ನಮ್ಮ ಅಪಾರ್ಟ್ಮೆಂಟಲ್ಲಿ ಎರಡು ಬೋರ್ವೆಲ್ ಇವೆ, ಮೂರು ದಿನಕ್ಕೊಮ್ಮೆ ಕಾವೇರಿ ವಾಟರ್ ಬರತ್ತೆ. ಮಳೆಗಾಲನಾದ್ರೂ ಬರಲಿ, ಬೇಸಿಗೆನಾದ್ರೂ ಬರಲಿ, ಚಳಿಗಾಲವಾದರೂ ಇರಲಿ ನಮಗಂತೂ ತೊಂದ್ರೆ ಇಲ್ಲ. ಇಪ್ಪತ್ನಾಕು ತಾಸೂ ನೀರಿರತ್ತೆ" ಅಂತ ಬೀಗುತ್ತ ಮಾತಾಡುತ್ತಿರುವವರನ್ನು ನೀವು ಕೇಳಿರಬಹುದು. ಅವರಿಗೆ ವರ್ತಮಾನದಲ್ಲಷ್ಟೇ ನಂಬಿಕೆ, ಭವಿಷ್ಯದ ಮೇಲಿಲ್ಲ, ಅದರ ಬಗ್ಗೆ ಚಿಂತೆಯೂ ಇಲ್ಲ. ಕಾಂಕ್ರೀಟ್ ಕಾಡಿನಲ್ಲಿ ನಾಯಿ ಕೊಡೆಗಳಂತೆ ಏಳುತ್ತಿರುವ ಅಪಾರ್ಮೆಂಟುಗಳು, ಮಳೆಗಾಲದಲ್ಲೇ ಒಣಗುಡುತ್ತಿರುವ ಕೆರೆಗಳು, ಮಳೆನೀರು ಕೊಯ್ಲು ಇರದ ಮನೆಗಳು, ಕಣ್ಮರೆಯಾಗುತ್ತಿರುವ ಗಿಡಮರಗಳು, ಭೂಮಿಯನ್ನು ಕಂಡಲ್ಲಿ ಬಗೆಯುತ್ತಿರುವ ಬೋರ್ವೆಲ್ಲುಗಳು, ಕಾಣೆಯಾಗುತ್ತಿರುವ ಅಂತರ್ಜಲ, ಬತ್ತಿಹೋಗಿರುವ ತಿಪ್ಪಗೊಂಡನಹಳ್ಳಿ ಜಲಾಶಯ... ಇನ್ನು ಮಳೆ ಕೈಕೊಟ್ಟು ಕಾವೇರಿ ಬರಿದಾದರಂತೂ ಗೋವಿಂದಾ ಗೋವಿಂದಾ! ಬೆಂಗಳೂರಿನ ಹಲವಾರು ಜನರಿಗಾಗಲಿ, ಬಿಸ್ಲೇರಿ ಕುಡಿಯುವ ರಾಜಕಾರಣಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಮುಂದೆ ಬೆಂಗಳೂರು ಅನುಭವಿಸಲಿರುವ ನೀರಿನ ಬವಣೆಯ ಕಾಳಜಿ ಇದೆಯಾ? ಸರಕಾರ ಕಳಿಸುವ ನೀರಿನ ಟ್ಯಾಂಕರ್ ಬಂದ ಕೂಡಲೆ ಗುದ್ದಾಡಿ ಬಿಂದಿಗೆಗಳನ್ನು ಹಿಡಿಯುವ ಜನರಿಗೆ ಮಾತ್ರ ಇದರ ಅರಿವಿರುತ್ತದೆ. ಅಲ್ಲಲ್ಲಿ ಹಾಳುಬಿದ್ದಿರುವ ಕೆರೆಗಳಿಗೆ ಮರುಜೀವ ಕೊಡುವ, ಮರಗಳನ್ನು ನೆಡುವ ಕಾರ್ಯಗಳು ನಡೆಯುತ್ತಿವೆಯಾದರೂ ಅದರಿಂದ ಆಗುವ ಲಾಭಗಳು ಅಷ್ಟಕಷ್ಟೆ.
ಹೀಗೆ ಬೆಂಗಳೂರು ಕೈಕಟ್ಟಿ ಕುಳಿತಿರುವಾಗ, ಬೆಂಗಳೂರಿನ ಸುತ್ತಲಿನ ಹಳ್ಳಿಗಳಲ್ಲಿ ಸದ್ದಿಲ್ಲದೆ ನೀರಿನ ಕ್ರಾಂತಿ ನಡೆಯುತ್ತಿದೆ. ಜೀವಸೆಲೆ ನೀರಿನ ಬೆಲೆ ಏನು ಎಂಬುದು ಪಟ್ಟಣದವರಿಗಿಂತ ಹಳ್ಳಿಗರು ಬೇಗನೆ ಅರ್ಥಮಾಡಿಕೊಂಡಿದ್ದಾರೆ. ಅವರ ಸಹಕಾರದಿಂದ ಅಲ್ಲಿನ ಅಂತರ್ಜಲ ಪುಟಿದೇಳುತ್ತಿದೆ, ಕಲ್ಯಾಣಿಗಳು ನಳನಳಿಸುತ್ತಿವೆ, ಕೆರೆಗಳು ಉಡಿ ತುಂಬಿಸಿಕೊಳ್ಳುತ್ತಿವೆ, ಕೃತಕವಾಗಿ ನಿರ್ಮಿಸಲಾಗಿರುವ ಬಾವಿಗಳು ಬಾಯಾರಿದ ಭೂಮಿಯನ್ನು ತಣಿಸುತ್ತಿವೆ. ಇದು ಸಾಧ್ಯವಾಗಿದ್ದು ಆರ್ಟ್ ಆಫ್ ಲಿವಿಂಗ್ ಆರಂಭಿಸಿರುವ 'ಕುಮುದ್ವತಿ ನೀರು ಪುನರುಜ್ಜೀವನ' ಯೋಜನೆಯಿಂದಾಗಿ. ಮೈನ್ ಮತ್ತು ಜಿಯಾಲಜಿ ಇಲಾಖೆಯ ಮಾಜಿ ನಿರ್ದೇಶಕ ಡಾ. ಲಿಂಗರಾಜು ಅವರ ನೇತೃತ್ವದಲ್ಲಿ ಕಟ್ಟಿರುವ ಸ್ವಯಂಸೇವಕರ ತಂಡ ನೀರಿನ ಕ್ರಾಂತಿಗೆ ನಾಂದಿ ಹಾಡಿದೆ. ಮಾ.20 'ವಿಶ್ವ ನೀರಿನ ದಿನ' ಈ ಯೋಜನೆಯ ಮತ್ತೊಬ್ಬ ರೂವಾರಿ 36 ವರ್ಷದ ಚಿದಾನಂದ ನಾಗರಾಜ್ ಅವರು ಅವರು ಕೈಗೆತ್ತಿಕೊಂಡಿರುವ ಯೋಜನೆಯ ಕುರಿತು ಒನ್ಇಂಡಿಯಾ ಜೊತೆ ಮಾತನಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಬಳಿಯಿರುವ ಶಿವಗಂಗೆಯ ಬೆಟ್ಟದಲ್ಲೆಲ್ಲೋ ಹುಟ್ಟಿ ಗುಪ್ತಗಾಮಿನಿಯಾಗಿ ಹರಿಯುತ್ತ ತಿಪ್ಪಗೊಂಡನಹಳ್ಳಿ ಒಡಲನ್ನು ತುಂಬುತ್ತಿದ್ದ ಕುಮುದ್ವತಿ, ಇಂದು ಹೆಸರು ಕೂಡ ನೆನಪಿನಲ್ಲುಳಿಯದ ಹಾಗೆ ನಾಮಾವಶೇಷವಾಗಿ ಹೋಗಿದ್ದಾಳೆ. ಒಂದಾನೊಂದು ಕಾಲದಲ್ಲಿ ಬೆಂಗಳೂರಿನ ಶೇ.60 ಜನರ ಬೊಗಸೆಗೆ ನೀರು ಹಾಕುತ್ತಿದ್ದ, ಮಾಗಡಿಯಲ್ಲಿರುವ ತಿಪ್ಪಗೊಂಡನಹಳ್ಳಿ ಕೆರೆ ಗತಕಾಲದ ವೈಭವ ನೆನಪಿಸಿಕೊಳ್ಳುತ್ತ ಕುಮುದ್ವತಿ ಮತ್ತು ಅರ್ಕಾವತಿ ಕಣ್ಣೀರು ಸುರಿಸುತ್ತಿವೆ. ಗತಕಾಲದ ವೈಭವ ಏನೇ ಇರಲಿ, ಕುಮುದ್ವತಿ ಹೆಸರಿನಲ್ಲಿ ಬತ್ತುತ್ತಿರುವ ನೀರಿನ ಸೆಲೆಗೆ ಮರುಜೀವ ಕೊಡುವ, ತಿಪ್ಪಗೊಂಡನಹಳ್ಳಿ ಕೆರೆ ತುಂಬಿಸುವ ಮತ್ತು ಎಲ್ಲಾಕಾಲಕ್ಕೂ ಗ್ರಾಮಸ್ಥರಿಗೆ ನೀರನ್ನು ಒದಗಿಸುವ ಕಾರ್ಯ 2013ರ ಫೆಬ್ರವರಿಯಿಂದ ನಡೆಯುತ್ತಿದೆ. ಇದಕ್ಕಾಗಿ ಕುಮುದ್ವತಿ ನದಿಪಾತ್ರದಲ್ಲಿ ಬರುವ ಬೆಂಗಳೂರು ಗ್ರಾಮಾಂತರದ ನೆಲಮಂಗಲ, ಮಂಡ್ಯದ ನಾಗಮಂಗಲ ಮತ್ತು ರಾಮನಗರ ಜಿಲ್ಲೆಯ ಮಾಗಡಿ ಗ್ರಾಮ ಸೇರಿದಂತೆ ಒಟ್ಟು 278 ಹಳ್ಳಿಗಳನ್ನು ಈ ಯೋಜನೆಗಾಗಿ ಆಯ್ದುಕೊಳ್ಳಲಾಗಿದೆ.
ಚಿದಾನಂದ ನಾಗರಾಜು ಅವರು ಹೇಳುವ ಹಾಗೆ, ಈ ಯೋಜನೆ ಕೂಡ ಸುಲಭದ್ದಾಗಿರಲಿಲ್ಲ. ಮೊದಲನೆಯದಾಗಿ ಗ್ರಾಮಸ್ಥರ ಮನವೊಲಿಸಿ ಅವರಲ್ಲಿ ಜಾಗೃತಿ ಮೂಡಿಸುವುದು ಸವಾಲಿನದಾಗಿತ್ತು. ಇಸ್ರೋ ಸಂಸ್ಥೆ ನೀಡಿರುವ ಚಿತ್ರಗಳು, ಎನ್‌ಜಿಓಗಳು, ಗ್ರಾಮ ಪಂಚಾಯತಿ ಸಹಾಯದಿಂದ ಯೋಜನೆಗೆ ಚಾಲನೆ ನೀಡಲಾಗಿದೆ. ಅಂತರ್ಜಲ ನೀರನ್ನು ರಿಚಾರ್ಜ್ ಮಾಡುವ ನಿಟ್ಟಿನಲ್ಲಿ ಬಾವಿಗಳನ್ನು ನಿರ್ಮಿಸುವ, ಕೆರೆಗಳ ಹೂಳೆತ್ತುವ, ಮಣ್ಣಿನ ಸವಕಳಿ ತಪ್ಪಿಸಲು ಗಿಡಗಳನ್ನು ನೆಡುವ ಕಾರ್ಯ ಶೇ.25ರಷ್ಟು ಪೂರ್ತಿಯಾಗಿದೆ. ಸುಮಾರು 500ಕ್ಕೂ ಹೆಚ್ಚು ಸ್ವಯಂಸೇವಕರು ವಾರಾಂತ್ಯದ ಬಿಡುವಿನ ವೇಳೆಯಲ್ಲಿ ನೀರಿನ ಅವಶ್ಯಕತೆ ಮತ್ತು ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ, ಗಿಡಮರಗಳನ್ನು ನೆಡುವ, ಕೆರೆ-ಬಾವಿ-ಕಲ್ಯಾಣಿಗಳ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ದಶಕಗಳ ಕಾಲ ಕಸಕಡ್ಡಿ ತುಂಬಿಕೊಂಡಿದ್ದ ಬಾವಿಗಳು, ಕಲ್ಯಾಣಿಗಳು ನೀರು ತುಂಬಿಕೊಂಡು ನಲಿದಾಡುತ್ತಿವೆ. ಅವುಗಳಲ್ಲಿ ನೀರು ಮತ್ತೆ ಪುಟಿಯುವುದನ್ನು ನೋಡಿ ಹಳ್ಳಿಗರೇ ಅಚ್ಚರಿಪಟ್ಟಿದ್ದಾರೆ ಅಂತಾರೆ ಚಿದಾನಂದ ಅವರು.
"ಸದ್ಯಕ್ಕೆ ಈ ಯೋಜನೆಯನ್ನು ನಗರಕ್ಕೆ ವಿಸ್ತರಿಸಿಲ್ಲ. ಬಿಬಿಎಂಪಿ ಮುತುವರ್ಜಿ ತೆಗೆದುಕೊಂಡು ಕೆರೆಗಳಲ್ಲಿನ ಹೂಳೆತ್ತುವ, ಗಿಡಗಳನ್ನು ನೆಡುವ, ನೀರಿನಕೊಯ್ಲು ಅಳವಡಿಸುವ ಕೆಲಸವನ್ನು ಆರಂಭಿಸಬೇಕು. ನಮ್ಮ ಗಮನವೇನಿದ್ದರೂ ಗ್ರಾಮಗಳಲ್ಲಿ ನೀರಿನ ಸೆಲೆ ಉಕ್ಕಬೇಕು, ಕೃಷಿ ಚಟುವಟಿಕೆ ಹೆಚ್ಚಬೇಕು, ಹಳ್ಳಿಗಳಲ್ಲಿನ ಯುವಕರು ನಗರಕ್ಕೆ ವಲಸೆ ಹೋಗುವುದು ನಿಲ್ಲಬೇಕು. ವಲಸೆ ಹೋಗುವುದು ನಿಂತರೆ, ಹಳ್ಳಿಗಳಲ್ಲಿ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯಾದರೆ, ನಗರಕ್ಕೆ ಕೂಡ ಇದರಿಂದ ಅನುಕೂಲವಾಗಲಿದೆ" ಎನ್ನುವುದು ಚಿದಾನಂದ ಅವರ ಅನುಭವದ ಮಾತು. "ಗ್ರಾಮಗಳಲ್ಲಿ ಆಯ್ದ ಜಾಗಗಳಲ್ಲಿ ಬಾವಿಗಳನ್ನು ತೋಡಿ, ರಿಂಗ್ ಗಳನ್ನು ಅಳವಡಿಸಿ, ಜೆಲ್ಲಿಗಳನ್ನು ಹಾಕಿ ರಿಚಾರ್ಜ್ ಬಾವಿಗಳನ್ನು ನಿರ್ಮಿಸಿ, ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಇದರಿಂದಾಗಿಯೇ ಅಂತರ್ಜಲದ ಮಟ್ಟ ಹಿಂದಿಗಿಂತಲೂ ಉತ್ತಮವಾಗಿದೆ. ಇದನ್ನು ನಗರಗಳಲ್ಲಿ ಕೂಡ ಅಳವಡಿಸಿದರೆ ಸಾಕಷ್ಟು ನೀರಿನ ತೊಂದರೆಗಳನ್ನು ನಿವಾರಿಸಬಹುದು" ಎಂದು ಅವರು ಸಲಹೆ ನೀಡುತ್ತಾರೆ. ಹೆಚ್ಚೂ ಕಡಿಮೆ ನಿಷ್ಕ್ರಿಯವಾಗಿರುವ ಬಿಬಿಎಂಪಿಯನ್ನೇ ಮೂರು ಭಾಗ ಮಾಡಿ, ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣವನ್ನು ನಿಭಾಯಿಸಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ, ಸಿಬಿಐ ತನಿಖೆ ಆಗಲೇಬೇಕು ಎಂದು ಪಟ್ಟುಹಿಡಿದು ಸರಕಾರದ ಬೆವರಿಳಿಸುತ್ತಿರುವ ವಿರೋಧ ಪಕ್ಷದ ಶಾಸಕರಿಗೆ, ಮಳೆನೀರು ಕೊಯ್ಲು ಅಳವಡಿಸದೆ ಸಮಯವನ್ನು ತಳ್ಳುತ್ತಿರುವ ಟ್ವೆಂಟಿ ಥರ್ಟಿ, ಥರ್ಟಿ ಫಾರ್ಟಿ, ಫಾರ್ಟಿ ಸಿಕ್ಸ್ಟಿ ಸೈಟಿನಲ್ಲಿ ಮನೆಕಟ್ಟಿಕೊಂಡಿರುವ ಮನೆ ಮಾಲಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವರೆ?