ಯೋಗನಿದ್ರಾ ಆಳವಾದ ವಿಶ್ರಾಂತಿಯನ್ನು ಅನುಭವಿಸಲು ಮತ್ತು ನಮ್ಮ ದಕ್ಷತೆಯನ್ನು ಹೆಚ್ಚಿಸಲು ಅಮೂಲ್ಯವಾದ ತಂತ್ರವಾಗಿದೆ. ಇದು ಮಾರ್ಗದರ್ಶಿ ಧ್ಯಾನದಂತಿದೆ, ನಾವು ಯಾವುದೇ ಪ್ರಯತ್ನ ಮಾಡುವ ಅಗತ್ಯವಿಲ್ಲ. ಯೋಗನಿದ್ರಾದ ನಿಯಮಿತ ಅಭ್ಯಾಸವು ನಮಗೆ ಆಳವಾದ ವಿಶ್ರಾಂತಿ ನೀಡುತ್ತದೆ ಮತ್ತು ಆಘಾತಗಳು ಮತ್ತು ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. 20-ನಿಮಿಷಗಳ ಯೋಗನಿದ್ರಾ ಅಥವಾ ಯೋಗದ ನಿದ್ರೆಯು ನಿಮಗೆ ಮಧ್ಯಾಹ್ನದ ನಿದ್ರೆಗಿಂತ ಹೆಚ್ಚು ಆಳವಾದ ವಿಶ್ರಾಂತಿಯನ್ನು ನೀಡುತ್ತದೆ. ಯೋಗನಿದ್ರೆ ವಿಶ್ರಾಂತಿಭರಿತ ಅರಿವಿನಿಂದ ಕೂಡಿದೆ.
ಯೋಗನಿದ್ರಾ ಮತ್ತು ನಿದ್ರೆಯ ನಡುವಿನ ವ್ಯತ್ಯಾಸ
![](https://www.artofliving.org/in-en/app/uploads/2024/07/sleep-babysleeping-with-teddy-1024x683.jpg)
ನಿದ್ರೆ ನಮ್ಮ ಪ್ರಜ್ಞೆಯ 4 ನೈಸರ್ಗಿಕ ಸ್ಥಿತಿಗಳಲ್ಲಿ ಒಂದಾಗಿದೆ – ಜಾಗೃತ, ಸ್ವಪ್ನ, ನಿದ್ರೆ ಮತ್ತು ನಾಲ್ಕನೇಯದ್ದು ತುರಿಯಾ ಅವಸ್ಥೆ ಅಥವಾ ಸಮಾಧಿ. ನಾವು ಜಾಗೃತದಿಂದ ಸ್ವಪ್ನಕ್ಕೆ, ಸ್ವಪ್ನದಿಂದ ನಿದ್ರೆಗೆ ಸಾಗುತ್ತೇವೆ. ನಾವು ನಿದ್ರಿಸಲು ಹಾಸಿಗೆಯಲ್ಲಿ ಒರಗಿದಾಗ ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ನಿದ್ರೆಯಲ್ಲಿ, ಅರಿವನ್ನು ಸಂಪೂರ್ಣ ಕಳೆದುಕೊಳ್ಳುತ್ತೇವೆ ಮತ್ತು ಪಂಚೇಂದ್ರಿಯಗಳು ನಿಶ್ಚಲವಾಗುತ್ತವೆ. ಇಂದ್ರಿಯಗಳ ನಿಶ್ಚಲತೆಯು ನಮ್ಮ ಶರೀರವನ್ನು ಶಕ್ತಿಯುತವಾಗಿಸುತ್ತದೆ. ಆದರೆ ಯೋಗ ನಿದ್ರಾದಲ್ಲಿ, ಇಂದ್ರಿಯಗಳು ವಿಶ್ರಾಂತಿಯಲ್ಲಿದ್ದರೂ, ಧ್ವನಿ ಅಥವಾ ಸೂಚನೆಯ ಮೂಲಕ್ಕೆ ಮೃದುವಾದ ಗಮನವನ್ನು ನೀಡಲಾಗುತ್ತದೆ, ನಾವು ಅರಿವನ್ನು ಉಳಿಸಿಕೊಳ್ಳುತ್ತೇವೆ. ಯೋಗ ನಿದ್ರಾದಲ್ಲಿ, ತರಬೇತಿ ಪಡೆದ ಯೋಗ ಶಿಕ್ಷಕರ ಮಾರ್ಗದರ್ಶನದ ಸೂಚನೆಗಳ ಅಡಿಯಲ್ಲಿ, ನಾವು ಆ ಅರಿವನ್ನು ದೇಹದ ವಿವಿಧ ಭಾಗಗಳಿಗೆ ಚಲಿಸುತ್ತೇವೆ. ಯೋಗ ನಿದ್ರಾದಲ್ಲಿ, ನಾವು ಉಸಿರಾಟದ ಸಹಾಯವನ್ನು ಸಹ ತೆಗೆದುಕೊಳ್ಳುತ್ತೇವೆ.
ಆದ್ದರಿಂದ ಉಸಿರಾಟದ ಸಹಾಯದಿಂದ ದೇಹದಾದ್ಯಂತ ನಮ್ಮ ಅರಿವನ್ನು ಚಲಿಸುವ ಮೂಲಕ, ನಾವು ಸಾಮಾನ್ಯ ನಿದ್ರೆಗಿಂತ ಆಳವಾದ ವಿಶ್ರಾಂತಿಯನ್ನು ಸಾಧಿಸುತ್ತೇವೆ.
ಯೋಗದಲ್ಲಿ ಜಾಗೃತಿಯೇ ಶಕ್ತಿ. ಆದ್ದರಿಂದ ನೀವು ನಿಮ್ಮ ಮೊಣಕಾಲುಗಳ ಬಗ್ಗೆ ಅರಿತಾಗ, ನೀವು ಅದನ್ನು ಶಕ್ತಿಯುತಗೊಳಿಸುತ್ತೀರಿ; ನಿಮ್ಮ ಅರಿವನ್ನು ನಿಮ್ಮ ಕೆಳ ಬೆನ್ನಿಗೆ ತಂದರೆ, ನೀವು ನಿಮ್ಮ ಕೆಳಗಿನ ಬೆನ್ನಿಗೆ ಶಕ್ತಿಯನ್ನು ಕಳುಹಿಸುತ್ತೀರಿ. ಅಂತೆಯೇ, ಯೋಗ ನಿದ್ರಾದಲ್ಲಿ, ದೇಹದ ಎಲ್ಲಾ ಭಾಗಗಳಿಗೆ ನಿಮ್ಮ ಅರಿವನ್ನು ತರುವುದು ಮತ್ತು ಪ್ರಜ್ಞಾಪೂರ್ವಕವಾಗಿ ಅವುಗಳನ್ನು ಆಳವಾಗಿ ವಿಶ್ರಾಂತಿ ಮಾಡುವುದು ನಿಮ್ಮ ಇಡೀ ದೇಹ ಮತ್ತು ಮನಸ್ಸನ್ನು ಚೈತನ್ಯಗೊಳಿಸುತ್ತದೆ.
ಯೋಗ ನಿದ್ರಾ ಮತ್ತು ಧ್ಯಾನ
ಯೋಗ ನಿದ್ರಾ ನಿಮ್ಮನ್ನು ಧ್ಯಾನಸ್ಥ ಸ್ಥಿತಿಗೆ ತರುತ್ತದೆ, ಇದು ಒಂದು ರೀತಿಯ ಮಲಗಿರುವ ಧ್ಯಾನವನ್ನು ಹೊರತುಪಡಿಸಿ ಬೇರೇನೂ ಅಲ್ಲ.
ಆಳವಾದ ವಿಶ್ರಾಂತಿ ಮತ್ತು ಕ್ರಿಯಾತ್ಮಕ ಚಟುವಟಿಕೆಯು ಪೂರಕವಾಗಿದೆ. ನಿಮ್ಮ ಮನಸ್ಸು ಮತ್ತು ದೇಹಕ್ಕೆ ಆಳವಾದ ವಿಶ್ರಾಂತಿಯನ್ನು ನೀಡದಿದ್ದರೆ ನೀವು ಹೇಗೆ ಕ್ರಿಯಾತ್ಮಕ ಮತ್ತು ಕ್ರಿಯಾಶೀಲರಾಗಿರುತ್ತೀರಿ? ಯಾವತ್ತೂ ನಿದ್ದೆ ಮಾಡಿರದ ವ್ಯಕ್ತಿಗೆ ಚೈತನ್ಯ ಸಿಗುವುದಿಲ್ಲ.
~ ಗುರುದೇವ ಶ್ರೀ ಶ್ರೀ ರವಿಶಂಕರ್
ಯೋಗ ನಿದ್ರಾ ಅಭ್ಯಾಸದ ಮಹತ್ವ
ನಮ್ಮ ದೈನಂದಿನ ಜೀವನದಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ. ಮನಸ್ಸಿನ ಮಟ್ಟದಲ್ಲಿ, ನಾವು ಧನಾತ್ಮಕ ಮತ್ತು ಋಣಾತ್ಮಕ ಆಲೋಚನೆಗಳನ್ನು ಹೊಂದಿದ್ದೇವೆ. ನಮ್ಮಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಭಾವನೆಗಳಿವೆ. ಹಾಗಾದರೆ ಆಲೋಚನೆಗಳು ಮತ್ತು ಭಾವನೆಗಳು ಯಾವುವು? ಆಲೋಚನೆಗಳು ಮನಸ್ಸಿನ ಮಟ್ಟದಲ್ಲಿ ಶಕ್ತಿಯ ಕೆಲವು ಅಲೆಗಳು, ಮತ್ತು ಭಾವನೆಗಳು ಭಾವನೆಯ ಮಟ್ಟದಲ್ಲಿ ಕೆಲವು ಶಕ್ತಿಯ ಅಲೆಗಳು. ಧನಾತ್ಮಕ ಮತ್ತು ಋಣಾತ್ಮಕ ಆಲೋಚನೆಗಳು, ಹಾಗೆಯೇ ಧನಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು, ನಮ್ಮ ಸೂಕ್ಷ್ಮ ದೇಹದಲ್ಲಿ ನಮ್ಮ ಪ್ರಾಣವನ್ನು ಚಲಿಸುತ್ತದೆ. ಇದು ಏನಾದರೂ ಸಕಾರಾತ್ಮಕವಾಗಿದ್ದರೆ, ಅದು ನಮ್ಮ ನರಮಂಡಲಕ್ಕೆ ಉತ್ಸಾಹ ಮತ್ತು ಪ್ರಚೋದನೆಯನ್ನು ತರುತ್ತದೆ. ಯಾವುದೋ ನಕಾರಾತ್ಮಕ ಅಂಶವು ನಮ್ಮ ನರಮಂಡಲದ ಸಂಕೋಚನ ಅಥವಾ ಕುಗ್ಗುವಿಕೆಯನ್ನು ತರುತ್ತದೆ. ನಾವು ಮಾತನಾಡುವಾಗ, ಕೆಲಸದಲ್ಲಿ, ಮನೆಯಲ್ಲಿ ಅಥವಾ ವಿವಿಧ ಜೀವನ ಸವಾಲುಗಳನ್ನು ಎದುರಿಸುತ್ತಿರಲಿ ಪ್ರತಿಯೊಂದು ಚಟುವಟಿಕೆಯಲ್ಲಿ ನಮ್ಮ ಜೀವನದಲ್ಲಿ ಈ ಉತ್ಸಾಹ ಅಥವಾ ವಿಸ್ತರಣೆ ಮತ್ತು ಸಂಕೋಚನದ ನಡುವೆ ನಾವು ಯಾವಾಗಲೂ ತೂಗಾಡುತ್ತಿರುತ್ತೇವೆ ಮತ್ತು ಇದು ಆಲೋಚನೆಗಳು ಮತ್ತು ಭಾವನೆಗಳ ಮಟ್ಟದಲ್ಲಿ ಒತ್ತಡವನ್ನು ತರುತ್ತದೆ. ನಮ್ಮ ನರಮಂಡಲವು ಇದನ್ನೆಲ್ಲ ಹೀರಿಕೊಳ್ಳುತ್ತಲೇ ಇರುತ್ತದೆ.
ಈಗ ನಾವು ಯೋಗ ನಿದ್ರಾ ಮಾಡಿದಾಗ ಏನಾಗುತ್ತದೆ ಎಂದು ನೋಡೋಣ. ನಾವು ಮಲಗಿರುವಾಗ, ಶಿಕ್ಷಕರ ಮಾರ್ಗದರ್ಶನದಲ್ಲಿ, ನಾವು ತುಲನಾತ್ಮಕವಾಗಿ ಹೆಚ್ಚು ಶಾಂತವಾಗಿರುತ್ತೇವೆ. ನಂತರ ನಾವು ನಮ್ಮ ಅರಿವನ್ನು ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಚಲಿಸಲು ಪ್ರಾರಂಭಿಸುತ್ತೇವೆ ಮತ್ತು ನಾವು ಶಾಂತ ರೀತಿಯಲ್ಲಿ ಉಸಿರಾಡುತ್ತೇವೆ. ಸದಾ ಭೂತ-ಭವಿಷ್ಯ, ಯೋಜನೆ ಅಥವಾ ವಿಷಾದ, ಸಿಟ್ಟು ಅಥವಾ ಆತಂಕದ ಕುಣಿಕೆಯಲ್ಲಿಯೇ ಇರುವ ಮನಸ್ಸು ನಿಧಾನವಾಗಿ ಆ ಕುಣಿಕೆಯಿಂದ ಹೊರಬರಲು ಆರಂಭಿಸಿ ಪ್ರಸ್ತುತ ಕ್ಷಣಕ್ಕೆ ಬರುತ್ತದೆ. ನಿಮ್ಮ ಮನಸ್ಸು ಸಂಪೂರ್ಣವಾಗಿ ಪ್ರಸ್ತುತ ಕ್ಷಣದಲ್ಲಿದ್ದಾಗ; ನೀವು ಏನನ್ನೂ ಮಾಡುತ್ತಿರುವದಿಲ್ಲ, ನೀವು ಏನನ್ನೂ ಯೋಜಿಸುತ್ತಿರುವದಿಲ್ಲ, ನೀವು ಯೋಚಿಸುತ್ತಿರುವದಿಲ್ಲ. ನಿಮ್ಮ ಮನಸ್ಸು ಭೂತಕಾಲದಲ್ಲಿ ಇರುವದಿಲ್ಲ, ಕೋಪ ಅಥವಾ ವಿಷಾದ ಇಲ್ಲ. ಮನಸ್ಸು ಪ್ರಸ್ತುತಕ್ಷಣಕ್ಕೆ ಬಂದ ತಕ್ಷಣ, ಅದು ಯಾವುದಕ್ಕೆ ಅಂಟಿಕೊಂಡಿರುತ್ತದೆಯೋ, ಭೂತ ಮತ್ತು ಭವಿಷ್ಯ, ಭೂತಕಾಲದ ಅನುಭವದ ಮುದ್ರೆಗಳು ಮತ್ತು ಭವಿಷ್ಯದ ಚಿಂತೆಗಳು; ಮನಸ್ಸು ಬಿಡಲು ಪ್ರಾರಂಭಿಸುತ್ತದೆ. ನರಮಂಡಲವು ಆಳವಾದ ವಿಶ್ರಾಂತಿ ಸ್ಥಿತಿಯನ್ನು ತಲುಪುತ್ತದೆ, ಅಲ್ಲಿ ಮನಸ್ಸಿನ ಮೇಲೆ ಮೂಡಿರುವ ಅನುಭವದ ಮುದ್ರೆಗಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಯಾವ ಅನಿಸಿಕೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನಮಗೆ ತಿಳಿಯುವದಿಲ್ಲ, ಆದರೆ ಅವುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ನೀವು ಆಲೋಚನೆಗಳ ಮೂಲಕ ಸಂಗ್ರಹಿಸಿರುವ ಮಾನಸಿಕ ಒತ್ತಡವನ್ನು ಬಿಡುಗಡೆ ಮಾಡುತ್ತೀರಿ, ನೀವು ದೈಹಿಕ ಒತ್ತಡದೊಂದಿಗೆ ನೀವು ಭಾವನೆಗಳು ಮತ್ತು ಅನಿಸಿಕೆಗಳ ಮೂಲಕ ಸಂಗ್ರಹಿಸಿದ ಭಾವನಾತ್ಮಕ ಒತ್ತಡವನ್ನು ಬಿಡುಗಡೆ ಮಾಡುತ್ತೀರಿ, ನೀವು ಮಲಗಿರುವಾಗ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುವುದರಿಂದ, ಸ್ನಾಯುಗಳ ನಿಜವಾದ ದೈಹಿಕ ಆಯಾಸವು ಸಹ ಬಿಡುಗಡೆಯಾಗುತ್ತದೆ. ಆದ್ದರಿಂದ ಯೋಗ ನಿದ್ರಾ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡುವುದು.
ಯೋಗ ನಿದ್ರಾವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಆಳವಾಗಿ ಕುಳಿತಿರುವ ಆಘಾತವನ್ನು ನಿವಾರಿಸಬಹುದು
ಯೋಗ ನಿದ್ರಾದ ನಿರಂತರ ಅಭ್ಯಾಸವು ದೊಡ್ಡ ಬದಲಾವಣೆಯನ್ನು ತರುತ್ತದೆ. ನೀವು ಯೋಗ ನಿದ್ರಾವನ್ನು ನಿಯಮಿತವಾಗಿ ಮಾಡಿದಾಗ, ಆರಂಭದಲ್ಲಿ ಅದು ದೈನಂದಿನ ಅಥವಾ ಸಣ್ಣ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಆದರೆ ನೀವು ಇದನ್ನು ದೀರ್ಘಕಾಲದವರೆಗೆ ನಿಯಮಿತವಾಗಿ ಮಾಡಿದರೆ, ಯೋಗ ನಿದ್ರಾ ಅಭ್ಯಾಸವು ಆಳವಾಗುತ್ತಿದ್ದಂತೆ, ನಿಮ್ಮ ಮನಸ್ಸು-ದೇಹದ ಸಂಕೀರ್ಣದಿಂದ ನೀವು ಬಿಡುಗಡೆ ಮಾಡಲು ಸಾಧ್ಯವಾಗದ ಆಳವಾದ ಆಘಾತಗಳನ್ನು, ಬಹಳ ಹಳೆಯ ನೆನಪುಗಳನ್ನು ಸಹ ನೀವು ಬಿಡುಗಡೆ ಮಾಡುತ್ತೀರಿ.
ಯೋಗ ನಿದ್ರಾ ಪ್ರಾಮುಖ್ಯತೆ, ಯೋಗದ ನಿಯಮಿತ ಅಭ್ಯಾಸ ಮಾಡುವವರಿಗೂ ಸಹ
ನಾವು ಯೋಗಾಭ್ಯಾಸವನ್ನು ಮಾಡುವಾಗ, ನಾವು ದೇಹದ ಮಟ್ಟದಲ್ಲಿ ಶ್ರಮ ಪಡುತ್ತೇವೆ. ಈಗ, ನಮ್ಮ ದೈನಂದಿನ ಜೀವನದಲ್ಲಿ, ನಾವು ಕಷ್ಟಸಾಧ್ಯ ಜೀವನ ಶೈಲಿಯನ್ನು ನಡೆಸುತ್ತಿದ್ದೇವೆ ಎಂಬುದನ್ನು ಗಮನಿಸಬಹುದು. ನಾವು ಎಲ್ಲಾ ಸಮಯದಲ್ಲೂ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಈಗ ಯೋಗ ಕೂಡ ಏನನ್ನಾದರೂ ಮಾಡುವ ಭಾಗವಾಗಿದೆ. ಆದರೆ ಯೋಗ ನಿದ್ರಾ ಅಥವಾ ಧ್ಯಾನದ ಸಮಯದಲ್ಲಿ, ನೀವು ಏನೂ ಮಾಡದೆ, ಕೇವಲ ವಿಶ್ರಾಂತಿಗಾಗಿ ವಿಶ್ರಾಂತಿ ಪಡೆಯುವ ಕೆಲವು ಸಮಯಗಳಲ್ಲಿ ಅದು ಒಂದು. ಅಲ್ಲಿ ಹೆಚ್ಚು ಶ್ರಮವಿಲ್ಲ, ಏಕೆಂದರೆ ‘ಮಾಡುವಿಕೆ’ ಸುಸ್ತು ಅಥವಾ ಆಯಾಸವನ್ನು ತರುತ್ತದೆ. ಆದ್ದರಿಂದ ನೀವು ಯೋಗ ಮಾಡುತ್ತಿದ್ದರೂ, ಅದರ ಕೊನೆಯಲ್ಲಿ ಶ್ರಮವಿರುತ್ತದೆ; ಆದರೆ ಯೋಗ ನಿದ್ರಾದಲ್ಲಿ ನೀವು ಶ್ರಮವಿಲ್ಲದ ಸ್ಥಿತಿಗೆ ಹೋಗುತ್ತೀರಿ, ಇದು ನಿಮ್ಮ ದೇಹ ಮತ್ತು ಮನಸ್ಸಿಗೆ ಅಗತ್ಯವಿರುವ ವಿಶ್ರಾಂತಿಯ ಆಳವಾದ ರೂಪವಾಗಿದೆ.
ಗುರುದೇವ ಹೇಳುವಂತೆ, ನೀವು ಬಾಣವನ್ನು ದೂರಕ್ಕೆ ಹೊಡೆಯಲು ಬಯಸಿದಾಗ, ನೀವು ಅದನ್ನು ಹಿಂದಕ್ಕೆ ಎಳೆಯಬೇಕು. ಆದ್ದರಿಂದ, ನಾವು ಅತ್ಯಂತ ತೀವ್ರವಾದ ಜೀವನಶೈಲಿಯನ್ನು ಮತ್ತು ಬಹು-ಕಾರ್ಯವನ್ನು ಸುತ್ತಿನಲ್ಲಿ ನಡೆಸುತ್ತಿರುವಾಗ, ವಿಶ್ರಾಂತಿಯ ಗುಣಮಟ್ಟವೂ ಅಷ್ಟೇ ಆಳವಾಗಿರಬೇಕು. ಬಹಳಷ್ಟು ಚಟುವಟಿಕೆಯನ್ನು ಒಳಗೊಂಡಿರುವಾಗ, ನಾವು ಮಾಡುವ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲು ನಮಗೆ ಹೆಚ್ಚಿನ ಗುಣಮಟ್ಟದ ವಿಶ್ರಾಂತಿಯ ಅಗತ್ಯವಿರುತ್ತದೆ.
ಯಾವುದೇ ಆಸನದ ಅನುಕ್ರಮದ ಕೊನೆಯಲ್ಲಿ ಯೋಗ ನಿದ್ರಾವನ್ನು ಸೇರಿಸುವುದು ಬಹಳ ಮುಖ್ಯ, ಏಕೆಂದರೆ ದೇಹ ಮತ್ತು ಮನಸ್ಸಿಗೆ ಆಸನಗಳ ಪರಿಣಾಮಗಳನ್ನು ಸಂಯೋಜಿಸಲು ಸಮಯ ಬೇಕಾಗುತ್ತದೆ.
~ ಗುರುದೇವ ಶ್ರೀ ಶ್ರೀ ರವಿಶಂಕರ್
ಯೋಗ ನಿದ್ರಾ ಮಾಡುವಾಗ ನೆನಪಿನಲ್ಲಿಡಬೇಕಾದ ಕೆಲವು ಅಂಶಗಳು
- ವಿಶ್ರಾಂತಿ. ನೀವು ಯೋಗ ನಿದ್ರಾ ಮಾಡುವ ಮೊದಲು, ನಿಮಗೆ ಏನಾದರೂ ಆಸೆ ಅಥವಾ ಸಂಕಲ್ಪವಿದ್ದರೆ, ಅವುಗಳನ್ನು 2-3 ಬಾರಿ ಮನಸ್ಸಿಗೆ ತಂದುಕೊಳ್ಳಿ ಮತ್ತು ನಂತರ ಸಂಪೂರ್ಣವಾಗಿ ಬಿಡಿ.
- ಈ ಮೂರು ವಿಷಯಗಳನ್ನು ನಿಧಾನವಾಗಿ ಮನಸ್ಸಿನಲ್ಲಿಟ್ಟುಕೊಳ್ಳಿ– ನನಗೆ ಏನೂ ಬೇಡ, ನಾನು ಏನನ್ನೂ ಮಾಡುವುದಿಲ್ಲ, ನಾನು ಏನೂ ಅಲ್ಲ. ತದನಂತರ ಸಂಪೂರ್ಣವಾಗಿ ಹೋಗಲು ಬಿಡಿ.
- ನಿಯಮಿತವಾಗಿ ಅಭ್ಯಸಿಸಿರಿ. ದೀರ್ಘಕಾಲದವರೆಗೆ ಅದನ್ನು ಶಿಸ್ತುಬದ್ಧವಾಗಿ ಮಾಡಿ.
- ಈ ಅಭ್ಯಾಸವನ್ನು ಗೌರವದಿಂದ ಮಾಡಿ. ನೀವು ಈ ಅಭ್ಯಾಸಗಳನ್ನು ಗೌರವದಿಂದ ಮಾಡಿದಾಗ, ಅನುಭವವು ಆಳವಾಗುತ್ತದೆ ಮತ್ತು ವಿಸ್ತೃತವಾಗುತ್ತದೆ.