ಧ್ಯಾನ

ಧ್ಯಾನವು ನಿಮ್ಮಲ್ಲಿ ಆಳವಾದ ವಿಶ್ರಾಂತಿಯನ್ನು ಉಂಟುಮಾಡುತ್ತದೆ

ಧ್ಯಾನವೆಂದರೆ ಏನು?

ಅರಿವು ಮತ್ತು ಜಾಗೃತಿಯಿಂದ ಕೂಡಿದ ಆಳವಾದ ವಿಶ್ರಾಂತಿಯನ್ನು ಹೊಂದಲು ಇರುವ ಮಾರ್ಗವೇ ಧ್ಯಾನ. ಮನಸ್ಸನ್ನು ಶಾಂತಗೊಳಿಸಿ ಆಂತರಿಕ ಆನಂದವನ್ನು ಅನುಭವಿಸುವಂತೆ ಮಾಡುವ ಜಾಣ್ಮೆಯೇ ಧ್ಯಾನ. ಎಲ್ಲ ಪ್ರಯತ್ನಗಳನ್ನು ಬದಿಗಿರಿಸಿ, ಏನನ್ನೂ ಮಾಡದೆ, ನಿಮ್ಮದೇ ಸಹಜ ಸ್ವಭಾವವಾಗಿರುವ ನಿಜವಾದ ಪ್ರೇಮ, ಆನಂದ ಮತ್ತು ಶಾಂತಿಯಲ್ಲಿ ವಿಶ್ರಾಂತಿಯನ್ನು ಪಡೆಯುವ ಸೂಕ್ಷ್ಮ ಕಲೆಯೇ ಧ್ಯಾನವಾಗಿದೆ . ಧ್ಯಾನದ ಅಭ್ಯಾಸವು ಆಳವಾದ ವಿಶ್ರಾಂತಿಯನ್ನು ನೀಡುತ್ತದೆ.ಒತ್ತಡವನ್ನು ಕಡಿಮೆಗೊಳಿಸಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಧ್ಯಾನವು ಅತ್ಯವಶ್ಯಕವಾಗಿದೆ.

ಶಬ್ದದಿಂದ ನಿಶಬ್ದದೆಡೆಗೆ, ಚಲನೆಯಡೆಯಿಂದ ಸ್ಥಿರತೆಯ ಕಡೆಗೆ ನಾವು ಮಾಡುವ ಪಯಣವೇ ಧ್ಯಾನವಾಗಿದೆ.

- ಶ್ರೀ ಶ್ರೀ ರವಿಶಂಕರರು

ಧ್ಯಾನದಿಂದ ಉಂಟಾಗುವ ಪ್ರಯೋಜನಗಳು

ಧ್ಯಾನ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಶಾಂತವಾದ ಮನಸ್ಸು, ಏಕೀಕೃತ ಗಮನ, ಉತ್ತಮವಾದ ಏಕಾಗ್ರತೆ, ಮಾನಸಿಕ ಸ್ಪಷ್ಟತೆ, ಭಾವನೆಗಳಲ್ಲಿ ಸಮತೋಲನ, ಸುಧಾರಿತ ಸಂವಹನ, ಹೊಸ ಹೊಸ ಕುಶಲತೆಯಿಂದ ಕೂಡಿದ ಪ್ರತಿಭೆ, ವಿಶ್ರಾಂತಿ ಹಾಗೂ ಚೈತನ್ಯ - ಇವೆಲ್ಲದರ ಜೊತೆಗೆ ಅದೃಷ್ಟವನ್ನೇ ಆಕರ್ಷಿಸುವ ಸಾಮರ್ಥ್ಯ ಧ್ಯಾನದಿಂದ ನಿಮ್ಮದಾಗಲಿದೆ.

icon

ಹೆಚ್ಚಾದ ಜೈವಿಕ ಶಕ್ತಿ

ಧ್ಯಾನವು ಹೆಚ್ಚು ಸಕಾರಾತ್ಮಕವಾದ ಮತ್ತು ಸಮತೋಲಿತವಾದ ಶಕ್ತಿಯ ತರಂಗಗಳನ್ನು ನಮ್ಮಲ್ಲಿ ಹಾಗೂ ಸುತ್ತಲಿನ ವಾತಾವರಣದಲ್ಲಿ ಉಂಟುಮಾಡುತ್ತದೆ.

icon

ಉತ್ತಮ ಆರೋಗ್ಯ

ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು - ಹೀಗೆ ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಧ್ಯಾನವು ಸಹಕಾರಿಯಾಗಿದೆ.

icon

ಮಾನಸಿಕ ಔನ್ನತ್ಯ

ಉತ್ತಮವಾದ, ಸಮಾಧಾನದಿಂದ ಕೂಡಿದ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಧ್ಯಾನವು ಸಹಾಯ ಮಾಡುತ್ತದೆ. ಹಲವಾರು ಮಾನಸಿಕ ಮತ್ತು ದೈಹಿಕ ಖಾಯಿಲೆಗಳು ಬಾರದಂತೆ ತಡೆಯುವಲ್ಲಿಯೂ ಸಹ ಧ್ಯಾನವು ಸಹಕಾರಿಯಾಗಿದೆ.

ಧ್ಯಾನವನ್ನು ಹೊಸದಾಗಿ ಕಲಿಯುವವರಿಗೆ

ಧ್ಯಾನವು ನಮ್ಮ ಉಸಿರಾಟದಷ್ಟೇ ಸುಲಭ. ಅದಕ್ಕಾಗಿ ಪರ್ವತ ಬೆಟ್ಟಗಳನ್ನು ಹುಡುಕಿಕೊಂಡು ಹೋಗಿ ಏಕಾಂತವಾಗಿ ಕುಳಿತು ಕಷ್ಟಪಡುವ ಅವಶ್ಯಕತೆ ಇಲ್ಲ. ಇದೊಂದು ಉತ್ತಮವಾದ ಪ್ರೇರೇಪಕವಾದ ಅಭ್ಯಾಸವಾಗಿದ್ದು, ನಿಮ್ಮ ನಿತ್ಯ ಜೀವನದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಲಭ್ಯವಿರುವ ಹಲವಾರು ವಿಧದ ಧ್ಯಾನ ಮಾರ್ಗಗಳಲ್ಲಿ, ನೀವು ಯಾವುದನ್ನಾದರೂ ಆಯ್ದುಕೊಂಡು ಅಭ್ಯಾಸ ಮಾಡಬಹುದು. ಅವೆಲ್ಲವೂ ನೀವು ವರ್ತಮಾನದಲ್ಲಿ, ಅಪ್ರಯತ್ನವಾಗಿ ಸ್ಥಿತರಾಗುವಂತೆ ಮಾಡಲು ಸಹಾಯಕವಾಗಿವೆ.

ಹಲವು ಅಭ್ಯಾಸಿಗರು ಅವರ ಪ್ರಥಮ ಪ್ರಯತ್ನದಲ್ಲಿಯೇ ಎಂತಹ ಅದ್ಭುತ ಅನುಭವವನ್ನು ಪಡೆದಿದ್ದಾರೆ ಎಂದರೆ, ಅದನ್ನು ಪದಗಳಲ್ಲಿ ವಿವರಿಸುವುದು ಕಷ್ಟಸಾಧ್ಯ. ದಿನದಲ್ಲಿ ಎರಡು ಬಾರಿ, ಕಡೆಯ ಪಕ್ಷ ಒಂದು ಬಾರಿಯಾದರೂ ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಾ ಸಾಗಿದರೆ, ನಿಮ್ಮ ಅಂತರಂಗ ಹಾಗೂ ಬಹಿರಂಗದಲ್ಲಿ ಉಂಟಾಗುವ ಬದಲಾವಣೆಯನ್ನು ಹಾಗೂ ನಿಮ್ಮಲ್ಲಿ ಅಭಿವ್ಯಕ್ತವಾಗುವ ಸುಂದರವಾದ ಆಂತರಿಕ ಶಕ್ತಿಯನ್ನು ನೀವಷ್ಟೇ ಅಲ್ಲದೆ ನಿಮ್ಮ ಸುತ್ತಮುತ್ತಲಿನ ಜನರು ಸಹ ಗುರುತಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಪ್ರತಿನಿತ್ಯವೂ, ಕೆಲವು ನಿಮಿಷಗಳ ಕಾಲವಾದರೂ ಧ್ಯಾನವನ್ನು ಮಾಡಲೇಬೇಕು. ಇದರಿಂದ ಜೀವನವು ಒತ್ತಡಮುಕ್ತವಾಗಿ ಆನಂದದಿಂದ ಕೂಡಿರುತ್ತದೆ.

ನನಗೆ ಧ್ಯಾನ ಮಾಡಲು ಇಷ್ಟ ಆದರೆ...

ನನ್ನ ಮನಸ್ಸು ಎಲ್ಲ ಕಡೆಯೂ ಚಲಿಸುತ್ತಿರುತ್ತದೆ; ಹೀಗಿರುವಾಗ ಧ್ಯಾನವನ್ನು ಹೇಗೆ ಮಾಡುವುದು?

ಗುರುದೇವ ಶ್ರೀ ಶ್ರೀ ರವಿಶಂಕರರು : ನಿಮ್ಮ ಮನಸ್ಸು ಎಲ್ಲೇ ಹೋಗಲಿ ಅದನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಹೋಗಿರಿ. ಅದರ ಹಿಂದೆಯೇ ಹೋಗಿರಿ. ಅಟ್ಟಿಸಿಕೊಂಡು ಹೋಗಿರಿ. ಹೀಗೆ ಮಾಡುತ್ತಾ ಮಾಡುತ್ತಾ ನಿಮ್ಮ ಮನಸ್ಸು ಸಾಕಾಗಿ ನಿಮ್ಮ ಕಾಲ ಕೆಳಗೆ ಬಂದು ಬೀಳುವುದನ್ನು ನೀವೇ ಕಾಣುತ್ತೀರಿ. ಪತಂಜಲಿ ಮಹರ್ಷಿಗಳು, ಪ್ರತಿಯೊಂದನ್ನು ಕುರಿತು ಧ್ಯಾನಿಸಲು ಹೇಳುತ್ತಾರೆ, ಮೂಲ ವಸ್ತುಗಳು/ಧಾತುಗಳನ್ನು ಕುರಿತು ಹಾಗೂ ರಾಗ ದ್ವೇಷಗಳಿಲ್ಲದ ಋಷಿಗಳನ್ನು ಕುರಿತು ಧ್ಯಾನಿಸಲು ಹೇಳುತ್ತಾರೆ. ರಾಗ ದ್ವೇಷ ರಹಿತರಾದ ಋಷಿ ಮುನಿಗಳನ್ನು ಕುರಿತು ಧ್ಯಾನಿಸಿದಾಗ ನಿಮಗೆ ಧ್ಯಾನವು ಸುಲಭವಾಗುತ್ತದೆ. ಸತ್ಸಂಗದಲ್ಲಿ ಪೂರ್ಣ ಮನಸ್ಕರಾಗಿ ಕುಳಿತಾಗಲೂ ಸಹ ಧ್ಯಾನವು ಸಾಧ್ಯವಾಗುತ್ತದೆ. ಸತ್ಸಂಗದಲ್ಲಿ ಪ್ರತಿಶತ ಮನಸ್ಸನ್ನು ಇಡದೆ, ಸುಮ್ಮನೆ ಅಲ್ಲಿ ಇಲ್ಲಿ ನೋಡುತ್ತಾ ಕಾಲ ಕಳೆದರೆ ಇದು ಸಾಧ್ಯವಾಗುವುದಿಲ್ಲ. ನಿಮಗೆ ನೀವೇ ಆಸಕ್ತಿಯನ್ನು ಉಂಟು ಮಾಡಿಕೊಳ್ಳಬೇಕು. ನಿಮಗೆ ನೀವೇ ಸತ್ಸಂಗದಲ್ಲಿ ರುಚಿಯನ್ನು ಉಂಟು ಮಾಡಿಕೊಳ್ಳಬೇಕು. ಅದಾಗಲೇ ನಿಮ್ಮಲ್ಲಿದೆ; ಈ ರಸಾನುಭವವನ್ನು ಉಂಟು ಮಾಡುತ್ತಿರುವ ದೈವೀ ತತ್ತ್ವವನ್ನು ನೀವೀಗ ಕಾಣಬೇಕಾಗಿದೆ. ನೀವೇನೂ ಮಾಡಬೇಕಿಲ್ಲವೆಂದು ನಾವು ಹೇಳುತ್ತೇವೆ. ಏಕೆಂದರೆ ಅದಾಗಲೇ ನಿಮ್ಮಲ್ಲಿ ಜ್ವಲಂತವಾಗಿದೆ. ನೀವೇನೂ ಅದಕ್ಕೆ ಮತ್ತೆ ಕಿಚ್ಚು ಹತ್ತಿಸಿ ಉರಿಸಬೇಕಾಗಿಲ್ಲ. ಗಂಗಾ ನದಿಯಲ್ಲಿ ಮುಳುಗೇಳುವವರಿಗೆ, ನಲ್ಲಿ ಅಥವಾ ಕೊಳಗದ ನೀರಿನ ಅವಶ್ಯಕತೆ ಏನಿದೆ? ಎಲ್ಲ ಪ್ರಯತ್ನಗಳನ್ನು ತ್ಯಜಿಸಿಬಿಡಿ. ನಾನೇನೂ ಅಲ್ಲ, ನನಗೇನೂ ಬೇಕಿಲ್ಲ ಎಂದಷ್ಟೇ ತಿಳಿಯಿರಿ ಮತ್ತು ಇದರ ಬಗ್ಗೆ ನಿರಂತರವಾಗಿ ಚಿಂತಿಸುತ್ತಾ ಕೂರಬೇಡಿ. ಇದೂ ಕೂಡ ಮಾಯೆಯೇ. ಅದಕ್ಕಾಗಿಯೇ ಆದಿಶಂಕರಾಚಾರ್ಯರು ಹೀಗೆ ನುಡಿದಿದ್ದಾರೆ - "ನಾನೇನೂ ಅಲ್ಲ ಶೂನ್ಯ ಎಂದು ಚಿಂತಿಸುವುದು ಕೂಡ ಮೂರ್ಖತನವೇ!"

ಆಲೋಚನೆಗಳು ಏಕೆ ಬರುತ್ತಿವೆ? ಮತ್ತು ಆಲೋಚನೆಗಳು ಎಲ್ಲಿ ಹುಟ್ಟುತ್ತವೆ? ಈ ಆಲೋಚನೆಗಳೇ ಏಕೆ ನಮ್ಮನ್ನು ಆಳುತ್ತವೆ?

ಗುರುದೇವ ಶ್ರೀ ಶ್ರೀ ರವಿಶಂಕರರು : ಆಲೋಚನೆಗಳು ಎಲ್ಲಿಂದ ಬರುತ್ತವೆ? ದೇಹದಿಂದಲೋ ಅಥವಾ ಮನಸ್ಸಿನಿಂದಲೋ? ಕಣ್ಣುಗಳನ್ನು ಮುಚ್ಚಿ ಇದರ ಬಗ್ಗೆಯೇ ಆಲೋಚಿಸಿರಿ. ಅದೇ ಒಂದು ವಿಧದ ಧ್ಯಾನವಾಗಿ ಬಿಡುತ್ತದೆ. ನೀವು ಆಗ ನಿಮ್ಮಲ್ಲಿನ ಈ ಆಲೋಚನೆಗಳೆಲ್ಲ ಹುಟ್ಟು ಪಡೆಯುತ್ತಿರುವ ಆ ಸ್ಥರ ಅಥವಾ ಜಾಗವನ್ನೇ ತಲುಪುವಿರಿ. ಇದು ನಿಜಕ್ಕೂ ಅದ್ಭುತ!

ಧ್ಯಾನದಲ್ಲಿ ಉಂಟಾಗುವ ಅನುಭವವನ್ನು ಉತ್ತಮಗೊಳಿಸಿಕೊಳ್ಳುವುದು ಹೇಗೆ?

ಗುರುದೇವ ಶ್ರೀ ಶ್ರೀ ರವಿಶಂಕರರು : ಧ್ಯಾನದಲ್ಲಿ ಒಳ್ಳೆಯ ಅನುಭವ ಸಿಗುತ್ತಿಲ್ಲವೆಂದಾದರೆ, ನಿಮ್ಮನ್ನೇ ನೀವು ಹೆಚ್ಚಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಿರಿ. ಇದರ ಫಲಿತವಾಗಿ ನಿಮ್ಮ ಧ್ಯಾನವು ಆಳವಾಗುತ್ತಾ ಸಾಗುತ್ತದೆ. ಯಾರಿಗಾದರೂ ನಿಮ್ಮ ಸೇವೆಯಿಂದ ಕೊಂಚ ಸಮಾಧಾನ, ಸ್ವಾತಂತ್ರ್ಯ ಸಿಗುವಂತಾದರೆ ಅವರ ಆಶೀರ್ವಾದ ಮತ್ತು ಉತ್ತಮವಾದ ತರಂಗಗಳು ನಿಮ್ಮೆಡೆಗೆ ಹರಿದು ಬರುತ್ತವೆ. ಸೇವೆಯಿಂದ ಪಾತ್ರತೆ, ಈ ಪಾತ್ರತೆಯ ಫಲಿತದಿಂದಾಗಿ ಆಳವಾದ ಧ್ಯಾನ, ಈ ಧ್ಯಾನದಿಂದಾಗಿ ನಿಮ್ಮಲ್ಲಿ ಮುಗುಳ್ನಗೆ ಹೀಗೆ ಸಾಗಿ, ಧ್ಯಾನದ ಉತ್ತಮ ಪ್ರಭಾವವನ್ನು ಅನುಭವಿಸಲು ನಿಮಗೆ ಸಾಧ್ಯವಾಗುತ್ತದೆ.

ಧ್ಯಾನಕ್ಕೂ ನಿದ್ರೆಗೂ ನಡುವೆ ಇರುವ ವ್ಯತ್ಯಾಸವೇನು?

ಗುರುದೇವ ಶ್ರೀ ಶ್ರೀ ರವಿಶಂಕರರು : ಒಂದು ನೇರವಾಗಿದೆ. ಮತ್ತೊಂದು ಅಡ್ಡವಾಗಿದೆ - ಇಷ್ಟೇ ಎಂದು ತಿಳಿಯಿರಿ. ಆದರೆ ನಾಳೆ ಧ್ಯಾನಕ್ಕೆ ಕುಳಿತಾಗ ಇದರ ಬಗ್ಗೆಯೂ ಆಲೋಚಿಸಬೇಡಿರಿ. ಏಕೆಂದರೆ ನಿಮಗೆ ಆಗ ನಿದ್ರಿಸಲೂ ಆಗುವುದಿಲ್ಲ, ಧ್ಯಾನಿಸಲೂ ಆಗುವುದಿಲ್ಲ. ಈಗ ಇಲ್ಲಿರುವುದೇ ಸರಿಯಾದ ಸಮಯ ಅಷ್ಟೇ.

ಧ್ಯಾನಕ್ಕೆ ಕುಳಿತಾಗ ಹಳೆಯ ನೆನಪುಗಳೇಕೆ ನನ್ನನ್ನು ಕಾಡುತ್ತವೆ?

ಗುರುದೇವ ಶ್ರೀ ಶ್ರೀ ರವಿಶಂಕರರು : ಏನು ಪರವಾಗಿಲ್ಲ ನಿರಾಶರಾಗಬೇಡಿರಿ. ಹಳೆಯ ನೆನಪುಗಳು ಬಂದರೆ ಬರಲಿ. ನಿಮಗೆ ನೀವೇ ಹೇಳಿಕೊಳ್ಳಿರಿ - ಬಾ ಹಳೆಯ ನೆನಪೇ ನನ್ನೊಂದಿಗೆ ಕುಳಿತುಕೋ. ಐದು ವರ್ಷದ ಹಳೆಯ ನೆನಪು, ಹತ್ತು ವರ್ಷದ ಹಳೆಯ ನೆನಪು. ಇಪ್ಪತ್ತು ವರ್ಷದ ಹಳೆಯ ನೆನಪು ಎಲ್ಲರೂ ಬನ್ನಿ, ನನ್ನೊಡನೆ ಕುಳಿತುಕೊಳ್ಳಿರಿ. ಅವುಗಳಿಂದ ದೂರ ಓಡಲು ಪ್ರಯತ್ನಿಸಿದಷ್ಟೂ ಅವು ನಿಮ್ಮನ್ನು ಕಾಡಿಸುತ್ತವೆ.

ನನಗೆ ಯೋಗ ಧ್ಯಾನ ಮಾಡಲು ಸಮಯವಿಲ್ಲ, ನಾನೇನು ಮಾಡಲಿ?

ಗುರುದೇವ ಶ್ರೀ ಶ್ರೀ ರವಿಶಂಕರರು : ಯೋಗ ಮತ್ತು ಧ್ಯಾನವು ನಿಮಗೆ ಸಮಯವನ್ನು ದೊರಕಿಸಿ ಕೊಡುತ್ತವೆ. ಇವುಗಳಿಗೆ ಸಮಯವಿಲ್ಲವೆಂದಾದರೆ, ನೀವು ಆಸ್ಪತ್ರೆ ಅಥವಾ ವೈದ್ಯರೆಡೆಗೆ ಹೋಗಬೇಕಾಗುತ್ತದೆ. ಕೆಲವು ದೈಹಿಕ ವ್ಯಾಯಾಮ, ಉಸಿರಾಟದ ಪ್ರಕ್ರಿಯೆಗಳು, ನಂತರ ಧ್ಯಾನ - ಈ ಮಾರ್ಗವು ಉತ್ತಮ.