ಭಯವನ್ನು ಕೆಲವೊಮ್ಮೆ ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುವ ನಕಾರಾತ್ಮಕ ಭಾವನೆಯೆಂದು ವರ್ಣಿಲಾಗುತ್ತದೆ. ಭಯವು ಜೀವವನ್ನು ಸಂರಕ್ಷಿಸುವ ಒಂದು ಮೂಲ ಪ್ರವೃತ್ತಿ. ಭಯವು ಆಹಾರದಲ್ಲಿ ಉಪ್ಪಿನಂತೆ ಇರಬೇಕು. ಭಯ ಒಳ್ಳೆಯದೇ ಆದರೂ ಅತಿಯಾದ ಭಯವು ನಮ್ಮನ್ನು ಏಕಾಕಿತನಕ್ಕೆ ತಳ್ಳಬಹುದು.

ಭಯವನ್ನು ತೊಡೆದುಹಾಕಲು ಪ್ರಯತ್ನಿಸಬೇಡಿ. ಧ್ಯಾನ ಮಾಡಿ. ನೀವು ಯಾರೂ ಅಲ್ಲ ಅಥವಾ ನೀವು ಒಬ್ಬ ವಿಶೇಷ ವ್ಯಕ್ತಿಗೆ ಸೇರಿದವರು ಎಂದು ತಿಳಿಯಿರಿ.

ಭಯವು ತನಗೆ ಪ್ರತಿದ್ವಂದ್ವಿಯಾದ ಪ್ರೇಮಕ್ಕೆ ಪೂರಕವಾಗಿದೆ. ಅದು ತಲೆಕೆಳಗಾಗಿ ನಿಂತಿರುವ ಪ್ರೇಮ. ಪ್ರೇಮದ ವಿರೂಪವೇ ಭಯ.

ಪ್ರೇಮದಿಂದ ಅರ್ಥೈಸಿಕೊಳ್ಳಬಹುದಾದ ಎಲ್ಲವನ್ನೂ ಭಯದಿಂದ ಅರ್ಥೈಸಿಕೊಳ್ಳಬಹುದು. ಉದಾಹರಣೆಗೆ, ಮಗುವು ತನ್ನ ತಾಯಿಗೆ ಅಂಟಿಕೊಂಡಿರುವುದಕ್ಕೆ ಪ್ರೇಮ ಅಥವಾ ಭಯ ಎರಡೂ ಕಾರಣವಿರಬಹುದು.

ಮನಸ್ಸಿನಲ್ಲಿ ಚಿತ್ರಿತವಾಗಿರುವ ಭೂತಕಾಲದ ಅನುಭವಗಳು  ಭವಿಷ್ಯದ ಕುರಿತು ಭಯವನ್ನು ವರ್ತಮಾನದಲ್ಲಿ ಉಂಟುಮಾಡಬಹುದು. ಭಯವನ್ನು ನಿರಾಕರಿಸಿದಾಗ ಜನರು ಸ್ವಕೇಂದ್ರಿತರಾಗುತ್ತಾರೆ. ಆದರೆ ಭಯವನ್ನು ಗುರುತಿಸಿ ಒಪ್ಪಿಕೊಂಡಾಗ ಅವರು ಅದನ್ನು ಮೀರಿ ಹೋಗುತ್ತಾರೆ ಮತ್ತು ಅದರಿಂದ ಮುಕ್ತರಾಗುತ್ತಾರೆ.

ಭಯವೇ ಇಲ್ಲದಿರಲು ಒಂದೋ ಸಂಪೂರ್ಣ ಅವ್ಯವಸ್ಥೆಯಿರಬೇಕು ಅಥವಾ ಅತ್ಯಂತ ಸುವ್ಯವಸ್ಥೆ ಇರಬೇಕು. ಆದರೆ ಜಗತ್ತಿನಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಭಯವು ಅತ್ಯಗತ್ಯ. ಸಂತನಿಗೆ ಭಯವಿರುವುದಿಲ್ಲ; ಮೂರ್ಖನಿಗೂ ಭಯವಿರುವುದಿಲ್ಲ. ಆದರೆ ಇವರಿಬ್ಬರ ನಡುವೆ ಎಲ್ಲ ಕಡೆ ಭಯವಿದೆ.

ಭಯ ಎಂದರೇನು?

ಪ್ರತಿಯೊಂದು ಬೀಜದ  ಸುತ್ತಲೂ ಸಿಪ್ಪೆಯ ಆವರಣವಿರುತ್ತದೆ. ಸಿಪ್ಪೆಯು ಬೀಜದ ರಕ್ಷಣೆಗಾಗಿಯೇ ಇರುತ್ತದೆ. ಆದರೆ ನೀವು ಬೀಜವನ್ನು ನೀರಿನಲ್ಲಿ ನೆನೆಸಿದಾಗ, ಒಂದು ಹಂತದಲ್ಲಿ ಸಿಪ್ಪೆಯು ಬಿರಿದು ಮೊಳಕೆ ಹೊರಬರುತ್ತದೆ. ಅದೇ ರೀತಿ, ಭಯವು ಜೀವದ ರಕ್ಷಣೆಗಾಗಿ ಅದನ್ನು ಸುತ್ತುವರಿದಿರುವ ರಕ್ಷಾಕವಚವಾಗಿದೆ. ಹೀಗಿದ್ದರೂ ಭಯವನ್ನು ನಿವಾರಿಸಿಕೊಳ್ಳಲು ಒಂದು ಮಾರ್ಗವಿದೆ. ಮಗು ಸ್ವತಂತ್ರವಾಗುವ ಪ್ರಕ್ರಿಯೆಯಲ್ಲಿ ಭಯ ಹುಟ್ಟಿಕೊಳ್ಳುತ್ತದೆ.  ಮನಸ್ಸು ಅಥವಾ ಬುದ್ಧಿ ಪ್ರಬುದ್ಧವಾದಾಗ ಭಯ ದೂರವಾಗುತ್ತದೆ. ಪ್ರೌಢ ಬುದ್ಧಿಗೆ ಯಾವುದೇ ಭಯವಿರುವುದಿಲ್ಲ.

ಯಾವ ಕಾರಣದಿಂದ ಬೇಕಾದರೂ ಭಯ ಉಂಟಾಗಬಹುದು.  ನಿಮ್ಮ ಪ್ರತಿಷ್ಠೆ ಮತ್ತು ಬದುಕನ್ನು ನಷ್ಟಮಾಡಿಕೊಳ್ಳುವ ಭಯ, ರೋಗದ ಭಯ, ಸಂಗಾತಿಯ, ಮಕ್ಕಳ, ಅಥವಾ ಪೋಷಕರ ಕುರಿತು ಭಯ ಅಥವಾ ಹಣ ಕಳೆದುಕೊಳ್ಳುವ ಭಯ ಹೀಗೆ ಯಾವುದರಿಂದಲೂ ಭಯ ಉಂಟಾಗುವುದು ಸಾಧ್ಯ.

ನೀವು ಆ ಭಯಕ್ಕೆ ವಿವಿಧ ಕಾರಣಗಳನ್ನು ನೀಡುತ್ತೀರಿ. ಆದರೆ ಆ ಕಾರಣಗಳೆಲ್ಲ ಭಯವನ್ನು ನೇತುಹಾಕುವ ಗೂಟಗಳು ಮಾತ್ರ. ಹಾಗಾದರೆ ಭಯಕ್ಕೆ ನೀವು ಹೇಗೆ ಪ್ರತಿಕ್ರಿಯಿಸಬೇಕು? ಜ್ಞಾನದ ಮೂಲಕ – ಭಯದ ಮೂಲಕಾರಣವನ್ನು ತಿಳಿಯುವ ಮೂಲಕ ಭಯವನ್ನು ಎದುರಿಸಬಹುದು. ಪ್ರೇಮ ಇರುವಲ್ಲಿ ಆ ಪ್ರೇಮವೇ  ತಲೆಕೆಳಗಾಗಿ ಭಯವಾಗಿ ಪರಿಣಮಿಸುತ್ತದೆ. ಪ್ರೇಮವೇ ದ್ವೇಷವಾಗಿ ಬದಲಾಗುತ್ತದೆ. ಪ್ರೇಮವು ವಿರೂಪಗೊಂಡು ಈ ಎಲ್ಲ ಭಾವನೆಗಳಾಗಿ ರೂಪಾಂತರಗೊಳ್ಳುತ್ತದೆ.  ಶ್ರದ್ಧೆ, ನಂಬಿಕೆ, ಧ್ಯಾನ ಮತ್ತು ಪ್ರಾರ್ಥನೆಗಳು ಭಯವನ್ನು ಪ್ರೇಮವನ್ನಾಗಿ ಪರಿವರ್ತಿಸುವ ಮಾರ್ಗಗಳಾಗಿವೆ.

ಭಯ ಉಂಟಾದಾಗ, ನೀವು ಆ ಭಯದ ಮಟ್ಟಕ್ಕೆ ಪ್ರೀತಿಸುವ ಸಾಮರ್ಥ್ಯವನ್ನೂ ಹೊಂದಿರುತ್ತೀರಿ ಎಂದು ತಿಳಿಯಿರಿ. ನೀವು ಪ್ರೇಮದಲ್ಲಿರುವಾಗ ಅಥವಾ ಪ್ರೇಮಪೂರ್ವಕವಾಗಿ ಬೆಳೆದಾಗ ನಿಮ್ಮ ಭಯ ಕಣ್ಮರೆಯಾಗುತ್ತದೆ. ಭಯವು ಬೇರೇನಲ್ಲ, ಅದು ಪ್ರೇಮದ ಇನ್ನೊಂದು ದಾರಿ. 

ಭಯದಿಂದಲೂ ಪ್ರಯೋಜನಗಳಿವೆ

ಸಾವಿನ ಭಯವು ಜೀವವನ್ನು ಉಳಿಸುತ್ತದೆ. ಕೆಡುಕಿನ ಭಯವು ಒಳಿತನ್ನು ಕಾಪಾಡುತ್ತದೆ. ರೋಗದ ಭಯವು ಶುಚಿತ್ವಕ್ಕೆ ಕಾರಣವಾಗುತ್ತದೆ.  ದುಃಖದ ಭಯವು ನಿಮ್ಮನ್ನು ಧರ್ಮಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಒಂದು ಮಗುವಿನಲ್ಲಿ ಇರುವ ಭಯವು ಅದು ಎಚ್ಚರಿಕೆಯಿಂದ ನಡೆಯುವಂತೆ ಮಾಡುತ್ತದೆ. ಜಗತ್ತು ಮುಂದುವರಿಯಲು ಸ್ವಲ್ಪ ಮಟ್ಟಿಗಿನ ಭಯದ ಅಗತ್ಯವೂ ಇರುತ್ತದೆ.

ಪ್ರಕೃತಿಯು ಎಲ್ಲಾ ಜೀವಿಗಳಲ್ಲಿ ಅಂತಸ್ಥವಾದ ಭಯವನ್ನು ಇರಿಸಿದೆ. ಈ ಭಯದಿಂದ ಜೀವವು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ, ಕಾಪಾಡಿಕೊಳ್ಳುತ್ತದೆ. ಆಹಾರದಲ್ಲಿ ಉಪ್ಪು ಇರುವ ಹಾಗೆ ಜನರು ಧಾರ್ಮಿಕರಾಗಿರಲು ಸ್ವಲ್ಪವಾದರೂ ಭಯ ಅತ್ಯಗತ್ಯ. ಯಾರನ್ನಾದರೂ ನೋಯಿಸಬಹುದೆಂಬ ಭಯವು ನಿಮ್ಮನ್ನು ಸಂವೇದನಾಶೀಲರನ್ನಾಗಿಸುತ್ತದೆ. ಸೋಲಿನ ಭಯವು ನಿಮ್ಮನ್ನು ಹೆಚ್ಚು ಚುರುಕಾಗಿ ಮತ್ತು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಭಯವು ಅಲಕ್ಷ್ಯದಿಂದ ಲಕ್ಷ್ಯದ ಕಡೆ ಕೊಂಡೊಯ್ಯುತ್ತದೆ. ಭಯವು ನಿಮ್ಮನ್ನು ಜಡತ್ವದಿಂದ ಕ್ರಿಯಾಶೀಲತೆಗೆ ಕೊಂಡೊಯ್ಯುತ್ತದೆ.

ಪ್ರಕೃತಿಯು ಎಲ್ಲಾ ಜೀವಿಗಳಲ್ಲಿ ಭಯವನ್ನು ಅಂತಸ್ಥವಾಗಿ ಇರಿಸಿದೆ. ಈ ಭಯವು ಜೀವವು ತನ್ನನ್ನು ತಾನು ರಕ್ಷಿಸಿಕೊಳ್ಳುವಂತೆ ಮಾಡುತ್ತದೆ. ಅದು ತನ್ನನ್ನು ತಾನು ಕಾಪಾಡಿಕೊಳ್ಳುವಂತೆ ಮಾಡುತ್ತದೆ.

– ಗುರುದೇವ ಶ್ರೀ ಶ್ರೀ ರವಿ‌ ಶಂಕರ್

ಭಯವಿಲ್ಲದಿರುವುದು ವಿನಾಶಕಾರಿ ಪ್ರವೃತ್ತಿಗಳಿಗೆ ಕಾರಣವಾಗಬಹುದು – ವಿರೂಪಗೊಂಡ ಅಹಂಕಾರಕ್ಕೆ ಭಯ ಎಂದರೇನೆಂದೇ ತಿಳಿದಿರುವುದಿಲ್ಲ. ಸಂಪೂರ್ಣ ವಿಕಸಿತ ಪ್ರಜ್ಞೆಗೂ ಭಯವಿರುವುದಿಲ್ಲ. ಅಹಂಕಾರವು ಭಯವನ್ನು ಲೆಕ್ಕಿಸದೆ ವಿಚ್ಛಿದ್ರಕಾರಕ ರೀತಿಯಲ್ಲಿ ಮುನ್ನಡೆಸುತ್ತದೆ, ಆದರೆ ಜ್ಞಾನಿಗಳು ಭಯವನ್ನು ಒಪ್ಪಿಕೊಂಡು ದೇವರಿಗೆ ಶರಣಾಗುತ್ತಾರೆ.

ನೀವು ಪ್ರೇಮದಲ್ಲಿರುವಾಗ, ನೀವು ಶರಣಾಗತರಾದಾಗ ಯಾವುದೇ ಭಯವಿರುವುದಿಲ್ಲ. ಅಹಂಕಾರಕ್ಕೂ ಯಾವ ಭಯವಿರುವುದಿಲ್ಲ. ಆದರೆ ಈ ಎರಡು ನಿರ್ಭೀತ ಸ್ಥಿತಿಗಳ ನಡುವೆ ಸ್ವರ್ಗ ಮತ್ತು ಭೂಮಿಗಳ ವ್ಯತ್ಯಾಸವಿದೆ. ಭಯವು ನಿಮ್ಮ ಸನ್ನಡತೆಗೆ ಕಾರಣವಾಗುತ್ತದೆ. ಭಯವು ನಿಮ್ಮನ್ನು ಶರಣಾಗತಿಯ  ಕಡೆ ಕೊಂಡೊಯ್ಯುತ್ತದೆ.  ಭಯವು ನಿಮ್ಮನ್ನು ಧರ್ಮಮಾರ್ಗದಲ್ಲಿ ಮುನ್ನಡೆಸುತ್ತದೆ; ಅದು ನಿಮ್ಮನ್ನು ವಿನಾಶಕಾರಿಯಾಗದಂತೆ ಮಾಡುತ್ತದೆ. ಭಯದಿಂದಾಗಿ ಭೂಮಿಯ ಮೇಲೆ ಶಾಂತಿ ಮತ್ತು ಕಾನೂನಿನ ವ್ಯವಸ್ಥೆ  ಉಳಿಯುತ್ತದೆ. ಅದೇ ತಾನೇ ಹುಟ್ಟಿದ ಮಗುವಿಗೆ ಯಾವುದೇ ಭಯವಿರುವುದಿಲ್ಲ. ಅದು ಸಂಪೂರ್ಣವಾಗಿ ತನ್ನ ತಾಯಿಯನ್ನು ಅವಲಂಬಿಸಿರುತ್ತದೆ.  ಮಗುವಿರಲಿ, ಬೆಕ್ಕಿನಮರಿಯಿರಲಿ ಅಥವಾ ಪಕ್ಷಿಯಿರಲಿ, ಸ್ವತಂತ್ರವಾಗಲು ತೊಡಗಿದಾಗ ಭಯವನ್ನು ಅನುಭವಿಸುತ್ತವೆ. ಈ ಭಯವು ಅವುಗಳನ್ನು ತಾಯಂದಿರ ಬಳಿಗೆ ಓಡುವಂತೆ ಮಾಡುತ್ತದೆ. ಜೀವರಕ್ಷಣೆಯ ಉದ್ದೇಶಕ್ಕಾಗಿ ಪ್ರಕೃತಿಯು ನಮ್ಮೊಳಗೆ ಭಯವನ್ನು ಸ್ಥಾಯಿಯಾಗಿ ಇರಿಸಿದೆ.  ಹೀಗಾಗಿ, ಭಯದ ಉದ್ದೇಶವು ನಿಮ್ಮನ್ನು ಮೂಲಕ್ಕೆ ಮರಳಿ ತರುವುದೇ ಆಗಿದೆ.

ನಮ್ಮನ್ನು ಕಾಡುವ ಹತ್ತು ಭಯಗಳು

  1. ನಿರಾಕರಣೆಯ ಭಯ
  2. ಹಂಗಿನ ಭಯ
  3. ಜವಾಬ್ದಾರಿಯ ಭಯ
  4. ಅಜ್ಞಾತದ ಭಯ
  5. ಸೋಲಿನ ಭಯ
  6. ತೊರೆಯುವ ಭಯ
  7. ಸತ್ಯವನ್ನು ಎದುರಿಸುವ ಭಯ
  8. ಬೇರಾಗುವ ಭಯ
  9. ಟೀಕೆ ಮತ್ತು ಅವಮಾನದ ಭಯ
  10. ಅಗತ್ಯಕ್ಕೆ ಸಾಲದು ಎಂಬ ಭಯ

ಸೇವೆ ಮತ್ತು ಏಕತೆಯ ಚುಚ್ಚುಮದ್ದು

ಭಯಕ್ಕೆ ಪರಿಹಾರವೆಂದರೆ ಪ್ರೇಮ ಮತ್ತು ಸೇವೆ. ನೀವು ಯಾವುದಾದರೂ ಸೇವೆಯಲ್ಲಿ ನಿರತರಾಗಿದ್ದಾಗ ಯೋಚಿಸಲು ಸಮಯವಾದರೂ ಎಲ್ಲಿರುತ್ತದೆ? ಭಯ, ದ್ವೇಷ ಅಥವಾ ಪ್ರೇಮವಾಗಿ ಪ್ರಕಟವಾಗುವುದು ಒಂದೇ ಶಕ್ತಿ. ನೀವು ಶಕ್ತಿಯನ್ನು ಪ್ರೇಮದ ಕಡೆ ತಿರುಗಿಸಿದರೆ ಅದು ಭಯ ಅಥವಾ ದ್ವೇಷವಾಗಿ ಪ್ರಕಟವಾಗುವುದಿಲ್ಲ. ಆದುದರಿಂದ, ನಿಸ್ವಾರ್ಥ ಸೇವೆಯಲ್ಲಿ ಸದಾ ಕ್ರಿಯಾಶೀಲರಾಗಿರುವುದರಿಂದ ಒಳಿತಾಗುತ್ತದೆ.

ಬೇರೆಯಾಗುವ ಯೋಚನೆಯು ಭಯ ಉಂಟುಮಾಡುತ್ತದೆ. ಏಕತೆಯಿಂದಿದ್ದರೆ, ಭಯವಿರುವುದಿಲ್ಲ.

– ಗುರುದೇವ ಶ್ರೀ ಶ್ರೀ ರವಿ‌ ಶಂಕರ್

ನೀವು ಅನಂತ ಶಕ್ತಿಯೊಂದಕ್ಕೆ ಸಂಬಂಧಿಸಿದವರು ಎಂಬುದನ್ನು  ತಿಳಿಯದಿದ್ದಾಗ ಭಯ ಹುಟ್ಟಿಕೊಳ್ಳುತ್ತದೆ. “ನಾನು ಅನಂತತೆಯ ಭಾಗ” ಎಂಬುದನ್ನು ಮರೆತಾಗ, ಭಯ ಉಂಟಾಗುತ್ತದೆ.

ನೀವು ಸಾಗರಕ್ಕೆ ಭಾಗವಾಗಿರುವುದರಿಂದಲೇ ಯಾವಾಗಲೂ ಅಸ್ತಿತ್ವದಲ್ಲಿರುತ್ತೀರಿ. ಒಂದು ಹನಿ ಸಾಗರದಿಂದ ಪ್ರತ್ಯೇಕವಾಗಿದ್ದಾಗ ತಾನು ಏಕಾಂಗಿ ಎಂದು ಭಾವಿಸುವುದರಿಂದ ಅದು ಹೆದರುತ್ತದೆ. ಆದರೆ ಅದೇ ಹನಿ ಸಾಗರದಲ್ಲಿದ್ದಾಗ ಅದಕ್ಕೆ ಯಾವ ಭಯವೂ ಇರುವುದಿಲ್ಲ. ಅದು ಸಾಗರದಲ್ಲಿರುವುದರಿಂದ ಅದು ಎಂದಿಗೂ ನಾಶವಾಗುವುದಿಲ್ಲ.

ಬೇರೆಯಾಗುವುದು ಭಯವನ್ನು ತರುತ್ತದೆ. ಏಕತೆ ಇದ್ದರೆ ಭಯವಿರುವುದಿಲ್ಲ. ಹಾಗಾದರೆ ಭಯದಿಂದ ಮುಕ್ತಿ ಹೇಗೆ? ಏಕತೆಯನ್ನು ಸ್ಮರಿಸುವ ಮೂಲಕ ಭಯದಿಂದ ಮುಕ್ತರಾಗಬಹುದು.

    Wait!

    Don’t miss this Once-In-A-lifetime opportunity to join the Global Happiness Program with Gurudev!

    Have questions? Let us call you back

     
    *
    *
    *
    *
    *