ಯೋಗದ ಪ್ರಕ್ರಿಯೆಗಳಿಂದ ಆತಂಕ ಮತ್ತು ಒತ್ತಡಗಳಿಂದ ಬಿಡುಗಡೆಯನ್ನು ಹೊಂದಬಹುದು!
ಒತ್ತಡ, ಭಯ, ಆತಂಕ – ಜೀವನದಲ್ಲಿ ಈ ಎಲ್ಲಾ, ಭಾವನೆಗಳನ್ನು ನಾವು ಅನುಭವಿಸಿದ ಕ್ಷಣಗಳನ್ನೆಲ್ಲಾ ಎಣಿಸುತ್ತಾ ಹೋದರೆ, ಅದರ ಲೆಕ್ಕವೇ ತಪ್ಪಿ ಹೋಗುತ್ತದೆ! ಪರೀಕ್ಷಾ ಫಲಿತಾಂಶದ ಬಗ್ಗೆ ಆತಂಕ, ನಮ್ಮ ಫಲಿತಾಂಶದ ಕಾರ್ಡನ್ನು ನಮ್ಮ ತಂದೆತಾಯಿ ಕಂಡು, ಅವರು ತೋರುವ ಪ್ರತಿಕ್ರಿಯೆ, ಮೊದಲನೆಯ ಸಲ ಗಂಡು ಅಥವಾ ಹೆಣ್ಣು ಸ್ನೇಹಿತೆಯೊಡನೆ ಹೊರಗೆ ಹೋದಾಗ, ಕೆಲಸದ ಸಂದರ್ಶನವಿದ್ದಾಗ ಉಂಟಾಗುವ ಆತಂಕ, ನಾವೆಲ್ಲರೂ ಈ ಕ್ಷಣಗಳನ್ನು ಜೀವಿಸಿದ್ದೇವೆ. ಸ್ವಲ್ಪ ಮಟ್ಟದ ಭಯವು ಅವಶ್ಯಕವೆ. ಊಟದಲ್ಲಿರುವ ಉಪ್ಪಿನ ಪ್ರಮಾಣದಷ್ಟೇ ಜೀವನದಲ್ಲಿ ಭಯವು ಅವಶ್ಯಕ. ಇದರಿಂದಾಗಿ ನಾವು ಶಿಸ್ತಿನಲ್ಲಿರುತ್ತೇವೆ, ಏಕಾಗ್ರರಾಗಿರುತ್ತೇವೆ ಮತ್ತು ಕ್ರಿಯಾಶೀಲರಾಗಿರುತ್ತೇವೆ.
ಈ ಭಯವು ನಿರಂತರವಾಗಿ ಉಳಿದು, ಬೆದರಿಕೆಯ ಸ್ವಭಾವವನ್ನು ಪಡೆದುಕೊಂಡು, ನಮ್ಮ ದಿನನಿತ್ಯದ ಜೀವನದಲ್ಲಿ ತಲೆದೂರಲು ಆರಂಭಿಸಿದಾಗ ಸಮಸ್ಯೆಯು ಆರಂಭವಾಗುತ್ತದೆ. ಆಗ ಅದು ಆತಂಕದ ಖಾಯಿಲೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇದು ವಿಪರೀತ ಚಡಪಡಿಕೆ, ಚಿಂತೆ, ಅಜ್ಞಾತದ ಭಯದ ಗುಣಗಳನ್ನು ತೋರಿಸುತ್ತದೆ. ಆಗ ಇದಕ್ಕೆ ಚಿಕಿತ್ಸೆಯ ಅವಶ್ಯಕತೆ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ, ಆತಂಕದಿಂದ ಹೊರಬರಲು ಯೋಗ ಸುಲಭವಾಗಿ ಪಡೆಯಬಹುದು.
ಆತಂಕದಿಂದ ಹೊರಬರಲು ಯೋಗದಲ್ಲಿ 9 ಸೂಚಿಗಳಿವೆ. ಆದರೆ ಯೋಗವನ್ನು ಏಕೈಕ ಚಿಕಿತ್ಸೆಯಾಗಿ ಬಳಸಲು ಸಾಧ್ಯವಿಲ್ಲ. ವೈದ್ಯರ, ತಜ್ಞರ ಸಲಹೆಯೊಡನೆ ಸರಿಯಾದ ಔಷಧಿಗಳೊಡನೆ ಯೋಗಾಭ್ಯಾಸವನ್ನು ಮಾಡಬೇಕು. ವೈದ್ಯರು ನಿಮಗೆ ಮಾರ್ಗದರ್ಶನ ನೀಡಿ, ಯಾವ ರೀತಿಯ ಆತಂಕದ ಖಾಯಿಲೆ ಇದೆಯೆಂದು ತಿಳಿಸುತ್ತಾರೆ. ಪಾನಿಕ್ ಡಿಸಾರ್ಡರ್, ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್, ಪೋಸ್ಟ್-ಟ್ರಾಮಾಟಿಕೆ ಸ್ಟ್ರೆಸ್ ಡಿಸಾರ್ಡರ್, ಸೋಷಿಯಲ್ ಆನ್ ಕ್ಸೈಟಿ ಡಿಸಾರ್ಡರ್, ಜೆನರಲೈಸ್ಡ್ ಆನ್ ಕ್ಸೈಟಿ ಡಿಸಾರ್ಡರ್, ಇತ್ಯಾದಿ.
ಸೂಚನೆ:- ಆಲೋಪತಿಯ ಔಷಧಿಗಳು ಅಡ್ಡ ಪರಿಣಾಮಗಳನ್ನು ಹೊಂದಲು ಸಾಧ್ಯವಾದ್ದರಿಂದ, ಹೊಮಿಯೋಪತಿ, ಆಯುರ್ವೇದ ಚಿಕಿತ್ಸಾ ಪದ್ಧತಿಗಳನ್ನೂ ನೀವು ಆಯ್ದುಕೊಳ್ಳಬಹುದು.
ನಿಮಗೆ ಆತಂಕದ ಖಾಯಿಲೆಗಳಿವೆಯೆ ಎಂದು ತಿಳಿಯಲು, ಕೆಳಗಿನ ಈ ಲಕ್ಷಣಗಳು ಇವೆಯೇ ಎಂದು ನೋಡಿ:
- ಅಸಾಮಾನ್ಯವಾಗಿ ಗಾಬರಿಪಡುತ್ತೀರಿ, ಭಯಪಡುತ್ತೀರಿ ಮತ್ತು ಚಡಪಡಿಸುತ್ತಿರುತ್ತೀರಿ.
- ಗತದ ಆಘಾತಕಾರಿ ಅನುಭವಗಳ ಬಗ್ಗೆ ತಡೆಯಲು ಸಾಧ್ಯವಾಗದೆ ಇರುವಂತಹ, ಗೀಳಿನಂತಹ ಆಲೋಚನೆಗಳು ಬರುತ್ತವೆ.
- ಪದೇ ಪದೇ ಬರುವ ದುಃಸ್ವಪ್ನಗಳಿಂದ ಎಚ್ಚೆತ್ತುಕೊಳ್ಳುತ್ತೀರಿ.
- ಪದೇ ಪದೇ ಕೈಗಳನ್ನು ತೊಳೆದುಕೊಳ್ಳುತ್ತೀರಿ.
- ನಿದ್ದೆ ಮಾಡಲು ಸಮಸ್ಯೆ.
- ನಿಮ್ಮ ಕೈಗಳು, ಪಾದಗಳು ಬೆವರುತ್ತಿರುತ್ತವೆ.
- ಪದೇ ಪದೇ ಹೃದಯವು ಬಡಿದುಕೊಳ್ಳುತ್ತಿರುತ್ತದೆ.
ಯೋಗದಿಂದ ಆತಂಕವನ್ನು ದಾಟಿ ಬರಲು ಹೇಗೆ ಸಾಧ್ಯ?
ನಿತ್ಯ ಯೋಗಾಭ್ಯಾಸದಿಂದ ದಿನನಿತ್ಯದ ಜೀವನದಲ್ಲಿ ಪ್ರಶಾಂತವಾಗಿ, ವಿಶ್ರಾಮಿತರಾಗಿರಬಹುದು. ಮತ್ತು ಎದ್ದು ಬರುವ ಘಟನೆಗಳನ್ನು ಯಾವ ಚಡಪಡಿಕೆಯೂ ಇಲ್ಲದೆ ಧೈರ್ಯವಾಗಿ ಎದುರಿಸಬಹುದು. ಯೋಗಾಭ್ಯಾಸವೆಂದರೆ ಯೋಗಾಸನಗಳು, ಪ್ರಾಣಾಯಾಮಗಳು, ಧ್ಯಾನ, ಪ್ರಾಚೀನ ಯೋಗತತ್ವಗಳು. ಇವುಗಳೆಲ್ಲದ್ದರಿಂದ ಆತಂಕದ ರೋಗಿಗಳು ಗುಣಮುಖರಾಗಿ, ಜೀವನವನ್ನು ಸಕಾರಾತ್ಮಕತೆಯಿಂದ, ಬಲದಿಂದ ಜೀವನವನ್ನು ಎದುರಿಸಬಹುದು.
ಗೃಹಿಣಿಯಾದ ಶುಷಮ ಗೋಯಲ್ ರವರು, “ಜೀವನದ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ನಾನು ಸದಾ ಒತ್ತಡದಿಂದಿದ್ದು, ಚಿಂತಿತಳಾಗಿದ್ದೆ. ಪ್ರತಿಯೊಂದು ಸಣ್ಣ ಅಥವಾ ದೊಡ್ಡ ಘಟನೆಯು ನನ್ನನ್ನು ಅಲುಗಾಡಿಸುತ್ತಿತ್ತು. ನನ್ನ ಪತಿ ಓರ್ವ ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದರು ಮತ್ತು ಅವರು ನನಗೆ ಜೆನರಲೈಸ್ಡ್ ಆಂಕ್ಸೈಟಿ ಡಿಸಾರ್ಡರ್ ಇದೆಯೆಂದು ತಿಳಿಸಿದರು. ಆತಂಕಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದರೊಡನೆ, ಆರು ತಿಂಗಳು ಯೋಗ ಮತ್ತು ಧ್ಯಾನದ ಅಭ್ಯಾಸವನ್ನು ಮಾಡಿದೆ. ಇಂದು ನಾನು ಹೊಸ ಜನ್ಮವನ್ನು ಪಡೆದುಕೊಂಡಿದ್ದೇನೆ ಎನಿಸುತ್ತಿದೆ. ನನ್ನ ಆಲೋಚನಾ ಮಾದರಿಯು ಬದಲಿಸಿದೆ. ನನ್ನ ಆಂತರ್ಯದಿಂದ ನೆಲೆನಿಂತಿದ್ದೇನೆ ಅನಿಸುತ್ತದೆ. ನನಗೇನೇ ಆದರೂ ಒಳ್ಳೆಯದೇ ಆಗುತ್ತದೆಂಬ ವಿಶ್ವಾಸ ನನಗೀಗ ಬಂದಿದೆ. ಈಗ ನನಗೆ ಭವಿಷ್ಯದ ಭಯವಿಲ್ಲ! ಯೋಗದಿಂದ ಈ ಬಲವನ್ನು ನಾನು ಪಡೆದಿದ್ದೇನೆ” ಎನ್ನುತ್ತಾರೆ.
ಶುಷಮರಂತೆ ನೀವೂ ಸಹ ಸಕಾರಾತ್ಮಕ ಜೀವನವನ್ನು ಸ್ವಾಗತಿಸಿ, ಭಯವನ್ನು ಯೋಗದಿಂದ ಗೆಲ್ಲಬಹುದು.
ಆತಂಕವನ್ನು ದಾಟಿಬರಲು 9 ಯೋಗದ ಸೂಚಿಗಳು
- ಯೋಗಾಸನಗಳನ್ನು ಮಾಡಿ ನಿಮ್ಮ ಮನದ ಒತ್ತಡವನ್ನು ನಿವಾರಿಸಿಕೊಳ್ಳಿ.
- ಪ್ರಾಣಾಯಾಮಗಳೊಡನೆ ಸರಿಯಾಗಿ ಉಸಿರಾಡಿ ಆತಂಕವನ್ನು ನಿವಾರಿಸಿಕೊಳ್ಳಿ.
- ವಿಶ್ರಾಮಿತವಾದ ಮನಸ್ಸಿನ ಕೊಡುಗೆಯನ್ನು ಅನುಭವಿಸಲು ಧ್ಯಾನ ಮಾಡಿ.
- ಯೋಗದ ತತ್ವಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ, ಸಂತೋಷವಾಗಿರಿ, ಪ್ರತಿ ಕ್ಷಣವನ್ನು ಆನಂದಿಸಿ.
- ಪ್ರಾರ್ಥಿಸಿ, ವಿಶ್ವಾಸವನ್ನು ಹೊಂದಿ, ಮುಗುಳ್ನಗಿ!
- ಇತರರಿಗಾಗಿ ನೀವು ಏನು ಮಾಡಬಲ್ಲಿರೆಂದು ಆಲೋಚಿಸಿ.
- ಜಗತ್ತಿನ ನಶ್ವರವಾದ ಸ್ವಭಾವವನ್ನು ತಿಳಿಯಿರಿ.
- ಆತಂಕವನ್ನು ದಾಟಿ ಹೊರಬರಲು ಸಾಧ್ಯವಾದಂತಹ ಹಿಂದಿನ, ಇದೇ ರೀತಿಯ ಪರಿಸ್ಥಿತಿಗಳನ್ನು ನೆನಪಿಗೆ ತಂದುಕೊಳ್ಳಿ.
- ನಿಮ್ಮ ಸುತ್ತಲೂ ಸಕಾರಾತ್ಮಕವಾದ ಸಂಘವನ್ನೇ ಹೊಂದಿ.
1. ಯೋಗಾಸನಗಳನ್ನು ಮಾಡಿ ನಿಮ್ಮ ಮನಸ್ಸಿನ ಒತ್ತಡವನ್ನು ನಿವಾರಿಸಿಕೊಳ್ಳಿ.
ಈ ಯೋಗಾಸನಗಳಿಂದ ನೀವು ಸಂತೋಷವಾದ, ಆರೋಗ್ಯಕರವಾದ ಮನಸ್ಸು ಮತ್ತು ದೇಹವನ್ನು ಹೊಂದಬಹುದು. ಆಸನಗಳು ವ್ಯವಸ್ಥೆಯಿಂದ ಒತ್ತಡವನ್ನು ನಕಾರಾತ್ಮಕತೆಯನ್ನು ಬಿಡುಗಡೆ ಮಾಡುತ್ತವೆ!
- ಧನುರಾಸನ
- ಮತ್ಸ್ಯಾಸನ
- ಜಾನುಶೀರ್ಷಾಸನ
- ಸೇತುಬಂಧಾಸನ
- ಮಾರ್ಜಾಲಾಸನ
- ಪಶ್ಚಿಮೋತ್ಥಾನಾಸ
- ಹಸ್ತಪಾದಾಸನ
- ಅಧೋಮುಖ-ಶ್ವಾನಾಸನ
- ಶೀರ್ಷಾಸನ
- ಶವಾಸನ
ಸೂಚನೆ:- ಯೋಗಾಸನಗಳನ್ನು ಮಾಡಿದ ನಂತರ ನಿದ್ರೆಯಲ್ಲಿ ಮಲಗಿ ನಿಮ್ಮ ದೇಹ ಮತ್ತು ಮನಸ್ಸಿಗೆ ಕೆಲ ನಿಮಿಷಗಳ ವಿಶ್ರಾಂತಿಯನ್ನು ನೀಡಿ. ಈ ಪ್ರಕ್ರಿಯೆಯಿಂದ ದೇಹದ ವಿಷಕಾರಿ ಪದಾರ್ಥಗಳನ್ನು ಹೊರಹಾಕಬಹುದು. ಈ ಪದಾರ್ಥಗಳು ವ್ಯವಸ್ಥೆಯಲ್ಲಿನ ಒತ್ತಡದ ಮುಖ್ಯ ಕಾರಣ.
2. ಪ್ರಾಣಾಯಾಮಗಳೊಡನೆ ಸರಿಯಾಗಿ ಉಸಿರಾಡಿ ನಿಮ್ಮ ಆತಂಕವನ್ನು ನಿವಾರಿಸಿಕೊಳ್ಳಿ.
ಉಸಿರಿನ ಮೇಲೆ ಗಮನವನ್ನು ತೆಗೆದುಕೊಂಡು ಹೋದಾಗ ಮನಸ್ಸಿನ ಅನಾವ್ಯಶಕವಾದ, ಆತಂಕವನ್ನು ಪೋಷಿಸುವಂತಹ ಆಲೋಚನೆಗಳಿಂದ ಬಿಡುಗಡೆಯನ್ನು ಹೊಂದಬಹುದು. ಕೆಳಗಿನ ಉಸಿರಾಟದ ಅಭ್ಯಾಸಗಳನ್ನು ಯತ್ನಿಸಿ.:
- ಕಫಾಲಭಾಕ್ತಿ ಪ್ರಾಣಾಯಾಮ
- ಭಸ್ತ್ರಿಕ ಪ್ರಾಣಾಯಾಮ
- ನಾಡಿ ಶೋಧನ ಪ್ರಾಣಾಯಾಮ
- ಭ್ರಾಮರಿ ಪ್ರಾಣಾಯಾಮ
3. ವಿಶ್ರಾಮಿತವಾದ ಮನಸ್ಸಿನ ಕೊಡುಗೆಯನ್ನು ಪಡೆಯಲು ಧ್ಯಾನ ಮಾಡಿ.
ಛಿದ್ರವಾಗಿ ಹೋಗಿರುವ ಮನಸ್ಸನ್ನು ವಿಶ್ರಮಿಸಲು ಸಾಧ್ಯವಾಗುವಂತೆ ಮಾಡುವ ಮತ್ತು ನಿಮಗೆ ಪ್ರಶಾಂತತೆಯನ್ನು, ಶಾಂತಿಯನ್ನು ಉಂಟುಮಾಡುವಂತಹ ಒಂದು ಉತ್ತಮವಾದ ಪ್ರಕ್ರಿಯೆಯೇ ಧ್ಯಾನ. ಪ್ರತಿನಿತ್ಯವು ಧ್ಯಾನ ಮಾಡುವುದರಿಂದ, ಸಣ್ಣಪುಟ್ಟ ಮತ್ತು ಕ್ಷುಲಕವಾದ ವಿಷಯಗಳಲ್ಲೇ ನಿಮ್ಮನ್ನು ಇರಿಸಲು ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬ ಅರಿವು ನಿಮಗೆ ಉಂಟಾಗುತ್ತದೆ. ನೀವು ವಿಪರೀತವಾಗಿ ಚಿಂತಿಸದಂತೆ ಅಥವಾ ಅಜ್ಞಾತವಾದ ಭವಿಷ್ಯದ ಬಗ್ಗೆ ವಿಪರೀತ ಆತಂಕ ಪಡೆದಂತೆ ಧ್ಯಾನವು ತಡೆಯುತ್ತದೆ. ಧ್ಯಾನದಿಂದ ಆತಂಕವನ್ನು ಹೇಗೆ ಹೋಗಲಾಡಿಸಬಹುದೆಂದು ತಿಳಿಯಿರಿ.
“ಅಡ್ರಿನಲೀನ್ ರಷ್” ಎಂಬ ಪದವನ್ನು ನೀವು ಸಾಮಾನ್ಯವಾಗಿ ಕೇಳಿರಬಹುದು. ಸಂಭಾವ್ಯವಾದ ಬೆದರಿಕೆಯ ಬಗ್ಗೆ ಬಹಳ ಆತಂಕಗೊಂಡಾಗ ಇದಾಗುತ್ತದೆ. ಉದಾಹರಣೆಗೆ, ಸಾಹಸಮಯವಾದ ವಾಹನ ಚಾಲನೆಯಲ್ಲಿ ತೊಡಗಿದಾಗ ಅಡ್ರಿನಲೀನ್ ಹಾರ್ಮೋನಿನ ಮಟ್ಟವು ಏರುತ್ತದೆ. ಇದರಿಂದ ನಮ್ಮ ಹೃದಯವು ವೇಗವಾಗಿ ಬಡಿದುಕೊಳ್ಳುತ್ತದೆ, ಸ್ನಾಯುಗಳು ಬಿಗಿಯಾಗುತ್ತವೆ, ನಮ್ಮ ದೇಹದಿಂದ ವಿಪರೀತ ಬೆವರು ಸುರಿಯುತ್ತದೆ. ವೈಜ್ಞಾನಿಕ ಸಂಶೋಧನೆಗಳು, ಧ್ಯಾನದ ನಿತ್ಯಾಭ್ಯಾಸದಿಂದ ಈ ಒತ್ತಡದ ಹಾರ್ಮೋನಿನ ಮಟ್ಟವು ಮಹತ್ವವಾಗಿ ಕುಸಿಯುತ್ತದೆ ಎಂದು ತೋರಿಸಿವೆ.
4. ಯೋಗದ ತತ್ವವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ, ಸಂತೋಷವಾಗಿರಿ, ಪ್ರತಿ ಕ್ಷಣವನ್ನೂ ಆನಂದಿಸಿ.
ದಿನನಿತ್ಯದ ಜೀವನದಲ್ಲಿ ಪ್ರಾಚೀನ ಯೋಗದ ಜ್ಞಾನವನ್ನು ತಿಳಿದು, ಅದನ್ನು ಬಳಸಿ. ಈ ಜ್ಞಾನವು ಯೋಗದ ಕೆಲವು ಸರಳವಾದ ತತ್ವಗಳ ಬಗ್ಗೆ, ಯಮ ಮತ್ತು ನಿಯಮಗಳ ಬಗ್ಗೆ ಹೇಳುತ್ತದೆ. ಇದು ಸಂತೋಷವಾದ, ಆರೋಗ್ಯಕರವಾದ ಜೀವನದ ರಹಸ್ಯ. ಉದಾಹರಣೆಗೆ, ನಿಯಮದ ಸಂತೋಷದ ತತ್ವವು ತೃಪ್ತಿಯ ಮೌಲ್ಯವನ್ನು ಬೋಧಿಸುತ್ತದೆ. ಅಪರಿಗ್ರಹದ ತತ್ವವು, ನಾವು ಲೋಭವನ್ನು ಹೊಂದುವುದರಿಂದ ಅಥವಾ ಇನ್ನೂ ಹೆಚ್ಚನ್ನು, ಮತ್ತಷ್ಟನ್ನು ಹೊಂದುವ ಬಯಕೆಯಿಂದ ನಾವು ಹೊರಬರುವಂತೆ ಮಾಡುತ್ತದೆ. ಇದು ನಮ್ಮ ಒತ್ತಡ ಮತ್ತು ಆತಂಕದ ಕಾರಣವಾಗುತ್ತದೆ. ಶೌಚದ ತತ್ವವು ಮನಸ್ಸು ಮತ್ತು ದೇಹದ ಸ್ವಚ್ಛತೆಯ ಬಗ್ಗೆ ತಿಳಿಸುತ್ತದೆ. ಸೋಂಕಿನ ಖಾಯಿಲೆಗಳನ್ನು ಹಿಡಿದುಕೊಳ್ಳುವ ವಿಪರೀತ ಆತಂಕ ನಿಮಗಿದ್ದರೆ, ಈ ನಿಯಮವು ನಿಮಗೆ ಸಹಾಯ ಮಾಡುತ್ತದೆ.
ಯೋಗದ ಯಮ ಮತ್ತು ನಿಯಮಗಳು, ನೀವು ಪೌಷ್ಠಿಕವಾದ ಆಹಾರವನ್ನು ತಿಂದು, ಆರೋಗ್ಯಕರವಾದ ಜೀವನಶೈಲಿಯಲ್ಲಿ ನಡೆಸುವಂತೆ ಸಹಾಯ ಮಾಡುತ್ತದೆ. ಇದರಿಂದ ಆತಂಕ ಮತ್ತು ಒತ್ತಡವನ್ನು ದಾಟಿ ಬರಲು ಸಾಧ್ಯವಾಗುತ್ತದೆ. ಯೋಗದ ತತ್ವವನ್ನು ಅರ್ಥಮಾಡಿಕೊಳ್ಳಲು ಗುರುದೇವ್ ಶ್ರೀ ಶ್ರೀ ರವಿಶಂಕರರ “ಪತಂಜಲಿಯೋಗ ಸೂತ್ರ”ಗಳ ಭಾಷ್ಯದ ಪುಸ್ತಕವನ್ನು ಓದಿ.
5. ಪ್ರಾರ್ಥಿಸಿ, ವಿಶ್ವಾಸವನ್ನು ಹೊಂದಿ ಮತ್ತು ಮುಗುಳ್ನಗಿ!
ಆಶ್ವಾಸನೆಯನ್ನು ತರುವ ಅತ್ಯುತ್ತಮವಾದ ದಾರಿಯೆಂದರೆ ಪ್ರಾರ್ಥನೆ. ಪ್ರಾರ್ಥನೆಯು ನೀಡುವ ಬೆಂಬಲದಿಂದ ನೀವು ಆತಂಕ ಮುಕ್ತರಾಗಿರುತ್ತೀರಿ. ದಿನನಿತ್ಯದ ಪ್ರಾರ್ಥನೆ, ಮಂತ್ರೋಚ್ಚಾರಣೆ ಅಥವಾ ಭಜನೆಗಳನ್ನು ಹಾಡುವುದರಿಂದ ನೀವು ಸಕಾರತ್ಮಕವಾದ ಶಕ್ತಿಯಿಂದ ತುಂಬುತ್ತೀರಿ ಮತ್ತು ಮನಸ್ಸಿಗೂ ಸಹಾಯವಾಗುತ್ತದೆ. ನಡೆಯುವುದೆಲ್ಲವೂ ಒಳಿತಿಗಾಗಿಯೇ ಮತ್ತು ನಿಮ್ಮನ್ನು ನೋಡಿಕೊಳ್ಳುವ ಒಂದು ದೈವೀ ಶಕ್ತಿಯಿದೆ ಎಂಬ ಆಳವಾದ ವಿಶ್ವಾಸ ನಿಮ್ಮಲ್ಲಿ ತುಂಬುತ್ತದೆ. ಹೆಚ್ಚಾಗಿ, ಇನ್ನಷ್ಟು ಹೆಚ್ಚಾಗಿ ಮುಗುಳ್ನಗುವ ಪ್ರಜ್ಞಾಪೂರ್ವಕವಾದ ಯತ್ನವನ್ನು ಮಾಡಿ. ಇದರಿಂದ ಕೂಡಲೇ ನಿಮ್ಮಲ್ಲಿ ವಿಶ್ವಾಸ, ಪ್ರಶಾಂತತೆ ಮತ್ತು ಸಕಾರಾತ್ಮಕತೆಯೂ ತುಂಬುತ್ತದೆ. ಇದನ್ನು ಕೂಡಲೇ ಪ್ರಯತ್ನ ಮಾಡಿ ನೋಡಿ!
6. ಇತರರಿಗಾಗಿ ನೀವು ಏನನ್ನು ಮಾಡಬಲ್ಲಿರಿ ಎಂದು ಆಲೋಚಿಸಿ.
“ನಾನು, ನನ್ನದು” ಎಂಬುದರಲ್ಲೇ ನಾವು ನಿರಂತರವಾಗಿ ಸಿಲುಕಿಕೊಂಡಾಗ, ಒತ್ತಡ ಮತ್ತು ಆತಂಕಕ್ಕೆ ಅದು ಎಡೆಮಾಡಿ ಕೊಡುತ್ತದೆ. ನಮಗೇನಾಗುತ್ತದೋ ಎಂದು ಚಿಂತಿಸುತ್ತಲೇ ಇರುತ್ತೇವೆ. ಅದರ ಬದಲಿಗೆ, ನಿಮ್ಮ ಸುತ್ತಲೂ ಇರುವವರಿಗೆ ನೀವು ಯಾವ ರೀತಿಯಾಗಿ ಉಪಯುಕ್ತವಾಗಬಲ್ಲಿರಿ ಎಂಬುದರ ಮೇಲೆ ನಿಮ್ಮ ಗಮನವಿರಲಿ. ಸೇವಾಕಾರ್ಯಗಳಿಂದ ನೀವು ಶಕ್ತಿಯುತರಾಗುತ್ತಿರಿ, ಆಳವಾದ ತೃಪ್ತಿಯ ಭಾವ ಮತ್ತು ಅಪಾರ ಸಂತೋಷ ಸಿಗುತ್ತದೆ.
7. ಜಗತ್ತಿನ ನಶ್ವರವಾದ ಸ್ವಭಾವದ ಬಗ್ಗೆ ತಿಳಿಯಿರಿ.
ನಮ್ಮ ಸುತ್ತಲೂ ಇರುವುದೆಲ್ಲವೂ ಅಶಾಶ್ವತವಾದದ್ದು ಮತ್ತು ಬದಲಿಸುತ್ತದೆ ಎಂಬ ಅರಿವಾದಾಗ ನಾವು ವಿಶ್ರಾಮಿತರಾಗುತ್ತೇವೆ ಮತ್ತು ಆಂತರ್ಯದಲ್ಲಿ ನೆಲೆನಿಲ್ಲುತ್ತೇವೆ. “ಇದುವೂ ಹೊರಟು ಹೋಗುತ್ತದೆ. ಇದು ಸದಾಕಾಲ ನಿಲ್ಲುವುದಿಲ್ಲ” ಎಂಬ ಭಾವನೆ ನಮ್ಮಲ್ಲಿ ಏಳುತ್ತದೆ ಮತ್ತು ನಮ್ಮನ್ನು ಆತಂಕದಿಂದ ಮುಕ್ತಗೊಳಿಸುತ್ತದೆ. ಜೀವನದ ಈ ಮೂಲಭೂತ ತತ್ವವು ಕಾಣಲು ಸಾಧ್ಯವಾಗುವಂತೆ ಧ್ಯಾನವು ಸಹಾಯ ಮಾಡುತ್ತದೆ.
8. ಆತಂಕವನ್ನು ದಾಟಿ ಬರಲು ಸಾಧ್ಯವಾದಂತಹ ಹಿಂದಿನ, ಇದೇ ರೀತಿಯ ಪರಿಸ್ಥಿತಿಗಳನ್ನು ನೆನಪಿಗೆ ತಂದುಕೊಳ್ಳಿ.
ಈ ಪರಿಸ್ಥಿತಿಯನ್ನೂ ನೀವು ದಾಟಬಲ್ಲಿರಿ ಎಂದು ನಿಮ್ಮಲ್ಲಿ ಅಪಾರವಾದ ಧೈರ್ಯ ಉಕ್ಕುತ್ತದೆ. ಇದನ್ನು ನೀವು ಪದೇ ಪದೇ ನೆನಪಿಸಿಕೊಳ್ಳುತ್ತೀರಿ.
9. ನಿಮ್ಮ ಸುತ್ತಲೂ ಸಕಾರಾತ್ಮಕವಾದ ಸಂಘವನ್ನೇ ಹೊಂದಿ.
ಸಕಾರಾತ್ಮಕವಾದ ಮನಸ್ಸಿನವರೊಡನೆ ನೀವು ಹೆಚ್ಚು ಕಾಲ ಕಳೆದಷ್ಟೂ, ಅದೇ ರೀತಿಯ ಆಲೋಚನೆಗಳಿಂದ ಪ್ರಭಾವಿತರಾಗುತ್ತೀರಿ ಮತ್ತು ಜೀವನದ ಬಗೆಗಿನ ನಿಮ್ಮ ಧೋರಣೆಯ ಮೇಲೆ ಇದು ಪ್ರಭಾವವನ್ನು ಬೀರುತ್ತದೆ. ಕೇವಲ ಸಕಾರಾತ್ಮಕವಾದ ಮನಸ್ಸು ಮಾತ್ರ ಸಂತೋಷವನ್ನು, ಶಾಂತಿಯನ್ನು ಮತ್ತು ವಿಶ್ರಾಂತಿಯನ್ನು ತರಬಲ್ಲದು.
ಶ್ರೀ ಶ್ರೀ ಯೋಗ ಶಿಕ್ಷಕರಾದ ಡಾ॥ ಸೇಜಲ್ ಶಾರವರ ಮಾರ್ಗದರ್ಶನದಲ್ಲಿ ಈ ಲೇಖನವನ್ನು ಬರೆದವರು ಪ್ರೀತಿಕ ನಾಯರ್.