ಅಧ್ಯಾತ್ಮಕ್ಕೆ ಬೇರೆಬೇರೆ ಜನರು ಬೇರೆಬೇರೆ ಅರ್ಥವನ್ನು ಕಲ್ಪಿಸಿಕೊಳ್ಳುತ್ತಾರೆ.  ಕೆಲವರು ಅದನ್ನು ಮತಧರ್ಮಗಳೊಂದಿಗೆ ಸಮೀಕರಿಸುತ್ತಾರೆ.  ಕೆಲವರು ಅದನ್ನು ಒಂದು ಮಹಾಶಕ್ತಿ ಅಥವಾ ಸ್ವಭಾವ ಎಂದು ಭಾವಿಸುತ್ತಾರೆ. ಇನ್ನು ಕೆಲವರು  ನಮ್ಮ ಅಂತರಾತ್ಮದೊಂದಿಗೆ ಸಂಪರ್ಕ ಎಂದು ತಿಳಿಯುತ್ತಾರೆ. ಯಾರ ಗ್ರಹಿಕೆ ಹೇಗೇ ಇರಲಿ,  ಅಧ್ಯಾತ್ಮದ  ಪ್ರಯೋಜನಗಳು ಅನೇಕ. ವ್ಯಕ್ತಿಗಳಲ್ಲಿ ಸಕಾರಾತ್ಮಕ ಪರಿವರ್ತನೆ ಉಂಟುಮಾಡುವುದರಿಂದ ಹಿಡಿದು ಜೀವನದಲ್ಲಿ ಸಂತೃಪ್ತಿಯನ್ನು ನೀಡುವವರೆಗೆ ಅಧ್ಯಾತ್ಮವು ಬಹುಆಯಾಮಗಳನ್ನು ಹೊಂದಿದೆ.

ಪ್ರಾಚೀನ ಭಾರತೀಯ ನಾಗರಿಕತೆಯಲ್ಲಿ ವಿಜ್ಞಾನ ಮತ್ತು ಅಧ್ಯಾತ್ಮಗಳ ನಡುವೆ ಎಂದಿಗೂ ಸಂಘರ್ಷವಿರಲಿಲ್ಲ.   ಇವೆರಡೂ  ಜೀವನದ ಭೌತಿಕ ಹಾಗೂ ಸೂಕ್ಷ್ಮ ಆಯಾಮಗಳನ್ನು ಬೇರೆಬೇರೆಯಾಗಿ ಪೋಷಿಸುತ್ತವೆ. ಇವೆರಡರ ನಡುವೆ ವಿರೋಧವಿಲ್ಲ, ಆದರೆ ಎರಡೂ  ಪರಸ್ಪರ ಪೂರಕವಾಗಿವೆ. ಅರ್ಥಪೂರ್ಣವಾಗಿ ಬದುಕಲು  ಮತ್ತು ನಮ್ಮ ಅಸ್ತಿತ್ವದ ಸತ್ಯವನ್ನು ಅರಿತುಕೊಳ್ಳಲು ಅಧ್ಯಾತ್ಮವು ಅವಶ್ಯಕ.

ಭೌತವಸ್ತುಗಳನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನ. ‘ನಾನು ಯಾರು’ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಧ್ಯಾತ್ಮ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ಅಧ್ಯಾತ್ಮವು ಏಕೆ ಮುಖ್ಯವಾಗುತ್ತದೆ?

ನಮಗೆ ಅರಿವಿರಲಿ, ಇಲ್ಲದಿರಲಿ ನಮ್ಮ ಮೂಲ ಅಸ್ತಿತ್ವವು  ಆಧ್ಯಾತ್ಮಿಕವೇ.    ನಮ್ಮ ಅಂತರಾತ್ಮದ ಜೊತೆ ಸಂಪರ್ಕ ಸಾಧಿಸಲು ಮತ್ತು ಭೂತಕಾಲದ ನೋವುಗಳ, ಭವಿಷ್ಯದ ಆತಂಕಗಳ ಪರಿವೆಯಿಲ್ಲದೆ  ವರ್ತಮಾನದಲ್ಲಿ ಸುಖೀ ಹಾಗೂ ಸಂತೃಪ್ತಜೀವನವನ್ನು ನಡೆಸಲು ಅಧ್ಯಾತ್ಮವು ನಮಗೆ ಸಹಾಯಮಾಡುತ್ತದೆ.  

ನೀವು ಜೀವನದ ಅರ್ಥವನ್ನು ಹುಡುಕುತ್ತಿದ್ದೀರಾ?

ಶಾಶ್ವತವಾದ  ನೆಮ್ಮದಿಗಾಗಿ ನೀವು ಹಾತೊರೆಯುತ್ತಿದ್ದೀರಾ?

ಪ್ರಾರ್ಥನೆ ಮತ್ತು ಧ್ಯಾನ ಮಾಡುವಾಗ ನಿಮಗೆ ಶಾಂತಿ ದೊರೆಯುತ್ತದೆಯೆ?

ಇತರರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದಾಗ ಮತ್ತು ಸಹಾಯ ಮಾಡಿದಾಗ ನಿಮಗೆ ಸಂತೃಪ್ತಭಾವ ಉಂಟಾಗುತ್ತದೆಯೆ?

ಉನ್ನತ  ಶಕ್ತಿಯೊಂದಕ್ಕೆ ಶರಣಾದಾಗ ನಿಮಗೆ ಭದ್ರತೆಯ ಭಾವನೆ ಬರುತ್ತದೆಯೆ?

ಮೇಲಿನ ಯಾವುದೇ ಪ್ರಶ್ನೆಗಳಿಗೆ ನೀವು ಹೌದು ಎಂದು ಉತ್ತರಿಸಿದ್ದರೆ, ನೀವು ನಿಜವಾಗಿಯೂ ಅಧ್ಯಾತ್ಮಜೀವಿಗಳು. ನೆಮ್ಮದಿಯ ಬದುಕಿಗೆ ಅಧ್ಯಾತ್ಮವು  ಅತ್ಯಗತ್ಯ.

ಚೈತನ್ಯವನ್ನು ಪೋಷಿಸುವ ಎಲ್ಲವೂ  ಅಧ್ಯಾತ್ಮವೇ. ಸರಿಯಾದ ವಿಶ್ರಾಂತಿ, ಸ್ವಲ್ಪ ಜ್ಞಾನ ಮತ್ತು ನಿಮ್ಮ ದೃಷ್ಟಿಕೋನದ  ವಿಸ್ತಾರ – ಇವೆಲ್ಲವೂ ಅಧ್ಯಾತ್ಮದ ಭಾಗ. ಸುಸಂಸ್ಕೃತವಾದ ಆನಂದಮಯ  ಜೀವನಕ್ಕೆ ಇವೆಲ್ಲ ಅಗತ್ಯ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ಅಧ್ಯಾತ್ಮದ ಅಭ್ಯಾಸವನ್ನು ಹೆಚ್ಚಿಸಲು 7 ಮಾರ್ಗಗಳು

  1. ಧ್ಯಾನ

ಧ್ಯಾನವು ನಿಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಪ್ರಜ್ಞಾಪೂರ್ವಕವಾಗಿ ಗ್ರಹಿಸಲು  ಸಹಾಯ ಮಾಡುತ್ತದೆ. ಇದು ನಿಮ್ಮ ಇಂದ್ರಿಯಗಳನ್ನು ಶಾಂತಗೊಳಿಸಿ  ಸನ್ನಿವೇಶಗಳಿಗೆ ಉತ್ತಮ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ. ಕೇವಲ ಐದು ನಿಮಿಷಗಳ ಧ್ಯಾನವೂ ಒತ್ತಡ, ಆತಂಕ, ಕೋಪ, ನೋವು, ಅಹಂಕಾರ, ಅಸೂಯೆ ಇತ್ಯಾದಿ ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಕ್ಷಣದಲ್ಲಿ ನಿಮ್ಮ ಸ್ಥಿತಿ, ನಿಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳ ಬಗ್ಗೆ ಅರಿವು, ನೀವು ಏನು ಮಾಡುತ್ತಿದ್ದೀರಿ ಎಂದು ಮುಂತಾದ ಸಣ್ಣ ಸಣ್ಣ ವಿವರಗಳೂ  ಪ್ರಜ್ಞಾಪೂರ್ವಕ ಧ್ಯಾನದ ಭಾಗವಾಗುತ್ತವೆ. ಸದಾ ಪ್ರಜ್ಞಾಪೂರ್ವಕವಾಗಿರಲು ಧ್ಯಾನ ಸಹಾಯ ಮಾಡುತ್ತದೆ.

  1. ಯೋಗ ಮತ್ತು ಪ್ರಾಣಾಯಾಮ

ಯೋಗಾಭ್ಯಾಸವು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಸ್ಥವಾಗಿರಿಸುವುದರ ಜೊತೆಗೆ ನಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ, ನಮ್ಮ ಅಂತರಾತ್ಮದೊಂದಿಗೆ ಸುಲಭವಾಗಿ ಸಂಪರ್ಕವನ್ನು ಸಾಧಿಸಲು ಸಹಾಯ ಮಾಡುತ್ತದೆ. ಯೋಗವು ಮೂಲತಃ ದೇಹವನ್ನು ಬಲಪಡಿಸುವುದರ ಜೊತೆಗೆ ನಮ್ಯತೆಯನ್ನೂ ಉಂಟುಮಾಡುತ್ತದೆ. ಪ್ರಾಣಾಯಾಮವು ನಮ್ಮ ಉಸಿರಾಟವನ್ನು ಉತ್ತಮಪಡಿಸುತ್ತದೆ ಹಾಗೂ ನಮ್ಮನ್ನು ಎಚ್ಚರವಾಗಿರಿಸುತ್ತದೆ.  ಅಧ್ಯಾತ್ಮದ ಮಾರ್ಗದಲ್ಲಿ ಮುನ್ನಡೆಯಲು ಯೋಗ ಮತ್ತು ಪ್ರಾಣಾಯಾಮಗಳು  ಮುಖ್ಯವಾಗುತ್ತವೆ.

  1. ಸಹಾನುಭೂತಿ ಮತ್ತು ಕ್ಷಮೆ

ಲೌಕಿಕ  ಸುಖಗಳಿಂದ ದೂರ ಸರಿದು ಅಧ್ಯಾತ್ಮದತ್ತ ನಿಮ್ಮ ಜೀವನವನ್ನು ತಿರುಗಿಸುವಾಗ ನೀವು ಸಹಾನುಭೂತಿ, ಕ್ಷಮೆ ಮತ್ತು ಪ್ರೇಮವನ್ನು ಬೆಳೆಸಿಕೊಳ್ಳುವಿರಿ.  ಇತರರನ್ನು ನಿಮಗಿಂತ ಭಿನ್ನವಾಗಿ ನೋಡದ ಕಾರಣ ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ. ನಮ್ಮೆಲ್ಲರನ್ನೂ ಒಟ್ಟಿಗೆ ಬಂಧಿಸಿರುವ  ಸಮಾನತಂತು ಅಥವಾ ದಿವ್ಯಪ್ರಜ್ಞೆಯ ಬಗ್ಗೆ ಅರಿವು ಮೂಡಿ ಆತ್ಮೀಯತೆ ಉಂಟಾಗುತ್ತದೆ.

ಜಗತ್ತಿನ ಎಲ್ಲ ಜನರೊಂದಿಗೆ ಆತ್ಮೀಯತೆಯ ಭಾವನೆಯೇ ಅಧ್ಯಾತ್ಮ.

– ಗುರುದೇವ ಶ್ರೀ ಶ್ರೀ ರವಿ ಶಂಕರ್
  1. ಸಂತೃಪ್ತಿ ಮತ್ತು ಕೃತಜ್ಞತೆ

ಕೃತಜ್ಞತೆಯ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಬಳಿ ಇಲ್ಲದಿರುವುದರ ಬಗ್ಗೆ ದೂರುವ ಬದಲು ನಿಮಗೇನು ದೊರೆತಿದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಯಾರು ತೃಪ್ತರಾಗಿರುತ್ತಾರೋ  ಅವರನ್ನು  ಅತ್ಯಂತ  ಶ್ರೀಮಂತರೆಂದು ಆಧ್ಯಾತ್ಮಿಕದೃಷ್ಟಿಯಲ್ಲಿ ಪರಿಗಣಿಸಲಾಗುತ್ತದೆ. ಜೀವನದ ಹಲವು ಜಂಜಡಗಳಲ್ಲಿ ಮಗ್ನರಾಗಿ ಐಹಿಕ ಸುಖದ ಮೋಹಕ್ಕೆ ಒಳಗಾಗುವ ಜನರು ಮುಂದೊಂದು ದಿನ ಎಲ್ಲವೂ ಮಾಯವಾಗುತ್ತದೆ ಎಂಬುದನ್ನು ಮರೆತುಬಿಡುತ್ತಾರೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ತಿಳಿದುಕೊಂಡು  ನಮ್ಮಲ್ಲಿ ಇರುವುದರ ಬಗ್ಗೆ ಕೃತಜ್ಞತೆ ಹೊಂದುವುದರಿಂದ  ಜೀವನ ಸಮೃದ್ಧವಾಗುತ್ತದೆ ಹಾಗೂ  ಸಾರ್ಥಕವಾಗುತ್ತದೆ. 

ನಿಮ್ಮಲ್ಲಿ ಕೃತಜ್ಞತೆ ಸ್ಥಾಯಿಯಾದಾಗ ಆ ಕೃತಜ್ಞತೆಯು ನಿಮ್ಮಿಂದ ಅನುಗ್ರಹದ ರೂಪದಲ್ಲಿ ಹರಿಯುತ್ತದೆ.

– ಗುರುದೇವ ಶ್ರೀ ಶ್ರೀ ರವಿ ಶಂಕರ್
  1. ಲಯಬದ್ಧವಾದ  ಉಸಿರಾಟ

ಸುದರ್ಶನ ಕ್ರಿಯೆಯಂತಹ ಲಯಬದ್ಧ ಉಸಿರಾಟದ ತಂತ್ರಗಳು ನಿಮ್ಮ ಶ್ವಾಸಕೋಶವನ್ನು ವಿಸ್ತರಿಸಲು ಸಹಾಯ ಮಾಡುತ್ತವೆ, ನಿಮ್ಮನ್ನು ಒತ್ತಡದ ಸಂಕೋಲೆಗಳಿಂದ  ಮುಕ್ತಗೊಳಿಸುತ್ತವೆ  ಮತ್ತು ಜೀವನದಲ್ಲಿ ಒಳ್ಳೆಯದನ್ನೇ ಗಮನಿಸಲು ಪ್ರೇರಿಸುತ್ತವೆ.  ಇವು ನಿಮ್ಮ ಪ್ರಜ್ಞೆಯ ಸ್ತರವನ್ನು ಎತ್ತರಿಸಿ  ಆತ್ಮವಿಶ್ವಾಸ ಮತ್ತು ಶಾಂತಿಯನ್ನು ಉಂಟುಮಾಡುತ್ತವೆ. ವರ್ತಮಾನದಲ್ಲಿ ಗಮನವನ್ನು  ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ, ಸುದರ್ಶನ ಕ್ರಿಯೆಯು ಉತ್ತಮವಾದ ಸೌಖ್ಯವನ್ನು ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

  1. ನಿಸ್ವಾರ್ಥ ಸೇವೆ

ನಿಸ್ವಾರ್ಥ ಸೇವೆಯು ಅಧ್ಯಾತ್ಮದ ಅತ್ಯಗತ್ಯ ಭಾಗವಾಗಿದೆ. ಇತರರಿಗೆ ಸಹಾಯ ಮಾಡುವುದು ಅಧ್ಯಾತ್ಮವನ್ನು ಅತ್ಯಂತ ಪರಿಣಾಮಕಾರಿಯಾಗಿ  ರೂಢಿಸಿಕೊಳ್ಳುವ ಒಂದು ಸುಲಭ ಮಾರ್ಗ.  ನೀವು ಒಳ್ಳೆಯ ಉದ್ದೇಶಕ್ಕಾಗಿ ಸ್ವಯಂಪ್ರೇರಿತರಾಗಿ ಕೆಲಸ ಮಾಡುವುದರ ಮೂಲಕ ಇತರರಿಗೆ ಸಹಾಯ ಮಾಡಬಹುದು.   ಸೌಲಭ್ಯವಂಚಿತರಿಗೆ ಸಹಾಯ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸುವುದರಿಂದ ಸಂತೃಪ್ತಿ ಉಂಟಾಗುತ್ತದೆ.  ಇದರಿಂದ ನೀವು ಎಷ್ಟು ಅದೃಷ್ಟವಂತರು ಎಂಬ ಅರಿವು ಕೂಡಾ ಉಂಟಾಗುತ್ತದೆ; ನಿಮ್ಮಲ್ಲಿ ವಿನಮ್ರತೆ ಬೆಳೆಯುತ್ತದೆ. 

ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಉನ್ನತೀಕರಿಸುವುದು ಅತ್ಯುತ್ತಮ ಸೇವೆ.

– ಗುರುದೇವ ಶ್ರೀ ಶ್ರೀ ರವಿ ಶಂಕರ್
  1. ಅಂತರಂಗವನ್ನು ಶೋಧಿಸಿ

ದಿನಚರ್ಯೆ, ಸಂಗೀತ, ಚಿತ್ರಕಲೆ ಅಥವಾ ನೃತ್ಯ ಅಥವಾ ಬೇರೆ ಯಾವುದರ ಮೂಲಕ  ನಿಮ್ಮ ಶಕ್ತಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಅಥವಾ ಪರಿವರ್ತಿಸಲು ಸಾಧ್ಯ ಎಂಬುದನ್ನು ತಿಳಿಯಲು ನಿಮ್ಮ ಅಂತರಂಗವನ್ನು ಗಮನಿಸಿ. ಅನೇಕರು ಪ್ರಕೃತಿಯೊಂದಿಗೆ ಸಮಯ ಕಳೆಯಲು ಪರ್ವತಪ್ರದೇಶಗಳಿಗೆ ತೆರಳುತ್ತಾರೆ. ಇದೂ ಒಂದು ರೀತಿಯ ಚಿಕಿತ್ಸೆ ಎಂದು ಹೇಳುತ್ತಾರೆ. ನಿಮ್ಮ ನಂಬಿಕೆಯ  ಜನರೊಂದಿಗೆ ನಿಮ್ಮ ಕಟ್ಟಿಟ್ಟ ಭಾವನೆಗಳನ್ನು ಹಂಚಿಕೊಳ್ಳಿ. ಅಧ್ಯಾತ್ಮದ ಅರ್ಥವನ್ನು ತಿಳಿಯಲು ನಿಮ್ಮ ಅಂತರಂಗವನ್ನು ಗಮನಿಸಿ. ಯಾವುದು ನಿಮಗೆ ಹಿತವನ್ನುಂಟುಮಾಡುತ್ತದೆಯೋ ಅದನ್ನು  ಮುಂದುವರಿಸಿ.

ಕೊನೆಯದಾಗಿ,

ಜೀವನದಲ್ಲಿ ಸಣ್ಣ ದೊಡ್ಡ ಹಿನ್ನಡೆಗಳಿಂದ ಹತಾಶರಾಗದೆ  ಮುನ್ನಡೆಯಲು ಅಧ್ಯಾತ್ಮದ ಶಕ್ತಿಯು ನಿಮಗೆ  ಸಹಾಯ ಮಾಡುತ್ತದೆ. ಜೀವನದ ಹೋರಾಟದಲ್ಲಿ ನೀವು ಏಕಾಂಗಿಯಲ್ಲ, ನಿಮ್ಮ ಜೀವನವು ಇತರರ ಜೀವನದೊಂದಿಗೆ ತಳುಕುಹಾಕಿಕೊಂಡಿದೆ ಎಂಬುದನ್ನು ಅಧ್ಯಾತ್ಮದ ಮೂಲಕ ನೀವು ಅರಿಯುತ್ತೀರಿ.  ನೀವು ಜೀವನವನ್ನು ಸರಿಯಾಗಿ ಅರ್ಥಮಾಡಿಕೊಂಡು ಸರಿಯಾದ ಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ಥಕವಾಗಿ ಬದುಕುತ್ತೀರಿ.   ಬದುಕಿನ ಸಮಸ್ಯೆಗಳಿಂದ ಹೊರಬರಲು ಸಮಸ್ಯೆಗಳನ್ನು ಗೆಲ್ಲುವುದಕ್ಕಿಂತ ಉತ್ತಮ ಪರಿಹಾರ ಇನ್ನೊಂದಿಲ್ಲ.

ಯಾರೂ ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಾಗದಂತಹ  ಆನಂದವನ್ನು ಉಂಟುಮಾಡುವುದೇ ಅಧ್ಯಾತ್ಮದ ಗುರಿ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

    Wait!

    Don’t miss this Once-In-A-lifetime opportunity to join the Global Happiness Program with Gurudev!

    Have questions? Let us call you back

     
    *
    *
    *
    *
    *