ಬಿ.ಎ. ಪದವೀಧರೆಯಾದ ನನಗೆ ವ್ಯಾಸಂಗವನ್ನು ಮುಂದುವರಿಸಬೇಕೆಂಬ ಉತ್ಕøಷ್ಟವಾದ ಆಕಾಂಕ್ಷೆಯಿದ್ದರೂ ಅದು ಸಾಧ್ಯವಾಗದೆ 1977ರಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಪಾಲಿಗೆ ಬಂದ ಪಂಚಾಮೃತವನ್ನೇ ಆನಂದಿಸಲು ಕಲಿತೆ. ಯಜಮಾನರು, ಮೂರು ಮುದ್ದುಮಕ್ಕಳು, ಪ್ರತಿನಿತ್ಯವೂ ಮನೆಗೆ ಬರುತ್ತಿದ್ದ ಅತಿಥಿ ಅಭ್ಯಾಗತರೆಲ್ಲರನ್ನೂ ಸಂತೋಷವಾಗಿಡಲು ಪಣತೊಟ್ಟು, ಎಲ್ಲಾರೀತಿಯಲ್ಲಿಯೂ ಒಬ್ಬ ಯೋಗ್ಯ ಗೃಹಿಣಿಯಂತೆ ಅಚ್ಚುಕಟ್ಟಾಗಿ ಗೃಹ ಕೃತ್ಯಗಳನ್ನು ನಿರ್ವಹಿಸುತ್ತಿದ್ದೆ. ಪ್ರಾರಂಭದ ದಿನಗಳಲ್ಲಿ ಇದರಲ್ಲಿಯೇ ಸಂತೋಷ, ತೃಪ್ತಿಗಳನ್ನು ಕಂಡುಕೊಳ್ಳುತ್ತಿದ್ದ ನನಗೆ ಕ್ರಮೇಣ ಯಾವುದೋ ಕೊರತೆಯು ಕಾಡಲಾರಂಭಿಸಿತು. “ನನ್ನ ಜೀವನವು ವ್ಯರ್ಥವಾಗಿ ಕಳೆದು ಹೋಗುತ್ತಿದೆ” ಎಂಬ ಮನದಳಲು ಅತೃಪ್ತಿಯಾಗಿ ಕಾಡಿ, ಸಿಡುಕುತನ ಮನೆ ಮಾಡಲಾರಂಭಿಸಿತು.
ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ ಬಳಿಕ, “ನಾನು ಏನನ್ನಾದರೂ ಮಾಡಲೇಬೇಕು” ಎಂಬ ಇಚ್ಛೆಯು ಪ್ರಬಲವಾಗಿ “ಸೌಂದರ್ಯ ತಜ್ಞೆ” ಯ ಕೆಲಸವನ್ನು ಆಯ್ದುಕೊಂಡು, ಅದರಲ್ಲಿ ತರಬೇತಿಯನ್ನು ಪಡೆದುಕೊಂಡೆ. ಶೃಂಗಾರ, ಅಲಂಕಾರ ಮುಂತಾದ ವಿಷಯಗಳಲ್ಲಿ ಚಿಕ್ಕಂದಿನಿಂದಲೂ ನನಗೆ ಉತ್ತಮ ಕೈಚಳಕವಿದ್ದುದರಿಂದ ಹಾಗೂ ನನ್ನ ಬಿಡುವಿನ ವೇಳೆಯು ಸದುಪಯೋಗವಾಗುತ್ತಿದೆ ಎಂಬ ಭಾವನೆಯಿಂದ ಪ್ರಾರಂಭದ ಕೆಲವು ದಿನಗಳಲ್ಲಿ ಈ ಕೆಲಸವು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿತು. ತಾತ್ಕಾಲಿಕವಾಗಿ ಸಂತೋಷವು ದೊರೆತರೂ ಒಳಗಡೆಯ ಅತೃಪ್ತಿಯ ಭಾವವು ಕಡಿಮೆಯಾಗಲಿಲ್ಲ. ಇದರಿಂದಾಗಿ ಮನೆಯಲ್ಲಿ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಅಸಹನೆ, ಕೋಪ-ತಾಪಗಳು ಹೆಚ್ಚಾಗಿ, ಪ್ರತೀ ಸಲ ಭಿನ್ನಾಭಿಪ್ರಾಯಗಳು ಬಂದಾಗ ಒಬ್ಬರು ಮತ್ತೊಬ್ಬರನ್ನು ಜವಾಬ್ದಾರರನ್ನಾಗಿ ಮಾಡಿ ಬೆಟ್ಟು ತೋರಿಸುವುದು ಹಾಗೂ ಇದರಿಂದಾಗಿ ಮನೆಯ ಶಾಂತಿಯು ಕದಡಿ ಹೋಗುವುದು ಸರ್ವೇ ಸಾಮಾನ್ಯವಾಯಿತು. ಮನಸ್ಸಿನಲ್ಲಿ ನಿರಾಶೆ, ದುಃಖ, ಅಭದ್ರತೆಯ ಬಾವನೆಗಳಿಂದಾಗಿ ಸ್ವ-ಅನುಕಂಪ ಹಾಗೂ ಆತ್ಮಗ್ಲಾನಿಗಳು ಹೆಚ್ಚಾದಾಗ ಬೇಗುದಿಯನ್ನು ತಡೆಯಲಾರದೆ ಅಸಹಾಯಕತೆಯಿಂದ ಭಗವಂತನಲ್ಲಿ ಮೊರೆಯಿಡುತ್ತಿದ್ದೆ.
ಈ ರೀತಿ ಜೀವನದ ಜಂಜಾಟದಲ್ಲಿ ಸೋತು ಸುಣ್ಣವಾಗಿ ದುಃಖಿಸುತ್ತಿರುವಾಗ, ಭಕ್ತನ ಹೃದಯಾಂತರಾಳದ ಪ್ರಾರ್ಥನೆಗೆ ಓಗೊಟ್ಟು ಓಡೋಡಿ ಬಂದ ಭಗವಂತನಂತೆ ಪೂಜ್ಯ ಗುರುಗಳು ನನ್ನ ಜೀವನದಲ್ಲಿ ಪ್ರವೇಶಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗದಲ್ಲಿದ್ದ ನನ್ನ ಪತಿ ಡಾ. ಕೆ. ವಿ. ಶೆಣೈಯವರ ಮೂಲಕ ಎ.ಒ.ಯಲ್.ನ ಪ್ರಥಮ ಶಿಬಿರವು ವಿಶ್ವವಿದ್ಯಾಲಯದಲ್ಲಿಯೇ ನಡೆಯುವಂತಾಯಿತು. ಇದರಲ್ಲಿ ಭಾಗವಹಿಸಿ ಸುದರ್ಶನ ಕ್ರಿಯೆ” ಯನ್ನು ಮಾಡಿದಾಗ ಸಿಕ್ಕಿದ ಅನುಭವವು ಅದ್ಭುತವಾದುದು. ಹೊರಲಾರದಷ್ಟು ಭಾರವನ್ನು ಅನಗತ್ಯವಾಗಿ ತಲೆಯ ಮೇಲೆ ಹೊತ್ತುಕೊಂಡು ಒದ್ದಾಡುತ್ತಿರುವಾಗ ಅದನ್ನು ಒಂದೇ ಬಾರಿ ಕೆಳಗಿಳಿಸಿದರೆ ಉಂಟಾಗುವ ಸ್ವಾತಂತ್ರ್ಯದಂತೆ ನಿರಾಳವಾದ ವಿಶ್ರಾಂತಿಯ ಅನುಭವವು ನನಗೆ ದೊರೆಯಿತು. ನಿಜಕ್ಕೂ ನಾನು ಆ ಕ್ಷಣವೇ ಮುಕ್ತಳಾದಂತೆ ಅನಿಸಿತು.
ಅಂದಿನಿಂದ ನನ್ನ ಜೀವನದ ದೃಷ್ಟಿಕೋನವೇ ಬದಲಾಗಿ ಜೀವನಕ್ಕೆ ಹೊಸ ಆಯಾಮವು ಬಂದಿದೆ. ಇದರ ಪ್ರಭಾವದಿಂದ ನಮ್ಮ ಮನೆಯವರು, ಸ್ನೇಹಿತರು, ಬಂಧುಗಳು ಎಲ್ಲರೂ ಶಿಬಿರದಲ್ಲಿ ಭಾಗವಹಿಸಿದ್ದಾರೆ. ನಮ್ಮ ಮಾತುಕತೆಗಳು, ವಿಚಾರ ವಿಮರ್ಶೆ ಎಲ್ಲವೂ ಎ.ಒ.ಯಲ್. ಶಿಬಿರ ಹಾಗೂ ಪೂಜ್ಯ ಗುರುಗಳ ಸುತ್ತವೇ ಹೆಣೆಯಲ್ಪಡಲು ಪ್ರಾರಂಭಿಸಿದ ಕಾರಣ ನಮ್ಮ ಮನೆಯಲ್ಲಿ ಸುಂದರವಾದ ಆಶ್ರಮದ ವಾತಾವರಣವೇ ನಿರ್ಮಾಣವಾಗಿದೆ. ಅನೇಕ ಎ.ಒ.ಯಲ್. ಶಿಕ್ಷಕರ ಒಡನಾಟ, ಸ್ವಾಮಿ ಸೂರ್ಯಪಾದರ ಸಾನಿಧ್ಯ ಹಾಗೂ ಮಾರ್ಗದರ್ಶನ, ಆಗಾಗ ಪೂಜ್ಯ ಗುರುಗಳ ಸೇವೆ ಮಾಡುವ ಸುಯೋಗ- ಇವೆಲ್ಲವುಗಳ ಫಲವಾಗಿ ನನ್ನನ್ನು ಮತ್ತು ನನ್ನ ಯಜಮಾನರನ್ನು 1998 ನವೆಂಬರ್ ತಿಂಗಳಲ್ಲಿ ಪೂಜ್ಯ ಗುರುಗಳು ಎ.ಒ.ಯಲ್. ಶಿಕ್ಷಕರನ್ನಾಗಿ ಮಾಡಿದರು.
ಎ.ಒ.ಯಲ್. ಶಿಕ್ಷಕಿಯಾಗಿ ಸುದರ್ಶನ ಕ್ರಿಯೆ ಶಿಬಿರಗಳನ್ನು ಮಾಡುತ್ತಾ ಸೇವಾ ಮಾರ್ಗದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಷ್ಟು ಸರ್ವ ವಿಧದಲ್ಲೂ ನಮ್ಮೆಲ್ಲರ ಮನದಲ್ಲಿ, ಮನೆಯಲ್ಲಿ, ಮಕ್ಕಳಲ್ಲಿ, ಪರಿಸರದಲ್ಲಿ-ಎಲ್ಲದರಲ್ಲೂ ಅಮೋಘ ಪರಿವರ್ತನೆಯುಂಟಾಗಿ ಜೀವನದಲ್ಲಿ ಹೊಸತನವು ಚಿಗುರಿದಂತೆ ಭಾಸವಾಗಿದೆ. ಇದನ್ನು ಮಾಡಿದ ನಂತರ ನಮಗೆ ಸಮಸ್ಯೆಗಳೇ ಬರಲಿಲ್ಲ. ಅಥವಾ ನಡೆದಾಡುವಾಗ ಜಾಗದಲ್ಲಿ ಕಲ್ಲುಮುಳ್ಳುಗಳೇ ಇರಲಿಲ್ಲವೆಂದು ಇದರ ಅರ್ಥವಲ್ಲ. “ಕಷ್ಟ ಜೀವನದ ಪಾಕ” ಎಂದು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಂತೆ ತೊಂದರೆಗಳು ಬಂದಾಗ ಅದರಲ್ಲಿಯೇ ಸಿಕ್ಕಿಹಾಕಿಕೊಂಡು ಒದ್ದಾಡುವ ಬದಲಿಗೆ ಅದನ್ನು ಸ್ಥೈರ್ಯದಿಂದ ಎದುರಿಸಿ ಹಾಗೆಯೇ ಬಿಟ್ಟು ಮುಂದೆ ಸಾಗುವ ಸಾಮಥ್ರ್ಯವನ್ನು ಪೂಜ್ಯ ಗುರುಗಳು ನಮಗೆ ಕರುಣಿಸಿದ್ದಾರೆ. ಹಿಂದೆ ಇದೇ ರೀತಿಯ ಸನ್ನೆವೇಶಗಳು ಬಂದಾಗ, ಅವುಗಳಲ್ಲಿಯೇ ಸಿಕ್ಕಿಬಿದ್ದು, ಹೊರಳಾಡಿ ದುಃಖಿಸುತ್ತಿದ್ದೆವು.
ಒಂದು ಚಿಕ್ಕ ಘಟನೆ: 2000ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ, ಪೂಜ್ಯ ಗುರುಗಳು ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿಯನ್ನು ನೀಡಿದ್ದರು. ಕೊನೆಯ ಕ್ಷಣದಲ್ಲಿ ಅವರು ಅಲ್ಲಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಕಾರ್ಯಕ್ರಮವು ನಿರ್ಧಾರವಾಯಿತು. ಅವರನ್ನು ಸುಬ್ರಹ್ಮಣ್ಯದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸುವ ವ್ಯವಸ್ಥೆಯನ್ನು ಮಾಡಬೇಕೆಂಬ ಉತ್ಸಾಹದಿಂದ ತಕ್ಷಣವೇ ನಾನು ಮತ್ತು ನನ್ನ ಯಜಮಾನರು ನಮ್ಮ ಮಾರುತಿ ವ್ಯಾನ್ನಲ್ಲಿ ಎಲ್ಲರಿಗಿಂತಲೂ ಮುಂದೆ ಧಾವಿಸಿದೆವು. ಆ ದಿನಗಳಲ್ಲಿ ಇನ್ನೂ ಮೊಬೈಲ್ ಫೋನುಗಳು ಬಂದಿರಲಿಲ್ಲ.
ಇನ್ನೇನು! ಸುಬ್ರಹ್ಮಣ್ಯವನ್ನು ತಲುಪಲು ಸ್ವಲ್ಪವೇ ದೂರವಿರುವಾಗ, ನನ್ನ ಯಜಮಾನರಿಗೆ ಒಂದೇ ಒಂದು ಕ್ಷಣ ಕಣ್ಣು ತೂಗಿದ ಪರಿಣಾಮವಾಗಿ ನಮ್ಮ ವಾಹನವು ಬದಿಯಲ್ಲಿದ್ದ ಗೋಡೆಗೆ ಡಿಕ್ಕಿ ಹೊಡೆದು, ಗಾಜುಗಳೆಲ್ಲಾ ಪುಡಿ, ಪುಡಿಯಾಗಿ ನಾನು ಸೀಟಿನ ಕೆಳಗಡೆ ಕುಸಿದು ಬಿದ್ದೆ. ನನ್ನ ತಲೆ, ಮುಖ, ಕೈ, ಮೈ ಎಲ್ಲಾ ಕಡೆ ಅಸಂಖ್ಯ ಗಾಯಗಳಾಗಿ ರಕ್ತವು ಪ್ರವಹಿಸಲು ಪ್ರಾರಂಭಿಸಿತು.
ಏನಾಯಿತೆಂದು ಅರ್ಥವಾಗುವ ಮೊದಲೇ ಅಲ್ಲಿಗೆ ಬಂದ ಪೂಜ್ಯ ಗುರುಗಳು ನನ್ನನ್ನು ಕೈ ಹಿಡಿದು ಮೇಲಕ್ಕೆತ್ತಿದರು. ಅಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಭಕ್ತಾದಿಗಳಲ್ಲಿದ್ದ ಎಷ್ಟೋ ಜನ ವೈದ್ಯರು ನನ್ನ ಶುಶ್ರೂಷೆಗೆ ತಯಾರಾದರು. ಈ ವೈದ್ಯರ ತಂಡ, ಅಲ್ಲಿಯೇ ಕೆಲವು ಮಾರುಗಳ ದೂರದಲ್ಲಿದ್ದ ಸರಕಾರಿ ಆಸ್ಪತ್ರೆ, ನನ್ನ ಮುಖ, ತಲೆ, ಕೈ, ಮೈ ಎಲ್ಲಾ ಕಡೆ ಗಾಜಿನ ಚೂರುಗಳು ಚುಚ್ಚಿ ರಕ್ತವು ಜಿನುಗುತ್ತಿದ್ದರೂ. . . . . ಹೃದಯಾಂತರಳದಲ್ಲಿದ್ದ. . . ಆ ದಿವ್ಯವಾದ. . . . . ಪ್ರೇಮದ ತರಂಗಗಳು. . . . . ಆನಂದ ಸಾಗರದಲ್ಲಿ ತೇಲಾಡುತ್ತಿದ್ದ . . . . . ನಾ. . . . . ನು. . . . ಎಂಬ ವಿಕಸಿತ ಭಾವ, ಎಲ್ಲವೂ ಮಾಯಾಲೋಕದ ಭ್ರಮೆಯ ಹಾಗೆ ಕಂಡರೂ ಪ್ರತಿಯೊಂದು ಕೂಡಾ ವಾಸ್ತವಿಕತೆ ಹಾಗೂ ನಡೆದ ಘಟನೆಗಳೇ ಹೌದು.
ತಲೆ, ಮೈ, ಕೈ, ಮುಖ ಎಲ್ಲೆಡೆಯೂ ರಕ್ತವು ಹರಿಯುತ್ತಿದ್ದರೂ ಯಾವುದೇ ರೀತಿಯ ನೋವಿನ ಅನುಭವವು ನನಗಿರಲಿಲ್ಲ. ಈಗಲೂ ಆ ಕ್ಷಣದ ಸ್ಮರಣೆಯನ್ನು ಮಾಡಿದರೆ, “ಈ ಭವಸಾಗರದಿಂದ ನನ್ನನ್ನು ಪಾರುಮಾಡಲು ಬಂದ ಆ ಭಗವಂತನೇ ನನ್ನ ಕೈ ಹಿಡಿದು ನನ್ನನ್ನು ಮೇಲಕ್ಕೆತ್ತಿದ್ದಾನೆ” ಎಂದೆನಿಸಿ ಕೃತಜ್ಞತೆಯು ಉಕ್ಕಿ ಬರುತ್ತದೆ.
ಮರುದಿನ ಖಿoeiಟಿg ಮಾಡಿಕೊಂಡು ತಂದ ನಮ್ಮ ವಾಹವನ್ನು ನೋಡಲು ಬಂದ ಇನ್ಸೂರೆನ್ಸ್ ಕಂಪೆನಿಯವರು ವಾಹನವು ನಜ್ಜುಗುಜ್ಜಾದುದನ್ನು ನೋಡಿ. . . “ಮುಂದಿನ ಸೀಟಿನಲ್ಲಿ ಕುಳಿತುಕೊಂಡವರು ಬದುಕಿ ಉಳಿಯಲು ಸಾಧ್ಯವೇ ಇಲ್ಲ” ಎಂಬ ತೀರ್ಮಾನಕ್ಕೆ ಬಂದಿದ್ದರು. ಪರಿಚಯಸ್ಥರಾದ ಅವರು ಸ್ವಲ್ಪ ಅಳುಕಿನಿಂದಲೇ ನಮ್ಮ ಮನೆಯನ್ನು ಪ್ರವೇಶಿಸಿದಾಗ ಅವರ ನಿರೀಕ್ಷೆಯಂತೆ ಅವರನ್ನು ಸ್ವಾಗತಿಸಿದ್ದು ಸ್ಮಶಾನ ಸದೃಶವಾದ ಕರಾಳ ಮೌನವಲ್ಲ; ಅದಕ್ಕೆ ಬದಲಾಗಿ ನಮ್ಮ ಎ.ಒ.ಯಲ್. ಬಳಗದವರ ಸಂತಸದ ಕೇ ಕೇ ಹಾಕಿದ ನಗು. ನಗುನಗುತ್ತಾ ಎಲ್ಲರಿಗೂ ಕಾಫಿ ಸರಬರಾಜು ಮಾಡುತ್ತಿದ್ದ ನನ್ನನ್ನು ಕಂಡ ಅವರ ಮುಖದಲ್ಲಿ ಅಚ್ಚರಿ ಹಾಗೂ ಪ್ರಶ್ನಾರ್ಥಕ ಚಿಹ್ನೆ! ಕುತೂಹಲ ತಡೆಯದೆ “ಎದುರಿನ ಸೀಟಿನಲ್ಲಿ ಯಾರೂ ಇರಲಿಲ್ಲವೇ?” ಎಂದು ಅವರು ಕೇಳಿದಾಗ “ಇವಳಿದ್ದಳು” ಎಂಬುದಾಗಿ ನನ್ನ ಯಜಮಾನರು ನನ್ನೆಡೆಗೆ ಬೆರಳು ತೋರಿಸಿದರು. ಇದನ್ನು ಕೇಳಿ ದಿಗ್ಭ್ರಮೆಗೊಂಡ ಅವರ ಬಾಯಲ್ಲಿ ಮಾತೇ ಹೊರಡಲಿಲ್ಲ.
ಜೀವನದಲ್ಲಿಯೇ ಕುಸಿದು ಬಿದ್ದಿದ್ದ ನನ್ನ ಕೈಯನ್ನು ಆದಿನ ಹಿಡಿದು ಮೇಲಕ್ಕೆತ್ತಿದ್ದ ಗುರುಗಳು ಮತ್ತೆ ಎಂದೂ ನನ್ನ ಕೈ ಬಿಡಲೇ ಇಲ್ಲ. “ನಾ ಕೈಯ ಬಿಟ್ಟರೂ ನೀ ಕೈಯ ಬಿಡದಿರು ನಾರಾಯಣಾ. . . .” ಎಂಬ ಹಾಡಿನಂತೆ, ಆ ನಾರಾಯಣ ಸ್ವರೂಪಿಯಾದ ಸದ್ಗುರು ನನ್ನ ಕೈಯನ್ನು ಭದ್ರವಾಗಿ ಹಿಡಿದುಕೊಂಡು ನನ್ನನ್ನು ಮುನ್ನಡೆಸಿದ್ದಾರೆ. ಹಿಂದೆ ನಾನು ಮಾಡಿದ್ದು ಬಾಹ್ಯ ಸೌಂದರ್ಯವನ್ನು ವೃದ್ಧಿಸುವ ಸೌಂದರ್ಯತಜ್ಞೆಯ ಕೆಲಸ. ಪೂಜ್ಯ ಗುರುಗಳು ಮಾಡುತ್ತಿರುವುದು ಅಂತರಂಗದ ಸೌಂದರ್ಯವನ್ನು ವೃದ್ಧಿಸುವ ಕೆಲಸ. ಇಡೀ ಜಗತ್ತನ್ನೇ ಸುಂದರಗೊಳಿಸಿ, ಪ್ರತಿಯೊಬ್ಬರ ಮುಖದಲ್ಲೂ ಪ್ರಸನ್ನತೆಯ ನಗುವನ್ನು ವೃದ್ಧಿಸಬೇಕೆಂದು ಪಣತೊಟ್ಟಂತಹ ಗುರುಗಳು ನಮ್ಮೆಲ್ಲರ ಕಣ್ಣುಗಳ ಪೊರೆಯನ್ನು ಕಳಚಿ, ಅಂತರಂಗದ ಕದವನ್ನು ಬಡಿದೆಬ್ಬಿಸಿದ್ದಾರೆ. ನನ್ನ ದೃಷ್ಟಿಯನ್ನು ಬಾಹ್ಯ ಸೌಂದರ್ಯದಿಂದ ಅಂತರಂಗದ ಸೌಂದರ್ಯದೆಡೆಗೆ ಹಾಯಿಸುವಂತೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ.
ಇಂದು ನನ್ನನ್ನು “ಉನ್ನತ ಧ್ಯಾನ ಶಿಬಿರ” ಹಾಗೂ “ಸಹಜ ಸಮಾಧಿ ಧ್ಯಾನ ಶಿಬಿರ”ಗಳ ಶಿಕ್ಷಕಿಯನ್ನಾಗಿ ಮಾಡಿ, ಈ ಶರೀರ, ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ, ಚಿತ್ತ-ಎಲ್ಲವನ್ನೂ ಒಂದು ದಿವ್ಯ ಜ್ಞಾನದ ಉಪಕರಣವನ್ನಾಗಿಸಿ ನನ್ನ ಜೀವನವು ಸಾರ್ಥಕವಾಗುವಂತೆ ಮಾಡಿ ಪಾವನಗೊಳಿಸಿದ್ದಾರೆ.
“ನೀನೊಲಿದರೆ ಕೊರಡು ಕೊನರುವುದಯ್ಯ”. . . . . “ಮೂಕಂ ಕರೋತಿ ವಾಚಾಲಂ. . . . ಪಂಗುಂ ಲಂಘುಯತೇ ಗಿರಿಂ. . . . . .” ಎಂಬ ಜ್ಞಾನಿಗಳ ಮಾತುಗಳು ಈ ಜ್ಞಾನದಷ್ಟೇ ಸತ್ಯವಾಗಿರುವಾಗ, ಇಡೀ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳು ಒಂದು ನಿಯಮದಲ್ಲಿ ನಡೆಯುತ್ತಿರುವಾಗ, ನಮ್ಮ ನಿಮ್ಮ ಚಿಕ್ಕ ಚಿಕ್ಕ ವಿಚಾರಗಳು, ಸಮಸ್ಯೆಗಳು, ಬಯಕೆಗಳು . . . ಎಲ್ಲವನ್ನೂ ನಿಭಾಯಿಸುವುದು ಆ ಭಗವಂತನಿಗೆ ದೊಡ್ಡ ವಿಷಯಗಳೇ . . . .?
ಬೇಡುವವರು ತಮ್ಮ ಅಂತರಂಗದ ಆಳದಿಂದ ಪ್ರಾರ್ಥಿಸಿದರೆ ಕೊಡುವವನು ಕೊಟ್ಟೇ ಕೊಡುತ್ತಾನೆ. ಪುಟ್ಟ ಕಂದಮ್ಮನು ಜೀರ್ಣಿಸಿಕೊಳ್ಳುವ ಶಕ್ತಿಗೆ ಸರಿಯಾಗಿ ಅಮ್ಮನಾದವಳು ಆಹಾರವನ್ನು ತಿನ್ನಿಸುವ ಹಾಗೆಯೇ ಅಜ್ಞಾನದಿಂದ ನಾವು ಕೇಳುವ ನಮ್ಮ ಸ್ವಾರ್ಥದ ಬೇಡಿಕೆಗಳನ್ನು ಪೂರೈಸದೆ ಹೋದರೂ ನಮ್ಮ ಒಳಿತಿಗೆ ವೇಕಾದುದನ್ನು ಕೊಟ್ಟೇ ಕೊಡುತ್ತಾನೆ. ಆದುದರಿಂದಲೇ, ಅವನು ಪ್ರೇಮಮಯಿ ಮತ್ತು ಕರುಣಾಮಯಿ. ತನ್ನ ಅನುಗ್ರಹದ ಅಮೃತವರ್ಷಿಣಿಯನ್ನು ಸುರಿಸಿ ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕೈ ಹಿಡಿದು ನಡೆಸಿಕೊಂಡು ಹೋಗುವ ನಮ್ಮ ಪೂಜ್ಯ ಸದ್ಗುರುಗಳೇ ನಮ್ಮ ಮಾತಾ. . . . ಪಿತಾ. . . . ಬಂಧು. . . . ಸಖ. . . . . ಎಲ್ಲವೂ ಆಗಿದ್ದಾರೆ. ಇವರ ಪಾದಕಮಲಗಳಿಗೆ ನನ್ನ ಕೋಟಿ. . . ಕೋಟಿ. . . . ಪ್ರಣಾಮಗಳು.