ನವರಾತ್ರಿಯಲ್ಲಿ ಧ್ಯಾನಕ್ಕೆ ಹೆಚ್ಚಿನ ಮಹತ್ವ.
ಇದಿಗೋ ಇಲ್ಲಿವೆ ೫ ಕಾರಣಗಳು
ನವರಾತ್ರಿ ಒಂದು ಸಂಭ್ರಮದ ಹಬ್ಬವಾಗಿದ್ದು ಹರ್ಷೋತ್ಸಾಹದ ರಂಜನೀಯ ವಾತಾವರಣ ಎಲ್ಲೆಡೆ ನೋಡಸಿಗುತ್ತದೆ. ನವರಾತ್ರಿಯ ಸಂಬಂಧ ಕೇವಲ ಬಾಹ್ಯ ಪ್ರಪಂಚದ ಸಡಗರಕ್ಕಷ್ಟೇ ಅಲ್ಲದೆ ಆಧ್ಯಾತ್ಮದ ಕಡೆಗೂ ಇರುವುದು. ಮೌನ ಆಚರಣೆ ನವರಾತ್ರಿಯ ಪ್ರಮುಖ ಆಚರಣೆಗಳಲ್ಲೊಂದು. ಆ ಸಮಯದಲ್ಲಿ ಶ್ಲೋಕಪಠಣ, ಉಪವಾಸ ಮತ್ತು ದೈವಪ್ರಾರ್ಥನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಧ್ಯಾನದಲ್ಲಿ ತಲ್ಲೀನರಾಗಿ ಅಂತರ್ಮುಖಿಗಳಾಗಲು ಪ್ರಶಸ್ತವಾದ ಸಮಯ ನವರಾತ್ರಿ.
ನೀವು ಧ್ಯಾನಾಸಕ್ತರೇ? ಹಾಗಿದ್ದರೆ ಧ್ಯಾನ ಆರಂಭಿಸಲು ನವರಾತ್ರಿ ಅದೇಕೆಪ್ರಶಸ್ತವಾದ ಸಮಯ? ಇಲ್ಲಿವೆ ಕೆಲವು ಉತ್ತಮವಾದ ೫ ಕಾರಣಗಳು:
೧. ನವರಾತ್ರಿಯ ಸಮಯದಲ್ಲಿ ಪ್ರಕೃತಿಯಲ್ಲಿ ಒಂದು ಸುಂದರವಾದ ಸಮತೋಲನವನ್ನು ಕಾಣುತ್ತೇವೆ. ಹಾಗಾಗಿ ಈ ಸಮಯದಲ್ಲಿ ಧ್ಯಾನ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸಿನ ಸಮತೋಲನ ಸುಲಭವಾಗಿ ಆಗುವುದು.
ಬೇಸಿಗೆ ಕಾಲದಲ್ಲಿ ಮತ್ತು ಚಳಿಗಾಲದಲ್ಲಿ ಸೂರ್ಯನ ಪ್ರಖರತೆ ವಿಪರೀತ ಹೆಚ್ಚು ಅಥವಾ ಕಡಿಮೆ ಆಗಿದ್ದು ಅದು ಸಮಭಾಜಕದಿಂದ ಸೂರ್ಯನಿರುವ ಕೋನದ ಮೇಲೆ ಅವಲಂಬಿಸಿರುತ್ತದೆ. ದಿನದ ಕಾಲ ಅತಿಹೆಚ್ಚು ಇದ್ದು ರಾತ್ರಿಯ ಕಾಲ ಕಡಿಮೆಯಿರುವುದು ಬೇಸಿಗೆಯ ಲಕ್ಷಣವಾದರೆ ಇದರ ತದ್ವಿರುಧ್ಧ ಚಳಿಗಾಲದಲ್ಲಿ. ಆದರೆ ನವರಾತ್ರಿ ಸಮಯದಲ್ಲಿ ಸೂರ್ಯ ಸಮಭಾಜಕದ ಸಮೀಪದಲ್ಲಿ ಇರುವುದೇ ಈ ಸಮತೋಲನಕ್ಕೆ ಕಾರಣ. ಪ್ರಕೃತಿಯಲ್ಲಿಯೇ ಸಮತೋಲನ ಇರುವಾಗ, ನಮ್ಮಲ್ಲಿಯೂ ಅಂತಹ ಸಮತೋಲನವನ್ನು ಸಾಧಿಸಲು ಧ್ಯಾನವು ಸಹಾಯ ಮಾಡುತ್ತದೆ.
೨. ನೀವು ಧ್ಯಾನ ಮಾಡಲು ಬಯಸುತ್ತಿದ್ದು ನಿಯಮಿತಧ್ಯಾನವಿನ್ನೂ ನಿಮ್ಮ ದಿನಚರಿಯಲ್ಲಿ ಇಲ್ಲದಿದ್ದರೆ, ಅಥವಾ ಪುನರಾರಂಭ ಮಾಡುವ ಇಚ್ಛೆ ನಿಮ್ಮಲ್ಲಿದ್ದರೆ ಅದಕ್ಕೆ ನವರಾತ್ರಿಯೇ ಒಳ್ಳೆಯ ಸಮಯ.
ಕೆಲವೊಮ್ಮೆ ಧ್ಯಾನ ಮಾಡಲು ಅದೆಷ್ಟೇ ಇಚ್ಛೆ ಇದ್ದರೂ ಜೀವನದ ಪರಿಸ್ಥಿತಿಗಳಲ್ಲಿ ಸಿಲುಕಿ ಧ್ಯಾನಕ್ಕೆ ಸಮಯ ನೀಡಲು ಅಸಮರ್ಥರಾಗಿರುತ್ತೇವೆ. ಚಿಂತಿಸದಿರಿ, ಜೀವನದ ಕಂಪ್ಯೂಟರ್ನಲ್ಲಿ ನೀವು "Ctrl + Alt + Delete" ಬಟನ್ ಒತ್ತಿ ಹೊಸತಾದ ಹೆಜ್ಜೆಯಿಡಲು ನವರಾತ್ರಿ ಅತ್ಯುತ್ತಮ ಸಮಯ. ನಮ್ಮಲ್ಲೊಂದು ಪ್ರತೀತಿಯಿದೆ, 'ವಿಜಯ ದಶಮಿಗೆ ಏನಾದರೂ ಒಂದು ವಿಶೇಷವಾದುದನ್ನು, ಹೊಸದನ್ನು ಪ್ರಾರಂಭಿಸಿ' ಎಂದು. ಇದುವರೆಗೂ ಧ್ಯಾನ ಮಾಡಿಯೇ ಗೊತ್ತಿಲ್ಲ ಎಂದೆಲ್ಲ ಯೋಚಿಸದೆ ನವರಾತ್ರಿಯ ಸುಸಮಯದಲ್ಲಿ ಧ್ಯಾನ ಮಾಡಲು ಹೊಸ ಆರಂಭಮಾಡಿ.
೩. ನವರಾತ್ರಿಯ ದಿನಗಳಲ್ಲಿ ಮಾಡುವ ಧ್ಯಾನದಿಂದ ಹೆಚ್ಚಿನ ಫಲ ಸಿಗುವುದು ಹಾಗೂ ಅದರ ಪರಿಣಾಮ ಸಹ ಹೆಚ್ಚಿನದಾಗಿರುವುದು.
ಗುಂಪಿನಲ್ಲಿ ನಾವು ಯಾವುದೇ ಆಚರಣೆಯನ್ನು ಮಾಡಿದಾಗ, ಅದರ ಪ್ರಯೋಜನ ಇಮ್ಮಡಿಯಾಗುವುದು ಮತ್ತು ತ್ವರಿತವಾಗಿ ಫಲ ಸಿಗುವುದು ಎಲ್ಲರ ಅನುಭವ. ಆದ್ದರಿಂದ, ನವರಾತ್ರಿ ಸಮಯದಲ್ಲಿ ಒಟ್ಟಾಗಿ ಸೇರಿ ಧ್ಯಾನ ಮಾಡಿದರೆ ಸಮೂಹದ ಪ್ರಜ್ಞೆಯ ಶಕ್ತಿಯಿಂದ ನಿಮ್ಮ ಉನ್ನತಿ ಶೀಘ್ರಸಾಧ್ಯ.
೪. ನವರಾತ್ರಿಯ ಧ್ಯಾನದ ಧನಾತ್ಮಕ ಪರಿಣಾಮವು ನವರಾತ್ರಿ ಮುಗಿದ ನಂತರವೂ ಬಹು ಕಾಲ ನಿಮ್ಮಲ್ಲಿರುತ್ತದೆ. .
ನವರಾತ್ರಿ ಉತ್ಸವದ ಒಂಬತ್ತೂ ದಿನಗಳ ಕಾಲ ನೀವು ಧ್ಯಾನ ಮಾಡಿದರೆ , ಅದರ ಪರಿಣಾಮವು ಹೆಚ್ಚು ಸಮಯದವರೆಗೆ ಇರುತ್ತದೆ. ಇದನ್ನು ರೋಗನಿರೋಧಕ ಚುಚ್ಚುಮದ್ದಿಗೆ ಹೋಲಿಸಬಹುದು. ಒಮ್ಮೆ ಚುಚ್ಚುಮದ್ದು ಪಡೆದು ಬಹು ಕಾಲ ಅದರ ನಿರೋಧಕ ಶಕ್ತಿಯ ಪ್ರಯೋಜನ ಪಡೆಯುವಂತೆ ನವರಾತ್ರಿಯ ಸಮಯದಲ್ಲಿ ಮಾಡಿದ ಧ್ಯಾನದಿಂದ ದೀರ್ಘಕಾಲಿಕ ಪರಿಣಾಮ ನಮ್ಮ ಮೇಲೆ ಆಗುವುದು. ನವರಾತ್ರಿ ಸಮಯದಲ್ಲಿ ಪಠಿಸುವ ಹಾಗೂ ಕೇಳಲ್ಪಡುವ ಮಂತ್ರಗಳ ತರಂಗಗಳು ನಮ್ಮನ್ನು ಸುಲಭವಾಗಿ ಆಳವಾಗಿ ಧ್ಯಾನಕ್ಕಿಳಿಯಲು ಸಹಾಯ ಮಾಡುತ್ತವೆ. ಇದು ನಮ್ಮನ್ನು ಪುನಃಚೇತನಗೊಳಿಸಿ ಅದರ ಶಕ್ತಿಯು ಬಹು ಕಾಲ ನಮ್ಮಲ್ಲುಳಿಯಲು ಕಾರಣವಾಗುವುದು.
೫ .ನವರಾತ್ರಿಯ ಸಮಯದಲ್ಲಿ, ಆಳವಾದ, ವಿಶ್ರಾಂತಿಪೂರ್ಣ ಧ್ಯಾನ ಅಪ್ರಯತ್ನಪೂರ್ವಕ ಹಾಗೂ ಅನಿವಾರ್ಯ!
ಸ್ನಾನಮಾಡುವುದು ಹಾಗೂ ಅದರ ಮೂಲಕ ಮೈ ಒದ್ದೆಯಾಗುವುದಕ್ಕೆ ನಮ್ಮ ಪರಿಶ್ರಮ ಬೇಕು. ಆದರೆ ಮಳೆಯಲ್ಲಿ ನಡೆಯುವಾಗ ಒದ್ದೆಯಾಗಲು ಪ್ರಯತ್ನವೇ ಬೇಡ ಅಲ್ಲವೇ? ಅಂತೆಯೇ, ನವರಾತ್ರಿಯಲ್ಲಿ ಧ್ಯಾನ ಮಾಡುವುದಕ್ಕೂ ಬೇರೆ ಸಮಯದಲ್ಲಿ ಧ್ಯಾನಿಸಲು ಪ್ರಾರಂಭ ಮಾಡುವುದಕ್ಕೂ ಬಹಳ ವ್ಯತ್ರ್ಯಾಸವಿದೆ. ನವರಾತ್ರಿಯ ಸಮಯದಲ್ಲಿ ಅಪ್ರಯತ್ನಪೂರ್ವಕವಾಗಿ ಧ್ಯಾನ ಸಾಧ್ಯ ಏಕೆಂದರೆ ನಮ್ಮ ಸುತ್ತಲಿನ ಪರಿಸರದ ಪ್ರಭಾವ ಹಾಗಿರುತ್ತದೆ.
ಒಂದು ಉಪಯುಕ್ತ ಸಲಹೆ:
ಧ್ಯಾನ ಮಾಡಬಯಸುವಿರಾ?
ನವರಾತ್ರಿಯ ಪ್ರತಿ ದಿನ, ಒಂಬತ್ತೂ ದಿನ, ದಿನಕ್ಕೆ ಒಮ್ಮೆ ದೇವಿ ಕವಚಂ ಮತ್ತು ಲಕ್ಷ್ಮಿ ಅಷ್ಟೋತ್ತರ ಕೇಳುತ್ತಾ ಧ್ಯಾನಿಸಿ.