ಸರಳವಾಗಿ ಹೇಳಬೇಕೆಂದರೆ, ಧ್ಯಾನವು ಮಾನಸಿಕ ಸ್ವಚ್ಛತೆಯಲ್ಲದೆ ಬೇರೇನೂ ಅಲ್ಲ. ದಿನನಿತ್ಯದ ಮಾನಸಿಕ ಕಸ ಮತ್ತು ಕೊಳೆಯನ್ನು ತೊಳೆದು ಹಾಕಿ ನಿಮ್ಮ ಆತ್ಮದ ಸಂಪರ್ಕವನ್ನು ನಿಮಗೆ ಕಲ್ಪಿಸಿಕೊಟ್ಟು, ನಿಮ್ಮ ಪ್ರತಿಭೆಗಳನ್ನು ಮತ್ತು ಕುಶಲತೆಗಳನ್ನು ಹೆಚ್ಚಿಸುವ ಕೆಲಸವನ್ನು ಧ್ಯಾನ ಮಾಡುತ್ತದೆ. ಇದರ ಬಗ್ಗೆ ಆಲೋಚಿಸಿ. ಪ್ರತಿನಿತ್ಯ ಸ್ನಾನ ಮಾಡಿ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುತ್ತೀರಿ, ಆದರೆ ನಿಮ್ಮ ಮನಸ್ಸಿಗೆ ಸ್ನಾನ ಮಾಡಿಸಿದ್ದೀರೆ? ಸ್ನಾನ ಮಾಡದ ಮನಸ್ಸು, ಸ್ನಾನ ಮಾಡದ ಕೊಳಕು ದೇಹದಷ್ಟೇ ದುರ್ನಾತವನ್ನು ಬೀರುತ್ತದೆ, ಬಹುಶಃ ಇನ್ನೂ ಹೆಚ್ಚು ದುರ್ನಾತವನ್ನು ಬೀರುತ್ತದೆ. ನಿಮ್ಮ ಮನಸ್ಸನ್ನು ಧ್ಯಾನದಿಂದ ಸ್ನಾನ ಮಾಡಿಸಿದರೆ, ನಿಮಗೆ ಮತ್ತಷ್ಟು ಸ್ಪಷ್ಟತೆಯ ಅನುಭವವಾಗುತ್ತದೆ, ವಿಷಯಗಳನ್ನು ವ್ಯಾಪಕವಾದ ದೃಷ್ಟಿಕೋನದಿಂದ ನೋಡುತ್ತೀರಿ ಮತ್ತು ಶಾಂತವಾದ ಕಂಪನಗಳನ್ನು ಹರಡುತ್ತೀರಿ. ಧ್ಯಾನವನ್ನು ಅನೇಕ ಶತಮಾನಗಳಿಂದ ಅಭ್ಯಾಸ ಮಾಡುತ್ತಿದ್ದರೂ ಸಹ, ಅದರ ವ್ಯಾಪಕವಾದ ಲಾಭಗಳಿಂದಾಗಿ ಧ್ಯಾನವು ಹೆಚ್ಚು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. ನಿಮ್ಮ ಆರೋಗ್ಯವು ಸುಧಾರಿಸುತ್ತದೆ, ಚೆನ್ನಾಗಿ ನಿದ್ದೆ ಮಾಡಬಲ್ಲಿರಿ, ನಿಮ್ಮ ಭಾವನೆಗಳನ್ನು ಸುಧಾರಿಸುತ್ತದೆ, ಭಾವನಾತ್ಮಕವಾಗಿ ಹೆಚ್ಚು ದೃಢರಾಗುತ್ತೀರಿ ಮತ್ತು ನಿಮ್ಮ ಏಕಾಗ್ರತೆ ತೀಕ್ಷ್ಣವಾಗುತ್ತದೆ, ಹೀಗೆ ಧ್ಯಾನದಿಂದ ಅನೇಕ ಲಾಭಗಳುಂಟಾಗುತ್ತದೆ. ಬೇರೆ ಬೇರೆ ವ್ಯಕ್ತಿಗಳಿಗೆ ಧ್ಯಾನದ ಉದ್ದೇಶವು ಬೇರೆ ಬೇರೆಯಾಗಿರುತ್ತದೆ. ಇಂದಿನ ನಾಗಾಲೋಟವಾಗಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ, ನೀವೀಗಾಗಲೇ ಸಮಯದ ಅಭಾವವನ್ನು ಎದುರಿಸುತ್ತಿರುವಾಗ, ಧ್ಯಾನವೇಕೆ ಮಾಡಬೇಕು ಮತ್ತು ಧ್ಯಾನದಿಂದ ನಿಮಗೆ ಸಹಾಯವಾಗುತ್ತದೆಯೆ ಎಂದು ನೀವು ಆಲೋಚಿಸಬಹುದು. ನೀವು ಕೆಳಗುಂದಿದಂತೆ ನಿಮಗೆ ಅನಿಸುತ್ತಿದ್ದರೆ, ಯಾವುದೂ ನೀವಂದುಕೊಂಡಂತೆ ಆಗುತ್ತಿಲ್ಲ ಎಂದು ನಿಮಗೆ ಅನಿಸುತ್ತಿದ್ದರೆ, ನಿಮ್ಮ ಮನಸ್ಸು ಮತ್ತು ದೇಹವು, ಧ್ಯಾನವು ನಿಮ್ಮ ಜೀವನಕ್ಕೆ ಅವಶ್ಯಕ ಎಂದು ಹೇಳುತ್ತಿದೆ ಎಂದರ್ಥ.
ನಿಮ್ಮ ದೇಹ ಮತ್ತು ಮನಸ್ಸನ್ನು ಕೇಳಿಸಿಕೊಳ್ಳಿ. ನೀವು ಕೆಳಗಿನ ಈ 25 ಸೂಚಿಗಳನ್ನು ಎದುರಿಸುತ್ತಿದ್ದಲ್ಲಿ, ನಿಮ್ಮ ಧ್ಯಾನದ ಅಭ್ಯಾಸಗಳನ್ನು ಪ್ರಾರಂಭಿಸುವ, ಪುನಶ್ಚೇತಗೊಳಿಸುವ ಅಥವಾ ಪುನರ್ಬದ್ಧರಾಗುವ ಸಮಯ ಬಂದಾಯಿತು ಎಂದರ್ಥ.
1) ನೀವು ಸದಾಕಾಲ ದಣಿದು ಸುಸ್ತಾದಂತೆ ಅನಿಸುತ್ತದೆ
2017ರಲ್ಲಿ ಬಹಳವಾಗಿ ಗೂಗಲ್‍ನಲ್ಲಿ ಕೇಳಲ್ಪಟ್ಟ ಆರೋಗ್ಯದ ಪ್ರಶ್ನೆಯೆಂದರೆ, “ನಾನೇಕೆ ಇಷ್ಟು ದಣಿದಿದ್ದೇನೆ?” ಎಂದು. ನಾವೆಲ್ಲರೂ ದಣಿವಿನಿಂದಾಗಿ ಎಷ್ಟು ಕುಗ್ಗಿ ಹೋಗಿದ್ದೇವೆ ಎಂದು ಇದು ಸೂಚಿಸುತ್ತದೆ. ಕೆಲವು ನಿಮಿಷಗಳ ಧ್ಯಾನದಿಂದ ನೀವು ಹೆಚ್ಚು ಶಕ್ತಿಯುತರಾಗುತ್ತೀರಿ, ಪುನಶ್ಚೇತರಾಗುತ್ತೀರಿ. ಈ ಯಾವುದಾದರೂ 12 ಆನ್‍ಲೈನ್ ಧ್ಯಾನಗಳನ್ನು ಮಾಡಿ, ಶೀಘ್ರವೇ ಶಕ್ತಿಯುತರಾಗಿಬಿಡುತ್ತೀರಿ.
2) ಪದೇ ಪದೇ ನಿಮಗೆ ನೆಗಡಿ ಮತ್ತು ಫ್ಲೂ ಬರುವುದು
ನೀವು ಬಹಳ ನೆಗಡಿ ಮತ್ತು ಫ್ಲೂನಿಂದ ಬಳಲುತ್ತಿದ್ದರೆ, ನಿಮ್ಮ ರೋಗನಿರೋಧಕ ವ್ಯವಸ್ಥೆಯು ಕೆಳಗುಂದಿದೆಯೆಂದಾಯಿತು. ಸಂಶೋಧನೆಯ ಪ್ರಕಾರ ಧ್ಯಾನದಿಂದ ನಿಮ್ಮ ರೋಗ ವ್ಯವಸ್ಥೆಯು ಬಲವಾಗುತ್ತದೆ ಮತ್ತು ಇದರಿಂದಾಗಿ ಸೋಂಕುಗಳನ್ನು ಸದೃಢವಾಗಿ ಎದುರಿಸಬಹುದು.
3) ನಿಮಗೆ ಸದಾ ನೋವುಗಳಿರುತ್ತದೆ
ಯಾವ ರೋಗದ ಲಕ್ಷಣಗಳು ಇಲ್ಲದೆಯೆ ನಿಮಗೆ ಸದಾ ನೋವಿದ್ದರೆ ಅದು ಒತ್ತಡದ ಚಿಹ್ನೆ. ಔಷಧಿಯ ಅಂಗಡಿಗಳಲ್ಲಿ ಸಿಗುವ ಸಾಮಾನ್ಯ ನೋವಿನ ಗುಳಿಗೆಗಳಿಂದ ನಿಮಗೆ ಪರಿಹಾರ ಸಿಗುವುದಿಲ್ಲ. ಕೆಲವು ನಿಮಿಷಗಳ ನಿತ್ಯ ಧ್ಯಾನದಿಂದ ನೀವು ನೋವಿನಿಂದ ಮುಕ್ತಿ ಪಡೆಯಬಹುದು.
4) ನಿಮಗೆ ಸದಾ ಸಮಯದ ಅಭಾವವಿರುತ್ತದೆ
ನೀವು ಮಾಡಬೇಕಾದದ್ದು ಬಹಳ ಇದೆ ಅನಿಸಿದರೆ, ನಿಮ್ಮ ಕ್ಯಾಲೆಂಡರ್ ಸದಾ ಭರ್ತಿಯಾಗಿದ್ದರೆ, ನಿಮ್ಮ ದಿನ ಬಹಳ ಬೇಗನೆ ಆರಂಭವಾಗಿ, ಬಹಳ ತಡವಾಗಿ ಕೊನೆಗೊಳ್ಳುತ್ತಿದ್ದರೆ ಮತ್ತು ನೀವು ನಿಜವಾಗಿಯೂ ಮಾಡಬೇಕೆಂದುಕೊಂಡಿದ್ದನ್ನು ಮಾಡಲು ನಿಮ್ಮ ಬಳಿ ಬಹಳ ಕಡಿಮೆ ಸಮಯವಿದ್ದರೆ, ಆಗ ಧ್ಯಾನದಿಂದ ನೀವು ಸಮತೋಲನವನ್ನು ಕಂಡುಕೊಳ್ಳಬಹುದು. ಧ್ಯಾನ ಮಾಡಲು ಸಮಯವನ್ನು ಕಂಡುಕೊಳ್ಳುವುದು ಮತ್ತೊಂದು ಹೊರೆ ಎನಿಸಬಹುದಾದರೂ, ಧ್ಯಾನದಿಂದ ಉಂಟಾಗುವ ಮಾನಸಿಕ ಒಳಿತಿನಿಂದಾಗಿ ಬೇರೆಲ್ಲಾ ಕೆಲಸವನ್ನು ನೀವು ಬೇಗನೆ ಮತ್ತು ಉತ್ತಮವಾಗಿ ಮಾಡಿ ಮುಗಿಸಬಹುದು.
5) ನೀವು ಬಹಳ ಸಿಡುಕುತ್ತೀರಿ
ಧ್ಯಾನದ ಗುರುಗಳಾದ ಶ್ರೀ ಶ್ರೀ ರವಿಶಂಕರರು, “ಒಂದು ಮಗುವು ಸಹಜವಾಗಿ ದಿನಕ್ಕೆ 400 ಸಲ ಮುಗುಳ್ನಗುತ್ತದೆ. ಹದಿಹರೆಯದವರು 17 ಸಲ ಮುಗುಳ್ನಗುತ್ತಾರೆ ಮತ್ತು ದೊಡ್ಡವರು ನಗುವುದೇ ಇಲ್ಲ” ಎನ್ನುತ್ತಾರೆ. ಇದೇಕೆಂದರೆ ಮಕ್ಕಳು ಒತ್ತಡ-ರಹಿತವಾಗಿರುವುದರಿಂದ. ಧ್ಯಾನ ಮತ್ತು ಯೋಗದ ಉದ್ದೇಶ, ಮುಖದ ಮೇಲೆ ಮುಗುಳ್ನಗೆ ತರಿಸುವುದು; ನಮ್ಮ ದಿನನಿತ್ಯ ಜೀವನದಲ್ಲಿರುವ ಒತ್ತಡವನ್ನು ಎದುರಿಸುತ್ತಾ ಮುಗುಳ್ನಗುವುದು.
6) ನೀವು ಪದೇ ಪದೇ ಅಳುತ್ತೀರಿ
ಸ್ವಲ್ಪ ರೇಗಿಸಿದರೂ, ಸಣ್ಣ ಸೋಲುಂಟಾದರೂ, ಹಿನ್ನಡೆಯುಂಟಾದರೂ, ಕೆಲಸದ ಒತ್ತಡವಿದ್ದಾಗ ಅಥವಾ ಇತರರು ನಿಮ್ಮ ಬಗ್ಗೆ ಸಣ್ಣ ಮಾತನ್ನಾಡಿದರೂ, ನಿಂದಿಸಿದರೂ ನೀವು ಅಳಲು ಆರಂಭಿಸಿದರೆ, ಧ್ಯಾನದಿಂದ ನೀವು ಭಾವನಾತ್ಮಕರಾಗಿ ಹೆಚ್ಚು ಸದೃಢರಾಗಬಲ್ಲಿರಿ. ಕೆಲವರೇಕೆ ಸದಾ ನಗುತ್ತಿರುತ್ತಾರೆ, ಮುಗುಳ್ನಗುತ್ತಾರೆ ಮತ್ತು ನೀವು ಮಾತ್ರ ಏಕೆ ಸದಾ ದುಃಖಿಗಳಾಗಿಯೇ ಇರುತ್ತೀರಿ ಎಂದು ನೀವು ಯೋಚಿಸುತ್ತಲಿದ್ದರೆ, ಬಹುಶಃ ಅವರು ಧ್ಯಾನದ ಅಭ್ಯಾಸವನ್ನು ಮಾಡುತ್ತಿರಬಹುದು!
7) ನೀವು ಚಿಂತಿಸಿ ವಿಮರ್ಶಿಸುತ್ತಲಿರುತ್ತೀರಿ ಅಥವಾ ಯೋಜನೆ ಮಾಡುತ್ತಾ ಬಹಳ ಕಲ್ಪನೆಗಳಲ್ಲಿ ಮುಳುಗಿರುತ್ತೀರಿ
ಗತದ ಬಗ್ಗೆ ಪಶ್ಚಾತ್ತಾಪದಲ್ಲಿ ಮುಳುಗಿರುತ್ತೀರಿ ಅಥವಾ ಭವಿಷ್ಯದ ಯೋಜನೆಗಳನ್ನು ಮಾಡುತ್ತಿರುತ್ತೀರಿ, ಕಹಿತನವನ್ನು ಅನುಭವಿಸುತ್ತಿರುತ್ತೀರಿ ಅಥವಾ ಆತಂಕದಿಂದ ಚಿಂತಿತರಾಗಿರುತ್ತೀರಿ. ಮನಸ್ಸು ವಿಪರೀತವಾಗಿ ಕ್ರಿಯಾಶೀಲವಾಗಿದ್ದರೆ, ಅದು ಒತ್ತಡದ ಚಿಹ್ನೆ. ಧ್ಯಾನದಿಂದ ಮನಸ್ಸು ವರ್ತಮಾನಕ್ಕೆ ಬರುತ್ತದೆ ಮತ್ತು ಆ ಕ್ಷಣವು ಹೇಗಿದೆಯೊ ಹಾಗೆಯೆ ಅದನ್ನು ಆನಂದಿಸಬಲ್ಲಿರಿ.
8) ಸರಳವಾದ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಹ ಒದ್ದಾಡುತ್ತೀರಿ
ಏನನ್ನು ಹಾಕಿಕೊಳ್ಳುವುದು, ಯಾವ ಉಪಹಾರ ಮಂದಿರಕ್ಕೆ ಹೋಗುವುದು, ಯಾವ ರೀತಿಯ ಕಾಫಿಯನ್ನು ಕುಡಿಯಬೇಕು ಅಥವಾ ಯಾವ ರೀತಿಯ ಅಡುಗೆ ಮಾಡಬೇಕು ಎಂಬಂತಹ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮ ಪತಿ/ಪತ್ನಿ ಅಥವಾ ಸ್ನೇಹಿತರನ್ನು ಕೇಳುವಂತಹರಾದರೆ ನೀವು, ಧ್ಯಾನದಿಂದ ನಿಮಗೇನು ಬೇಕೊ ಅದನ್ನು ಪಡೆಯುವ ಆತ್ಮವಿಶ್ವಾಸ ನಿಮಗೆ ಬರುತ್ತದೆ.
9) ವಿನಾಕಾರಣ ಹೊರೆಯನ್ನು ಹೊತ್ತಂತೆ ಭಾವಿಸುವುದು
ಸಣ್ಣ ವಿಷಯಗಳಿಂದಲೂ ದೊಡ್ಡ ಹೊರೆ ಹೊತ್ತಂತೆ ಭಾವಿಸುತ್ತೀರಿ ಮತ್ತು ಈ ದಿನಕ್ಕೆ ಮಾಡಬೇಕಾಗಿರುವ ಎಲ್ಲವನ್ನೂ ಹೇಗೆ ಮಾಡಿ ಮುಗಿಸುವುದು ಎಂದು ಚಿಂತಿಸುತ್ತಿರುತ್ತೀರಿ! ಧ್ಯಾನದಿಂದ ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ, ನಿಮ್ಮ ಆಲೋಚನೆಗಳು ಕ್ರಮಬದ್ಧವಾಗುತ್ತದೆ. ನೀವು ಮಾಡಬೇಕಾದ ಕಾರ್ಯವನ್ನೆಲ್ಲಾ ವಿಶ್ವಾಸದಿಂದ ಮಾಡಿ ಮುಗಿಸುತ್ತೀರಿ.
10) ಎಂದಿಗೂ ಮುಗಿಯದ ಕೆಲಸವು ಇದೆಯೆಂದೆನಿಸಿದಾಗ
ಪ್ರತಿ ದಿನ ಬೆಳಿಗ್ಗೆ ಎದ್ದಾಗ ನೀವು ಮಾಡಬೇಕಾದ ಕೆಲಸವನ್ನು ನೆನೆಸಿಕೊಂಡು ಹೆದರುತ್ತೀರಿ ಮತ್ತು ನೀವು ಎಷ್ಟೇ ಕೆಲಸ ಮಾಡಿದರೂ, ಕಚೇರಿಯ ಕೆಲಸ ಮತ್ತು ಮನೆಗೆಲಸ ಹೆಚ್ಚುತ್ತಲೇ ಇರುವಂತೆ ತೋರುತ್ತದೆ. ನಿಮ್ಮ ಕೆಲಸ ಮಾಡಿ ಮುಗಿಸಬೇಕಾದ ನಿಗಧಿತ ಸಮಯವನ್ನು ನೆನಪಿಸಿಕೊಂಡು ಹೆದರುತ್ತೀರಿ. ನಿಮ್ಮಿಂದ ಆ ನಿಗಧಿತ ಸಮಯದೊಳಗೆ ಕೆಲಸ ಮಾಡುವುದು ಸಾಧ್ಯವೇ ಇಲ್ಲ ಅನಿಸುತ್ತದೆ. ಧ್ಯಾನದಿಂದ ಅನೇಕ ಕಾರ್ಯಗಳನ್ನು ಒಮ್ಮೆಲೇ ಮಾಡುವ ಸಾಮಥ್ರ್ಯ ನಿಮಗೆ ಬರುತ್ತದೆ, ನಿಮ್ಮ ಗಮನ ಹೆಚ್ಚುತ್ತದೆ, ಅಭಿವ್ಯಕ್ತಿ ಹೆಚ್ಚುತ್ತದೆ. ಇದರಿಂದ ನೀವೇನೇ ಮಾಡಲಿ, ಅದರಲ್ಲಿ ಹೆಚ್ಚು ಸಮರ್ಥರಾಗಿರುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಕರಾಗಿರುತ್ತೀರಿ.
11) ವಿಪರೀತವಾಗಿ ಭಾವನೆಗಳ ಏರುಪೇರನ್ನು ಅನುಭವಿಸುತ್ತೀರಿ
ಮನಸ್ಸಿನ ತಿರುಗು ಬಂಡಿಯಲ್ಲಿ ಕುಳಿತಿರುವಂತೆ ನಿಮಗೆ ಅನಿಸುತ್ತದೆ ಮತ್ತು ವೇಗವಾಗಿ, ಭಾವನಾತ್ಮಕವಾಗಿ ಮೇಲೆ-ಕೆಳಗೆ ಹೋಗುತ್ತಿರುವಂತೆ ಭಾವಿಸುತ್ತೀರಿ. ಕೆಲ ಕ್ಷಣಗಳು ವಿಪರೀತವಾಗಿ ಸಂತೋಷದಿಂದಿರುತ್ತೀರಿ ಮತ್ತು ಉದ್ರೇಕಗೊಳ್ಳುತ್ತೀರಿ ಮತ್ತು ಕೆಲ ಕ್ಷಣಗಳ ನಂತರ ದಿಢೀರೆಂದು ದುಃಖಿಗಳಾಗಿರುತ್ತೀರಿ, ಖಿನ್ನತೆಯನ್ನು ಅನುಭವಿಸುತ್ತೀರಿ. ಧ್ಯಾನದಿಂದ ಭಾವನೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು ಮತ್ತು ನಿಮ್ಮ ಭಾವನಾತ್ಮಕ ಏರುಪೇರನ್ನು ನಿಯಂತ್ರಿಸಬಹುದು.
12) ಬೇಗನೆ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೀರಿ
ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳುವುದು ಸುಲಭ ಮತ್ತು ಏಕಾಗ್ರತೆಯಿಂದ ಇರುವುದು ಒಂದು ದೊಡ್ಡ ಸವಾಲೇ ಸರಿ. ಸಾಮಾಜಿಕ ಮಾಧ್ಯಮ ಅಥವಾ ಇತರ ಗೀಳಿನ ಮೇಲೆ ನಿಮಗೆ ನಿಯಂತ್ರಣವನ್ನು ಹೊಂದಲು ಸಾಧ್ಯವಿಲ್ಲವಾದರೆ, ಧ್ಯಾನದಿಂದ ಮತ್ತೆ ನಮ್ಮ ಏಕಾಗ್ರತೆಯನ್ನು ಪಡೆದು ಕೇಂದ್ರಿಕೃತರಾಗಬಲ್ಲಿರಿ. ನಿಮ್ಮ ಮನಸ್ಸು ಒಡೆದು ಅಲ್ಲಿ ಇಲ್ಲಿ ಛಿದ್ರವಾಗಿ ಹೋಗದಂತೆ ಧ್ಯಾನವು ಮನಸ್ಸನ್ನು ತಡೆದು, ಶಾಂತವಾದ ಮನಸ್ಸಿನಿಂದ ನಿಮ್ಮ ಜೀವನವನ್ನು ನಿಭಾಯಿಸಲು ಸಾಧ್ಯವಾಗುತ್ತದೆ.
13) ಆಗಿಂದಾಗ ಖಿನ್ನರಾಗುತ್ತಿರುತ್ತೀರಿ
ಸಾಮಾನ್ಯವಾಗಿ ಕೆಳಗುಂದಿದಂತಹ ಭಾವನೆ ನಿಮ್ಮಲ್ಲಿದ್ದರೆ, ಅದು ಖಿನ್ನತೆಯ ರೋಗದ ಲಕ್ಷಣವಾಗಿರಬಹುದು ಮತ್ತು ರೋಗದಂತೆ ಇನ್ನೂ ಕಾಣಿಸಿಕೊಳ್ಳದಿರುವ ಖಿನ್ನತೆಯ ಲಕ್ಷಣವಾಗಿರಬಹುದು. ಧ್ಯಾನದಿಂದ ಈ ಎರಡೂ ಲಕ್ಷಣಗಳನ್ನು ನಿವಾರಿಸಬಹುದು. ಸರಳವಾದ, ಪ್ರಯತ್ನರಹಿತವಾದ ಸಹಜ ಸಮಾಧಿ ಧ್ಯಾನದ ಪ್ರಕ್ರಿಯೆಯನ್ನು ಕಲಿಯಬಹುದು. ಈ ಪ್ರಕ್ರಿಯೆಯು ಮುದಿತನದ ಖಿನ್ನತೆಯನ್ನು ಬಹಳ ಕುಗ್ಗಿಸುತ್ತದೆ ಎಂದು ಸಿಟಿವಿ ವಾರ್ತೆ ವರದಿ ಮಾಡಿದೆ.
14) ಸದಾಕಾಲ ನೀವು ಆತಂಕದಿಂದಿದ್ದರೆ, ಚಿಂತಿತರಾಗಿದ್ದರೆ
ನೀವು ಪ್ರಶಾಂತವಾಗಬೇಕು ಅಥವಾ ವಿಶ್ರಮಿಸಬೇಕು ಎಂದು ಎಲ್ಲರೂ ನಿಮಗೆ ಸದಾ ಹೇಳುತಲಿದ್ದರೆ, ಧ್ಯಾನದಿಂದ ನೀವು ಸ್ಥಿರವಾಗುತ್ತೀರಿ ಮತ್ತು ಆತಂಕದ, ಭೀತಿಯ ಶಕ್ತಿಯು ಬಹಳ ಕುಗ್ಗುತ್ತದೆ.
15) ಶೀಘ್ರವಾಗಿ ಜನರ ಬಗ್ಗೆ ತೀರ್ಪುಗಳನ್ನು ನೀಡುತ್ತೀರಿ
ಇತರರ ಬಗ್ಗೆ ತೀರ್ಪನ್ನು ನೀಡದಿರುವುದು ಸೌಜನ್ಯವಾದರೂ ಅದನ್ನು ಜಾರಿಗೆ ತರುವುದು ಕಷ್ಟವೆ. ಧ್ಯಾನದ ಮನಸ್ಸು ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಸಹೃದಯತೆ, ಕರುಣೆ ಹೆಚ್ಚುತ್ತದೆ. ಇದರಿಂದ ಶೀಘ್ರವೆ ಜನರ ಮೇಲೆ ತೀರ್ಪುಗಳನ್ನು ನೀಡುವ ಪ್ರವೃತ್ತಿಯ ಮೇಲೆ ಹತೋಟಿಯನ್ನು ಹೊಂದಬಹುದು.
16) ಸಮಸ್ಯೆಗಳನ್ನು ನಿವಾರಿಸುವ ಕುಶಲತೆಗಳು ನಿಮ್ಮಲ್ಲಿ ಇಲ್ಲವೆಂದು ನಿಮಗೆ ಅನಿಸುವುದು
ಧ್ಯಾನದಿಂದ ನೀವು ಹೆಚ್ಚು ಸೃಜನಶೀಲರಾಗುತ್ತೀರಿ ಮತ್ತು ಸಾಮಾನ್ಯವಾದ ರೀತಿಗಿಂತಲೂ ಬೇರೆಯದಾಗಿ ಆಲೋಚಿಸಬಲ್ಲಿರಿ. ಇದರಿಂದ ನಿಮ್ಮ ಸ್ವ-ಅರಿವು ಹೆಚ್ಚುತ್ತದೆ, ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ, ನೆಲೆ ನಿಲ್ಲುತ್ತದೆ. ಇದರಿಂದ ನಿಮ್ಮ ಸಮಸ್ಯೆಗಳನ್ನು ನವೀನ ದೃಷ್ಟಿಕೋನಗಳಿಂದ ಕಂಡು, ಅದನ್ನು ಪರಿಣಾಮಕಾರಕವಾಗಿ ನಿವಾರಿಸಬಹುದು.
17) “ಇವೆಲ್ಲದ್ದರ ಗುರಿಯೇನು?” ಎಂದು ನಿಮಗೆ ಅನಿಸುತ್ತಲಿರಬಹುದು
ಜೀವನ ಕ್ಲಿಷ್ಟವಾದದ್ದು ಮತ್ತು ಅದು ನಿರಂತರವಾದ ಹೋರಾಟ ಎಂದು ನಿಮಗನಿಸಿ, ನಿಮ್ಮಲ್ಲಿರುವ ಎಲ್ಲಾ ಉತ್ಸಾಹವೂ ಹೊರಟು ಹೋಗುತ್ತದೆ. ನೀವು ಇಷ್ಟೆಲ್ಲಾ ಕಷ್ಟ ಪಡುವುದು ಯೋಗ್ಯವೆ ಎಂದು ಆಲೋಚಿಸಲಾರಂಭಿಸುತ್ತೀರಿ! ಈ ಸಮಯದಲ್ಲಿ ಎಲ್ಲವನ್ನೂ ನಿಲ್ಲಿಸಿ, ವಿರಮಿಸಿ, ಧ್ಯಾನ ಮಾಡಿ, ಮತ್ತೆ ನಿಮ್ಮಲ್ಲಿ ಆ ಕಿಡಿಯನ್ನು, ಸಂತೋಷವನ್ನು ಮರುತರಿಸಬೇಕು.
18) ಬದಲಾವಣೆಗಾಗಿ ಎದುರು ನೋಡುತ್ತಲೇ ಇರುತ್ತೀರಿ
ನಿಮ್ಮ ದಿನಚರಿಯ ಬಗ್ಗೆ ನಿಮಗೆ ಬೇಸರಿಕೆಯಿದೆಯೆ? ನಿಮ್ಮ ದಿನಚರಿಯಲ್ಲಿ ಕೆಲವು ನಿಮಿಷಗಳ ಧ್ಯಾನವನ್ನು ಸೇರಿಸಿಕೊಳ್ಳಿ. ಆಗ ನಿಮ್ಮ ದಿನಚರಿಯಲ್ಲಿ ಹೆಚ್ಚು ತಾಜಾತನವಿರುವುದನ್ನು ಕಂಡುಕೊಳ್ಳುತ್ತೀರಿ.
19) ವಿನಾಕಾರಣ ಕೋಪಿಸಿಕೊಳ್ಳುತ್ತೀರಿ
ಧ್ಯಾನದಿಂದ ನಿಮ್ಮ ಕೋಪದ ಮೇಲೆ ನಿಯಂತ್ರಣವನ್ನು ಹೊಂದಬಹುದು, ನಿಮ್ಮನ್ನು ಗರಿಗೆದರಿಸುವಂತಹ ಪರಿಸ್ಥಿತಿಗಳಿಗೆ ಆಲೋಚಿಸದೆ ಪ್ರತಿಕ್ರಯಿಸುವ ಬದಲಿಗೆ, ಪ್ರಜ್ಞೆಯೊಡನೆ ಪ್ರತಿಕ್ರಯಿಸುತ್ತೀರಿ.
20) ನಿಮ್ಮ ಊಹೆಗೂ ಮೀರಿದ ಒತ್ತಡವನ್ನು ಹೊಂದಿರುವಿರಿ
ಕೆಲವೊಮ್ಮೆ ಸದಾ ಕಾರ್ಯನಿರತವಾಗಿರಬೇಕಾಗಿರುವಂತಹ ಪರಿಸ್ಥಿತಿಯಲ್ಲಿ ಇರುತ್ತೀರಿ ಮತ್ತು ಅದರಿಂದಾಗಿ ಪೂರ್ಣವಾಗಿ ಒತ್ತಡದಲ್ಲಿರುತ್ತೀರಿ. ಧ್ಯಾನದ ಅತೀ ಪ್ರಸಿದ್ಧವಾದ ಮತ್ತು ಸಂಶೋಧನೆಗಳಿಂದ ಅನೇಕ ಸಲ ನಿರೂಪಿಸಲ್ಪಟ್ಟ ಪ್ರಭಾವವೆಂದರೆ ಒತ್ತಡವನ್ನು ಕಡಿಮೆ ಮಾಡುವುದು. ಪ್ರತಿನಿತ್ಯ ಕೆಲವು ನಿಮಿಷಗಳ ಧ್ಯಾನವನ್ನು ಖಚಿತವಾಗಿ ಮಾಡಿ ಮತ್ತು ಈ ರೀತಿಯಾಗಿ ನಿಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ನೋಡಿಕೊಳ್ಳುವುದರಿಂದ, ನೀವು ಹೆಚ್ಚು ಶಕ್ತಿಯುತರಾಗಿ ಮತ್ತು ಸಂತೋಷವಾಗಿ ಇರುತ್ತೀರಿ.
21) ನಿಮಗೆ ಹೆಚ್ಚು ರಕ್ತದೊತ್ತಡವಿದೆ
ಧ್ಯಾನದಿಂದ ಹೆಚ್ಚಿನ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬುದು ಸಾಬೀತಾಗಿದೆ ಎನ್ನುತ್ತಾರೆ ಹೃದ್ರೋಗ ತಜ್ಞರಾದ ಖ್ಯಾತ ಲೇಖಕರಾದ ಜೋಯೆಲ್ ಕಾನ್.
22) ನಿದ್ರಾವಿಹೀನತೆಯಿಂದ ಬಳಲುತ್ತೀರಿ
ಸಮಯಕ್ಕೆ ಸರಿಯಾಗಿ ಮಲಗಲು ಸಾಧ್ಯವಿಲ್ಲದಾದಾಗ, ರಾತ್ರಿ ಕಳೆದರೂ ನಿದ್ದೆ ಮಾಡಲಾರದಾದಾಗ ಅಥವಾ ನಿಮ್ಮ ನಿದ್ದೆಯ ಗುಣಮಟ್ಟ ಅಧಮವಾದಾಗ, ನೀವು ಧ್ಯಾನವನ್ನು ಮಾಡಲು ಆರಂಭಿಸಬೇಕು. ಧ್ಯಾನದಿಂದ ನಿಮ್ಮ ದೇಹ ವಿಶ್ರಾಮಿತವಾಗುತ್ತದೆ, ಒತ್ತಡದ ಬಿಡುಗಡೆಯಾಗುತ್ತದೆ ಮತ್ತು ನೀವು ಸುಖವಾಗಿ ನಿದ್ದೆ ಮಾಡಬಹುದು. ಸುದರ್ಶನ ಕ್ರಿಯಾ ಯೋಗದ ಧ್ಯಾನದಿಂದ ನಿದ್ರಾವಿಹೀನತೆ ಬಹಳವಾಗಿ ಕಡಿಮೆಯಾಗುತ್ತದೆ.
23) ನೀವು ಏಕಾಂಗಿ
ಧ್ಯಾನವು ಏಕಾಂಗಿಯಾದ ಚಟುವಟಿಕೆ ಎಂದು ನೀವು ಅಂದುಕೊಳ್ಳಬಹುದು. ನೀವು ಗುಂಪಿನಲ್ಲಿ ಧ್ಯಾನ ಮಾಡುತ್ತಿರದಿದ್ದರೆ, ಅದು ಏಕಾಂಗಿಯಾದ ಕಾರ್ಯವಾಗುತ್ತದೆ, ಆದರೆ ಅದು ಇತರರ ಬಗ್ಗೆ ಸಂಬಂಧದ ಭಾವವನ್ನು ಉಂಟು ಮಾಡುತ್ತದೆ, ಭಾವನಾತ್ಮಕ ಬುದ್ಧಿವಂತಿಕೆಯ ಪೆÇೀಷಣೆಯಾಗುತ್ತದೆ, ಸಾಮಾಜಿಕ ಸಂಬಂಧವನ್ನು ಹೆಚ್ಚಿಸುತ್ತದೆ, ನಿಮ್ಮ ಸಾಮಾಜಿಕ ಜೀವನ ಸುಧಾರಿಸುತ್ತದೆ.
24) ನೀವು ಪಿಎಂಎಸ್‍ನಿಂದ ಬಳಲುತ್ತಿದ್ದೀರಿ
ಋತುಸ್ರಾವವಾಗುವ ಕೆಲ ದಿನಗಳ ಮೊದಲಿನಿಂದ 90% ರಷ್ಟು ಮಹಿಳೆಯರು ಸವಾಲುಕರವಾದ ದೈಹಿಕ ಹಾಗೂ ಭಾವನಾತ್ಮಕ ಬದಲಾವಣೆಗಳನ್ನು ಎದುರಿಸುತ್ತಾರೆ. ಹೆಚ್ಚು ಕಿರಿಕಿರಿ ಉಂಟಾಗುತ್ತದೆ, ಏಕಾಗ್ರತೆ ಮಾಡುವುದು ಕಷ್ಟವಾಗುತ್ತದೆ, ಹಸಿವು ಆಗುವುದು ಬದಲಿಸುತ್ತದೆ, ಪೂರ್ಣ ಖಿನ್ನತೆ, ಸುಸ್ತು ಮತ್ತು ಆತಂಕ ಉಂಟಾಗುತ್ತದೆ. ಅದೃಷ್ಟಕರವಾಗಿ ಧ್ಯಾನದ ಸಹಾಯದಿಂದ ಮಹಿಳೆಯರು ತಮ್ಮ ಲಕ್ಷಣಗಳನ್ನು ನಿಭಾಯಿಸಿಕೊಳ್ಳಬಹುದು.
25) ನಿಮ್ಮ ಲೈಂಗಿಕ ಜೀವನಕ್ಕೆ ಪುಷ್ಠಿ ಬೇಕು
ನಿಮ್ಮ ಅನುಭೂತಿಯನ್ನು ಹೆಚ್ಚಿಸಿಕೊಂಡರೆ ಧ್ಯಾನದಿಂದ ನಿಮ್ಮ ಸಂಗಾತಿಯೊಡನೆ ಆಳವಾದ ಹಂತದಲ್ಲಿ ಸಂಬಂಧಪಡಿಸಿಕೊಳ್ಳಬಹುದು ಮತ್ತು ನಿಮ್ಮ ಲೈಂಗಿಕ ಸಂಬಂಧವೂ ಸುಧಾರಿಸುತ್ತದೆ.
ಧ್ಯಾನವನ್ನು ಎಲ್ಲರೂ ಮಾಡಬಹುದು. ಧ್ಯಾನದಿಂದ ನಿಮ್ಮ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಬಹುದು. ಆದ್ದರಿಂದ ದಿನೇ ದಿನೇ ಧ್ಯಾನದ ವಿಶ್ರಾಂತಿ ಸ್ಥಳಗಳು, ಧ್ಯಾನದ ಒಕ್ಕೂಟಗಳು ಪ್ರಸಿದ್ಧಿಯನ್ನು ಪಡೆಯುತ್ತಿವೆ. ಅನೇಕ ರೀತಿಗಳೂ ಇವೆ ಮತ್ತು ಎಲ್ಲವು ತಮ್ಮದೇ ಆದ ಬಲಗಳನ್ನು ಮತ್ತು ಲಾಭಗಳನ್ನು ಪಡೆದಿವೆ. ನಿಮ್ಮ ಗುರಿಗೆ ಸರಿಹೊಂದುವಂತಹ ಧ್ಯಾನದ ರೀತಿಯನ್ನು ಆಯ್ದುಕೊಂಡರೆ ನಿಮ್ಮ ಜೀವನದ ಗುಣಮಟ್ಟ ಸುಧಾರಿಸುತ್ತದೆ. ಧ್ಯಾನ ಮಾಡಲು ನಿಮಗೆ ಕೆಲವೇ ನಿಮಿಷಗಳು ಸಿಕ್ಕರೂ ಸಾಕು. ಸಂತೋಷದಿಂದ ಧ್ಯಾನ ಮಾಡಿ!