ಧ್ಯಾನದ ಕುರಿತು ಸರ್ವೇಸಾಮಾನ್ಯವಾದ ತಪ್ಪು ಕಲ್ಪನೆಗಳು
1. ಧ್ಯಾನವೆಂದರೆ ಏಕಾಗ್ರತೆ
ಧ್ಯಾನವು ಏಕಾಗ್ರತೆಯಲ್ಲ, ವಿಕೇಂದ್ರೀಕರಣ. ಆದರೆ ಧ್ಯಾನದ ಒಂದು ಪ್ರಯೋಜನ ಏಕಾಗ್ರತೆ. ಏಕಾಗ್ರತೆಗೆ ಪ್ರಯತ್ನ ಬೇಕಾಗುತ್ತದೆ. ಆದರೆ, ಧ್ಯಾನವು ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ ನೀಡುವ ಕ್ರಿಯೆ. ಧ್ಯಾನವು ಎಲ್ಲವನ್ನೂ ಬಿಟ್ಟುಬಿಡುವ ಕ್ರಿಯೆ. ಧ್ಯಾನ ಮಾಡುತ್ತಿರುವಾಗ ನೀವು ಆಳವಾದ ವಿಶ್ರಾಂತಿಯ ಸ್ಥಿತಿಯಲ್ಲಿ ಇರುತ್ತೀರಿ. ಮನಸ್ಸು ನಿರಾಳವಾಗಿರುವಾಗ ನಾವು ಏಕಾಗ್ರತೆಯಿಂದ ಕೆಲಸ ಮಾಡಬಹುದು.
2. ಧ್ಯಾನವು ಒಂದು ಧಾರ್ಮಿಕ ಕ್ರಿಯೆ
ಯೋಗ ಮತ್ತು ಧ್ಯಾನಗಳು ಧರ್ಮಗಳನ್ನು ಮೀರಿದ ಅತ್ಯಂತ ಪುರಾತನ ಪ್ರಕ್ರಿಯೆಗಳು. ಯಾವುದೇ ಧರ್ಮದವರು ಧ್ಯಾನವನ್ನು ಮಾಡಬಹುದು. ಹಾಗೆ ನೋಡಿದರೆ ಧ್ಯಾನವು ಧರ್ಮಗಳನ್ನು ದೇಶಗಳನ್ನು ಮತ್ತು ಮತಗಳನ್ನು ಒಂದುಗೂಡಿಸಬಲ್ಲದು. ಸೂರ್ಯನು ಹೇಗೆ ಎಲ್ಲರಿಗೂ ಒಂದೇ ರೀತಿಯಲ್ಲಿ ಪ್ರಕಾಶವನ್ನು ಬೀರುತ್ತಾನೋ, ಗಾಳಿಯು ಎಲ್ಲರಿಗೂ ಬೀಸುತ್ತದೆಯೋ, ಅದೇ ರೀತಿ, ಧ್ಯಾನವು ಎಲ್ಲರಿಗೂ ಪ್ರಯೋಜನವನ್ನುಂಟುಮಾಡುತ್ತದೆ. “ನಾವು ಎಲ್ಲಾ ಹಿನ್ನೆಲೆಯ, ಧರ್ಮಗಳ ಮತ್ತು ಸಂಸ್ಕೃತಿಗಳ ಜನರು ಧ್ಯಾನದ ಉತ್ಸವದಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹ ನೀಡುತ್ತೇವೆ” ಎಂದು ಗುರುದೇವ ಶ್ರೀ ಶ್ರೀ ರವಿ ಶಂಕರ್ ಹೇಳುತ್ತಾರೆ.
3. ಧ್ಯಾನ ಮಾಡಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು
ಮನಸ್ಸಿನ ಸ್ವಭಾವವನ್ನು ವಿವರವಾಗಿ ತಿಳಿಸುವ ವೈಜ್ಞಾನಿಕ ಅಧ್ಯಯನವೇ ಪತಂಜಲಿ ಯೋಗಸೂತ್ರ. ಮಹರ್ಷಿ ಪತಂಜಲಿಯವರು “ಸ್ಥಿರಂ ಸುಖಂ ಆಸನಂ” ಎಂದು ತಮ್ಮ ಯೋಗಸೂತ್ರದಲ್ಲಿ ಹೇಳಿದ್ದಾರೆ. ಧ್ಯಾನ ಮಾಡುವಾಗ ಸ್ಥಿರವಾಗಿರುವುದು ಮತ್ತು ಆರಾಮವಾಗಿರುವುದು ಮುಖ್ಯ. ಇದು ನಮಗೆ ಆಳವಾದ ಅನುಭವವನ್ನು ಪಡೆಯಲು ಸಹಾಯಮಾಡುತ್ತದೆ. ನೀವು ಸೋಫಾದ ಮೇಲೋ ಕುರ್ಚಿಯ ಮೇಲೋ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡರೂ ಪರವಾಗಿಲ್ಲ. ಆದರೆ, ಧ್ಯಾನವನ್ನು ಪ್ರಾರಂಭಿಸುವಾಗ ನಿಮ್ಮ ಬೆನ್ನು ಮೂಳೆಯನ್ನು ನೇರವಾಗಿರಿಸಿಕೊಳ್ಳಿ, ತಲೆ ಕುತ್ತಿಗೆ ಮತ್ತು ಭುಜಗಳನ್ನು ಸಡಿಲ ಬಿಡಿ.
4. ಧ್ಯಾನವು ವಯಸ್ಸಾದವರಿಗೆ
ಧ್ಯಾನವು ಸಾರ್ವತ್ರಿಕವಾಗಿದ್ದು ಅದು ಎಲ್ಲ ವಯೋಮಾನದ ಜನರ ಜೀವನಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ. ಎಂಟು ಒಂಬತ್ತು ವರ್ಷಗಳ ಎಳೆಯ ಹುಡುಗರೂ ಧ್ಯಾನ ಮಾಡಬಹುದು. ಸ್ನಾನವು ದೇಹವನ್ನು ಶುಚಿಯಾಗಿರಿಸುವಂತೆ ಧ್ಯಾನವು ಮನಸ್ಸನ್ನು ನಿಚ್ಚಳ ಹಾಗೂ ಒತ್ತಡಮುಕ್ತವಾಗಿರಿಸುತ್ತದೆ
5. ಧ್ಯಾನವು ಸಂಮೋಹನದಂತೆ
ಧ್ಯಾನವು ಸಂಮೋಹನದ ಪ್ರಭಾವಕ್ಕೆ ಮದ್ದು. ಸಂಮೋಹನದಲ್ಲಿ ತಮಗೆ ಏನಾಗುತ್ತಿದೆ ಎಂದು ವ್ಯಕ್ತಿಗೆ ತಿಳಿದಿರುವುದಿಲ್ಲ. ಆದರೆ, ಧ್ಯಾನವು ಪ್ರತಿಕ್ಷಣವೂ ಅರಿವನ್ನು ಹೊಂದಿರುವ ಪ್ರಕ್ರಿಯೆ. ಸಂಮೋಹನವು ಮನಸ್ಸಿನಲ್ಲಿ ಈಗಾಗಲೇ ಇರುವ ಪ್ರಭಾವಗಳನ್ನು ಬಳಸಿಕೊಳ್ಳುತ್ತದೆ; ಧ್ಯಾನವು ವ್ಯಕ್ತಿಗೆ ಅಂತಹ ಪ್ರಭಾವಗಳಿಂದ ಮುಕ್ತಿ ನೀಡುತ್ತದೆ. ಅದು ನಮ್ಮ ಪ್ರಜ್ಞೆಯನ್ನು ನೂತನ ಹಾಗೂ ನಿಚ್ಚಳವಾಗಿರಿಸುತ್ತದೆ. ಸಂಮೋಹನವು ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಧ್ಯಾನವು ಅದನ್ನು ನಿಧಾನಿಸುತ್ತದೆ.
ನೀವು ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಯಾರಿಗೂ ನಿಮ್ಮನ್ನು ಸಂಮೋಹನದ ಮೂಲಕ ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ
– ಗುರುದೇವ ಶ್ರೀ ಶ್ರೀ ರವಿ ಶಂಕರ್
6. ಯೋಚನೆಗಳನ್ನು ನಿಯಂತ್ರಿಸುವುದು ಧ್ಯಾನ
ಯೋಚನೆಗಳು ನಮ್ಮನ್ನು ಕೇಳಿ ಮನಸ್ಸಿನಲ್ಲಿ ಹುಟ್ಟುವುದಿಲ್ಲ. ಅವು ಬಂದಮೇಲೆಯೇ ನಮಗೆ ತಿಳಿಯುತ್ತದೆ. ಯೋಚನೆಗಳು ಆಕಾಶದಲ್ಲಿರುವ ಮೋಡಗಳಂತೆ; ಅವು ಅನಿಯಂತ್ರಿತವಾಗಿ ಬರುತ್ತವೆ, ಹೋಗುತ್ತವೆ. ಯೋಚನೆಗಳನ್ನು ನಿಯಂತ್ರಿಸಲು ಪ್ರಯತ್ನ ಬೇಕಾಗುತ್ತದೆ. ಆದರೆ ಮನಸ್ಸಿನ ನಿರಾಳತೆಗೆ ಅಪ್ರಯತ್ನ ಮುಖ್ಯ. ಧ್ಯಾನ ಮಾಡುವಾಗ ಒಳ್ಳೆಯ ಯೋಚನೆಗಳು ಬರಲಿ ಎಂದು ನೀವು ಬಯಸುವುದಿಲ್ಲ, ಅಥವಾ ಕೆಟ್ಟ ಯೋಚನೆಗಳು ಬರದಿರಲಿ ಎಂದೂ ಆಶಿಸುವುದಿಲ್ಲ. ನೀವು ಕೇವಲ ಸಾಕ್ಷಿಯಾಗಿದ್ದು ಯೋಚನೆಗಳನ್ನು ಹಿಂದಿಕ್ಕಿ ನಿಮ್ಮ ಅಂತರಂಗದ ಆಳದಲ್ಲಿರುವ ಮೌನದ ವಲಯವನ್ನು ಪ್ರವೇಶಿಸುತ್ತೀರಿ.
7. ಸಮಸ್ಯೆಗಳಿಂದ ಓಡಿ ಹೋಗುವ ಮಾರ್ಗ ಧ್ಯಾನ
ಅದಕ್ಕೆ ವಿರುದ್ಧವಾಗಿ, ಧ್ಯಾನವು ಸಮಸ್ಯೆಗಳನ್ನು ನಗುತ್ತಲೇ ಎದುರಿಸುವ ಬಲವನ್ನು ನಿಮಗೆ ನೀಡುತ್ತದೆ. ಧ್ಯಾನದ ಮೂಲಕ ಸನ್ನಿವೇಶಗಳನ್ನು ಸಂತೋಷದಿಂದ ರಚನಾತ್ಮಕ ರೀತಿಯಲ್ಲಿ ನಿಭಾಯಿಸುವ ಕೌಶಲ್ಯವು ನಿಮ್ಮಲ್ಲಿ ಹುಟ್ಟುತ್ತದೆ. ಸನ್ನಿವೇಶಗಳನ್ನು ಇರುವ ಹಾಗೆಯೇ ಸ್ವೀಕರಿಸುವ ಮತ್ತು ಪ್ರಜ್ಞಾಪೂರ್ವಕವಾಗಿ ಕ್ರಮ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀವು ಬೆಳೆಸಿಕೊಳ್ಳುತ್ತೀರಿ. ನೀವು ಭೂತಕಾಲದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಥವಾ ಭವಿಷ್ಯದ ಬಗ್ಗೆ ಚಿಂತಿಸುವುದಿಲ್ಲ. ಧ್ಯಾನವು ಆಂತರಿಕ ಶಕ್ತಿ ಮತ್ತು ಆತ್ಮಗೌರವವನ್ನು ಪೋಷಿಸುತ್ತದೆ. ಜೀವನದಲ್ಲಿ ಯಾವುದೇ ಸವಾಲುಗಳು ಎದುರಾದರೂ, ಧ್ಯಾನದ ನಿಯಮಿತ ಅಭ್ಯಾಸವು ಅವುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಮುನ್ನಡೆಯಲು ನಿಮಗೆ ಸಹಾಯ ಮಾಡುತ್ತದೆ.
8. ಆನಂದದ ಅನುಭೂತಿಗೆ ನೀವು ಗಂಟೆಗಳ ಕಾಲ ಧ್ಯಾನ ಮಾಡಬೇಕು
ಆಳವಾದ ಅನುಭವವನ್ನು ಪಡೆಯಲು ನೀವು ಗಂಟೆಗಳ ಕಾಲ ಕುಳಿತು ಧ್ಯಾನ ಮಾಡಬೇಕಾಗಿಲ್ಲ. ನಿಮ್ಮ ಅಂತರಂಗದ ಸಂಪರ್ಕವು ಕ್ಷಣಾರ್ಧದಲ್ಲಿ ಉಂಟಾಗಬಹುದು. ದಿನಕ್ಕೆ ಎರಡು ಬಾರಿ 20 ನಿಮಿಷಗಳ ಸಹಜ ಸಮಾಧಿ ಧ್ಯಾನವು ನಿಮ್ಮ ಅಂತರಂಗದ ಪ್ರಯಾಣಕ್ಕೆ ಸಾಕು. ನೀವು ಪ್ರತಿದಿನ ಧ್ಯಾನ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಧ್ಯಾನದ ಗುಣಮಟ್ಟವು ಸುಧಾರಿಸುತ್ತದೆ. ನೀವು ಧ್ಯಾನದ ಪ್ರಯೋಜನಗಳನ್ನು ಸಹ ಅನುಭವಿಸಲು ಪ್ರಾರಂಭಿಸುತ್ತೀರಿ.
9. ಧ್ಯಾನ ಮಾಡುವುದರಿಂದ ನೀವು ಸಂನ್ಯಾಸಿಗಳಾಗುತ್ತೀರಿ
ಧ್ಯಾನ ಮಾಡಲು ಅಥವಾ ಆಧ್ಯಾತ್ಮಿಕ ಮಾರ್ಗದಲ್ಲಿ ಪ್ರಗತಿ ಸಾಧಿಸಲು ನೀವು ಭೌತಿಕ ಜೀವನವನ್ನು ತ್ಯಜಿಸಬೇಕಾಗಿಲ್ಲ. ವಾಸ್ತವವಾಗಿ, ಧ್ಯಾನ ಮಾಡುವುದರಿಂದ ನಿಮ್ಮ ಆನಂದದ ಗುಣಮಟ್ಟವು ಸುಧಾರಿಸುತ್ತದೆ. ನಿರಾಳ ಮತ್ತು ಪ್ರಶಾಂತ ಮನಸ್ಸಿನಿಂದ ನೀವು ಸಂತೋಷವಾಗಿರಬಹುದು ಮತ್ತು ಇತರರನ್ನೂ ಸಂತೋಷಪಡಿಸಬಹುದು.
10. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ದಿಕ್ಕಿಗೆ ಮುಖ ಮಾಡಿ ಕುಳಿತು ಧ್ಯಾನ ಮಾಡಿದರೆ ಮಾತ್ರ ಪ್ರಯೋಜನ ದೊರೆಯುತ್ತದೆ
ಯಾವುದೇ ಸಮಯ ಹಾಗೂ ದಿಕ್ಕು ಧ್ಯಾನಕ್ಕೆ ಉತ್ತಮವಾಗಿರುತ್ತದೆ. ಆದರೆ ಹೊಟ್ಟೆ ತುಂಬಿರುವಾಗ ಮಾತ್ರ ಧ್ಯಾನ ಮಾಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹೊಟ್ಟೆ ತುಂಬಿರುವಾಗ ಧ್ಯಾನ ಮಾಡಿದರೆ ನಿದ್ದೆ ಆವರಿಸಬಹುದು. ಸಾಮಾನ್ಯವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಧ್ಯಾನ ಮಾಡುವುದು ಒಳ್ಳೆಯದು. ಇದು ನಿಮಗೆ ದಿನವಿಡೀ ಶಾಂತಿ ಮತ್ತು ಚೈತನ್ಯವನ್ನು ನೀಡುತ್ತದೆ.
ಧ್ಯಾನದ ಬಗ್ಗೆ ಇರುವ ಸಾಮಾನ್ಯ ಮತ್ತು ಪ್ರಚಲಿತ ತಪ್ಪುಕಲ್ಪನೆಗಳನ್ನು ನಾವು ದೂರಮಾಡಿದ್ದೇವೆ. ಈಗ, ನಿಮ್ಮ ಮೇಲೆ ಧ್ಯಾನದ ಪ್ರಭಾವ ಮತ್ತು ಅದರ ಪ್ರಯೋಜನಗಳ ಬಗ್ಗೆ ನಿಮಗೆ ಹೆಚ್ಚಿನ ಸ್ಪಷ್ಟತೆ ದೊರೆತಿದೆ ಎಂದು ನಾವು ಭಾವಿಸುತ್ತೇವೆ.