ನಿಮಗೆ ಯಾವುದರಿಂದಾಗಿ  ಕೋಪ ಬರುತ್ತದೆ? ಜನರು, ಘಟನೆಗಳು, ಸನ್ನಿವೇಶಗಳು? ನೀವು ವಸ್ತುಗಳ ಮೇಲೆ ಕೋಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ಎಲ್ಲಾ ಕೋಪಕ್ಕೆ ಕಾರಣ -ಜನರು ಅಥವಾ ಸನ್ನಿವೇಶಗಳು. ಆ ಜನರ ಪಟ್ಟಿಯಲ್ಲಿ ನೀವು ಸಹ ಸೇರಿದ್ದೀರಿ – ಒಂದೋ ನೀವು ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತೀರಿ, ಇಲ್ಲದಿದ್ದರೆ ಬೇರೆಯವರ ಮೇಲೆ, ಕೋಪಗೊಳ್ಳುತ್ತೀರಿ.

ನಿಮ್ಮೊಳಗಿನ ಕೆಲವು ದೌರ್ಬಲ್ಯದಿಂದಾಗಿ ನೀವು ಕೋಪಗೊಳ್ಳುತ್ತೀರಿ. ನೀವು ಏನನ್ನಾದರೂ ಮಾಡಲು ಬಯಸುತ್ತೀರಿ ಆದರೆ ಅದನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಅಸಮರ್ಥತೆಯು ನಿಮ್ಮಲ್ಲಿ ಕೋಪವನ್ನು ಉಂಟುಮಾಡುತ್ತದೆ.
ನೀವು ಸಮರ್ಥರಾಗಿದ್ದು , ಶಕ್ತಿಶಾಲಿಯಾಗಿರುವಾಗ, ನೀವು ಯಾಕೆ ಕೋಪಗೊಳ್ಳುತ್ತೀರಿ? ಇರುವೆ ಅಥವಾ ನೊಣದ ಮೇಲೆ ನೀವು ಎಂದಿಗೂ ಕೋಪಗೊಳ್ಳುವುದಿಲ್ಲ. ನೀವು ನಿಮಗಿಂತ ಕೆಳಮಟ್ಟದಲ್ಲಿ ಇರುವ ಯಾವುದೇ ಜನರೊಂದಿಗೆ ಎಂದಿಗೂ ಕೋಪ ಮಾಡಿಕೊಳ್ಳುವುದಿಲ್ಲ. ನಮಗಿಂತ ದೊಡ್ಡ ಅಥವಾ ಬಲಶಾಲಿಯಾದವರ ಮೇಲೆ ನಾವು ಕೋಪಗೊಳ್ಳುತ್ತೇವೆ. ನಮ್ಮ ಕೌಶಲ್ಯ ಅಥವಾ ಸಾಮರ್ಥ್ಯಗಳನ್ನು ಮೀರಿದ ಯಾವುದಾದರೂ ಕೆಲಸವನ್ನು ನಾವು ಮಾಡಬೇಕಾಗಿರುವಾಗ ನಾವು ಕೋಪಗೊಳ್ಳುತ್ತೇವೆ. ನಾವು ಹೇಳುವುದನ್ನು ಬೇರೆಯವರು ಪಾಲಿಸುವುದಿಲ್ಲ ಎಂದು  ಭಾವಿಸಿದಾಗ ನಮಗೆ ಕೋಪ ಬರುತ್ತದೆ. ನಮ್ಮ ಮಾತುಗಳೇ ನಮಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂದುಕೊಂಡಾಗ ನಮಗೆ  ಕೋಪವು ಬರುತ್ತದೆ. ಆದ್ದರಿಂದಲೇ ಕೋಪವು ಉದ್ಭವಿಸಿದಾಗ ಅದು ನಮಗೆ ನೋವನ್ನು ಉಂಟುಮಾಡುತ್ತದೆ.

ಕೋಪದಿಂದ ಬೇಗ ಹೊರಬರುವುದು ಮುಖ್ಯ

ಮಾತು ಮತ್ತು ಕ್ರಿಯೆಗಳಲ್ಲಿ  ಪರಿಪೂರ್ಣತೆಯಿರಬೇಕು, ಎಂದು ನಿರೀಕ್ಷೆ ಮಾಡಿದಾಗ, ಅದು  ಹೆಚ್ಚಾಗಿ ಕೋಪಕ್ಕೆ ಕಾರಣವಾಗುತ್ತದೆ. ಕ್ರಿಯೆಗಳಲ್ಲಿ ಯಾವಾಗಲೂ ಪರಿಪೂರ್ಣತೆಯಿರುವುದು  ಬಹುತೇಕ ಅಸಾಧ್ಯವಾದ ವಿಷಯ.  ನಮ್ಮ ಮನಸ್ಸಿನಲ್ಲಿ ಮತ್ತು ಮಾತಿನಲ್ಲಿ ನೂರಕ್ಕೆ ನೂರು ಶೇಕಡಾ ಪರಿಪೂರ್ಣತೆಯು ಇರುವ ಸಾಧ್ಯತೆ ಇದ್ದರೂ, ಯಾವುದೇ ಕ್ರಿಯೆಯಲ್ಲಿ   95 ಶೇಕಡಾ ಮಾತ್ರ ಪರಿಪೂರ್ಣತೆಯು ಇರಲು ಸಾಧ್ಯವಾಗುವುದು.

ನೀವು ಕೋಪದಿಂದ ಇರುವ ಆವರ್ತನವು ಎಷ್ಟು? ನಿಮ್ಮ ಕೋಪದ ಆವರ್ತನವು ನಿಮ್ಮಲ್ಲಿರುವ ಪ್ರಾಣಶಕ್ತಿಗೆ ಅನುಗುಣವಾಗಿರುತ್ತದೆ!  ನೀವು ಬಲಶಾಲಿಯಾಗಿದ್ದರೆ , ನೀವು ಕೋಪಕ್ಕೆ ಒಳಗಾಗುವ ಸಾಧ್ಯತೆಯು ಕಡಿಮೆ; ನೀವು ಬಲಹೀನರಾಗಿದ್ದರೆ, ಹೆಚ್ಚಿನ ಕೋಪಕ್ಕೆ ಒಳಗಾಗುತ್ತೀರಿ. ನೀವು ಇದನ್ನು ಗಮನಿಸಬೇಕು: ನಿಮ್ಮ ಶಕ್ತಿಯು ಎಲ್ಲಿದೆ? ನೀವು  ಯಾಕೆ ಅದನ್ನು ಕಳೆದುಕೊಳ್ಳುತ್ತಿರುವಿರಿ?

ಎರಡನೆಯ ಅಂಶವೆಂದರೆ ನಿಮ್ಮ ಸಾಮಾಜಿಕ ದೃಷ್ಟಿ;  ಜೀವನದ ಅಗಾಧತೆಯ ಬಗ್ಗೆ ನಿಮಗೆ ತಿಳಿದಿರುವ ಜ್ಞಾನ ಮತ್ತು ಸುತ್ತುಮುತ್ತಲಿನ ಜನರ ಬಗ್ಗೆ ನಿಮಗಿರುವ ಆಳವಾದ ತಿಳುವಳಿಕೆ. ಕೋಪವನ್ನು ಉಂಟು ಮಾಡುವುದರಲ್ಲಿ ಇದು ಕೂಡಾ ಒಂದು ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ.

ಮೂರನೆಯದು ನಿಮ್ಮೊಳಗಿನ ಮೋಹ – ವಸ್ತು ವಿಷಯಗಳ ಮೇಲೆ ನಿಮಗಿರುವ ಮೋಹವು  ಕೂಡಾ ನಿಮ್ಮಲ್ಲಿ ಕ್ರೋಧವನ್ನು ಎಬ್ಬಿಸಲು ಕಾರಣವಾಗಿದೆ.   ನಿಮ್ಮ ಇಚ್ಛೆಗಳ ತೀವ್ರತೆಯ ಮಟ್ಟಕ್ಕೆ ಅನುಗುಣವಾಗಿ ನಿಮ್ಮಲ್ಲಿ ಕ್ರೋಧವು ಉದ್ಭವಿಸುತ್ತದೆ. ಆದುದರಿಂದ  ಅದನ್ನು ನೀವು ಗುರುತಿಸಿ ಕಂಡುಹಿಡಿಯಬೇಕು.

ನಿಮ್ಮ ಕೋಪವು, ನಿಮ್ಮ ಸೌಕರ್ಯಗಳಿಗಾಗಿ, ನಿಮ್ಮ ಇಚ್ಛೆಗಳ ಪೂರೈಕೆಗಾಗಿ ಅಥವಾ ನಿಮ್ಮ ಅಹಂಕಾರಕ್ಕಾಗಿ ಇರುವುದೆಂದಾದರೆ, ಆಗ ನಿಮ್ಮ ಪ್ರತಿಕ್ರಿಯೆಯು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಆದರೆ, ನಿಮ್ಮ ಕೋಪವು ಸಹಾನುಭೂತಿಯಿಂದ ಕೂಡಿದ್ದರೆ ಹಾಗೂ ವಿಷಯಗಳನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿದ್ದರೆ, ಆಗ ಅದು ವಿಭಿನ್ನವಾಗಿರುತ್ತದೆ. ಈ ರೀತಿಯ ಕೋಪವು ಕೆಟ್ಟದಲ್ಲ.

ಕೋಪದ ಚಕ್ರವನ್ನು ಮುರಿಯುವುದು

ಜನರು ತಾವು ಮಾಡುತ್ತಿರುವುದು ಸರಿ ಎಂದು ಭಾವಿಸುವ ಕಾರಣ ಅದಕ್ಕಾಗಿ ಹೋರಾಡುತ್ತಾರೆ. ತಾವು ಸರಿ , ಎನ್ನುವ  ಭಾವನೆಯೇ ಅವರಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ. ತಾವು ತಪ್ಪು ಎಂದು ತಿಳಿದುಕೊಂಡರೆ, ಅವರಲ್ಲಿ ಹೋರಾಡುವ ಶಕ್ತಿಯು ಕುಂದಿ ಹೋಗುತ್ತದೆ.

 ಸೀಮಿತವಾಗಿರುವ ಮತ್ತು ಸಂಕುಚಿತವಾದ  ಪ್ರಜ್ಞೆಯಿಂದಾಗಿ ಈ ಜಗತ್ತಿನಲ್ಲಿ ಕೆಟ್ಟದ್ದು ಸೃಷ್ಟಿಯಾಗಿದೆ. ಇದರಿಂದಾಗಿಯೇ  ಎಷ್ಟೋ ಯುದ್ಧಗಳು ಈ ಪ್ರಪಂಚದಾದ್ಯಂತ ನಡೆದಿವೆ.

ನಾವು ನಮ್ಮ ದೃಷ್ಟಿಯನ್ನು ವಿಸ್ತರಿಸಿದರೆ ಮತ್ತು ಸತ್ಯವನ್ನು ನಿಷ್ಪಕ್ಷಪಾತವಾಗಿ ನೋಡಿದರೆ, ನಮಗೆ ವಿಭಿನ್ನವಾದ ಚಿತ್ರವು ಕಂಡು ಬರುತ್ತದೆ. ನಮ್ಮ ಸದಾಚಾರದ ಪ್ರಜ್ಞೆಯು ನಮ್ಮದೇ ಆದ ಮಾನಸಿಕ ಪರಿಕಲ್ಪನೆಯಾಗಿದೆ;

ಈ ಚಕ್ರವನ್ನು ಮುರಿಯಲು ಕೆಲವು ಸಲಹೆಗಳು ಇಲ್ಲಿವೆ.

1. ಕೋಪಗೊಂಡವರನ್ನು ಪಟಾಕಿಯಂತೆ ನಡೆಸಿಕೊಳ್ಳಿ

ಕೋಪಗೊಂಡ ವ್ಯಕ್ತಿಯನ್ನು ಪಟಾಕಿಯಂತೆ ನೋಡಿ. ದೀಪಾವಳಿಯಲ್ಲಿ, ನಾವು ಪಟಾಕಿಗಳನ್ನು ಹಚ್ಚುತ್ತೇವೆ, ನಂತರ ಓಡಿಹೋಗುತ್ತೇವೆ, ದೂರದಿಂದ ಆನಂದಿಸುತ್ತೇವೆ. ಸ್ವಲ್ಪ ಸಮಯದ ನಂತರ, ಅದು ಹೊರಟುಹೋಗುತ್ತದೆ. ಇದೇ ರೀತಿ ಕೋಪಗೊಂಡ ವ್ಯಕ್ತಿ ಕೂಡಾ!

ಎರಡರ ನಡುವೆ ಇರುವ ವ್ಯತ್ಯಾಸವೆಂದರೆ ,ನಾವು ಮನೆಯೊಳಗೆ ಪಟಾಕಿಗಳನ್ನು ಸುಡುವುದಿಲ್ಲ ಅಥವಾ ಅದರ ಬಳಿ ಅಮೂಲ್ಯವಾದದ್ದನ್ನು ಇಡುವುದಿಲ್ಲ. ಆದ್ದರಿಂದ, ಕೋಪಗೊಂಡ ಜನರ ಸುತ್ತಲೂ ಯಾವುದೇ ಅಮೂಲ್ಯ ವಸ್ತುಗಳನ್ನು ಇಡಬೇಡಿ.

ಕೋಪಿಷ್ಟರಿಲ್ಲದಿದ್ದರೆ , ಈ ಜಗತ್ತಿನಲ್ಲಿ ಯಾವುದೇ ವಿನೋದವಿರಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಮತ್ತು ದೂರದಿಂದಲೇ ಅವರನ್ನು ನೋಡಿ ಆನಂದಿಸಿ. ನೀವು   ಅವರಲ್ಲಿ ಒಂದಾಗದಿದ್ದರೆ ಮತ್ತು ನಿಮ್ಮನ್ನು ನೀವು ಕಳೆದುಕೊಳ್ಳದಿದ್ದರೆ,  ನೀವು ಆ ಸನ್ನಿವೇಶವನ್ನು ಆನಂದಿಸಲು ನಿಮಗೆ ಸಾಧ್ಯವಾಗುವುದು.

2. ನಿಮ್ಮ ಪ್ರಜ್ಞೆಯ ಮೂಲಕ ನಿಮ್ಮ ಕೋಪವನ್ನು ಜಯಿಸಿರಿ

ನೀವು ಕುಪಿತರಾದಾಗ, ಅದನ್ನು ವ್ಯಕ್ತಪಡಿಸದಿದ್ದರೆ ನಿಮಗೆ ಉಸಿರುಗಟ್ಟಿದ ಹಾಗೆ ಆಗುತ್ತದೆ; ಆದರೆ ಆಗ ಅದನ್ನು ವ್ಯಕ್ತಪಡಿಸಿದರೆ, ಸ್ವಲ್ಪ ಹೊತ್ತಿನ ಬಳಿಕ ನೀವು ತಪ್ಪಿತಸ್ಥರು ಎನ್ನುವ ಭಾವನೆಯಿಂದ ನಿಮಗೆ ಆತ್ಮಗ್ಲಾನಿಯುಂಟಾಗುತ್ತದೆ.. ಆದ್ದರಿಂದ ನೀವು ಈ  ಎರಡನ್ನೂ ಮೀರಿ ಹೋಗಬೇಕಾಗಿದೆ. ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ನಿಮ್ಮಲ್ಲಿ ಬರುವ ಭಾವನೆಗಳನ್ನು ಕೇಕ್ ನ ಮೇಲೆ ಅಲಂಕರಿಸಿರುವ ವಿವಿಧ ಬಣ್ಣಗಳಂತೆ  ಮತ್ತು ಐಸಿಂಗ್ ನಂತೆ ನೋಡಿ. ಈ ಅಲಂಕಾರವು ಆ ವಸ್ತುವಿಗೆ ನಿಜವಾಗಿಯೂ ಅಷ್ಟೊಂದೇನೂ ಮುಖ್ಯವಲ್ಲ. ಅಂತೆಯೇ, ನಿಮ್ಮ ಮನಸ್ಸಿನಲ್ಲಿ ಬರುವ ಭಾವನೆಗಳು ಕೂಡಾ ಐಸಿಂಗ್ ನಂತೆ ಇರಬೇಕು. ಅವುಗಳು  ನಿಮ್ಮನ್ನು ಬಂಧಿಸಬಾರದು ಅಥವಾ ನಿಮ್ಮಲ್ಲಿ ನೀವು ತಪ್ಪಿತಸ್ಥರು ಎನ್ನುವ ಭಾವನೆಯನ್ನು ಮೂಡಿಸಬಾರದು. ನಿಮ್ಮ ಆಂತರಿಕ ಪ್ರಜ್ಞೆಯಲ್ಲಿ ನೀವು ಒಂದಾಗಿ, ಆತ್ಮನಲ್ಲಿ ಸ್ಥಿತರಾಗಿ,  ವಿಶಾಲವಾಗಿ ಬೆಳೆದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ನವರಾತ್ರಿಯ ಸಮಯದಲ್ಲಿ, ನಾವು ಸತ್ಸಂಗವನ್ನು ಮಾಡುತ್ತೇವೆ ಮತ್ತು ಆಹಾರದ ನಿಯಮಗಳ ಮೂಲಕ ಕೆಲವು ವಿಧದ ಪಥ್ಯವನ್ನು ಅನುಸರಿಸುತ್ತೇವೆ.ಆಗ ನಮ್ಮ ಮನಸ್ಸು ಭಕ್ತಿಯ ಅಲೆಗಳಲ್ಲಿ ಮುಳುಗುತ್ತದೆ. ತತ್ಪರಿಣಾಮವಾಗಿ , ನಾವು ಕೋಪ ಮತ್ತು ಇತರ ನಕಾರಾತ್ಮಕ ದುರ್ಗುಣಗಳಿಂದಾಗಿ ತೊಂದರೆಗೊಳಗಾಗುವ ಎಲ್ಲಾ ಅವಕಾಶಗಳು ತಪ್ಪಿ ಹೋಗುತ್ತವೆ.

3. ಆಕ್ರಮಣಶೀಲತೆಯನ್ನು ಕಮ್ಮಿ ಮಾಡಲು ನಿಮ್ಮಲ್ಲಿರುವ ಶಕ್ತಿಯನ್ನು ಉಪಯೋಗಿಸಿ

ನಿಮ್ಮಲ್ಲಿ ಆಕ್ರಮಣಶೀಲತೆಯುಯಾಕೆ ಉದ್ಭವಿಸುತ್ತದೆ? ಯಾರಾದರೂ ನಿಮಗಿಂತ ದೊಡ್ಡವರು ಎಂದು ನೀವು ಭಾವಿಸಿದಾಗ, ನೀವು ಆಕ್ರಮಣಕಾರಿಯಾಗುವುದಿಲ್ಲ, ಹೌದಲ್ಲವೇ? ಅದರ ಬಗ್ಗೆ ಯೋಚಿಸಿ ನೋಡಿ . ಯಾರಾದರೂ ನಿಮಗಿಂತ ಬಹಳ ದೊಡ್ಡವರಾಗಿದ್ದರೆ ಅಥವಾ ಅವರು ತುಂಬಾ ಚಿಕ್ಕವರಾಗಿದ್ದರೆ, ನೀವು ಆಕ್ರಮಣಕಾರಿಯಾಗುವುದಿಲ್ಲ. ಆದರೆ, ಯಾರಾದರೂ ನಿಮ್ಮೊಂದಿಗೆ ಸರಿಸಮಾನರಾಗಿದ್ದಾರೆ ಎಂದಾದರೆ ಅಥವಾ ಅವರು ನಿಮಗಿಂತ ಸ್ವಲ್ಪವೇ ದೊಡ್ಡವರು ಅಥವಾ ಸ್ವಲ್ಪವೇ ಚಿಕ್ಕವರು ಎಂದು ನೀವು ಭಾವಿಸಿದರೆ, ಆಗ ನೀವು ಆಕ್ರಮಣಕಾರಿಯಾಗುತ್ತೀರಿ. ನಿಮ್ಮ ಸ್ವಂತ ಶಕ್ತಿಯ ಬಗ್ಗೆ ನಿಮಗಿರುವ ಅಜ್ಞಾನವೇ ಇದಕ್ಕೆ ಕಾರಣವಾಗಿದೆ. ಎದ್ದೇಳಿ!, ನೀವು ಯಾರೊಂದಿಗೆಲ್ಲಾ  ಆಕ್ರಮಣಕಾರಿಯಾಗಿ ವರ್ತಿಸುತ್ತೀರಿ ಎನ್ನುವುದನ್ನು ನೋಡಿಕೊಳ್ಳಿ.

ನೀವು ಸೊಳ್ಳೆಗಳನ್ನು ಕೊಲ್ಲಲು ಬಯಸಿದಾಗ ನೀವು ಆಕ್ರಮಣಕಾರಿಯಾಗಿ ವರ್ತಿಸುವುದಿಲ್ಲ! ಇದು ಕೇವಲ ಸೊಳ್ಳೆ ಎಂದು ನಿಮಗೆ ತಿಳಿದಿರುವುದರಿಂದ, ನಿಮ್ಮ ಮನಸ್ಸು ಬಾಧೆಗೆ ಒಳಗಾಗುವುದಿಲ್ಲ. ಹೀಗೆಯೇ ನಿಮ್ಮೊಳಗಿರುವ ಅಗಾಧವಾದ ಶಕ್ತಿಯ ಬಗ್ಗೆ ತಿಳಿದುಕೊಳ್ಳಿ.

4. ಸ್ವಲ್ಪ ಅಪೂರ್ಣತೆಯು ಮನಸ್ಸಿಗೆ ಆರೋಗ್ಯಕಾರಿ

ಪರಿಪೂರ್ಣತೆಯ ಅತಿಯಾದ ನಿರೀಕ್ಷೆಯು ನಿಮ್ಮ ಮನಸ್ಸಿನಲ್ಲಿ ಕೋಪ ಮತ್ತು ಹಿಂಸೆಯನ್ನು ಉಂಟು ಮಾಡುತ್ತದೆ. ಹೀಗಿದ್ದಾಗ ಅಪೂರ್ಣತೆಯನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಮ್ಮೆ, ವಿಷಯಗಳು ನಮ್ಮ ಯೋಜನೆಗಳಿಗೆ ಅನುಗುಣವಾಗಿ ನಡೆಯುವುದಿಲ್ಲ. ಅವುಗಳನ್ನು ನಿಭಾಯಿಸುವ ಸಿದ್ಧತೆಯು ನಮ್ಮಲ್ಲಿ ಇರಬೇಕಾಗುತ್ತದೆ.

ಆದುದರಿಂದ ಅಪೂರ್ಣತೆಯನ್ನು ಒಪ್ಪಿಕೊಂಡು ಅದಕ್ಕೂ ಸ್ವಲ್ಪ ಜಾಗವನ್ನು ನೀಡಿ; ಇದು ಅತ್ಯಗತ್ಯ. ಇದು ನಿಮ್ಮಲ್ಲಿ ಹೆಚ್ಚಿನ ತಾಳ್ಮೆಯನ್ನು ತರುತ್ತದೆ. ನೀವು ಸಮಾಧಾನದಿಂದಿರುವಾಗ ನಿಮ್ಮ ಕೋಪವೂ ಕಡಿಮೆಯಾಗುತ್ತದೆ ಮತ್ತು  ಕೋಪದ ಅಂಶವು ಕಡಿಮೆಯಾದಾಗ ಅಲ್ಲಿ ಹಿಂಸೆಗೆ ಜಾಗವಿರುವುದಿಲ್ಲ.

5. ಪ್ರೀತಿಗೆ ಜ್ಞಾನದ ಕವಚವನ್ನು ನೀಡಿ….

ನೀವು ಪ್ರೀತಿಸುತ್ತಿರುವ ಯಾವುದಾದರೂ ವ್ಯಕ್ತಿಯು ನಿಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ವರ್ತಿಸದಿದ್ದರೆ, ನೀವು ನೊಂದುಕೊಳ್ಳುತ್ತೀರಿ.  ಆದರೆ  ರಸ್ತೆಯಲ್ಲಿ ನಡೆಯುತ್ತಿರುವ  ಒಬ್ಬ ಅಜ್ಞಾತವ್ಯಕ್ತಿಯಿಂದ ನೀವು ಏನನ್ನೂ ಅಪೇಕ್ಷಿಸುವುದಿಲ್ಲ; ನೀವು ಅವರಿಂದ ನೋವು ಪಡುವುದೂ ಇಲ್ಲ;ಅವರನ್ನು ನೋಯಿಸುವುದೂ ಇಲ್ಲ! ಅಲ್ಲವೇ?

ನೀವು ಪ್ರೀತಿಸುವ, ಅಥವಾ ನಿಮಗೆ ಹತ್ತಿರವಾದ ವ್ಯಕ್ತಿಯೊಬ್ಬರು ನಿಮ್ಮನ್ನು ಸ್ವಾಗತಿಸದಿದ್ದರೆ ಅಥವಾ ನಿಮ್ಮನ್ನು ನೋಡಿ ನಗದಿದ್ದರೆ , ನೀವು ನೊಂದುಕೊಳ್ಳುತ್ತೀರಿ ಮತ್ತು ನೀವು ಅವರನ್ನು ನೋಯಿಸುತ್ತೀರಿ.

ಜನರು ನೊಂದಾಗ ದುಃಖದಿಂದ ಅಂತರ್ಮುಖಿಯಾಗುತ್ತಾರೆ ; ಅವರ ಹೃದಯವು ಕಠಿಣವಾಗುತ್ತದೆ  ಮತ್ತು ಅವರು ನಿರ್ದಾಕ್ಷಿಣ್ಯದಿಂದ ಕ್ರೂರವಾಗಿ ವರ್ತಿಸುತ್ತಾರೆ.

ಪ್ರೀತಿಯು ಒಂದು ಉತ್ತಮವಾದ ಮತ್ತು ಸೂಕ್ಷ್ಮವಾದ ಭಾವನೆ; ಹಾಗಾಗಿ ಇದು ಸುಲಭವಾಗಿ ನೋವುಂಟುಮಾಡುತ್ತದೆ ಮತ್ತು ಇದೇ ಭಾವನೆಯು ಅತ್ಯಂತ ವೇಗದೊಂದಿಗೆ ದ್ವೇಷ, ಕೋಪ, ಆಪಾದನೆ, ಕಹಿ ಅಥವಾ ಅಸೂಯೆಯಾಗಿ ಬದಲಾಗುವ ಸಾಧ್ಯತೆಯೂ ಇದೆ.

ನಮ್ಮ ಸಮಾಜದಲ್ಲಿ ಈ ಸೂಕ್ಷ್ಮ ಭಾವನೆಯು ವಿರೂಪಗೊಳ್ಳದಂತೆ ನೀವು ಯಾವ ರೀತಿಯಲ್ಲಿ ಮುಂಜಾಗ್ರತೆಯನ್ನು ವಹಿಸಬಹುದು? ಇದಕ್ಕೆ ಉತ್ತರ ‘ಜ್ಞಾನ.’

ಜ್ಞಾನವು ಪ್ರೀತಿಯ ಪರಿಶುದ್ಧತೆಯನ್ನು ಕಾಪಾಡುತ್ತದೆ ಮತ್ತು ಅದನ್ನು ಎಲ್ಲಾ ರೀತಿಯ ವಿಕಾರಗಳಿಂದ ದೂರವಿಡುತ್ತದೆ. ಸಂತರ ಪ್ರೀತಿಯು ಯಾವಾಗಲೂ ಶುದ್ಧವಾಗಿರುತ್ತದೆ ಏಕೆಂದರೆ ಅದನ್ನು ರಕ್ಷಿಸಲು ಅವರ ಬಳಿ ಜ್ಞಾನದ ಕವಚವಿದೆ.

ಅದಲ್ಲದೆ, ನೀವು ಆಳವಾದ ಸಾಧನೆಯಲ್ಲಿ ಮುಳುಗಿ ಹೋದಾಗ, ಬಹಳಷ್ಟು ಸೂಕ್ಷ್ಮವಾದ ಹಂತಗಳಲ್ಲಿ ಪ್ರೀತಿಯ ಅನುಭವವನ್ನು ಪಡೆಯಬಹುದು.

ಹಿಂದೆ ಸಂಭವಿಸಿದ ವಿಷಯಗಳ ಬಗ್ಗೆ ಈಗ ಕೋಪಗೊಳ್ಳುವುದು ಅತೀ  ದೊಡ್ಡ ಮೂರ್ಖತನವಾಗಿದೆ. ವರ್ತಮಾನದಲ್ಲಿ ನಡೆಯುತ್ತಿರುವುದರ ಮೇಲೆ ಅಕಾರಣವಾಗಿ ನೀವು ಕೋಪಗೊಳ್ಳುತ್ತೀರಿ. ಆದರೆ ಕೋಪಕ್ಕೆ ಕೋಪದಿಂದ ಪ್ರತಿಕ್ರಿಯಿಸುವುದು – ಎಂತಹ ದಡ್ಡತನ ! ಯಾರಾದರೂ ಪದೇ ಪದೇ ತಪ್ಪು ಮಾಡಿದರೆ, ನೀವು ಬಾಹ್ಯದಲ್ಲಿ ಕೋಪವನ್ನು ತೋರಿಸಬಹುದು, ಆದರೆ ಅದರಿಂದ ವಿಚಲಿತರಾಗದಿರಿ.

 ‘ಆರೋಗ್ಯ ವರ್ಧಕ ಗುಸ್ಸಾ’ – ಆರೋಗ್ಯಕರ ಕೋಪವು ನೀರ ಮೇಲೆ ಎಳೆದ ರೇಖೆಯ ಹಾಗೆ. ಇದರರ್ಥ ಯಾರಾದರೂ ತಪ್ಪು ಮಾಡಿದಾಗ ನೀವು ಕೋಪವನ್ನು ತೋರಿಸಬೇಡಿ ಎಂದಲ್ಲ, ಆದರೆ ಅದನ್ನು ಸದಾಕಾಲ ತಲೆಯ ಮೇಲೆ ಹೊತ್ತುಕೊಳ್ಳುವುದು ಬುದ್ಧಿವಂತಿಕೆಯಲ್ಲ.  ನೀವು ಮಾಡುವ ದಿನನಿತ್ಯದ ಸಾಧನೆಗಳು, ಯಾವುದೇ ವಿಧದ ವಿಕಾರಗಳಿಗೆ ಬಲಿಯಾಗದಂತೆ, ನಿಮ್ಮ ಮನಸ್ಸನ್ನು ರಕ್ಷಿಸುತ್ತವೆ.(ವಿಕಾರವೆಂದರೆ ನಿಮ್ಮ ಆತ್ಮದಿಂದ ನಿಮ್ಮನ್ನು ದೂರವಿಡುವಂತಹ ವಿಕೃತಿಗಳು.)

ಕೆಲವೊಮ್ಮೆ ಕೋಪವು ಅವಶ್ಯಕ ಮತ್ತು ಅನಿವಾರ್ಯ

ಕೆಲವೊಮ್ಮೆ ಸ್ವಲ್ಪ ಕೋಪವನ್ನು ಪ್ರದರ್ಶಿಸುವುದು ಅನಿವಾರ್ಯವಾಗುತ್ತದೆ. ಸರಳವಾಗಿ ತೋರ್ಪಡಿಕೆಗೆ ಮಾತ್ರ ಬಳಸುವ ಕೋಪವನ್ನು ನೀವು ಒಂದು ಅಸ್ತ್ರದ ಹಾಗೆ ಬಳಸಬೇಕು.  ಬಾಹ್ಯದಲ್ಲಿ  ಕೋಪಗೊಳ್ಳುತ್ತಿರುವಿರಾದರೂ,  ಆಂತರ್ಯದಲ್ಲಿ ಒಂದಿಷ್ಟು ಕೂಡ ವಿಚಲಿತರಾಗದೆ ನೀವು ಶಾಂತವಾಗಿಯೇ ಇರುತ್ತೀರಿ. ಅಂತಹ ತೋರಿಕೆಯ ಕೋಪದಿಂದ, ನಿಮ್ಮ ರಕ್ತದ ಒತ್ತಡವು ಹೆಚ್ಚಾಗುವುದಿಲ್ಲ, ನೀವು ಪ್ರಕ್ಶುಭ್ಧತೆಗೆ ಒಳಗಾಗುವುದಿಲ್ಲ ಮತ್ತು ನಿಮ್ಮ ದೇಹವು ಬಿಸಿಯಾಗುವುದಿಲ್ಲ.
ತಾಯಿಯು ಆಗಾಗ್ಗೆ ತನ್ನ ಮಗುವನ್ನು ಯಾವುದಾದರೊಂದು ಕಾರಣಕ್ಕೆ ಗದರಿಸುತ್ತಾಳೆ; ಆದರೆ ಅದೇ ಸಮಯದಲ್ಲಿ ಆಕೆಯು ತನ್ನ ಗಂಡನನ್ನು ನೋಡಿ ನಗುತ್ತಾಳೆ. ಅವಳು ಕೋಪದಿಂದ ಯಾರನ್ನಾದರೂ ಬೈಯಲೂಬಹುದು ಮತ್ತು ಇನ್ನೊಬ್ಬರನ್ನು ನೋಡಿ ನಗಲೂಬಹುದು.  ಈ ರೀತಿಯ ಕೋಪವು ಅವಳನ್ನು ತೊಂದರೆಗೊಳಿಸುವುದಿಲ್ಲ, ಅಥವಾ ಅವಳಿಗೆ ತಲೆನೋವನ್ನು ನೀಡುವುದಿಲ್ಲ.. ಆದ್ದರಿಂದ ತೋರಿಕೆಗಾಗಿ, ನೀವು ಹೊರಗಡೆ ಕೋಪಗೊಂಡರೆ ಪರವಾಗಿಲ್ಲ.
ಬೇರೆಯವರ ಹಿತಕ್ಕಾಗಿ ಕೋಪಗೊಳ್ಳುವುದು ಸರಿಯೇ ಹೊರತು ನಿಮ್ಮ ಸ್ವಾರ್ಥಕ್ಕಾಗಿ ಕುಪಿತರಾಗುವುದು ಸರಿಯಲ್ಲ. ಸ್ವಾರ್ಥದಿಂದ ಕುಪಿತರಾದಾಗ, ಅದು ನಿಮಗೇ ಹಾನಿಯನ್ನು ಉಂಟುಮಾಡುತ್ತದೆ. ಯಾರಾದರೂ ನಿಮ್ಮನ್ನು ಅವಮಾನಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ನೀವು ಕೋಪಗೊಂಡರೆ, ಇಂತಹ ಕೋಪವು ನಿಮಗೆ ಹಾನಿಯನ್ನು ಉಂಟು ಮಾಡುತ್ತದೆಯೇ ಹೊರತು ಇದರಿಂದ ಬೇರೆಯವರಿಗೆ ಏನೂ ಕೆಡುಕಾಗುವುದಿಲ್ಲ.
‘ನಾನು ಅಥವಾ ನನ್ನದು’ ಎಂಬ ಭಾವನೆಯಿಂದ  ಹುಟ್ಟುವ ಕೋಪವು ನೋವು ಮತ್ತು ಹತಾಶೆಗಳನ್ನು ಉಂಟುಮಾಡುತ್ತದೆ.  ಒಬ್ಬ ವ್ಯಕ್ತಿಯು  ತನ್ನದೇ ಆದ  ರೀತಿಯಲ್ಲಿ ಮೂರ್ಖನಾಗಿದ್ದಾನೆ ಎನ್ನುವುದನ್ನು  ಅರಿತುಕೊಂಡು , ಅವನನ್ನು ಸರಿಪಡಿಸಲಿಕ್ಕಾಗಿ ನೀವು ಅವನ ಮೇಲೆ ಕೋಪಗೊಂಡರೆ , ಅಂತಹ ಕೋಪವು ನಿಜವಾಗಿಯೂ ಅವನಿಗೆ ಹಿತಕರವಾಗಿ ಪರಿಣಮಿಸುವುದು .

ಗತ ಕಾಲದ ಬಗ್ಗೆ ಮನಸ್ಸಿನ ಒಳಗಡೆ ಹುದುಗಿಸಿಟ್ಟ ಕೋಪ

ಕೋಪವು ಪ್ರತ್ಯೇಕವಾಗಿ ಇರುವ ಒಂದು ಶಕ್ತಿಯಲ್ಲ…. ಒಂದೇ ಶಕ್ತಿಯು, ಕೋಪವಾಗಿ, ಸಹಾನುಭೂತಿಯಾಗಿ , ಪ್ರೀತಿಯಾಗಿ ಮತ್ತು ಔದಾರ್ಯವಾಗಿ ಪ್ರಕಟವಾಗುತ್ತದೆ..  ಇದು ನಾವು ನಮ್ಮ ಮನೆಯಲ್ಲಿ ರೆಫ್ರಿಜರೇಟರ್ಗೆ, ದೀಪಗಳಿಗೆ ಮತ್ತು ಫ್ಯಾನ್‌ಗಳಿಗೆ ಬಳಸುವ  ವಿದ್ಯುತ್ ಶಕ್ತಿಯು ಒಂದೇ ಆಗಿರುವಂತೆ.

ನೀವು ನಿಮ್ಮ ಕೋಪವನ್ನು ಹುದುಗಿಸಿ ಇಟ್ಟುಕೊಳ್ಳಲು ನಿಮಗೆ ಸಾಧ್ಯವಾಗಿದೆ   ಎಂದುಕೊಳ್ಳಬೇಡಿ.  ವಿವೇಕವನ್ನು ಬಳಸಿಕೊಂಡು ನೀವು  ನಿಮ್ಮ ಬುದ್ಧಿಯನ್ನು  ಸತ್ಯಕ್ಕೆ ಮತ್ತು ವಾಸ್ತವಿಕತೆಗೆ ತೆರೆದುಕೊಂಡು ನೋಡಿಕೊಂಡರೆ, ನಿಮ್ಮ ಹಿಂದಿನ ಕೋಪವು ಕೇವಲ  ಮೂರ್ಖತನದ ಪರಿಣಾಮ ಮತ್ತು ಜ್ಞಾನದ ಅಭಾವ ಎನ್ನುವುದನ್ನು ನೀವು ಅರಿತುಕೊಳ್ಳುತ್ತೀರಿ.

ಕೋಪವನ್ನು ನಿಭಾಯಿಸಲು, ಇರುವ ಜಾಣ್ಮೆಯ ಮಾರ್ಗ

ಕೋಪವನ್ನು ವ್ಯಕ್ತಪಡಿಸಿದಾಗ, ನೀವು ತಪ್ಪಿತಸ್ಥರು ಎನ್ನುವ ಭಾವನೆಯು ನಿಮಗೆ ಉಂಟಾಗುತ್ತದೆ. ವ್ಯಕ್ತಪಡಿಸದಿದ್ದರೆ,  ಅದನ್ನು   ಮನಸ್ಸಿನ ಆಳದಲ್ಲಿ ಅಡಗಿಸಿಟ್ಟಿರುವಿರಿ,  ಎಂದು ನೀವು ಭಾವಿಸುತ್ತೀರಿ. ಈ ಎಲ್ಲಾ ಪರಿಸ್ಥಿತಿಗಳಿಗೆ ಅತೀತವಾಗಿ ಹೋಗಿ, ನಿಮ್ಮ ಜೀವನವನ್ನು ವಿಭಿನ್ನವಾದ ದೃಷ್ಟಿಕೋನದಿಂದ ನೋಡಿಕೊಳ್ಳಿ. – ವಿಶಾಲವಾದ ಮನೋಭಾವದಿಂದ ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸಿ.

ಎಲ್ಲವೂ ಸಾಂದರ್ಭಿಕ ಎಂದುಕೊಂಡರೆ ಮಾತ್ರ  ನೀವು ಜೀವನವನ್ನು ಒಂದು ಹೋರಾಟವನ್ನಾಗಿ ನೋಡುವುದಿಲ್ಲ.. ಆಗ ಈ ಭಾವನೆಗಳು ನಿಮ್ಮನ್ನು ಬಂಧನಕ್ಕೆ ಒಳಪಡಿಸುವುದಿಲ್ಲ ಅಥವಾ ನೀವು ತಪ್ಪಿತಸ್ಥರೆಂಬ ಭಾವನೆಯಿಂದ ನಿಮ್ಮನ್ನು ಉಸಿರುಗಟ್ಟಿಸುವುದಿಲ್ಲ.

ಹಿಂದೂ ಪುರಾಣಗಳಲ್ಲಿ, ಭಗವಾನ್ ವಿಷ್ಣುವು   ಕೋಪವನ್ನು ಗೆಲ್ಲಲು ಮಾಡಿದ  ಯುದ್ಧದ ಬಗ್ಗೆ ಒಂದು ಕಥೆಯಿದೆ. ವಿಷ್ಣುವಿನ ಕಿವಿಯ ಕೊಳೆಯಿಂದ  ಹುಟ್ಟಿದ ಮಧು ಮತ್ತು ಕೈಟಭ ಎಂಬ ಇಬ್ಬರು ರಾಕ್ಷಸರು ಭಗವಂತನಿಗೆ ಸಾಕಷ್ಟು ತೊಂದರೆಯನ್ನು ಉಂಟು ಮಾಡಿದರು. ಮಧು ಎಂದರೆ ‘ಕೋಪ’ ಮತ್ತು ಕೈಟಭ ಎಂದರೆ ‘ದ್ವೇಷ’. ಭಗವಾನ್ ವಿಷ್ಣುವು ಸಾವಿರಾರು ವರ್ಷಗಳ ಕಾಲ ಅವರೊಂದಿಗೆ ಹೋರಾಡಿದರೂ ಅವರನ್ನು ಗೆಲ್ಲಲು , ಅವನಿಗೆ ಸಾಧ್ಯವಾಗಲಿಲ್ಲ.

ಕೊನೆಗೆ ಅವನು ದೇವಿಯ  ಮೊರೆ ಹೋದನು. ದೇವಿಯೆಂದರೆ- ದೈವೀ ಪ್ರಜ್ಞೆ . ಪ್ರಜ್ಞೆಯು ಮೂಡಿದಾಗ ಕೋಪ ಮತ್ತು ದ್ವೇಷಗಳು ಕರಗಿ ಹೋಗುತ್ತವೆ. ದೇವಿಯು ನೀರಿನ ಸಹಾಯದಿಂದ ಮಧು ಮತ್ತು ಕೈಟಭರನ್ನು ನಾಶಪಡಿಸಿದಳು. ಇಲ್ಲಿ ನೀರು ‘ಪ್ರೀತಿ’ಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಪ್ರೀತಿಯ ಸಹಾಯದಿಂದ, ಪ್ರಜ್ಞೆಯು ಕೋಪ ಮತ್ತು ದ್ವೇಷವನ್ನು ನಾಶಪಡಿಸಿತು. ಪ್ರಜ್ಞೆಯು ಪ್ರೀತಿಯಿಂದ ತುಂಬಿದಾಗ, ಕೋಪ ಅಥವಾ ದ್ವೇಷವು ಉಳಿಯುವುದಿಲ್ಲ – ಶಾಶ್ವತವಾಗಿ ಇರುವ ಪ್ರೀತಿ ಮಾತ್ರ ಉಳಿಯುತ್ತದೆ.

ಪ್ರಜ್ಞಾಶಕ್ತಿಯನ್ನು ಹೆಚ್ಚಿಸುವುದು ಹೇಗೆ?

ಒಂದು ರೀತಿಯ ಕೋಪವು ಸಂಪೂರ್ಣ ಅರಿವಿನೊಂದಿಗೆ ವ್ಯಕ್ತವಾಗುತ್ತದೆ. ಇನ್ನೊಂದು ವಿಧದ ಕೋಪವು ಅರಿವಿಲ್ಲದೆ  ಅಜ್ಞಾನದಿಂದ ಕೂಡಿರುತ್ತದೆ.
ಆದ್ದರಿಂದ ನಿಮ್ಮಲ್ಲಿ ಕೋಪವು ಉದ್ಭವಿಸುತ್ತಿದೆ , ಎನ್ನುವುದು ನಿಮಗೆ ತಿಳಿದು ಬಂದಾಗ, ನಿಮ್ಮ ದೇಹದಲ್ಲಿ ಕೆಲವು ಸಂವೇದನೆಗಳು ಉಂಟಾಗುತ್ತವೆ. ನಿಮ್ಮ ತಲೆಯ ಮೇಲ್ಭಾಗದಲ್ಲಿ, ಹಣೆಯ ಅಥವಾ  ತಲೆಯ ಹಿಂಭಾಗದಲ್ಲಿ ಜುಮ್ಮೆನಿಸುವಿಕೆ, ಸಂವೇದನೆಗಳು ಅಥವಾ ಕುತ್ತಿಗೆ ಮತ್ತು ಭುಜದ ಪ್ರದೇಶದಲ್ಲಿ  ಸ್ವಲ್ಪ ಬಿಗಿತ -ಮುಂತಾದ ಅನುಭವಗಳು ನಿಮಗೆ ಉಂಟಾಗಬಹುದು. ಆ ಕ್ಷಣದಲ್ಲಿಯೇ ಈ ಎಲ್ಲಾ ಸಂವೇದನೆಗಳನ್ನು ಗಮನಿಸುವುದು ನಿಜವಾದ ಕುಶಲತೆಯಾಗಿದೆ. ಈ ಸಂವೇದನೆಗಳನ್ನು ಗಮನಿಸಲು ಅಭ್ಯಾಸವಾದಾಗ, ನೀವು ಕೋಪವನ್ನು ಸುಲಭವಾಗಿ ಜಯಿಸಬಹುದು. ಅದಕ್ಕಾಗಿಯೇ ಧ್ಯಾನವು ತುಂಬಾ ಮುಖ್ಯವಾಗಿದೆ. ಧ್ಯಾನದ ಹೊರತು ಬೇರೆ ಯಾವುದೇ ವಿಧಾನಗಳಿಂದ ಕೋಪವನ್ನು ಪಳಗಿಸಲು ಸಾಧ್ಯವಿಲ್ಲ.

ಧ್ಯಾನದ ಪ್ರಕ್ರಿಯೆಯ ಮಹತ್ವ

ಧ್ಯಾನವನ್ನು ಅಭ್ಯಾಸ ಮಾಡುವ  ಮುನ್ನ ನೀವು ಕೋಪಗೊಂಡಿದ್ದ ಸಂದರ್ಭಗಳಲ್ಲಿ, ನಿಮ್ಮ ಕೋಪವು ದೀರ್ಘಕಾಲದ ವರೆಗೆ ಉಳಿಯುತ್ತಿತ್ತು ಎನ್ನುವುದನ್ನು ನೀವು ನೋಡಿರುತ್ತೀರಿ. ಇತ್ತೀಚೆಗೆ ನೀವು ನಿರಂತರವಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೀರೆಂದಾದರೆ, ಇನ್ನೂ ನಿಮಗೆ ಆಗಾಗ ಕೋಪವು ಬರುತ್ತಿದ್ದರೂ, ,  ಅದು ಶೀಘ್ರದಲ್ಲಿಯೇ ಕಡಿಮೆಯಾಗುತ್ತಿದೆ ಎನ್ನುವುದು ಕೂಡಾ ನಿಮ್ಮ ಗಮನಕ್ಕೆ ಬಂದಿರುತ್ತದೆ . ನಾಲ್ಕೈದು ನಿಮಿಷಗಳಲ್ಲಿಯೇ ನಿಮ್ಮ ಕೋಪವು ಮಾಯವಾಗುತ್ತದೆ, ಹೌದಲ್ಲವೇ? ಹೌದು ಎಂದಾದರೆ, ಇದು ನೀವು ಧನಾತ್ಮಕ ದಿಕ್ಕಿನಲ್ಲಿ ಇಡುತ್ತಿರುವ ಒಂದು ದೊಡ್ಡ ಹೆಜ್ಜೆಯಾಗಿದೆ.
ಹಿಂದೆ ಧ್ಯಾನವನ್ನು ಅಭ್ಯಾಸ ಮಾಡದಿದ್ದಾಗ, ನಿಮಗೆ ಕೋಪ ಬಂದರೆ, ಅದು ಗಂಟೆಗಳು, ದಿನಗಳು, ತಿಂಗಳುಗಳು ಅಥವಾ ಬಹುಶಃ  ವರ್ಷಗಳ ವರೆಗೂ ಇದ್ದಿರಬಹುದು . ಆದರೆ ಈಗ ನೀವು ನಿಯಮಿತವಾಗಿ ಧ್ಯಾನವನ್ನು ಮಾಡಲು ಪ್ರಾರಂಭಿಸಿದ್ದೀರಿ. ಆದುದರಿಂದ ಈಗ ನಿಮ್ಮಕೋಪವು ಹೆಚ್ಚು ಕಾಲದ ವರೆಗೆ ಉಳಿಯುವುದಿಲ್ಲ. ಯಾಕೆ ಹೀಗೆ? ಏಕೆಂದರೆ ಕೋಪ ಬಂದಾಗ, ಆ ಕ್ಷಣವೇ ನಿಮ್ಮ ಗಮನವು ಉಸಿರಾಟದ ಕಡೆಗೆ ತಿರುಗುತ್ತದೆ. ಉಸಿರಾಟವು ತಕ್ಷಣವೇ ನಿಮ್ಮ ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಧ್ಯಾನದ ಅನುಭವವು ಆ ಕೂಡಲೇ ನಿಮ್ಮನ್ನು ಶಾಂತ ಮತ್ತು ಪ್ರಶಾಂತವಾದ ಸ್ಥಿತಿಗೆ ಕೊಂಡೊಯ್ಯುತ್ತದೆ ಮತ್ತು ಕೋಪವನ್ನು ಮಧ್ಯದಲ್ಲಿಯೇ ನಿಲ್ಲಿಸುತ್ತದೆ. ನೀವು ಮಾಡುವ ಯಾವುದೇ ಧ್ಯಾನವು ಎಂದಿಗೂ ವ್ಯರ್ಥವಾಗುವುದಿಲ್ಲ.

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರಿಂದ ಕೋಪ ನಿರ್ವಹಣೆಯ ಕುರಿತು ಸಲಹೆಗಳು 

    Wait!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity


    *
    *
    *
    *
    *