ಆಕರ್ಷಣೆಯ ನಿಯಮ ಮತ್ತು ಅಧ್ಯಾತ್ಮದ ನಡುವಣ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಮೊದಲು, ಅವುಗಳ ಅರ್ಥವನ್ನು ನಾವು ಗಮನಿಸೋಣ.
ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಯಾವುದೇ ವಿಚಾರಗಳನ್ನು ನೀವು ಆಕರ್ಷಿಸುತ್ತೀರಿ ಮತ್ತು ಅದನ್ನು ಸಾಕಾರಗೊಳಿಸುತ್ತೀರಿ ಎಂಬುದು ಆಕರ್ಷಣೆಯ ನಿಯಮಗಳ ಹಿಂದಿನ ತತ್ತ್ವ. ನೀವು ಸಕಾರಾತ್ಮಕವಾಗಿ ಯೋಚಿಸಿದರೆ ಸಕಾರಾತ್ಮಕ ಅನುಭವಗಳನ್ನೂ ನಕಾರಾತ್ಮಕವಾಗಿ ಯೋಚಿಸಿದರೆ ನಕಾರಾತ್ಮಕ ಅನುಭವಗಳನ್ನೂ ಪಡೆಯುತ್ತೀರಿ. ಎಲ್ಲದಕ್ಕೂ ಚಿಂತೆ ಮಾಡುವ ಜನರನ್ನು ನೀವು ಗಮನಿಸಿದರೆ ಅವರ ಚಿಂತೆಗಳೇ ಮೂರ್ತರೂಪ ತಳೆಯುವ ಕಾರಣ ಅವರು ತಮ್ಮ ಚಿಂತೆಗಳಿಂದ ಎಂದೂ ಮುಕ್ತರಾಗುವುದಿಲ್ಲ ಎಂಬುದನ್ನು ಮನಗಾಣುತ್ತೀರಿ. ಅಂತಹ ಜನರು ತಮ್ಮಲ್ಲಿನ ನಕಾರಾತ್ಮಕ ಶಕ್ತಿಯನ್ನು ಸಚೇತನಗೊಳಿಕೊಳ್ಳುವುದೇ ಇದಕ್ಕೆ ಮುಖ್ಯ ಕಾರಣ. ಸಮಸ್ಯೆಗಳನ್ನು ನೇರವಾಗಿ ಎದುರಿಸುವ ಸಕಾರಾತ್ಮಕ ಜನರು ಸಮಸ್ಯೆಗಳನ್ನು ಹೇಗಾದರೂ ಪರಿಹರಿಸಿಕೊಂಡು ತಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕತೆಯನ್ನೇ ಯಾವಾಗಲೂ ಪ್ರತಿಬಿಂಬಿಸುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಅಧ್ಯಾತ್ಮವು ಒಂದು ಉನ್ನತ ಶಕ್ತಿಯೊಂದಿಗೆ ಸಂಬಂಧವಿರಿಸಿಕೊಂಡು ಶಾಂತಿಯನ್ನು ಪಡೆಯುವುದು ಮತ್ತು ಭೌತಿಕ ವಿಷಯಗಳಿಗಿಂತ ಉನ್ನತವಾದ ಬೇರೆ ಯಾವುದೋ ಒಂದರಿಂದ ಸಂತೃಪ್ತಿಯನ್ನು ಹೊಂದುವುದನ್ನು ಸೂಚಿಸುತ್ತದೆ. ಅಧ್ಯಾತ್ಮವನ್ನು ನಮ್ಮಲ್ಲಿ ಬೆಳೆಸಿಕೊಳ್ಳಲು ಮಾನಸಿಕವಾಗಿ ಜಾಗೃತವಾಗಿರುವುದು ಒಂದು ತಂತ್ರ. ಈ ತಂತ್ರವು ಮನಸ್ಸನ್ನು “ಈಗ ಮತ್ತು ಈ ಕ್ಷಣ” ಎಂಬ ಸ್ಥಿತಿಗೆ ತಂದು ನಮ್ಮ ಅರಿವಿನ ಮಟ್ಟವನ್ನು ಹೆಚ್ಚಿಸುವುದರ ಮೇಲೆ ಗಮನಹರಿಸುತ್ತದೆ. ಯಾವುದೇ ತೀರ್ಮಾನಗಳಿಗೆ ಒಳಗಾಗದೆ, ನಿರ್ವಿಕಾರವಾಗಿ ನಮ್ಮ ವಿಚಾರ ಮತ್ತು ಭಾವನೆಗಳ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸುವ ಮೂಲಕ ಅಧ್ಯಾತ್ಮವು ನಮ್ಮ ಭಾವನಾತ್ಮಕ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.
ನಮ್ಮ ಆಕರ್ಷಣೆಯ ನಿಯಮಗಳ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ
ಆಕರ್ಷಣೆಯ ನಿಯಮವು ಎಷ್ಟು ಪರಿಣಾಮಕಾರಿಯಾಗಿರುತ್ತದೆ?
ಆಕರ್ಷಣೆಯ ನಿಯಮವು ನಿಮ್ಮಲ್ಲಿ ಕೆಲಸ ಮಾಡುತ್ತಿರುವುದು ನಿಮ್ಮ ಗಮನಕ್ಕೂ ಬರುವುದಿಲ್ಲ. ತನಗೆ ಯಾವುದು ಬೇಕೆನ್ನಿಸುತ್ತದೋ ಅದನ್ನು ನಿಮ್ಮ ಮನಸ್ಸು ಕಲ್ಪಿಸಿಕೊಳ್ಳುತ್ತದೆ; ಜಗತ್ತು ಅದನ್ನು ನಿಮ್ಮ ಹತ್ತಿರಕ್ಕೆ ತರುತ್ತದೆ. ಆದರೆ, ದುರದೃಷ್ಟವಶಾತ್, ನಮ್ಮಲ್ಲಿ ಅನೇಕರು ನಕಾರಾತ್ಮಕತೆಯ ಮೇಲೆ ಹೆಚ್ಚು ಗಮನ ಹರಿಸುವುದರಿಂದ ಒತ್ತಡ, ಆತಂಕ ಮತ್ತು ದುಃಖಗಳನ್ನು ತಮ್ಮ ಜೀವನದಲ್ಲಿ ಸೃಷ್ಟಿಸಿಕೊಳ್ಳುತ್ತಾರೆ. ಆಕರ್ಷಣೆಯ ನಿಯಮಗಳನ್ನು ಬಳಸಿಕೊಳ್ಳುವುದನ್ನು ಅರಿತಿರುವ ಜನರು ತಮ್ಮ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಆಕರ್ಷಿಸುತ್ತಾರೆ.
ಹಾಗಾದರೆ ಇದು ಸಕಾರಾತ್ಮಕ ವಿಚಾರಗಳನ್ನು ಪ್ರಚೋದಿಸುವ ಬಗ್ಗೆ ಮಾತ್ರವೇ?
ಕೇವಲ ಸಕಾರಾತ್ಮಕ ಚಿಂತನೆ ಇದ್ದರೆ ಸಾಕು ಎಂದು ಭಾವಿಸುವುದು ಆಕರ್ಷಣೆಯ ನಿಯಮವಲ್ಲ. ನೀವು ಸಕಾರಾತ್ಮಕವಾಗಿ ಯೋಚಿಸಿ ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು, ಆಗ ಮಾತ್ರ ಸಕಾರಾತ್ಮಕ ವಿಷಯಗಳನ್ನು ನಿಮ್ಮ ಜೀವನ ಆಕರ್ಷಿಸುತ್ತದೆ. ಸೋಮಾರಿತನವು ಎಂದಿಗೂ ನಿಮ್ಮ ಜೀವನದಲ್ಲಿ ಒಂದು ಆದರ್ಶ ಸ್ಥಿತಿಯನ್ನು ಉಂಟುಮಾಡುವುದಿಲ್ಲ.
ಆಕರ್ಷಣೆಯ ನಿಯಮಗಳ ಮೂಲಸೂತ್ರಗಳು
ಮೂಲತಃ ಎರಡು ಸೂತ್ರಗಳು ಈ ನಿಯಮಗಳ ಜೀವಾಳವಾಗಿವೆ.
- ಸಮಾನ ಗುಣಗಳು ಪರಸ್ಪರ ಆಕರ್ಷಿಸುತ್ತವೆ
ಈ ಮೊದಲೇ ಹೇಳಿದಂತೆ, ನೀವು ಉತ್ತಮ ಸ್ಪಂದನಗಳನ್ನು ಪ್ರಕಟಪಡಿಸಿದರೆ ನಿಮಗೆ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ; ಇದಕ್ಕೆ ವಿಪರೀತವಾದರೆ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತೀರಿ ಎನ್ನುವುದು ಆಕರ್ಷಣೆಯ ನಿಯಮದ ಮೂಲತತ್ತ್ವ. ಉದಾಹರಣೆಗೆ, ಆರೋಗ್ಯವಾಗಿರಬೇಕೆಂದು ಬಯಸುವ ಜನರು ತಾವು ಸದೃಢವಾಗಿರಬೇಕು ಎಂಬುದನ್ನು ಮೊದಲು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬೇಕು. ನಂತರ ಅವರು ಉತ್ತಮ ಆಹಾರಾಭ್ಯಾಸಗಳನ್ನೂ, ದೈಹಿಕ ವ್ಯಾಯಾಮಗಳನ್ನೂ ಅಳವಡಿಸಿಕೊಂಡು ಅಂತಿಮವಾಗಿ ಆರೋಗ್ಯವಾಗಿರಬೇಕೆಂಬ ತಮ್ಮ ಗುರಿಯನ್ನು ಈಡೇರಿಸಿಕೊಳ್ಳುತ್ತಾರೆ.
- ವರ್ತಮಾನ ಕಾಲವು ಒಂದು ವರ
ನಾವು ಅತಿಯಾಗಿ ಯೋಚಿಸುವುದನ್ನು ಬಿಟ್ಟು ವರ್ತಮಾನದ ಕ್ಷಣದ ಮೇಲೆ ಗಮನ ಹರಿಸಬೇಕೆಂದು ಆಕರ್ಷಣೆಯ ನಿಯಮ ಸೂಚಿಸುತ್ತದೆ. ವರ್ತಮಾನದ ಬಗ್ಗೆ ಭಯಪಡುವ ಬದಲು ಅದರಲ್ಲಿ ವಿಶ್ವಾಸವಿರಿಸಿ ನಿಮ್ಮ ಸಂತೋಷವನ್ನು ನೀವೇ ಸೃಷ್ಟಿಸಿಕೊಳ್ಳಿ. ಯಾವ ಸನ್ನಿವೇಶವೂ ಯಾವ ಸಂದರ್ಭವೂ ಸದಾಕಾಲ ಪ್ರತಿಕೂಲವಾಗಿರುವುದಿಲ್ಲ, ಆದರೆ ಸನ್ನಿವೇಶಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯಿಂದ ವ್ಯತ್ಯಾಸ ಉಂಟುಮಾಡಬಹುದು.
ಆಕರ್ಷಣೆ ನಿಯಮದ ಪ್ರಯೋಗ
ಜೀವನದಲ್ಲಿ ಉತ್ತಮವಾದುದರ ಬಗ್ಗೆ ನಿಮಗೆ ಆಸಕ್ತಿಯಿದ್ದರೆ ಆ ಕುರಿತು ಸ್ಪಷ್ಟ ಸಂದೇಶವನ್ನು ನೀವು ಜಗತ್ತಿಗೆ ಜೋರಾಗಿ ಕಳಿಸಬೇಕು. ನೀವು ಆ ಸಂದೇಶವನ್ನು ಹೊರಡಿಸಿ, ಅದರಲ್ಲಿ ವಿಶ್ವಾಸವಿರಿಸಿಕೊಂಡದ್ದಾದರೆ ಆಕರ್ಷಣೆಯ ನಿಯಮವು ನಿಮಗೆ ಬೇಕಾಗಿರುವುದನ್ನು ದೊರಕಿಸುತ್ತದೆ. ಆಕರ್ಷಣೆಯ ನಿಯಮಗಳನ್ನು ಪ್ರಯೋಗಿಸಲು ಈ ಕೆಳಗೆ ವಿವರಿಸಿದ ಹೆಜ್ಜೆಗಳನ್ನು ಅನುಸರಿಸಬಹುದು.
- ಯಶಸ್ಸನ್ನು ಮನಸ್ಸಿನಲ್ಲಿ ಚಿತ್ರೀಕರಿಸಿಕೊಳ್ಳಿ
ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವ ನಿಮ್ಮ ಸಾಧನೆಗಳ ದೃಶ್ಯಗಳು ಗುರಿಸಾಧನೆಗಾಗಿ ನಿಮ್ಮನ್ನು ಕ್ರಿಯೆಯಲ್ಲಿ ತೊಡಗಿಸುತ್ತವೆ. ಇದಕ್ಕಾಗಿ ನೀವು ನಿಮ್ಮ ಸುಪ್ತಮನಸ್ಸಿನ ಜೊತೆಗೆ ಸಕಾರಾತ್ಮಕವಾಗಿ ವ್ಯವಹರಿಸಬೇಕು ಹಾಗೂ ಅದನ್ನು ಆಕರ್ಷಿಸಲು ನಿಮಗೇನು ಬೇಕು ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ನಿಮ್ಮ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಗುರಿಗಳ ಸಮೀಕ್ಷೆ, ಪ್ರತಿದಿನದ ಕ್ರಿಯಾಯೋಜನೆ ಮತ್ತು ಮನಸ್ಸಿನಲ್ಲಿ ಯಶಸ್ಸಿನ ಚಿತ್ರೀಕರಣ ಕೂಡ ಇದರಲ್ಲಿ ಒಳಗೊಂಡಿರಬೇಕು.
- ನಕಾರಾತ್ಮಕ ಯೋಚನೆಗಳೊಂದಿಗೆ ಕಠಿಣವಾಗಿ ವರ್ತಿಸಬೇಡಿ
ನಾವು ಯಾವುದಾದರೂ ವಿಷಯದಲ್ಲಿ ಅತ್ಯಂತ ಕಠೋರವಾಗಿ ವರ್ತಿಸಿದರೆ ಅದನ್ನು ಎದುರಿಸುವುದು ಇನ್ನೂ ಕಷ್ಟವಾಗುತ್ತದೆ. ನಕಾರಾತ್ಮಕ ಯೋಚನೆಗಳನ್ನೇ ಮಾಡುವುದಿಲ್ಲ ಎಂದು ಹೇಳಿಕೊಳ್ಳುವುದರ ಬದಲು ಯೋಚನೆಗಳು ಒಳನುಗ್ಗಲಿ, ನೀವು ಆ ಯೋಚನೆಗಳ ಮೂಲಕಾರಣಗಳನ್ನು ಅರ್ಥಮಾಡಿಕೊಳ್ಳಿ. ಉದಾಹರಣೆಗೆ: ನೀವು ಪರೀಕ್ಷೆಗಳಲ್ಲಿ ಸತತವಾಗಿ ಅನುತ್ತೀರ್ಣರಾಗುತ್ತಿದ್ದೀರಿ ಎಂದು ಭಾವಿಸಿ. ಈ ಬಾರಿ ಸಾಕಷ್ಟು ಚೆನ್ನಾಗಿಯೇ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರಿ. ಹೀಗಿದ್ದರೂ ಪರೀಕ್ಷೆಗಳು ಸಮೀಪಿಸಿದಾಗ ಫಲಿತಾಂಶದ ಕುರಿತು ಮತ್ತು ನಿಮ್ಮ ಸಾಮರ್ಥ್ಯದ ಕುರಿತು ನಕಾರಾತ್ಮಕ ಯೋಚನೆಗಳು ಬರಬಹುದು. ನಿಮ್ಮ ನಕಾರಾತ್ಮಕ ಯೋಚನೆಗಳನ್ನು ಸಂಪೂರ್ಣವಾಗಿ ತಡೆಯುವ ಬದಲು ನಿಮ್ಮ ದೃಢ ವಿಶ್ವಾಸ ಮತ್ತು ಸಿದ್ಧತೆಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿ. ಆಗ ನೀವು ಪ್ರವಾಹದ ಜೊತೆಗೆ ಸಾಗುತ್ತೀರಿ. ಇದು ಮಾನಸಿಕವಾಗಿ ಜಾಗೃತವಾಗಿರುವ ಒಂದು ತಂತ್ರ.
- ಕೃತಜ್ಞತೆಯನ್ನು ಅಭ್ಯಾಸ ಮಾಡಿಕೊಳ್ಳಿ
ಈ ಜೀವನವೇ ಒಂದು ದೊಡ್ಡ ವರದಾನ. ನಿಮಗೆ ದೊರೆತಿರುವ ಅನುಗ್ರಹಗಳ ಬಗ್ಗೆ ನಿಮಗೆ ಅರಿವಿರುವಾಗ ಮತ್ತು ಅವನ್ನು ಸ್ಮರಿಸಿಕೊಳ್ಳುವಾಗ ಆಕರ್ಷಣೆಯ ನಿಯಮಗಳು ಪ್ರಕಟವಾಗುತ್ತವೆ. ಏಕೆಂದರೆ, ಆಗ ನೀವು ಜೀವನದ ಬಗ್ಗೆ ನಿರ್ಲಕ್ಷ್ಯ ತಾಳುವುದಿಲ್ಲ. ಬದುಕಿನಲ್ಲಿ ನೀವು ಕಲಿತ ಪಾಠಗಳಿಗಾಗಿ, ನಿಮ್ಮ ಸಹವಾಸದಲ್ಲಿರುವ ಜನರಿಗಾಗಿ ಹಾಗೂ ನೀವು ಆಯ್ದುಕೊಂಡ ಹಾದಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅಭ್ಯಾಸ ಮಾಡಿಕೊಳ್ಳಿ.
ಮೇಲಿನ ಸಲಹೆಗಳು ನಿಮಗೆ ಸಮಾಧಾನದ ಹಾಗೂ ಸಕಾರಾತ್ಮಕ ದೃಷ್ಟಿಕೋನವನ್ನು ಇರಿಸಿಕೊಳ್ಳಲು ಸಹಾಯಮಾಡುತ್ತವೆ. ಅವು ನಿಮ್ಮ ಜೀವನದ ಕೊರತೆಗಳನ್ನು ಗುರುತಿಸಿಕೊಳ್ಳಲು ಸಹಾಯ ಮಾಡುತ್ತವೆ ಹಾಗೂ ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ.
ನೀವು ನಿಂದನೆ ಮಾಡಿದರೆ ನಿಂದನೆಗಳೇ ನಿಮ್ಮೆಡೆಗೆ ಮರಳಿ ಬರುತ್ತವೆ. ನೀವು ಪ್ರಶಂಸೆ ಮಾಡಿದರೆ ಅದು ಹಲವು ಮಡಿಯಾಗಿ ನಿಮ್ಮೆಡೆಗೆ ಬರುವುದನ್ನು ನೋಡುತ್ತೀರಿ. ನೀವು ಯಾವುದನ್ನು ಎಸೆಯುತ್ತಿರೋ ಅದು ಪುಟಿಪುಟಿದು ನಿಮ್ಮೆಡೆಗೆ ಮರಳುತ್ತದೆ ಎಂಬುದು ಆಕರ್ಷಣೆಯ ನಿಯಮ.
– ಗುರುದೇವ ಶ್ರೀ ಶ್ರೀ ರವಿ ಶಂಕರರು
ಅಧ್ಯಾತ್ಮದ ಜೊತೆ ಸಂಪರ್ಕ
ಉನ್ನತ ಶಕ್ತಿಯೊಂದರ ಮೇಲೆ ನಂಬಿಕೆ ಇರಿಸಿಕೊಳ್ಳಲು, ನಿಮ್ಮ ಪ್ರವೃತ್ತಿಗಳ ಅನೇಕ ಭಾಗಗಳನ್ನು ಏಕತ್ರ ಗೊಳಿಸಿ ಅವುಗಳನ್ನು ಬಾಹ್ಯ ವಿಚಾರಗಳ ಜೊತೆ ಜೋಡಿಸಿಕೊಳ್ಳಲು ಅಧ್ಯಾತ್ಮವು ಸಹಾಯಮಾಡುತ್ತದೆ. ಅಧ್ಯಾತ್ಮದ ಪರಿಕಲ್ಪನೆಯು ಆತ್ಮವನ್ನು ಭೌತಿಕ ಶರೀರಕ್ಕಿಂತ ಮೇಲಿನ ಮಟ್ಟದಲ್ಲಿರಿಸುತ್ತದೆ. ಅದು ಯಾವುದೇ ನಿರೀಕ್ಷೆಗಳನ್ನು ಇರಿಸಿಕೊಳ್ಳದೆ ಜೀವನವನ್ನು ನಡೆಸಲು ಹಾಗೂ ಅಂತರಂಗದ ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ಅಧ್ಯಾತ್ಮದ ಅನುಭವಗಳನ್ನು ಪಡೆಯಲು ತಮ್ಮದೇ ಆದ ವಿಶಿಷ್ಟವಾದ ಮಾರ್ಗಗಳನ್ನು ಹೊಂದಿರುತ್ತಾರೆ. ಕೆಲವರು ಅದನ್ನು ತಮ್ಮ ದೈನಂದಿನ ಕೆಲಸಗಳಲ್ಲಿಯೇ ಕಂಡುಕೊಂಡರೆ, ಕೆಲವರು ಭಕ್ತಿ ಪೂರ್ವಕ ಆರಾಧನೆಯಲ್ಲಿ ಕಂಡುಕೊಳ್ಳುತ್ತಾರೆ. ಅಥವಾ ಇನ್ನು ಕೆಲವರು ಜ್ಞಾನದ ಮೂಲಕ ಆ ಅನುಭವವನ್ನು ಪಡೆಯುತ್ತಾರೆ.
ಪ್ರತಿಯೊಬ್ಬರೂ ಅದೇ ಆತ್ಮದಿಂದ ನಿರ್ಮಿತರಾದವರು. ಯಾವುದು ಮಾತನಾಡುತ್ತಿದೆಯೋ, ಯಾವುದು ಅರ್ಥ ಮಾಡಿಕೊಳ್ಳುತ್ತಿದೆಯೋ, ಯಾವುದು ಗ್ರಹಿಸುತ್ತ ಸಂವಹನ ನಡೆಸುತ್ತದೆಯೋ ಅದು ನಮ್ಮೊಳಗಿನ ಆತ್ಮ. ಪ್ರತಿಯೊಂದು ಕ್ರಿಯೆಯನ್ನೂ ಆ ಚೈತನ್ಯವೇ ನಡೆಸುತ್ತದೆ. ಇದನ್ನು ಗುರುತಿಸಿ ಗೌರವಿಸುವುದೇ ಅಧ್ಯಾತ್ಮ
– ಗುರುದೇವ ಶ್ರೀ ಶ್ರೀ ರವಿ ಶಂಕರರು
ಅಧ್ಯಾತ್ಮದ ಚುಕ್ಕೆಗಳನ್ನು ಆಕರ್ಷಣೆಯ ನಿಯಮಗಳ ಮೂಲಕ ಈ ರೀತಿಯಲ್ಲಿ ಜೋಡಿಸಬಹುದು.
- ನೀವು ಪ್ರಜ್ಞಾಪೂರ್ವಕವಾಗಿ ಜಗತ್ತಿಗೆ ಸಕಾರಾತ್ಮಕ ಸಂದೇಶಗಳನ್ನು ಕಳಿಸುವುದರ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು ಎಂದು ಆಕರ್ಷಣೆಯ ನಿಯಮ ಹೇಳುತ್ತದೆ. ಅಧ್ಯಾತ್ಮವೂ ಕೂಡ ಭಾವನಾತ್ಮಕ ಸ್ವಾಸ್ಥ್ಯದಲ್ಲಿ ಹಾಗೂ ನಿರೀಕ್ಷೆ ಮತ್ತು ಆಶಾವಾದದಿಂದೊಡಗೂಡಿ ಮುಂದೆ ಸಾಗುವುದರಲ್ಲಿ ನಂಬಿಕೆಯಿರಿಸಿಕೊಂಡಿದೆ. ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಯನ್ನು ಹೊಂದುವುದರ ಮೇಲೆ ಎರಡೂ ಪರಿಕಲ್ಪನೆಗಳು ಗಮನವಿರಿಸುತ್ತವೆ.
- ಈ ಜಗತ್ತಿನಲ್ಲಿ ನಾವು ಯಾವ ರೀತಿಯ ಶಕ್ತಿಯನ್ನು ತೊಡಗಿಸುತ್ತೇವೋ ಅದು ನಮ್ಮ ಜೀವನದ ದಿನನಿತ್ಯದ ಸನ್ನಿವೇಶಗಳಲ್ಲಿ ಪ್ರತಿಫಲಿತವಾಗುತ್ತದೆ ಎಂದು ಆಕರ್ಷಣೆಯ ನಿಯಮ ಹೇಳುತ್ತದೆ. ನಮ್ಮ ಸಂಬಂಧಗಳಲ್ಲಿ ಮತ್ತು ನಮ್ಮ ವಲಯಗಳಲ್ಲಿ ನಾವು ಆಕರ್ಷಿಸಿದ ಜನರೇ ಇರುತ್ತಾರೆ, ಹಾಗೂ ಅವರು ನಮ್ಮಂತೆಯೇ ಇರುವುದನ್ನು ಗಮನಿಸುತ್ತೇವೆ. ಅಧ್ಯಾತ್ಮವು ಜಾಗೃತಮನಸ್ಸಿನ ಮೂಲಕ ನಮ್ಮ ಯೋಚನಾ ಪ್ರಕ್ರಿಯೆಗಳನ್ನು ಉತ್ತಮಪಡಿಸುವುದರ ಜೊತೆಗೆ ಅಧ್ಯಾತ್ಮದ ಮೇಲೆ ನಂಬಿಕೆಯಿರುವ ಜನರನ್ನು ಹತ್ತಿರಕ್ಕೆ ಸೆಳೆಯುತ್ತದೆ. ಇದೇ ಕಾರಣದಿಂದ ಅಧ್ಯಾತ್ಮದ ನೆರವಿಗಳು ಮತ್ತು (ವ್ಯಕ್ತಿಯನ್ನು ಆತ್ಮದ ಜೊತೆ ಜೋಡಿಸುವ) ಚಟುವಟಿಕೆಗಳು ಅನೇಕರನ್ನು ಆಕರ್ಷಿಸುತ್ತವೆ.
- ಆಕರ್ಷಣೆಯ ನಿಯಮ ಮತ್ತು ಆಧ್ಯಾತ್ಮಗಳೆರಡೂ ಜಾಗೃತಮನಸ್ಸು, ಉತ್ತಮ ಆರೋಗ್ಯ ಮತ್ತು ಧ್ಯಾನಗಳ ಮಹತ್ವವನ್ನು ಪ್ರತಿಪಾದಿಸುತ್ತವೆ. ನಿಮ್ಮ ಪ್ರಜ್ಞೆ ಮತ್ತು ಆತ್ಮದ ಮೇಲೆ ಗಮನವನ್ನು ಕೇಂದ್ರೀಕರಿಸಿದ ಕ್ಷಣದಲ್ಲಿ ಜೀವನದ ಸಮೃದ್ಧತೆಯ ಬಗ್ಗೆ ನಿಮಗೆ ಅರಿವು ಮೂಡುತ್ತದೆ. ಆಗ ನೀವು ನಿಮ್ಮ ವಿಚಾರಗಳನ್ನು ಸಕಾರಾತ್ಮಕವಾಗಿರಿಸಿ ವರ್ತಮಾನವನ್ನು ಅದು ಇರುವ ಹಾಗೆಯೇ ಒಪ್ಪಿಕೊಳ್ಳಲು ಶಕ್ತರಾಗುತ್ತೀರಿ.
- ನಮ್ಮ ಒತ್ತಡ ಮತ್ತು ಆತಂಕಗಳನ್ನು ಉತ್ತಮರೀತಿಯಲ್ಲಿ ನಿರ್ವಹಿಸಲು ಆಕರ್ಷಣೆಯ ನಿಯಮಗಳು ಮತ್ತು ಅಧ್ಯಾತ್ಮಗಳೆರಡೂ ನಮಗೆ ಸಹಾಯ ಮಾಡುತ್ತವೆ. ನಮ್ಮ ಜೀವನದ ಕಠಿಣ ಸನ್ನಿವೇಶಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗಮನಿಸಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ.
- ಜೀವನದ ನಕಾರಾತ್ಮಕ ಆಯಾಮಗಳ ತೀವ್ರತೆಯನ್ನು ಕಡಿಮೆ ಮಾಡಿ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯ ಬಗ್ಗೆ ಆಕರ್ಷಣೆಯ ನಿಯಮ ಮತ್ತು ಅಧ್ಯಾತ್ಮಗಳೆರಡೂ ಪ್ರತಿಪಾದನೆ ಮಾಡುತ್ತವೆ. ಇವು ನಿಮ್ಮ ಜೀವನದ ಸನ್ನಿವೇಶಗಳನ್ನು ಸಕಾರಾತ್ಮಕ ಶಕ್ತಿಯ ಮೂಲಕ ಬದಲಾಯಿಸಿಕೊಳ್ಳಲು ಬಲ ನೀಡುತ್ತವೆ. ಇದರಿಂದ ಸಕಾರಾತ್ಮಕ ಫಲಿತಾಂಶಗಳೇ ದೊರೆಯುತ್ತವೆ.
ಒಂದೇ ನಾಣ್ಯದ ಎರಡು ಮುಖಗಳು
ಆಕರ್ಷಣೆಯ ನಿಯಮಗಳು ಅಭಿವ್ಯಕ್ತಿಯ ಪರಿಕಲ್ಪನೆಯನ್ನು ಹೊಂದಿದ್ದರೆ ಅಧ್ಯಾತ್ಮವು ಅದೇ ಪರಿಕಲ್ಪನೆಯನ್ನು ಇನ್ನೊಂದು ರೀತಿಯಲ್ಲಿ ತಿಳಿಸುತ್ತದೆ. ಎರಡೂ ಮಾರ್ಗಗಳ ಮೂಲಕ ವಾಸ್ತವವನ್ನು ಹೊಸದಾಗಿ ಚಿತ್ರೀಕರಿಸಿಕೊಂಡು ಹೆಚ್ಚಿನ ಅಪಾಯಗಳಿಗೆ ಸಿದ್ಧರಾಗಬಹುದು. ತನ್ಮೂಲಕ ನಿಮ್ಮ ಗುರಿಗಳನ್ನು ಉತ್ತಮ ರೀತಿಯಲ್ಲಿ ಸಾಧಿಸಬಹುದು. ಇವೆಲ್ಲವೂ ಯಾವುದೇ ಹತಾಶೆ, ಒತ್ತಡ ಮತ್ತು ಆತಂಕಗಳನ್ನು ಸೃಷ್ಟಿಸಿಕೊಳ್ಳದೆ ಸಾಧ್ಯವಾಗುತ್ತದೆ. ನೀವು ಹೆಚ್ಚಿನ ಚೈತನ್ಯಶಾಲಿಗಳಾಗಿ, ಕೇಂದ್ರಿತರಾಗಿ ಮತ್ತು ಗುರಿಯತ್ತ ಲಕ್ಷ್ಯ ಇರಿಸಿಕೊಂಡಿರುವವರಾಗುತ್ತೀರಿ.
ವಿಶಾಲ ದೃಷ್ಟಿಕೋನದಿಂದ ನೋಡದಿದ್ದರೆ, ಆಕರ್ಷಣೆಯ ನಿಯಮ ಮತ್ತು ಅಧ್ಯಾತ್ಮಗಳೆರಡೂ ಅಪಾಯವನ್ನುಂಟುಮಾಡುವ ಸಂಭವವಿರುತ್ತವೆ. ಒಂದು ನಿಮ್ಮ ಹತೋಟಿಯನ್ನು ಮೀರಿದ ನಕಾರಾತ್ಮಕ ಪರಿಣಾಮಗಳಿಗೆ ನಿಮ್ಮನ್ನೇ ದೂಷಿಸಿಕೊಳ್ಳುವಂತೆ ಮಾಡಬಹುದು, ಇನ್ನೊಂದು ನಿಮ್ಮನ್ನು ಇನ್ನೊಬ್ಬರ ಮಾರ್ಗ ಮತ್ತು ಅಭಿಪ್ರಾಯಗಳಿಗೆ ಬೆಲೆಕೊಡದಿರುವಂತಹ ಸಿದ್ಧಾಂತಗಳಿಗೆ, ಪ್ರತ್ಯೇಕತೆಗೆ ಜೋತುಬೀಳುವಂತೆ ಮಾಡಬಹುದು. ಪ್ರತಿಯೊಬ್ಬರೂ ನಿಮ್ಮಂತೆಯೇ ಜೀವನದ ಉದ್ದೇಶವನ್ನು ಅರಸುತ್ತಾ ತಮ್ಮದೇ ರೀತಿಯಲ್ಲಿ ಚುಕ್ಕೆಗಳನ್ನು ಜೋಡಿಸುತ್ತಿರುತ್ತಾರೆ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಅಂತರಂಗವನ್ನು ಹೆಚ್ಚುಹೆಚ್ಚಾಗಿ ಶೋಧಿಸುತ್ತಿರುವಂತೆ, ಎಲ್ಲ ಜೀವಿಗಳ ಯೋಗಕ್ಷೇಮದ ಬಗ್ಗೆ ದಯೆ, ಕರುಣೆಗಳನ್ನು ರೂಢಿಸಿಕೊಳ್ಳುತ್ತಿರುವಂತೆ ನೀವು ಹೆಚ್ಚು ಪ್ರಬುದ್ಧರಾಗುತ್ತೀರಿ.
ಪ್ರೇಮ ಮತ್ತು ಜ್ಞಾನವನ್ನು ಒಗ್ಗೂಡಿಸುವ, ಆತ್ಮವನ್ನು ಉದ್ಧರಿಸುವ ಜ್ಞಾನವೇ ಅಧ್ಯಾತ್ಮ. ನಿಮಗೆ ದೃಷ್ಟಿ ಮತ್ತು ಹೃದಯವೈಶಾಲ್ಯವನ್ನು ನೀಡುವ ಜ್ಞಾನವೇ ಅಧ್ಯಾತ್ಮ.
– ಗುರುದೇವ ಶ್ರೀ ಶ್ರೀ ರವಿ ಶಂಕರರು
ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ರೂಢಿಸಿಕೊಳ್ಳಲು ಮತ್ತು ನಿಮಗೆ ನಿಮ್ಮ ಭಾವನಾತ್ಮಕ ಸ್ವಾಸ್ಥ್ಯದ ಬಗ್ಗೆ ಆಸಕ್ತಿಯಿದ್ದರೆ ನಮ್ಮ ವೆಲ್‌ನೆಸ್ (ಸ್ವಾಸ್ಥ್ಯ) ಕಾರ್ಯಕ್ತಮಗಳಲ್ಲಿ ಭಾಗವಹಿಸಿ ಹಾಗೂ ಪರಿವರ್ತನೆಯ ಅನುಭವವನ್ನು ಪಡೆಯಿರಿ.