ಧ್ಯಾನ ಮಾಡುವುದು ಹೇಗೆ ಎಂದು ತಿಳಿಯಬೇಕೆ? ಪ್ರಾರಂಭಿಕ ಹಂತದಲ್ಲಿರುವವರಿಗಾಗಿ ಧ್ಯಾನ ಎಂಬ ಬಗ್ಗೆ ವಿವರಗಳನ್ನು ಹುಡುಕುತ್ತಿದ್ದೀರಾ?
ಹೌದು, ನೀವು ಧ್ಯಾನ ಮಾಡಲು ತೊಡಗಿದಾಗ ಅದರಲ್ಲೂ ಇದೇ ತಾನೇ ತೊಡಗಿಕೊಂಡಾಗ ಗಾಢವಾದ ಅನುಭವಗಳನ್ನು ನಿರೀಕ್ಷೆ ಮಾಡುವುದು ಸಹಜ. ಧ್ಯಾನದ ತಂತ್ರಗಳು ಒತ್ತಡವನ್ನು ಕಡಿಮೆ ಮಾಡಲು, ಗಮನವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಸ್ವಾಸ್ಥ್ಯವನ್ನು ಪಡೆಯಲು ಅತ್ಯುತ್ತಮ ವಿಧಾನ. ಧ್ಯಾನ ಮಾಡಲು ಪ್ರಾರಂಭಿಸುವ ಮೊದಲು ಕೆಲವು ಸರಳ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಧ್ಯಾನದ ಅನುಭವ ಉತ್ತಮವಾಗುತ್ತದೆ. ಸಾಮಾನ್ಯವಾಗಿ ಇದೇ ತಾನೇ ಧ್ಯಾನ ಮಾಡಲು ತೊಡಗುವವರಿಗೆ “ಧ್ಯಾನ ಮಾಡುವುದು ಹೇಗೆ? ಅದರಲ್ಲೂ ಮನೆಯಲ್ಲಿ ಧ್ಯಾನ ಮಾಡುವುದು ಹೇಗೆ?” ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಪ್ರಾರಂಭಿಕರಿಗೆ ಧ್ಯಾನದಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುವ 8 ಸಲಹೆಗಳು
-
ನಿಮಗೆ ಅನುಕೂಲಕರವಾದ ಸಮಯವನ್ನು ಕಂಡುಕೊಳ್ಳಿ
ಧ್ಯಾನವು ವಿಶ್ರಾಂತಿ ನೀಡುತ್ತದೆ. ಆದುದರಿಂದ, ಧ್ಯಾನ ಸರಿಯಾಗಿ ಮಾಡಲು ನಿಮಗೆ ಸಂಪೂರ್ಣ ಅನುಕೂಲಕರವಾದ ಸಮಯವನ್ನು ಹೊಂದಿಸಿಕೊಳ್ಳಿ. ನಿಮಗೆ ಯಾರೂ ತೊಂದರೆ ಕೊಡದ ಸಮಯವನ್ನು ಆರಿಸಿಕೊಳ್ಳಿ, ಆರಾಮವಾಗಿ ಉಲ್ಲಸಿತರಾಗಿರುವ ಸ್ವಾತಂತ್ರ್ಯ ನಿಮಗಿರಲಿ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಧ್ಯಾನಕ್ಕೆ ಪ್ರಶಸ್ತವಾಗಿರುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಪ್ರಶಾಂತವಾದ ವಾತಾವರಣವಿರುತ್ತದೆ. ಇದು ನಿಮಗೆ ಸುಲಭವಾಗಿ ಧ್ಯಾನಮಾಡಲು ಸಹಾಯ ಮಾಡುತ್ತದೆ.
-
ಪ್ರಶಾಂತ ಸ್ಥಳವನ್ನು ಆರಿಸಿಕೊಳ್ಳಿ
ಅನುಕೂಲ ಸಮಯದಂತೆಯೇ ಒಂದೆಡೆ ಕುಳಿತು ಯಾವುದೇ ಬಾಧೆಯಿಲ್ಲದೆ ಧ್ಯಾನ ಮಾಡಲು ನಿಶ್ಶಬ್ದವಾದ ಪ್ರಶಾಂತ ಪರಿಸರವನ್ನು ಆಯ್ದುಕೊಳ್ಳಿ. ಅದು ನಿಮ್ಮ ಮನೆಯ ನಿಶ್ಶಬ್ದ ಕೋಣೆಯೇ ಇರಬಹುದು, ಪ್ರಕೃತಿಯ ಸಾತ್ವಿಕ ಪ್ರದೇಶವಿರಬಹುದು ಅಥವಾ ಯಾವುದೇ ಧ್ಯಾನ ಕೇಂದ್ರವಿರಬಹುದು.
ಧ್ಯಾನವನ್ನು ಮಾಡುವ ಆರಂಭಿಕರಿಗೆ ಅಂತಹ ಸ್ಥಳವು ವಿಶ್ರಾಂತಿ ಮತ್ತು ಮನೋಲ್ಲಾಸ ನೀಡಬಹುದು.
-
ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ
ನಿಮ್ಮ ಭಂಗಿಯೂ ಮಹತ್ವವಾದುದು. ನಿಮಗೆ ಸುಲಭವೆನ್ನಿಸುವ ಕುಳಿತುಕೊಳ್ಳುವ ಭಂಗಿಯನ್ನು ಕಂಡುಕೊಳ್ಳಿ. ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು ಅಥವಾ ನೆಲದ ಮೇಲೆ ಮೆತ್ತೆಯನ್ನು ಹಾಕಿಕೊಂಡು ಕುಳಿತುಕೊಳ್ಳಬಹುದು. ಬೆನ್ನು ಹುರಿ ನೇರವಾಗಿರಿಸಿಕೊಳ್ಳಿ. ಕೈಗಳು ನಿಮ್ಮ ತೊಡೆಯ ಮೇಲಿರಲಿ. ಆರಾಮವಾಗಿ, ಸಾಧ್ಯವಾದಷ್ಟು ಸ್ಥಿರವಾಗಿ ಕುಳಿತುಕೊಳ್ಳಿ. ನಿಮ್ಮ ಭುಜಗಳು ಮತ್ತು ಕುತ್ತಿಗೆ ಸಡಿಲವಾಗಿರಲಿ. ಧ್ಯಾನದ ಸಂಪೂರ್ಣ ಸಮಯದಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡಿರಿ.
ನೆನಪಿಡಿ: ಧ್ಯಾನ ಮಾಡಲು ಪದ್ಮಾಸನದಲ್ಲಿಯೇ ಕುಳಿತುಕೊಳ್ಳಬೇಕೆಂಬುದು ಕುರುಡು ನಂಬಿಕೆ.
-
ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿರಿ
ಕಚೇರಿಯಲ್ಲಾಗಲಿ, ಮನೆಯಲ್ಲಾಗಲಿ ಧ್ಯಾನ ಮಾಡುವಾಗ ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿರುವುದು ಒಳ್ಳೆಯದು. ಊಟ ಮಾಡಿದ ನಂತರ ಧ್ಯಾನ ಮಾಡಲು ತೊಡಗಿದರೆ ನಿದ್ರೆ ಆವರಿಸಿಕೊಳ್ಳಬಹುದು ಎಂಬುದೇ ಊಟಕ್ಕೆ ಮೊದಲು ಧ್ಯಾನ ಮಾಡಿ ಎನ್ನಲು ಸರಳ ಕಾರಣ. ಹೊಟ್ಟೆ ತುಂಬಿದ ಮೇಲೆ ಧ್ಯಾನ ಮಾಡುವಾಗ ಕೆಲವೊಮ್ಮೆ ಅಸ್ವಸ್ಥತೆಯೂ ಉಂಟಾಗಬಹುದು.
ತುಂಬಾ ಹಸಿದಿರುವಾಗ ಹಸಿವಿನ ಬಾಧೆಯೇ ಧ್ಯಾನಕ್ಕೆ ತೊಂದರೆ ಕೊಡಬಹುದು. ಧ್ಯಾನ ಮಾಡುವಾಗಲೂ ನಿಮ್ಮ ಮನಸ್ಸು ಊಟದ ಬಗ್ಗೆಯೇ ಯೋಚಿಸಬಹುದು. ಆದುದರಿಂದ ಆಹಾರ ಸೇವನೆ ಮಾಡಿದ ಎರಡು ಗಂಟೆಗಳ ನಂತರ ಧ್ಯಾನ ಮಾಡುವುದು ಸೂಕ್ತ.
ನೆನಪಿನಲ್ಲಿಡಿ: ಹಸಿದಿರುವಾಗ ಒತ್ತಾಯಪೂರ್ವಕವಾಗಿ ಧ್ಯಾನ ಮಾಡಬೇಡಿ
-
ಕೆಲವು ಪೂರ್ವಸಿದ್ಧತೆಗಳೊಂದಿಗೆ ಪ್ರಾರಂಭಿಸಿ
ಧ್ಯಾನಕ್ಕೆ ಪೂರ್ವಸಿದ್ಧತೆಯಾಗಿ ಕೆಲವು ವ್ಯಾಯಾಮಗಳನ್ನು ಮಾಡುವುದರಿಂದ ನಿಮ್ಮ ಮನಸ್ಸು ವರ್ತಮಾನದಲ್ಲಿ ನೆಲೆ ನಿಲ್ಲುತ್ತದೆ ಹಾಗೂ ದೇಹ ಮತ್ತು ಮನಸ್ಸುಗಳು ಧ್ಯಾನಕ್ಕೆ ಸಿದ್ಧವಾಗುತ್ತವೆ. ಧ್ಯಾನ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಿರಾದರೆ ಕೆಲವು ಸರಳ ವ್ಯಾಯಾಮಗಳು ಅಥವಾ ಸೂಕ್ಷ್ಮ ಯೋಗವನ್ನು ಮಾಡಿ ನಂತರ ಧ್ಯಾನ ಮಾಡಿ. ಇದರಿಂದ ನಿಮ್ಮ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಜಡತೆ ಮತ್ತು ಚಡಪಡಿಕೆ ದೂರವಾಗುತ್ತದೆ. ದೇಹ ಹಗುರವಾಗುತ್ತದೆ. ದೇಹವನ್ನು ದೀರ್ಘಕಾಲ ಸ್ಥಿರವಾಗಿರಿಸಿಕೊಳ್ಳುವುದು ಧ್ಯಾನ ಮಾಡಲು ಪ್ರಾರಂಭಿಸುವವರಿಗೆ ಅಗತ್ಯವಾದ ಮೊದಲ ಹೆಜ್ಜೆ.
-
ಕೆಲವು ದೀರ್ಘ ಉಸಿರುಗಳನ್ನು ಎಳೆದುಕೊಳ್ಳಿ
ಧ್ಯಾನವನ್ನು ಪ್ರಾರಂಭಿಸುವ ಮೊದಲು ಕೆಲವು ದೀರ್ಘ ಉಸಿರುಗಳನ್ನು ತೆಗೆದುಕೊಳ್ಳುವುದು ಇನ್ನೊಂದು ಪ್ರಮುಖ ಹೆಜ್ಜೆ. ನಾಡಿಶೋಧನ ಪ್ರಾಣಾಯಾಮ ಮಾಡುವುದು ಉತ್ತಮ. ಇದು ಉಸಿರಿನ ಲಯವನ್ನು ಸ್ಥಿರಗೊಳಿಸುತ್ತದೆ ಮತ್ತು ಮನಸ್ಸನ್ನು ಪ್ರಶಾಂತವಾದ ಧ್ಯಾನಕ್ಕೆ ಅಣಿಗೊಳಿಸುತ್ತದೆ. ಉಸಿರು ತೆಗೆದುಕೊಳ್ಳುವಾಗ ಮತ್ತು ಬಿಡುವಾಗ ಉಸಿರಿನ ಮೇಲೆ ಗಮನವಿರಿಸಿ. ಅಗತ್ಯಬಿದ್ದರೆ ಉಸಿರುಗಳನ್ನು ಲೆಕ್ಕ ಮಾಡಿ. ನಿಮ್ಮ ಮನಸ್ಸು ಅಲೆದಾಡಲು ತೊಡಗಿದರೆ ಅದನ್ನು ಉಸಿರಿನ ಕಡೆ ಸೂಕ್ಷ್ಮವಾಗಿ ಸೆಳೆಯಿರಿ.
-
ನಿಮ್ಮ ಮುಖದಲ್ಲಿ ಸುಂದರ ಮಂದಹಾಸವಿರಲಿ
ಧ್ಯಾನ ಮಾಡುತ್ತಿರುವ ಸಂಪೂರ್ಣ ಸಮಯದಲ್ಲಿ ನಿಮ್ಮ ಮುಖದ ಮೇಲೆ ಮುಗುಳ್ನಗೆ ಇರಲೇಬೇಕು. ಸೌಮ್ಯವಾದ ಮುಗುಳ್ನಗೆ ನಿಮಗೆ ನಿರಾಳತೆ ಮತ್ತು ಶಾಂತಿಯನ್ನು ನೀಡುತ್ತದೆ. ಜೊತೆಗೆ ಧ್ಯಾನದ ಅನುಭವವನ್ನು ಉತ್ತಮಗೊಳಿಸುತ್ತದೆ. ಪ್ರಯತ್ನಿಸಿ ನೋಡಿ.
-
ಕಣ್ಣುಗಳನ್ನು ನಿಧಾನವಾಗಿ ಮತ್ತು ಮೃದುವಾಗಿ ತೆರೆಯಿರಿ
ಧ್ಯಾನವು ಕೊನೆಗೊಳ್ಳುವ ಹೊತ್ತಿಗೆ ನಿಮ್ಮ ಕಣ್ಣುಗಳನ್ನು ಕೂಡಲೇ ತೆರೆಯುವ ಅಥವಾ ದೇಹವನ್ನು ಚಲಿಸುವ ಅವಸರ ಮಾಡಬೇಡಿ. ಅದರ ಬದಲು, ನಿಮ್ಮ ದೇಹ ಮತ್ತು ಪರಿಸರದ ಬಗ್ಗೆ ಅರಿವನ್ನು ಮೂಡಿಸಿಕೊಂಡು ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ. ನಂತರ ದೇಹವನ್ನು ಚಲಿಸಿ. ಈಗ ನೀವು ದೈನಂದಿನ ಕಾರ್ಯಗಳಿಗೆ ಸಿದ್ಧರಾಗಿದ್ದೀರಿ!
ಧ್ಯಾನದ ಅಭ್ಯಾಸವನ್ನು ಪ್ರಾರಂಭಿಸುವಾಗ ಕಷ್ಟ ಎನ್ನಿಸಬಹುದು. ಆದರೆ ಸ್ವಲ್ಪ ತಾಳ್ಮೆ ಮತ್ತು ಪ್ರಯತ್ನಗಳ ಮೂಲಕ ಯಾರು ಬೇಕಾದರೂ ಧ್ಯಾನ ಮಾಡಬಹುದು. ಸರಿಯಾದ ರೀತಿಯಲ್ಲಿ ಧ್ಯಾನ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮಗೆ ಎದುರಾದರೆ ಮೇಲಿನ ಸಲಹೆಗಳನ್ನು ಅನುಸರಿಸಿ. ಪ್ರಶಾಂತ ಮತ್ತು ಏಕಾಗ್ರ ಮನಸ್ಸಿನ ಅನುಗ್ರಹ ನಿಮಗೆ ದೊರೆಯುತ್ತದೆ.
-
ಗುರುದೇವರ ಈ ನಿರ್ದೇಶಿತ ಧ್ಯಾನವನ್ನು ಪ್ರಾರಂಭಿಕರು ಪ್ರಯತ್ನಿಸಬಹುದು
ಧ್ಯಾನದ ತಂತ್ರಗಳು ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತವೆ, ಮನಸ್ಸಿಗೆ ಗಾಢವಾದ ವಿಶ್ರಾಂತಿಯನ್ನು ನೀಡುತ್ತವೆ ಮತ್ತು ನಿಮ್ಮ ದೇಹವನ್ನು ನವೀಕರಿಸುತ್ತವೆ. ಧ್ಯಾನದ ಪ್ರಪಂಚವನ್ನು ಪ್ರವೇಶಿಸುವ ಬಗ್ಗೆ ನಿಮಗೆ ಸಂದೇಹಗಳಿದ್ದರೆ ಪ್ರಾರಂಭಿಕರಿಗಾಗಿರುವ ಧ್ಯಾನಶಿಬಿರಗಳ ಪರಿಚಯಕ್ಕೆ (Introductory Session for Meditation for beginners) ನೋಂದಾಯಿಸಿಕೊಳ್ಳಬಹುದು. ನಮ್ಮ ಈ ಪರಿಚಯಾತ್ಮಕ ಅವಧಿ ಸಂಪೂರ್ಣ ಉಚಿತ. ೬೦ ನಿಮಿಷಗಳ ಈ ಅವಧಿಯಲ್ಲಿ ನಾವು ನಿಮಗೆ ಯೋಗ, ಉಸಿರಾಟ ಮತ್ತು ಧ್ಯಾನಗಳ ಬಗ್ಗೆ ತಿಳಿಸುತ್ತೇವೆ ಮತ್ತು ಧ್ಯಾನಜಗತ್ತಿನ ಒಳನೋಟವನ್ನು ನೀಡುತ್ತೇವೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ “ಸಹಜ ಸಮಾಧಿ ಧ್ಯಾನ” ಕಾರ್ಯಕ್ರಮವನ್ನು ನಿಮ್ಮ ಅಂತರಂಗದ ಆಳಕ್ಕಿಳಿದು ನಿಮ್ಮ ಅಪರಿಮಿತ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಗುರುದೇವರಿಂದ ಪ್ರಾರಂಭಿಸಿರುವ ಈ ಮಾರ್ಗದರ್ಶಿ ಧ್ಯಾನವನ್ನು ಪ್ರಯತ್ನಿಸಿ ನೋಡಿ
ಗಾಢವಾದ ಧ್ಯಾನ ಮಾಡಬೇಕೆಂದರೆ ಮೊದಲು ಯೋಗಾಭ್ಯಾಸ ಮಾಡುವುದು ಒಳ್ಳೆಯದು. ಯೋಗಾಭ್ಯಾಸವು ದೇಹದ ಚಡಪಡಿಕೆಯನ್ನು ದೂರಮಾಡುತ್ತದೆ ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. ಸ್ಥಿರವಾದ ದೇಹ ಮತ್ತು ಶಾಂತ ಮನಸ್ಸು ಧ್ಯಾನ ಮಾಡಲು ಅತ್ಯಗತ್ಯ.