ನವರಾತ್ರಿ ಆಚರಣೆಯ ವೈಜ್ಞಾನಿಕ ಹಿನ್ನೆಲೆ
ಆರ್ಟ್ ಒಫ್ ಲಿವಿಂಗ್ ನ ಅಂತರ ರಾಷ್ಟ್ರೀಯ ಕೇಂದ್ರವು ಪ್ರತಿ ವರ್ಷ ಆಚರಿಸುವ ಅತಿ ದೊಡ್ಡ ಉತ್ಸವವೆಂದರೆ ನವರಾತ್ರಿ. ಈ ಉತ್ಸವದ ಆಚರಣೆಯು ಪ್ರತಿ ವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಪುರಾತನ ವೈದಿಕ ಪೂಜಾವಿಧಿಗಳು ಸಂಪ್ರದಾಯಬದ್ಧವಾಗಿ ಒಂಬತ್ತು ದಿನಗಳ ಕಾಲ ನಿಖರವಾಗಿ ನಡೆಸಲ್ಪಡುತ್ತವೆ. ಇವುಗಳ ಹಿಂದೆ ಸಾಕಷ್ಟು ತಯಾರಿಯ ಅವಶ್ಯಕತೆ ಇದೆ.
ಆರ್ಟ್ ಒಫ್ ಲಿವಿಂಗ್ ನ ಅಂತರ ರಾಷ್ಟ್ರೀಯ ಕೇಂದ್ರದಲ್ಲಿರುವ ವೇದ ಆಗಮ ಸಂಸ್ಕೃತ ಮಹಾಪಾಠಶಾಲೆಯ ಪ್ರಾಂಶುಪಾಲರಾಗಿರುವ ಶ್ರೀ ಏ. ಎಸ್. ಸುಂದರಮೂರ್ತಿ ಶಿವಂರವರ ಪ್ರಧಾನ ಪೌರೋಹಿತ್ಯದಲ್ಲಿ ನವರಾತ್ರಿಯ ಕಾರ್ಯಕ್ರಮಗಳು ನಡೆಯುವುದರಿಂದ ಅವರ ಮೇಲೆ ಗುರುತರವಾದ ಜವಾಬ್ದಾರಿಯಿದೆ.
ಪ್ರಪಂಚದೆಲ್ಲೆಡೆ ೧೦೦೫ ಕುಂಬಾಭಿಷೇಕ ಹಾಗೂ ೨೧೦೦ ಚಂಡಿ ಹೋಮಗಳನ್ನು ನಡೆಸಿರುವ ಘನ ಪುರೋಹಿತ ಕುಟುಂಬಕ್ಕೆ ಶಿವಂರವರು ಸೇರಿದ್ದಾರೆ. ಅಲ್ಲದೆ, ೧೯೯೪ರಿಂದ ಆರ್ಟ್ ಒಫ್ ಲಿವಿಂಗ್ ನ ಅಂತರ ರಾಷ್ಟೀಯ ಕೇಂದ್ರದಲ್ಲಿ ನವರಾತ್ರಿ ಯಜ್ಞಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಇವರು ನವರಾತ್ರಿಯ ಕುರಿತಂತೆ ಹಲವು ಗಹನವಾದ ಪ್ರಶ್ನೆಗಳಿಗೆ ಈ ರೀತಿ ಉತ್ತರಿಸುತ್ತಾರೆ:
ನವರಾತ್ರಿ ಆಚರಣೆಯಲ್ಲಿ ಎರಡು ವಿಧಗಳು. ಅವು ಯಾವುವೆಂದರೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುವ, ಏಪ್ರಿಲ್ ನಲ್ಲಿ ಬರುವ ಚೈತ್ರಮಾಸದ "ವಸಂತ" ನವರಾತ್ರಿ ಹಾಗೂ ದಕ್ಷಿಣ ಭಾರತದಲ್ಲಿ ಆಚರಿಸಲ್ಪಡುವ ಸೆಪ್ಟೆಂಬರ - ಅಕ್ಟೋಬರದಲ್ಲಿ ಬರುವ ಅಶ್ವಯುಜ ಮಾಸದ "ಶರತ್" ನವರಾತ್ರಿ.
ಭೂಮಂಡಲದ ಸಮಸ್ತ ಜೀವರಾಶಿಯ ಉನ್ನತಿ, ಶಾಂತಿ, ಸಮೃದ್ಧಿಗಾಗಿ ಪರಮಪೂಜ್ಯ ಗುರುದೇವ ಶ್ರೀ ಶ್ರೀ ರವಿಶಂಕರರವರ ದಿವ್ಯ ಆಶೀರ್ವಾದದೊಂದಿಗೆ ಆರ್ಟ್ ಒಫ್ ಲಿವಿಂಗ್ ನಲ್ಲಿ ಶರನ್ನವರಾತ್ರಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಆಚರಣೆಯ ಮುಖ್ಯ ಉದ್ದೇಶ ಎಲ್ಲರಿಗೂ ದೈವಾನುಗ್ರಹ, ಜ್ಞಾನ ಹಾಗೂ ಈ ಕೆಳಕಂಡ ಮೂರು ವಿಧದ ಶಕ್ತಿಗಳು ದೊರೆಯಲೆಂದು ಪ್ರಾರ್ಥಿಸುವುದು:
ಇಚ್ಚ್ಛಾ ಶಕ್ತಿ ( ಮನಃಸ್ಥೈರ್ಯ)
ಕ್ರಿಯಾ ಶಕ್ತಿ (ಸರಿಯಾದ ಕೆಲಸ ಮಾಡಲು)
ಜ್ಞಾನ ಶಕ್ತಿ (ಸರಿಯಾದ ಕರ್ಮ ಯಾವುದು ಎನ್ನುವುದರ ಬಗ್ಗೆ ಅರಿವಳಿಕೆ ಇರಲು)
ಶೈವಾಗಮ ಮತ್ತು ಶಾಕ್ತತಂತ್ರಗಳಲ್ಲಿ ಅಲ್ಲದೆ ರುದ್ರ ಯಾಮಲಂ, ಶಾರದಾ ತಿಲಕಂ, ಪರಶುರಾಮ ಕಲ್ಪಸೂತ್ರಂ, ಶ್ರೀವಿದ್ಯಾ ತಂತ್ರಂ, ಮಂತ್ರ ಮಹಾರ್ಣವ ಮತ್ತು ದೇವಿ ಮಹಾತ್ಮ್ಯಮ್ ಮುಂತಾದ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಇನಿತೂ ತಪ್ಪದೆ ನವರಾತ್ರಿಯ ಪೂಜಾವಿಧಿಗಳ ಆಚರಣೆ ಮಾಡಲಾಗುತ್ತದೆ. ಈ ಗ್ರಂಥಗಳಲ್ಲಿ ಎಲ್ಲಾ ಪೂಜಾ ವಿಧಿಗಳ ವಿವರಗಳು ಹಾಗೂ ಪ್ರತಿ ಪೂಜೆಗೆ ನಿರ್ದಿಷ್ಟವಾದ ಮುಹೂರ್ತವನ್ನೂ ಸೂಚಿಸಲಾಗಿವೆ. ಎಲ್ಲಾ ಸೂಚನೆಗಳನ್ನು ತಜ್ಞ ಪುರೋಹಿತ ವೃಂದವು ಅಕ್ಷರಶಃ ಪಾಲಿಸುತ್ತದೆ. ಗುರುಕುಲದ ವಿದ್ಯಾರ್ಥಿಗಳಿಗೆ ಹಿರಿಯ ಪುರೋಹಿತ ವೃಂದಕ್ಕೆ ಸಕ್ಷಮವಾಗಿ ಸಹಕರಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಹೀಗಾಗಿ ಎಲ್ಲಾ ಪೂಜಾಕಾರ್ಯಗಳು ನಿಖರ ಸಮಯಕ್ಕೆ ಪೂರ್ಣಗೊಳ್ಳುತ್ತವೆ.
ಈ ಕೆಳಕಂಡ ಸಿದ್ಧತೆಗಳನ್ನು ಪೂಜೆಯ ಪ್ರಾರಂಭಕ್ಕೆ ಮುನ್ನ ಮಾಡಿಕೊಳ್ಳುತ್ತೇವೆ:
ಮೊತ್ತ ಮೊದಲನೆಯದು ದ್ರವ್ಯ ಸಂಗ್ರಹಣಾ (ಬೇಕಾದ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವುದು) ಮತ್ತು ದ್ರವ್ಯಪ್ರಮಾಣ (ಎಷ್ಟು ಸಾಮಗ್ರಿ ಬೇಕಾಗುವುದೆಂಬ ಪೂರ್ವಾಲೋಚನೆ ಮಾಡಿ ಸಂಬಂಧಿಸಿದ ಅನುಕೂಲ ಮಾಡಿಕೊಳ್ಳುವುದು ಏಕೆಂದರೆ ಕೆಲವು ಪೂಜಾವಸ್ತುಗಳನ್ನು ಹೊರರಾಜ್ಯಗಳಾದ ಕೇರಳ, ಹಿಮಾಚಲ ಪ್ರದೇಶ, ಜಮ್ಮುವಿನಿಂದ ವ್ಯವಸ್ಥೆ ಮಾಡಬೇಕಾಗುತ್ತದೆ). ಎರಡನೆಯ ಪ್ರಮುಖ ಸಿದ್ಧತೆಯೆಂದರೆ ಯಜ್ಞಶಾಲೆಯನ್ನು "ಯಜ್ಞಶಾಲಾ ಲಕ್ಷಣ" ಕ್ಕೆ ಅನುಗುಣವಾಗಿ ಒಪ್ಪಮಾಡುವುದು. ಇದಕ್ಕೆ "ಯಜ್ಞಶಾಲಾ ನಿರ್ಮಾಣ" ಮತ್ತು "ಮಂಡಲ ಲೇಪನ" (ವೈಜ್ಞಾನಿಕವಾದ ಮಂಡಲಗಳ ರಚನೆ ಮಾಡುವುದು) ಎನ್ನುತ್ತೇವೆ; ಉದಾಹರಣೆಗೆ ಗಣೇಶ ಮಂಡಲ, ವಾಸ್ತು ಮಂಡಲ, ನವಗ್ರಹ ಮಂಡಲ, ಸುದರ್ಶನ ಮಂಡಲ.
ಪಂಚಮಹಾಭೂತಗಳ ಆರಾಧನೆ ನವರಾತ್ರಿಯ ವಿಶೇಷ. ಜಲತತ್ವವನ್ನು ಕಲಶದಲ್ಲಿ, ಅಗ್ನಿತತ್ವವನ್ನು ಹೋಮಕುಂಡದಲ್ಲಿನ ಮರದ ಕಾಷ್ಠದಲ್ಲೂ, ವಾಯು ತತ್ವವನ್ನು ಮಂತ್ರೋಚ್ಚಾರದಲ್ಲೂ, ಪೃಥ್ವಿತತ್ವವನ್ನು ಮಂಡಲಗಳಲ್ಲೂ ಕಂಡು ಪೂಜಿಸುತ್ತೇವೆ, ಇನ್ನು ಇವೆಲ್ಲದರ ಸಾಕ್ಷಿಯೇ ಆಕಾಶತತ್ವ!
ಚಂಡಿಯಜ್ಞದ ಮುಖ್ಯಕಲಶದ ಪ್ರತಿಷ್ಠಾಪನೆಗೆ "ಪಂಚಾಸನ ವೇದಿಕೆ" ಯ ನಿರ್ಮಾಣ ಮಾಡುತ್ತೇವೆ. ವೇದಿಕೆಯ ತಳದಲ್ಲಿ ಕೂರ್ಮಾಸನ (ಧೃಢತೆಯ ಸಂಕೇತವಾದ ಆಮೆ) ಇದ್ದು ಅದರ ಮೇಲೆ ಅನಂತಾಸನ (ಜಾಗರೂಕತೆಯ ಸಂಕೇತ), ಅದರ ಮೇಲೆ ಸಿಂಹಾಸನ (ವೀರ್ಯ ಮತ್ತು ಬಲದ ಸಂಕೇತ), ಇದರ ಮೇಲೆ ಯೋಗಾಸನ ( ಅಷ್ಟಾಂಗ ಯೋಗದ ಚಿಹ್ನೆಯಾಗಿ ಎಂಟು ಸಿದ್ಧರ ರಚನೆ), ಇದರ ಮೇಲೆ ಪದ್ಮಾಸನ (ಜ್ಞಾನೋದಯ ಮತ್ತು ಪ್ರಜ್ಞೆಯ ಸಂಪೂರ್ಣ ವಿಕಾಸದ ಪ್ರತಿನಿಧಿ ಕಮಲ), ಇವೆಲ್ಲದರ ಮೇಲೆ ಕಲಶವನ್ನು ಸ್ಥಾಪಿಸಿ ಶಕ್ತಿಸ್ವರೂಪಿಣಿ ಜಗನ್ಮಾತೆಯ ಆವಾಹನೆ ಮಾಡಲಾಗುವುದು. ಕಲಶಗಳನ್ನು ದಾರಗಳಿಂದ ಅಲಂಕಾರಯುಕ್ತವಾಗಿ ಶೃಂಗರಿಸಿ ಪವಿತ್ರ ನದಿಗಳ ಜಲ ಹಾಗೂ ಔಷಧಿಯುಕ್ತ ಮೂಲಿಕೆಗಳಿಂದ ತುಂಬಿಸಲಾಗುವುದು. ನಂತರ ಮಾವಿನ ಎಲೆಗಳನ್ನಿಟ್ಟು ತೆಂಗಿನಕಾಯಿಯನ್ನುಎಲೆಯ ಮೇಲೆ ಇಡಲಾಗುವುದು. ಈ ಕಲಶವನ್ನು ತೇಯ್ದ ಗಂಧ, ಕುಂಕುಮ, ದರ್ಭೆ ಮತ್ತು ಸುವಾಸನಾಯುಕ್ತ ಪುಷ್ಪಗಳಿಂದ ಅಲಂಕರಿಸಲಾಗುವುದು.
ಯಜ್ಞದ ಪ್ರಾರಂಭದ ಮೊದಲು ವಾಸ್ತುಪೂಜೆಯ ಮೂಲಕ ಭೂಮಿಯನ್ನು ಆರಾಧಿಸಿ ಅಂಕುರಾರ್ಪಣೆ ಮಾಡಲಾಗುತ್ತದೆ. ನವಧಾನ್ಯಗಳನ್ನು ಯಜ್ಞಶಾಲೆಯ ನಾಲ್ಕು ದಿಕ್ಕುಗಳಲ್ಲಿ ಬಿತ್ತಲಾಗುತ್ತದೆ. ಆಹಾರ ಧಾನ್ಯಗಳು ಮತ್ತು ಧಾನ್ಯ ಬೆಳೆಯುವ ರೈತರನ್ನು ಗೌರವಿಸುವುದು ಇದರ ಉದ್ದೇಶ. ಭೂಮಿಯ ಫಲವತ್ತತೆ ಹೆಚ್ಚಿಸುವ ಸಲುವಾಗಿ ಈ ಪ್ರಾರ್ಥನೆಗಳನ್ನು ಮಾಡಲಾಗುತ್ತವೆ.
ಹೋಮ ಕುಂಡದ ರಚನೆ :
ಯಜ್ಞಶಾಲೆಯ ಪೂರ್ವ ದಿಕ್ಕಿನಲ್ಲಿ ಹೋಮ ಕುಂಡವನ್ನು ನಿರ್ಮಿಸಲಾಗುತ್ತದೆ. ಚಂಡಿ ಯಜ್ಞವನ್ನು ನಡೆಸಲು ನಮ್ಮ ಆಶ್ರಮದಲ್ಲಿ ನಿರ್ಮಿಸುವ ಹೋಮ ಕುಂಡದ ಮಾದರಿ 'ಪದ್ಮ ಕುಂಡ '. ಹೋಮಕುಂಡದ ಇನ್ನೊಂದು ಮಾದರಿಯೆಂದರೆ "ಯೋನಿ ಕುಂಡ". ಹೋಮದಲ್ಲಿ ಆಹುತಿ ನೀಡುವ ದ್ರವ್ಯದ ಪರಿಮಾಣಕ್ಕೆ ಅನುಸಾರವಾಗಿ ಹೋಮ ಕುಂಡದ ಮಾದರಿಯ ಆಯ್ಕೆ ಮಾಡಲಾಗುವುದು. ಧರ್ಮ, ಜ್ಞಾನ, ವೈರಾಗ್ಯ ಮತ್ತು ಈಶ್ವರನ ಸಂಕೇತವಾಗಿ "ಚತುಸ್ಥoಭ"ಗಳನ್ನು ಒಳಗೂ, ಮಾನವ ಜೀವನದ ೧೬ ಮಜಲುಗಳ ಸಂಕೇತವಾಗಿ 'ಶೋಡಶಸ್ಥoಭ" ಗಳನ್ನು ಹೊರಗೂ ಸ್ಥಾಪಿಸಿ, ಪೂಜಿಸಲಾಗುವುದು.
ಅಷ್ಟ ಧ್ವಜ ಅಥವಾ ಎಂಟು ಧ್ವಜಗಳನ್ನು ಯಜ್ಞಶಾಲೆಯ ಹೊರ ಭಾಗದಲ್ಲಿ ಸ್ಥಾಪಿಸಿ ಅಷ್ಟ ಪತಾಕೆಗಳನ್ನು ಅವುಗಳೊಂದಿಗೆ ಸ್ಥಾಪಿಸಲಾಗುವುದು. ಈ ಪತಾಕೆಗಳ ಮೇಲೆ ಆನೆಗಳ ಚಿತ್ರವಿರುತ್ತವೆ.
ಅಷ್ಟಮಂಗಲ ಅಥವಾ ಎಂಟು ಸಲಕರಣೆಗಳು: - ದರ್ಪಣಂ (ಕನ್ನಡಿ), ಪೂರ್ಣಕುಂಭ (ಮಡಕೆ), ವೃಷಭ (ಎತ್ತಿನ ರೇಖಾಚಿತ್ರ), ಎರಡು ಚಾಮರಗಳು (ಕೂದಲಿನಿಂದ ಮಾಡಿದ ಬೀಸಣಿಕೆ ), ಶ್ರೀವತ್ಸಮ್ (ರೇಖಾಚಿತ್ರ), ಸ್ವಸ್ತಿಕಮ್ (ರೇಖಾಚಿತ್ರ), ಶಂಖ ಮತ್ತು ದೀಪವನ್ನು ಯಜ್ಞಶಾಲೆಯ ಒಳ ಭಾಗದಲ್ಲಿ ಸ್ಥಾಪಿಸಲಾಗುವುದು.
ಯಜ್ಞಶಾಲೆಯ ಒಳಭಾಗವನ್ನು ರಂಗೋಲಿ, ಎಲೆಗಳು, ಬಾಳೆ ಕಂದುಗಳು, ಕಬ್ಬು ಮತ್ತು ಹೊತ್ತಿಸಿದ ದೀಪಗಳಿಂದ ಕೂಡ ಅಲಂಕರಿಸಲಾಗುತ್ತದೆ.
ಯಜ್ಞಶಾಲೆಯ ಪರಿಧಿಯಲ್ಲಿ ಆಹಾರ ಧಾನ್ಯಗಳನ್ನು ಬಿತ್ತಿ ಮೊಳಕೆ ಬಂದ ಅಂಕುರಗಳಿಂದ ಅಲಂಕರಿಸಲಾಗುತ್ತದೆ. ಈ ಅಂಕುರಗಳಿಗೆ ಮಂತ್ರಗಳ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ.
ಔಷಧಿ ಮಂತ್ರಗಳ ಮೂಲಕ ಧಾನ್ಯಗಳಿಂದ ಚೆನ್ನಾಗಿ ಮೊಳಕೆ ಮೂಡಲು ಮತ್ತು ಚಂಡಿ ಯಜ್ಞವು ನಿರ್ವಿಘ್ನವಾಗಿ ಮುಂದುವರೆಯಲು ಕೋರಿ ಪ್ರಾರ್ಥಿಸಲಾಗುವುದು.
ಶಕ್ತಿಸ್ವರೂಪಿಣಿಯ ಆರಾಧನೆಯೇ ನವರಾತ್ರಿ. ಶರದ್ ಋತುವಿನಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ಆಗಮಗಳು ಹೇಳುವಂತೆ ಶಕ್ತಿಯನ್ನು 3 ವಿಭಿನ್ನ ರೂಪಗಳಲ್ಲಿ ಪೂಜಿಸಲಾಗುತ್ತದೆ (ಇಚ್ಛಾ ಶಕ್ತಿ , ಕ್ರಿಯಾ ಶಕ್ತಿ ಮತ್ತು ಜ್ಞಾನಶಕ್ತಿ). ಕಲ್ಪಗಳು ಅಥವಾ ಪುರಾಣಗಳ ಪ್ರಕಾರ ಶಕ್ತಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ ಎಂದು ಪೂಜಿಸಲಾಗುತ್ತದೆ. ಎಲ್ಲಾ ಒಂಭತ್ತು ದಿನಗಳಲ್ಲಿ ದೇವಿ ಮಹಾತ್ಮ್ಯಮ್ ಮತ್ತು ಶ್ರೀಮದ್ ದೇವಿ ಭಾಗವತಂ ಪಠಿಸುತ್ತಾರೆ.
ಹಬ್ಬದ ಸಡಗರದ ಆಚರಣೆಯೊಂದು ಕಡೆಯಾದರೆ ಆತ್ಮಜ್ಞಾನದ ಆರ್ಜನೆಗೆ ಬೇಕಾದ ಆಳವಾದ ಅಧ್ಯಯನ ಇನ್ನೊಂದು ಕಡೆ! ಹೀಗಾಗಿ ಇದೊಂದು ವಿಶಿಷ್ಟವಾದ ಉತ್ಸವವೆಂದು ಹೇಳಬಹುದು.
ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತುಮಾತ್ಸರ್ಯ ಎಂಬ ಮನಸ್ಸಿನ ಆರು ವಿರೂಪಗಳು ಮಾನವನ ನಿಯಂತ್ರಣವನ್ನೂ ಮೀರಿ ಹೋದಾಗ ಅವನ ಆಧ್ಯಾತ್ಮಿಕಪಥದಲ್ಲಿ ಅಡಚಣೆ ಉಂಟಾಗಬಹುದು. ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಜಗನ್ಮಾತೆ ಶಕ್ತಿಯ ಅನುಗ್ರಹದಿಂದ ಅಂತಹ ಎಲ್ಲ ಅಡಚಣೆಗಳೂ ನಶಿಸಿಹೋಗುತ್ತವೆ.
ಈ ಒಂಬತ್ತು ದಿನಗಳಲ್ಲಿ ಧ್ಯಾನದೊಂದಿಗೆ ತಪಸ್ಯಾ ಅಥವಾ ಉಪಾಸನೆಯನ್ನು ನಡೆಸಲು ಪ್ರೋತ್ಸಾಹಿಸಲಾಗುತ್ತದೆ. ಪೂಜ್ಯ ಗುರುದೇವರ ಆಶೀರ್ವಾದದಿಂದ, ನಮಗಾಗಿ ಸುಸಜ್ಜಿತವಾದ ಆಧ್ಯಾತ್ಮಿಕ ಮಾರ್ಗವು ಸುಲಭ ಸಿಧ್ಧವಾಗಿ ದೊರೆತಿದೆ. ಅವರ ಮಾರ್ಗದರ್ಶನವನ್ನು ಅನುಸರಿಸುವುದರ ಮೂಲಕ ನಾವು ಪರಿಪೂರ್ಣತೆಯನ್ನು ಸಾಧಿಸಬಹುದು (ಅನಿಮಾ, ಮಹಿಮ, ಲಜಿಮ ಇತ್ಯಾದಿಯ ಮೂಲಕ).
ಯಾವುದೇ ಪೂಜೆಗೆ ಬಧ್ಧತೆಯ ಅಗತ್ಯವಿರುತ್ತದೆ. ನಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ಸು ಪಡೆಯಲು ಪೂಜೆಗಳ ಆರಂಭದಲ್ಲಿ ನಾವು ಮಾಡುವ ದೇವ ಪ್ರಾರ್ಥನೆಯೇ ಸಂಕಲ್ಪ. ಆಶ್ರಮದಲ್ಲಿ ನಡೆಯುವ ಅಗಾಧ ಪ್ರಮಾಣದ ಯಜ್ಞದ ಸಮಯದಲ್ಲಿ ತೆಗೆದುಕೊಂಡ ಸಂಕಲ್ಪಕ್ಕೆ ಸಮ ಪ್ರಮಾಣದಲ್ಲಿ ದೈವಕೃಪೆ ನಮಗೂ ಹಾಗೂ ಇಡೀ ಪ್ರಪಂಚಕ್ಕೂ ಆಗುತ್ತದೆ; ನಮ್ಮ ಮನಸ್ಸು ಶುದ್ಧವಾಗುತ್ತದೆ ಮತ್ತು ಜೀವನವನ್ನ ಅರ್ಥಮಾಡಿಕೊಳ್ಳುವ ನಮ್ಮ ದೃಷ್ಟಿಯಲ್ಲಿ ಹೆಚ್ಚಿನ ಸ್ಪಷ್ಟತೆ ಮೂಡುತ್ತದೆ.
ಒಬ್ಬ ವ್ಯಕ್ತಿಯು ತನ್ನ ಹಾಗೂ ತನ್ನ ಕುಟುಂಬದ ಹಿತಕ್ಕೆ ಸಂಕಲ್ಪವನ್ನು ತೆಗೆದುಕೊಂಡಾಗ ಅದನ್ನು 'ಆತ್ಮಾರ್ಥ ಸಂಕಲ್ಪ' ಎಂದು ಕರೆಯಲಾಗುತ್ತದೆ. ಅದೇ ಇಡೀ ಪ್ರಪಂಚದ ಹಿತಕ್ಕಾಗಿ ಸಂಕಲ್ಪವನ್ನು ತೆಗೆದುಕೊಂಡಾಗ ಅದನ್ನು 'ಪರಾರ್ಥ ಸಂಕಲ್ಪ' ಎಂದು ಕರೆಯಲಾಗುತ್ತದೆ.
ಕಲಾ, ತತ್ತ್ವ, ಭುವನ, ಮಂತ್ರ, ಪದ, ಮತ್ತು ವರ್ಣವನ್ನು ಶಡಧ್ವಗಳು ಎಂದು ಕರೆಯಲಾಗಿದ್ದು ಇವು ಶಕ್ತಿಯ ವಿವಿಧ ಸ್ವರೂಪಗಳಾಗಿದ್ದು ನಮ್ಮ ದೇಹದ ಷಡಾಧಾರಗಳೊಂದಿಗೆ ಸಂಪರ್ಕ ಹೊಂದಿವೆ. ಸಾಮೂಹಿಕವಾಗಿ ಸಾಧನೆ ಮಾಡುವುದರಿಂದ ನಾವು ಆಳವಾದ ಧ್ಯಾನಕ್ಕೆ ಹೋಗುತ್ತೇವೆ. ದೇವಿ ಶಕ್ತಿಯಿಂದ ಉಂಟಾಗುವ ಬದಲಾವಣೆಗಳನ್ನು ನಮ್ಮಲ್ಲಿ ಮತ್ತು ನಮ್ಮ ದೇಹದಲ್ಲಿ ಮಾತ್ರವಲ್ಲದೇ ನಮ್ಮ ಸುತ್ತಮುತ್ತಲಿನಲ್ಲೂ ಕಾಣುತ್ತೇವೆ.
ಚಂಡಿ ಹೋಮ ಎರಡು ಬಗೆಯದ್ದಾಗಿದೆ, ಲಘು ಚಂಡಿ ಹೋಮ (ಲಘು ಆವೃತ್ತಿ ) ಮತ್ತು ಮಹಾ ಚಂಡಿ ಹೋಮ (ದೀರ್ಘ ಆವೃತ್ತಿ).
ಲಘು ಚಂಡಿ ಹೋಮದಲ್ಲಿ ಆವಾಹನೆ (ದೇವಿಯ ಆರಾಧನೆ)ಯನ್ನು ಮಾಡಿ ನಂತರ ನವಾಕ್ಷರಿ ಮಂತ್ರ ಜಪ ಮಾಡಲಾಗುವುದು. ಹೋಮದ ನಂತರ ಒಂದು ಬಾರಿ ಮಾತ್ರ ದೇವೀ ಪೂಜೆ ನಡೆಯುವುದು. ಹೀಗಾಗಿ ಪೂಜೆಯು ಕೆಲವು ಗಂಟೆಗಳ ಕಾಲ ಮಾತ್ರ ನಡೆಯುವುದು.
ಮಹಾ ಚಂಡಿ ಹೋಮವನ್ನು ಒಂಬತ್ತು ಬಾರಿ ಮಾಡಬಹುದಾಗಿದೆ ಮತ್ತು ಇದನ್ನು ನವ ಚಂಡಿ ಹೋಮಾ ಎಂದು ಕರೆಯಲಾಗುತ್ತದೆ. 100 ಬಾರಿ ನಿರ್ವಹಿಸಿದಾಗ, ಇದನ್ನು ಶತ ಚಂಡಿ ಹೋಮ ಎಂದು ಕರೆಯಲಾಗುತ್ತದೆ; 1000 ಬಾರಿ ನಿರ್ವಹಿಸಿದಾಗ ಅದನ್ನು ಸಹಸ್ರ ಚಂಡಿ ಹೋಮ ಎಂದು ಕರೆಯಲಾಗುತ್ತದೆ ಮತ್ತು ಇದನ್ನು 10,000 ಬಾರಿ ನಿರ್ವಹಿಸಿದಾಗ ಇದನ್ನು ಆಯುತ ಚಂಡಿ ಹೋಮಾ ಎಂದು ಕರೆಯಲಾಗುತ್ತದೆ. ಈ ಪ್ರತಿಯೊಂದು ಯಜ್ಞಗಳಿಗೆ ವಿಭಿನ್ನ ವಿಧಿ-ವಿಧಾನಗಳಿವೆ. ಸಾಮಾನ್ಯವಾಗಿ ನವ ಚಂಡಿ ಹೋಮವನ್ನು ಎಲ್ಲೆಡೆ ನಡೆಸಲಾಗುವುದು. ಆರ್ಟ್ ಆಫ್ ಲಿವಿಂಗ್ ಅಂತರ ರಾಷ್ಟ್ರೀಯ ಕೇಂದ್ರದಲ್ಲಿ ಶತ ಚಂಡಿ ಹೋಮವನ್ನು ನಡೆಸಲಾಗುತ್ತದೆ.
ಪೂಜೆಯ ವಿಧಿಗಳು:
ಪೂಜೆಯು ‘ಗುರು ಅನುಗ್ರಹ’ದೊಂದಿಗೆ, ಎಂದರೆ ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಪ್ರಾರಂಭವಾಗುತ್ತದೆ.
ನಂತರ ‘ದೇವತಾ ಅನುಗ್ರಹ’ವನ್ನು ಪೂಜೆಗೆ ಮುನ್ನ ಅನುಮತಿ ಪಡೆಯುವ ಮೂಲಕ ಪ್ರಾರಂಭಿಸುತ್ತೇವೆ. .
‘ವಿಘ್ನೇಶ್ವರ ಪೂಜೆ’ - ಅಡೆತಡೆಗಳನ್ನು ತೆಗೆದುಹಾಕಲು ಗಣೇಶನಿಗೆ ಪ್ರಾರ್ಥನೆ; ನಂತರ ಪೂರ್ವಾಂಗ ಪೂಜೆಗಳು.
‘ಆಚಾರ್ಯ ಅನುಗ್ನ’ - ಇಡೀ ಯಜ್ಞದ ನೇತೃತ್ವ ವಹಿಸುವ ಹಿರಿಯ ಪುರೋಹಿತರ ಆಶೀರ್ವಾದವನ್ನು ಕೋರಲಾಗುವುದು. ಹಿರಿಯ ಪುರೋಹಿತರನ್ನು ಬ್ರಹ್ಮ ಎಂದು ಕರೆಯಲಾಗುತ್ತದೆ.
‘ಮಹಾ ಸಂಕಲ್ಪ’ದಲ್ಲಿ ಪೂಜೆ ನಡೆಯುವ ದಿನ, ಸಮಯ ಮತ್ತು ಸ್ಥಳವನ್ನು ಉಲ್ಲೇಖಿಸಲಾಗುವುದು. ಹೋಮದ ಹೆಸರು ಮತ್ತು ಉದ್ದೇಶವನ್ನು ಸಹ ಉಲ್ಲೇಖಿಸಲಾಗುವುದು. ಪೂಜೆಯು ಇದರ ನಂತರ ಪ್ರಾರಂಭವಾಗುತ್ತದೆ.
'ಗ್ರಹ ಪ್ರೀತಿ' ಕಾರ್ಯಕ್ರಮವೆಂದರೆ ನವಗ್ರಹಗಳ ಪ್ರಾರ್ಥನೆ ಆಗಿದೆ. ಯಾವುದೇ ಅಡೆತಡೆಗಳಿಲ್ಲದೆ ಹೋಮವು ಸುಗಮವಾಗಿ ನಡೆಯಲೆಂದು ಇದನ್ನು ಮಾಡಲಾಗುವುದು. ನವಗ್ರಹಗಳ ಪೂಜೆಯು ನಡೆಯುತ್ತಿರುವ ನಕ್ಷತ್ರ, ರಾಶಿ ಮತ್ತು ಲಗ್ನದಲ್ಲಿ ಏನಾದರೂ ದೋಷವಿದ್ದರೆ ಅದರ ನಿವಾರಣೆಗೆಂದು ನವಗ್ರಹಗಳನ್ನು ಪೂಜಿಸಿ ಆಶೀರ್ವಾದ ಪಡೆದು ಮುಂದುವರೆಯಲಾಗುವುದು.
'ನಂದಿ ಶೋಭನಮ್' - ಋಷಿಗಳು ಮತ್ತು ಹಿರಿಯರ ಆಶೀರ್ವಾದ ಪಡೆಯಲು ಪ್ರಾರ್ಥಿಸುವುದು. .
'ಮಧುಪರ್ಕ ಪೂಜೆ' - ಹಾಲು, ಜೇನುತುಪ್ಪ ಮತ್ತು ತುಪ್ಪವನ್ನು ಬೆರೆಸಿದ ಮಧುಪರ್ಕವನ್ನು ನಿರ್ದಿಷ್ಟ ಮಂತ್ರ ಪಠನೆಯ ನಂತರ ಹೋಮವನ್ನು ನಡೆಸುವ ಪುರೋಹಿತರೆಲ್ಲರೂ ಸೇವಿಸುವರು. ಪೂಜಾಸಮಯದಲ್ಲಿ ಅವರ ಮನಃಸ್ಥಿತಿ ಮಧುರವಾಗಿ ಇರಬೇಕೆನ್ನುವುದೇ ಇದರ ಉದ್ದೇಶ.
'ಗೌದಾನಾ' - ಆರಾಧನೆಯ ನಂತರ ಹಸುವಿನ ದಾನ ಮಾಡುವುದು.
'ಪುಣ್ಯಾಹ ವಾಚನ' - ಪೂಜೆ ನಡೆಯುತ್ತಿರುವ ಸ್ಥಳದ ಶುದ್ಧೀಕರಣ.
'ಪಂಚಗವ್ಯಮ್' - ಪಂಚಭೂತಗಳಿಂದ ದೇಹವನ್ನು ಶುದ್ಧಗೊಳಿಸುವುದು.
'ವಾಸ್ತು ಶಾಂತಿ' - ಭೂ ದೇವತೆಗಳನ್ನು ಪ್ರಾರ್ಥಿಸುವುದು.
'ಮೃತ್ ಸಂಗ್ರಹಣ' - ಮರಳು ಅಥವಾ ಮರದಿಂದ 'ಮೃತ್ಯು'ವನ್ನು ಸಂಗ್ರಹಿಸುವುದು.
'ಅಂಕುರಾರ್ಪಣ' - ಹಾಲು ಮತ್ತು ನೀರಿನಲ್ಲಿ ನೆನೆಸಿರುವ ಮಡಕೆಗಳಲ್ಲಿ ಒಂಬತ್ತು ವಿಧದ ಧಾನ್ಯಗಳ ಬಿತ್ತನೆ.
'ರಕ್ಷಾ ಬಂಧನ' - ಪವಿತ್ರ ಹಳದಿ ದಾರವನ್ನು ಬಲಗೈಗೆ ಕಟ್ಟುವ ಮೂಲಕ ಆಚಾರ್ಯರಿಂದ ಪೂಜೆ ಮಾಡುವ ಸಂಕಲ್ಪ.
ಯಜ್ಞದ ಆರಂಭದ ಮೊದಲು ನಡೆಯುವ ಈ ಆಚರಣೆಗಳೇ "ಪೂರ್ವಾಂಗ ಪೂಜೆಗಳು"
ಯಜ್ಞದ ಆರಂಭ:
ದೀಪಾರಾಧನೆ - ಮುಖ್ಯ ಕಲಶದ ಎರಡೂ ಬದಿಗಳಲ್ಲಿ ಎರಡು ವಿಧದ ದೀಪಗಳನ್ನು ಇರಿಸಲಾಗುತ್ತದೆ; ಎಡಭಾಗದ 'ದುರ್ಗಾದೀಪ'ಕ್ಕೆ ಎಳ್ಳೆಣ್ಣೆಯನ್ನೂ, ಬಲ ಭಾಗದ 'ಲಕ್ಷ್ಮಿ ದೀಪ'ಕ್ಕೆ ತುಪ್ಪವನ್ನೂ ಹಾಕಿ ಬೆಳಗಿಸಲಾಗುತ್ತದೆ.
ಶೋಡಶ ಮಾತೃಕಾ ಪೂಜೆ - 16 ಮಾತೃಕಾ ದೇವಿಗಳ ಆವಾಹನೆ.
ಆಚಾರ್ಯ ಮತ್ತು ಋತ್ವಿಕ್ ವರಣ - ವೇದಗಳು, ಶಾಸ್ತ್ರಗಳು ಮತ್ತು ಅಗಮಗಳ ವಿವಿಧ ಶಾಖೆಗಳಲ್ಲಿ ವಿಶೇಷ ನೈಪುಣ್ಯವಿರುವ ಆಚಾರ್ಯರು ಅಥವಾ ಪುರೋಹಿತರನ್ನು ನೇಮಕ ಮಾಡಿಕೊಳ್ಳುವುದು. ವೇದಗಳು (ಋಕ್, ಯಜುರ್, ಸಾಮ ಮತ್ತು ಅಥರ್ವಣ),ಇತಿಹಾಸ ಪುರಾಣಗಳು ಮತ್ತು ಶೈವಾಗಮ ಪಠಣೆ.
ಆಚಾರ್ಯ ಅನುಗ್ನ - ಇಡೀ ಯಜ್ಞದ ನೇತೃತ್ವ ವಹಿಸುವ ಹಿರಿಯ ಪುರೋಹಿತರ ಆಶೀರ್ವಾದವನ್ನು ಕೋರಲಾಗುವುದು. ಹಿರಿಯ ಪುರೋಹಿತರನ್ನು ಬ್ರಹ್ಮ ಎಂದು ಕರೆಯಲಾಗುತ್ತದೆ.
ಪೂಜಾಸಮಯ ಮತ್ತು ಸ್ಥಳವನ್ನು ಉಲ್ಲೇಖಿಸಿ ಮಹಾ ಸಂಕಲ್ಪವನ್ನು ತೆಗೆದುಕೊಳ್ಳಲಾಗುತ್ತದೆ. ಹೋಮದ ಹೆಸರು ಮತ್ತು ಉದ್ದೇಶವನ್ನು ಸಹ ಉಲ್ಲೇಖಿಸಲಾಗುವುದು. ಇದೆ ಪೂಜಾ ಪ್ರಾರಂಭದ ಸಂಕೇತ.
ಚಂಡಿ ಮಹಾ ಯಜ್ಞ ಮಂಟಪ ಪೂಜೆ - 53 ವಿಧಗಳ ಪೂಜೆಗಳನ್ನು ನಡೆಸಲಾಗುತ್ತದೆ ಮತ್ತು ದಶ ದಿಕ್ಕುಗಳ ದೇವತೆಗಳನ್ನು ಪೂಜಿಸಲಾಗುತ್ತದೆ.
ದ್ವಾರ, ತೋರಣ , ಧ್ವಜ, ಪತಾಕೆಗಳ ಸ್ಥಾಪನೆ - ನಿರ್ದಿಷ್ಟವಾದ ದಿಕ್ಕುಗಳಿಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯಲ್ಲಿ ಎಲೆಗಳನ್ನು ಮಂಟಪಕ್ಕೆ ಕಟ್ಟಲಾಗುವುದು.
ಆಚಾರ್ಯ ಆಸನ ಪೂಜೆ - ಯಜ್ಞವನ್ನು ನಿರ್ವಹಿಸಲು ನೇಮಕಗೊಂಡ ಮುಖ್ಯ ಪುರೋಹಿತರು ದೇವಿ ಪೂಜೆಯನ್ನು ಪ್ರಾರಂಭಿಸುತ್ತಾರೆ ಮತ್ತು ನವಾಕ್ಷರೀ ಮಂತ್ರದ ಜಪವನ್ನು ಮಾಡುತ್ತಾರೆ.
ಗೌದಾನಾ - ಗೋ ಪೂಜೆಯ ನಂತರ ಹಸುವಿನ ದಾನ.
ಪಾದ್ಯಾದಿ ಪಾತ್ರ ಪರಿಕಲ್ಪನಾ - ನೈವೇದ್ಯಗಳ ತಯಾರಿ.
ಕುಂಭ ಸ್ಥಾಪನೆ - ಪವಿತ್ರ ನದಿಗಳ ನೀರು ತುಂಬಿದ ಪ್ರಮುಖ ಕಲಶದ ಸ್ಥಾಪನೆ.
ಪುಸ್ತಕ ಪೂಜೆ ಮತ್ತು ಪಾರಾಯಣ ಪೂಜೆಯನ್ನು ದೇವಿ ಸಪ್ತಶತಿ ಪುಸ್ತಕಕ್ಕೆ ಮಾಡಿ ತರುವಾಯ ದೇವಿ ಮಹಾತ್ಮ್ಯಮ್ (ದೇವಿ ಸಪ್ತಶತಿ) ಪಠಣ
ದೇವಿಯ ಆವಾಹನೆ.
ಅಗ್ನಿ ಕಾರ್ಯ - ಅರುಣಿ ಮರದ ತುಂಡುಗಳ ನಡುವೆ ಘರ್ಷಣೆ ಉಂಟುಮಾಡಿ ಬೆಂಕಿ ಹೊತ್ತಿಸುವುದು.
ಅಗ್ನಿ ಮಂಥನ- ದೇವಿಶಕ್ತಿಯನ್ನು ಬೆಂಕಿಯಲ್ಲಿ ಆವಾಹನೆ ಮಾಡಿ ಆಹುತಿಗಳನ್ನು ಅಗ್ನಿಗೆ ಅರ್ಪಿಸಲಾಗುವುದು.
ಮಾಡುತ್ತಿರುವ ಹೋಮಕ್ಕೆ ಅನುಸಾರವಾಗಿ 1000, 10000, 100000 ಆಹುತಿ ಇತ್ಯಾದಿಗಳನ್ನು ನೀಡಲಾಗುತ್ತದೆ.
ಸಪ್ತಶತಿಯನ್ನು 13 ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿಯೊಂದು ಭಾಗಕ್ಕೂ ದೇವಿಯ ನಿರ್ದಿಷ್ಟಸ್ವರೂಪವಿದೆ ಮತ್ತು ಎಲ್ಲಾ 13 ದೇವಿಯರ ಆವಾಹನೆಗೆ ಪ್ರತ್ಯೇಕವಾದ ನಿರ್ದಿಷ್ಟ ಮಂತ್ರಗಳನ್ನು ಪಠಿಸಲಾಗುವುದು. ಇದೇ ರೀತಿ ದೇವಿಯರಿಗೆ ನೀಡುವ ಆಹುತಿಗಳು ಸಹ ನಿರ್ದಿಷ್ಟವಾಗಿರುತ್ತವೆ. ಹೀಗಾಗಿ ಪ್ರತಿ ದೇವಿಯ ಆಶೀರ್ವಾದದಿಂದ ನಿರ್ದಿಷ್ಟ ಪರಿಣಾಮಗಳನ್ನು ಪಡೆಯುವಲ್ಲಿ ಇದು ನೆರವಾಗುತ್ತದೆ.
64 ಯೋಗಿನಿಗಳು ಮತ್ತು 64 ಭೈರವರನ್ನು ಪೂಜಿಸಲಾಗುತ್ತದೆ. .
ಕಾದಂಬರಿ ಪೂಜೆ
ವಡುಕ ಭೈರವ ಪೂಜೆ
ಗೌ ಪೂಜೆ (ಹಸುವಿನ ಪೂಜೆ)
ಗಜ ಪೂಜೆ (ಆನೆಯ ಪೂಜೆ)
ಅಶ್ವ ಪೂಜೆ (ಕುದುರೆಯ ಪೂಜೆ)
ಕನ್ಯಕಾ ಪೂಜೆ (ಪುಟ್ಟ ಹೆಣ್ಣುಮಕ್ಕಳ ಪೂಜೆ)
ಸುವಾಸಿನಿ ಪೂಜೆ (ವಿವಾಹಿತ ಮಹಿಳೆಯರಿಗೆ ಪೂಜೆ)
ದಂಪತಿ ಪೂಜೆ (ದಂಪತಿಗಳಿಗೆ ಪೂಜೆ)
ಮಂಗಳಾರತಿಯೊಂದಿಗೆ ಇವರೆಲ್ಲರಿಗೂ ಕೊಡುಗೆಗಳನ್ನು ನೀಡಿ ಸಂತುಷ್ಟಗೊಳಿಸಲಾಗುತ್ತದೆ. .
ಸೌಭಾಗ್ಯ ದ್ರವ್ಯ ಸಮರ್ಪಣ - 108 ಔಷಧೀಯ ಗಿಡಮೂಲಿಕೆಗಳು ಮತ್ತು ಹಣ್ಣುಗಳನ್ನು ಶ್ರೀ ಸೂಕ್ತ ಮಂತ್ರ ಪಠಣೆಯೊಂದಿಗೆ ಮುಖ್ಯ ಹೋಮ ಕುಂಡಕ್ಕೆ ಅರ್ಪಿಸಲಾಗುತ್ತದೆ.
ವಶೋಧರ - ಚಮಕ ಮಂತ್ರಗಳನ್ನು ಈಗ ಪಠಿಸಲಾಗುತ್ತದೆ.
ಮಹಾ ಪೂರ್ಣಾಹುತಿ - ಕೆಂಪು ಸೀರೆ, ತುಪ್ಪ, ಒಣ ತೆಂಗಿನಕಾಯಿ, ಜೇನುತುಪ್ಪ, ನವರತ್ನಗಳು, ಪಂಚಲೋಹಗಳನ್ನು ಅಂತಿಮ ಆಹುತಿಗಳಾಗಿ ಅರ್ಪಿಸಲಾಗುತ್ತದೆ. .
ಸಂಯೋಜನಾ - ಪೂಜೆಯ ಕಾರ್ಯಗಳಿಂದ ಹೊಮ್ಮುವ ಕಂಪನಗಳನ್ನು ಮತ್ತು ಅದರ ಎಲ್ಲ ಪರಿಣಾಮಗಳನ್ನು ಮುಖ್ಯ ಕಲಶಕ್ಕೆ ಪ್ರವಹಿಸಲಾಗುತ್ತದೆ.
ರಕ್ಷಾಧಾರಣ - ಹೋಮ ಕುಂಡದಿಂದ ರಕ್ಷೆಯನ್ನು (ಭಸ್ಮರೂಪದಲ್ಲಿ) ತೆಗೆದುಕೊಂಡು ಮುಖ್ಯ ಕಲಶಕ್ಕೆ ಲೇಪಿಸಲಾಗುತ್ತದೆ, ನಂತರ ಪೂಜೆ ಮಾಡಲಾಗುತ್ತದೆ.
ಕಲಶಾಭಿಷೇಕಂ - ಮುಖ್ಯ ಕಲಶದಲ್ಲಿನ ಪವಿತ್ರ ನೀರನ್ನು ಈಗ ದೇವಿಯ ವಿಗ್ರಹಕ್ಕೆ ಅರ್ಪಿಸಲಾಗುತ್ತದೆ.
ಇದೆಲ್ಲದರ ನಂತರ ವಿಶೇಷ ಪ್ರಾರ್ಥನೆ ಮಾಡಿ ಇಡೀ ಭೂಖಂಡವನ್ನು ಆಶೀರ್ವದಿಸಿದ ನಂತರ ದಿವ್ಯ ತೀರ್ಥವನ್ನು ನೆರೆದಿರುವವರೆಲ್ಲರ ಮೇಲೆ ಪೂಜ್ಯ ಗುರುದೇವರು ಪ್ರೋಕ್ಷಿಸುತ್ತಾರೆ.
ಗುರುದೇವರು ನಂತರ ಎಲ್ಲರಿಗೂ ಪ್ರಸಾದವನ್ನು ಕೊಟ್ಟು ಹರಸುತ್ತಾರೆ.
ಆದ್ದರಿಂದಲೇ ಚಂಡಿ ಹೋಮದಲ್ಲಿ ೧೦೦೮ ಹಂತಗಳಿವೆಯೆಂದು ಹೇಳುವುದು.
ವೇದ ಆಗಮ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ, ಸುದರ್ಶನ ಕ್ರಿಯೆ ಮತ್ತು ಧ್ಯಾನವನ್ನು ತಪ್ಪದೆ ಮಾಡುವುದರಿಂದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಾಸ್ಥ್ಯವನ್ನು ಹೊಂದಿರುತ್ತಾರೆ ಹಾಗೂ ಅವರು ಗುರುಕುಲದ ತರಬೇತಿ ಕಾರ್ಯಕ್ರಮದ ನಿಯಮಗಳು ಮತ್ತು ನಿಬಂಧನೆಗಳನ್ನು ತಪ್ಪದೆ ಅನುಸರಿಸುತ್ತಾರೆ. ಚಂಡಿ ಹೋಮವನ್ನು ಸಕ್ರಿಯರಾಗಿ ನಿರ್ವಹಿಸಲು ಅವರಿಗೂ ಮಂತ್ರ ದೀಕ್ಷೆಯನ್ನು ನೀಡಲಾಗುತ್ತದೆ. ಹೋಮದಲ್ಲಿ ಪ್ರತಿ ಹಂತದ ಬಗ್ಗೆ ಅವರಿಗೆ ನೀಡಲಾದ ತರಬೇತಿ ಚಂಡಿ ಹೋಮದ ಕಾಲದಲ್ಲಿ ಸಮಯನಿಖರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮಹಾ ಚಂಡಿ ಹೋಮ ಜರುಗುವ ಒಂದು ವಾರದ ಮೊದಲು ಆಗಮ ಪಾಠಶಾಲೆಯಲ್ಲಿ ಪ್ರಾಯೋಗಿಕ ರೂಪದಲ್ಲಿ ಚಂಡಿ ಹೋಮವನ್ನು ನಡೆಸಿ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. ಅಲ್ಲದೆ ಸುಮಾರು 12 ವಾರಗಳ ಕಾಲ ದೇವಿ ಮಹಾತ್ಮ್ಯಂನ ಪಠಣ ಸಹ ನಡೆದಿರುತ್ತದೆ.
ಗಣಪತಿ ಹೋಮ - ಯಾವುದೇ ಕೆಲಸದ ಸಾಧನೆಯಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವಿರುತ್ತದೆ. ಇದು ಕೇವಲ ಬಾಹ್ಯ ಜಗತ್ತಿನಲ್ಲಿ ಮಾತ್ರವಲ್ಲದೆ ನಮ್ಮ ಅಂತರಂಗದಲ್ಲಿಯೂ (ದೇಹ ಮತ್ತು ಮನಸ್ಸಿನಲ್ಲಿ) ಆಗುತ್ತಿರುತ್ತದೆ. ಇಂತಹ ಎಲ್ಲಾ ಅಡೆತಡೆಗಳನ್ನು ದೂರಮಾಡಲೆಂದು ಪ್ರಾರ್ಥಿಸಲು ಗಣಪತಿ ಹೋಮವನ್ನು ಮಾಡುತ್ತೇವೆ. ನಾವು ಯಾವುದೇ ಯಜ್ಞವನ್ನು ಪ್ರಾರಂಭಿಸುವ ಮೊದಲು ಗಣೇಶ ಹೋಮ ಮತ್ತು ಪೂಜೆಯನ್ನು ನಡೆಸುವುದು ಒಂದು ಸಂಪ್ರದಾಯವಾಗಿದೆ.
ಸುಬ್ರಹ್ಮಣ್ಯ ಹೋಮ - ಸುಬ್ರಹ್ಮಣ್ಯ ದೇವರು ವಿಜಯದ ಗುರುತು. ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗಲು, ಜ್ಞಾನ ಶಕ್ತಿ ಅಥವಾ ಜ್ಞಾನದ ಅವಶ್ಯಕತೆ ಇದೆ. ಆದ್ದರಿಂದ ಬ್ರಾಹ್ಮಣ್ಯ ಮಂತ್ರಗಳನ್ನು ಪಠಿಸುತ್ತಾ ಸುಬ್ರಹ್ಮಣ್ಯಸ್ವಾಮಿಯನ್ನು ಪೂಜಿಸುತ್ತಾರೆ.
ನವಗ್ರಹ ಹೋಮ - ನವಗ್ರಹಗಳು ಬಹಳ ಮುಖ್ಯವಾದವು. ಅವುಗಳ ಗ್ರಹಗತಿಯ ಪ್ರಭಾವ ಇಡೀ ಭೂಮಿಯ ಮೇಲೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇರುತ್ತದೆ. ಆದ್ದರಿಂದ, ಒಂಬತ್ತು ಗ್ರಹಗಳನ್ನು ಒಂಬತ್ತು ವಿಭಿನ್ನ ಪ್ರಕಾರದ ಆಹುತಿಗಳನ್ನು ನೀಡುವ ಮೂಲಕ ಗೌರವಿಸಲಾಗುತ್ತದೆ. ಪ್ರತಿ ಗ್ರಹಕ್ಕೆ ನಿರ್ದಿಷ್ಟವಾಗಿರುವ ಮಂತ್ರಗಳ ಪಠಣಮಾಡಲಾಗುತ್ತದೆ. ನಿರ್ದಿಷ್ಟ ಗ್ರಹಗಳು ನಮ್ಮ ದೇಹದ ನಿರ್ದಿಷ್ಟ ಭಾಗಗಳನ್ನು ಪ್ರಭಾವಿಸುತ್ತವೆ ಮತ್ತು ಅವುಗಳು ನಿರ್ದಿಷ್ಟವಾದ ಧಾನ್ಯಗಳು ಮತ್ತು ರತ್ನಗಳನ್ನು ಸಹ ಪ್ರಭಾವಿಸುತ್ತವೆ. ಭೂಮಿಯ ಮೇಲಿನ ಪ್ರತಿಯೊಂದು ಘಟನೆಗೆ ಗ್ರಹಗಳು ಸಂಬಂಧವಿರುತ್ತವೆ. ನಮ್ಮ ಮೇಲೆ ಗ್ರಹಗಳ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಅಥವಾ ನಿವಾರಿಸಲು ಮತ್ತು ಈಗಾಗಲೇ ನೀಡುತ್ತಿರುವ ಸಕಾರಾತ್ಮಕ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಲು ನಾವು ನವಗ್ರಹಗಳನ್ನು ಪ್ರಾರ್ಥಿಸುತ್ತೇವೆ.
ರುದ್ರ ಹೋಮ - ರುದ್ರ ಹೋಮ ನಮಗೆ ಶಾಂತಿಯನ್ನು ನೀಡುತ್ತದೆ ಮತ್ತು ನಮ್ಮ ಜೀವನದಿಂದ ಎಲ್ಲ ದುಃಖವನ್ನು ದೂರಮಾಡುತ್ತದೆ. ನಮಕ ಮತ್ತು ಚಮಕ ಮಂತ್ರಗಳನ್ನು ಒಳಗೊಂಡಂತೆ ರುದ್ರ ಮಂತ್ರಗಳು ಈ ಹೋಮದಲ್ಲಿ ಪಠಿಸಲ್ಪಡುತ್ತವೆ. ರುದ್ರ ಮಂತ್ರಗಳನ್ನು ಗೌರವಿಸಿದಾಗ ಆಳವಾಗಿ ಧ್ಯಾನಮಾಡಲು ಸಹಾಯವಾಗುತ್ತದೆ. ನಮ್ಮಲ್ಲಿ ಸತ್ವ, ರಜಸ್ ಮತ್ತು ತಮೋ ಗುಣಗಳ ಸಮತೋಲನವನ್ನು ತರುತ್ತದೆ. ರುದ್ರ ಮಂತ್ರಗಳು ತ್ರಿಗುಣಾತೀತರಾಗಿ ಆಳವಾದ ಧ್ಯಾನಕ್ಕೆ ಇಳಿಯಲು ಸಹಾಯ ಮಾಡುತ್ತವೆ. ಆರ್ಟ್ ಆಫ್ ಲಿವಿಂಗ್ ಅಂತರ ರಾಷ್ಟ್ರೀಯ ಕೇಂದ್ರದಲ್ಲಿ 11 ಪುರೋಹಿತರು ರುದ್ರ ಮಂತ್ರಗಳನ್ನು ಹನ್ನೊಂದು ಬಾರಿ ಪಠಿಸುವ ಮೂಲಕ ರುದ್ರ ಹೋಮವನ್ನು ನಿರ್ವಹಿಸುವುದರಿಂದ ಇದನ್ನು 'ಏಕಾದಶಾ ರುದ್ರ ಹೋಮ' ಎಂದು ಕರೆಯಲಾಗುತ್ತದೆ.
ಸುದರ್ಶನ ಹೋಮ - ಸುದರ್ಶನ ಹೋಮವು ಕೆಟ್ಟ ದೃಷ್ಟಿ ನಮ್ಮ ಮೇಲಾಗಿದ್ದರೆ ಅದರ ನಕಾರಾತ್ಮಕ ಪ್ರಭಾವಗಳನ್ನು ತೊಡೆದುಹಾಕುವುದಲ್ಲದೆ ನಾವು ಆನಂದವನ್ನು ಅನುಭಾವಿಸಲು ಸಹಾಯ ಮಾಡುತ್ತದೆ. ಸುದರ್ಶನ ಮಂತ್ರ ಮತ್ತು ವಿಷ್ಣು ಸಹಸ್ರನಾಮಗಳನ್ನು ಈ ಹೋಮದ ಸಮಯದಲ್ಲಿ ಪಠಿಸಲಾಗುತ್ತದೆ. ಲಕ್ಷ್ಮೀ ಮಂತ್ರ ಮತ್ತು ಶ್ರೀ ಸೂಕ್ತ ಮಂತ್ರಗಳನ್ನು ಸಹ ಸುದರ್ಶನ ಹೋಮದಲ್ಲಿ ಪಠಿಸಲಾಗುವುದು.
ಋಷಿ ಹೋಮ - ಈ ಹೋಮವನ್ನು ನವರಾತ್ರಿಯ ಕೊನೆಯ ದಿನದಂದು ಮಾಡಲಾಗುತ್ತದೆ. ಆಳವಾದ ಸಮಾಧಿಸ್ಥಿತಿಯನ್ನು ಪ್ರವೇಶಿಸಿ ಬಾಹ್ಯಾಕಾಶದಿಂದ ವೇದಗಳ ಮಂತ್ರಗಳನ್ನು “ಡೌನ್ಲೋಡ್” ಮಾಡಿದ ದೃಷ್ಟಾರರು ನಮ್ಮ ಋಷಿಮುನಿಗಳು! ಮನುಕುಲದ ಉನ್ನತಿಗಾಗಿ ಈ ಪವಿತ್ರ ಜ್ಞಾನವನ್ನು ನೀಡಿದ ಋಷಿಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಈ ಹೋಮವನ್ನು ಮಾಡುತ್ತೇವೆ. ಸಪ್ತಋಷಿಗಳು ಮತ್ತು ಇತರ ಪ್ರಮುಖ ಋಷಿಗಳಿಗೆ ಪ್ರಾರ್ಥನೆ ಮಾಡುತ್ತೇವೆ. ಈ ಹೋಮವು ಗುರು ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಇದು ಕೇವಲ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಾತ್ರ ನಡೆಯುತ್ತದೆ. ಎಲ್ಲವೂ ಗುರುದೇವರ ಅನುಗ್ರಹ ಮತ್ತು ಕೃಪೆ”.