ಯೋಗದಿಂದ ಸ್ಕೊಲಿಯೋಸಿಸನ್ನು ನಿಭಾಯಿಸುವ ರೀತಿ

ಮಾನವರ ಬೆನ್ನೆಲುಬು ಅನೇಕ ಕಶೇರುಖಂಡಗಳಿಂದ, ಬೆನ್ನು ಮೂಳೆಗಳಿಂದ ಮಾಡಲ್ಪಟ್ಟಿದೆ ಮತ್ತು ಇವು ಮಿದುಳು ಬಳ್ಳಿಯನ್ನು ರಕ್ಷಿಸಿ ಅದಕ್ಕೆ ಆಧಾರವಾಗಿವೆ. ಈ ಮೂಳೆಗಳ ಗುಂಪಿನಿಂದಾಗಿ ನೇರವಾಗಿ ಎದ್ದುನಿಲ್ಲಲು ನಮಗೆ ಸಾಧ್ಯವಾಗುತ್ತದೆ. ಬೆನ್ನೆಲುಬಿನ ಮೂಳೆಗಳ ರೋಗವಾದ ಸ್ಕೊಲಿಯೋಸಿಸ್ನಲ್ಲಿ ಬೆನ್ನುಮೂಳೆಗಳು ನೇರವಾಗಿರದೆ ವಕ್ರವಾಗಿರುತ್ತದೆ. ಬೆನ್ನಮೂಳಿನ ವಕ್ರತೆಯು ಎಡಗಡೆಗೆ ಅಥವಾ ಬಲಗಡೆಗೆ ಅಥವಾ ಹಿಂದಕ್ಕೆ ಅಥವಾ ಮುಂದಕ್ಕೆ 10 ಡಿಗ್ರಿಗಳಿಂತಲೂ ಹೆಚ್ಚು ವಕ್ರವಾಗಿದ್ದರೆ, ಆ ವ್ಯಕ್ತಿಯು ಸ್ಕೊಲಿಯೋಸಿಸ್ನಿಂದ ಬಳಲುತ್ತಿದ್ದಾರೆ ಎನ್ನಬಹುದು.

ಜಗತ್ತಿನಾದ್ಯಂತ 0.5% ನಷ್ಟು ಜನಸಂಖ್ಯೆಯು ಈ ಸ್ಥಿತಿಯಿಂದ ಬಳಲುತ್ತಿದ್ದು ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಈ ಸ್ಥಿತಿಯನ್ನು ಸರಿಪಡಿಸುವ ಕ್ರಮಗಳು

ಸ್ಕೊಲಿಯೋಸಿಸ್ನಿಂದ ಒಬ್ಬರ ಚಲನವಲನಗಳು ಸೀಮಿತವಾಗಿ, ಬಹಳ ವೇದನಕರವಾಗಿರಲು ಸಾಧ್ಯ. ಸ್ಕೊಲಿಯೋಸಿಸ್ನಿಂದ ಬಳಲುತ್ತಿರುವವರಿಗೆ ಶಸ್ತ್ರ ಚಿಕಿತ್ಸೆಯು ಪ್ರಸಿದ್ಧವಾದ ಆಯ್ಕೆಯಾದರೂ, ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಮೊದಲು ಇತರ ಸರಿಪಡಿಸುವ ಕ್ರಮಗಳತ್ತವೂ ನೋಡಿ. ಇಂದು ಲಭ್ಯವಾಗಿರುವ ಅನೇಕ ಆಯ್ಕೆಗಳಲ್ಲಿ ಯೋಗ ಅತೀ ಪರಿಣಾಮಕಾರಿಯಾಗಿದ್ದು, ಅತ್ಯಧಿಕ ಕಾಲದಿಂದಲೂ ಲಭ್ಯವಾಗಿರುವ ಆಯ್ಕೆಯಿದು. ಈ ಪ್ರಾಚೀನ ಪ್ರಕ್ರಿಯೆಯು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಹಾಯಕ್ಕೆ ನಿಂತು, ಸ್ಕೊಲಿಯೋಸಿಸ್ನಿಂದ  ಬಳಲುತ್ತಿರುವವರಿಗೆ ಸಹನೆಯನ್ನು ಮತ್ತು ನೋವನ್ನು ಮೀರುವ ಮನೋಸ್ಥೈರ್ಯವನ್ನೂ ಕೊಡುತ್ತದೆ.

ಬದಲಾವಣೆಗೆ ಸಿದ್ಧತೆ

ದೇಹದ ಬಹುತೇಕ ತೂಕವನ್ನು ಬೆನ್ನೆಲುಬು ಹೊರುವುದರಿಂದ ಅದು ನಿರಂತರವಾದ ಒತ್ತಡದಲ್ಲಿರುತ್ತದೆ.
ಸ್ಕೊಲಿಯೋಸಿಸ್ನ ಸ್ಥಿತಿಯಲ್ಲಿ ಈ ನೋವು ಮತ್ತಷ್ಟು ಉಲ್ಬಣಿಸುತ್ತದೆ. ಯೋಗಾಭ್ಯಾಸದಿಂದ ಕಾಲಿನ ಸ್ನಾಯುಗಳು ಬಲಿಷ್ಠವಾಗಿ, ಬೆನ್ನೆಲುಬಿನ ಮೇಲಿರುವ ಬಹಳಷ್ಟು ಒತ್ತಡವನ್ನು ತೆಗೆದುಬಿಡುತ್ತದೆ. ಯೋಗಾಭ್ಯಾಸವು ಉಸಿರಾಟದ ಪ್ರಕ್ರಿಯೆಗಳನ್ನು ಮತ್ತು ಬೆನ್ನೆಲುಬಿನ ಸ್ಥಿತಿಯನ್ನು ಸರಿಪಡಿಸುವಂತಹ ನಿರ್ದಿಷ್ಟ ಯೋಗಾಸನಗಳನ್ನೂ ಒಳಗೊಂಡಿದೆ. ದೇಹವು ಯೋಗಾಸನಗಳಿಗೆ ಒಗ್ಗುವವರೆಗೂ ಆರಂಭದಲ್ಲಿ ಸ್ಪಲ್ಪ ನೋವು ಕಾಣಿಸಿಕೊಳ್ಳಬಹುದು. ಆದರೆ ಕ್ರಮೇಣವಾಗಿ ಈ ನೋವು ಕಡಿಮೆಯಾಗಿ ದೀರ್ಘಾವಧಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ ಕೆಲವು ಸರಳವಾದ ಯೋಗಾಸನಗಳಿಂದ ಆರಂಭಿಸೋಣ. ಇವುಗಳಿಂದ ನಿಮ್ಮ ಸ್ಕೊಲಿಯೋಸಿಸ್ನ ನಿವಾರಣೆಯಾಗಿ ನಿಮ್ಮ ಬೆನ್ನೆಲುಬು ಮತ್ತೆ ಸರಿಯಾದ ಆಕಾರವನ್ನು ಪಡೆದುಕೊಳ್ಳುತ್ತದೆ.

ವೀರಭದ್ರಾಸನ

ಈ ಭಂಗಿಯಿಂದ ಸ್ಥೈರ್ಯ, ರಮ್ಯತೆ ಮತ್ತು ಶಾಂತಿಯನ್ನು ದೇಹಕ್ಕೆ ತರುತ್ತದೆ. ಬೆನ್ನೆಲುಬಿನ ಕೆಳಭಾಗವು ಬಲಿಷ್ಠವಾಗುವುದರಿಂದ ದೇಹದ ಸಮತೋಲನವು ಹೆಚ್ಚಿ, ದೇಹದಾಢ್ರ್ಯತೆಯೂ ಹೆಚ್ಚುತ್ತದೆ. ಬಲಿಷ್ಠವಾದ ಕೆಳ ಬೆನ್ನೆಲುಬಿನಿಂದ ಸ್ಕೊಲಿಯೋಸಿಸ್ನ ನಿಭಾವಣೆ ಸುಲಭವಾಗುತ್ತದೆ..

ತ್ರಿಕೋಣಾಸನ

ತ್ರಿಕ್ರೋಣಾಸನದ ನಿಂತಿರುವ ಭಂಗಿಯಿಂದಾಗಿ ಬೆನ್ನೆಲುಬು ವಿಸ್ತಾರವಾಗಿ, ದೈಹಿಕ ಹಾಗೂ ಮಾನಸಿಕ ಸಮತೋಲನವೂ ಹೆಚ್ಚುತ್ತದೆ. ಒತ್ತಡವನ್ನು, ಬೆನ್ನಿನ ನೋವನ್ನು ಈ ಆಸನವು ಕಡಿಮೆ ಮಾಡುತ್ತದೆ.

 

ಮಾರ್ಜರಿ ಆಸನ

ಕೈಗಳ, ಮಂಡಿಗಳ ಮೇಲೆ ಊರಿ ಬೆಕ್ಕಿನ ಭಂಗಿಯನ್ನು ಮಾಡಬೇಕಾಗುತ್ತದೆ. ಇದರಿಂದ ಬೆನ್ನೆಲುಬಿನ ನಮ್ಯತೆ ಹೆಚ್ಚುವುದಲ್ಲದೆ ರಕ್ತ ಚಲನೆಯೂ ಹೆಚ್ಚಿ ಮನಸ್ಸು ವಿರಾಮವನ್ನು ಪಡೆಯುವುದರಿಂದ ಸ್ಕೊಲಿಯೋಸಿಸ್ನಿಂದ ಬಳಲುತ್ತಿರುವವರಿಗೆ ಇದು ಬಹಳ ಒಳ್ಳೆಯದು.

ಶಿಶು ಆಸನ

ಕುಳಿತು ಮಾಡುವ ಶಿಶು ಆಸನದಿಂದ ನರವ್ಯವಸ್ಥೆಯು ಪ್ರಶಾಂತವಾಗುತ್ತದೆ.ಮತ್ತು ಕೆಳಬೆನ್ನೂ ವಿಶ್ರಮಿಸುತ್ತದೆ.  ನರಗಳ-ಸ್ನಾಯುಗಳ ರೋಗಗಳಿಂದಾಗಿ ಸ್ಕೊಲಿಯೋಸಿಸ್ನಿಂದ ಬಳಲುತ್ತಿರುವವರಿಗೆ ಈ ಭಂಗಿಯು ಅತೀ ಉತ್ತಮವಾದದ್ದು.

 

ಪಶ್ಚಿಮೊತ್ತಾಸನ

ಈ ಭಂಗಿಯಲ್ಲಿ ಕೆಳಬೆನ್ನಿನ ವಿಸ್ತರಣೆಯಾಗಿ ಒತ್ತಡದ ನಿವಾರಣೆಯಾಗುತ್ತದೆ. ಒತ್ತಡ, ದಣಿವನ್ನೂ ಇದು ನಿವಾರಿಸಿ ಮನಸ್ಸನ್ನು ಪ್ರಶಾಂತವಾಗಿಡುತ್ತದೆ.

ಅಧೋಮುಖಶ್ವಾನಾಸನ

ಈ ಯೋಗಾಸನದಿಂದ ಬೆನ್ನುಮೂಳೆಯ ವಿಸ್ತರಣವಾಗಿ ಇಡೀ ದೇಹ ಬಲಿಷ್ಠವಾಗುತ್ತದೆ, ವಿಶಿಷ್ಟವಾಗಿ ಭುಜಗಳು, ತೋಳುಗಳು, ಕಾಲುಗಳು ಮತ್ತು ಪಾದಗಳು ಬಲಿಷ್ಠವಾಗುತ್ತವೆ. ಈ ಯೋಗಾಸನದಿಂದ ದೇಹದ ತೂಕವನ್ನು ಕಾಲುಗಳಿಗೆ ಬಹಳಷ್ಟು ಹಂಚಬಹುದಾದ್ದರಿಂದ ಬೆನ್ನಮೂಳೆಯ ಮೇಲಿನ ಒತ್ತಡವು ಕಡಿಮೆಯಾಗುತ್ತದೆ.

 

ಸೇತು ಬಂಧಾಸನ

ಈ ಆಸನವು ಬೆನ್ನೆಲುಬನ್ನು, ಬೆನ್ನಿನ ಸ್ನಾಯುಗಳನ್ನು ವಿಸ್ತರಿಸಿ, ಬಲಿಷ್ಠವಾಗಿಸುತ್ತದೆ. ಒತ್ತಡಾತಂಕವನ್ನೂ ಇದು ನಿವಾರಿಸಿ ಮೆದುಳನ್ನು ಪ್ರಶಾಂತವಾಗಿಡುತ್ತದೆ.

ಶಲಭಾಸನ

ಶಲಭಾಸನದಿಂದ ಇಡೀ ಬೆನ್ನು ನಮ್ಯವಾಗಿ, ಬಲಿಷ್ಠವಾಗುತ್ತದೆ. ದೇಹದ ಒತ್ತಡ, ದಣಿವು ಮತ್ತು ಕೆಳ ಬೆನ್ನಿನ ನೋವಿನ ನಿವಾರಣೆಯಾಗುತ್ತದೆ.

 

ಸರ್ವಾಂಗಾಸನ

ಸರ್ವಾಂಗಾಸನದಿಂದ ಬೆನ್ನೆಲುಬು ನಮ್ಯವಾಗುತ್ತದೆ ಮತ್ತು ಭುಜಗಳು ಹಾಗೂ ತೋಳುಗಳು ಬಲಿಷ್ಠವಾಗುತ್ತವೆ. ಈ ಯೋಗಾಸನದಿಂದ  ಮನಸ್ಸೂ ವಿಶ್ರಮಿಸುತ್ತದೆ.

ಶವಾಸನ


ಎರಡು ನಿಮಿಷಗಳ ಕಾಲ ಶವಾಸನದಲ್ಲಿ ಮಲಗಿ ನಿಮ್ಮ ಯೋಗಾಭ್ಯಾಸವನ್ನು ಮುಕ್ತಾಯಗೊಳಿಸಿ. ಈ ಯೋಗಾಸನವು ನಿಮ್ಮ ದೇಹವನ್ನು ಧ್ಯಾನದ ಸ್ಥಿತಿಗೆ ಕರೆದೊಯ್ಯುವುದಲ್ಲದೆ ಪುನಶ್ಚೇತಕಾರಿಯೂ ಆಗಿರುತ್ತದೆ.

 
 

ಪ್ರಾಣಾಯಾಮ ಮತ್ತು ಧ್ಯಾನ

ಪ್ರಾಣಾಯಾಮ, ಅದರಲ್ಲೂ ವಿಷಿಷ್ಟವಾಗಿ ನಾಡಿಶೋಧನ ಪ್ರಾಣಾಯಮವು ಶ್ವಾಸಕೋಶವನ್ನು ವಿಸ್ತಾರಗೊಳಿಸಿ ಎದೆಗೂಡಿನ ಸ್ನಾಯುಗಳನ್ನು ಬಲಿಷ್ಠವಾಗಿಸುತ್ತದೆ. ಪಂಚಕೋಶ ಧ್ಯಾನದಿಂದ ಈ ಸ್ಥಿತಿಯನ್ನು ಸಕ್ರಿಯವಾಗಿ ಸ್ವೀಕರಿಸುವಂತೆ ಆಗಿ, ಅರಿವನ್ನು ಮತ್ತು ಸಹನೆಯನ್ನು ಹೆಚ್ಚಿಸುತ್ತದೆ. ಹರಿ ಓಂ ಅಥವಾ ಚಕ್ರ ಧ್ಯಾನದಿಂದ ಚಕ್ರಗಳ, ನಾಡಿಗಳ ಶುದ್ಧಿಯಾಗಿ, ಚಕ್ರಗಳು ಶಕ್ತಿಯುತವೂ ಆಗುವುದರಿಂದ ಪ್ರಾಣದ ಹರಿತವು ಸುಗಮವಾಗುತ್ತದೆ. ಧ್ಯಾನವನ್ನು ಮಾಡುವಾಗ ಬೆನ್ನಿಗೆ ಏನಾದರೊಂದನ್ನು ಆಸರೆಯನ್ನಾಗಿ ಇಟ್ಟುಕೊಂಡರೆ ಧ್ಯಾನ ಮಾಡುವುದು ಸುಲಭವಾಗುತ್ತದೆ.

ಸಹನೆಯೇ ರಹಸ್ಯ

ಇತರ ಯಾವುದೇ ಅಭ್ಯಾಸದಂತೆ ಯೋಗಾಭ್ಯಾಸದ ಪ್ರಭಾವ ಕಾಣಲು ಸ್ವಲ್ಪ ಸಮಯ ಹಿಡಿಯುತ್ತದೆ. ಸಹನೆಯನ್ನು ಹೊಂದಿ ನಿಮ್ಮ ಅಭ್ಯಾಸವನ್ನು ಎಡೆಬಿಡದೆ ಮಾಡಿ. ನಿಮ್ಮ ಸ್ಥಳಿಯ ಕೇಂದ್ರದಿಂದ ಜೀವನ ಕಲಾ ಯೋಗ ಶಿಬಿರವನ್ನು ಮಾಡಿ ಸ್ಕೂಲಿಯೋಸಿಸನ್ನು ನಿವಾರಿಸುವ ಯೋಗಾಸನಗಳನ್ನು ಕಲಿಯಿರಿ. ಒಂದು ಗುಂಪಿನಲ್ಲಿ ಯೋಗಾಭ್ಯಾಸವನ್ನು ಮಾಡಿದರೆ ಮತ್ತಷ್ಟು ಉಲ್ಲಾಸದಾಯಕವಾಗಿರುತ್ತದೆ ಮತ್ತು ಈಗಿನ ಕಾಲದಲ್ಲಿ ಇದು ಬಹಳ ಸುಪ್ರಸಿದ್ಧವಾಗಿದೆ.

ನಿಮ್ಮ ಇತಿಮಿತಿಗಳನ್ನು ಗೌರವಿಸಿ

ಯೋಗಾಭ್ಯಾಸಕ್ಕೆ ಸ್ವಲ್ಪ ಮಟ್ಟಿನ ದೈಹಿಕ ಶ್ರಮ ಅಗತ್ಯ. ಆದ್ದರಿಂದ ಎಚ್ಚರಿಕೆಯಿಂದ ಮಾಡಿ. ನಿಮ್ಮ ದೇಹದ ಒತ್ತಡವನ್ನು ಹೆಚ್ಚಿಸಬೇಡಿ ಮತ್ತು ನಿಮ್ಮ ಇತಿಮಿತಿಗಳನ್ನು ಹೆಚ್ಚಾಗಿ ಮೀರಬೇಡಿ. ನಿಮ್ಮ ದೇಹಕ್ಕೆ ಎಷ್ಟು ಸಾಧ್ಯವೊ ಅಷ್ಟು ಮಾತ್ರವೇ ವಿಸ್ತಾರ ಮಾಡಿ ಮತ್ತು ವಿಶ್ರಮಿಸಿ.

ಸಕಾರಾತ್ಮಕ ಒಳನೋಟವು ಸಹಾಯ ಮಾಡುತ್ತದೆ!

ಜೀವನದ ಬಗ್ಗೆ ಸಕಾರಾತ್ಮಕ ಒಳನೋಟವನ್ನು ಹೊಂದುವುದರಿಂದ ಸ್ಕೊಲಿಯೋಸಿಸನ್ನು ಚೆನ್ನಾಗಿ ನಿಭಾಯಿಸಬಹುದು. ನಿಮ್ಮ ಸ್ನೇಹಿತರೊಡನೆ, ಕುಟುಂಬದವರೊಡನೆ ಮಾತನಾಡಿ. ಅವರ ಸಹಾಯದಿಂದ ನಿಮ್ಮ ಮನಸ್ಥಿತಿಯನ್ನು ಉನ್ನತ ಮಟ್ಟದಲ್ಲಿರಿಸಿ. ನಿಮ್ಮ ಅಭ್ಯಾಸದಲ್ಲಿ ಪೂರ್ಣ ನಂಬಿಕೆಯನ್ನಿರಿಸಿ, ಎಡೆಬಿಡದೆ ಅಭ್ಯಾಸಗಳನ್ನು ಮುಂದುವರಿಸಿ ಮತ್ತು ಅಭ್ಯಾಸವನ್ನು ಪೂರ್ಣವಾಗಿ ಆನಂದಿಸಿ. ಸಹನೆಯನ್ನು ಹೊಂದಿ.

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.

ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.inನಲ್ಲಿ ಸಂಪರ್ಕಿಸಿ.