ಕರ್ಮ ಎಂದರೇನು?
ಇದು ನಾವು ಸಾಮಾನ್ಯವಾಗಿ ಬಳಸುವ ಶಬ್ದವಾದರೂ ಇದನ್ನು ಅಪಾರ್ಥಮಾಡಿಕೊಳ್ಳುವುದೇ ಹೆಚ್ಚು. ಅನೇಕರು ಕರ್ಮವನ್ನು ಬಂಧನ ಅಥವಾ ಹಣೆಬರಹ ಎಂದು ತಿಳಿಯುತ್ತಾರೆ. ಆದರೆ ಕರ್ಮ ಎಂಬ ಸಂಸ್ಕೃತ ಶಬ್ದಕ್ಕೆ ಕ್ರಿಯೆ ಎಂಬುದಷ್ಟೇ ಸರಳವಾದ ಅರ್.
ಕ್ರಿಯೆಯು ಅಂತರಂಗದ ಭಾವನೆಯಾಗಿ ಸುಪ್ತವಾಗಿರಬಹುದು. ಅದು ಈಗ ನಡೆಯುತ್ತಿರುವ ಕ್ರಿಯೆಯೂ ಆಗಿರಬಹುದು. ಈಗ ನಡೆಯುತ್ತಿರುವ ಕ್ರಿಯೆಯ ಪರಿಣಾಮವಾಗಿ ಭವಿಷ್ಯದಲ್ಲಿಯೂ ಕ್ರಿಯೆ ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗೆ ಮೂರು ಬಗೆಯ ಕರ್ಮಗಳಿರುತ್ತವೆ.
ನಿಮ್ಮ ಅಂತರಂಗದಲ್ಲಿ ಸೃಷ್ಟಿಸುವ ಬಯಕೆ ಉಂಟಾದಾಗ ಆ ಬಯಕೆಯೂ ಕರ್ಮ. ಇದನ್ನು ಸೂಕ್ಷ್ಮಕರ್ಮ ಎನ್ನುತ್ತಾರೆ. ನಿಮ್ಮ ಮನಸ್ಸಿನಲ್ಲಿ ಬಯಕೆ ಹುಟ್ಟಿದ ಕ್ಷಣದಲ್ಲಿ, ಉದಾಹರಣೆಗೆ ಒಂದು ಮನೆಯನ್ನು ಕಟ್ಟಿಸುವ ಬಯಕೆ ಎಂದಿಟ್ಟುಕೊಳ್ಳಿ, ಆಗಲೇ ಕ್ರಿಯೆ ಪ್ರಾರಂಭವಾಗಿರುತ್ತದೆ. ವಾಸ್ತುಶಿಲ್ಪಿಯು ಮನೆಯ ನೀಲನಕ್ಷೆಯನ್ನು ತಯಾರಿಸಿದಾಗಲೇ ಒಂದರ್ಥದಲ್ಲಿ ಮನೆಯ ನಿರ್ಮಾಣ ಆಗಿರುತ್ತದೆ.
ನಂತರ ಸ್ಥೂಲಕರ್ಮ. ಇದು ಭೌತಿಕ ನೆಲೆಯಲ್ಲಿ ನಡೆಯುವ ಕ್ರಿಯೆ. ಕಲ್ಲು, ಇಟ್ಟಿಗೆ, ಗಾರೆ ಮುಂತಾದ ಮನೆ ಕಟ್ಟಲು ಬಳಸುವ ಸಾಮಗ್ರಿಗಳನ್ನು ಸಂಗ್ರಹಿಸಲು ತೊಡಗುತ್ತೇವೆ. ಹೀಗೆ ಪಂಚೇಂದ್ರಿಯಗಳಿಗೆ ಅತೀತವಾದ ನೆಲೆಯಲ್ಲಿ ಹುಟ್ಟುವ ಸೂಕ್ಷ್ಮ ಭಾವನೆ ಅಥವಾ ಬಯಕೆಗಳೂ ಕರ್ಮ; ಅದರ ಜೊತೆಗೆ ಪಂಚೇಂದ್ರಿಯಗಳ ನೆಲೆಯಲ್ಲಿ ನಡೆಯುವ ಕ್ರಿಯೆಯೂ ಕರ್ಮವೇ. ನಿಮ್ಮ ಕ್ರಿಯೆಗಳ ಕಾರಣದಿಂದ ಮೂಡುವ ಚಿತ್ರಗಳು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದು ಅದೂ ಒಂದು ಕರ್ಮವಾಗುತ್ತದೆ. ಈ ಕರ್ಮವನ್ನೂ ಅನುಭವಿಸಬೇಕಾಗುತ್ತದೆ.
ನೀವು ಈಗ ಮಾಡುತ್ತಿರುವ ಕ್ರಿಯೆಯು ನಿಮ್ಮ ಮನಸ್ಸಿನಲ್ಲಿ ಚಿತ್ರವನ್ನು ಮೂಡಿಸುತ್ತದೆ. ಇಂತಹ ಚಿತ್ರಗಳು ಮುಂದೆ ಅದೇ ರೀತಿಯ ಕ್ರಿಯೆಗಳಿಗೆ ಕಾರಣವಾಗಬಹುದು.
ಒಳ್ಳೆಯವರ ಜೀವನದಲ್ಲೂ ಕೆಟ್ಟದ್ದು ಏಕೆ ಉಂಟಾಗುತ್ತದೆ?
ನಾವು ನಮ್ಮೊಂದಿಗೆ ಹೊತ್ತು ತಂದದ್ದು ಸಂಚಿತ ಕರ್ಮ. ಈಗ ಫಲ ನೀಡುತ್ತಿರುವ ಕರ್ಮಗಳು ಪ್ರಾರಬ್ಧ ಕರ್ಮ. ಮುಂದೆ ನಾವು ಗಳಿಸುವುದು ಆಗಾಮಿ ಕರ್ಮ. ನಮ್ಮ ಸಂಚಿತ ಕರ್ಮವನ್ನು ನಿವಾರಿಸಿಕೊಳ್ಳಬಹುದು. ಆಧ್ಯಾತ್ಮಿಕ ಅಭ್ಯಾಸಗಳು, ಪ್ರಾರ್ಥನೆ, ಸೇವೆ, ನಮ್ಮ ಆಸುಪಾಸಿನ ಜನರನ್ನು ಮತ್ತು ಪ್ರಕೃತಿಯನ್ನು ಪ್ರೀತಿಸುವುದು ಮತ್ತು ಧ್ಯಾನ ಇವೆಲ್ಲವೂ ಸಂಚಿತ ಕರ್ಮವನ್ನು ಅಳಿಸುವ ಸಾಧನಗಳು.
ಒಳ್ಳೆಯವರಿಗೂ ಏಕೆ ಕೆಡುಕಾಗುತ್ತದೆ ಎಂದು ಕೆಲವರು ಕೇಳುತ್ತಾರೆ. ನೀವು ಈಗ ಒಳ್ಳೆಯವರಿರಬಹುದು; ಆದರೆ ಹಿಂದೆ ನೀವು ಏನು ಮಾಡಿದ್ದೀರಿ ಎಂಬುದು ನಿಮಗೆ ತಿಳಿದಿರುವುದಿಲ್ಲ.
– ಗುರುದೇವ ಶ್ರೀ ಶ್ರೀ ರವಿ ಶಂಕರ್
ಈಗಾಗಲೇ ಫಲ ನೀಡುತ್ತಿರುವ ಪ್ರಾರಬ್ಧ ಕರ್ಮವನ್ನು ಅನುಭವಿಸಲೇಬೇಕು. ನೀವು ಓಡುತ್ತಿರುವ ಕಾರಿನಲ್ಲಿ ಕುಳಿತಿದ್ದೀರಿ. ನೀವು ಹೆದ್ದಾರಿಯಲ್ಲಿ ಸಾಗುವಾಗ ರಸ್ತೆಯಿಂದ ಹೊರಗೆ ಹೋಗುವ ದಾರಿಯನ್ನು ಒಮ್ಮೆ ತಪ್ಪಿಸಿಕೊಂಡರೆ ಮುಂದಿನ ಹೊರದಾರಿ ಸಿಗುವವರೆಗೂ ಹೋಗಲೇಬೇಕಾಗುತ್ತದೆ. ಆದರೆ ನೀವು ಪಥ ಬದಲಾವಣೆ ಮಾಡಬಹುದು. ನೀವು ವೇಗದ ಪಥದಲ್ಲಿ ಅಥವಾ ನಿಧಾನ ಗತಿಯ ಪಥದಲ್ಲಿ ಚಲಿಸಬಹುದು. ಅಷ್ಟರ ಮಟ್ಟಿಗೆ ನಿಮಗೆ ಸ್ವಾತಂತ್ರ್ಯವಿದೆ ಅಥವಾ ಇನ್ನೊಂದು ಅರ್ಥದಲ್ಲಿ ನಿಮಗೆ ಸ್ವಾತಂತ್ರ್ಯವಿಲ್ಲ.
ನಾವು ಮುಂದೆ ಉಂಟು ಮಾಡಿಕೊಳ್ಳುವುದು ಆಗಾಮಿ ಕರ್ಮ. ನೀವು ಪ್ರಕೃತಿಯ ನಿಯಮಗಳನ್ನು ಇಂದು ಉಲ್ಲಂಘಿಸಿದರೆ ಅದರ ಪರಿಣಾಮಗಳನ್ನು ಮುಂದೆ ಅನುಭವಿಸಬೇಕಾಗುತ್ತದೆ. ಈಗ ನೀವು ಏನನ್ನಾದರೂ ಮಾಡಿದರೆ ಅದರ ಪರಿಣಾಮಗಳನ್ನು ಮುಂದೆ ಅನುಭವಿಸಬೇಕಾಗುತ್ತದೆ ಎಂದು ನಿಮಗೆ ತಿಳಿದಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಮಾಡುವ ಮುಂದಿನ ಅಥವಾ ಆಗಾಮಿ ಕರ್ಮದ ಪರಿಣಾಮಗಳನ್ನು ಕೂಡ ನಾವು ಅನುಭವಿಸಲೇಬೇಕಾಗುತ್ತದೆ.
ಒಳ್ಳೆಯವರಿಗೂ ಏಕೆ ಕೆಡುಕಾಗುತ್ತದೆ ಎಂದು ಕೆಲವರು ಕೇಳುತ್ತಾರೆ. ನೀವು ಈಗ ಒಳ್ಳೆಯವರಿರಬಹುದು; ಆದರೆ ಹಿಂದೆ ನೀವು ಏನು ಮಾಡಿದ್ದೀರಿ ಎಂಬುದು ನಿಮಗೆ ತಿಳಿದಿರುವುದಿಲ್ಲ. ಬಿತ್ತಿದಂತೆ ಬೆಳೆ. ಆದರೆ, ಪ್ರತಿಯೊಂದು ಕರ್ಮಫಲದ ಅವಧಿಗೆ ಮಿತಿಯಿರುತ್ತದೆ.
ಕರ್ಮವನ್ನು ಅಳಿಸುವುದು ಹೇಗೆ?
ಹಿಂದಿನ ಜನ್ಮಗಳಲ್ಲಿ ನಾವು ಮಾಡಿದ ಸಂಚಿತ ಕರ್ಮಗಳಿಂದ ಈ ಜನ್ಮದ ಐದು ಪ್ರಮುಖ ವಿಷಯಗಳ ನಿರ್ಧಾರವಾಗುತ್ತದೆ. ನಿಮ್ಮ ಹುಟ್ಟು, ಹುಟ್ಟುವ ಸ್ಥಳ, ನಿಮ್ಮ ತಂದೆ ತಾಯಿಗಳು ನಿಮ್ಮ ಹಿಂದಿನ ಕರ್ಮದ ಫಲ. ನಿಮ್ಮ ವಿದ್ಯಾಭ್ಯಾಸ, ವಿದ್ಯಾಭ್ಯಾಸದ ವಿಷಯ, ವಿದ್ಯಾಭ್ಯಾಸದ ಮಟ್ಟ, ಮತ್ತು ನೀವು ಎಷ್ಟು ಜ್ಞಾನವನ್ನು ಗಳಿಸುತ್ತೀರಿ ಎಂಬುದೂ ಸಂಚಿತಕರ್ಮದಿಂದ ಸಂಭವಿಸುತ್ತದೆ. ಸಂಪತ್ತು, ಸಂಪತ್ತಿನ ಮೂಲಗಳು ಹಾಗೂ ಅಂತಿಮವಾಗಿ ನಿಮ್ಮ ಆಯುಸ್ಸು ಮತ್ತು ಮರಣದ ರೀತಿ ಈ ಐದು ವಿಷಯಗಳು ಸಂಚಿತ ಕರ್ಮದ ಫಲಗಳು.
ನಾವು ಎಷ್ಟು ಶ್ರೀಮಂತರಾಗುತ್ತೇವೆ, ನಮ್ಮ ಜ್ಞಾನದ ಬೆಳವಣಿಗೆ ಎಷ್ಟು, ನಮ್ಮ ಮದುವೆ, ಮಕ್ಕಳು ಮತ್ತು ಸಾಮಾಜಿಕ ಕಾರ್ಯ ಇವೆಲ್ಲವೂ ಪ್ರಾರಬ್ಧ ಕರ್ಮಗಳು. ಇವೆಲ್ಲವನ್ನು ಸಾಧಿಸಲು ನೀವು ಅನುಸರಿಸಿದ ಮಾರ್ಗವು ಆಗಾಮಿ ಕರ್ಮವನ್ನು ಉಂಟುಮಾಡುತ್ತದೆ. ಆದುದರಿಂದ ಈಗ ಸೂಕ್ತ ಕ್ರಿಯೆಗಳ ಮೂಲಕ ಹೆಚ್ಚಿನ ಕರ್ಮಗಳನ್ನು ಸಂಪಾದಿಸುವ ವಿಷಯದಲ್ಲಿ ನಿಮಗೆ ಸ್ವಾತಂತ್ರ್ಯವಿದೆ. ಆದರೆ ವಿಧಿ ಎಂಬುದೊಂದಿದೆ. ಆ ಖಚಿತ ವಿಧಿಯನ್ನು ಎಂದಿಗೂ ಬದಲಾಯಿಸುವುದು ಸಾಧ್ಯವಿಲ್ಲ.
ಯಾವ ಕ್ರಿಯೆಗಳಿಂದ ಕರ್ಮ ಉಂಟಾಗುವುದಿಲ್ಲ?
ಕರ್ಮದಲ್ಲಿ ಎರಡು ವಿಧಗಳಿವೆ: ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಇರುವ ಚಿತ್ರಗಳಿಂದ ಉಂಟಾಗುವ ಕರ್ಮ ಮತ್ತು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಪಂಚಭೂತಗಳ ಮೂಲಕ ನಡೆಯುವ ಕರ್ಮ. ಸ್ವಭಾವಸಹಜವಾದ ಮತ್ತೊಂದು ರೀತಿಯ ಕ್ರಿಯೆ ಇದೆ. ಇದನ್ನು ಕ್ರಿಯೆ ಎಂದು ಸಹ ಕರೆಯುವುದಿಲ್ಲ. ಇದು ಅನೈಚ್ಛಿಕವಾಗಿ ಸಹಜವಾಗಿ ಸಂಭವಿಸುತ್ತದೆ. ಒಂದು ಮಗು ಬೀಳುತ್ತಿದೆ; ನೀವು ಏಕಾಏಕಿ ಆ ಮಗುವನ್ನು ಹಿಡಿಯುತ್ತೀರಿ. ಯಾರಾದರೂ ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಗುಣ ನಿಮ್ಮ ಸ್ವಭಾವದಲ್ಲಿ ಅಂತರ್ಗತವಾಗಿರುತ್ತದೆ.
ಕರ್ಮವು ಮುಕ್ತಾಯವಾಗುವುದಿಲ್ಲ; ಅದೊಂದು ಮುಕ್ತ ಸಾಧ್ಯತೆ.
– ಗುರುದೇವ ಶ್ರೀ ಶ್ರೀ ರವಿ ಶಂಕರ್
ಆ ಸ್ಥಿತಿಯಲ್ಲಿ ನಿಮ್ಮ ಕ್ರಿಯೆಯು ದೇವರ ಕ್ರಿಯೆಯನ್ನು ಹೋಲುತ್ತದೆ. ಇಲ್ಲಿ ನೀವು ನಿಮಗೆ ಅರಿವಿಲ್ಲದಂತೆ ತತ್ ಕ್ಷಣದಲ್ಲಿ ವರ್ತಿಸುತ್ತೀರಿ. ನಾವು ಯಾವುದೇ ಪೂರ್ವಯೋಜನೆ ಇಲ್ಲದೆ ತತ್ಕ್ಷಣದಲ್ಲಿ ಮಾಡುವ ಕ್ರಿಯೆಯಲ್ಲಿ ಕರ್ಮವಿರುವುದಿಲ್ಲ, ಏಕೆಂದರೆ ನೀವು ಆ ಸಂದರ್ಭಗಳಲ್ಲಿ ಸ್ವಭಾವಸಹಜವಾಗಿ ವರ್ತಿಸಿರುತ್ತೀರಿ. ಇದೇ ಕಾರಣದಿಂದ ಒಂದು ಹುಲಿ ಅಥವಾ ಸಿಂಹ ಬೇಟೆಯಾಡುವಾಗ ಅವುಗಳಿಗೆ ಕರ್ಮವಿರುವುದಿಲ್ಲ. ಬೆಕ್ಕು ಇಲಿಯನ್ನು ಕೊಂದರೆ ಅಲ್ಲಿ ಕರ್ಮ ವಿರುವುದಿಲ್ಲ. ಏಕೆಂದರೆ, ಅದು ಆ ಎಲ್ಲ ಪ್ರಾಣಿಗಳಿಗೆ ಸ್ವಭಾವ ಸಹಜವಾದ ಕ್ರಿಯೆ. ಎಲ್ಲವೂ ಕರ್ಮವೇ, ಪ್ರತಿಯೊಬ್ಬರೂ ಒಂದಲ್ಲ ಒಂದು ಕರ್ಮದಲ್ಲಿ ನಿರತರಾಗಿರಬೇಕಾಗುತ್ತದೆ.
ಮೇಲಿನದೆಲ್ಲ ವೈಯಕ್ತಿಕ ಕರ್ಮಗಳಾದರೆ ಕೌಟುಂಬಿಕ ಕರ್ಮ, ಸಾಮಾಜಿಕ ಕರ್ಮ, ಕಾಲಮಾನದ ಕರ್ಮ, ಯುಗದ ಕರ್ಮಗಳು ಕೂಡ ಇವೆ. ಒಂದು ವಿಮಾನ ಅಪಘಾತಕ್ಕೀಡಾದಾಗ ಸಾಮಾನ್ಯವಾಗಿ ಒಂದೇ ರೀತಿಯ ಕರ್ಮಗಳಿದ್ದವರು ಆ ವಿಮಾನದಲ್ಲಿ ಇರುತ್ತಾರೆ. ಅವರಲ್ಲಿ ಯಾರಾದರೂ ಬೇರೆ ಕರ್ಮವನ್ನು ಹೊಂದಿದ್ದರೆ ವಿಮಾನ ಸುಟ್ಟು ಕರಕಲಾದರೂ ಅವರು ಬದುಕುಳಿಯುವ ಸಂಭವವಿರುತ್ತದೆ. ಆಳವಾಗಿ ನೋಡುವಾಗ ಯಾವ ಕರ್ಮಗಳು ಯಾವ ಪರಿಣಾಮವನ್ನು ಉಂಟುಮಾಡುತ್ತವೆ ಎಂದು ಹೇಳುವುದು ಸಾಧ್ಯವೇ ಇಲ್ಲ.
ಕರ್ಮವು ಮುಕ್ತಾಯವಾಗುವುದಿಲ್ಲ; ಅದೊಂದು ಮುಕ್ತ ಸಾಧ್ಯತೆ.