ಮೂಲತಃ ಪ್ರತಿಯೊಬ್ಬ ಮನುಷ್ಯನೂ ದೈವತ್ವದ ಕಿಡಿ, ಆದುದರಿಂದ ಅವರು ಕೆಟ್ಟವರಾಗುವುದು ಸಾಧ್ಯವಿಲ್ಲ ಎಂದು ತಿಳಿದಿರುವವನು ಸಾಧಕ. ದೇವರು ಯಾವ ಕೆಟ್ಟ ವ್ಯಕ್ತಿಯನ್ನೂ ಸೃಷ್ಟಿಸುವುದಿಲ್ಲ. ಪ್ರತಿಯೊಬ್ಬರಲ್ಲೂ ಅವನ ಪ್ರಕಾಶವಿರುತ್ತದೆ””

ಜನರ ಒಳ್ಳೆಯತನದಲ್ಲಿ ನಿಮಗೆ ನಂಬಿಕೆಯಿದೆಯೆ?

ಪ್ರಪಂಚದಲ್ಲಿ ಮೂಲತಃ ಎರಡು ರೀತಿಯ ನಡವಳಿಕೆಗಳನ್ನು ಅಥವಾ ಎರಡು ರೀತಿಯ ಜನರನ್ನು ನಾವು ನೋಡಬಹುದು:

  1. ಎಲ್ಲಾ ಜನರು  ಕೆಟ್ಟವರು ಎಂದು ಭಾವಿಸುವವರು.
  2. ಪ್ರತಿಯೊಬ್ಬರೂ ತಮ್ಮ ತಮ್ಮ ಆಂತರ್ಯದಲ್ಲಿ ಒಳ್ಳೆಯವರೇ, ನಡವಳಿಕೆಯಲ್ಲಿ ಸ್ವಲ್ಪ ಕೆಟ್ಟವರಂತೆ ಕಾಣಿಸಿದರೂ ಆ ಕೆಟ್ಟ ನಡವಳಿಕೆ ತೋರಿಕೆಯ ಮಟ್ಟದಲ್ಲಿ ಮಾತ್ರ ಎಂದು ಭಾವಿಸುವವರು. 

ಮೊದಲನೆಯ ವರ್ಗದ ಜನರು ಯಾರನ್ನೂ ನಂಬುವುದಿಲ್ಲ. ಎರಡನೆಯ ವರ್ಗದ ಜನರು ಯಾರನ್ನೂ ಅತಿಯಾಗಿ ಸಂಶಯಿಸುವುದಿಲ್ಲ. ಈ ವ್ಯತ್ಯಾಸವನ್ನು ನೀವು ಗಮನಿಸಿರಬಹುದು. ಆಂತರ್ಯದಲ್ಲಿ ಎಲ್ಲರೂ ಒಳ್ಳೆಯವರು ಎಂದು ನೀವು ತಿಳಿದುಕೊಂಡರೆ ನಿಮ್ಮ ಅನುಮಾನಗಳು ಮೇಲ್ನೋಟದಲ್ಲಿ ಮಾತ್ರವಿರುತ್ತದೆ. ಪ್ರತಿಯೊಬ್ಬರ ಒಳ್ಳೆಯತನದಲ್ಲಿ ನಿಮಗೆ ನಂಬಿಕೆಯಿರುವುದರಿಂದ ನೀವು ಯಾರನ್ನೂ ಸಂಪೂರ್ಣವಾಗಿ ಅನುಮಾನಿಸುವುದಿಲ್ಲ,
ಎರಡನೆಯ ವರ್ಗದ ಜನರು ವಿಶ್ವಾಸದ ಸಮಸ್ಯೆಯನ್ನು ಎದುರಿಸುತ್ತಾರೆ. ಅವರು ಎಲ್ಲ ವ್ಯಕ್ತಿಗಳೂ ಮೂಲತಃ ಕೆಟ್ಟವರು ಎಂದು ಭಾವಿಸುತ್ತಾರೆ. ಮೇಲ್ನೋಟಕ್ಕೆ ಅವರೆಲ್ಲ ಒಳ್ಳೆಯವರಂತೆ ಕಂಡುಬಂದರೂ ಅವರು ಆಂತರ್ಯದಿಂದ ಒಳ್ಳೆಯರಾಗಿರುವುದಿಲ್ಲ ಎಂದು ಅವರು ತಿಳಿಯುತ್ತಾರೆ. ನಿಮ್ಮ ಈ ನಡವಳಿಕೆ, ನಿಮ್ಮ ಮನಸ್ಸಿನ ಈ ಕಲ್ಪನೆಯು ನೀವು ಯಾರನ್ನೂ ನಂಬದಿರುವಂತೆ ಮಾಡುತ್ತದೆ.

ನಕಾರಾತ್ಮಕತೆಯು ಮೇಲ್ಪದರಲ್ಲಿ ಮಾತ್ರ ಇರುತ್ತದೆ ಎಂಬುದನ್ನು ಗ್ರಹಿಸುವುದು ವಿವೇಕ.

ಒಬ್ಬ ವ್ಯಕ್ತಿಯಲ್ಲಿ ಏನಾದರೂ ತಪ್ಪು ಕಾಣಿಸಿದರೆ ಆ ವ್ಯಕ್ತಿಯ ನಿಜಸ್ವಭಾವವೇ ಅದು ಎಂದು ನೀವು ತಿಳಿಯುವುದು ಕುತೂಹಲದ ವಿಷಯ.

ನಾನು ನಿಮ್ಮೊಡನೆ ಒಂದು ಘಟನೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಕಳೆದ ವರ್ಷ, ನಾವು ಉತ್ತರಭಾರತದ ನಗರವೊಂದರಲ್ಲಿ ಏರ್ಪಾಡಾಗಿದ್ದ ಬೃಹತ್‌ ಸತ್ಸಂಗದಲ್ಲಿ ಭಾಗವಹಿಸಲು ತೆರಳಿದ್ದೆವು. ಸತ್ಸಂಗ ನಡೆಯುತ್ತಿದ್ದಾಗ ಒಬ್ಬ ಕುಖ್ಯಾತ ವ್ಯಕ್ತಿಯು ವೇದಿಕೆಯನ್ನೇರಿ ಅತ್ತಿತ್ತ ಠಳಾಯಿಸಲು ಪ್ರಾರಂಭಿಸಿದ. ಅಲ್ಲಿ ನೆರೆದಿದ್ದ ಎಲ್ಲಾ ಪತ್ರಕರ್ತರು, ಸಾಮಾನ್ಯ ಜನರು “ಈ ವ್ಯಕ್ತಿ ಒಬ್ಬ ಕ್ರಿಮಿನಲ್‌, ಇವನು ಗುರುದೇವರ ಹತ್ತಿರ ಬರಲು ಸಾಧ್ಯವಾಗಿದ್ದಾದರೂ ಹೇಗೆ? ಅವನು ಗುರುದೇವರ ಪಕ್ಕದಲ್ಲಿ ನಿಂತಿರುವುದು ಹೇಗೆ?”

ಎಂದು ಮಾತನಾಡಿಕೊಳ್ಳತೊಡಗಿದರು.  “ನಾನು ಒಂದು ಕರೆಮಾಡಿ ಯಾವ ವಿಮಾನವನ್ನಾದರೂ ನಿಲ್ಲಿಸಬಲ್ಲೆ”
ಎಂದು ಹೇಳುವ ಆತ ಅಷ್ಟು ಕುಖ್ಯಾತನಾಗಿದ್ದ. ಯಾವುದೇ ಟ್ಯಾಕ್ಸಿಯ ಚಾಲಕನನ್ನು ಇಳಿಸಿ ಆ ಟ್ಯಾಕ್ಸಿಯನ್ನು ತೆಗೆದುಕೊಂಡು ಹೋಗುತ್ತಿದ್ದ. ಅವನ ಅಪರಾಧಗಳ ಪಟ್ಟಿ ಸಾಕಷ್ಟು ದೊಡ್ಡದಿತ್ತು. ಅಂತಹ ವ್ಯಕ್ತಿ ವೇದಿಕೆಯ ಮೇಲೆ ಬಂದಾಗ ಎಲ್ಲರೂ “ಗುರುದೇವರು ಈ ವ್ಯಕ್ತಿಯನ್ನು ತಮ್ಮ ಬಳಿ ಬರಲು ಹೇಗೆ ಒಪ್ಪಿಗೆ ಕೊಟ್ಟರು?” ಎಂದು ಅಚ್ಚರಿ ಪಡುತ್ತಿದ್ದರು.

ಆ ವ್ಯಕ್ತಿ ಯಾವುದೇ ಕೋರ್ಸ್‌ ಮಾಡಿರಲಿಲ್ಲ. ಅಥವಾ ಆಶ್ರಮದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿರಲಿಲ್ಲ. ಆದರೂ ಮೂರು ತಿಂಗಳ ನಂತರ ಶಿವರಾತ್ರಿಯ ದಿನದಂದು ಅವನು ನಮ್ಮನ್ನು ಭೇಟಿಯಾಗಲು ಬೆಂಗಳೂರಿನ ಆಶ್ರಮಕ್ಕೆ ಬಂದ. ಆತ ತನ್ನ ಜೇಬಿನಿಂದ ನಮ್ಮ ಚಿತ್ರವನ್ನು ಹೊರಗೆ ತೆಗೆಯುತ್ತ “ಗುರುದೇವರೇ, ನಾನು ಈ ಚಿತ್ರವನ್ನು ನನ್ನ ಜೇಬಿನಲ್ಲಿ ಇಟ್ಟುಕೊಳ್ಳಲು ಪ್ರಾರಂಭಿಸಿದ ದಿನದಿಂದ ನನಗೆ ನನ್ನ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ನೀವು ಏನು ಮಾಡಿದಿರಿ? ನನ್ನ ಬದುಕು ತಲೆಕೆಳಗಾಗಿದೆ. ನನ್ನ ಇಡೀ ಬದುಕೇ ಬದಲಾಗಿ ಹೋಗಿದೆ. ಇಲ್ಲಿ ಇಷ್ಟೊಂದು ಆನಂದವಿದೆ; ನಾನು ಈ ಆನಂದವನ್ನು ನನ್ನ ರಾಜ್ಯಕ್ಕೆ ಕೊಂಡೊಯ್ದು ನಮ್ಮವರಿಗೆಲ್ಲ ಹಂಚಲು ಬಯಸುತ್ತೇನೆ” ಎಂದು ಹೇಳಿದ.

ಈ ಮೊದಲು, “ಅತ್ಯಂತ ಕುಖ್ಯಾತ ವ್ಯಕ್ತಿ, ಸಮಾಜ ಕಂಟಕ” ಎಂದು ಎಲ್ಲರೂ ಭಾವಿಸಿದ್ದ ವ್ಯಕ್ತಿಯೇ ಈತ. ಸಾಮಾನ್ಯವಾಗಿ ಯಾರಿಗೂ ಹೆದರದ ಪತ್ರಕರ್ತರೂ ಅವನಿಗೆ ಹೆದರುತ್ತಿದ್ದರು. ಈತ ಅಪಾಯಕಾರಿ ಎಂದು ಅವರೂ ಹೇಳುತ್ತಿದ್ದರು.

ಈ ಜಗತ್ತು ನಿಮ್ಮ ದೃಷ್ಟಿಗೆ ಅನುಸಾರವಾಗಿದೆ.

ನಾವು ಜನರನ್ನು ಹೇಗೆ ನೋಡುತ್ತೇವೋ, ಜಗತ್ತು ಅದರಂತೆಯೇ ಪರಿಣಮಿಸುತ್ತದೆ. ಸಂಸ್ಕೃತದಲ್ಲಿ ʼಯಥಾ ದೃಷ್ಟಿ ತಥಾ ಸೃಷ್ಟಿʼ ಎಂಬ ಮಾತಿದೆ. ನೀವು ಜಗತ್ತನ್ನು ಹೇಗೆ ನೋಡುತ್ತೀರೋ ಜಗತ್ತು ಅದರಂತೆಯೇ ಪರಿಣಮಿಸುತ್ತದೆ. ಜಗತ್ತು ಅಪಾಯಕಾರಿ ಜನರಿಂದ ತುಂಬಿಕೊಂಡಿದೆ ಎಂದು ನೀವು ಭಾವಿಸಿಕೊಂಡರೆ ಅದೇ ರೀತಿಯ ಅನುಭವಗಳು ನಿಮಗುಂಟಾಗುತ್ತವೆ. ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರು ಎಂದು ಬಾವಿಸಿಕೊಂಡರೆ ಒಬ್ಬ ಕುಖ್ಯಾತ ಅಪರಾಧಿಯ ಒಳಗೂ ಒಳ್ಳೆಯತನವಿರುವುದನ್ನು ನೀವು ನೋಡುತ್ತೀರಿ.

ಆದುದರಿಂದ ಜನರ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ, ಅವರಿಗೆ ಒಳ್ಳೆಯವರು, ಕೆಟ್ಟವರು ಎಂಬ ಹಣೆಪಟ್ಟಿ ಅಂಟಿಸಬೇಡಿ. ದೇವನೊಬ್ಬನೇ, ಅವನು ಅನೇಕ ರೀತಿಯಲ್ಲಿ, ಅನೇಕ ವ್ಯಕ್ತಿಗಳಲ್ಲಿ, ಅನೇಕ ಲಹರಿಗಳಲ್ಲಿ, ಅನೇಕ ಬಣ್ಣಗಳಲ್ಲಿ ಪ್ರಕಟವಾಗುತ್ತಾನೆ. ಅದು ಒಂದೇ ಪ್ರಕಾಶ. ಇದನ್ನು ನಾವು ತಿಳಿದುಕೊಳ್ಳುವುದು ಸಾಧ್ಯವಾದರೆ ನಮ್ಮ ಹೃದಯದಲ್ಲಿ ಗಾಢವಾದ ನೆಮ್ಮದಿ ನೆಲೆಸುತ್ತದೆ. ಯಾವುದರಿಂದಲೂ ನಾವು ವಿಚಲಿತರಾಗದಂತೆ ತಡೆಯುವ ನಂಬಿಕೆ ಮತ್ತು ವಿಶ್ವಾಸ ನಮ್ಮಲ್ಲಿ ಉಂಟಾಗುತ್ತದೆ.

ಪ್ರತಿಯೊಬ್ಬರಲ್ಲಿಯೂ ಪ್ರಕಾಶವಿರುತ್ತದೆ

ಪ್ರತಿಯೊಬ್ಬ ವ್ಯಕ್ತಿಯೂ ದೇವರ ಒಂದಂಶವೇ ಅಗಿರುವುದರಿಂದ ಯಾರೂ ಕೆಟ್ಟವರಾಗಿರುವುದು ಸಾಧ್ಯವಿಲ್ಲ  ಎಂದು ತಿಳಿಯುವವನೇ ಸಾಧಕ. ದೇವರು ಯಾವ ಕೆಟ್ಟ ಮನುಷ್ಯನನ್ನೂ ಸೃಷ್ಟಿಸಿರುವುದಿಲ್ಲ. ಕೆಟ್ಟವರು ಯಾರೂ ಇಲ್ಲ, ಪ್ರತಿಯೊಬ್ಬರಲ್ಲೂ ಅವನದೇ ಪ್ರಕಾಶವಿದೆ, ಕೆಲವರಲ್ಲಿ ಅದು ಸುಪ್ತವಾಗಿರುತ್ತದೆ, ಕೆಲವರಲ್ಲಿ ಗುಪ್ತವಾಗಿರುತ್ತದೆ, ಇನ್ನು ಕೆಲವರಲ್ಲಿ ಇದು ಹೆಚ್ಚು ಕ್ರಿಯಾಶಾಲಿಯಾಗಿರುತ್ತದೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. 

ಇವು ಎರಡು ದಾರಿಗಳು. ನಿಮ್ಮ ಮನಸ್ಸು ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ಗಮನಿಸಿ. ನೀವು ವಿಶ್ವಾಸದ ದಾರಿಯನ್ನು ಹಿಡಿದಿದ್ದೀರಾ? ಅಥವಾ ಸಂದೇಹದ ದಾರಿಯನ್ನೇ? ನೀವು ಇತರರನ್ನು ಅಥವಾ ನಿಮ್ಮನ್ನೇ ಇಷ್ಟಪಡದಿರುವ ದಾರಿಯಲ್ಲಿ ಸಾಗುತ್ತಿದ್ದರೆ “ಪ್ರತಿಯೊಬ್ಬರೂ ಆಂತರ್ಯದಿಂದ ಒಳ್ಳೆಯವರೇ” ಎಂದು ತಿಳಿಯುವ ಮೂಲಕ ಬದಲಾವಣೆ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ.

    Wait!

    Don’t miss this Once-In-A-lifetime opportunity to join the Global Happiness Program with Gurudev!

    Have questions? Let us call you back

     
    *
    *
    *
    *
    *