ಹಿಂದೂ ಪುರಾಣದಲ್ಲಿ, ಭಗವಾನ್ ವಿಷ್ಣುವು ಕೋಪದೊಂದಿಗೆ ಹೋರಾಡಿ ಯುದ್ಧವನ್ನು ಮಾಡಿದ ಬಗ್ಗೆ ಒಂದು ಕಥೆಯಿದೆ. ಭಗವಾನ್ ವಿಷ್ಣುವಿನ ಕಿವಿಯ ಕೊಳೆಯಿಂದ ಜನಿಸಿದ , ಮಧು ಮತ್ತು ಕೈಟಭ ಎಂಬ ಹೆಸರಿನ ಇಬ್ಬರು ರಾಕ್ಷಸರು, ಭಗವಂತನನ್ನು ಸಾಕಷ್ಟು ತೊಂದರೆಗೊಳಪಡಿಸಿದರು. ಮಧು ಎಂದರೆ ‘ಕೋಪ’ ಮತ್ತು ಕೈಟಭ ಎಂದರೆ ‘ದ್ವೇಷ’ ಎಂದು ಅರ್ಥ. ಭಗವಾನ್ ವಿಷ್ಣುವು ಸಾವಿರಾರು ವರ್ಷಗಳ ವರೆಗೆ ಅವರೊಂದಿಗೆ ಹೋರಾಡಿದನು, ಆದರೆ ಅವರನ್ನು ಗೆಲ್ಲಲು ಅವನಿಗೆ ಸಾಧ್ಯವಾಗಲಿಲ್ಲ.
ತಾನೇ ಸೃಷ್ಟಿಸಿದ ಕೋಪ ಮತ್ತು ದ್ವೇಷವನ್ನು ಹೇಗೆ ತಾನೇ ನಾಶಮಾಡಲು ಸಾಧ್ಯವಾಗುವುದು? ಹಾಗಾಗಿ ಅವನು ದೇವಿಯ ಮೊರೆಹೋದನು. ಆದುದರಿಂದಲೇ ದೇವಿಯನ್ನು-ದೈವೀ ಪ್ರಜ್ಞೆ ಎಂದು ಕರೆಯುತ್ತಾರೆ. ಪ್ರಜ್ಞೆಯು ಜಾಗೃತವಾದಾಗ, ಕೋಪ ಮತ್ತು ದ್ವೇಷಗಳು ಕರಗಿ ಹೋಗುತ್ತವೆ. ದೇವಿಯು ನೀರಿನ ಸಹಾಯದಿಂದ ಮಧು ಮತ್ತು ಕೈಟಭರನ್ನು ನಾಶಪಡಿಸಿದಳು. ಇಲ್ಲಿ, ನೀರು ‘ಪ್ರೀತಿ’ ಯನ್ನು ಪ್ರತಿನಿಧಿಸುತ್ತದೆ. ಪ್ರಜ್ಞೆಯು ಜಾಗೃತವಾದಾಗ ಪ್ರೀತಿಯು ಉಕ್ಕಿ ಹರಿಯುತ್ತದೆ.ಆದುದರಿಂದ ಪ್ರೀತಿಯ ಸಹಾಯದಿಂದ, ಪ್ರಜ್ಞೆಯ ಮೂಲಕ ಕೋಪ ಮತ್ತು ದ್ವೇಷಗಳನ್ನು ನಾಶಪಡಿಸಲು ಸಾಧ್ಯವಾಗುತ್ತದೆ. ಪ್ರಜ್ಞೆಯು ಪ್ರೀತಿಯಿಂದ ತುಂಬಿದಾಗ, ಕೋಪವಾಗಲೀ, ದ್ವೇಷವಾಗಲೀ ಉಳಿಯುವುದಿಲ್ಲ.ಶಾಶ್ವತವಾದ ಪ್ರೀತಿ ಮಾತ್ರ ಉಳಿಯುತ್ತದೆ.
ಕಿವಿಯಿಂದ ಕೇಳಿದ ಪದಗಳ ಮೂಲಕವೇ, ಉದ್ವೇಗದಿಂದ ಮನಸ್ಸಿನಲ್ಲಿ, ಕೋಪ ಮತ್ತು ದ್ವೇಷಗಳು ಹುಟ್ಟುತ್ತವೆ. ಸೃಷ್ಟಿಕರ್ತನಾದ ಬ್ರಹ್ಮನಾಗಲೀ ಅಥವಾ ಲಯಕಾರಕನಾದ ಶಿವನಾಗಲೀ ಇಬ್ಬರೂ ಪದಗಳನ್ನು ಕೇಳುವ ಪ್ರಮೇಯವೇ ಇಲ್ಲ. ಅವರಿಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಮಾಡಿ ಹೊರಟುಹೋಗುತ್ತಾರೆ. ಆದರೆ ಇಡೀ ಜಗತ್ತನ್ನು ಪಾಲನೆ ಮಾಡುವ ಮತ್ತು ಅದರ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ವಿಷ್ಣುವು ಎಲ್ಲರ ಮಾತನ್ನೂ ಕೇಳಬೇಕಾಗುತ್ತದೆ. ಹಾಗಾಗಿ ಆತನ ಮೂಲಕ ಕೋಪವು ಹೊರಹೊಮ್ಮುತ್ತದೆ.
ಜನರು ಏಕೆ ಜಗಳವಾಡುತ್ತಾರೆ? ಜಗಳದ ಮೂಲ ಕಾರಣ
ಜನರು ಜಗಳವಾಡುತ್ತಾರೆ .ಏಕೆಂದರೆ ಅವರೆಲ್ಲರೂ ತಾವು ಮಾಡಿದ್ದೇ ಸರಿ ಎಂದು ಭಾವಿಸುತ್ತಾರೆ. ತಾನು ಸರಿ ಎನ್ನುವ ಈ ಭಾವನೆಯು ಅವರಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಯಾರಾದರೂ ತಾವು ಮಾಡಿದ್ದು ತಪ್ಪು ಎಂದುಕೊಂಡರೆ, ಆಗ ಅವರಲ್ಲಿ ಹೋರಾಡುವ ಶಕ್ತಿ ಇರುವುದಿಲ್ಲ.
ತಾನೇ ಸರಿ ಎನ್ನುವ ಈ ನೀತಿಯು ಅತ್ಯಂತ ಸೀಮಿತವಾಗಿದೆ ಮತ್ತು ಈ ರೀತಿಯ ಸಂಕುಚಿತವಾದ ಪ್ರಜ್ಞೆಯು ಇಡೀ ಜಗತ್ತಿನಲ್ಲಿ ಕೆಟ್ಟದ್ದಾಗಿರುವುದನ್ನೆಲ್ಲ ಸೃಷ್ಟಿಸುತ್ತದೆ. ವಿಶ್ವದಾದ್ಯಂತವೂ ನಡೆದ ಎಲ್ಲಾ ಯುದ್ಧಗಳಿಗೆ ಇದೇ ಕಾರಣವಾಗಿದೆ.
ನಾವು ನಮ್ಮ ದೃಷ್ಟಿಕೋನವನ್ನು ವಿಸ್ತರಿಸಿದರೆ ಮತ್ತು ಸತ್ಯವನ್ನು ನಿಷ್ಪಕ್ಷಪಾತವಾಗಿ ನೋಡಿದರೆ, ಆಗ ಬೇರೆಯೇ ಚಿತ್ರಣವು ನಮ್ಮ ಕಣ್ಣಿಗೆ ಕಂಡು ಬರುತ್ತದೆ. ನಮ್ಮದು ಮಾತ್ರ ಸದಾಚಾರದ ಪ್ರಜ್ಞೆ, ಎನ್ನುವ ಭಾವನೆಯು ನಮ್ಮದೇ ಮಾನಸಿಕ ಪರಿಕಲ್ಪನೆಯಾಗಿದೆ; ನಿಜವಾದ ಕಾರಣ ಮತ್ತು ಪರಿಣಾಮವು ಇವೆಲ್ಲವನ್ನೂ ಮೀರಿ ನಿಂತಿದೆ ಹಾಗೂ ಈ ಎಲ್ಲದಕ್ಕೂ ಅತೀತವಾಗಿದೆ. ವಿವೇಕದಿಂದ ಕೂಡಿರುವ ಬುದ್ಧಿಯು ಮಾತ್ರ ಈ ಪರಮ ಸತ್ಯವನ್ನು ಮತ್ತು ಅದರ ಅಂತಿಮ ಕಾರಣವನ್ನು ಹುಡುಕುವುದು.
ಇಂದಿನ ಜಗತ್ತಿನಲ್ಲಿ, ನಮಗೆ ಕೋಪವನ್ನುಂಟುಮಾಡಲು ಲೆಕ್ಕವಿಲ್ಲದಷ್ಟು ವಿಷಯಗಳು ಕಂಡು ಬರುತ್ತವೆ. ಕೋಪದ ಬೆನ್ನಿನಲ್ಲಿಯೇ ಅಪರಾಧೀ ಪ್ರಜ್ಞೆ, ಹಿಂಸೆ, ನೋವು ಮತ್ತು ದ್ವೇಷಗಳು ಮೂಡಿ ಬರುತ್ತವೆ . ಈ ವರ್ತುಲವನ್ನು ಮುರಿಯುವುದು ಕಷ್ಟಕರವಾಗಿದೆ. ಕೋಪವನ್ನು ನಿಭಾಯಿಸಲು ನೀಡಿರುವ ಐದು ಮುಖ್ಯವಾದ ಸಲಹೆಗಳು ಇಲ್ಲಿವೆ
-
ಕೋಪಗೊಂಡ ಜನರನ್ನು ಪಟಾಕಿ ಸಿಡಿಸುವವರಂತೆ ನೋಡಿಕೊಳ್ಳಿ
ಕೋಪಗೊಂಡ ವ್ಯಕ್ತಿಯನ್ನು ಪಟಾಕಿ ಸಿಡಿಸಿದಂತೆ ನೋಡಿ. ದೀಪಾವಳಿಯಲ್ಲಿ, ನಾವು ಪಟಾಕಿಗಳನ್ನು ಸಿಡಿಸುತ್ತೇವೆ, ನಂತರ ಅದನ್ನು ದೂರದಿಂದಲೇ ನೋಡಿ, ಆನಂದಿಸಿ, ಹೊರಟುಹೋಗುತ್ತೇವೆ. ಕೋಪಗೊಂಡ ವ್ಯಕ್ತಿಯು ಕೂಡ ಹಾಗೆಯೇ ! ಸ್ವಲ್ಪ ಸಮಯದ ನಂತರ ಎಲ್ಲವೂ ಮಾಯವಾಗುತ್ತದೆ.
ನಾವು ಮನೆಯೊಳಗೆ ಪಟಾಕಿಗಳನ್ನು ಸುಡುವುದಿಲ್ಲ, ಅಥವಾ ಸುಡುವ ಜಾಗದ ಬಳಿಯಲ್ಲಿ ಅಮೂಲ್ಯವಾದ ಯಾವುದೇ ವಸ್ತುವನ್ನು ಇಟ್ಟುಕೊಳ್ಳುವುದಿಲ್ಲ. ಇದೇ ರೀತಿಯಲ್ಲಿ, ಕೋಪಗೊಂಡ ಜನರ ಸುತ್ತ ಯಾವುದೇ ಅಮೂಲ್ಯ ವಸ್ತುಗಳು ಇಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಿ.
ಕೋಪಿಸಿಕೊಂಡ ಜನರೇ ಇಲ್ಲದಿದ್ದರೆ, ಈ ಜಗತ್ತಿನಲ್ಲಿ ಯಾವುದೇ ವಿನೋದವಿರುತ್ತಿರಲಿಲ್ಲ. ಆದ್ದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಮತ್ತು ದೂರದಿಂದ ಅವರನ್ನು ಗಮನಿಸಿ. ಇದರಲ್ಲಿ ಭಾಗಿಯಾಗಬೇಡಿ. ಆಗ ಮಾತ್ರ ಈ ಸನ್ನಿವೇಶವನ್ನು ನೀವು ಆನಂದಿಸುವಿರಿ!
-
ಕೋಪವನ್ನು ಪ್ರಜ್ಞೆಯಿಂದ ಜಯಿಸಿ
ನೀವು ಕೋಪಗೊಂಡಾಗ ಮತ್ತು ಅದನ್ನು ವ್ಯಕ್ತಪಡಿಸದಿದ್ದಾಗ, ನಿಮಗೆ ಉಸಿರುಗಟ್ಟಿಸಿದ ಹಾಗೆ ಆಗುತ್ತದೆ. ಮತ್ತೊಂದು ದೃಷ್ಟಿಕೋನದಿಂದ ನೋಡಿದರೆ, ಅದನ್ನು ವ್ಯಕ್ತಪಡಿಸಿದಾಗ, ನಿಮಗೆ ನೀವು ತಪ್ಪಿತಸ್ಥರು ಎಂಬ ಆತ್ಮಗ್ಲಾನಿಯುಂಟಾಗುತ್ತದೆ . ಆದ್ದರಿಂದ, ಇಲ್ಲಿ ಎರಡನ್ನೂ ಮೀರಿ ಮೇಲೇರುವುದು ಅತೀ ಮುಖ್ಯ. ಜೀವನವನ್ನು ಹೊಸದಾಗಿರುವ ಬೇರೆಯೇ ಒಂದು ದೃಷ್ಟಿಕೋನದಿಂದ ನೋಡಿಕೊಳ್ಳಿ.
ವಿವಿಧ ಬಣ್ಣಗಳಿಂದ ಕೇಕ್ ನ ಮೇಲೆ ಬೇರೆ ಬೇರೆ ವಿನ್ಯಾಸಗಳೊಂದಿಗೆ ಐಸಿಂಗ್ ಮಾಡಿ ಅಲಂಕರಿಸುತ್ತಾರೆ. ನಿಮ್ಮ ಭಾವನೆಗಳನ್ನು, ಈ ರೀತಿಯ ಅಲಂಕಾರವೆಂಬಂತೆ ನೋಡಿಕೊಳ್ಳಿ. ಅಲಂಕಾರವು ಯಾವುದೇ ವಸ್ತುವಿಗೆ ಮುಖ್ಯವಲ್ಲ. ಅಂತೆಯೇ, ಈ ಭಾವನೆಗಳು ನಿಮ್ಮನ್ನು ಬಂಧಿಸಬಾರದು ಅಥವಾ ನಿಮಗೆ ಆತ್ಮಗ್ಲಾನಿಯನ್ನು ಉಂಟುಮಾಡಬಾರದು. ನೀವು ನಿಮ್ಮ ಪ್ರಜ್ಞೆಯಲ್ಲಿ ಬೆಳೆದು ವಿಕಸನಗೊಂಡಂತೆ ನಿಮಗೆ ಇದು ಸಾಧ್ಯವಾಗುತ್ತದೆ.
ನವರಾತ್ರಿಯ ಸಮಯದಲ್ಲಿ, ನಾವು ಸತ್ಸಂಗವನ್ನು ಮಾಡುತ್ತೇವೆ ಮತ್ತು ಸ್ವಲ್ಪ ಕಟ್ಟು ನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತೇವೆ.ಇದರಿಂದಾಗಿ ನಮ್ಮ ಮನಸ್ಸು ಭಕ್ತಿಯ ಅಲೆಗಳಲ್ಲಿ ಆಳವಾಗಿ ಮುಳುಗಿ, ನಾವು ಕೋಪ ಮತ್ತು ಇತರ ದುರ್ಗುಣಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳು ತಪ್ಪಿ ಹೋಗುತ್ತವೆ.
-
ನಿಮ್ಮೊಳಗಿನ ಆಕ್ರಮಣಶೀಲತೆಯನ್ನು ನಿಭಾಯಿಸಲು ಶಕ್ತಿಯನ್ನು ಬಳಸಿ
ನಿಮ್ಮಲ್ಲಿ ಆಕ್ರಮಣಶೀಲತೆಯು ಯಾಕೆ ಹುಟ್ಟುತ್ತದೆ? ಯಾರಾದರೂ ನಿಮಗಿಂತ ದೊಡ್ಡವರು ಎಂದು ನೀವು ಭಾವಿಸಿದಾಗ, ನೀವುಆಕ್ರಮಣಕಾರಿಯಾಗುತ್ತೀರಿ.ಅಲ್ವೇ? ಅದರ ಬಗ್ಗೆ ಯೋಚಿಸಿ. ಯಾರಾದರೂ ನಿಜವಾಗಿಯೂ ನಿಮಗಿಂತ ದೊಡ್ಡವರಾಗಿದ್ದಾಗ, ಅಥವಾ ಎಣಿಸಲಿಕ್ಕೂ ಆಗದಷ್ಟು ಚಿಕ್ಕವರಾಗಿದ್ದಾಗ, ನೀವು ಆಕ್ರಮಣಕಾರಿಯಾಗುವುದಿಲ್ಲ. ಆದರೆ, ಯಾರಾದರೂ ನಿಮಗೆ ಸರಿಸಮಾನರು, ಅಥವಾ ನಿಮಗಿಂತ ಸ್ವಲ್ಪವೇ ದೊಡ್ಡವರು ಅಥವಾ ಚಿಕ್ಕವರು ಎಂದು ನೀವು ಭಾವಿಸಿದಾಗ, ನೀವು ಆಕ್ರಮಣಕಾರಿಯಾಗುತ್ತೀರಿ. ಇದಕ್ಕೆ ಕಾರಣ ನಿಮ್ಮ ಸ್ವಂತ ಶಕ್ತಿಯ ಬಗೆಗಿನ ನಿಮ್ಮ ಅಜ್ಞಾನ. ಈಗಲೇ ಎಚ್ಚರಗೊಂಡು ನೀವು ಯಾರು? ಮತ್ತು ನೀವು ಯಾರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವಿರಿ ಎಂಬುದನ್ನು ನೋಡಿ ಕೊಳ್ಳಿ.
ಒಂದು ಸೊಳ್ಳೆಯನ್ನು ಕೊಲ್ಲಲು ಬಯಸಿದಾಗ ನೀವು ಆಕ್ರಮಣಕಾರಿಯಾಗುವುದಿಲ್ಲ! ಇದು ಕೇವಲ ಒಂದು ಸೊಳ್ಳೆ ಮತ್ತು ಇದನ್ನು ಕೊಲ್ಲುವುದು ಒಂದು ದೊಡ್ಡ ವಿಷಯವೇನೂ ಅಲ್ಲ ಎನ್ನುವುದು ನಿಮಗೆ ತಿಳಿದಿದೆ. ಇದೇ ರೀತಿ ನಿಮ್ಮ ಶಕ್ತಿಯ ಬಗ್ಗೆಯೂ ನಿಮಗೆ ಅರಿವಿರಲಿ.
-
ಸ್ವಲ್ಪ ಅಪೂರ್ಣತೆಯು ಮನಸ್ಸಿಗೆ ಆರೋಗ್ಯಕರವಾಗಿರುತ್ತದೆ
ಅತಿಯಾದ ಪರಿಪೂರ್ಣತೆಯ ನಿರೀಕ್ಷೆಯು ನಿಮ್ಮ ಮನಸ್ಸಿನಲ್ಲಿ ಕೋಪವನ್ನು ಉಂಟುಮಾಡಿ ,ನಿಮ್ಮನ್ನು ಹಿಂಸಾತ್ಮಕವಾಗಿ ವರ್ತಿಸುವಂತೆ ಮಾಡುತ್ತದೆ ಹಾಗೂ ಅಪೂರ್ಣತೆಯನ್ನು ಒಪ್ಪಿಕೊಳ್ಳುವುದು ನಿಮಗೆ ಕಷ್ಟವಾಗುತ್ತದೆ. ಕೆಲವೊಮ್ಮೆ ಎಲ್ಲವೂ ನಿಮ್ಮ ಯೋಜನೆಯಂತೆ ನಡೆಯುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಆಗ ಅದನ್ನು ನಿಭಾಯಿಸಲು ಶಕ್ಯರಾಗುವಂತೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ.
ಆದುದರಿಂದ ಅಪೂರ್ಣತೆಗೂ ಸ್ವಲ್ಪ ಜಾಗವನ್ನು ಇರಿಸಿಕೊಳ್ಳಿ; ಇದು ಅತ್ಯಗತ್ಯವಾದ ಹೆಜ್ಜೆ. ಇದು ನಿಮ್ಮಲ್ಲಿ ಹೆಚ್ಚಿನ ತಾಳ್ಮೆಯನ್ನು ಉಂಟು ಮಾಡುತ್ತದೆ. ತಾಳ್ಮೆಯ ಮಟ್ಟವು ಹೆಚ್ಚಾದಂತೆ, ನಿಮ್ಮ ಕೋಪವು ಕಡಿಮೆಯಾಗುತ್ತದೆ, ಮತ್ತು ಕೋಪವು ಕಡಿಮೆಯಾಯಿತೆಂದರೆ, ಅಲ್ಲಿ ಯಾವುದೇ ವಿಧದಲ್ಲಿ ಹಿಂಸೆ ಇರಲು ಸಾಧ್ಯವಿಲ್ಲ.
-
ಪ್ರೀತಿಗೆ ಜ್ಞಾನದ ಕವಚವನ್ನು ಕೊಡಿ
ನೀವು ತುಂಬಾ ಪ್ರೀತಿಸುವ ಯಾರಾದರೂ ಒಬ್ಬ ವ್ಯಕ್ತಿಯು ನಿಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ವರ್ತಿಸದಿದ್ದರೆ, ನಿಮಗೆ ನೋವಾಗುತ್ತದೆ. ಆದರೆ ರಸ್ತೆಯಲ್ಲಿ ,ನಡೆಯುತ್ತಿರುವ ಬೇರೆ ಯಾವುದೋ ವ್ಯಕ್ತಿಯಿಂದಾಗಿ ನಿಮಗೆ ನೋವಾಗುವುದಿಲ್ಲ! ಅದೇ ನೀವು ಪ್ರೀತಿಸುವ ಅಥವಾ ನಿಮಗೆ ಹತ್ತಿರವಾಗಿರುವ ವ್ಯಕ್ತಿಯು ನಿಮ್ಮನ್ನು ಸ್ವಾಗತಿಸದಿದ್ದರೆ ಅಥವಾ ನಿಮ್ಮನ್ನು ನೋಡಿ ನಗದಿದ್ದರೆ, ನಿಮಗೆ ನೋವಾಗುತ್ತದೆ.
ನೋವನ್ನು ಅನುಭವಿಸಿದಾಗ, ಜನರು ತಮ್ಮ ಮನಸ್ಸನ್ನು ಮುಚ್ಚಿಕೊಳ್ಳುತ್ತಾರೆ, ಕಠಿಣ ಹೃದಯದವರಾಗುತ್ತಾರೆ ಮತ್ತು ಕ್ರೂರವಾಗಿ ವರ್ತಿಸುತ್ತಾರೆ.
ಪ್ರೀತಿಯು ಒಂದು ಉತ್ತಮವಾದ ಮತ್ತು ಸೂಕ್ಷ್ಮವಾದ ಭಾವನೆಯಾಗಿದೆ; ಅದು ಸುಲಭವಾಗಿ ನೋವುಂಟುಮಾಡುತ್ತದೆ ಮತ್ತು ಅಷ್ಟೇ ವೇಗದಿಂದ ಪ್ರೀತಿಯು- ದ್ವೇಷ, ಕೋಪ, ಆಪಾದನೆ, ಹಗೆತನ, ಕಹಿ ಅಥವಾ ಅಸೂಯೆ-ಮುಂತಾದ ಭಾವನೆಗಳ ರೂಪಕ್ಕೆ ಬದಲಾಗುವ ಸಾಧ್ಯತೆಯೂ ಇಲ್ಲದಿಲ್ಲ.
ನಮ್ಮ ಸಮಾಜದಲ್ಲಿ ಈ ಸೂಕ್ಷ್ಮ ಭಾವನೆಯು ವಿರೂಪಗೊಳ್ಳದಂತೆ ನೀವು ಪ್ರೀತಿಯನ್ನು ಹೇಗೆ ರಕ್ಷಿಸಬಹುದು? ಜ್ಞಾನದಿಂದ! ಪ್ರೀತಿಯನ್ನು ರಕ್ಷಿಸಲು ಜ್ಞಾನ ಮಾತ್ರವೇ ಸರಿಯಾದ ಕವಚವಾಗಿದೆ. ಜ್ಞಾನವು ಪ್ರೀತಿಯ ಶುದ್ಧತೆಯನ್ನು ಕಾಪಾಡುತ್ತದೆ ಮತ್ತು ಅದನ್ನು ಎಲ್ಲಾ ರೀತಿಯ ವಿಕಾರಗಳಿಂದ ದೂರವಿರಿಸುತ್ತದೆ. ಸಂತರ ಪ್ರೀತಿಯು ಯಾವಾಗಲೂ ಪರಿಶುದ್ಧವಾಗಿರುತ್ತದೆ. ಏಕೆಂದರೆ ಅದನ್ನು ರಕ್ಷಿಸಲು ಅವರಲ್ಲಿ ಜ್ಞಾನದ ಹೊದಿಕೆ ಇದೆ.
ಇಷ್ಟೇ ಅಲ್ಲದೆ, ನೀವು ಸಾಧನೆಯ ಮೂಲಕ ನಿಮ್ಮ ಆಳಕ್ಕೆ ಹೋದಾಗ, ಪ್ರೀತಿಯನ್ನು ಬಹಳ ಸೂಕ್ಷ್ಮ ಮಟ್ಟದಲ್ಲಿ ಅನುಭವಿಸಬಹುದಾಗಿದೆ.
ಕೋಪ ಯಾವಾಗ ಒಳ್ಳೆಯದು?
ಎಂದಿಗೂ ಕೋಪಗೊಳ್ಳದಿರಲು ಸಾಧ್ಯವಿಲ್ಲವೇ?
ನಿಮ್ಮ ಅನುಭವವೇನು? ಮಗುವಾಗಿದ್ದಾಗ, ನಿಮ್ಮಿಂದ ಒಂದು ಟ್ರೋಫಿಯನ್ನು ಕಿತ್ತುಕೊಂಡಾಗಲೂ, ನಿಮಗೆ ಕೋಪ ಬರುತ್ತಿತ್ತು. ನೀವು ಶಾಲೆ, ಕಾಲೇಜು ಮತ್ತು ಕಚೇರಿಗಳಲ್ಲಿದ್ದಾಗ, ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ಜನರ ಮೇಲೆ ನೀವು ಕೋಪಗೊಂಡಿದ್ದೀರಿ. ಆದ್ದರಿಂದ, ನಾವೆಲ್ಲರೂ ಕೋಪಗೊಳ್ಳುವುದು ಸರ್ವೇಸಾಮಾನ್ಯ! ಇದಕ್ಕಿಂತಲೂ ನಿಮ್ಮ ಕೋಪದಿಂದ ನೀವು ಎಷ್ಟು ಬೇಗ ಹೊರಬರುತ್ತೀರಿ ಎಂಬುದು ಮುಖ್ಯ. ಮೂರು ಅಂಶಗಳು ಇದನ್ನು ನಿರ್ಧರಿಸುತ್ತವೆ:
- ಮೊದಲ ಅಂಶವೆಂದರೆ ನಿಮ್ಮ ಕೋಪದ ಆವರ್ತನ. ಇದು ನಿಮ್ಮ ಶಕ್ತಿಗೆ ವಿಲೋಮ ಅನುಪಾತದಲ್ಲಿರುತ್ತದೆ. ನೀವು ಎಷ್ಟು ದುರ್ಬಲರಾಗಿದ್ದೀರೋ, ಅಷ್ಟು ಹೆಚ್ಚು ಕೋಪಕ್ಕೆ ಒಳಗಾಗುತ್ತೀರಿ. ನೀವು ಎಷ್ಟು ಬಲಶಾಲಿಯಾಗಿದ್ದೀರೋ, ಅಷ್ಟು ಕೋಪಕ್ಕೆ ಒಳಗಾಗುವ ಸಾಧ್ಯತೆಯು ಕಡಿಮೆಯಾಗುತ್ತದೆ. ಆದ್ದರಿಂದ, ನಿಮ್ಮ ಶಕ್ತಿಯು ಎಲ್ಲಿದೆ ಎಂಬುದನ್ನು ನೋಡಿಕೊಳ್ಳಿ. ನೀವೇಕೆ ಅದನ್ನು ಕಳೆದುಕೊಳ್ಳುತ್ತಿದ್ದೀರಿ?
- ಎರಡನೇ ಅಂಶವೆಂದರೆ ನಿಮ್ಮ ದೃಷ್ಟಿ. ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನಿಮಗೆ ಎಷ್ಟು ಆಳವಾದ ತಿಳುವಳಿಕೆ ಇದೆ?
- ಮೂರನೆಯದು ನಿಮ್ಮ ಬಾಂಧವ್ಯದ ಮಟ್ಟ. ನಿಮ್ಮ ಕೋಪದ ಹಿಂದೆ, ನಿಮ್ಮ ಆರಾಮ, ಸಂತೋಷ ಅಥವಾ ಅಹಂಕಾರದ ಬಯಕೆ ಇದ್ದರೆ, ಆಗ ನಿಮಗಿರುವ ಕೋಪಕ್ಕೂ; ಒಂದು ಸದುದ್ದೇಶವನ್ನು ಹೊಂದಿದ್ದು ಸೇವಾ ಮನೋಭಾವದಿಂದಿರುವಾಗ ನಿಮಗೆ ಬರುವ ಕೋಪಕ್ಕೂ ವ್ಯತ್ಯಾಸವಿದೆ.ಈಗ ನಿಮ್ಮ ಪ್ರತಿಕ್ರಿಯೆಯು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹೀಗೆ ನಿಮ್ಮ ಕೋಪವು, ವಿಷಯಗಳನ್ನು ಸರಿಪಡಿಸಲು ಇದೆ ಎಂದಾದರೆ, ಇದು ಉಪಯುಕ್ತವಾಗಿದೆ.
ಆದ್ದರಿಂದ, ಕೋಪವು ಯಾವಾಗಲೂ ಕೆಟ್ಟದ್ದಲ್ಲ. ಇದನ್ನು ಮಿತವಾಗಿ ಬಳಸಿದರೆ ಒಳ್ಳೆಯದು. ನೀವು ಇದನ್ನು ಪ್ರತಿದಿನ ಬಳಸಿದರೆ, ಅದಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಬದಲಿಗೆ, ಅದು ನಿಮ್ಮ ಮೌಲ್ಯವನ್ನು ಕುಗ್ಗಿಸುತ್ತದೆ. ಆದ್ದರಿಂದ, ಕೋಪವು ನಿಮ್ಮನ್ನು ಬಳಸಿಕೊಳ್ಳಲು ಬಿಡಬೇಡಿ. ಬದಲಿಗೆ, ನೀವು ಅದನ್ನು ಸಕಾರಾತ್ಮಕ ಬದಲಾವಣೆಯನ್ನು ತರುವ ಸಾಧನವನ್ನಾಗಿ ಬಳಸಿಕೊಳ್ಳಿ.
ಸಹಜ ಸಮಾಧಿ ಧ್ಯಾನ ಯೋಗವು ನಿಮ್ಮ ಶಕ್ತಿಯನ್ನು ಸಕಾರಾತ್ಮಕ, ಚಿಂತನಶೀಲ ಮತ್ತು ಶಕ್ತಿಯುತವಾದ ಜಾಗಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ.