ದಿನದಲ್ಲಿ ಮಾಡಬೇಕಾದ ಆಚರಣೆ, ಅನುಸರಣೆಗೆ “ದಿನಚರ್ಯ” ಎಂದು ಕರೆಯುತ್ತಾರೆ. ದಿನಚರ್ಯೆಯು ಪ್ರಕೃತಿಯ ಚಕ್ರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಬೆಳಗಿನ ಜಾವವು ನಿಮ್ಮ ಇಡೀ ದಿನವನ್ನು ನಿರ್ಧರಿಸುವುದರಿಂದ ಆಯುರ್ವೇದವು ಬೆಳಗಿನ ಜಾವದ ಬಗ್ಗೆ ಹೆಚ್ಚು ಒತ್ತೆಯಿಡುತ್ತದೆ.
ದೇಹ ಮತ್ತು ಮನಸ್ಸಿಗೆ ದಿನನಿತ್ಯದ ಶಿಸ್ತಿದ್ದರೆ ರೋಗನಿರೋಧಕ ಶಕ್ತಿಯು ಬಲಿಷ್ಠವಾಗುವುದಲ್ಲದೆ, ದೇಹದಲ್ಲಿರುವ ತ್ಯಾಜ್ಯಗಳು ಹೊರಕ್ಕೆ ಎಸೆಯಲ್ಪಟ್ಟು ದೇಹವು ಶುದ್ಧಿಯಾಗುತ್ತದೆಂದು ಆಯುರ್ವೇದವು ನಂಬುತ್ತದೆ. ಸರಳವಾದ ದಿನಚರಿಗಳಿಂದ ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತದೆ, ದೋಷಗಳು ಸಮತೋಲನಕ್ಕೆ ಬರುತ್ತವೆ, ರೋಗನಿರೋಧಕ ಶಕ್ತಿಯು ಬಲಿಷ್ಠವಾಗುತ್ತದೆ ಮತ್ತು ಇಡಿ ದಿನವನ್ನು ತಾಜಾತನದಿಂದ ಕಳೆಯಬಹುದು.
ಬೆಳಗಿನ ದಿನದ ದಿನಚರಿಯನ್ನು ಪಾಲಿಸಿದರೆ ಇಡೀ ದಿನವನ್ನು ಸಂತೋಷವಾಗಿ ಕಳೆಯಬಹುದು. ತಾಜಾತನದಿಂದ ಬೆಳಗಿನ ಜಾವವನ್ನು ಆರಂಭಿಸಲು ಕೆಲವು ಸೂಚಿಗಳನ್ನು ಇಲ್ಲಿ ಕೊಡಲಾಗಿದೆ
1. ಬ್ರಹ್ಮ ಮುಹೂರ್ತ
ಬೆಳಿಗ್ಗಿನ ಜಾವ ಸೂರ್ಯೋದಯಕ್ಕೆ ಮುಂಚಿತವಾಗಿ ಒಂದುವರೆ ಗಂಟೆಗೆ ಏಳಬೇಕು. ಇದರಿಂದ ಸೂರ್ಯನ ಲಯದೊಡನೆ ನಾವು ಸ್ಪಂದಿಸಬಹುದು. ಆಯುರ್ವೇದವು ಬೆಳಿಗ್ಗೆ ಏಳಲು “ಬ್ರಹ್ಮಮುಹೂರ್ತವು” ಮಂಗಳಕರವಾದದ್ದು ಎಂದು ಹೇಳುತ್ತದೆ.
“ಬ್ರಹ್ಮಮುಹೂರ್ತ”ವೆಂದರೆ ಬ್ರಹ್ಮದ ಸಮಯದ, ಶುದ್ಧ ಚೈತನ್ಯದ ಸಮಯ”.ಸೂರ್ಯೋದಯದ ಒಂದುವರೆ ಗಂಟೆಗೆ ಮೊದಲು ಆಕಾಶದಲ್ಲಿ ಶಕ್ತಿಯ ಮಟ್ಟದಲ್ಲಿ ದೊಡ್ಡ ಮಾರ್ಪಾಟಾಗುತ್ತದೆ. ಸೂರ್ಯೋದಯದ ಅರ್ಧ ಗಂಟೆಗೆ ಮೊದಲು ವಾತಾವರಣದಲ್ಲಿ ಶಕ್ತಿಯ ಮಟ್ಟ ಎರಡನೆಯ ಸಲ ಏಳುತ್ತದೆ. ಈ ಸಮಯದಲ್ಲಿ ಆಶಾಕಿರಣ, ಸ್ಫೂರ್ತಿ ಮತ್ತು ಶಾಂತಿ ಪ್ರಕಟವಾಗುತ್ತದೆ. ಬ್ರಹ್ಮಜ್ಞಾನವನ್ನು ಪಡೆಯಲು, ಧ್ಯಾನ, ಮನನ ಮತ್ತು ಚಿಂತನೆಯನ್ನು ನಡೆಸಲು ಈ ಸಮಯವನ್ನು ಉತ್ತಮವಾಗಿ ಪರಿಗಣಿಸಲಾಗುತ್ತದೆ. ಪರಮ ಜ್ಞಾನವನ್ನು, ಅನಂತ ಸಂತೋಷವನ್ನು ಈ ಸಮಯದಲ್ಲಿ ಪಡೆಯಬಹುದು. ವಾತಾವರಣವು ಶುದ್ಧವಾಗಿ, ಪ್ರಶಾಂತವಾಗಿರುತ್ತದೆ ಮತ್ತು ನಿದ್ದೆಯಿಂದ ಎದ್ದನಂತರ ಮನಸ್ಸಿಗೆ ಹಿತವೆನಿಸುತ್ತದೆ, ಮನಸ್ಸು ಪ್ರಶಾಂತವಾಗಿರುತ್ತದೆ.
ಈ ಸಮಯದಲ್ಲಿ ಧ್ಯಾನ ಮಾಡಿದರೆ ಮಾನಸಿಕ ಅಭಿವೃದ್ಧಿಯಾಗುತ್ತದೆ, ಸತ್ವಗುಣ ಹೆಚ್ಚುತ್ತದೆ. ಇದರಿಂದ ರಜಸ್ಸು ಮತ್ತು ತಮೊಗುಣಗಳಿಂದ ಉಂಟಾಗುವ ಮನಸ್ಸಿನ ವಿಪರೀತ ಚಟುವಟಿಕೆ ಅಥವಾ ಆಲಸ್ಯ, ಮನಸ್ಸು ರೇಗುವುದು, ಎಲ್ಲವೂ ನಿಂತು ಹೋಗುತ್ತದೆ.
2. ಉಸಿರಿನ ಶಕ್ತಿ
ಯಾವ ಮೂಗಿನ ಹೊಳ್ಳೆಯಿಂದ ಉಸಿರು ಹೆಚ್ಚು ಬಲವಾಗಿ ಹರಿಯುತ್ತಿದೆಯೆಂದು ಗಮನಿಸಿ. ಆಯುರ್ವೇದದ ಪ್ರಕಾರ ಬಲ ಮೂಗಿನಹೊಳ್ಳೆ ಸೂರ್ಯ-ಪಿತ್ತ ಮತ್ತು ಎಡಮೂಗಿನ ಹೊಳ್ಳೆ ಚಂದ್ರ-ಕಫ. ಮೆದುಳಿನ ಬಲಭಾಗವು ಸೃಜನಶೀಲತೆಯನ್ನು ನಿಯಂತ್ರಿಸಿದರೆ, ಎಡಭಾಗವು ತಾರ್ಕಿಕವಾದ ಮಾತಿನ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಸಂಶೋಧನೆಯ ಪ್ರಕಾರ ಎಡಮೂಗಿನ ಹೊಳ್ಳೆಯಲ್ಲಿ ಉಸಿರು ಬಲವಾಗಿ ಹರಿಯುತ್ತಿದ್ದರೆ, ಬಲಭಾಗದ ಮೆದುಳು ಸಕ್ರಿಯವಾಗಿರುತ್ತದೆ. ಉಸಿರು ಬಲ ಮೂಗಿನ ಹೊಳ್ಳೆಯಲ್ಲಿ ಬಲವಾಗಿ ಹರಿಯುತ್ತಿದ್ದರೆ ಮೆದುಳಿನ ಎಡಭಾಗ ಸಕ್ರಿಯವಾಗಿರುತ್ತದೆ.
3. ಸಕಾರಾತ್ಮಕವಾದ ಕಂಪನಗಳು
ನಮ್ಮ ಹಸ್ತಗಳ ರೇಖೆಗಳನ್ನು ನೋಡಿಕೊಂಡು ಸಂಪತ್ತಿನ, ಜ್ಞಾನದ, ಬಲದ ದೇವತೆಗಳನ್ನು ಸ್ಮರಿಸಿಕೊಳ್ಳುವ ನಮ್ಮ ಪ್ರಾಚೀನ ಪದ್ಧತಿಯನ್ನು ಪಾಲಿಸಿ. ನಿಮ್ಮ ಹೆಬ್ಬೆಟ್ಟಿನಿಂದ ಬೆರಳುಗಳ ತುದಿಗಳನ್ನು ವರ್ತುಲವಾದ, ನವಿರಾದ ಲಯದಲ್ಲಿ ತೀಡಿ. ಬಲಗಡೆಗೆ ಗಡಿಯಾರದ ದಿಕ್ಕಿನಲ್ಲಿ ತೀಡಿ. ನಂತರ ಎಡಗಡೆಗೆ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ತೀಡಿ. ಎರಡೂ ಹಸ್ತಗಳ ಬೆರಳ ತುದಿಗಳನ್ನು ಉಜ್ಜಿ. ಬಲ ಮಣಿಕಟ್ಟನ್ನು ಗಡಿಯಾರದ ದಿಕ್ಕಿನೆಡೆಗೆ ಮತ್ತು ಎಡ ಮಣಿಕಟ್ಟನ್ನು ಗಡಿಯಾರದ ವಿರುದ್ಧದ ದಿಕ್ಕಿನೆಡೆಗೆ ತಿರುಗಿಸಿ. ಯಾವ ಮೂಗಿನಹೊಳ್ಳೆಯಲ್ಲಿ ಉಸಿರು ಬಲವಾಗಿ ಹರಿಯುತ್ತಿದೆಯೊ ಆ ಕಡೆಯ ಹಸ್ತಕ್ಕೆ ಮೊದಲು ಮುತ್ತನ್ನು ಕೊಡಿ ನಂತರ ಮತ್ತೊಂದು ಹಸ್ತಕ್ಕೆ ಮುತ್ತನ್ನು ಕೊಡಿ. (ಮುತ್ತು ಕೊಡುವುದರಿಂದ ಶಕ್ತಿಯು ಹರಿಯುತ್ತದೆ. ನಿಮ್ಮ ಹಸ್ತಗಳಿಗೆ ಮುತ್ತನ್ನು ಕೊಡುವುದರಿಂದ ನಿಮ್ಮ ಅಭಿವ್ಯಕ್ತಿಯು ಬಲು ಉತ್ತಮವಾಗಿ ಹರಿಯುತ್ತದೆ). ಎರಡೂ ಹಸ್ತಗಳನ್ನು ಜೋಡಿಸಿ ಉಜ್ಜಿ. ನಂತರ ಹಸ್ತಗಳನ್ನು ನಿಧಾನವಾಗಿ ನಿಮ್ಮ ಮುಖದ ಮೇಲೆ, ತಲೆ, ಭುಜಗಳ ಮೇಲೆ, ತೋಳುಗಳ ಮೇಲೆ ಮತ್ತು ಕಾಲುಗಳ ಮೇಲೆ ಚಲಿಸಿ, ಇಡೀ ದಿನದಲ್ಲಿ ಉಂಟಾಗಬಹುದಾದಂತಹ ನಕಾರಾತ್ಮಕ ಪ್ರಭಾವಗಳನ್ನು ಹೊಡೆದೋಡಿಸುವಂತಹ ಶಕ್ತಿಯ ಆವರಣವನ್ನು ಸೃಷ್ಟಿ ಮಾಡಿಕೊಳ್ಳಿ.
4. ರಕ್ಷಿಸುವ ಮಂತ್ರ
ಸರಳವಾದ, ಆದರೂ ನಿಮಗೆ ರಕ್ಷಣೆ ನೀಡುವಂತಹ ಈ ಬೆಳಗ್ಗಿನ ಜಾವದ ಮಂತ್ರವನ್ನು ಪಠಿಸಿ. ಈ ಮಂತ್ರವನ್ನು ಉಚ್ಚರಿಸಿದ ನಂತರ ಕೆಲ ನಿಮಿಷಗಳು ಖಾಲಿ ಮನಸ್ಸಿನೊಡನೆ ಮೌನವಾಗಿ ಕುಳಿತುಕೊಳ್ಳಿ.
ಕರಾಗ್ರೆ ವಸತೆ ಲಕ್ಷ್ಮೀ
(ಕೈಗಳ ಅಗ್ರಭಾಗದಲ್ಲಿ, ಎಂದರೆ ಬೆರಳ ತುದಿಗಳಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮೀಯು ವಾಸವಾಗಿದ್ದಾಳೆ)
ಕರ ಮಧ್ಯೆ ಸರಸ್ವತಿ
(ಕೈಗಳ ಮಧ್ಯ ಭಾಗದಲ್ಲಿ, ಎಂದರೆ ಹಸ್ತದಲ್ಲಿ ಕಲೆಯ ಮತ್ತು ಕಲಿಕೆಯ ದೇವತೆಯಾದ ಸರಸ್ವತಿಯು ವಾಸವಾಗಿದ್ದಾಳೆ)
ಕರಮೂಲೆ ತು ಗೋವಿಂದ
(ಕೈಗಳ ಕೊನೆಯಲ್ಲಿ ಗೋವಿಂದನು ಅಂದರೆ ಶ್ರೀ ಕೃಷ್ಣನು ವಾಸವಾಗಿದ್ದಾನೆ)
ಪ್ರಭಾತೆ ಕರ ದರ್ಶನಂ
(ಪ್ರಭಾತದ ಸಮಯದಲ್ಲಿ ಕರಗಳನ್ನು ನೋಡುವುದು ಶುಭಕರ)
5. ಸಕಾರಾತ್ಮಕವಾದ ಹೆಜ್ಜೆ
ಯಾವ ಮೂಗಿನ ಹೊಳ್ಳೆಯಲ್ಲಿ ಉಸಿರು ಬಲವಾಗಿ ಹರಿಯುತ್ತಿದೆಯೆಂದು ಪರೀಕ್ಷಿಸಿ, ಆ ಕಡೆಯ ಪಾದವನ್ನು ಹಾಸಿಗೆಯಿಂದ ಕೆಳಗಿರಿಸಿ ನೆಲದ ಮೇಲಿಡಿ.
6. ಶುದ್ಧ ಮಾಡಿಕೊಳ್ಳಿ
ತಣ್ಣೀರಿನಲ್ಲಿ ಶುದ್ಧ ಮಾಡಿಕೊಳ್ಳಿ. ನೀರು ವಿದ್ಯುಚ್ಛಕ್ತಿಯ ಹರಿತಕ್ಕೆ ಸಹಾಯವಾಗಿದ್ದು, ಸೂಕ್ಷ್ಮವಾದ ಚರ್ಮವನ್ನೆಂದಿಗೂ ಪ್ರಚೋದಿಸುವುದಿಲ್ಲ. ಕೈಗಳನ್ನು, ಮುಖವನ್ನು, ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಿರಿ. ಮೂಗನ್ನು, ಹಲ್ಲುಗಳನ್ನು, ನಾಲಿಗೆಯನ್ನು ಶುದ್ಧ ಮಡಿಕೊಳ್ಳಿ.
7. ಧ್ಯಾನ ವ್ಯಾಯಾಮಗಳ ಅಭ್ಯಾಸ
ವಿಶ್ರಮಿಸಿ ಮತ್ತು ಎರಡು ಮೂಗಿನ ಹೊಳ್ಳೆಗಳಲ್ಲಿ ಉಸಿರು ಸಮನಾಗಿ ಹರಿಯುವವರೆಗೂ ಪ್ರಾಣಾಯಾಮವನ್ನು ಮಾಡಿ. ನಿಮ್ಮ ಶಕ್ತಿಯನ್ನು ನಿಮ್ಮ ಹೃದಯದ ಚಕ್ರ ಅಥವಾ ಆಜ್ಞ ಚಕ್ರದ ಮೇಲೆ ಕೇಂದ್ರಿಕರಿಸಿ ಧ್ಯಾನ ಮಾಡಿ. ಬೆಳಗ್ಗಿನ ತಾಜಾ ಗಾಳಿಯಲ್ಲಿ ಚಿಕ್ಕದಾಗಿ, ನಿಧಾನವಾಗಿ ನಡೆಯಿರಿ. ನಿಮ್ಮ ಪರಿಸರದಲ್ಲಿ ಸರಳವಾದ, ಮನಸ್ಸಿಗೆ ಇಂಪನ್ನು ನೀಡುವ ದೃಶ್ಯಾವಳಿಗಳಿರಲಿ ಬಿಳಿಯಾದ, ತಾಜಾ ಆದ, ಸುಗಂಧಯುತವಾದ, ತಿಳಿಯಾದ ಬಣ್ಣಗಳುಳ್ಳ ಹೂವುಗಳಿರಲಿ.
ಸೂರ್ಯನಮಸ್ಕಾರದಂತಹ ವ್ಯಾಯಾಮಗಳನ್ನು ಮಾಡಿ ಮತ್ತು ನಾಡಿಶೋಧನ ಪ್ರಾಣಾಯಾಮದಂತಹ ಉಸಿರಾಟದ ಪ್ರಕ್ರಿಯೆಗಳನ್ನು ಮಾಡಿ. ಆದರೆ ಈಜಬಹುದು ಮತ್ತು ನಡೆಯಲೂಬಹುದು. ಬೆಳಗ್ಗಿನ ಜಾವ ಮಾಡುವ ಆಸನಗಳು ದೇಹ, ಮನಸ್ಸಿನ ಜಡತೆಯನ್ನು ನಿವಾರಿಸಿ, ಜೀರ್ಣದ ಬೆಂಕಿಯನ್ನು ಬಲಿಷ್ಠಗೊಳಿಸಿ, ದೇಹದ ಕೊಬ್ಬನ್ನು ಕರಗಿಸುವುದರಿಂದ ನಿಮಗೆ ಹಗುರವಾದ ಅನುಭವ ಕೊಡುತ್ತದೆ ಮತ್ತು ದೇಹದಲ್ಲಿ ಒಳ್ಳೆಯ ಪ್ರಾಣವಿರುವುದರಿಂದ ನಿಮ್ಮಲ್ಲಿ ಸಂತೋಷವನ್ನೂ ಉಂಟು ಮಾಡುತ್ತದೆ. ಆದರೆ ಒತ್ತಡಕರವಾದ ವ್ಯಾಯಾಮಗಳನ್ನು ಮಾಡುವ ಬದಲಾಗಿ, ನಿಮ್ಮ ಸಾಮಥ್ರ್ಯದ ಅರ್ಧ ಅಥವಾ ಕಾಲುಭಾಗದಷ್ಟು ವ್ಯಾಯಾಮ ಮಾಡುವುದು ಒಳ್ಳೆಯದು.
8.ನಿಮ್ಮ ಬಗ್ಗೆ ಗಮನಕೊಡಿ
ದೇಹಕ್ಕೆ ಎಳ್ಳೆಣ್ಣೆಯ, ಅಭ್ಯಂಗವನ್ನು ಮಾಡಿಕೊಳ್ಳಿ. ತಲೆಯನ್ನು, ನೆತ್ತಿಯನ್ನು, ತಲೆಯ ಇಬ್ಬದಿಗಳನ್ನು, ಕೈಗಳನ್ನು, ಪಾದಗಳನ್ನು 2-3 ನಿಮಿಷಗಳವರೆಗೆ ತೀಡಿದರೆ ಸಾಕು.
9. ಸರಿಯಾದ ರೀತಿಯಲ್ಲಿ ಸ್ನಾನ ಮಾಡಿ
ಬಹಳ ಬಿಸಿಯಾಗಿರದ ಅಥವಾ ಬಹಳ ತಣ್ಣಗೂ ಇರದಂತಹ ನೀರಿನಲ್ಲಿ ಸ್ನಾನ ಮಾಡಿ.
10. ಮಧ್ಯಾಹ್ನದ ವೇಳೆ
ಮಧ್ಯಾಹ್ನದ ಊಟವನ್ನು 12 ರಿಂದ 1 ಗಂಟೆಯೊಳಗೆ ಮಾಡಬೇಕು, ಏಕೆಂದರೆ ಆ ಸಮಯದಲ್ಲಿ ಜೀರ್ಣಶಕ್ತಿಯ ಸಾಮಥ್ರ್ಯ ಹೆಚ್ಚಾಗಿರುತ್ತದೆ. ಆಯುರ್ವೇದದ ಪ್ರಕಾರ ಮಧ್ಯಾಹ್ನದ ಊಟವು ದಿನದ ಇತರ ಸಮಯಗಳಲ್ಲಿ ತಿನ್ನುವುದಕ್ಕಿಂತಲೂ ಭಾರಿಯಾಗಿರಬೇಕು. ಊಟದ ನಂತರ ನಡೆದು, ಊಟದ ಜೀರ್ಣದ ಪ್ರಕ್ರಿಯೆಯಲ್ಲಿ ಸಹಾಯ ಮಾಡಿ. ಅಲ್ಪಾವಧಿಗಿಂತಲೂ ಹೆಚ್ಚಾಗಿ ನಿದ್ದೆ ಮಾಡಬೇಡಿ, ಏಕೆಂದರೆ ಆಯುರ್ವೇದವು ಹಗಲ ಹೊತ್ತಿನ ನಿದ್ದೆ ಬೇಡವೆನ್ನುತ್ತದೆ.
11. ಸಂಧ್ಯಾವೇಳೆ
ಹಗಲು ಮತ್ತು ರಾತ್ರಿಯ ನಡುವೆ ಇದು ವಿಶಿಷ್ಟವಾದ ಸಮತೋಲನವನ್ನು ಉಂಟು ಮಾಡುವ ಸಮಯ. ಸಂಧ್ಯಾ ಪ್ರಾರ್ಥನೆಗಳನ್ನು, ಧ್ಯಾನವನ್ನು ಮಾಡಲು ಇದು ಉತ್ತಮವಾದ ಸಮಯ.
12. ರಾತ್ರಿಯ ಊಟ
ರಾತ್ರಿಯ ಊಟವನ್ನು ಸಂಜೆ 6-7 ಗಂಟೆಯೊಳಗೆ ತೆಗೆದುಕೊಳ್ಳಬೇಕು ಮತ್ತು ಇದು ಮಧ್ಯಾಹ್ನದ ಊಟಕ್ಕಿಂತಲೂ ಹಗುರವಾಗಿರಬೇಕು. ಮಲಗುವ ಮೂರು ಗಂಟೆಗಳಿಗೆ ಮೊದಲು ರಾತ್ರಿಯ ಊಟವನ್ನು ಮಾಡಿದರೆ ಆಹಾರವು ಜೀರ್ಣವಾಗಲು ಸಾಕಷ್ಟು ಸಮಯ ಸಿಗುತ್ತದೆ. ರಾತ್ರಿಯ ಊಟವಾದ ತಕ್ಷಣ ಭಾರಿ ಹೊಟ್ಟೆಯೊಡನೆ ಮಲಗುವುದು ಬೇಡ. 10-15 ನಿಮಿಷಗಳವರೆಗೆ ನಡೆದು ನಿಮ್ಮ ಜೀರ್ಣದ ಪ್ರಕ್ರಿಯೆಗೆ ಪುಷ್ಟಿಯನ್ನು ನೀಡಿ.
13. ಮಲಗುವ ವೇಳೆ
ರಾತ್ರಿ 10.30ಯೊಳಗೆ ಮಲಗುವುದು ಬಲು ಸೂಕ್ತ. ವ್ಯವಸ್ಥೆಯನ್ನು ಪ್ರಶಾಂತವಾಗಿ ಇಡಲು ಪಾದಗಳು, ಇಮ್ಮಡಿಗಳನ್ನು ತೀಡಿ, ನಂತರ ಮಲಗಿ.
- -ಡಾ|| ನಿಶಾ ಮಣಿಕಂಠನ್, ಹಿರಿಯ ಶಿಕ್ಷಕರು,ತಜ್ಞರು - ಶ್ರೀ ಶ್ರೀ ಆಯುರ್ವೇದ