ಪರಿಚಯ

ಉತ್ತಮ ನಿದ್ರೆಗಾಗಿ ಮಲಗುವ ಸಮಯದಲ್ಲಿ ನೀವು ಮಾಡಬೇಕಾದ ಯೋಗಾಸನಗಳು ಮತ್ತು ವಿಶ್ರಾಂತಿಯ ಭಂಗಿಗಳ ಬಗ್ಗೆ ತಿಳಿಸಿಕೊಡುವ ನಮ್ಮ ಈ ಸಮಗ್ರ ಮಾರ್ಗದರ್ಶಿಗೆ ನಿಮಗೆಲ್ಲಾ ಸುಸ್ವಾಗತ. ಈ ಲೇಖನದಲ್ಲಿ, ನಾವು ಯೋಗದ ಅದ್ಭುತ ಜಗತ್ತನ್ನು ಅನ್ವೇಷಣೆ ಮಾಡಿ, ಅದರ ಮೂಲಕ,ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು, ಅದನ್ನು ಹೇಗೆ ಕೊಡುಗೆಯಾಗಿ ನೀಡಬಹುದು , ಎಂಬುದರ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳುವಾ!

ನೀವು ಯೋಗಾಸನಗಳನ್ನು ಕಲಿಯಬೇಕು ಎನ್ನುವ ಉತ್ಸಾಹ ಉಳ್ಳವರಾಗಿರಲಿ ಅಥವಾ ಅವುಗಳನ್ನು ಮೊದಲನೆಯ ಬಾರಿಗೆ ಪ್ರಾರಂಭಿಸುವವರಾಗಿರಲಿ, ನೀವು ಮಲಗುವ ಮೊದಲು ,ರಾತ್ರಿಯ ಹೊತ್ತಿನ ಯೋಗವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳುವುದರಿಂದ , ನಿಮ್ಮ ಸಂಪೂರ್ಣ ಯೋಗಕ್ಷೇಮದ ಬಗ್ಗೆ, ನೀವು ಗಮನಾರ್ಹವಾದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಮಲಗುವ ಸಮಯದಲ್ಲಿ ಮಾಡುವ ಯೋಗಾಸನಗಳಿಂದಾಗಿ ದೊರೆಯುವ ಪ್ರಯೋಜನಗಳು

ಮಲಗುವ ಸಮಯದ ಯೋಗವು ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೋ ವಿಧದ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡಲು, ನಿಮ್ಮ ಮನಸ್ಸಿನಿಂದ ಉದ್ವೇಗಗಳನ್ನು ನಿರ್ಮೂಲಗೊಳಿಸಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ; ವಿಶ್ರಾಂತಿ ಯಿಂದ ಒಡಗೂಡಿದ ನಿದ್ರೆಗೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಅದರ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ:

  • ನಿದ್ರೆಯ ಗುಣಮಟ್ಟದಲ್ಲಿ ಸುಧಾರಣೆ: ಮಲಗುವ ಸಮಯದ ಯೋಗಾಭ್ಯಾಸವು ನಿಮ್ಮ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು  ನಿದ್ರೆಯ ಗುಣಮಟ್ಟವು ಉತ್ತಮವಾಗುವಂತೆ  ಮಾಡುತ್ತದೆ, ಇದು ನಿಮಗೆ ಉಲ್ಲಾಸ ಮತ್ತು ನವಚೈತನ್ಯವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.
  • ಒತ್ತಡಗಳ ನಿವಾರಣೆ: ಆಳವಾದ ಉಸಿರಾಟದ ವ್ಯಾಯಾಮಗಳೊಂದಿಗೆ ಸಂಯೋಜಿಸಲ್ಪಟ್ಟ ಯೋಗದ ಭಂಗಿಗಳು , ನಿಮ್ಮಲ್ಲಿರುವ ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪ್ರತಿದಿನ ಮಲಗುವ ಮುನ್ನ, ನಿಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ಬಿಟ್ಟು ಬಿಡಲು ನಿಮಗೆ ಅನುವು ಮಾಡಿಕೊಡುತ್ತದೆ.
  • ವರ್ಧಿತ ನಮ್ಯತೆ(ಶರೀರವನ್ನು ಬೇಕಾದ ಭಂಗಿಯಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ): ಮಲಗುವ ಸಮಯದಲ್ಲಿ ಮಾಡುವ ಯೋಗದ ವಿವಿಧ ಭಂಗಿಗಳ ನಿಯಮಿತ ಅಭ್ಯಾಸವು ನಿಮ್ಮ ನಮ್ಯತೆಯನ್ನು ಸುಧಾರಿಸುತ್ತದೆ.  ಸಂದುಗಳ ಚಲನಶೀಲತೆಯನ್ನು ಹೆಚ್ಚು ಮಾಡುತ್ತದೆ, ನಿದ್ರೆಯ ಸಮಯದಲ್ಲಿ ಆಗುವ ಸ್ನಾಯುಗಳ ಬಿಗಿತ ಅಥವಾ ಅಸ್ವಸ್ಥತೆಯ ಅಪಾಯದಿಂದ ನಿಮ್ಮ ಶರೀರವನ್ನು ರಕ್ಷಿಸುತ್ತದೆ.
  • ಸ್ನಾಯುಗಳ ವಿಶ್ರಾಂತಿ: ಕೆಲವು ಯೋಗದ ಭಂಗಿಗಳು, ನಿರ್ದಿಷ್ಟವಾದ ಕೆಲವು ಸ್ನಾಯುಗಳ ಗುಂಪುಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅವುಗಳಲ್ಲಿ  ಹುದುಗಿರುವ ಉದ್ವೇಗವನ್ನು ಬಿಡುಗಡೆ ಮಾಡಿ , ಸ್ನಾಯುಗಳಿಗೆ ಆಳವಾದ ವಿಶ್ರಾಂತಿಯನ್ನು ದೊರಕಿಸುತ್ತವೆ. ಇದರಿಂದಾಗಿ ಸ್ನಾಯುಗಳ ನೋವುಗಳು ನಿವಾರಿಸಲ್ಪಡುತ್ತವೆ ಮತ್ತು ನಿದ್ರೆಯು ಹೆಚ್ಚು ಆರಾಮದಾಯಕವಾಗುತ್ತದೆ.
  • ಸುಧಾರಿತ ಮೈಂಡ್ಫುಲ್ನೆಸ್(ಮನಸ್ಸಿನ ಚಂಚಲತೆಯನ್ನು ನಿವಾರಿಸಿ ಹೆಚ್ಚಿನ ಜಾಗೃತಿಯಿಂದ ಇರುವಂತೆ ಮಾಡುತ್ತದೆ: ‘ಮಲಗುವ ಸಮಯದ ಯೋಗ’ವು, ನಿಮ್ಮ ಮನಸ್ಸು ಗ್ರಹಿಸುತ್ತಿರುವುದನ್ನು  ಜಾಗೃತಿಯೊಂದಿಗೆ ಅವಲೋಕಿಸುವಂತೆ  ಮಾಡುತ್ತದೆ.  ತತ್ ಪರಿಣಾಮವಾಗಿ ನಿಮ್ಮ ಆಂತರಿಕ ಶಾಂತಿ ಮತ್ತು ನೆಮ್ಮದಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಉತ್ತಮ ನಿದ್ರೆಗಾಗಿ, ಮಲಗುವ ಸಮಯದಲ್ಲಿ, ಮಾಡಬೇಕಾದ ಯೋಗದ ಭಂಗಿಗಳು

ಈಗ ನಾವು, ನಿಮಗೆ ನಿದ್ರೆಯಲ್ಲಿ ಹೆಚ್ಚಿನ ವಿಶ್ರಾಂತಿಯನ್ನು ತಂದುಕೊಟ್ಟು, ನಿಮ್ಮನ್ನು ಪುನರುಜ್ಜೀವನಗೊಳಿಸುವಂತಹ ನಿದ್ರೆಯನ್ನು ಪಡೆಯಲು, ಪರಿಣಾಮಕಾರಿಯಾಗಿ  ಸಹಕರಿಸುವ  ಕೆಲವು ಯೋಗದ ಭಂಗಿಗಳನ್ನು ಕಲಿಯೋಣ. ನಿಮ್ಮ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ, ಸ್ಪಂದಿಸುವುದನ್ನು ಮರೆಯದಿರಿ. ಹಾಗೆಯೇ ನಿಮ್ಮ ಶರೀರದ ಅನುಕೂಲತೆಗೆ ಅನುಗುಣವಾಗಿ ನಿಮ್ಮ ಭಂಗಿಗಳಿರಲಿ.

1. ಬಾಲಾಸನ

ಮಗುವಿನ ಭಂಗಿಯು ನಿಮ್ಮ ಬೆನ್ನು, ಸೊಂಟ ಮತ್ತು ತೊಡೆಗಳ ಮಾಂಸಖಂಡಗಳನ್ನು ಚೆನ್ನಾಗಿ ವಿಕಸನಗೊಳಿಸುತ್ತವೆ. ಇದು ವಿಶ್ರಾಂತಿಯನ್ನು ಪಡೆದುಕೊಳ್ಳುವ ಭಂಗಿಯಾಗಿದ್ದು, ನಿಮ್ಮಲ್ಲಿ ಶಾಂತತೆ ಮತ್ತು ಆಳವಾದ ವಿಶ್ರಾಂತಿಯ ಭಾವನೆಯನ್ನು ಉತ್ತೇಜಿಸುತ್ತದೆ. ಈ ಭಂಗಿಯನ್ನು ಅಭ್ಯಾಸ ಮಾಡಲು:

  • ನಿಮ್ಮ ಮೊಣಕಾಲುಗಳನ್ನು ನೆಲದ ಮೇಲಿರಿಸಿ, ಸೊಂಟವನ್ನು ಸ್ವಲ್ಪ ಅಗಲವಾಗುವಂತೆ ಮಾಡಿಕೊಂಡು, ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳುವ ಮೂಲಕ ಪ್ರಾರಂಭಿಸಿ.
  • ಹಿಮ್ಮಡಿಗಳ ಮೇಲೆ ಕುಳಿತುಕೊಂಡು ,ನಿಮ್ಮ ಮುಂಭಾಗವನ್ನು ಮುಂದಕ್ಕೆ ತಂದು ಕೆಳಗೆ ಬಗ್ಗಿಸಿ. ನಿಮ್ಮ ಹಣೆಯು ನೆಲಕ್ಕೆ ತಾಗಲಿ ಮತ್ತು ನಿಮ್ಮ ತೋಳುಗಳು  ಮುಂದಕ್ಕೆ ಚಾಚಿರಲಿ.
  • ನಿಮ್ಮ ಹಣೆಯನ್ನು ಚಾಪೆ ಅಥವಾ ದಿಂಬಿನ ಮೇಲೆಯೂ ಇರಿಸಬಹುದು ಮತ್ತು ನಿಮ್ಮ ಇಡೀ ದೇಹವು ವಿಶ್ರಾಂತಿಯನ್ನು ಪಡೆಯಲಿ.
  • ನಿಧಾನವಾಗಿ, ಆಳವಾಗಿ ಉಸಿರಾಡಿ ಮತ್ತು 1-2 ನಿಮಿಷಗಳ ಕಾಲ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳಿ.

2. ವಿಪರೀತ ಕರಣಿ

ಲೆಗ್ಸ್-ಅಪ್-ದಿ-ವಾಲ್,ಈ ಭಂಗಿಯು ನಿಮ್ಮ ಕಾಲುಗಳ ರಕ್ತಪರಿಚಲನೆಯನ್ನು ಸುಧಾರಿಸಲು, ದಣಿದ ಕಾಲುಗಳ ಆಯಾಸವನ್ನು ನಿವಾರಿಸಲು ಮತ್ತು ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.  ಈ ಭಂಗಿಯನ್ನು ಮಾಡುವಾಗ, ಕಾಲುಗಳನ್ನು ಮೇಲಕ್ಕೆತ್ತಿ ಶರೀರಕ್ಕೆ ವಿಲೋಮವಾದ  ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರಿಂದ, ನಿಮ್ಮ ಕಾಲುಗಳಿಗೆ ಪುನರುಜ್ಜೀವನವನ್ನು ತಂದುಕೊಟ್ಟಂತಾಗುವುದು. ಅದನ್ನು ಹೇಗೆ ಮಾಡುವುದು ಎಂಬುದು ಇಲ್ಲಿದೆ:

  • ಗೋಡೆಗೆ  ವಿರುದ್ಧವಾಗಿ , ಅದರ ಪಕ್ಕಕ್ಕೆ ಕುಳಿತುಕೊಂಡು, ನಿಮ್ಮ ಸೊಂಟವು ಗೋಡೆಯನ್ನು ಸ್ಪರ್ಶಿಸಿಸುವ ಹಾಗೆ ಇಟ್ಟುಕೊಳ್ಳಿ.
  • ಹಾಗೆಯೇ  ಬೆನ್ನಿನ ಮೇಲೆ ನಿಧಾನವಾಗಿ ಮಲಗಿ ಮತ್ತು ನಿಮ್ಮ ಕಾಲುಗಳನ್ನು ಗೋಡೆಗೆ ತಾಗುವಂತೆ ನೇರವಾಗಿ ಮೇಲಕ್ಕೆತ್ತಿ.
  • ನಿಮ್ಮ ಅಂಗೈಗಳು ಮೇಲ್ಮುಖವಾಗಿರುವಂತೆ, ತೋಳುಗಳನ್ನು ನಿಮ್ಮ ಶರೀರದ ಇಕ್ಕೆಲೆಗಳಲ್ಲಿರಿಸಿ, ವಿಶ್ರಮಿಸುವಂತೆ ಮಾಡಿ.
  • ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮ ದೇಹವನ್ನು ವಿಶ್ರಾಂತಿಯ ಸ್ಥಿತಿಗೆ ತನ್ನಿ ಮತ್ತು ನಿಮ್ಮ ಗಮನವನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಿ.
  • ಈ ಭಂಗಿಯಲ್ಲಿ 5-10 ನಿಮಿಷಗಳ ಕಾಲ ಇರುವುದರಿಂದ, ಹೆಚ್ಚು ಪ್ರಯೋಜನಗಳು ದೊರೆಯುತ್ತವೆ.

3. ಉತ್ತಾನಾಸನ

ಸ್ಟ್ಯಾಂಡಿಂಗ್ ಫಾರ್ವರ್ಡ್ ಬೆಂಡ್ ಎಂಬುದು ಅತ್ಯಂತ ಹಿತಕರವಾದ ಭಂಗಿಯಾಗಿದ್ದು, ಇದು ಬೆನ್ನಿನಲ್ಲಿರುವ ಸ್ನಾಯುಗಳ ಸೆಳೆತವನ್ನು ಮತ್ತು ಕುತ್ತಿಗೆಯ ಭಾಗದಲ್ಲಿರುವ ಉದ್ವೇಗವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಭಂಗಿಯನ್ನು ಚೆನ್ನಾಗಿ ನಿರ್ವಹಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ನಿಮ್ಮ ಪಾದಗಳನ್ನು ಸೊಂಟದ  ಅಗಲಕ್ಕೆ ,ನೆಲದ ಮೇಲಿರಿಸಿ,  ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಇಟ್ಟುಕೊಳ್ಳಿ .
  • ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುತ್ತಾ, ನಿಮ್ಮ ಸೊಂಟದಿಂದ ನಿಧಾನವಾಗಿ ಮುಂದಕ್ಕೆ ಬಗ್ಗಿ.ಅಗತ್ಯವಿದ್ದರೆ ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸ ಬಹುದು.
  • ನಿಮ್ಮ ತಲೆ ಮತ್ತು ಕುತ್ತಿಗೆಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ. ಶರೀರವನ್ನು ಮತ್ತು ಕೈಗಳನ್ನು ಜೋತು ಬಿಟ್ಟು, ಗುರುತ್ವಾಕರ್ಷಣೆಯು ನಿಮ್ಮ ಶರೀರದ ಸೆಳೆತ ಮತ್ತು ವಿಕಾಸವನ್ನು ಹೆಚ್ಚಿಸಲು ಸಹಕರಿಸುವಂತೆ , ನಿಮ್ಮ ಭಂಗಿ ಇರಲಿ.
  • ಸಾಧ್ಯವಾದರೆ, ನಿಮ್ಮ ಕೈಗಳನ್ನು ನೆಲದ ಮೇಲೆ ಇರಿಸಿ ಅಥವಾ ನಿಮ್ಮ ಮೊಣ ಕಾಲುಗಳನ್ನು ಹಿಡಿದುಕೊಳ್ಳಿ.
  • ಆಳವಾದ ಉಸಿರಾಟದೊಂದಿಗೆ 1-2 ನಿಮಿಷಗಳ ಕಾಲ ಇದೇ ಭಂಗಿಯಲ್ಲಿರಿ.
Yoga Hastapadasana

4. ಸುಪ್ತ ಮತ್ಸ್ಯೇಂದ್ರಾಸನ

ಸೂಪೈನ್ ಸ್ಪೈನಲ್ ಟ್ವಿಸ್ಟ್- ಇದು  ಸೌಮ್ಯವಾಗಿ ನಿಮ್ಮ ಶರೀರವನ್ನು ಒಂದು ಬದಿಗೆ ತಿರುಚುವ ಭಂಗಿಯಾಗಿದೆ.ಇದು ನಿಮ್ಮ ಬೆನ್ನುಮೂಳೆಯಲ್ಲಿರುವ ಒತ್ತಡ ಮತ್ತು ಉದ್ವೇಗಗಳನ್ನು ಬಿಡುಗಡೆ ಮಾಡಿ, ಮತ್ತು  ಬೆನ್ನಿನ ಕೆಳಭಾಗವು ಹೆಚ್ಚು ಸ್ಟ್ರೆಚ್ ಆಗುವಂತೆ ಮಾಡುತ್ತದೆ. ಅದನ್ನು ಮಾಡುವ ವಿಧಾನವು  ಇಲ್ಲಿದೆ:

  • ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ತೋಳುಗಳನ್ನು ಬದಿಗಳಿಗೆ ಚಾಚಿ, ಟಿ ಆಕಾರವನ್ನು ರಚಿಸಿ.
  • ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಎದೆಯ ಕಡೆಗೆ ತನ್ನಿ.
  • ನಿಧಾನವಾಗಿ ನಿಮ್ಮ ಮೊಣಕಾಲುಗಳನ್ನು ಬಲಭಾಗಕ್ಕೆ ಇಳಿಸಿ, ಅವುಗಳನ್ನು ನೆಲದ ಮೇಲೆ ಇರಿಸಿ, ವಿಶ್ರಾಂತಿ ಪಡೆಯಲು ಬಿಡಿ.
  • ನಿಮ್ಮ ತಲೆಯನ್ನು ಎಡಕ್ಕೆ ತಿರುಗಿಸಿ ಮತ್ತು ನಿಮ್ಮ ಎಡಗೈಯತ್ತ ದೃಷ್ಟಿ ಹರಿಸಿ.
  • ಆಳವಾದ ಉಸಿರನ್ನು ತೆಗೆದುಕೊಂಡು , 1-2 ನಿಮಿಷಗಳ ಕಾಲ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳಿ.
  • ವಿರುದ್ಧ ದಿಕ್ಕಿನಲ್ಲಿ, ಇದೇ ರೀತಿಯ ತಿರುಚುವಿಕೆಯನ್ನು(ಟ್ವಿಸ್ಟ್)ಪುನರಾವರ್ತಿಸಿ.

5. ಶವಾಸನ

ಶವಾಸನವು ಯೋಗಾಸನಗಳಲ್ಲಿ  ಅಂತಿಮವಾಗಿ ಮಾಡುವ ವಿಶ್ರಾಂತಿಯ ಭಂಗಿಯಾಗಿದೆ. ಇದು ನಿಮ್ಮ   ಅಭ್ಯಾಸದಿಂದ , ದೇಹಕ್ಕೆ ದೊರೆಯುವ ಎಲ್ಲಾ ರೀತಿಯ ಪ್ರಯೋಜನಗಳನ್ನು ಸಂಯೋಜಿಸಲು ಅನುವು ಮಾಡಿಕೊಡುತ್ತದೆ ಮತ್ತು ನಿದ್ರೆಗೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಶವಾಸನವನ್ನು ಅಭ್ಯಾಸ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ನಿಮ್ಮ ಕಾಲುಗಳನ್ನು ವಿಸ್ತರಿಸಿ ಆರಾಮವಾಗಿ ಇಟ್ಟುಬಿಡಿ.
  • ಅಂಗೈಗಳನ್ನು ಮೇಲಕ್ಕೆ ಮುಖ ಮಾಡಿ,ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ, ಆರಾಮವಾಗಿ ಇರಿಸಿ ಕೊಳ್ಳಿ.
  • ಕಣ್ಣುಗಳನ್ನು ಮುಚ್ಚಿಕೊಂಡು  ನಿಮ್ಮ ಕಾಲ್ಬೆರಳುಗಳಿಂದ ಪ್ರಾರಂಭಿಸಿ,  ತಲೆಯ ವರೆಗಿರುವ ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೆ ಗಮನಹರಿಸಿ, ಒಂದೊಂದನ್ನೇ ಸಡಿಲ ಬಿಟ್ಟು ವಿಶ್ರಮಿಸುತ್ತಾ ಹೋಗಿ.
  • ಯಾವುದೇ ವಿಧದ ಉದ್ವೇಗ ಅಥವಾ ಆಲೋಚನೆಗಳನ್ನು ಬಿಟ್ಟು, ಪ್ರಸ್ತುತ ಕ್ಷಣಕ್ಕೆ ಶರಣಾಗಿ.
  • 10-15 ನಿಮಿಷಗಳ ಕಾಲ ಶವಾಸನದಲ್ಲಿ ಇರಿ, ಆಳವಾಗಿ ಮತ್ತು ಸಲೀಸಾಗಿ ಉಸಿರಾಡಿ.

ತೀರ್ಮಾನ

ನೀವು ಶಾಂತವಾಗಿ ನಿದ್ರಿಸಲು, ಧ್ಯಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ನಿಮ್ಮ ರಾತ್ರಿಯ ದಿನಚರಿಯಲ್ಲಿ ಈ  ‘ಮಲಗುವ ಸಮಯದ ಯೋಗ’ವನ್ನು ಸೇರಿಸಿ ಕೊಳ್ಳುವುದರಿಂದ , ನಿತ್ಯವೂ ಉತ್ತಮ ಗುಣಮಟ್ಟದ ನಿದ್ರೆಯನ್ನು ಆನಂದಿಸಲು ನಿಮಗೆ ಸಾಧ್ಯವಾಗಿ, ನಿಮ್ಮ ಬದುಕಿನಲ್ಲಿಯೇ ಇದು ಒಂದು  ‘ಗೇಮ್ ಚೇಂಜರ್’ ಆಗಬಹುದು. ಈ ಲೇಖನದಲ್ಲಿ ನಾವು ಚರ್ಚಿಸಿದ ವಿಶ್ರಾಂತಿಯ ಭಂಗಿಗಳನ್ನು ಅಭ್ಯಾಸ ಮಾಡುವ ಮೂಲಕ, ನೀವು ಮಲಗಲಿಕ್ಕೆ ಹೋಗುವ ಮೊದಲೇ ಒಂದು ರೀತಿಯ ಪ್ರಶಾಂತತೆಯನ್ನು ಮತ್ತು ಪ್ರಸನ್ನತೆಯನ್ನು ಪಡೆದುಕೊಳ್ಳಬಹುದು. ಈ ಎಲ್ಲಾ ಯೋಗಾಸನದ ಭಂಗಿಗಳು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ , ವಿಶ್ರಾಂತಿಯನ್ನು ಪಡೆಯಲು ಮತ್ತು  ಪ್ರಶಾಂತವಾದ ನಿದ್ರೆಗೆ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ. ಆದುದರಿಂದ ನಿಮ್ಮ ಚಾಪೆಯನ್ನು ಬಿಡಿಸಿಕೊಂಡು, ‘ಮಲಗುವ ಸಮಯದ ಯೋಗ’ದ ಹಿತವಾದ ಶಕ್ತಿಯನ್ನು ಸ್ವೀಕರಿಸಲು ಸನ್ನದ್ಧರಾಗಿ ಮತ್ತು ಹಿಂದೆಂದಿಗಿಂತಲೂ ಚೆನ್ನಾಗಿ ನಿದ್ರಿಸಿ!

ನಿದ್ರಿಸುವುದಕ್ಕಾಗಿ ಇರುವ ಇನ್ನಷ್ಟು ಉತ್ತಮವಾದ ಮಾಹಿತಿಗಳನ್ನು ಮತ್ತು ದಿಕ್ಸೂಚಿಗಳನ್ನು ಅನ್ವೇಷಿಸಿ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಹೌದು, ನಿದ್ರಾಹೀನತೆಯಿಂದ ಬಳಲುವ  ವ್ಯಕ್ತಿಗಳಿಗೆ ‘ಮಲಗುವ ಸಮಯದ ಯೋಗ’ವು ಅತ್ಯಂತ ಪ್ರಯೋಜನಕಾರಿಯಾಗಿದೆ. ಇವುಗಳ ನಿಯಮಿತ ಅಭ್ಯಾಸವು ದೇಹ ಮತ್ತು ಮನಸ್ಸುಗಳಿಗೆ ವಿಶ್ರಾಂತಿಯನ್ನು ತಂದು ಕೊಡುವುದು. ಬಲು ಬೇಗನೆ ನಿದ್ರೆ ಬರುವಂತೆ ಮಾಡುವುದಷ್ಟೇ ಅಲ್ಲದೆ ರಾತ್ರಿಯಿಡೀ ಶಾಂತವಾಗಿ ನಿದ್ರಿಸಲು ಅನುವು ಮಾಡಿಕೊಡುತ್ತದೆ.
ಮಲಗುವ ಕನಿಷ್ಠ 1-2 ಗಂಟೆಗಳ ಮೊದಲು ಮಲಗುವ ಸಮಯದ ಯೋಗವನ್ನು ಅಭ್ಯಾಸವನ್ನು ಮಾಡಲು ಶಿಫಾರಸು ಮಾಡಲಾಗಿದೆ. ಇದು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ಸಂಪೂರ್ಣವಾದ ವಿಶ್ರಾಂತಿಯನ್ನು ಪಡೆಯಲು ಮತ್ತು ಮಲಗುವ ಮೊದಲು ಕೂಡ ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಅನುವು ಮಾಡಿಕೊಡುತ್ತದೆ.
ಖಂಡಿತವಾಗಿಯೂ ಮಾಡಬಹುದು! ಮಲಗುವ ಸಮಯದ ಯೋಗವು ಪ್ರಾರಂಭದ ಹಂತದಲ್ಲಿರುವವರಿಗೂ ಕೂಡ ಅತ್ಯಂತ ಸೂಕ್ತವಾಗಿದೆ. ಸುಲಭವಾಗಿ ಮಾಡುವ ಸೌಮ್ಯವಾದ ಭಂಗಿಗಳೊಂದಿಗೆ ಪ್ರಾರಂಭಿಸಿ, ಮತ್ತು ಅಭ್ಯಾಸದಲ್ಲಿ ಮುಂದುವರಿದು,  ಹೆಚ್ಚು ಆರಾಮವಾಗಿ ನಿಮಗೆ ಎಲ್ಲಾ ಭಂಗಿಗಳನ್ನು ಅಭ್ಯಾಸ ಮಾಡಲು ಸಾಧ್ಯವಾದಂತೆ, ಕ್ರಮೇಣ ನಿಮ್ಮ ಅಭ್ಯಾಸದ ಅವಧಿಯನ್ನು ಮತ್ತು ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ.
ಕಂಬಳಿಗಳು, ಉದ್ದನೆಯ ಅಥವಾ ಬೇರೆ ಬೇರೆ ವಿಧದ ದಿಂಬುಗಳಂತಹ ಸಾಧನಗಳನ್ನು ಬಳಸಿಕೊಂಡು, ನೀವು ಮಾಡುತ್ತಿರುವ ಯೋಗದ ಭಂಗಿಗಳು , ಹೆಚ್ಚು  ಆರಾಮದಾಯಕವಾಗಿ ಇರುವಂತೆ ಮಾಡಿಕೊಳ್ಳಬಹುದು. ಯೋಗದ ಭಂಗಿಗಳ ಮೂಲಕ ನಿದ್ದೆಗೆ ಜಾರಲು ಇವುಗಳು ಸಹಕಾರಿಯಾಗುವ ಕಾರಣ, ಅವುಗಳನ್ನು ಬಳಸಿಕೊಳ್ಳಲು ಹಿಂಜರಿಯದಿರಿ.
ಕೆಲವು ಭಂಗಿಗಳನ್ನು ಹಾಸಿಗೆಯಲ್ಲಿ ಮಾಡಬಹುದಾದರೂ, ಸಾಮಾನ್ಯವಾಗಿ ಯೋಗಾಸನಗಳನ್ನು ಚಾಪೆ ಅಥವಾ ಮೃದುವಾದ ಮೇಲ್ಮೈಯಿರುವ ಚಾದರಗಳ (ಮ್ಯಾಟ್) ಮೇಲೆ, ಅಭ್ಯಾಸ ಮಾಡುವುದು ಉತ್ತಮ ಎಂಬುದಾಗಿ ಶಿಫಾರಸು ಮಾಡಲಾಗುತ್ತದೆ. ಇದು ವಿಶ್ರಾಂತಿಗಾಗಿ ಮೀಸಲಾಗಿರುವ ಸ್ಥಳವನ್ನು ಕಾದಿರಿಸಲು ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ನಿದ್ರೆಯ ವಾತಾವರಣವನ್ನು ನಿಮ್ಮ ಅಭ್ಯಾಸದ ಸ್ಥಳದಿಂದ ಬೇರ್ಪಡಿಸುತ್ತದೆ.
‘ಮಲಗುವ ಸಮಯದ ಯೋಗ’ದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ನಿಯಮಿತವಾಗಿ  ಅಭ್ಯಾಸವನ್ನು ಮಾಡಿದರೆ ಮಾತ್ರ,  ನಿದ್ರೆಯ ಗುಣಮಟ್ಟದಲ್ಲಿ ಪ್ರಗತಿ ಉಂಟಾಗುತ್ತದೆ ,  ಒತ್ತಡವು ಕಡಿಮೆಯಾಗುತ್ತದೆ ಮತ್ತು ಹೆಚ್ಚಿನ ವಿಶ್ರಾಂತಿಯು ದೊರೆಯುತ್ತದೆ ಹಾಗೂ  ಕೆಲವೇ ವಾರಗಳಲ್ಲಿ ನೀವು ಪ್ರಯೋಜನಗಳನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

    Hold On!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity

    *
    *
    *
    *