ನೀವು ನಿತ್ಯವೂ ಧ್ಯಾನವನ್ನು ಅಭ್ಯಾಸ ಮಾಡುತ್ತಿರಬಹುದು. ಆದರೆ ಧ್ಯಾನಕ್ಕೆ ಕುಳಿತಾಗ ನಿಮ್ಮ ಮನಸ್ಸು ವಿಚಾರಗಳ ಲೋಕಕ್ಕೆ ಪಯಣಿಸುವುದನ್ನು ನೀವು ಗಮನಿಸಿದ್ದೀರಾ? ಹೇಗೆ ಧ್ಯಾನ ಮಾಡಬೇಕು ಎನ್ನುವುದನ್ನು ಕಲಿಯುವುದು ಮೊದಲ ಹೆಜ್ಜೆ. ಆದರೆ ನೀವು ಒಂದೊಂದೇ ಮೆಟ್ಟಿಲುಗಳನ್ನೇರುತ್ತ ಉನ್ನತ ಸ್ತರವನ್ನು ತಲುಪಲು ಬಯಸುತ್ತೀರಾ? ಆಳವಾದ ಅನುಭವವನ್ನು ಹೊಂದಲು ಇರುವ ಹೆಚ್ಚಿನ ಮಾರ್ಗಗಳನ್ನು ತಿಳಿದುಕೊಳ್ಳಲು ಇಚ್ಛಿಸುತ್ತೀರಾ?
#1 ಇನ್ನೊಬ್ಬರ ಮುಖದಲ್ಲಿ ನಗುವನ್ನು ತನ್ನಿ
ಬೇರೆಯವರಿಗೆ ಸಹಾಯ ಮಾಡಿದಾಗ ನಿಮಗೆ ಹೇಗೆ ಅನ್ನಿಸುತ್ತದೆ? ಸಂತೋಷವಾಗುತ್ತದೆಯೇ? ತೃಪ್ತಿಯಾಗುತ್ತದೆಯೇ? ನಿಮ್ಮೊಳಗೆ ಏನೋ ಒಂದು ವಿಸ್ತಾರವಾಗುತ್ತಿರುವ ಹಾಗೆ ಧನಾತ್ಮಕ ಶಕ್ತಿಯೊಂದು ಸ್ಫೋಟಿಸುವ ಅನುಭವ ನಿಮಗಾಗುತ್ತದೆಯೇ? ಏಕೆ ಹೀಗೆ ಆಗುತ್ತದೆ ಎಂದು ನಿಮಗೆ ಗೊತ್ತಾ? ಏಕೆಂದರೆ, ನೀವು ಇನ್ನೊಬ್ಬರ ಸೇವೆ ಮಾಡಿದಾಗ, ಇನ್ನೊಬ್ಬರ ಮುಖದಲ್ಲಿ ನಗು ತರುವ ಕೆಲಸ ಮಾಡಿದಾಗ ನಿಮ್ಮ ಸುತ್ತಲೂ ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ, ದಿವ್ಯಕೃಪೆ ನಿಮ್ಮೆಡೆಗೆ ಹರಿದು ಬರುತ್ತದೆ.
ಸೇವೆ ಒಳಿತನ್ನು ತರುತ್ತದೆ ಮತ್ತು ಈ ಒಳಿತೇ ಧ್ಯಾನದಲ್ಲಿ ಆಳವಾದ ಅನುಭವವನ್ನು ಹೊಂದುವಂತೆ ಮಾಡುತ್ತದೆ.
“ನಾನು ಸೇವೆಯಲ್ಲಿ ನಿರತನಾದಾಗ ತೃಪ್ತಿ, ಸಮಾಧಾನದ ಭಾವನೆಯ ನೇರ ಲಾಭ ಪಡೆಯುತ್ತೇನೆ. ಇದರಿಂದ ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ. ನಾನು ಸಂತೋಷ ಹಾಗೂ ನೆಮ್ಮದಿಯಿಂದಿದ್ದಾಗ ನನಗೆ ನಿಶ್ಚಿತವಾಗಿಯೂ ಆಳವಾದ ಧ್ಯಾನದಲ್ಲಿ ತೊಡಗಲು ಸಾಧ್ಯವಾಗುತ್ತದೆ.” ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ - ಶಿಲ್ಪಿ ಮದನ್.
#2 ಮೌನದ ಸದ್ದನ್ನು ಆಲಿಸಿ!
Iಮುಂಜಾವಿನ ಸಮಯ ಬಿಸಿಲುಮಚ್ಚಿನ ಮೇಲೆ ನಿಂತಿದ್ದೀರಿ, ಭವ್ಯವಾದ ಕೆಂಪು ಆಕಾಶವನ್ನು ನಿರುಕಿಸುತ್ತ ಅರುಣೋದಯದ ಸೌಂದರ್ಯಕ್ಕೆ ಸಂಪೂರ್ಣವಾಗಿ ಮಾರುಹೋಗಿದ್ದೀರಿ ಎಂದು ಊಹಿಸಿಕೊಳ್ಳಿ. ಆಳವಾದ ಒಂದು ಮೌನ, ನಿಶ್ಶಬ್ದತೆ ಹಾಗೂ ಸೌಂದರ್ಯದೊಡನೆ ನೀವು ಒಂದಾಗಿಹೋದ ಅನುಭವ ನಿಮಗಾಗುತ್ತಿದೆಯೇ? ಶಬ್ದಗಳಿಗೂ ಮೀರಿದ ಸೌಂದರ್ಯದ ಅನುಭವಕ್ಕೆ - ನಿಮ್ಮನ್ನು ಕೊಂಡೊಯ್ಯುವ. ನಿಮ್ಮ ಮನಸ್ಸು ಎಷ್ಟು ಶಾಂತವಾಗಿದೆ, ತಿಳಿಯಾಗಿದೆ. ಏಕೆ ಹೀಗೆ ಎಂದು ನಿಮಗೆ ಅನ್ನಿಸಿರಬೇಕಲ್ಲವೇ?
ಮೌನದಲ್ಲಿ ವಿಚಾರಗಳ ಪ್ರಮಾಣ ಕಡಿಮೆ ಇದ್ದು ನಿಮ್ಮ ಮನಸ್ಸು ತಿಳಿಯಾಗುತ್ತದೆ.
ಬಹಳಷ್ಟು ಬಾರಿ ನಾವು ಒಂದೇ ಸಮನೆ ಮಾತನಾಡುವಾಗ ಮನಸ್ಸೂ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ.
ನಮ್ಮ ಇಂದ್ರಿಯಗಳು ಮಾಹಿತಿಯನ್ನು ಕಲೆಹಾಕುವುದರಲ್ಲಿ ನಿರತವಾಗಿದ್ದು ಮೇಲಿಂದ ಮೇಲೆ ವಿಚಾರಗಳ ಹಾಗೂ ಅನಿಸಿಕೆಗಳ ಸುರಿಮಳೆಯಾಗುತ್ತದೆ.
ಮೌನವು ಧ್ಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ನೀವು ಮೌನವಾಗಿದ್ದಾಗ ನಿಮ್ಮ ಮನಸ್ಸಿನ ಗತಿ ನಿಧಾನವಾಗುತ್ತದೆ ಹಾಗೂ ಸುಲಭವಾಗಿ ಧ್ಯಾನಕ್ಕೆ ಇಳಿಯುತ್ತದೆ.
ಮೌನ ಹಾಗೂ ಧ್ಯಾನ ಜೊತೆಗೂಡಿರುವ ಅನುಭವಕ್ಕೆ ಒಳಗಾಗುವ ಅತ್ಯಂತ ಸುಲಭ ದಾರಿಯೆಂದರೆ, ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಜೀವನ ಕಲಾ ಕೇಂದ್ರದಲ್ಲಿ ಪ್ರತಿ ವಾರಾಂತ್ಯ ನಡೆಯುವ ಜೀವನ ಕಲೆ ಭಾಗ-೨ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು.
“ಕೆಲವೊಮ್ಮೆ ನನಗೆ ಎಡಬಿಡದ ವಿಚಾರಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಂತೆ ಅನ್ನಿಸುತ್ತದೆ. ಮೌನವನ್ನು ಸಾಧಿಸಿದಾಗ ನಿಧಾನಕ್ಕೆ ಈ ಸುರಿಮಳೆಯ ಹೊಡೆತ ಕಡಿಮೆಯಾಗುತ್ತ ಬಂದು ಆಳವಾದ ಧ್ಯಾನದಲ್ಲಿ ತೊಡಗಲು ಸಾಧ್ಯವಾಗುತ್ತದೆ.” ಎಂದು ಹಿತಾಂಶಿ ಸಚದೇವ್ ಹೇಳುತ್ತಾರೆ.
#3 ಯೋಗ್ಯಾಭಾಸದಿಂದ ನಿಮ್ಮ ಶರೀರಕ್ಕೆ ಮೆರಗು ನೀಡಿ
ಕೆಲವು ದಿನ ಧ್ಯಾನ ಮಾಡುವಾಗ ನಿಮ್ಮ ಮನಸ್ಸು ತುಂಬಾ ಪ್ರಕ್ಷುಬ್ದವಾಗಿರುವುದನ್ನು ಆಳವಾಗಿ ಧ್ಯಾನ ಮಾಡಲು ಸಾಧ್ಯವಾಗದೇ ಇರುವುದನ್ನು ನೀವು ಗಮನಿಸಿರಬಹುದು.
ಕಾರಣ, ದೀರ್ಘಕಾಲದ ಕೆಲಸ ನಿಮ್ಮ ದೇಹಕ್ಕೆ ಬಿರುಸುತನವನ್ನು ಉಂಟು ಮಾಡುತ್ತದೆ ಹಾಗೂ ಇದರಿಂದ ಉಂಟಾಗುವ ನೋವು ನಿಮಲ್ಲಿ ಪ್ರಕ್ಷುಬ್ಧತೆಯನ್ನು ತರುತ್ತದೆ. ಯೋಗಾಸನ ಮಾಡುವುದರಿಂದ ಈ ಬಿರುಸುತನ ನಿವಾರಣೆಯಾಗುವುದರ ಜೊತೆಗೆ ಪ್ರಕ್ಷುಬ್ಧತೆಯಿಂದಲೂ ನೀವು ಮುಕ್ತರಾಗುತ್ತೀರಿ. ಇದರಿಂದ ನಿಮ್ಮ ಮನಸ್ಸೂ ತಿಳಿಯಾಗಿ ಧ್ಯಾನದಲ್ಲಿ ಆಳವಾದ ಅನುಭವ ಹೊಂದಲು ಸಹಾಯ ಮಾಡುತ್ತದೆ.
#4 ನೀವು ಸೇವಿಸುವ ಆಹಾರವನ್ನು ಎಚ್ಚರಿಕೆಯಿಂದ ಗಮನಿಸಿ.
ಕರಿದ ಪದಾರ್ಥಗಳನ್ನು, ಮಾಂಸಾಹಾರವನ್ನು ಸೇವಿಸಿದ ನಂತರ ಧ್ಯಾನದಲ್ಲಿ ತೊಡಗಿದ ದಿನಗಳನ್ನು ಹಾಗೂ ಲಘುವಾದ ಆರೋಗ್ಯಪೂರ್ಣವಾದ ಆಹಾರವನ್ನು ಸೇವಿಸಿದ ನಂತರ ಧ್ಯಾನದಲ್ಲಿ ತೊಡಗಿದ ದಿನಗಳ ಬಗ್ಗೆ ಯೋಚಿಸಿ. ನಿಮ್ಮ ಧ್ಯಾನದಲ್ಲಿ ಆಗುವ ವ್ಯತ್ಯಾಸ ಕಾಣುತ್ತದೆಯಲ್ಲವೇ? ಇದಕ್ಕೆ ನೀವು ಸೇವಿಸುವ ಆಹಾರ ನಿಮ್ಮ ಮನಸ್ಥಿತಿಯ ಮೇಲೆ ನೇರ ಪ್ರಭಾವವನ್ನು ಬೀರುವುದೇ ಕಾರಣ.
ಧ್ಯಾನ ಮಾಡುವವರಿಗೆ ಯುಕ್ತ ಆಹಾರವೆಂದರೆ ಧಾನ್ಯಗಳು, ಹಸಿರು ತರಕಾರಿ, ತಾಜಾ ಹಣ್ಣುಗಳು, ಇತ್ಯಾದಿ- ವಿಶೇಷವಾಗಿ ಲಘು ಹಾಗೂ ಪಚನಕ್ಕೆ ಸುಲಭವಾದ, ‘ಪ್ರಾಣಶಕ್ತಿ’ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ಪದಾರ್ಥಗಳು
#5 ನಿಮ್ಮಷ್ಟಕ್ಕೇ ಹಾಡಿಕೊಳ್ಳಿ
ಬೇರೆ ಬೇರೆ ರೀತಿಯ ಸಂಗೀತವು ನಿಮ್ಮಲ್ಲಿ ಬೇರೆ ಬೇರೆ ತರಹದ ಭಾವವನ್ನು ಉದ್ದೀಪಿಸುವುದನ್ನು ನೀವು ಗಮನಿಸಿದ್ದೀರಾ?
ನಾವು ೯೦% ಅಥವಾ ಹೆಚ್ಚು ಪಾಲು ಆಕಾಶ ತತ್ವದಿಂದ ಮಾಡಲ್ಪಟ್ಟಿದ್ದೇವೆ. ಆದ್ದರಿಂದ ಶಬ್ದವು ನಮ್ಮ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ.
ಸತ್ಸಂಗದಲ್ಲಿ ಪಾಲ್ಗೊಂಡು ಹಾಡುವುದರಿಂದ ಭಾವಶುದ್ಧಿಯಾಗುತ್ತದೆ ಹಾಗೂ ನಿಮ್ಮೊಳಗಿನ ಚೈತನ್ಯವು ವಿಸ್ತಾರವಾಗುತ್ತ, ಹೋಗುವ ಅನುಭವ ನಿಮಗಾಗುತ್ತದೆ. ನಿರಂತರವಾಗಿ ವಟಗುಡುವ ‘ಕ್ಷುದ್ರ ಮನಸ್ಸು’ ಶಾಂತವಾಗುತ್ತದೆ. ನೀವು ಧ್ಯಾನಕ್ಕೆ ತೊಡಗಿದಾಗ ಆಳವಾದ ಅನುಭವವಾಗುತ್ತದೆ.
#6 ನಿತ್ಯವೂ ಧ್ಯಾನ ಮಾಡುವ ಸಮಯವನ್ನು ನಿಗದಿಪಡಿಸಿಕೊಳ್ಳಿ
ಶಿಸ್ತನ್ನು ಪಾಲಿಸುವುದು ಹಾಗೂ ಅಭ್ಯಾಸವನ್ನು ಗೌರವಿಸುವುದು ಧ್ಯಾನದಲ್ಲಿ ಆಳಕ್ಕಿಳಿಯಲು ತುಂಬಾ ಮುಖ್ಯ. ಆದ್ದರಿಂದ ಪ್ರತಿ ನಿತ್ಯವೂ ಧ್ಯಾನ ಮಾಡಬೇಕಾದ ಸಮಯವನ್ನು ನಿಗದಿ ಪಡಿಸಿಕೊಳ್ಳಿ ಹಾಗೂ ಆಳವಾದ ಧ್ಯಾನದ ಅದ್ಭುತ ಅನುಭವಕ್ಕೆ ಒಳಗಾಗಿ.
“ಮೊದಲು, ದಿನದ ಬೇರೆ ಬೇರೆ ಸಮಯದಲ್ಲಿ ನಾನು ಧ್ಯಾನ ಮಾಡುತ್ತಿದ್ದೆ. ಕಳೆದ ಕೆಲ ತಿಂಗಳುಗಳಿಂದ ಪ್ರತಿದಿನ ಮಧ್ಯಾಹ್ನ ಊಟಕ್ಕೂ ಮೊದಲು ಧ್ಯಾನ ಮಾಡುತ್ತಿದ್ದೇನೆ ಹಾಗೂ ಪ್ರತಿದಿನ ನಿಗದಿತ ಸಮಯಕ್ಕೆ ಧ್ಯಾನ ಮಾಡುವುದರಿಂದ ಉತ್ತಮವಾಗಿ ಹಾಗೂ ಆಳವಾಗಿ ಧ್ಯಾನ ಮಾಡಲು ಸಾಧ್ಯವಾಗುತ್ತಿದೆ,” ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ದಿವ್ಯ ಸಚದೇವ್.
ಶ್ರೀ ಶ್ರೀ ರವಿ ಶಂಕರ ಗುರೂಜಿಯವರ ವಿವೇಕ (ಲೋಕಜ್ಞಾನ) ನುಡಿಗಳಿಂದ ಪ್ರೇರಿತ
ಸಹಜ ಸಮಾಧಿ ಧ್ಯಾನ ಶಿಕ್ಷಕಿ ಪ್ರಿಯದರ್ಶಿನಿ ಹರಿರಾಮ್ ಅವರ ಕೊಡುಗೆಯಾಧಾರಿತ