ಎಲ್ಲರೂ ಒತ್ತಡದಿಂದ ಮುಕ್ತರಾಗಲು ಬಯಸುತ್ತಾರೆ, ಆದರೆ ಮೊಟ್ಟಮೊದಲನೆಯದಾಗಿ, ಒತ್ತಡವೆಂದರೇನು ಎಂದು ನಿಮಗೆ ಗೊತ್ತೆ? ಒತ್ತಡವೆಂದರೆ ಮಾಡಲು ಬಹಳ ಇರುವುದು ಮತ್ತು ಅದನ್ನು ಮಾಡಿಮುಗಿಸಲು ಬಹಳ ಕಡಿಮೆ ಸಮಯ ಅಥವಾ ಕಡಿಮೆ ಶಕ್ತಿಯಿರುವುದು. ಮಾಡಲು ಬಹಳಷ್ಟಿದ್ದು, ಸಾಕಷ್ಟು ಶಕ್ತಿ ಅಥವಾ ಸಮಯವಿಲ್ಲದಿದ್ದಾಗ ಒತ್ತಡಕ್ಕೆ ಒಳಗಾಗುತ್ತೇವೆ. ಆದ್ದರಿಂದ ನಿಮ್ಮ ಕೆಲಸವನ್ನಾದರೂ ಕಡಿಮೆ ಮಾಡಿಕೊಳ್ಳಬೇಕು – ಇಂದಿನ ದಿನಗಳಲ್ಲಿ ಇದು ಸಾಧ್ಯವಾಗುವಂತೆ ಅನಿಸುವುದಿಲ್ಲ. ಆದ್ದರಿಂದ ಉಳಿದಿರುವ ಆಯ್ಕೆಯೆಂದರೆ, ನಿಮ್ಮ ಶಕ್ತಿಯ ಮಟ್ಟಗಳನ್ನು ಹೆಚ್ಚಿಸುವುದು, ಏಕೆಂದರೆ ನಿಮ್ಮ ಸಮಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲವಲ್ಲ?ಇಲ್ಲಿಎಲ್ಲರೂ ಒತ್ತಡದಿಂದ ಮುಕ್ತರಾಗಲು ಬಯಸುತ್ತಾರೆ, ಆದರೆ ಮೊಟ್ಟಮೊದಲನೆಯದಾಗಿ, ಒತ್ತಡವೆಂದರೇನು ಎಂದು ನಿಮಗೆ ಗೊತ್ತೆ? ಒತ್ತಡವೆಂದರೆ ಮಾಡಲು ಬಹಳ ಇರುವುದು ಮತ್ತು ಅದನ್ನು ಮಾಡಿಮುಗಿಸಲು ಬಹಳ ಕಡಿಮೆ ಸಮಯ ಅಥವಾ ಕಡಿಮೆ ಶಕ್ತಿಯಿರುವುದು. ಮಾಡಲು ಬಹಳಷ್ಟಿದ್ದು, ಸಾಕಷ್ಟು ಶಕ್ತಿ ಅಥವಾ ಸಮಯವಿಲ್ಲದಿದ್ದಾಗ ಒತ್ತಡಕ್ಕೆ ಒಳಗಾಗುತ್ತೇವೆ. ಆದ್ದರಿಂದ ನಿಮ್ಮ ಕೆಲಸವನ್ನಾದರೂ ಕಡಿಮೆ ಮಾಡಿಕೊಳ್ಳಬೇಕು – ಇಂದಿನ ದಿನಗಳಲ್ಲಿ ಇದು ಸಾಧ್ಯವಾಗುವಂತೆ ಅನಿಸುವುದಿಲ್ಲ. ಆದ್ದರಿಂದ ಉಳಿದಿರುವ ಆಯ್ಕೆಯೆಂದರೆ, ನಿಮ್ಮ ಶಕ್ತಿಯ ಮಟ್ಟಗಳನ್ನು ಹೆಚ್ಚಿಸುವುದು, ಏಕೆಂದರೆ ನಿಮ್ಮ ಸಮಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲವಲ್ಲ?
ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸರಳವಾದ ಈ ನಾಲ್ಕು ಪ್ರಕ್ರಿಯೆಗಳಿವೆ:
- ಸರಿಯಾದ ಪ್ರಮಾಣದ ಆಹಾರ. ವಿಪರೀತವೂ ಅಲ್ಲ, ಬಹಳ ಕಡಿಮೆಯೂ ಅಲ್ಲ. ಸಾಕಷ್ಟು ಶರ್ಕರಪಿಷ್ಠಗಳನ್ನುಳ್ಳ, ಸಸಾರಜನಕಗಳನ್ನುಳ್ಳ ಸಮತೋಲನವಾದ ಆಹಾರ.
- ಸರಿಯಾದ ಪ್ರಮಾಣದ ನಿದ್ದೆ. 6-8 ಗಂಟೆಗಳಷ್ಟು ನಿದ್ದೆ. ಅದಕ್ಕಿಂತಲೂ ಹೆಚ್ಚು ಅಥವಾ ಕಡಿಮೆಯಲ್ಲ.
- ಕೆಲವು ಆಳವಾದ ಉಸಿರಾಟದ ವ್ಯಾಯಾಮಗಳನ್ನು ಕಲಿಯಿರಿ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
- ಕೆಲವು ನಿಮಿಷಗಳ ಧ್ಯಾನಸ್ತವಾದ ಮನಸ್ಸು. ಕೆಲವು ನಿಮಿಷಗಳ ಆಳವಾದ ವಿಶ್ರಾಂತಿ. ಜಾಗೃತವಾದ, ಆಳವಾದ ವಿಶ್ರಾಂತಿಯನ್ನು ಧ್ಯಾನವೆಂದು ಕರೆಯಬಹುದು. ಕೆಲವು ನಿಮಿಷಗಳ ಧ್ಯಾನವು ಎಲ್ಲಾ ರೀತಿಯ ಒತ್ತಡಗಳನ್ನೂ ನಿವಾರಿಸಬಲ್ಲದು. ಬೆಳಿಗ್ಗೆ ಮತ್ತು ಸಂಜೆ 15-20 ನಿಮಿಷಗಳು ಧ್ಯಾನ ಮಾಡಿದರೆ ಅದು ಸಾಕಷ್ಟಾಗುತ್ತದೆ. ಅದು ನಿಮ್ಮನ್ನು ಮುನ್ನಡೆಸುತ್ತದೆ.
ಒತ್ತಡವು ಆರಂಭವಾಗುವ ಮೊದಲೇ ಅದನ್ನು ನಿಲ್ಲಿಸಿ
“ಯುದ್ಧಭೂಮಿಯಲ್ಲಿ ಶಸ್ತ್ರಾಭ್ಯಾಸವನ್ನು ಕಲಿಯಲು ಸಾಧ್ಯವಿಲ್ಲ” ಎಂಬ ಹೇಳಿಕೆಯಿದೆ. ಆ ಪರಿಸ್ಥಿತಿಗೆ ತಲುಪುವ ಮೊದಲೇ ಶಸ್ತ್ರಾಭ್ಯಾಸವನ್ನು ಕಲಿತಿರಬೇಕು. ಒತ್ತಡದಲ್ಲಿರುವ ಸಮಯದಲ್ಲಿ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ, ಆದರೆ ಆ ಹಂತಕ್ಕೆ ನೀವು ತಲುಪದಿರುವಂತೆ, ಒತ್ತಡಕ್ಕೆ ಒಳಗಾಗದಂತೆ ಏನನ್ನಾದರೂ ಮಾಡಬೇಕು. ವೇದಿಕೆಯ ಮೇಲೆ ಹೊಸರಾಗವನ್ನು ಕಲಿಯಲು ಸಾಧ್ಯವಿಲ್ಲ ಎಂಬ ಹೇಳಿಕೆಯಿದೆ. ಇದನ್ನು ನಾವು ಒಪ್ಪುವುದಿಲ್ಲ. ವಾಸ್ತವದಲ್ಲಿ, ಯಾವುದೂ ಅಸಾಧ್ಯವಲ್ಲ. ನೀವು ವರ್ತಿಸುವ ರೀತಿಯನ್ನು ಬದಲಿಸಿ, ಆಹಾರದ ಅಭ್ಯಾಸಗಳನ್ನು ಬದಲಿಸಿ, ಜೀವನದಲ್ಲಿ ನೀವು ಗ್ರಹಿಸುವ ರೀತಿಯನ್ನು ಬದಲಿಸಿ, ನಿಮ್ಮ ಸಂಪರ್ಕಿಸುವ ಸಾಮರ್ಥ್ಯವನ್ನು, ನಿಂದೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು, ನಿಂದೆಯನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಬದಲಿಸಿ. ಒಟ್ಟಾರೆ ಜೀವನದ ಬಗ್ಗೆ ನೀವು ಹೊಂದುವ ದೃಷ್ಟಿಕೋನವು ವ್ಯತ್ಯಾಸವನ್ನು ಉಂಟುಮಾಡುತ್ತದೆ. ವೈಶ್ವಿಕ ಚೇತನದೊಡನೆ ನೀವೆಷ್ಟು ಸಂಬಂಧವನ್ನು ಹೊಂದಿರುವಿರೋ, ವೈಶ್ವಿಕ ಚೇತನದೊಡನೆ ಸಂಬಂಧವನ್ನು ಹೊಂದುವ ಎಷ್ಟು ಸಾಮರ್ಥ್ಯವನ್ನು ಹೊಂದಿರುವಿರೋ, ನಿಮ್ಮ ಕಾರ್ಯ ಮಾಡುವ ಸಾಮರ್ಥ್ಯವೂ ಅಷ್ಟೇ ಆಗಿರುತ್ತದೆ.

ಧ್ಯಾನ
ಇಂದು ವಿಜ್ಞಾನಿಗಳು, ನಾವು ಪ್ರತಿನಿತ್ಯ, ದಿನಕ್ಕೆ ಎರಡು ಸಲ 20ನಿಮಿಷಗಳವರೆಗೆ, ಎಂಟು ವಾರಗಳವರೆಗೆ ಧ್ಯಾನ ಮಾಡಿದರೆ, ಎಂದರೆ ಎರಡು ತಿಂಗಳವರೆಗೆ ಧ್ಯಾನ ಮಾಡಿದರೆ, ನಮ್ಮ ಮೆದುಳಿನ ಗ್ರೇಮ್ಯಾಟರ್ ಹೆಚ್ಚಿ, ಮೆದುಳಿನ ವಿನ್ಯಾಸವೂ ಬದಲಿಸುತ್ತದೆ ಎಂದು ಹೇಳುತ್ತಾರೆ. ಧ್ಯಾನವು ನಮ್ಮ ಮೇಲೆ ಪ್ರಭಾವವನ್ನು ಬೀರುತ್ತದೆಯೆಂದು ತಿಳಿದಿದ್ದರೂ ಸಹ, ಆ ಮಾತನ್ನು ವಿಜ್ಞಾನಿಗಳೂ ಹೇಳಿದರೆ, ಜಗತ್ತಿನ ಅನೇಕ, ಅನೇಕ, ಅನೇಕಾನೇಕ ಜನರ ಅನೇಕ, ಅನೇಕ, ಅನೇಕ, ಅನೇಕಾನೇಕ ವರ್ಷಗಳ ಅನುಭವವನ್ನು ದೃಢಪಡಿಸಿದಂತೆ ಆಗುತ್ತದೆಯಷ್ಟೆ. ಆದ್ದರಿಂದ, ಧ್ಯಾನವು ಮುಖ್ಯ. ಇಂದು ಪ್ರತಿ ಎರಡು ಸೆಕೆಂಡುಗಳಿಗೆ, ಒತ್ತಡದ ಕಾರಣದಿಂದ 7 ಜೀವಗಳನ್ನು ಈ ಭೂಮಿಯಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಒತ್ತಡವನ್ನು ನಿವಾರಿಸುವ ರೀತಿಯಿಂದರೆ ಆಳವಾದ ಧ್ಯಾನ. ಆಳವಾದ ಧ್ಯಾನದಿಂದ ಒತ್ತಡವನ್ನು ಹೋಗಲಾಡಿಸಬಹುದು. ಜನರ ಮುಖಗಳ ಮೇಲೆ ಮುಗುಳ್ನಗೆಯನ್ನು ಮತ್ತೆ ತರಬಹುದು.
ಒತ್ತಡ ಮತ್ತು ಶಿಕ್ಷಣ
ಒತ್ತಡವು ಉದ್ರೇಕತನವನ್ನು ಮತ್ತು ಹಿಂಸೆಯನ್ನು ಅಥವಾ ಖಿನ್ನತೆಯನ್ನು ಮತ್ತು ಆತ್ಮಹತ್ಯಾಪ್ರವೃತ್ತಿಯನ್ನು ಉಂಟುಮಾಡುತ್ತದೆ. ನಮ್ಮ ಮನಸ್ಸನ್ನು ಹೇಗೆ ನಿಭಾಯಿಸುವುದೆಂದು ಯಾರೂ ಹೇಳಿಕೊಡದಿರುವುದೇ ಇದರ ಕಾರಣ.
ಶಿಕ್ಷಣವೆಂದರೆ ಕೇವಲ ಮಾಹಿತಿಯ ಸಂಗ್ರಹಣೆಯಲ್ಲ. ನೀವು ಯಾರೆಂದು, ನಿಮ್ಮ ಸಾಮರ್ಥ್ಯವೇನೆಂದು ತಿಳಿಯುವುದೇ ಶಿಕ್ಷಣ. ಶಿಕ್ಷಣವೆಂದರೆ ನಿಮ್ಮ ಅಸ್ತಿತ್ವದ 7 ವಿವಿಧ ಪದರಗಳ ಬಗ್ಗೆ ತಿಳಿಯುವುದು – ದೇಹ, ಉಸಿರು, ಮನಸ್ಸು, ಬುದ್ಧಿ, ಸ್ಮೃತಿ, ಅಹಂಕಾರ ಮತ್ತು ಆತ್ಮ. ಅಸ್ತಿತ್ವದ ಈ ಪದರಗಳ ಬಗ್ಗೆ ನಮಗೇನೂ ತಿಳಿದಿಲ್ಲ. ಆದ್ದರಿಂದ ನಮ್ಮಲ್ಲಿ ಕೋಪ ಅಥವಾ ರೋಷ ಎದ್ದಾಗ ಅದನ್ನು ಹೇಗೆ ನಿಭಾಯಿಸುವುದೆಂದೇ ನಮಗೆ ತಿಳಿದಿಲ್ಲ. ಈಗಾಗಲೇ ಹೇಳಿದಂತೆ, ಶಾಲೆಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ನಮ್ಮ ಮನಸ್ಸನ್ನು, ನಮ್ಮ ಭಾವನೆಗಳನ್ನು ನಿಭಾಯಿಸುವುದು ಹೇಗೆಂದು ಯಾರೂ ನಮಗೆ ಹೇಳಿಕೊಟ್ಟಿಲ್ಲ. ಆದ್ದರಿಂದ ಇದು ಜನರ ಮನದಲ್ಲಿ ಹಾಗೆಯೇ ನೆಲೆಸಿ, ಖಿನ್ನತೆಗೆ ಅಥವಾ ಉದ್ರಿಕ್ತತೆಗೆ ತಿರುಗುತ್ತದೆ.
ಬಹುತೇಕ ಶಾಲಾ ಶಿಕ್ಷಕರು ಖಿನ್ನರಾಗಿರುವರೆಂದು ಸಂಶೋಧನೆಗಳು ತಿಳಿಸಿವೆ. ಶಿಕ್ಷಕರೇ ಖಿನ್ನರಾಗಿದ್ದರೆ, ಇನ್ನು ವಿದ್ಯಾರ್ಥಿಗಳೊಡನೆ ಅವರು ಯಾವ ರೀತಿಯ ಸಂಪರ್ಕವನ್ನು ತಾನೆ ಮಾಡಿಯಾರು? ಖಿನ್ನತೆಯನ್ನೇ ಅವರು ವರ್ಗಾಯಿಸುತ್ತಾರೆ! ಸಂತೋಷವಾಗಿರುವ ವ್ಯಕ್ತಿಯು ಇತರರಿಗೆ ಸಂತೋಷವನ್ನೇ ಹಂಚುತ್ತಾರೆ. ಖಿನ್ನರಾಗಿರುವ ವ್ಯಕ್ತಿಯು ಇತರರಿಗೆ ಖಿನ್ನತೆಯನ್ನೇ ವರ್ಗಾಯಿಸುತ್ತಾರೆ. ಆದ್ದರಿಂದ ನಮ್ಮ ಮಕ್ಕಳಿಗೆ ಉದ್ರಿಕ್ತರಾಗದೆ ಇರುವುದು ಹೇಗೆಂದು, ಅಹಿಂಸಾತ್ಮಕವಾಗಿ ಸಂಪರ್ಕಿಸುವುದು ಹೇಗೆಂದು, ಅವರ ದೃಷ್ಟಿಕೋನವನ್ನು ಹೇಗೆ ವಿಶಾಲವಾಗಿ ಮಾಡಿಕೊಳ್ಳುವುದೆಂದೂ ಮತ್ತು ಸಹನೆಯನ್ನು ಹೊಂದಿರಬೇಕೆಂದು ಕಲಿಸಿಕೊಡಬೇಕು.
ನನ್ನಲ್ಲಿ ಶಾಂತಿ, ಭೂಮಿಯ ಮೇಲೆ ಶಾಂತಿ
ಜಗತ್ತಿನಲ್ಲಿ ಇಂದು ನಡೆಯುತ್ತಿರುವುದೇನೆಂದರೆ, ಜನರು ಒತ್ತಡಕ್ಕೆ ಒಳಗಾದಾಗ ಅವರಿಗೇ ಅವರು ಹಾನಿಯನ್ನುಂಟು ಮಾಡಿಕೊಳ್ಳುತ್ತಾರೆ ಅಥವಾ ಇತರರಿಗೆ ಹಾನಿಯನ್ನುಂಟು ಮಾಡುತ್ತಾರೆ. ನಿಮ್ಮ ಬಗ್ಗೆಯೇ ನೆನಪು ಮಾಡಿಕೊಳ್ಳಿ. ನೀವು ಬಹಳ ಒತ್ತಡದಲ್ಲಿದ್ದಾಗ ಜನರ ಮೇಲೆ ಕೋಪಿಸಿಕೊಂಡಿರಿ ಮತ್ತು ಅದರಿಂದ ಇತರರಿಗೆ ನೋವಾಯಿತಲ್ಲವೆ? ಇದು ನಮ್ಮ ಅನುಭವವಲ್ಲವೆ? ನಾವು ಸಾಮಾನ್ಯ ಸ್ಥಿತಿಯಲ್ಲಿ ಇಲ್ಲದಿದ್ದಾಗ, ನಮ್ಮ ಎಚ್ಚರದಲ್ಲಿ ಇಲ್ಲದಿದ್ದಾಗ, ನಮ್ಮ ಆಪ್ತರಿಗೂ ನೋವನ್ನು ಉಂಟುಮಾಡುತ್ತೇವೆ. ಆದ್ದರಿಂದ ಒತ್ತಡದಲ್ಲಿದ್ದಾಗ ನಮಗೂ ನಾವೇ ನೋವನ್ನು ಉಂಟುಮಾಡಿಕೊಳ್ಳುವುದಲ್ಲದೆ, ಇತರರಿಗೂ ನೋವನ್ನು ಉಂಟುಮಾಡುತ್ತೇವೆ. ಜಗತ್ತಿನ ಎಲ್ಲೆಡೆಯೂ ಆಗುತ್ತಿರುವುದೇ ಇದು. ಆದ್ದರಿಂದ, ಸಮಾಜದಲ್ಲಿ ಹೆಚ್ಚು ಸಂತೋಷವನ್ನು ತರುವ ನೈತಿಕ ಜವಾಬ್ದಾರಿಯು ನಮ್ಮೆಲ್ಲರದ್ದೂ ಆಗಿದೆಯಲ್ಲವೆ? ನಿಮಗೆ ಹಾಗೆ ಅನಿಸುವುದಿಲ್ಲವೆ? ಜೀವನದ ಉದ್ದೇಶವೇನು? ನಾವು ಕೇವಲ ದುಃಖವನ್ನೇ ನಮ್ಮ ಸುತ್ತಲೂ ಹರಡುತ್ತಲಿದ್ದರೆ, ನಾವೇಕೆ ಜೀವಿಸುತ್ತಿದ್ದೇವೆ? ಅಲ್ಲವೆ? ನಮ್ಮ ಜೀವನದ ಉದ್ದೇಶ ಸಂತೋಷವನ್ನು ಹರಡುವುದು. ಸಂತೋಷದ ಅಲೆಗಳನ್ನು ತನ್ನಿ.
ಸಂತೋಷದ ರಹಸ್ಯ
ಜೀವನದಲ್ಲಿ ನೀವೇನೇ ಮಾಡಿದರೂ, ಅದನ್ನು ಯಾವುದಕ್ಕಾಗಿ ಮಾಡುತ್ತೀರಿ? ಹೆಚ್ಚು ಸಂತೋಷವನ್ನು ಹೊಂದಲು, ಇನ್ನಷ್ಟು, ಮತ್ತಷ್ಟು ಸಂತೋಷವನ್ನು ಹೊಂದಲು. ನಾವು ಒತ್ತಡದಿಂದ ಮುಕ್ತರಾದಾಗ ಮಾತ್ರ, ಜಗತ್ತನ್ನು ಒಂದು ವಿಶಾಲವಾದ ದೃಷ್ಟಿಕೋನದಿಂದ ಕಾಣುವಷ್ಟು ಪ್ರಜ್ಞಾವಂತರಾದಾಗ ಮಾತ್ರ ಸಂತೋಷವು ಉಂಟಾಗಲು ಸಾಧ್ಯ. ಒತ್ತಡವನ್ನು ತಡೆಗಟ್ಟಲು ಅಥವಾ ಒತ್ತಡವು ಬಂದಾಗ ಅದನ್ನು ತಡೆದುಕೊಳ್ಳಲು ನಮಗೆ ಜೀವನದಲ್ಲಿ ಜ್ಞಾನಬೇಕು. ಜ್ಞಾನಬೇಕು, ವಿಶಾಲವಾದ ದೃಷ್ಟಿಕೋನಬೇಕು. ಈಗಾಗಲೇ ಬಂದಿರುವ ಒತ್ತಡವನ್ನು ಹೋಗಲಾಡಿಸಲು ಒಂದು ಪ್ರಕ್ರಿಯೆಬೇಕು. ಉಸಿರಾಟ, ಧ್ಯಾನವೆಲ್ಲವೂ ಪ್ರಕ್ರಿಯೆಗಳು, ಸಲಕರಣೆಗಳು, ಇರುವ ಒತ್ತಡವನ್ನು ಹೋಗಲಾಡಿಸುತ್ತವೆ ಮತ್ತು ಬರಬಹುದಾದ ಒತ್ತಡವನ್ನು ತಡೆಗಟ್ಟಲು ಜ್ಞಾನಕ್ಕೆ ಸ್ಥಳವನ್ನು ಸೃಷ್ಟಿಸುತ್ತದೆ. ಜನರಲ್ಲಿ ವಿಶ್ವಾಸವಿದ್ದಾಗ ಸಂಪರ್ಕ ಉಂಟಾಗುತ್ತದೆ. ವಿಶ್ವಾಸ ಮುರಿದು ಬಿದ್ದಾಗ ಸಂಪರ್ಕವೂ ಮತ್ತಷ್ಟು ಮುರಿದು ಬೀಳುತ್ತದೆ. ಇದರಿಂದ ಅನಾಹುತಗಳು ಉಂಟಾಗುತ್ತವೆ. ಆದ್ದರಿಂದ ಒಂದು ಕುಟುಂಬದಲ್ಲಾಗಲಿ, ಒಂದು ಸಂಬಂಧದಲ್ಲಾಗಲಿ, ವ್ಯಾಪಾರದಲ್ಲಾಗಲಿ ಅಥವಾ ರಾಷ್ಟ್ರಗಳ ನಡುವೆ ಅವಶ್ಯಕವಾಗಿರುವ ಮೂರು ವಿಷಯಗಳೆಂದರೆ – ಸಂಪರ್ಕ, ಸಂಪರ್ಕ ಮತ್ತು ಸಂಪರ್ಕ. ಅದು ಹೃದಯದಿಂದ – ಹೃದಯದೊಡನೆ ಸಂಪರ್ಕ, ಆತ್ಮದಿಂದ – ಆತ್ಮದೊಡನೆ ಸಂಪರ್ಕ ಮತ್ತು ತಲೆಯಿಂದ – ತಲೆಯೊಡನೆ, ಎಂದರೆ ಬುದ್ಧಿಯಿಂದ – ಬುದ್ಧಿಯೊಡನೆ ಸಂಪರ್ಕ. ಇವು ಮೂರು ಮಟ್ಟಗಳ ಸಂಪರ್ಕ. ಧ್ಯಾನವೆಂದರೆ ಆತ್ಮದಿಂದ ಆತ್ಮದೊಡನೆ ಸಂಪರ್ಕ.
ನಿಮ್ಮ ದೃಷ್ಟಿಕೋನವನ್ನು ಬದಲಿಸಿ, ನಿಮ್ಮ ಜೀವನವನ್ನು ಬದಲಿಸಿ.
ಸ್ವಲ್ಪ ಎಚ್ಚೆತ್ತುಕೊಂಡು ನೋಡಿ, ನೀವು ಇಲ್ಲಿ ಸದಾ ಇರುವುದಿಲ್ಲ. ನಾವು ಇಲ್ಲಿ ಇನ್ನೂ 10-20-30-40 ವರ್ಷಗಳು ಇರಲಿದ್ದೇವೆ, ಬಹುಶಃ 10 ಅಥವಾ 20 ವರ್ಷಗಳವರೆಗೆ ಇರಲಿದ್ದೇವೆ. ನಾವು ಜೀವಿಸಿರುವಷ್ಟು ಕಾಲ ಹೆಚ್ಚು ಮುಗುಳ್ನಕ್ಕು, ಇತರರೂ ಹೆಚ್ಚು ಮುಗುಳ್ನಗುವಂತೆ ಮಾಡಬಾರದೇಕೆ? ಅದೇ ಜೀವನದ ಕಲೆ. ಆರ್ಟ್ ಆಫ್ ಲಿವಿಂಗ್ ಎಂದರೆ, ಜೀವನದ ಕಲೆಯೆಂದರೆ, ಎಲ್ಲರಲ್ಲೂ ಮುಗುಳ್ನಗೆಯನ್ನು ತರುವುದು. ಜೀವನದ ಕಲೆ ಎಂದರೆ ನಮ್ಮೊಳಗೆ, ನಮ್ಮ ಸುತ್ತಲು ಇರುವ ಎಲ್ಲರಲ್ಲೂ ಸುರಕ್ಷತಾ ಭಾವವನ್ನು ಮೂಡಿಸುವುದು.