ಇತ್ತೀಚಿನ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಜನರು ಮಾನಸಿಕವಾಗಿ ಬಳಲಿ, ಖಿನ್ನತೆಯಿಂದ ತೊಳಲಾಡುತಿದ್ದಾರೆ. ಇದಕ್ಕೆ ಕಾರಣಗಳು ಹಲವಾರು. ಅವಿಶ್ರಾಂತ ದುಡಿಮೆ,ಅನಾರೋಗ್ಯಕರ ಜೀವನಶೈಲಿ, ಹಾರ್ಮೋನುಗಳ ಅಸಮತೋಲನ, ಒತ್ತಡಗಳು ಮತ್ತು ಜೀವನದ ಆಘಾತಕಾರೀ ಅನುಭವಗಳನ್ನು ನಿರ್ವಹಿಸುವ ಸಾಮರ್ಥ್ಯವಿಲ್ಲದಿರುವುದು -ಈ ಎಲ್ಲಾ ಕಾರಣಗಳಿಂದಾಗಿ ಅನೇಕ ಜನರು ‘ಖಿನ್ನತೆ’ ಎಂಬುದಾಗಿ ಕರೆಯಲ್ಪಡುವ ಮಾನಸಿಕಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆಯಾ ವ್ಯಕ್ತಿಯನ್ನು ಅವಲಂಬಿಸಿ ಮತ್ತು ಕಾಯಿಲೆಯ ತೀವ್ರತೆಗನುಗುಣವಾಗಿ, ಖಿನ್ನತೆಯ ಗುಣಲಕ್ಷಣಗಳು ಭಿನ್ನವಾಗಿರಬಹುದು. ಹೇಗೆಯೇ ಇದ್ದರೂ, ಇದರ ನಿರ್ವಹಣೆಯು, ಆ ವ್ಯಕ್ತಿಗೆ ಮಾತ್ರವಲ್ಲದೆ , ವ್ಯಕ್ತಿಯ ಸುತ್ತಮುತ್ತಲಿರುವ ಇತರ ಜನರಿಗೂ ಅತ್ಯಂತ ಕ್ಲಿಷ್ಟಕರವಾದುದು. ವಿಶ್ವ ಆರೋಗ್ಯ ಸಂಸ್ಥೆಯಿಂದ ದೊರಕಿದ ವರದಿಯ ಪ್ರಕಾರ, ಇಡೀ ಜಗತ್ತಿನಲ್ಲಿ ಎಲ್ಲಾ ವಯಸ್ಸಿಗೆ ಸೇರಿದ, ಸುಮಾರು 300 ದಶಲಕ್ಷಕ್ಕೂ ಅಧಿಕವಾದ ಸಂಖ್ಯೆಯಲ್ಲಿ ಇಂದು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ.
ಒಳ್ಳೆಯ ಸುದ್ದಿ: ಯೋಗಾಭ್ಯಾಸ, ಧ್ಯಾನ , ಉತ್ತಮ ಆಹಾರ ಪದ್ಧತಿ, ಮುಂತಾದ ಕೆಲವೇ ಕೆಲವು ಸರಳವಾಗಿರುವ ಪ್ರಕ್ರಿಯೆಗಳ ಮೂಲಕ ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸುವುದರಿಂದ, ನಮ್ಮ ಮನಸ್ಸಿನಲ್ಲಿ ಖಿನ್ನತೆಗೆ ಕಾರಣವಾಗಿರುವ ಭಾವನೆಗಳನ್ನು ನಾವು ಜಯಿಸಲು ಸಾಧ್ಯವಾಗುವುದು. ಹಾಗಾದರೆ ಇವುಗಳು ಯಾವ ರೀತಿಯಲ್ಲಿ ನಮಗೆ ಸಹಕಾರಿಯಾಗಿವೆ? ಆಯುರ್ವೇದದ ಪ್ರಕಾರ, ಖಿನ್ನತೆಯೆಂದರೆ, ಸಂಕೀರ್ಣವಾದ ವ್ಯವಸ್ಥೆಯೊಂದಿಗೆ ನಮ್ಮಲ್ಲಿರುವ “ದೇಹ-ಮನಸ್ಸು”ಗಳಲ್ಲಿನ ಪ್ರಾಣಶಕ್ತಿಯ ಕೊರತೆಯಾಗಿದೆ. ನಮ್ಮ ಮನಸ್ಸಿನ ಲವಲವಿಕೆ, ಉತ್ಸಾಹ, ಸಂತೋಷ ಮತ್ತು ಶಾಂತಿಗಳಿಗೆ ಮುಖ್ಯ ಕಾರಣವೇ ನಮ್ಮ ಪ್ರಾಣಶಕ್ತಿಯಾಗಿದೆ. ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸವು ನಮ್ಮಪ್ರಾಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಈ ರೀತಿಯಾಗಿ ಪ್ರಾಣಶಕ್ತಿಯು ಅಧಿಕ ಮಟ್ಟದಲ್ಲಿರುವಾಗ ,ಸಹಜವಾಗಿಯೇ ಖಿನ್ನತೆಯ ಲಕ್ಷಣಗಳು ದೂರವಾಗುತ್ತವೆ. ವೈಜ್ಞಾನಿಕವಾಗಿ ಮಾಡಿದ ಎಷ್ಟೋ ಅಧ್ಯಯನ ಮತ್ತು ಸಂಶೋಧನೆಗಳು-’ನಿರಂತರವಾಗಿ ಯೋಗಾಸನಗಳನ್ನು ಮಾಡುವುದರಿಂದಸುದ್ದಿ ಜನರಲ್ಲಿರುವ ಖಿನ್ನತೆಯನ್ನು ಗುಣಪಡಿಸಲು ಸಾಧ್ಯವಾಗುತ್ತದೆ’ – ಎನ್ನುವುದನ್ನು ಕಂಡುಹಿಡಿದಿವೆ.
ಹೀಗೆ ಚೇತೋಹಾರಿಯಾಗಿದ್ದು, ಗುಣಮುಖವಾಗುತ್ತಿರುವ ಪಥದಲ್ಲಿ ಪಯಣಿಸುತ್ತಿರುವ ಯಾವುದೇ ಒಬ್ಬ ವ್ಯಕ್ತಿಯು, ಆಶಾವಾದಿಯಾಗಿರುವುದು ಹಾಗೂ ಸಂಪೂರ್ಣ ವಿಶ್ವಾಸವನ್ನು ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ.
ಜೀವನವು ಸಂತೋಷ ಮತ್ತು ನೋವುಗಳ ಸಂಯೋಜನೆಯಾಗಿದೆ. ನೋವು ಅನಿವಾರ್ಯವಾಗಿರುವುದು, ಆದರೆ ನರಳಾಟವು ಐಚ್ಛಿಕವಾದುದು. ನೀವು ಜೀವನದ ಬಗ್ಗೆ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದರೆ, ಅದು ಮುಂದೆ ಸಂಕಷ್ಟಗಳು ಬಂದಾಗ ಅವುಗಳನ್ನು ಎದುರಿಸಿ, ಬದುಕಿನಲ್ಲಿ ಮುನ್ನಡೆಯಲು ನಿಮಗೆ ಶಕ್ತಿಯನ್ನು ನೀಡುತ್ತದೆ. ಈ ಜಗತ್ತಿನಲ್ಲಿ ನಿಮ್ಮ ಇರುವಿಕೆಯು ಅತ್ಯಂತ ಅಗತ್ಯವಾಗಿದೆ ಎನ್ನುವುದನ್ನು ಅರಿತುಕೊಳ್ಳಿ. ಈ ಜೀವನವು ,ಎಲ್ಲಾ ವಿಧದ ಅನಂತ ಸಾಧ್ಯತೆಗಳೊಂದಿಗೆ, ಒಂದು ಮಹತ್ತರವಾದ ಉಡುಗೊರೆಯಾಗಿ ನಿಮಗೆ ದೊರಕಿದೆ. ಯಾಕೆಂದರೆ ನಿಮ್ಮ ಬದುಕು ನಿಮಗೆ ಮಾತ್ರವಲ್ಲದೆ ಇತರ ಅನೇಕ ಜನರಿಗೆ ಆನಂದ ಮತ್ತು ಹರ್ಷಗಳನ್ನು ತಂದು ಕೊಡುವ ಕಾರಂಜಿ ಯಾಗಬಹುದು.
– ಶ್ರೀ ಶ್ರೀ ರವಿಶಂಕರ್
ಖಿನ್ನತೆಯನ್ನು ಕಡಿಮೆ ಮಾಡುವ ಯೋಗದ ಭಂಗಿಗಳು
ಶಿಶು ಆಸನ

- ಆಳವಾದ ವಿಶ್ರಾಂತಿಯನ್ನು ತಂದು ಕೊಡುವುದು.
- ನರಮಂಡಲವನ್ನು ಶಾಂತಗೊಳಿಸುತ್ತದೆ, ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡುತ್ತದೆ.
ಹಾಲಾಸನ

- ನರಮಂಡಲವನ್ನು ಶಾಂತಗೊಳಿಸುತ್ತದೆ, ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
- ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ, ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ವೃದ್ಧಿಸುತ್ತದೆ.
ಶವಾಸನ

- ಆಳವಾದ ಮತ್ತು ಧ್ಯಾನಸ್ಥವಾಗಿರುವ ವಿಶ್ರಾಂತಿಯನ್ನು ತಂದು ಕೊಡುತ್ತದೆ.ಖಿನ್ನತೆಯ ಪ್ರಮುಖ ಕಾರಣವಾದ ಒತ್ತಡವನ್ನು ಬಿಡುಗಡೆ ಮಾಡುತ್ತದೆ.
- ವಾತದೋಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ – ವಾಯು ತತ್ವದ ಅಸಮತೋಲನವೇ ನಿಮ್ಮನ್ನು ಖಿನ್ನತೆ ಮತ್ತು ಆತಂಕಗಳಿಗೆ ಒಳಪಡಿಸುವ ಮುಖ್ಯ ಕಾರಣವಾಗಿರುತ್ತದೆ.
- ನಿಮ್ಮ ಮನಸ್ಸಿಗೆ ಪುನಶ್ಚೈತನ್ಯವನ್ನು ತಂದುಕೊಟ್ಟು, ನೀವು ಪ್ರಫುಲ್ಲತೆಯೊಂದಿಗೆ ಉಲ್ಲಾಸದಿಂದಿರಲು ಸಹಕಾರಿಯಾಗುತ್ತದೆ.
ಅಧೋಮುಖ ಶ್ವಾನಾಸನ

- ದೇಹವನ್ನು ಸುಧೃಢವನ್ನಾಗಿ ಮಾಡಿ, ಪುನಶ್ಚೇತನಗೊಳಿಸುತ್ತದೆ.
- ಮೆದುಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ, ನಿಮ್ಮ ಮನಸ್ಥಿತಿಯನ್ನು ಉನ್ನತ ಸ್ತರದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
- ತಲೆನೋವು, ನಿದ್ರಾಹೀನತೆ ಮತ್ತು ಆಯಾಸವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.
ಸೇತು ಬಂಧಾಸನ

- ಮೆದುಳನ್ನು ಶಾಂತಗೊಳಿಸುತ್ತದೆ, ಆತಂಕ ಮತ್ತು ಖಿನ್ನತೆಗಳನ್ನು ಕಡಿಮೆ ಮಾಡುತ್ತದೆ.
- ಶ್ವಾಸಕೋಶವನ್ನು ವಿಕಸನಗೊಳಿಸುತ್ತದೆ ಮತ್ತು ಮನಸ್ಸಿನಲ್ಲಿ ತೋಯ್ದಾಟ ಮತ್ತು ಖಿನ್ನತೆಗಳನ್ನು ಉಂಟು ಮಾಡುವ ಥೈರಾಯ್ಡ್ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಉಸಿರಾಟದ ವ್ಯಾಯಾಮಗಳು
ಉಸಿರಾಟದ ಮೂಲಕ ಮಾಡುವ ವ್ಯಾಯಾಮಗಳು ಮತ್ತು ಪ್ರಾಣಾಯಾಮಗಳು, ವಿಶೇಷವಾಗಿ ಖಿನ್ನತೆಯನ್ನು ಜಯಿಸಲು ಸಹಾಯ ಮಾಡುವ ಪರಿಣಾಮಕಾರಿಯಾದ ಪ್ರಕ್ರಿಯೆಗಳಾಗಿವೆ.
ಭ್ರಮರಿ ಪ್ರಾಣಾಯಾಮ
- ಪ್ರಕ್ಷುಬ್ಧಪೀಡಿತ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
- ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ನಾಡಿ ಶೋಧನ ಪ್ರಾಣಾಯಾಮ

- ಹಿಂದಿನ ಮತ್ತು ಭವಿಷ್ಯದ ಅನಗತ್ಯವಾದ ಆಲೋಚನೆಗಳನ್ನು ತ್ಯಜಿಸಿ ಮನಸ್ಸನ್ನು ವರ್ತಮಾನಕ್ಕೆ ತರಲು ಸಹಾಯ ಮಾಡುತ್ತದೆ.
- ನಾಡಿಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. -ಈ ಮೂಲಕ, ಶಕ್ತಿಯ ನಾಲೆಗಳು, ಪ್ರಾಣವನ್ನು ಸುಗಮವಾಗಿ ಹರಿಯುವಂತೆ ಮಾಡುತ್ತವೆ.
- ಸಂಗ್ರಹವಾದ ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ಖಿನ್ನತೆಯ ನಿವಾರಣೆಗೆ ಸಹಕಾರಿಯಾಗಿದೆ.
ಸುದರ್ಶನ ಕ್ರಿಯೆ ಮತ್ತು ಅದರ ಜೊತೆಗಿರುವ ಇತರ ಉಸಿರಾಟದ ಪ್ರಕ್ರಿಯೆಗಳನ್ನು (SKY) ಪ್ರತಿನಿತ್ಯವೂ ಅಭ್ಯಾಸ ಮಾಡುತ್ತಿರುವ ವ್ಯಕ್ತಿಗಳಲ್ಲಿ, ಗಮನಾರ್ಹವಾದ ರೀತಿಯಲ್ಲಿ ಖಿನ್ನತೆಯು ಪರಿಹಾರವಾಗಿರುವುದನ್ನು ಹಲವಾರು ಪ್ರಕಟಿತ ಅಧ್ಯಯನಗಳು ದಾಖಲಿಸಿವೆ. ಖಿನ್ನತೆಯು ಯಾವುದೇ ಪ್ರಮಾಣದಲ್ಲಿದ್ದರೂ, ಖಿನ್ನತೆಯ ಪರಿಹಾರದಲ್ಲಿ 67-73% ಯಶಸ್ಸಿನ ಪ್ರಮಾಣವು ಈ ಅಧ್ಯಯನಗಳಲ್ಲಿ ಸಾಬೀತಾಗಿದೆ.
ಕೆಲವು ಪ್ರೋತ್ಸಾಹಕರ ಸಲಹೆಗಳು
- ಸಮುದಾಯದ ಸೇವೆಗಳಲ್ಲಿ ತೊಡಗಿಸಿಕೊಳ್ಳಿ: ‘ಸಮಾಜಕ್ಕಾಗಿ ನಾನು ಏನು ಮಾಡಬಲ್ಲೆ?’ ಎಂದು ದೊಡ್ಡದಾಗಿ ಯೋಚಿಸಿ; ಹಾಗೂ ಮಹತ್ತರವಾದ ಉದ್ದೇಶಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ; ಇವುಗಳನ್ನು ಮಾಡುವುದರಿಂದ ನಿಮ್ಮ ಜೀವನದ ಸಂಪೂರ್ಣ ಆಯಾಮವೇ ಬದಲಾಗಿ ಹೋಗುವುದು. ಇದು “ನಾನು.. ನಾನು.. ನನ್ನದು..” ಎಂದು ಸದಾ ಕಾಲವೂ ತನ್ನ ಬಗ್ಗೆಯೇ ಚಿಂತಿಸುತ್ತಿರುವ ಮನಸ್ಥಿತಿಯಿಂದ ನಿಮ್ಮನ್ನು ಹೊರಗೆ ತರುತ್ತದೆ.
- ನೀವು ಏನನ್ನು ತಿನ್ನುತ್ತೀರೋ… ನೀವು ಅದೇ ಆಗುತ್ತೀರಿ: ನೀವು ಏನನ್ನು ತಿನ್ನುತ್ತೀರಿ ಎಂಬುದನ್ನು ಗಮನಿಸುವುದು ಸಹ ಬಹಳ ಮುಖ್ಯ. ಹೆಚ್ಚಿನ ಪ್ರಾಣವನ್ನು ಹೊಂದಿರುವ ಮತ್ತು ಆರೋಗ್ಯಕರವಾಗಿರುವ ಆಹಾರವು, ಮನಸ್ಸು ಮತ್ತು ದೇಹವನ್ನು ಹಗುರವಾಗಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
- ಕೆಲವು ಮಂತ್ರಗಳನ್ನು ಪಠಣ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ಮಂತ್ರಗಳ ಪಠಣವು ಪ್ರಾಣಶಕ್ತಿಯನ್ನು ಹೆಚ್ಚಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಯೋಗಾಭ್ಯಾಸವು ದೇಹ ಮತ್ತು ಮನಸ್ಸುಗಳನ್ನು ಹಗುರ ಪಡಿಸಿ, ಬಹಳಷ್ಟು ವಿಧಗಳಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಆದಾಗ್ಯೂ, ಇದು ಔಷಧಿಗೆ ಪರ್ಯಾಯವಲ್ಲ. ಸರಿಯಾಗಿ ತರಬೇತಿ ಪಡೆದ ಶ್ರೀ ಶ್ರೀ ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ಯೋಗದ ಭಂಗಿಗಳನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದು ಅತೀ ಮುಖ್ಯ. ಯಾವುದಾದರೂ ಅನಾರೋಗ್ಯವಿರುವಾಗ, ನಿಮ್ಮ ವೈದ್ಯರನ್ನು ಮತ್ತು ಶ್ರೀ ಶ್ರೀ ಯೋಗದ ಶಿಕ್ಷಕರನ್ನು ಸಂಪರ್ಕಿಸಿ, ಅದರ ನಂತರವೇ ಯೋಗದ ಭಂಗಿಗಳನ್ನು ಅಭ್ಯಾಸ ಮಾಡಿ.