ನವರಾತ್ರಿಯು ವರ್ಷದ ಅತಿ ಸುಂದರ, ವರ್ಣಮಯ ಸಮಯವಾಗಿದ್ದು ನಮ್ಮ ಸಂಪ್ರದಾಯದ ಪ್ರಕಾರ ಹಾಡಿ ನಲಿದು ಪ್ರಕೃತಿ ನೀಡುವ ಸಮೃದ್ಧಿಯನ್ನು ಅನುಭಾವಿಸುವ ಸಮಯವೂ ಆಗಿದೆ. ನವರಾತ್ರಿ ಒಂದು  ಪವಿತ್ರವಾದ ಸಮಯ, ಅದರಲ್ಲೂ ವಿಶೇಷವಾಗಿ ಆಧ್ಯಾತ್ಮಿಕ ಜೀವನದ ಹಾದಿ ಹಿಡಿದವರಿಗೆ. ಇಂದ್ರಿಯಸುಖಗಳಿಂದ ಆವೃತ್ತವಾಗಿರುವ ಪ್ರಪಂಚದಿಂದ ಕೆಲ ಕಾಲ ದೂರ ಬಂದು, ನಮ್ಮ ಆಂತರಿಕ ಜಗತ್ತಿನ ಬಗ್ಗೆ ಅವಲೋಕನ ಮಾಡಿ, ಆ ಮೂಲಕ ನಮ್ಮ ಜೀವನದಲ್ಲಿ ಹೆಚ್ಚಿನ ಆನಂದ, ಸಂತೋಷ ಮತ್ತು ಉತ್ಸಾಹವನ್ನು ನಮ್ಮದಾಗಿಸಿಕೊಳ್ಳಲು ಬೇಕಾದ ಹೊಸ ಯುಕ್ತಿಗಳನ್ನು  ಅರಿಯಲು ತೊಡಗಿಸಿಕೊಳ್ಳುವ ಸಮಯ.

ಇಂತಹ ಬಾಹ್ಯಜಗತ್ತನ್ನು ಮರೆತು ಅಂತರಮುಖಿಯಾಗುವ ನಮ್ಮ ಪ್ರಯತ್ನವನ್ನು ಸರಳಗೊಳಿಸಲು ಒಂದೇ ಮಾರ್ಗ; ಅದೆಂದರೆ ನಮ್ಮಲ್ಲಿನ ಸತ್ವದ ಸಾರವನ್ನು  ಹೆಚ್ಚು ಮಾಡುವುದು. ಉಪವಾಸ ಮಾಡುವುದರಿಂದ ನಮ್ಮಲ್ಲಿನ ಸತ್ವದ ಮಟ್ಟವು ಸುಲಭವಾಗಿ ಹೆಚ್ಚಿಸಬಹುದು.

"ಸತ್ವ" ಎಂದರೆ  ಏನು?

ಈ ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವೂ ಪಂಚಭೂತಗಳಿಂದ ಮಾಡಲ್ಪಟ್ಟಿದೆ ಮತ್ತು ಈ ಪಂಚಭೂತಗಳು  ಮೂರು ಗುಣಗಳನ್ನು ಹೊಂದಿವೆ. ಅವೆಂದರೆ:

ಸತ್ವ     (ನಮ್ಮ್ಮಲ್ಲಿ ಸಕಾರಾತ್ಮಕತೆಯನ್ನು ಹೊರತರುವ ಗುಣ)
ರಜಸ್       (ನಮ್ಮನ್ನು ಕಾರ್ಯೋನ್ಮುಖರಾಗಿಸುವ ಗುಣ)
ತಮಸ್      (ನಮ್ಮಲ್ಲಿ ಜಡತೆಯನ್ನು ಮೂಡಿಸುವ ಗುಣ)

ಧ್ಯಾನ, ಮಂತ್ರ ಪಠಣ, ಉಪವಾಸ, ಮೌನ ಮುಂತಾದ ಎಲ್ಲಾ ಆಧ್ಯಾತ್ಮಿಕ ಸಾಧನೆಗಳು ನಮ್ಮಲ್ಲಿನ ಸತ್ವ ಗುಣವನ್ನು ಹೆಚ್ಚಿಸುತ್ತವೆ. ಸತ್ವ ಹೆಚ್ಚಿದಾಗ ಜ್ಞಾನ, ಜಾಗೃತಿ, ಅರಿವು ಮತ್ತು ಸಂತೋಷವನ್ನು ನಾವು ನಮ್ಮ ಜೀವನದಲ್ಲಿ ಕಾಣುತ್ತೇವೆ,  ಏಕೆಂದರೆ ಈ ಗುಣಗಳು ಸತ್ವದ ಒಟ್ಟಿಗೇ ಸ್ವಾಭಾವಿಕವಾಗಿ ಬರುತ್ತವೆ. ಅದಕ್ಕಾಗಿಯೇ ಉಪವಾಸ, ಮಂತ್ರ ಪಠಣ, ಧ್ಯಾನ, ಮುಂತಾದ ಸಾಧನೆಗಳನ್ನು ಅನುಸರಿಸಲು ಸ್ವಲ್ಪ ಸಮಯವನ್ನು ಮೀಸಲಿಡುವುದು ತುಂಬಾ ಉಪಯುಕ್ತವಾಗಿದೆ. ಇದು ನಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಿ ಸುಖ-ಸಂತೋಷವನ್ನು ತರುತ್ತದೆ. ಉಪವಾಸವು ದೇಹದಲ್ಲಿನ ಸತ್ವ ಮಟ್ಟವನ್ನು ಹೆಚ್ಚಿಸಿ ದೇಹವನ್ನು ನಿರ್ಮಲಗೊಳಿಸುತ್ತದೆ. ಅನೇಕ ಬಾರಿ ಮಿತಿಮೀರಿ ಆಹಾರಸೇವನೆ ಮಾಡುವುದರಿಂದ ಸ್ವಾಸ್ಥ್ಯವೂ ಕುಂಠಿತಗೊಂಡಿರುತ್ತದೆ.  ಉಪವಾಸ ಮಾಡುವುದರ ಜೊತೆಗೆ ಸರಿಯಾದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಸಹ ದೇಹದಲ್ಲಿ ಸತ್ವ ಹೆಚ್ಚುತ್ತದೆ.

ಸರಿಯಾದ ಆಹಾರವನ್ನು ಸೇವಿಸುವುದು ಎಂದರೆ ಸುಲಭವಾಗಿ ಜೀರ್ಣವಾಗಲು ಅವಶ್ಯಕತೆಯಿದ್ದಷ್ಟು ಮಾತ್ರ ತಿನ್ನುವುದು ಎಂದರ್ಥ. ಇದರಿಂದ ನೀವು  ರಾತ್ರಿ ಮಲಗಲು ಹೋದಾಗ ಅಥವಾ ಪ್ರಾತಃಕಾಲ ಎದ್ದಾಗ ಅಥವಾ ಧ್ಯಾನಕ್ಕೆ ಕುಳಿತಾಗ ಮೈ ಭಾರವೆನಿಸುವುದಿಲ್ಲ. ಮಿತ ಪ್ರಮಾಣದ ಆಗತಾನೆ ತಯಾರು ಮಾಡಿದ, ಅತಿ ಕಡಿಮೆ ಮಸಾಲೆಯಿಂದ ಕೂಡಿದ ಆಹಾರವೇ ಸಾತ್ವಿಕ ಆಹಾರವಾಗಿದೆ.

ಉಪವಾಸ ಮಾಡುವುದರಿಂದಾಗುವ ಪ್ರಯೋಜನಗಳು:

ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಪ್ರಕಾರ ಬಡಬಾಗ್ನಿ  ಅಥವಾ ಹಸಿವನ್ನು ಪುನಃಚೇತನಗೊಳ್ಳಿಸಲು ಉಪವಾಸದ ಮಾರ್ಗ ಅತಿ ಪರಿಣಾಮಕಾರಿ. ಸಾಮಾನ್ಯವಾಗಿ ಹೆಚ್ಚಿನ ಮಂದಿ ಹಸಿವಾಗುವವರೆಗೆ ಕಾಯುವುದೇ ಇಲ್ಲ! ತಿಂದ  ಆಹಾರವನ್ನು ಅರಗಿಸಿಕೊಳ್ಳಲು ದೇಹ ತಯ್ಯಾರಿದೆ ಎಂದು ನಮಗೆ 'ಹಸಿವು' ಸೂಚನೆ ಕೊಡುತ್ತದೆ. ಹಸಿವಾಗುವ ಮುನ್ನವೇ ಆಹಾರ ತೆಗೆದುಕೊಳ್ಳುವುದರಿಂದ ಜೀರ್ಣಾಂಗಗಳು ದುರ್ಬಲಗೊಳ್ಳುತ್ತವೆ, ಇದರಿಂದ ದೇಹವು ಒತ್ತಡಕ್ಕೆ ಒಳಗಾಗಿ ರೋಗನಿರೋಧಕ ಶಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತದೆ.  ಉಪವಾಸವು ನಮ್ಮ ಜೀರ್ಣಶಕ್ತಿಗೆ ಬೇಕಾದ ಅಗ್ನಿಯನ್ನು ಹೆಚ್ಚಿಸುವುದು. ಅತಿಯಾಗಿ ತಿನ್ನುವುದರಿಂದ ಬರುವ ಆಲಸ್ಯವನ್ನು ದೂರಮಾಡಿ ದೇಹದ ಜಡತ್ವವನ್ನು ದೂರಮಾಡುವಲ್ಲಿ ಬಹಳ ಸಹಾಯಕಾರಿ. ಹಾಗಾಗಿಯೇ ಉಪವಾಸ ಮಾಡಿದ ನಂತರ ನೀವು ಜೀವನದಲ್ಲಿ ಹೊಸತನ ಮತ್ತು ಮೈಮನ ಹಗುರಾದ ಹಾಗೆ ಅನುಭವ ಪಡೆಯುತ್ತೇರಿ. ಇದಕ್ಕೆ ಕಾರಣ ನಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಹೊಸ ಚೈತನ್ಯದಿಂದ ತುಂಬುವುದು. ಉಪವಾಸವು ನಮ್ಮ ದೇಹವನ್ನು ಶುದ್ಧೀಕರಿಸುವ ಉತ್ತಮ ಚಿಕಿತ್ಸೆಯಾಗಿದೆ.

ಉಪವಾಸದಿಂದ ದೈಹಿಕ ಮಟ್ಟದಲ್ಲಿ ಮಾತ್ರವಲ್ಲದೆ ಮನಸ್ಸು ಮತ್ತು ಭಾವನೆಗಳ ಮೇಲೆ ಕೂಡ ಧನಾತ್ಮಕ ಪರಿಣಾಮ ಕಾಣುತ್ತದೆ. ದೇಹವು ಮನಸ್ಸಿನೊಂದಿಗೂ ಮತ್ತು ಮನಸ್ಸು ಭಾವನೆಗಳೊಂದಿಗೂ ನಿಕಟ ಸಂಪರ್ಕ ಹೊಂದಿವೆ. ದೇಹವು ಉಪವಾಸದ ಮೂಲಕ ಪರಿಶುದ್ಧವಾದಾಗ, ಮನಸ್ಸು ಸಹ ನಿರ್ಮಲಗೊಂಡು ನೆಮ್ಮದಿ ಹೊಂದುವುದು. ಮನಃಪಟಲದಲ್ಲಿ  ಸ್ಪಷ್ಟತೆಯು ಮೂಡಿ ಮನಃಸ್ಥಿತಿ ಶಾಂತಗೊಳ್ಳುವುದು.