ನಮ್ಮಲ್ಲಿ ಹೆಚ್ಚಿನವರಿಗೆ ಹಾಸಿಗೆಯಿಂದ ಎದ್ದೇಳಲು ಅಥವಾ ಯಾವುದಾದರೂ ಕೆಲಸ ಮಾಡಲು ಅಲಾರ್ಮ್ ಇಟ್ಟುಕೊಳ್ಳುವುದೇ ಅಭ್ಯಾಸ. ಇಂಥದೊಂದು ಸಶಬ್ದ ಎಚ್ಚರಿಕೆ ನಮ್ಮ ದಿನದಿನದ ಕೆಲಸಗಳಿಗೆ ಅಗತ್ಯ ಅನ್ನಿಸಿದರೂ, ಇಂಥ ಬಲವಂತದ ಎಚ್ಚರಿಕೆಯೇ ನಮಗೆ ಅಭ್ಯಾಸವಾಗಿಬಿಡಬಹುದು. ನಾನು ಹೇಳುವುದೇನೆಂದರೆ, ಅಲಾರ್ಮ್ ಮೇಲಿನ ಅವಲಂಬನೆ ಅಂದರೆ ಗಾಢನಿದ್ದೆ ಇಲ್ಲದ ರಾತ್ರಿಗಳಾಗಿರಬಹುದು. ಮರುದಿನದ ಕೆಲಸಗಳಿಗೆ ನಿಮ್ಮನ್ನು ನೀವು ಎಳೆದುಕೊಂಡು ಓಡಾಡಬೇಕಾಗಬಹುದು. ನಿದ್ರಾಹೀನತೆಯ ಖಾಯಿಲೆ, ಮಾನಸಿಕ ಒತ್ತಡ-ಉದ್ವೇಗಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ವಿಶ್ರಾಂತಿಹೀನತೆಯನ್ನು ನಿರ್ಲಕ್ಷಿಸುವಂತಿಲ್ಲ.

ನಮ್ಮ ದಿನವನ್ನು ಪ್ರಾರಂಭಿಸುವ ಅತ್ಯುತ್ತಮ ಮಾರ್ಗ ಎಂದರೆ ನಮ್ಮನ್ನು ಸಹಜವಾಗಿಯೇ ಎಚ್ಚರ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳುವುದು. ಅದನ್ನು ಈಗಿಂದೀಗಲೇ ಶುರು ಮಾಡುವುದು ಸಾಧ್ಯವಿಲ್ಲ, ಸರಿ. ಯಾಕೆಂದರೆ ಇದಕ್ಕೆ ಕೆಲವು ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಕೆಳಗೆ ಕೊಟ್ಟಿರುವ ಟಿಪ್ಸ್ ಗಳಲ್ಲಿ ನಿದ್ರೆಯ ಕೆಲವು ರಹಸ್ಯಗಳನ್ನು ತೆರೆದಿಟ್ಟು ನೀವು ಅಲಾರ್ಮ್ ಇಲ್ಲದೆಯೇ ಎಚ್ಚರಗೊಳ್ಳುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ.

ಅಲಾರ್ಮ್ ಇಲ್ಲದೆಯೇ ಎಚ್ಚರಗೊಳ್ಳಲು 10 ಅದ್ಭುತ ಕಿರುಸಲಹೆಗಳು

ಉದ್ಯೋಗದಲ್ಲಿ ಉತ್ಪಾದಕತೆ

ನಮ್ಮ ಪೂರ್ವಜರ ದೈನಂದಿಕಗಳನ್ನು ಗಮನಿಸಿದರೆ (ಗಡಿಯಾರ/ ಅಲಾರ್ಮ್ ಇಲ್ಲದ ಕಾಲದಲ್ಲಿ )ಅವರೆಲ್ಲ ಎಷ್ಟು ಶಿಸ್ತಿನ ಜೀವನ ನಡೆಸುತ್ತಿದ್ದರು ಎಂದು ನಿಮಗೆ ಆಶ್ಚರ್ಯ ಆಗದೇ ಇರದು. ಆಧುನಿಕ ಸೌಲಭ್ಯಗಳು ಇರಲಿಲ್ಲ. ಆದರೆ ಸಂಪೂರ್ಣ ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದುದರಿಂದ ಅವರ ಜೀವನ ಸುಲಭವಾಗಿತ್ತು. ಅವರೆಲ್ಲ ಸೂರ್ಯೋದಯಕ್ಕಿಂತ ತುಂಬಾ ಮೊದಲೇ ಏಳುತ್ತಿದ್ದರು, ಸೂರ್ಯಾಸ್ತವಾದಾಗ ಮಲಗುತ್ತಿದ್ದರು. ಕೆಲಸದಲ್ಲಿ ತುಂಬಾ ದಣಿವಾದ ದಿನ ನಿಮಗೆ ಗಾಢ ನಿದ್ದೆ ಬರುವುದನ್ನು ನೀವು ಗಮನಿಸಿರಬಹುದು. ಆರಾಮಾಗಿ ಕಳೆದ ದಿನಗಳಲ್ಲಿ ಅಂಥ ನಿದ್ದೆ ಸಾಧ್ಯವಾಗದು. ಆದ್ದರಿಂದ, ಒಳ್ಳೆಯ ನಿದ್ದೆಗಾಗಿ ಶರೀರ ಮತ್ತು ಮನಸ್ಸು ದಣಿಯುವಷ್ಟು ಕೆಲಸಮಾಡುವುದು ಅತ್ಯಗತ್ಯ.

ಮನಸ್ಸನ್ನು ಖುಷಿಯಾಗಿಟ್ಟುಕೊಂಡಾಗ ಕೆಲಸ ಸುಲಭವಾಗುತ್ತದೆ. ಉತ್ತಮ ಉತ್ಪಾದಕತೆಗೆ ಇದೇ ಕಾರಣ.

– ಗುರುದೇವ್ ಶ್ರೀ ಶ್ರೀ ರವಿಶಂಕರ್

ನಿದ್ದೆ ಮಾಡಿದ ಕಾಲದ ಲೆಕ್ಕ ಇಡಿ

ಪ್ರತಿಯೊಂದು ಶರೀರವೂ ಬೇರೆ ಬೇರೆ ರೀತಿಯಲ್ಲಿ ಕೆಲಸಮಾಡುವುದರಿಂದ ಈ ವಿಷಯ ಕೊಂಚ ಚರ್ಚಾಸ್ಪದವಾಗಬಹುದು. ಆದರೂ ನೀವು ನಿದ್ರಿಸುವ ಸಮಯದ ಲೆಕ್ಕ ಇಡುವುದು ಒಳ್ಳೆಯದು. ಪ್ರತಿಯೊಬ್ಬರೂ ರಾತ್ರಿ ಕನಿಷ್ಠ 7 ಗಂಟೆ ನಿದ್ರಿಸಬೇಕೆಂದು ಸಂಶೋಧನೆಗಳು ಹೇಳುತ್ತವೆ. ಆದರೆ, ಈ ಸಮಯ ಒಬ್ಬೊಬ್ಬರಲ್ಲೂ ವ್ಯತ್ಯಾಸ ಆಗಬಹುದು. ಮೂಲಭೂತವಾಗಿ, ಇದು ನಿದ್ರೆಯ ಸ್ತರಗಳನ್ನು (REM, Rapid Eye Movement  ಸೇರಿದಂತೆ) ಅವಲಂಬಿಸಿದೆ. ಕೆಲವರು ಕೇವಲ 4  ಗಂಟೆ ನಿದ್ರಿಸಿ ಉಲ್ಲಾಸಭರಿತರಾದರೆ, ಇನ್ನು ಕೆಲವರಿಗೆ 9 ಗಂಟೆಗಳ ನಿದ್ದೆ ಅನಿವಾರ್ಯ. ಆದ್ದರಿಂದ, ನಿಮ್ಮ ದೇಹಕ್ಕೆ ಎಷ್ಟು ನಿದ್ದೆ ಬೇಕೆಂದು ಕಂಡುಕೊಳ್ಳುವುದು ಅತಿ ಮುಖ್ಯ. ಆಗ, ಅಲಾರ್ಮ್ ಇಟ್ಟುಕೊಂಡು ಎಚ್ಚರಮಾಡಿಕೊಳ್ಳುವ ಅಗತ್ಯ ಬೀಳುವುದಿಲ್ಲ.

ಭೌತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ

ಭೌತಿಕ ಚಟುವಟಿಕೆಗಳು ಶರೀರದ ಎಲ್ಲ ಭಾಗಗಳಿಗೆ ರಕ್ತ ಹರಿಯುವಂತೆ ಮಾಡುತ್ತವೆ. ವ್ಯಾಯಾಮ, ಯೋಗ, ಓಟ – ಎಲ್ಲವೂ ನಿಮ್ಮ ಸ್ನಾಯುಗಳಿಗೆ ಕೆಲಸಕೊಟ್ಟು ನಿಮಗೆ ಸುಸ್ತಾಗುವಂತೆ ಮಾಡುತ್ತವೆ. ಇಂಥ ಉತ್ತೇಜಕಗಳಿಂದ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ. ಅಲ್ಲದೆ, ನಿಮ್ಮ ಬೆವರಿನ ಗ್ರಂಥಿಗಳನ್ನು ಪ್ರಚೋದಿಸುತ್ತವೆ, ಮನಸ್ಸನ್ನು ಒತ್ತಡ ಮತ್ತು ಉದ್ವೇಗಗಳಿಂದ ದೂರ ಇಡುತ್ತವೆ. ಆದ್ದರಿಂದ, ನಿಮಗಿಷ್ಟವಾದ ಆಟವನ್ನು ಆರಿಸಿಕೊಂಡು ಅದರಲ್ಲಿ ತೊಡಗಿಸಿಕೊಳ್ಳಿ. ನಿಮಗೆ ಈ ಕ್ರೀಡೆಗಳಲ್ಲಿ ಖುಷಿ ಸಿಗಲು ಶುರು ಆದಾಗ ಅದನ್ನು ನಿಯಮಿತವಾಗಿ ಮಾಡಲು ಉತ್ಸುಕರಾಗುತ್ತೀರಿ. ಅಲಾರ್ಮ್ ಇಲ್ಲದೆ ನಿಮ್ಮನ್ನು ಎಚ್ಚರ ಮಾಡಿಕೊಳ್ಳಲು ಇದೊಂದು ಮೋಜಿನ ವಿಧಾನ.

ಮನಸ್ಸಿಗೆ ಕೆಲಸ ಕೊಡಿ

ಪ್ರತಿದಿನ ಏನಾದರೂ ಸೃಜನಾತ್ಮಕ ಕೆಲಸಮಾಡುವುದರ ಮೇಲೆ ಗಮನಹರಿಸಿ.ಈ ಹೊಸ ಆಸಕ್ತಿ ನಿಮ್ಮ ಮಿದುಳಿನ ಜೀವಕೋಶಗಳನ್ನು ಕ್ರಿಯಾಶೀಲವಾಗಿಡುತ್ತದೆ. ಏಳುತ್ತಿದ್ದಂತೆ ಒಂದಷ್ಟು ಕುಶಲ ಕೆಲಸಗಳನ್ನುಮಾಡುವ ಅವಶ್ಯಕತೆಯನ್ನು ಮನಗಾಣುತ್ತೀರಿ. ಏನಾದರೂ ಆಸಕ್ತಿದಾಯಕ ವಿಷಯವನ್ನು ಎದುರುನೋಡುವಾಗ ನೀವು ಅಲಾರ್ಮ್ ಇಲ್ಲದೆಯೇ ಎಚ್ಚರಗೊಳ್ಳುತ್ತೀರಿ.

ಜೀವನದಲ್ಲಿ ಅಸ್ತವ್ಯಸ್ತತೆ ಇದೆ ; ಜೀವನಕ್ಕೆ ಶಿಸ್ತು ಬೇಕು. ನಾವು ಎರಡನ್ನೂ ಗೌರವಿಸಬೇಕು. ಅಸ್ತವ್ಯಸ್ತತೆಯಿಂದ ಆನಂದ ಸಿಗುತ್ತದೆ ; ಶಿಸ್ತಿನಿಂದಾಗಿ ಆರಾಮ ಸಿಗುತ್ತದೆ.   

– ಗುರುದೇವ್ ಶ್ರೀ ಶ್ರೀ ರವಿಶಂಕರ್

ಪ್ರಜ್ಞಾಪೂರ್ವಕವಾಗಿ ಜೀವಿಸುವುದನ್ನು ಅಭ್ಯಾಸ ಮಾಡಿ

ಪ್ರಜ್ಞಾಪೂರ್ವಕವಾಗಿ ಜೀವಿಸುವುದನ್ನು ಧ್ಯಾನ ಮತ್ತು ದೀರ್ಘ ಉಸಿರಾಟದಿಂದ ಸಾಧಿಸಬಹುದು. ಸಂಕಟಕಾಲದಲ್ಲಿ ಪ್ರಶಾಂತವಾಗಿರಲು ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಒಳಗಿನಿಂದಲೇ ಕಂಡುಕೊಳ್ಳಲು ಇದು ಸಹಾಯ ಮಾಡುತ್ತದೆ. ಪ್ರಜ್ಞಾಪೂರ್ವಕವಾಗಿ ಜೀವಿಸುವುದರಿಂದ ನಮ್ಮ ಭಾವನೆ, ಪರಿಸ್ಥಿತಿ ಮತ್ತು ಕ್ರಿಯೆಗಳ ಬಗ್ಗೆ ಸ್ಪಷ್ಟ ಅರಿವು ಮೂಡುತ್ತದೆ. ತಾಜಾ ಧೋರಣೆಯಿಂದ ದಿನವನ್ನು ಶುರುಮಾಡಬೇಕೆಂದು ನಿಮಗೆ ನೀವೇ ಹೇಳಿಕೊಳ್ಳುವುದರಿಂದ, ಅಲಾರ್ಮ್ ಇಲ್ಲದೆಯೇ ಎದ್ದು ಕೆಲಸ ಶುರುಮಾಡಿಬಿಡಬಹುದು.

ಪ್ರಕೃತಿಯಲ್ಲಿ ಕೊಂಚ ಸಮಯ ಕಳೆಯಿರಿ

ನಾವು ಮಾಡುವುದೆಲ್ಲ ಪ್ರಕೃತಿಯಿಂದಲೇ ಹೊಮ್ಮುತ್ತವೆ. ಆದ್ದರಿಂದ, ನೀವು ಪ್ರಕೃತಿಯ ಚಕ್ರದಲ್ಲಿ ನಂಬಿಕೆ ಇಡಲೇಬೇಕು. ಹಾಗೆ ನೀವು ಪ್ರಕೃತಿಯಲ್ಲಿ ನಂಬಿಕೆ ಇಟ್ಟಾಗ ಅದರೊಂದಿಗೆ ಸಂಪರ್ಕದ ಭಾವನೆ ಬರುತ್ತದೆ. ಎದ್ದಾಕ್ಷಣ ದಿನವನ್ನು ಪ್ರಾರಂಭಿಸಲು ನಿಮಗೆ ಪ್ರೇರಣೆ ಸಿಗುತ್ತದೆ. ಇದು ನಿಮ್ಮ ಅನುಭವಕ್ಕೆ ಇದುವರೆಗೂ ಬಾರದಿದ್ದಲ್ಲಿ, ನೀವು ಪ್ರತಿದಿನ ಕಡ್ಡಾಯವಾಗಿ ಕನಿಷ್ಠ ಅರ್ಧ ಗಂಟೆ ಪ್ರಕೃತಿಯ ನಡುವೆ ಕಳೆಯುತ್ತಾ, ಹಕ್ಕಿಗಳ ಹಾಡನ್ನು, ಹೂವುಗಳು ಅರಳುವುದನ್ನು, ಜೀರುಂಡೆ ಕೂಗುವುದನ್ನು ಕೇಳಿಸಿಕೊಳ್ಳಬೇಕು. ಹಾಗೆ ಪ್ರಕೃತಿಯ ಮಾಂತ್ರಿಕತೆಯನ್ನು ಅನುಭವಿಸಬೇಕು.

ನಿಮ್ಮ ಆಹಾರ ಪದ್ಧತಿ ಸರಿಯಾಗಿರಲಿ

ಆಹಾರ ಕಲಬೆರಕೆ ಎಲ್ಲೆಡೆ ಹೆಚ್ಚಾಗಿರುವ ಈಗಿನ ದಿನಮಾನಗಳಲ್ಲಿ, ನೀವು ನಿಮ್ಮ ಹೊಟ್ಟೆಗೆ ಏನೇನು ಹಾಕುತ್ತೀರಿ ಎಂಬುದನ್ನು ಸರಿಯಾಗಿ ಗಮನಿಸಲು ಮರೆಯದಿರಿ. ಆರೋಗ್ಯಕರವಲ್ಲದ ಆಹಾರ ಅಥವಾ ಜಂಕ್ ಫುಡ್ ತಿಂದರೆ ಹೊಟ್ಟೆಯ ಸಮಸ್ಯೆ ಬರಬಹುದು ಅಥವಾ ನೀವು ಸದಾ ಸೋಮಾರಿಯಾಗಿಬಿಡಬಹುದು. ಅಥವಾ ಹಗಲಿನಲ್ಲಿಯೇ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಆದರೆ, ತಾಜಾ ಹಣ್ಣು-ತರಕಾರಿಗಳು, ಮನೆಯಲ್ಲಿಯೇ ಮಾಡಿದ ಅಡುಗೆ- ಇವುಗಳಿಂದ ನಿಮಗೆ ಸಾಕಷ್ಟು ಪೌಷ್ಟಿಕಾಂಶಗಳು ದೊರೆತು ನಿಮ್ಮ ನಿದ್ದೆಯ ಗುಣಮಟ್ಟವೂ ಸುಧಾರಿಸುತ್ತದೆ. ಹೀಗೆ ನಿದ್ರಾ-ಸಾಮರ್ಥ್ಯ ಉತ್ತಮಗೊಂಡಾಗ ಅಲಾರ್ಮ್ ಇಲ್ಲದೇ ಎಚ್ಚರಗೊಳ್ಳುವ ಬಗ್ಗೆ ನೀವು ಚಿಂತಿಸುವ ಅಗತ್ಯವೇ ಇಲ್ಲ.

Clean Up Your Diet

ನಿಮ್ಮ ಬದುಕಿನ ಹೊಣೆಯನ್ನು ನೀವೇ ಹೊತ್ತುಕೊಳ್ಳಿ

ನಿಮ್ಮ ಬದುಕಿನ ಹೊಣೆಯನ್ನು ನೀವೇ ತೆಗೆದುಕೊಂಡಾಗ  ನಿಮ್ಮ ಜೀವನವನ್ನು ಉತ್ತಮವಾಗಿ ಜೀವಿಸಬೇಕೆಂದು ಉತ್ಸಾಹಗೊಳ್ಳುತ್ತೀರಿ. ನಿಮ್ಮನ್ನು ಬಿಟ್ಟರೆ ಬೇರೆ ಯಾರೂ ನಿಮಗೆ ನಿಮ್ಮಷ್ಟು ಪ್ರೇರಣೆ ನೀಡಲು ಸಾಧ್ಯವಿಲ್ಲ. ಹೀಗೆ ಶುರುಮಾಡಿಕೊಳ್ಳಿ. ಪುಸ್ತಕ ಓದಿ, ತಣ್ಣೀರು ಸ್ನಾನ ಮಾಡಿ, ಸಂಗೀತ ಆಲಿಸಿ, ಹಳೆ ಗೆಳೆಯನನ್ನು ಮಾತಾಡಿಸಿ, ನಿಮ್ಮ ದಿನವನ್ನು ನಿಮಗಿಷ್ಟ ಬಂದಂತೆ ಕಳೆಯಿರಿ. ಇಂಥ ಜೀವನೋತ್ಸಾಹದಲ್ಲಿ ನಿಮಗೆ ಎಚ್ಚರಗೊಳ್ಳಲು ಅಲಾರ್ಮ್ ಬೇಕಾಗುವುದಿಲ್ಲ.

ಜೀವನ ಎಂಬುದು ವಿಧಿಯಾಟ ಮತ್ತು ಸ್ವ-ಇಚ್ಛೆಗಳ ಸಂಗಮ. ಮಳೆ ಬರುವುದು ವಿಧಿಯಾಟ, ನೀವು ಒದ್ದೆಯಾಗಬೇಕೇ ಬೇಡವೇ ಎಂಬುದು ನಿಮ್ಮಿಚ್ಛೆ.

– ಗುರುದೇವ್ ಶ್ರೀ ಶ್ರೀ ರವಿಶಂಕರ್

ಮಲಗುವ ಮೊದಲು ಮಾಡಬೇಕಾದದ್ದು

ಮಲಗುವ ಮುನ್ನ ನಿಮ್ಮನ್ನು ನೀವು ಕೊಂಚ ಉಪಚರಿಸಿಕೊಂಡರೆ, ಬೆಳಿಗ್ಗೆ ಏಳುವಾಗ ಉತ್ಸಾಹದಲ್ಲಿರುತ್ತೀರಿ. ನಿಯಮಿತವಾದ ಒಂದು ಕಾರ್ಯಕ್ರಮ ಹಾಕಿಕೊಳ್ಳಿ. ಮಿತ ಆಹಾರ ಸೇವಿಸಿ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಧ್ಯಾನ ಮಾಡಿ ಅಥವಾ ಪುಸ್ತಕ ಓದಿ. ನಂತರದಲ್ಲಿ ದೀಪಗಳನ್ನು ಆರಿಸಿ ಗಾಢವಾಗಿ ನಿದ್ರಿಸಿರಿ. ಇಂಥ ಕಾರ್ಯಕ್ರಮಗಳನ್ನು ನಿಯಮಿತವಾಗಿ ಪಾಲಿಸಿದಾಗ ಅದೊಂದು ಅಭ್ಯಾಸವಾಗಿ ರೂಪುಗೊಳ್ಳುತ್ತದೆ ಮತ್ತು ಸಾಕಷ್ಟು  ವಿಶ್ರಾಂತಿ ಕೊಡುತ್ತದೆ. ಇದರಿಂದ ಬೆಳಿಗ್ಗೆ ಏಳುವಾಗ ಉಲ್ಲಾಸ ಮತ್ತು ಶಕ್ತಿಯಿಂದ ತುಂಬಿರುತ್ತೀರಿ.

ದೀಪಗಳನ್ನು ಸರಿಹೊಂದಿಸಿ

ಮಲಗುವಾಗ ದೀಪಗಳನ್ನು ಮಂದವಾಗಿಡುವುದು ಆಡೆತಡೆಯಿಲ್ಲದ ನಿದ್ದೆಗೆ ಸಹಾಯಕ. ಮಲಗುವ ಒಂದು ಗಂಟೆ ಮುಂಚೆಯೇ ಮೊಬೈಲ್ ಫೋನು ಮತ್ತು ಟ್ಯಾಬ್ಲೆಟ್ ಗಳ ಬಳಕೆಯನ್ನು ನಿಲ್ಲಿಸುವುದು ಅತ್ಯುತ್ತಮ ಅಭ್ಯಾಸ. ಈ ಉಪಕರಣಗಳಿಂದ ಹೊಮ್ಮುವ ವಿಕಿರಣ ನಿಮ್ಮ ನಿದ್ದೆಗೆ ತೊಂದರೆ ಕೊಡಬಹುದು. ಹಾಗೆಯೇ, ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ಬಳಸಬೇಡಿ. ನಿಮ್ಮ ಉತ್ಸಾಹವನ್ನು ಇವು ದಿನವಿಡೀ ಹಾಳು ಮಾಡಬಹುದು. ಕೆಲವೇ ನಿಮಿಷ ಎಂದು ನೀವು ಮೊಬೈಲ್ ನೋಡಲು ಶುರುಮಾಡಿದರೆ ನಿಮ್ಮ ಅರಿವಿಲ್ಲದಂತೆ ನೀವು ಗಂಟೆಗಟ್ಟಲೆ ಹಾಸಿಗೆಯಲ್ಲಿಯೇ ಇರಬೇಕಾಗಬಹುದು. ಎದ್ದಮೇಲೆ ನೀವು ಒಂದೆರಡು ಗಂಟೆಗಳು ಕ್ರಿಯಾಶೀಲವಾಗಿದ್ದರೆ, ದಿನವಿಡೀ ಉತ್ಸಾಹಿಗಳಾಗಿರುತ್ತೀರಿ. ಅಲಾರ್ಮ್ ಇಲ್ಲದೇ ಎಚ್ಚರಗೊಳ್ಳಲು ಕೊಂಚ ಅಭ್ಯಾಸ ಬೇಕು.

ನಿಮ್ಮ ಮೌಲ್ಯಮಾಪನ ಮಾಡಿಕೊಳ್ಳಿ

ಆಡಂಬರ ಮತ್ತು ಅವಲಂಬನೆಗಳ ಈಗಿನ ಪ್ರಪಂಚದಲ್ಲಿ ಸುತ್ತಲಿನ ಅಂಶಗಳಿಗೆ ಗಮನಕೊಡದೆ ಪ್ರಕೃತಿಯ ಲಯವನ್ನು ಅನುಸರಿಸಿ ಬದುಕುವುದು ಅಷ್ಟು ಸುಲಭವಲ್ಲ. ನಿಮ್ಮನ್ನು ನೀವು ಮೌಲ್ಯಮಾಪನ ಮಾಡಿಕೊಳ್ಳುವುದೇ ಇಲ್ಲಿನ ಕೀಲಿಕೈ. ಇದು ಪ್ರತಿ ಕ್ಷಣವೂ ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಸಹಾಯಕ. ಅಲಾರ್ಮ್ ಇಲ್ಲದೆಯೇ ಎಚ್ಛೆತ್ತುಕೊಳ್ಳುವುದು ಹೇಗೆ ಎಂಬುದು ಇಲ್ಲಿನ ಪ್ರಶ್ನೆಯಲ್ಲ. ಮುಖ್ಯ ಕಾಳಜಿ ಏನೆಂದರೆ ಏನನ್ನಾದರೂ ಹೊರ ಪ್ರಪಂಚದ ನಿರ್ದೇಶನ ಇಲ್ಲದೇ ಸಹಜವಾಗಿ ಮಾಡುವುದು ಹೇಗೆ ಎಂಬುದು.  ಕೊನೆಗೂ ಶಕ್ತಿ ಯಾರಲ್ಲಿ ಇರಬೇಕೆನ್ನುವುದನ್ನು ನಿರ್ಧರಿಸಬೇಕಾದವರು ನೀವೇ. ನೀವು ಏನನ್ನು ಆಯ್ಕೆ ಮಾಡುತ್ತೀರೋ ಅದು ನಿಮ್ಮ ಜೀವನ ಹೇಗೆ ಇರಬೇಕೆಂಬುದನ್ನು ನಿರ್ಧರಿಸುತ್ತದೆ.

    Hold On!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity

    *
    *
    *
    *