ನಾಲ್ಕು ದೊಡ್ಡ ಚಿಂತೆಗಳು

ಹಣ, ಸಂಬಂಧಗಳು, ಪ್ರತಿಷ್ಠೆ ಮತ್ತು ಆರೋಗ್ಯ –  ಇವು ಜನರನ್ನು ಚಿಂತೆಗೀಡು ಮಾಡುವ ನಾಲ್ಕು ವಿಷಯಗಳು. ಇವೆಲ್ಲವೂ ಒಂದು ದಿನ ದೂರವಾಗುತ್ತವೆ ಎಂದು ತಿಳಿದಿದ್ದರೂ ನೀವು ಅವುಗಳ ಬಗ್ಗೆ ಚಿಂತಿಸುತ್ತೀರಿ.

ಜೀವನವನ್ನು ಒಂದು ವಿಶಾಲ ಸಂದರ್ಭದಲ್ಲಿ ಗಮನಿಸಿ. ನೀವು ಹತ್ತು ವರ್ಷಗಳ ಹಿಂದೆ ಯಾವುದೋ ವಿಷಯದ ಕುರಿತು ಚಿಂತೆ ಮಾಡುತ್ತಿದ್ದಿರಿ, ಹೀಗಿದ್ದರೂ ನೀವು ಇನ್ನೂ ಬದುಕಿದ್ದೀರಿ. ಐದು ವರ್ಷಗಳ ಹಿಂದೆ ನೀವು ಚಿಂತೆ ಮಾಡುತ್ತಿದ್ದಿರಿ. ಮೂರು ವರ್ಷಗಳ ಹಿಂದೆಯೂ ನೀವು ಚಿಂತೆ ಮಾಡುತ್ತಿದ್ದಿರಿ. ಈ ಚಿಂತೆಯಿಂದ ನಿಮಗೇನೂ ಸಹಾಯವಾಗಲಿಲ್ಲ. ಚಿಂತೆಯಿಂದ ನಿಮ್ಮ ದೇಹದಲ್ಲಿ ಹೆಚ್ಚು ವಿಷ ಅಥವಾ ನಂಜು ಮಾತ್ರ ಉತ್ಪತ್ತಿಯಾಯಿತು.  ಚಿಂತೆ ಮಾಡಿದರೂ ಮಾಡದಿದ್ದರೂ ಬದುಕು ಮುಂದುವರಿಯುತ್ತದೆ.

ನಿಮ್ಮನ್ನು ಚಿಂತೆಗೀಡು ಮಾಡುತ್ತಿರುವ ವಿಷಯ ಯಾವುದು? ಎಚ್ಚರದಿಂದ ಗಮನಿಸಿ, ಎಲ್ಲ ಚಿಂತೆಗಳೂ ಒಂದಲ್ಲ ಒಂದು ದಿನ ಕೊನೆಗೊಳ್ಳುತ್ತವೆ.  ಎಲ್ಲವೂ ಒಂದು ದಿನ ಮುಗಿಯಲಿವೆ ಎಂಬ ಅರಿವು ನಿಮ್ಮ ಮನಸ್ಸನ್ನು ಚಿಂತಿಸುವ ಪ್ರವೃತ್ತಿಯಿಂದ ಹೊರತರುತ್ತದೆ. ಎಲ್ಲವೂ ಬದಲಾಗುವುದನ್ನು ಮತ್ತು ಎಲ್ಲವೂ ಕಣ್ಮರೆಯಾಗುವುದನ್ನು ನೋಡುವಾಗ, ನೀವು ಘನವಾಗುತ್ತೀರಿ, ಬಲಗೊಳ್ಳುತ್ತೀರಿ, ಆದರೂ ಮೃದು ಮತ್ತು ಕೇಂದ್ರಿತರಾಗುತ್ತೀರಿ.

ಚಿಂತಿಸುವುದರಿಂದ ಪ್ರಯೋಜನವಿಲ್ಲ. ಅದರ ಬದಲು, ಚಿಂತೆಗೆ ಕಾರಣವಾದ ವಿಷಯ ಮತ್ತು ನಿಮ್ಮ ಆಕಾಂಕ್ಷೆಗಳ ಮೇಲೆ ಗಮನಹರಿಸಿ ಕಾರ್ಯರತರಾಗುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಶಕ್ತಿ ನಿಮಗೆ ಬೇಕಾಗುತ್ತದೆ. ಆಧ್ಯಾತ್ಮಿಕ ಅಭ್ಯಾಸಗಳು ನಿಮ್ಮ ಶಕ್ತಿಯನ್ನು, ಸಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ.

ಚಿಂತೆಯ ಮೂಲಗಳು

ಹಣವು ನಿಮಗೆ ಚಿಂತೆಯ ಮೂಲವೆ? ಪಕ್ಷಿಗಳನ್ನು ನೋಡಿ, ಎಲ್ಲಾ ಪ್ರಾಣಿಗಳನ್ನು ನೋಡಿ, ಅವುಗಳಿಗೆ ಆಹಾರ ಸಿಗುತ್ತಿದೆಯಲ್ಲವೇ? ಪ್ರಕೃತಿ ಎಲ್ಲವನ್ನೂ ಒದಗಿಸುತ್ತದೆ. ನಮಗೆ ಬೇಕಾದುದನ್ನು ಕೊಡುವುದರಲ್ಲಿ ಪ್ರಕೃತಿಯ ಪಾತ್ರ ದೊಡ್ಡದು. ಆದ್ದರಿಂದ ಪ್ರಕೃತಿಯು ನಿಮಗೆ ಬೇಕಾದುದನ್ನು ನೀಡುತ್ತದೆ ಎಂಬ ವಿಶ್ವಾಸ ಹೊಂದಿ. ನಿಮ್ಮ ಪ್ರಜ್ಞೆಯು ಒಂದು ಕ್ಷೇತ್ರ, ನೀವು ಅಲ್ಲಿ ಯಾವ ಬೀಜವನ್ನು ಹಾಕಿದರೂ ಅದು ಮೊಳಕೆಯೊಡೆಯುತ್ತದೆ. ನೀವು ‘ಕೊರತೆ’ಯ ಬೀಜವನ್ನು ಹಾಕಿದರೆ ‘ಕೊರತೆ’ ಸಮೃದ್ಧವಾಗುತ್ತದೆ. ನೀವು, ‘ಹೌದು, ಸಮೃದ್ಧಿ ಇದೆ’ ಎಂದು ಹೇಳಿದರೆ, ಆಗ ಸಮೃದ್ಧಿಯೇ ಅಧಿಕವಾಗುತ್ತದೆ.  

ಸಂಬಂಧಗಳು ನಿಮಗೆ ಸಮಸ್ಯೆ ಒಡ್ಡಿದಾಗ ನಿಮ್ಮ ಹೃದಯ ಬಿರಿಯುತ್ತದೆ. ಎಚ್ಚರಗೊಂಡು ಗಮನಿಸಿ. ಆಯಾ ಸಂಬಂಧಗಳು ಉಂಟಾಗುವ ಮೊದಲೂ ನೀವು ಬದುಕಿದ್ದಿರಿ, ಉತ್ಸಹಭರಿತರಾಗಿದ್ದಿರಿ. ನೀವು ನಗುತ್ತಿದ್ದಿರಿ, ಸಂತೋಷದಿಂದಿದ್ದಿರಿ. ಒಬ್ಬ ವ್ಯಕ್ತಿಯನ್ನು ಭೇಟಿಯಾಗಿ ಸಂಬಂಧ ಸ್ಥಾಪಿತವಾಗುವ ಮೊದಲಿನ ದಿನಗಳನ್ನು ನೆನಪಿಸಿಕೊಳ್ಳಿ. ಆಗ ಬದುಕು ಸರಿಯಾಗಿಯೇ ನಡೆಯುತ್ತಿತ್ತು. ಆದುದರಿಂದ ಸಂಬಂಧಗಳು ಮುರಿದು ಬಿದ್ದ ನಂತರವೂ ಬದುಕು ಸರಿಯಾಗಿಯೇ ಇರುತ್ತದೆ. ಆದುದರಿಂದ ಆ ಬಗ್ಗೆ ನೀವು ತಳಮಳಗೊಳ್ಳುವುದೇಕೆ?

ಎಲ್ಲವೂ ಒಂದುದಿನ ಕೊನೆಗೊಳ್ಳಲಿವೆ ಎಂಬ ಅರಿವು ಮನಸ್ಸಿನ ಚಿಂತೆ ಮಾಡುವ ಪ್ರವೃತ್ತಿಯಿಂದ ನಿಮ್ಮನ್ನು ಹೊರತರುತ್ತದೆ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ನಿಮಗೆ ಆರೋಗ್ಯದ ಬಗ್ಗೆ ಚಿಂತೆಯೇ? ನೀವು ಎಷ್ಟು ಆರೋಗ್ಯವಾಗಿರುತ್ತೀರಿ? ನೀವು ಎಷ್ಟೇ ಆರೋಗ್ಯವಾಗಿದ್ದರೂ ಒಂದು ದಿನ ದೇಹದ ಜೊತೆಗಿನ ನಿಮ್ಮ ಸಂಬಂಧ ಕಡಿದುಹೋಗುತ್ತದೆ. ಹಾಗೆಂದ ಮಾತ್ರಕ್ಕೆ ನೀವು ಆರೋಗ್ಯವಾಗಿರಬಾರದು ಎಂದಲ್ಲ. ಆದರೆ ಒಂದೆಡೆ ಕುಳಿತು ಆರೋಗ್ಯದ ಬಗ್ಗೆ ಚಿಂತಿಸುವುದು ಹುಚ್ಚುತನ ಎನ್ನಬಹುದು.

ಸುಮ್ಮನೆ ಕುಳಿತುಕೊಂಡು ಆರೋಗ್ಯದ ಬಗ್ಗೆ ಚಿಂತೆ ಮಾಡುವುದರಿಂದಲೂ ಉಪಯೋಗವಿಲ್ಲ. ಚಿಂತೆ ಹೆಚ್ಚಾದರೆ ನಿಮ್ಮ ಆರೋಗ್ಯ ಇನ್ನಷ್ಟು‌ ಹದಗೆಡುತ್ತದೆ. ಚಿಂತೆಯು ನಿಮ್ಮ ದೇಹದಲ್ಲಿ ಒತ್ತಡ ಉಂಟುಮಾಡುವ ಕಾರ್ಟಿಸೋಲ್‌ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಅದರಿಂದಾಗಿ, ಕಾಯಿಲೆ ವಾಸಿಯಾಗುವುದು ನಿಧಾನವಾಗುತ್ತದೆ.

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೀರಿ, ಆಗಲೂ ನಿಮ್ಮ ಮುಖದ ಮೇಲೆ ಚಿಂತೆ ಕಾಣಿಸುತ್ತದೆ. ಚಿಂತೆಯಿಂದ ಕಳಾಹೀನವಾದ ಮುಖ ಹೊಂದಿದ, ಅನ್ಯಮನಸ್ಕರಾಗಿರುವ, ಯಾಂತ್ರಿಕವಾಗಿ ಕಾಣಿಸುವ  ನಿಮಗೆ ಯಾರಾದರೂ ಉದ್ಯೋಗ ಕೊಡುತ್ತಾರೆಯೇ? ನೀವೇ ಉದ್ಯೋಗದಾತರಾಗಿದ್ದರೆ ನೀರಸವಾಗಿ ಕಾಣಿಸುವ, ಉತ್ಸಾಹವೇ ಇಲ್ಲದ, ಉದ್ಯೋಗದ ಬಗ್ಗೆ ಮಾತ್ರ ಚಿಂತಿಸುವ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತೀರಾ? ನೀವು ಸ್ವಂತ ಉದ್ಯೋಗ ಮಾಡುತ್ತಿದ್ದರೆ ಚಿಂತಿಸುವುದರಿಂದ ಮಾತ್ರವೇ ನಿಮ್ಮ ವ್ಯವಹಾರ ಉತ್ತಮವಾಗುತ್ತದೆಯೇ?

ನೀವು ಅವಿವಾಹಿತರಾಗಿದ್ದು ಸೂಕ್ತ ಸಂಗಾತಿಗಾಗಿ ಹುಡುಕುತ್ತಿದ್ದರೆ ನಿಮ್ಮ ಚಿಂತಾಕ್ರಾಂತ ಮುಖವನ್ನು ನೋಡಿ ಯಾರಾದರೂ ನಿಮ್ಮನ್ನು ಮದುವೆಯಾಗಲು ಮುಂದೆ ಬರೆತ್ತಾರೆಯೇ? ಅಂತಹ ವ್ಯಕ್ತಿಯನ್ನು ನೀವು ನಿಮ್ಮ ಸಂಗಾತಿಯಾಗಿ ಆರಿಸಿಕೊಳ್ಳುತ್ತೀರಾ? ಅಥವಾ ಸದಾ ಖುಷಿಯಾಗಿರುವ, ಉತ್ಸಾಹದಿಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಾ?ಈ ಜಗತ್ತಿನಲ್ಲಿ ೭೦೦ ಕೋಟಿ ಜನರಿದ್ದಾರೆ, ಅವರಲ್ಲಿ ಸುಮಾರು ೨೫೦ ಕೋಟಿ ಜನರು ವಿವಾಹಯೋಗ್ಯ ವಯಸ್ಸಿನವರಾಗಿದ್ದಾರೆ ಎಂಬುದನ್ನು ನೆನಪಿಡಿ. ಹೀಗಿರುವಾಗ, ಸೂಕ್ತ ಸಂಗಾತಿಗಾಗಿ ಚಿಂತಿಸುವುದರಿಂದ ಫಲವೇನು?

ಚಿಂತೆಯ ಕುರಿತು ಅರಿವು

ಬದುಕನ್ನು ವಿಶಾಲವಾದ ನೆಲೆಯಲ್ಲಿ ಗಮನಿಸಿ. ನೀವು ಮಾನಸಿಕ ಆಸ್ಪತ್ರೆಯಲ್ಲಿದ್ದೀರಿ ಎಂದು ಭಾವಿಸಿ.  ಅಲ್ಲಿರುವ ಎಲ್ಲಾ ರೋಗಿಗಳ ಮಾತುಗಳನ್ನು ಕೇಳಿಸಿಕೊಳ್ಳಿ. ಅವರ ಅವಸ್ಥೆಯನ್ನು ಗಮನಿಸಿ. ನೀವು ಅಲ್ಲಿಗೆ ಕೇವಲ ಸಂದರ್ಶಕರಾಗಿ ಬಂದಿದ್ದೀರಿ; ನಿಮಗೆ ಅಲ್ಲಿ ಭರ್ತಿಯಾಗುವ ಅಗತ್ಯ ಬಂದಿಲ್ಲ.  ಅದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ.

ಇನ್ನೂ ಸರಿಯಾಗಿ ಅರ್ಥವಾಗದಿದ್ದರೆ ಸ್ಮಶಾನಕ್ಕೆ ಭೇಟಿಕೊಡಿ. ಅಲ್ಲಿಗೆ ಬರುವ ದೇಹಗಳನ್ನೂ ಅವುಗಳ ದಹನಸಂಸ್ಕಾರವನ್ನೂ ಗಮನಿಸಿ. ನೀವೂ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗುವವರೇ. ಹೀಗಿರುವಾಗ, ಚಿಂತಿಸುವುದರಿಂದ ಏನು ಉಪಯೋಗ?

ನೀವು ಎಷ್ಟೇ ಉತ್ತಮವಾದ ಜೀವನವನ್ನು ನಡೆಸಿದ್ದರೂ ನೀವು ಎಷ್ಟೇ ಶ್ರೀಮಂತರಾಗಿದ್ದರೂ, ನೀವು ಎಷ್ಟೇ ಪ್ರಸಿದ್ಧ ಅಥವಾ ಪ್ರಭಾವೀ ವ್ಯಕ್ತಿಗಳಾಗಿದ್ದರೂ ನಿಮ್ಮನ್ನೂ ಸೇರಿಕೊಂಡಂತೆ ಎಲ್ಲರನ್ನೂ ಒಂದು ದಿನ ದಹನ ಮಾಡುತ್ತಾರೆ ಅಥವಾ ಸಮಾಧಿ ಮಾಡುತ್ತಾರೆ. ಸ್ಮಶಾನದಲ್ಲಿ ಕೇವಲ ಅರ್ಧ ದಿನ ಕುಳಿತುಕೊಂಡು ನೋಡಿ.  ಮೃತದೇಹಗಳ ಜೊತೆಗೆ ಜನರೂ ಬರುತ್ತಾರೆ, ಒಂದಷ್ಟು ಶೋಕಿಸುತ್ತಾರೆ, ನಂತರ ದಹನ ಮಾಡಿ ಮನೆಗೆ ಮರಳುತ್ತಾರೆ, ಊಟ ಮಾಡುತ್ತಾರೆ. ಮರುದಿನ ಎಂದಿನಂತೆಯೇ ಉಪಾಹಾರವನ್ನೂ ಸೇವಿಸುತ್ತಾರೆ.

ಈ ಬದುಕಿಗೆ ಒಂದಲ್ಲ ಒಂದು ದಿನ ತೆರೆ ಬೀಳುತ್ತದೆ. ಹೀಗಿರುವಾಗ ಚಿಂತಿಸುವುದರಿಂದ ಪ್ರಯೋಜನವೇನು?

ಎಲ್ಲವೂ ಒಂದು ದಿನ ಕೊನೆಗೊಳ್ಳುತ್ತದೆ ಎಂದು ಹೇಳಿದರೆ ನೀವು ಆತ್ಮಹತ್ಯೆಯ ಬಗ್ಗೆ ಯೋಚಿಸಬೇಕು ಎಂದರ್ಥವಲ್ಲ. ಪ್ರಕೃತಿಯು ತನ್ನ ಕೆಲಸವನ್ನು ತಾನು ಮಾಡಲಿ. ಪ್ರಕೃತಿಯ ನಡೆಯಲ್ಲಿ ಮಧ್ಯಪ್ರವೇಶ ಮಾಡಬೇಡಿ. ಬೇರೆಯವರಿಗೆ ಸಮಸ್ಯೆಗಳನ್ನು ಉಂಟುಮಾಡಿ ಅವರನ್ನು ಅಸಹಾಯಕರನ್ನಾಗಿ, ದುಃಖಿಗಳನ್ನಾಗಿ ಮಾಡಬೇಡಿ.

ನಿಮಗೆ ಕ್ರಿಯಾಶಾಲಿಯಾಗಲು ಬೇಕಾದ ಶಕ್ತಿಯನ್ನು ಆಧ್ಯಾತ್ಮಿಕ ಅಭ್ಯಾಸಗಳು‌ ತಂದುಕೊಡುತ್ತವೆ. ಅವು ನಿಮಗೆ ಭಾವನಾತ್ಮಕವಾಗಲು ಹಾಗೂ ಹೃದಯವಂತರಾಗಲು ಸಹಾಯ ಮಾಡುತ್ತವೆ. ಅದರಿಂದಾಗಿ ನೀವು ತಲೆಯ (ಬುದ್ಧಿಯ) ಮಟ್ಟದಲ್ಲೇ ಉಳಿದುಕೊಳ್ಳುವುದಿಲ್ಲ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ಆತ್ಮಹತ್ಯೆ ಮಾಡಿಕೊಳ್ಳುವುದರಿಂದಲೂ ಯಾವ ಪ್ರಯೋಜನವಿಲ್ಲ, ಏಕೆಂದರೆ ಮುಂದಿನ ಜನ್ಮದಲ್ಲಿ ಇದೇ ಜೀವನ ಚಕ್ರವನ್ನು ಮತ್ತೊಮ್ಮೆ ಸಂಪೂರ್ಣವಾಗಿ ಅನುಭವಿಸಬೇಕಾಗುತ್ತದೆ. ಒಂದಲ್ಲ ಒಂದು ದಿನ ಈ ಜನ್ಮ ಕೊನೆಗೊಳ್ಳುತ್ತದೆ ಎಂಬ ಅರಿವಿನಿಂದ ಈ ಜನ್ಮವನ್ನು ಸಂಪೂರ್ಣವಾಗಿ ಕಳೆಯಿರಿ.

ಚಿಂತೆ ಕೆಲಸ ಮಾಡುವ ಬಗೆ

ಏನನ್ನಾದರೂ ಪಡೆಯಬೇಕೆಂದೆನ್ನಿಸಿದಾಗ ನಿಮ್ಮಲ್ಲಿ ಕಾಮನೆಗಳು ಹುಟ್ಟಿಕೊಳ್ಳುತ್ತವೆ. ಆ ಕಾಮನೆಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಶಕ್ತಿ, ಹೃದಯ ಮತ್ತು ಚೈತನ್ಯಗಳನ್ನು ವಿನಿಯೋಗಿಸಬೇಕಾಗುತ್ತದೆ. ನಿಮ್ಮ ಕಾಮನೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಚಿಂತೆ ಹುಟ್ಟಿಕೊಳ್ಳುತ್ತದೆ, ಆದರೂ ಅದರ ಬಗ್ಗೆ ಯೋಚಿಸುತ್ತಿರುತ್ತೀರಿ. ನಿಮ್ಮ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಗಳ ನಡುವೆ ಸಮತೋಲನವಿರಬೇಕು. 

ಚಿಂತಿಸುವುದರಿಂದ ಉಪಯೋಗವಿಲ್ಲ. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ, ನಿಮ್ಮನ್ನು ಕಾಡಿಸುವ ವಿಚಾರ ಅಥವಾ ನಿಮ್ಮ ಕಾಮನೆಗಳ ಕುರಿತು ಕ್ರಿಯಾಶೀಲರಾಗುವುದರಿಂದ ಪ್ರಯೋಜನವಾಗುತ್ತದೆ.

ಅಧ್ಯಾತ್ಮವು ವ್ಯಕ್ತಿಗೆ ಕ್ರಿಯಾಶೀಲವಾಗಲು ಶಕ್ತಿಯನ್ನು ನೀಡುತ್ತದೆ. ನಿಮ್ಮ ಕೆಲಸಕ್ಕೆ ಅಗತ್ಯವಾದ ಶಕ್ತಿಯನ್ನು ಆಧ್ಯಾತ್ಮಿಕ ಅಭ್ಯಾಸಗಳು ನೀಡುತ್ತವೆ. ಅವು ನಿಮಗೆ ಭಾವನಾತ್ಮಕವಾಗಲು ಹಾಗೂ ಹೃದಯವಂತರಾಗಲು ಸಹಾಯ ಮಾಡುತ್ತವೆ. ಅದರಿಂದಾಗಿ ನೀವು ತಲೆಯ (ಬುದ್ಧಿಯ) ಮಟ್ಟದಲ್ಲೇ ಉಳಿದುಕೊಳ್ಳುವುದಿಲ್ಲ.

ತಲೆ ಚಿಂತಿಸುತ್ತದೆ, ಹೃದಯ ಅನುಭವಿಸುತ್ತದೆ. ಎರಡೂ ಏಕಕಾಲದಲ್ಲಿ ಕೆಲಸ ಮಾಡುವುದಿಲ್ಲ. ನಿಮ್ಮ ಭಾವನೆಗಳು ಬಲವತ್ತರವಾದಾಗ ಚಿಂತೆ ಕರಗುತ್ತದೆ. ನೀವು ತುಂಬ ಚಿಂತೆ ಮಾಡುವಾಗ ನಿಮ್ಮ ಭಾವನೆಗಳು ಸಾಯುತ್ತವೆ, ನೀವು ತಲೆಯ ಮಟ್ಟದಲ್ಲಿಯೇ ಉಳಿದುಬಿಡುತ್ತೀರಿ. ಚಿಂತೆಯು ನಿಮ್ಮ ಮನಸ್ಸು ಮತ್ತು ಹೃದಯಗಳನ್ನು ಜಡಗೊಳಿಸುತ್ತದೆ. ಚಿಂತೆಯು ತಲೆಯಲ್ಲಿರುವ ಬಂಡೆಯಂತೆ. ಅದು ನಿಮಗೆ ಬಂಧನವನ್ನುಂಟುಮಾಡುತ್ತದೆ. ಚಿಂತೆಯು ನಿಮ್ಮನ್ನು ಪಂಜರದಲ್ಲಿರಿಸುತ್ತದೆ. ನೀವು ಭಾವನಾತ್ಮಕವಾದಾಗ ಚಿಂತೆ ಮಾಡುವುದಿಲ್ಲ.

ಭಾವನೆಗಳು ಹೂವುಗಳಂತೆ, ಹುಟ್ಟಿಕೊಳ್ಳುತ್ತವೆ, ಅರಳುತ್ತವೆ ಮತ್ತು ನಾಶವಾಗುತ್ತವೆ. ಭಾವನೆಗಳು ಏಳುತ್ತವೆ, ಬೀಳುತ್ತವೆ ಮತ್ತು ನಾಶವಾಗುತ್ತವೆ. ಭಾವನೆಗಳನ್ನು ವ್ಯಕ್ತಪಡಿಸಿದಾಗ ನಿಮಗೆ ನಿರಾಳವಾಗುತ್ತವೆ. ನಿಮಗೆ ಕೋಪಬಂದಾಗ ಅದನ್ನು ವ್ಯಕ್ತಪಡಿಸಿದ ಕ್ಷಣದಲ್ಲಿ ಮಾಯವಾಗುತ್ತದೆ. ನಿಮಗೆ ದುಃಖ ಉಂಟಾದಾಗ ನೀವು ಅಳುತ್ತೀರಿ, ದುಃಖ ಕಡಿಮೆಯಾಗುತ್ತದೆ. ಭಾವನೆಗಳು ಕೆಲವು ಸಮಯ ಮಾತ್ರವಿದ್ದು ನಂತರ ಮಾಯವಾಗುತ್ತವೆ. ಆದರೆ, ಚಿಂತೆಯು ನಿಮ್ಮನ್ನು ಬಹುಕಾಲ ಬಾಧಿಸುತ್ತದೆ, ಅಂತಿಮವಾಗಿ ನಿಮ್ಮನ್ನೇ ಕಬಳಿಸುತ್ತದೆ. ಭಾವನೆಗಳು ನಿಮ್ಮನ್ನು ಸಹಜವಾಗಿರಿಸುತ್ತವೆ. ಮಕ್ಕಳು ಭಾವನಾತ್ಮಕವಾಗಿರುತ್ತವೆ, ಹಾಗಾಗಿ ಮಕ್ಕಳು ಸಹಜವಾಗಿರುತ್ತವೆ.

ದೊಡ್ಡವರು ತಮ್ಮ ಭಾವನೆಗಳನ್ನು ತಡೆಹಿಡಿಯುತ್ತಾರೆ; ಮನಸ್ಸಿನಲ್ಲೇ ಚಿಂತಿಸಲು ತೊಡಗುತ್ತಾರೆ. ಚಿಂತೆ ಕ್ರಿಯಾತ್ಮಕತೆಗೆ ಬಾಧಕವಾದರೆ ಭಾವನೆಗಳು ಕ್ರಿಯೆಯನ್ನು ಪ್ರಚೋದಿಸುತ್ತವೆ.

    Hold On!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity

    *
    *
    *
    *