಾಗಿ ಇರುವುದಿಲ್ಲ. ಅವನ ಅಥವಾ ಅವಳ ನಡವಳಿಕೆಯಲ್ಲಿ ತೀವ್ರವಾದ ಬದಲಾವಣೆಯು ಕಂಡು ಬರುತ್ತದೆ. ಆದ್ದರಿಂದ ನಿದ್ರೆ ಅಥವಾ ಸರಿಯಾದ ವಿಶ್ರಾಂತಿಯು ಅತೀ ಮುಖ್ಯ.
-
ಉಸಿರಾಟ: ಇದು ಶಕ್ತಿಯ ಮೂರನೇ ಸ್ರೋತವಾಗಿದೆ. ಕೆಲವೇ ನಿಮಿಷಗಳ ಉಸಿರಾಟ ಮತ್ತು ಯೋಗವನ್ನು ಮಾಡುವುದರಿಂದ ದೇಹ ಮತ್ತು ಮನಸ್ಸುಗಳು ಶಕ್ತಿಯುತವಾಗುತ್ತವೆ ಮತ್ತು ಆತ್ಮವನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುತ್ತವೆ.
-
ಧ್ಯಾನಸ್ಥವಾಗಿದ್ದು ಸಂತೋಷದಿಂದ ಇರುವ ಮನಸ್ಸು: ಮನಸ್ಸಿಗೆ ಆರಾಮವು ದೊರೆತಾಗ, ಅದು ಹೆಚ್ಚು ಶಾಂತವಾಗಿರುತ್ತದೆ ಮತ್ತು ದೊಡ್ಡ ಮನಸ್ಸಿನೊಂದಿಗೆ ಒಂದಾಗಿರುತ್ತದೆ. ಕೆಲವೇ ನಿಮಿಷಗಳ ಧ್ಯಾನವು ಮನಸ್ಸಿಗೆ ಆರಾಮವನ್ನು ಕೊಟ್ಟು, ಅದು ಸಂತೋಷದಿಂದ ಇರುವ ಹಾಗೆ ಮಾಡುವುದು.
ನಿಮಗೆ ಉತ್ತಮ ಪ್ರಮಾಣದ ನಿದ್ರೆಯು ಬೇಕಾಗುತ್ತದೆ. ಪ್ರತಿದಿನವೂ ಕನಿಷ್ಠ ಪಕ್ಷ ಆರರಿಂದ ಎಂಟು ಗಂಟೆಗಳ ಕಾಲವಾದರೂ, ನೀವು ನಿದ್ರಿಸಬೇಕು. ನಿಮ್ಮ ಮನಸ್ಸಿನಲ್ಲಿ ಉತ್ಸಾಹವಿದ್ದಾಗ ಮತ್ತು ನಿಮಗೆ ನಿಮ್ಮ ಜೀವನದಲ್ಲಿ ಒಂದು ಉದ್ದೇಶವಿದ್ದಾಗ, ಬೇರೆ ಯಾವುದೂ ಮುಖ್ಯವೆಂದು ಅನಿಸುವುದಿಲ್ಲ. ಈ ಸ್ಥಿತಿಯಲ್ಲಿರುವಾಗ, ನೀವು ಶಕ್ತಿಯನ್ನು ನಿಮ್ಮ ಒಳಗಿನಿಂದಲೇ ಪಡೆದುಕೊಳ್ಳುತ್ತೀರಿ, ಎನ್ನುವುದು ನಿಮಗೆ ತಿಳಿದಿದೆ, ಆದರೂ ನೀವು ಈ ವಿಧದ ವಿಶ್ರಾಂತಿಯನ್ನು ಪಡೆದುಕೊಳ್ಳಲು ಸ್ವಲ್ಪವಾದರೂ ಸಮಯವನ್ನು ಮೀಸಲಿಡಬೇಕು. ನಿದ್ರೆಯು ಬಹಳ ಮುಖ್ಯವಾಗಿದೆ.
ನಿದ್ರಿಸಲು ಬೇಕಾಗುವ ಸಿದ್ಧತೆಗಳನ್ನು ಮಾಡುವುದು ಹೇಗೆ?
ಸಾಮಾನ್ಯವಾಗಿ, ನಾವು ಮಲಗಲಿಕ್ಕೆ ಹೋಗುವಾಗ, ನಮ್ಮಲ್ಲಿ ಏನೆಲ್ಲಾ ಇಲ್ಲವೋ, ಅಂತಹ ವಿಷಯಗಳ ಬಗ್ಗೆ ,ಮತ್ತು ನಾವು ಬದುಕಿನಲ್ಲಿ ವಿಫಲವಾಗಿರುವ ಸಂಗತಿಗಳ ಬಗ್ಗೆ ಯೋಚಿಸುತ್ತೇವೆ. ಹೀಗೆ ಮಲಗುವ ಮೊದಲು, ನಿಮ್ಮ ವೈಫಲ್ಯಗಳನ್ನು , ನಿರಾಶೆಗಳನ್ನು ಅಥವಾ ಇತರರಿಂದ ನಿಮಗಾದ ನೋವುಗಳನ್ನು ಮಾತ್ರ ನೀವು ನೆನಪಿಸಿಕೊಳ್ಳುತ್ತಿದ್ದರೆ, ಇವೆಲ್ಲವೂ ನಿಮ್ಮ ಮನಸ್ಸಿನ ಸುಪ್ತ ಪ್ರಜ್ಞೆಯಲ್ಲಿ ಆಳವಾಗಿ ಇಳಿದು ಬಿಟ್ಟು, ಹಾಗೆಯೇ ಉಳಿದುಕೊಳ್ಳುತ್ತವೆ. ನಾವು ಇವುಗಳನ್ನಷ್ಟೇ ನಮ್ಮ ಮನಸ್ಸಿನಲ್ಲಿ ಬಿತ್ತನೆ ಮಾಡಿಕೊಂಡು, ಹಾಗೆಯೇ ಮಲಗಿ ನಿದ್ರಿಸಲು ಹೋಗುತ್ತೇವೆ.
ತತ್ಪರಿಣಾಮವಾಗಿ, ಬೆಳಿಗ್ಗೆ ನಿಮಗೆ ಎಚ್ಚರವಾದಾಗ, ದಣಿವು, ನಕಾರಾತ್ಮಕ ಭಾವನೆಗಳು ಮತ್ತು ನಿರಾಶೆಗಳು ನಿಮ್ಮನ್ನು ಬಾಧಿಸುತ್ತವೆ.
ಆದುದರಿಂದ ರಾತ್ರಿಯ ಹೊತ್ತು ನೀವು ಮಲಗಲಿಕ್ಕೆ ಹೋಗುವಾಗ,ನಿಮ್ಮ ಗಮನವನ್ನು ,ನೀವು ಬದುಕಿನಲ್ಲಿ ಸಾಧಿಸಿದ ಎಲ್ಲಾ ವಿಷಯಗಳ ಮೇಲೆ ಹಾಗೂ ನಿಮ್ಮ ಬದುಕಿನಲ್ಲಿದ್ದ ಎಲ್ಲಾ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಬೇಕು. ಆಗ ನಿಮ್ಮ ಮನಸ್ಸು ಒಳ್ಳೆಯ ವಿಷಯಗಳು ಮತ್ತು ಶುಭ ಹಾರೈಕೆಗಳ ಬಗ್ಗೆ ಯೋಚಿಸಲು ತೊಡಗುತ್ತದೆ. ಉತ್ತಮ ಕ್ಷಣಗಳ ಬಗ್ಗೆ ಯೋಚಿಸಿ ಅಥವಾ ಪ್ರಾರ್ಥನೆಯನ್ನು ಮಾಡಿ ಅನಂತರ ನಿದ್ರಿಸಲು ಹೋಗಿ. ಪ್ರಾರ್ಥನೆಯೆಂದರೆ, ನಿಮ್ಮ ಜೀವನದಲ್ಲಿ ನೀವು ಯಾವುದಕ್ಕೆಲ್ಲಾ ಕೃತಜ್ಞರಾಗಿದ್ದೀರಿ, ಎಂಬುದರ ಬಗ್ಗೆ ಯೋಚಿಸುವುದು.
ಈ ರೀತಿಯಾಗಿ ಸಕಾರಾತ್ಮಕವಾದ ಆಲೋಚನೆಗಳನ್ನು ನಿಮ್ಮ ಮನಸ್ಸಿನ ಸುಪ್ತ ಪ್ರಜ್ಞೆಯಲ್ಲಿ ಬಿತ್ತನೆ ಮಾಡಿಕೊಂಡು, ಹಾಗೆಯೇ ರಾತ್ರಿಯ ಹೊತ್ತು ವಿಶ್ರಮಿಸಲು ಹೋದರೆ , ಬೆಳಿಗ್ಗೆ ಎದ್ದಾಗ ನೀವು ಅತ್ಯಂತ ಹೆಚ್ಚಿನ ಜೀವಕಳೆಯೊಂದಿಗೆ ಲವಲವಿಕೆಯಿಂದ ಇರುತ್ತೀರಿ. ಆದುದರಿಂದ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ಎಚ್ಚರವಾದಾಗ , ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳ ಬೀಜಗಳನ್ನು ಬಿತ್ತಿಕೊಂಡು ತಾಜಾತನವನ್ನು ಅನುಭವಿಸಿ. ಈ ರೀತಿಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಾದರೆ ನೀವು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಮಾಡಬೇಕಾಗುತ್ತದೆ ಹಾಗೂ ಈ ವಿಧದಲ್ಲಿ ಮಾತ್ರವೇ ನೀವು ಯಶಸ್ವಿಯಾದ ಜೀವನವನ್ನು ನಡೆಸಬಹುದಾಗಿದೆ. ಯಶಸ್ಸನ್ನು ಸಾಧಿಸುವ ರಹಸ್ಯವು -ಸದಾಕಾಲವೂ ಬಾಹ್ಯಾಕಾಶದಲ್ಲಿ ಸಕಾರಾತ್ಮಕ ಬೀಜಗಳನ್ನು ಬಿತ್ತುತ್ತಲೇ ಇರುವುದಾಗಿದೆ. ಆದರೆ, ಇದನ್ನು ನಾವು ಹೇಗೆ ಕಾರ್ಯ ರೂಪಕ್ಕೆ ತರುವುದು? ನೀವು ಉಸಿರಾಟ ಮತ್ತು ಧ್ಯಾನದ ಕಡೆಗೆ ಗಮನ ಹರಿಸುವುದರಿಂದ ,ಎಲ್ಲವೂ ತನ್ನಂತಾನೇ ಸಂಭವಿಸುತ್ತದೆ!
ಬೇಗನೆ ನಿದ್ರೆ ಮಾಡಲು ಸಹಕಾರಿಯಾಗುವ ಹತ್ತು ಸುಲಭವಾದ ಸಲಹೆಗಳು
-
“ಬೇಗನೆ” ಎನ್ನುವ ಪದವನ್ನು ಬಿಟ್ಟುಬಿಡಿ: ನಾನು ಬೇಗನೆ ಮಲಗಬೇಕು ಎನ್ನುವ ಆತಂಕವೇ ನಿಮಗಿರುವ ಮೊದಲನೆಯ ಅಡಚಣೆಯಾಗಿದೆ. ಇದು ನಮ್ಮನ್ನು ಎಚ್ಚರವಾಗಿರಿಸುತ್ತದೆ! ಆದುದರಿಂದ ಈ “ಬೇಗನೆ” ಬಿಟ್ಟುಬಿಡಿ, ಅನಂತರ ಸಹಜವಾದ ರೀತಿಯಲ್ಲಿ ನೀವು ನಿದ್ರೆಗೆ ಜಾರುತ್ತೀರಿ.
-
ತಡವಾಗಿ ತಿನ್ನಬೇಡಿ: ಎರಡನೆಯ ಕಾರಣವು, ತಡವಾಗಿ ಊಟ ಮಾಡುವುದು . ಇದರಿಂದಾಗಿ ನಿಮ್ಮ ಪಚನ ಕ್ರಿಯೆಗೆ ತೊಂದರೆಯಾಗುವುದು. ಸರಿಯಾದ ಪ್ರಮಾಣದ ಆಹಾರವನ್ನು ಸೇವಿಸಿದರೆ , ಅದು ನಿಮ್ಮನಿದ್ರೆಗೆ ಸಹಾಯ ಮಾಡುತ್ತದೆ – ಆದುದರಿಂದ ತುಂಬಾ ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದಿರುವ ಪ್ರಮಾಣದ ಆಹಾರವನ್ನು ,ಹೆಚ್ಚು ತಡ ಮಾಡದೆ ತೆಗೆದುಕೊಳ್ಳಿ.
-
ಪ್ರಾಣಾಯಾಮವನ್ನು ಮಾಡಿ: ಸ್ವಲ್ಪ ಉಸಿರಾಟ ಹಾಗೂ ಸ್ವಲ್ಪ ಪ್ರಾಣಾಯಾಮವನ್ನು ಮಾಡುವುದರಿಂದ ಅದು ಖಂಡಿತವಾಗಿಯೂ ನಿದ್ರೆಗೆ ಸಹಾಯ ಮಾಡುತ್ತದೆ. ಆಳವಾದ ಉಸಿರಾಟವು ಕೂಡ ಅತ್ಯಂತ ಸಹಕಾರಿಯಾಗಿದೆ.ಸ್ವಲ್ಪ ಯೋಗಾಸನಗಳನ್ನು ಕೂಡ ಅದರೊಂದಿಗೆ ಸೇರಿಸಿಕೊಳ್ಳಬೇಕು.
-
ಧ್ಯಾನ ಮಾಡಿ: ಧ್ಯಾನವು ಖಂಡಿತವಾಗಿಯೂ ನಿಮಗೆ ನಿದ್ರೆ ಬರಲು ಸಹಾಯ ಮಾಡುತ್ತದೆ. ಹೆಚ್ಚು ಹೊತ್ತು ಧ್ಯಾನ ಮಾಡಿ. ಹಲವಾರು ಬಾರಿ ಧ್ಯಾನವನ್ನು ಮಾಡಿ. (ಧ್ಯಾನವನ್ನು ಕಲಿಯಲು, ಇಲ್ಲಿ ಕ್ಲಿಕ್ ಮಾಡಿ)
-
ಮೂರನೆಯದು ಚಿಂತೆಗಳು: ನೀವು ನಾಳೆಯ ಬಗ್ಗೆ ಚಿಂತಿಸುತ್ತೀರಿ ಅಥವಾ ಹಿಂದಿನ ಘಟನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ. ಗತಕಾಲದ ನೆನಪು ಅಥವಾ ಭವಿಷ್ಯದ ಬಗ್ಗೆ ಇರುವ ಆತಂಕವು, ನಿಮ್ಮ ನಿದ್ರೆಯ ಕೊರತೆಗೆ ಇರುವ ಮೂಲ ಕಾರಣಗಳಲ್ಲಿ ಒಂದು.
-
ಯೋಗ ನಿದ್ರಾ: ನಿಮಗೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ,ಯೋಗ ನಿದ್ರೆಯನ್ನು ಮಾಡಿ. ಮಲಗಿಕೊಂಡು ,ಆರ್ಟ್ ಆಫ್ ಲಿವಿಂಗ್ ಅಪ್ಲಿಕೇಶನ್ ನಿಂದ ಅಥವಾ ಗುರುದೇವ್ ಅವರ ಚಾನೆಲ್ ನ ಮೂಲಕ ಆಲಿಸುತ್ತಾ, ಯೋಗ ನಿದ್ರೆಯನ್ನು ಮಾಡಿ. ನಿಮ್ಮ ಗಮನವನ್ನು ದೇಹದ ವಿವಿಧ ಭಾಗಗಳಿಗೆ ತೆಗೆದುಕೊಂಡು ಹೋಗುವುದರಿಂದ , ನಿಮಗೆ ನಿದ್ರಿಸಲು ಸಾಧ್ಯವಾಗುತ್ತದೆ.
-
ಲಘು ಸಂಗೀತವನ್ನು ಆಲಿಸಿ: ಬಾಯಿಯ ಮೂಲಕ ಸ್ವರಗೂಡಿಸದಿರುವ, ಲಘು ಸಂಗೀತ ಮತ್ತು ವಾದ್ಯ ಸಂಗೀತಗಳು ನಿಮಗೆ ನಿದ್ರಿಸಲು ಸಹಾಯ ಮಾಡುತ್ತವೆ. ಸಂಗೀತವು ನಿಮ್ಮ ಇಡೀ ದೇಹದ ಮೂಲಕ ಹಾದುಹೋಗುತ್ತಿದೆ ಎಂದು ಭಾವಿಸುತ್ತಾ, ಹಾಗೆಯೇ ಸುಮ್ಮನೆ ಮಲಗಿಕೊಳ್ಳಿ. ನಿಮಗೆ ಹೆಚ್ಚು ಪರಿಚಿತವಲ್ಲದ ಕೆಲವು ವಾದ್ಯ ಸಂಗೀತ ಅಥವಾ ಇತರ ಸಂಗೀತವನ್ನು ಕೇಳಿ. ನಿಮಗೆ ಪರಿಚಿತವಾಗಿರುವ ಸಂಗೀತವನ್ನು ನುಡಿಸಿದರೆ, ಇದರೊಂದಿಗೆ ನೀವು ಕೂಡ ಹಾಡಲು ಮತ್ತು ಗುಂಯ್ ಗುಟ್ಟಲು ಪ್ರಾರಂಭಿಸುತ್ತೀರಿ. ಆದರೆ ನೀವು ಕೆಲವು ಅಪರಿಚಿತ ಲಘು ಸಂಗೀತವನ್ನು ಕೇಳುತ್ತಿದ್ದರೆ, ಅದು ನಿಮ್ಮನ್ನು ನಿದ್ರೆಗೆ ದೂಡುತ್ತದೆ.
-
ಹಾಲು ಕುಡಿಯಿರಿ: ಮಲಗುವ ಮೊದಲು ಸ್ವಲ್ಪ ಬೆಚ್ಚಗಿನ ಹಾಲನ್ನು ಕುಡಿಯಿರಿ. ತಣ್ಣನೆಯ ಹಾಲು ಸಹ ಅನೇಕ ಜನರಿಗೆ ಸಹಾಯ ಮಾಡುತ್ತದೆ.
-
ಪವರ್ ಆಫ್ ಟು ಪವರ್ ಡೌನ್: ಮಲಗುವ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ, ಮಲಗುವ ಕನಿಷ್ಠ ಒಂದು ಗಂಟೆಯ ಮೊದಲು ನಿಮ್ಮ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಿಚ್ ಆಫ್ ಮಾಡಿ. ಮಲಗುವ ಒಂದು ಗಂಟೆಯ ಮೊದಲು ಮತ್ತು ನೀವು ಎದ್ದ ಒಂದು ಗಂಟೆಯ ನಂತರ ಫೋನ್ ನ್ನು ಕರ್ಫ್ಯೂ ಮಾಡಿ ಬಿಡಿ.
-
ಕಠಿಣವಾದ ಕೆಲಸವನ್ನು ಮಾಡಿ: ಒಂದು ದಿನದ ಕಠಿಣ ಪರಿಶ್ರಮದ ನಂತರ ಚೆನ್ನಾಗಿ ದಣಿದಾಗ, ಯಾರಿಗೆಯೇ ಆದರೂ ಸೊಳ್ಳೆಗಳು ಕಚ್ಚುತ್ತಾ ಇದ್ದರೂ, ಒಳ್ಳೆಯ ನಿದ್ರೆಯು ಬರುತ್ತದೆ. ಚೆನ್ನಾಗಿ ದುಡಿದರೆ, ಸೊಳ್ಳೆ ಕಡಿತವನ್ನು ಮರೆತುಬಿಡಿ, ಇಲಿ ಕಡಿತವೂ ಅವನ ಅಥವಾ ಅವಳ ನಿದ್ರೆಗೆ ಭಂಗ ತರುವುದಿಲ್ಲ! ಆದರೆ ನೀವು ಹಗಲಿನಲ್ಲಿ ಸಮಯವನ್ನು ವ್ಯರ್ಥ ಮಾಡಿದ್ದರೆ, ಮೃದುವಾದ, ಆರಾಮದಾಯಕವಾದ ಹಾಸಿಗೆಯ ಮೇಲೆ ಮಲಗಿದರೂ ಸಹ ರಾತ್ರಿಯ ವೇಳೆಯಲ್ಲಿ ನಿಮಗೆ ಮಲಗಲು ಸಾಧ್ಯವಾಗುವುದಿಲ್ಲ. ನೀವು ಅತ್ತಿತ್ತ ಹೊರಳಾಡುತ್ತಾ, ಮಗ್ಗಲು ಬದಲಾಯಿಸುತ್ತೀರಿ ಮತ್ತು ಒಂದು ಸೊಳ್ಳೆಯ ಸದ್ದು ಕೂಡ ನಿಮ್ಮನ್ನು ಎಚ್ಚರವಾಗಿರಿಸುತ್ತದೆ. ನಿಮ್ಮ ನಿದ್ರೆಯಿಲ್ಲದ ರಾತ್ರಿಗೆ ಸೊಳ್ಳೆಯು ಕಾರಣವಲ್ಲ. ನಿಮ್ಮ ಸೋಮಾರಿತನವು ನಿಮ್ಮನ್ನು ಮಲಗಲು ಬಿಡುವುದಿಲ್ಲ. ಅಷ್ಟೇ!ನೀವು ಬೆಳಿಗ್ಗೆಯಿಂದ ಹಾಸಿಗೆಯಲ್ಲಿಯೇ ಬಿದ್ದುಕೊಂಡಿದ್ದರೆ, ರಾತ್ರಿ ಹೇಗೆ ತಾನೇ ಮಲಗಲು ಸಾಧ್ಯವಾಗುವುದು? ಅತಿಯಾಗಿ ನಿದ್ರೆ ಮಾಡುವ ಜನರು ನಿದ್ರೆಯನ್ನು ಆನಂದಿಸಲು ಸಾಧ್ಯವಿಲ್ಲ, ಆದರೆ ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಹೊಲ ಗದ್ದೆಗಳಲ್ಲಿ ದುಡಿದು ಆಯಾಸಗೊಂಡವರು, ಮಲಗಿದಾಗ ತೃಪ್ತಿಯನ್ನು ಪಡೆಯುತ್ತಾರೆ.
ನಿಮಗೆ ವಿಶ್ರಾಂತಿ ಪಡೆಯಲು ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುವ ಶಕ್ತಿಯುತ ತಂತ್ರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, “ಆತಂಕ ಮತ್ತು ನಿದ್ರೆಯ ಅಸ್ವಸ್ಥತೆಯನ್ನು ತೊಡೆದುಹಾಕಲು ಇರುವಂತಹ- ಆರ್ಟ್ ಆಫ್ ಲಿವಿಂಗ್ ನ ಕಾರ್ಯಾಗಾರ” ಕ್ಕೆ (“The Art of Living Workshop to Get Rid of Anxiety & Sleep Disorder“) ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ಬೋನಸ್: ನಿದ್ರೆಯಲ್ಲಿ ಮತ್ತು ಅಭಿವ್ಯಕ್ತಿ
ನಿಮಗೆ ರಾತ್ರಿ ಮಲಗುವ ಮುನ್ನ ಒಂದು ಆಸೆ ಇದೆ ಎಂದು ಭಾವಿಸೋಣ. ನೀವು ಸ್ವಲ್ಪ ಚಹಾ ಅಥವಾ ನೀರು ಅಥವಾ ಹಣ್ಣಿನ ರಸವನ್ನು ಕುಡಿಯಲು ಬಯಸುತ್ತೀರಿ . ಆದರೆ ನೀವು ಅದನ್ನು ಮಾಡುವುದಿಲ್ಲ. ಹಾಗೆಯೇ ನೀವು ಮಲಗಲು ಹೋಗುತ್ತೀರಿ. ರಾತ್ರಿ ನಿದ್ದೆ ಮಾಡಿದಾಗ ಏನಾಗುತ್ತದೆ? ನೀವು ಕನಸಿನಲ್ಲಿ, ಅದನ್ನು ಕುಡಿಯುತ್ತಲೇ ಇರುತ್ತೀರಿ. .ಅಥವಾ ಗಾಢವಾಗಿ ನಿದ್ರೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
ಉತ್ತಮ ನಿದ್ರೆಯನ್ನು ಪಡೆಯಲು, ನೀವು ಏನು ಮಾಡಬೇಕು? ನಿಮ್ಮ ಮನಸ್ಸಿನಲ್ಲಿ ಇರುವುದೆಲ್ಲವನ್ನೂ ಬಿಟ್ಟುಬಿಡಿ. ಇದರ ರಹಸ್ಯವೆಂದರೆ, ಎಲ್ಲವನ್ನೂ ಬಿಟ್ಟುಬಿಡುವುದರಿಂದ ನಿಮ್ಮ ಆಸೆಯು ಈಡೇರುತ್ತದೆ.ನೀವು ಆಸೆಯನ್ನು ಹಿಡಿದಿಟ್ಟುಕೊಂಡರೆ, ಅದು ಎಂದಿಗೂ ಈಡೇರುವುದಿಲ್ಲ.
ಹಾಗಾದರೆ ನೀವು ಏನು ಮಾಡಬೇಕು? ನಿಮಗೆ ಒಂದು ಆಸೆಯು ಇದೆಯೆಂದಾದರೆ, ಅದನ್ನು ನಿಮ್ಮ ಗುರುವಿಗೆ,ಉನ್ನತ ಶಕ್ತಿಗೆ ನೀಡಿ ಸಮರ್ಪಣೆ ಮಾಡಿಕೊಳ್ಳಿ ಮತ್ತು ನೀವು ನಿಶ್ಚಿಂತೆಯಾಗಿ ವಿಶ್ರಾಂತಿ ಪಡೆಯಿರಿ. ಬಿಟ್ಟು ಬಿಡುವುದರಿಂದ ಮಾತ್ರ, ನಿಮಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಆಗ ಮಾತ್ರ ನೀವು ನಿಮ್ಮ ನಿಜವಾದ ಸ್ವಭಾವದಲ್ಲಿರಬಹುದು.