ನಾನು ಸರಿಯಾದ ನಿರ್ಣಯವನ್ನು ಹೇಗೆ ಮಾಡಬಲ್ಲೆ ? ನನ್ನ ಆಯ್ಕೆಗಳು ಸರಿಯಾದ ಮತ್ತು ಒಳ್ಳೆಯ ಪ್ರತಿಫಲವನ್ನು ಕೊಡುತ್ತವೆಯಾ ಎನ್ಧುವುದು ಹೇಗೆ ಗೊತ್ತಾಗುತ್ತದೆ ? ನನ್ನ ವಿಚಾರಗಳು ನನ್ನ ಕೆಲಸದಲ್ಲಿ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುವುದೆ೦ದು ಹೇಗೆ ಖಚಿತ ಪಡಿಸಿಕೊಳ್ಳುವುದು ?
ನಿಮ್ಮ ದಿನಚರಿಯಲ್ಲಿ, ನೀವು ಈ ರೀತಿ ಪ್ರಶ್ನೆಗಳಿ೦ದ ಭಾಧಿತರಾಗದೇ ಇರುವುದು ಬಹಳ ಅಪರೂಪ. ನಾವು ಕಾರ್ಯಕ್ಷೇತ್ರದಲ್ಲಿ ಬಹಳ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ - ಮಿತವ್ಯಯ, ಯಾರಿಗೆ ಯಾವ ಕೆಲಸ, ಜವಾಬ್ಧಾರಿ ವಹಿಸುವುದು, ಸಂಪನ್ಮೂಲವನ್ನು ಹೇಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳುವುದು ಇತ್ಯಾದಿ. ಕಾರ್ಯನಿರ್ವಾಹಕರಾಗಿ, ಮೇಲ್ವಿಚಾರಕರಾಗಿ ನಮ್ಮ ಕಾರ್ಯನಿರ್ವಹಣೆಯ ಫಲಿತಾ೦ಶ, ನಾವು ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಮೇಲಿದೆ.
ಧ್ಯಾನವು ಹೇಗೆ ನಮ್ಮ ನಿರ್ಣಯ ಕುಶಲತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ಧ್ಯಾನದ ಈ ಪ್ರಾಚೀನ ತಂತ್ರವು ನಿಮ್ಮ ಮನಸ್ಸನ್ನು ಒಂದು ಸಧೃಡ ಚೈತನ್ಯಶಕ್ತಿಯ ಮೂಲವನ್ನಾಗಿ, ವಿವೇಚನಾಪೂರ್ಣ ನಿರ್ಣಯಗಳ ಪೀಠವನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ. ಒಂದು ಒಳ್ಳೆಯ ನಿರ್ಣಯ ನಿಮ್ಮ ವಿಚಾರಗಳ, ಅನುಭವಗಳ ಪ್ರತಿಬಿಂಬ ಮತ್ತು ಇದನ್ನು ಧ್ಯಾನದ ಮೂಲಕ ವೃದ್ಧಿಸಿಕೊಳ್ಳಬಹುದು.
#1 – ಸಹಜ, ಕೇಂದ್ರೀಕೃತ, ಶಾಂತ ಮನಸ್ಸು
ಧ್ಯಾನವು ನಿಮ್ಮ ಮನಸ್ಸಿನಲ್ಲಿರುವ ಒತ್ತಡದ ರಾಶಿಯನ್ನು ಹೊರಹಾಕಿ ಮನಸ್ಸನ್ನು ನಿರ್ಮಲವಾಗಿರಿಸುತ್ತದೆ. ನಾವು ನಮ್ಮ ಒಳ ಮನಸ್ಸಿನೊಡನೆ, ಆತ್ಮದೊಡನೆ ಶಾಂತಿಯಿಂದ ಇದ್ದಾಗ, ಸಹಜವಾಗಿಯೇ ಹೊರಪ್ರಪಂಚದೊಡನೆಯೂ ಹೆಚ್ಚಿನ ಸ್ಪಷ್ಟತೆಯನ್ನು ಸಾಧಿಸುತ್ತೇವೆ. ಒತ್ತಡಗಳಿಂದ, ಉದ್ವೇಗಗಳಿಂದ ಸ್ವತಂತ್ರವಾಗಿರುವ ಮನಸ್ಸು ಕೇಂದ್ರೀಕೃತವಾಗಿರುತ್ತದೆ, ಶಾಂತಿಯುತವಾಗಿ, ಚುರುಕಾಗಿರುತ್ತದೆ. ಈ ರೀತಿಯ ಮಾನಸಿಕ ನೆಲೆಗಟ್ಟಿನಿಂದ ತೆಗೆದುಕೊಂಡ ನಿರ್ಣಯವು ಖಂಡಿತವಾಗಿಯೂ ಉಪಯುಕ್ತ ಮತ್ತು ಸಂತುಲಿತವಾಗಿರುತ್ತದೆ. ಹೊರಪ್ರಪಂಚದೊಡನೆಯ ವ್ಯವಹಾರದಿಂದ ನಮ್ಮ ಮನಸ್ಸು ವಿಭಿನ್ನ ರೀತಿಯ ಪ್ರವೃತ್ತಿಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಧ್ಯಾನವು ನಮಗೆ ಈ ಪ್ರವೃತ್ತಿಗಳನ್ನು ಕಿತ್ತೆಸೆದು, ಸಹಜವಾಗಿ ಬದುಕುವುದರ ಜೊತೆಗೆ ನಿಷ್ಪಕ್ಷಪಾತ ನಿರ್ಣಯವನ್ನು ತೆಗೆದುಕೊಳ್ಳುವ ಹಾಗೆ ಮಾಡುತ್ತದೆ
#2 – ಸರಿಯಾದ ಸಮತೋಲನ
ತನ್ನ ತಂಡದವರೊಂದಿಗೆ ಯಾರು ಆತ್ಮೀಯತೆಯ ಅನುಭವವನ್ನು ಪಡೆಯುತ್ತಾನೆಯೋ ಅವನೇ ಒಳ್ಳೆಯ ನಾಯಕ. ಅವನು ಇತರರ ಅಭಿಪ್ರಾಯಗಳನ್ನು ತೆರೆದ ಮನದಿಂದ ಒಪ್ಪಿಕೊಂಡು, ಅವುಗಳನ್ನು ಒಳ್ಳೆಯ ಸಲಹೆಗಳೆಂದು ಅಂಗೀಕರಿಸುತ್ತಾನೆ. ಧ್ಯಾನವು ನಿಮ್ಮ ಈ ಗುಣವನ್ನು ಜಾಗ್ರತಗೊಳಿಸಲು ಸಹಾಯ ಮಾಡುತ್ತದೆ. ನಮ್ಮ ಹಿಂದಿನ ನಿರ್ಣಯಗಳಿಂದ ಉಂಟಾದ ಭಯ, ಸುಪ್ತ ಮನಸ್ಸಿನಲ್ಲಿ ಹುದುಗಿರುವ ಆತಂಕ, ವ್ಯಸನ, ಅಪರಾಧಿ ಪ್ರಜ್ಞೆ ಅಥವಾ ಚಿಂತೆ ಮುಂತಾದ ನಕಾರಾತ್ಮಕ ಭಾವನೆಗಳು ನಮ್ಮ ಈಗಿನ ನಿರ್ಣಯಗಳ ಮೇಲೂ ಪರಿಣಾಮ ಬೀರುತ್ತವೆ. ಪ್ರತಿನಿತ್ಯ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಾವು ಈ ರೀತಿಯ ಘಟನೆಗಳಿಂದ ಪಾರಾಗಬಹುದು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಮನಸ್ಸನ್ನು ಸರಿಯಾದ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.
#3 – ತರ್ಕಬದ್ಧ ಆಲೋಚನೆ
“ನಿತ್ಯವೂ ನಿಯಮಿತವಾಗಿ ಧ್ಯಾನ ಮಾಡುವುದರಿಂದ ನೀವು ಇನ್ನೂ ಬುದ್ಧಿಶಕ್ತಿಯುಳ್ಳವರಾಗುತ್ತೀರಿ, ಮಾನಸಿಕ ಜಂಜಾಟಗಳಿಂದ ದೂರವಿದ್ದು, ಯಾವುದೇ ಭಾವನಾತ್ಮಕ ತೊಳಲಾಟದಲ್ಲಿ ಸಿಕ್ಕಿಕೊಳ್ಳದೇ ಇರುತ್ತೀರಿ. ನೀವು ಪರಿಸ್ಥಿತಿಯನ್ನು ಕುರಿತು ತರ್ಕಬದ್ಧವಾಗಿ ಆಲೋಚಿಸುತ್ಥೀರಿ ಮತ್ತು ಅದರ ಮೂಲಕ ಲಾಭಕರ ನಿರ್ಣಯವನ್ನು ತೆಗೆದುಕೊಳ್ಳುತ್ತೀರಿ.” ಎಂದು ಅಭಿಪ್ರಾಯ ಪಡುತ್ತಾರೆ ಪ್ರಿಯಾ ರಾವ್-ಅಧ್ಯಾಪಕಿ, ಜೀವನಕಲೆ ಸಂಸ್ಥೆ.
ಧ್ಯಾನವು ನಿಮ್ಮ ಮೆದುಳಿನ ಎಡ ಮತ್ತು ಬಲ ಗೋಲಾರ್ಧದಿಂದ ಬರುವ ಆಲೋಚನೆಗಳನ್ನು ಸಮತೋಲನದಲ್ಲಿಟ್ಟು ನೀವು ಭಾವನೆ ಅಥವಾ ಪ್ರತಿಕ್ರಿಯೆಗಳ ಬದಲಾಗಿ ಪರಿಹಾರದತ್ತ ಆಲೋಚಿಸಲು ಸಹಾಯ ಮಾಡುತ್ತದೆ.
ನೀರು ಸ್ಥಿರವಾಗಿರುವಾಗ ನೀವು ನಿಮ್ಮ ಪ್ರತಿಬಿಂಬವನ್ನು ಅಡಿಮಟ್ಟದವರೆಗೂ ಸೀದಾ ಕಾಣಬಹುದು. ಸ್ಥಿರ ನೀರಿನಲ್ಲಿ ಒಂದು ಕಲ್ಲು ಎಸೆದಾಗ ಎಲ್ಲಾ ಅಸ್ಪಷ್ಟವಾಗಿ ಏನೂ ಕಾಣಿಸುವುದಿಲ್ಲ. ಅದೇ ರೀತಿ, ನಿಮ್ಮ ಮನಸ್ಸು ಶಾಂತವಾಗಿದ್ದಾಗ ಒಂದು ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇಕಾದ ಗಮನಾರ್ಹ ವಿಷಯಗಳು, ವಿಷಯಗಳ ಆಳ ಮತ್ತು ಅದರಿಂದಾಗುವ ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದು.
#4 – ಸಶಕ್ತ, ಆರೋಗ್ಯಕರ ಮನಸ್ಸು
ನಿಮ್ಮನ್ನು ನೀವು ಒಂದು ಚೈತನ್ಯಪುಂಜವಾಗಿ ಕಂಡುಕೊಳ್ಳಲು ಧ್ಯಾನವು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಸಂತೋಷ ಮತ್ತು ಉತ್ಸಾಹವನ್ನು ಮೂಡಿಸಿ ನಿಮ್ಮನ್ನು ನೈಜರೂಪಕ್ಕೆ ಮರಳಿಸುತ್ತದೆ. ನಿಮ್ಮ ವಿಕಸಿತ ಆತ್ಮದಲ್ಲಿ ಎಷ್ಟು ವಿನೋದ ಮತ್ತು ಸಂತೋಷ ತುಂಬಿದೆ ಎಂಬುದು ಈಗ ನಿಮಗೆ ಅರಿವಾಗುತ್ತದೆ. ನೀವು ನಿಗದಿತ ಸಮಯದಲ್ಲಿ ಮುಗಿಸಬೇಕಾದ ಕೆಲಸದ ಹೊರೆಯ ಒತ್ತಡವನ್ನು ಸುಲಭವಾಗಿ ನಿರ್ವಹಿಸಬಲ್ಲಿರಿ ಮತ್ತು ಯಾವುದೇ ಸಮಯದಲ್ಲಿ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳಲು ತಯಾರಾಗಿರುವಿರಿ.
“ಒಬ್ಬರಲ್ಲಿ ನಿಮ್ಮ ನಿರ್ಣಯವನ್ನು ಅಥವಾ ಅಭಿಪ್ರಾಯವನ್ನು ವ್ಯಕ್ತ ಪಡಿಸುವಾಗ ನೀವು ಎಷ್ಟು ಧೃಡವಾಗಿ ಮತ್ತು ವಿನೀತರಾಗಿ ಅದನ್ನು ಮಾಡುತ್ತೀರಿ ಎಂಬುದರ ಮೇಲೆ ಅದರ ಪ್ರತಿಫಲ ನಿಶ್ಚಿತವಾಗಿರುತ್ತದೆ. ನಮ್ಮ ಒಳಗಿನ ಸಾಮರ್ಥ್ಯದ ಸಲುವಾಗಿ ನಮ್ಮ ಧೃಡತೆಯಲ್ಲೂ ಮತ್ತು ವಿನಮ್ರತೆಯಲ್ಲೂ ಸಮತೋಲನವಿರಬೇಕು .
ಧ್ಯಾನವು ಸಬಲ ಮಾನಸಿಕ ಸ್ಥಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ.” ಎಂದು ಹೇಳುತ್ತಾರೆ ಪ್ರಸಾದ್ - ಇಪ್ಪತ್ತು ವರ್ಷಗಳ ಮೇಲಿನ ಅನುಭವ ಇರುವ, ಒಂದು ಸಂಸ್ಥೆಯ ಹಿರಿಯ ತರಬೇತಿಗಾರ.
#5 – ಅಂತರ್ಜ್ಞಾನ (ಒಳ ಅರಿವು)-ಗ್ರಹಣ ಶಕ್ತಿ- ಗಮನವಿಟ್ಟು ನೋಡುವಿಕೆ
ಸಾಂಪ್ರದಾಯಿಕವಾಗಿ, ಒಳಮನಸ್ಸಿನ ನಿರ್ಣಯಗಳು ಶ್ರೇಷ್ಠ ಮತ್ತು ಪವಿತ್ರವಾಗಿರುತ್ತವೆ. ಧ್ಯಾನವು ನಮ್ಮ ಅಂತಃಸ್ಫುರಣ ಶಕ್ತಿಯನ್ನು ಅಭಿವೃದ್ಧಿ ಪಡಿಸುವ ಒಂದು ಅಪ್ರಯತ್ನ ತಂತ್ರ, ಜೊತೆಯಲ್ಲಿ ಇದು ಗ್ರಹಣ ಶಕ್ತಿ ಮತ್ತು ಅವಲೋಕನವನ್ನು ಹೆಚ್ಚಿಸುತ್ತದೆ. ಒಳ ಅರಿವು ಪ್ರತಿನಿತ್ಯ ಧ್ಯಾನ ಮಾಡುವವರು ಮಾತ್ರ ಉಪಯೋಗಿಸಬಲ್ಲ ಯೋಚನಾಶಕ್ತಿಯ ಒಂದು ವಿಶೇಷ ಆಯಾಮ.
“ನನ್ನ ಕೆಲಸದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಸೃಜನಾತ್ಮಕತೆಯ ಮತ್ತು ನವೀನತೆಯ ಅವಶ್ಯಕತೆ ಇರುತ್ತದೆ. ನಾನು ಕಳೆದ ಎರಡು ವರ್ಷಗಳಿಂದ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೇನೆ, ಇದರಿಂದ ನನ್ನ ಸಾಮರ್ಥ್ಯ ಶಕ್ತಿಯು ತೀಕ್ಷ್ಣವಾಗಿ ನನ್ನ ಕೆಲಸಗಳು ದೋಷರಹಿತವಾಗಿವೆ ಎಂಬುದನ್ನು ಕಂಡುಕೊಂಡಿದ್ಧೇನೆ.’ ಎಂದು ಹೇಳುತ್ತಾರೆ, ಒಂದು ಪ್ರಮುಖ ಜಾಹೀರಾತು ಸಂಸ್ಥೆಯ ಸೃಜನಾತ್ಮಕ ಶಾಖೆಯಲ್ಲಿ ಭಾಗೀದಾರರಾಗಿರುವ ರೋಹಿತ್ ಅವರು. ಯಾವುದೇ ಕೆಲಸದ ವಾತಾವರಣದಲ್ಲಿ ಎಳೆತಗಳು, ಹಿನ್ನಡೆಗಳು ಇರುತ್ತವೆ. ಅವುಗಳನ್ನು ನಾವು ಸಮಚಿತ್ತದಿಂದ ಆಲೋಚಿಸಿ ಪಾರಾಗಿ ಅತ್ಯತ್ತಮ, ಅರ್ಹ ನಿರ್ಣಯಕ್ಕೆ ಬರಬೇಕು. ನಮ್ಮ ಕೆಲಸದ, ವ್ಯಾಪಾರದ, ವಿಭಿನ್ನ ವಿಷಯಾಂಶಗಳ ಕಡೆ ಗ್ರಹಣಶಕ್ತಿ ಮತ್ತು ಗಮನಶಕ್ತಿಯನ್ನು ಹರಿಸುವ ಮೂಲಕ ನಾವು ಅತ್ಯತ್ತಮ ಮಟ್ಟಕ್ಕೆ ಏರಬಹುದು. “ಧ್ಯಾನವು ನಮ್ಮ ಗ್ರಹಣ ಶಕ್ತಿಯನ್ನು ಮತ್ತು ಅವಲೋಕನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತದೆ.” ಎಂದು ಹೇಳುತ್ತಾರೆ ಪ್ರಸಾದ್.