ದಂಪತಿಗಳೇಕೆ ಧ್ಯಾನವನ್ನು ಮಾಡಲೇಬೇಕು?

ಪ್ರಾಚೀನ ವೈದಿಕ ಕಾಲದಲ್ಲಿ ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಮಾಡಲು, ದಂಪತಿಯಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡುತ್ತಿರಲಿಲ್ಲ. ಒಬ್ಬರೇ ಆಧ್ಯಾತ್ಮಿಕ ಅಭ್ಯಾಸವನ್ನು ಮಾಡಿದರೆ ಅಸಮತೋಲನ ಉಂಟಾಗುತ್ತದೆಂದೂ, ಆದ್ದರಿಂದ ಮದುವೆಯಾಗಿದ್ದರೆ ದಂಪತಿಗಳಿಬ್ಬರೂ ಆಧ್ಯಾತ್ಮಿಕ ಅಭ್ಯಾಸಗಳ ಭಾಗವಾಗಿರಬೇಕೆಂಬ ನಿಯಮವನ್ನು ಮಾಡಿದ್ದರು. ಒಬ್ಬರು ಮಾತ್ರ ಅಭ್ಯಾಸದಲ್ಲಿ ತೊಡಗಿ, ಮತ್ತೊಬ್ಬರು ಅಭ್ಯಾಸವನ್ನು ಮಾಡದಿದ್ದರೆ, ಒಬ್ಬರು ಮಾತ್ರ ಬೆಳೆಯುತ್ತಾರೆ, ಮತ್ತೊಬ್ಬರ ಬೆಳವಣಿಗೆಯಾಗುವುದಿಲ್ಲ ಎಂಬ ನಂಬಿಕೆ ಬಲವಾಗಿತ್ತು. ದಂಪತಿಗಳಿಬ್ಬರೂ ಜೊತೆಯಾಗಿ ಭಾಗವಹಿಸಿದರೆ ಇಬ್ಬರೂ ಒಂದಾಗಿ ಮುನ್ನಡೆಯುತ್ತಾರೆಂಬ ನಂಬಿಕೆಯಿತ್ತು. ಇಲ್ಲವಾದರೆ ಒಬ್ಬರು ತೃಪ್ತರಾಗುತ್ತಾರೆ, ಮತ್ತೊಬ್ಬರು ಅತೃಪ್ತರಾಗಿಯೇ ಉಳಿಯುತ್ತಾರೆ ಮತ್ತು ದಾಂಪತ್ಯ ಜೀವನದಲ್ಲಿ ಕಲಹವುಂಟಾಗುತ್ತದೆ. ಆದ್ದರಿಂದ ನಿಯಮದ ಪ್ರಕಾರ ಇಬ್ಬರೂ ಜೊತೆಯಾಗಿ ಭಾಗವಹಿಸಬೇಕಿತ್ತು.

ಈ ನಿಯಮದ ಸೌಂದರ್ಯವೆಂದರೆ, ಇದು ಕೇವಲ ಪೂಜಾ ಪದ್ಧತಿಗಳಲ್ಲಿ ಅಥವಾ ಪೂಜಾ ವಿಧಾನಗಳಲ್ಲಿ ಮಾತ್ರ ಅನ್ವಯಿಸದೆ, ದಿನನಿತ್ಯದ ಪ್ರಾರ್ಥನೆಗಳಿಗೂ, ಸಂಭ್ರಮಗಳಿಗೂ ಇದು ಅನ್ವಯಿಸುತ್ತದೆ. ಈಗ ಅನೇಕ ದಂಪತಿಗಳು ಧ್ಯಾನದ ಅಭ್ಯಾಸವನ್ನು, ತಾವಿಬ್ಬರೂ ಜೊತೆಗಿರುವ ಸಮಯವೆಂದು ಪರಿಗಣಿಸುತ್ತಾರೆ ಮತ್ತು ಅದರ ಲಾಭಗಳನ್ನು ಸಾರಿ ಹೇಳುತ್ತಾರೆ.

ಗುರುದೇವ್ ಶ್ರೀ ಶ್ರೀ ರವಿಶಂಕರರು, “ಪ್ರತಿಯೊಂದು ಆತ್ಮಕ್ಕೂ ಕ್ಷೀಣಿಸದಂತಹ ಸಂತೋಷಕ್ಕಾಗಿ ಮತ್ತು ವಿಕೃತವಾಗದಂತಹ ಪ್ರೇಮಕ್ಕಾಗಿ ಹುಡುಕುವ ಸಹ ಪ್ರವೃತ್ತಿಯಿರುತ್ತದೆ. ಇದನ್ನು ಧ್ಯಾನದ ಮೂಲಕ ಪಡೆಯಬಹುದು” ಎನ್ನುತ್ತಾರೆ.

ಜೊತೆಯಾಗಿ ನಾವು ಧ್ಯಾನ ಮಾಡುತ್ತೇವೆ

ಧ್ಯಾನದ ಅಭ್ಯಾಸದಿಂದ ಅನೇಕ ಲಾಭಗಳುಂಟಾಗುತ್ತವೆ :-

1) ಸಹಜ ಸಮಾಧಿ ಧ್ಯಾನದಂತಹ ಧ್ಯಾನದ ಪ್ರಕ್ರಿಯೆಗಳು ಸೂಕ್ಷ್ಮವಾದ ಶಕ್ತಿಯನ್ನು ಹೊಂದಿರುತ್ತವೆ. ಈ ಪ್ರಕ್ರಿಯೆಗಳು ಉಂಟು ಮಾಡುವ ಪರಿವರ್ತನೆಯು ಬಹಳ ವ್ಯಾಪಕವಾದ ಪರಿಣಾಮವನ್ನು ಉಂಟು ಮಾಡುತ್ತವೆ.

2) ಧ್ಯಾನ ಮಾಡುವವರೊಳಗೆ ಎಷ್ಟು ಗಹನವಾದ ಸಮತೋಲನವನ್ನು ತರುತ್ತದೆಯೆಂದರೆ, ಹೆಮ್ಮೆಯ, ಅಹಂಕಾರದ ಅಥವಾ ಸಾಧನೆಯ ಪ್ರದರ್ಶನವನ್ನು ತಡೆಯುತ್ತದೆ ಮತ್ತು ಬೇರ್ಪಡಿಕೆಯ ಭಾವವನ್ನು ಮತ್ತು ವ್ಯತ್ಯಾಸಗಳನ್ನು ಕ್ಷೀಣಿಸುತ್ತದೆ.

3) ಧ್ಯಾನದ ಅಭ್ಯಾಸದಿಂದ ಸಂಬಂಧಗಳಲ್ಲಿ ಒತ್ತಡ ಹೆಚ್ಚುವುದಿಲ್ಲ. ಒಬ್ಬರು ಧ್ಯಾನ ಮಾಡುತಲಿದ್ದರೆ ಮತ್ತೊಬ್ಬರು ಅದರಿಂದ ಸ್ಫೂರ್ತಿ ಪಡೆಯುತ್ತಾರೆ.

4)  ಅಭ್ಯಾಸ ಮುಂದುವರಿಸುತ್ತಿದ್ದರೆ ಹಿತವಾದ ಭಾವನೆ ಹೆಚ್ಚಾಗಿ, ದಂಪತಿಗಳು ಜೊತೆಯಾಗಿ ಧ್ಯಾನ ಮಾಡಲು ಆರಂಭಿಸುತ್ತಾರೆ. ದಂಪತಿಗಳು ಜೊತೆಯಾಗಿ ಧ್ಯಾನ ಮಾಡಿದಾಗ ಒಳಗಿನ ಹಾಗೂ ಹೊರಗಿನ ಶಕ್ತಿಯಲ್ಲಿ ಐಕ್ಯತೆ ಉಂಟಾಗುತ್ತದೆ, ಪ್ರಶಾಂತತೆಯ ಭಾವನೆ ಮತ್ತು ಏಕತೆಯ ಭಾವನೆ ಉಂಟಾಗುತ್ತದೆ. ಘರ್ಷಣೆಗಳು ಮಾಯವಾಗುತ್ತವೆ.

5) ಅಂತರಾಳದಿಂದ ಉಕ್ಕುವ ಸಂತೋಷವು ಸುತ್ತಲೂ ಹರಡುತ್ತದೆ, ಕೆಲಸದ ಕ್ಷೇತ್ರಕ್ಕೂ ಹರಡುತ್ತದೆ, ವೈಯಕ್ತಿಕ ಜೀವನದಲ್ಲೂ ಕಾಣಿಸಿಕೊಳ್ಳಲಾರಂಭಿಸುತ್ತದೆ, ಸಂತೋಷದ ಸಹಜ ಸ್ವಭಾವವಾಗಿರುವ ಹಂಚಿಕೊಳ್ಳುವಿಕೆ ಮತ್ತು ಮತ್ತೊಬ್ಬರಿಗೂ ಕಾಣಿಕೆಯನ್ನು ನೀಡುವ ಪ್ರವೃತ್ತಿ ಹೆಚ್ಚುತ್ತದೆ, ಮತ್ತೊಬ್ಬರ ಮೇಲೆ ತಗಾದೆ ಮಾಡುವ ಪ್ರವೃತ್ತಿ ಮತ್ತು ಮತ್ತೊಬ್ಬರಿಂದ ತೆಗೆದುಕೊಳ್ಳುವ ಪ್ರವೃತ್ತಿ ಕುಗ್ಗುತ್ತದೆ. ಕೊಡುವ ಪ್ರವೃತ್ತಿ ಹೆಚ್ಚುತ್ತದೆ.

ಇಂತಹ ಸಂಬಂಧವು ಸದಾ ಪೆÇೀಷಿತವಾಗುತ್ತದೆ. ಕೆಲ ವರ್ಷಗಳಿಂದ ಜೊತೆಯಾಗಿ ಧ್ಯಾನ ಮಾಡುತ್ತಿರುವ ದಂಪತಿಗಳು ಹಂಚಿಕೊಂಡಿರುವ ಅನುಭವವಿದು.