ಪ್ರತಿಯೊಂದು ಕ್ರೀಡಾಪಟುವೂ ಸಹ ಕ್ರೀಡೆಯಲ್ಲಿ ಯಶಸ್ಸನ್ನು ಕಾಣಲು ಶಕ್ತಿಯು ಅತ್ಯಾವಶ್ಯಕ ಎನ್ನುತ್ತಾರೆ. ಆಹಾರ, ವಿಶ್ರಾಂತಿದಾಯಕವಾದ ನಿದ್ದೆ, ಉಸಿರಾಟ ಮತ್ತು ಧ್ಯಾನವು ಶಕ್ತಿಯ ನಾಲ್ಕು ಮೂಲಗಳು.
ಧ್ಯಾನದಿಂದ ಸಿಗುವ ಶಕ್ತಿಯು ನಿದ್ದೆಯಿಂದ ಸಿಗುವ ಶಕ್ತಿಗಿಂತಲೂ ಹೆಚ್ಚು. 20 ನಿಮಿಷಗಳ ಆಳವಾದ ಧ್ಯಾನವು ಅನೇಕ ಗಂಟೆಗಳ ನಿದ್ದೆಗೆ ಸರಿಸಮಾನ. ಒತ್ತಡವನ್ನು, ಆತಂಕವನ್ನು ನಿವಾರಿಸಿ, ಉತ್ತಮವಾದ ಆರೋಗ್ಯವನ್ನು ಕೊಡುವಂತಹ ಶಕ್ತಿಶಾಲಿಯಾದ ಒಂದು ಪ್ರಕ್ರಿಯೆಯೇ ಧ್ಯಾನ. ಕೆಳಗೆ ನೀಡಿರುವ ಎಂಟು ಹೆಜ್ಜೆಗಳು ಅನುಸರಿಸಿದರೆ ನಿಮ್ಮ ಕ್ರೀಡೆಗೆ ಮತ್ತು ಜೀವನಕ್ಕೆ ಬಹಳ ಸಹಾಯಕವಾಗಿರುತ್ತದೆ.
1) ಯೋಗಿಕ ವಿಸ್ತರಣ
ಯೋಗಿಕ ವಿಸ್ತರಣವು ಪಾಶ್ಚಿಮಾತ್ಯರ ವ್ಯಾಯಾಮದ ಸಿದ್ಧಾಂತಕ್ಕಿಂತಲೂ ಭಿನ್ನವಾಗಿದೆ ಮತ್ತು ನಿಮ್ಮ ಧ್ಯಾನವನ್ನು ಆರಂಭಿಸಲು ಅತ್ಯಾವಶ್ಯಕ. ಹೆಚ್ಚಿನ ಶಕ್ತಿಯನ್ನು ಇದು ಬಿಡುಗಡೆ ಮಾಡಿ ಸುಲಭವಾಗಿ ಮನಸ್ಸು ವಿಶ್ರಮಿಸಲು ಸಹಾಯ ಮಾಡುತ್ತದೆ.
ಪರಿಣಾಮಕಾರಕವಾದ ಕಾರ್ಯ :- 5-10 ಸುತ್ತುಗಳ ಸರಣಿ ಯೋಗಾಸನಗಳಾದ ಸೂರ್ಯ ನಮಸ್ಕಾರದಂತಹ ಯೋಗಾಸನಗಳನ್ನು ಮಾಡಿ. ಇದನ್ನು ಉಸಿರಿನೊಡನೆ ಸಂಯೋಜಿಸಿ ಮಾಡಿ. ತರಬೇತಿ ಪಡೆದ ಯೋಗ ಶಿಕ್ಷಕರಿಂದ ಇದನ್ನು ಮಾಡಲು ಕಲಿಯಿರಿ.
2) ಪ್ರಾಣಾಯಾಮ
ಪ್ರಾಣಾಯಾಮವೆಂದರೆ ಉಸಿರಿನ ನಿಯಂತ್ರಣ. ಇದನ್ನು ಮಾಡುವುದರಿಂದ ಭಾವನೆಗಳಲ್ಲಿ ಮತ್ತು ಶಕ್ತಿಯ ಮಟ್ಟದಲ್ಲಿ ಗಮನಾರ್ಹವಾದ ಬದಲಾವಣೆ ಉಂಟಾಗುವುದಲ್ಲದೆ, ಮನಸ್ಸಿನ ಶುದ್ಧಿಯೂ ಆಗುತ್ತದೆ. ಉಸಿರಾಟಕ್ಕೆ ಪ್ರಾಮುಖ್ಯತೆಯನ್ನು ಕೊಡುವ ಕಾರಣವೆಂದರೆ, ಶ್ವಾಸಕೋಶಗಳು ಸುಮಾರು 250 ವಿಷಕಾರಕ ಪದಾರ್ಥಗಳನ್ನು ಮತ್ತು ಅಶುದ್ಧವಾದ ಪದಾರ್ಥಗಳನ್ನು, ಪ್ರಾಣಾಯಾಮದ ನಿತ್ಯಾಭ್ಯಾಸದಿಂದಾಗಿ ದೇಹದಿಂದ ಹೊರಗೆ ಬಿಸಾಡಬಲ್ಲವು.
ಪರಿಣಾಮಕಾರವಾದ ಕಾರ್ಯ :- ತರಬೇತಿ ಪಡೆದ ಯೋಗ ಶಿಕ್ಷಕರಿಂದ ಕಲಿಯಿರಿ. ಪ್ರತಿದಿನ 10 ನಿಮಿಷಗಳ ಕಾಲ ಪ್ರಾಣಾಯಾಮಗಳನ್ನು ಮಾಡಿ. ಈ ಪ್ರಾಣಾಯಾಮಗಳನ್ನು ಅನೇಕ ಸಾವಿರ ವರ್ಷಗಳಿಂದ ಮಾಡಲಾಗುತ್ತಿದೆ ಮತ್ತು ಇದರಿಂದಾಗಿ ಹೃದಯದ ಮತ್ತು ಶ್ವಾಸಕೋಶಗಳ ಸಾಮಥ್ರ್ಯ ಹೆಚ್ಚುತ್ತದೆ, ಏಕಾಗ್ರತೆ ಹೆಚ್ಚುತ್ತದೆ, ಗಮನ ನೀಡುವ ಅವಧಿ ಹೆಚ್ಚುತ್ತದೆ ಮತ್ತು ನೆನಪಿನ ಶಕ್ತಿಯೂ ಹೆಚ್ಚುತ್ತದೆ.
3) ನಿಮಗೆಂದು ವೈಯಕ್ತಿಕವಾದ ಸ್ಥಳವನ್ನು ಮೀಸಲಿಡಿ
ಪ್ರತಿದಿನವೂ ನೀವು ಕುಳಿತು ಧ್ಯಾನ ಮಾಡಲು ಒಂದು ಹಿತವಾದ, ವೈಯಕ್ತಿಕವಾದ ಸ್ಥಳವನ್ನು ಮೀಸಲಿಡಿ. ಒಂದೇ ಸ್ಥಳದಲ್ಲಿ ಕುಳಿತು ಧ್ಯಾನ ಮಾಡಿದಾಗ, ಉತ್ಥಾಪಿಸುವಂತಹ ವಾತಾವರಣದ ಕಂಪನಗಳು ಹೆಚ್ಚುತ್ತವೆ. ಈ ಸ್ಥಳದಲ್ಲಿ ಸ್ಫೂರ್ತಿದಾಯಕವಾದ ಚಿತ್ರಗಳನ್ನು ಹಾಕಬಹುದು.
ಪರಿಣಾಮಕಾರವಾದ ಕಾರ್ಯ :- ಸುಖವಾಗಿ, ಬೆನ್ನೆಲುಬನ್ನು ನೇರವಾಗಿಟ್ಟು ಕುಳಿತುಕೊಳ್ಳಿ. ನೆಲದ ಮೇಲೆ ಚಕ್ಕಂಭಟ್ಟಳೆ ಹಾಕಿ ಕುಳಿತುಕೊಳ್ಳಿ. ಇದರಿಂದ ಬಹಳ ವಿಶ್ರಾಂತಿ ಸಿಗುತ್ತದೆ. ಮಲಗಬೇಡಿ. ಪ್ರತಿನಿತ್ಯ ದಿನಕ್ಕೆರಡು ಸಲ 20 ನಿಮಿಷಗಳ ಕಾಲ ಧ್ಯಾನ ಮಾಡಿ.
4) ನಿಮ್ಮ ಸಾಧನೆಯನ್ನು ನಿತ್ಯ ಮಾಡಿ
ಅಭ್ಯಾಸದಿಂದ ಪರಿಪೂರ್ಣರಾಗುತ್ತೀರಿ. ನೀವು ನಿತ್ಯಾಭ್ಯಾಸ ಮಾಡಿದಾಗ, ಆ ಪ್ರಶಾಂತವಾದ, ಧ್ಯಾನಸ್ಥವಾದ ಸ್ಥಿತಿಯೊಡನೆ ನಿಮ್ಮ ಮನಸ್ಸು ಒಗ್ಗಿಕೊಳ್ಳುವಂತಹ ತರಬೇತಿ ಸಿಗುತ್ತದೆ.
ಪರಿಣಾಮಕಾರವಾದ ಕಾರ್ಯ :- ಸಾಧ್ಯವಾದಷ್ಟೂ ದಿನದ ಅದೇ ಸಮಯದಲ್ಲಿ ಮತ್ತು ಅದೇ ಅವಧಿಯಷ್ಟು ಕಾಲ ಧ್ಯಾನ ಮಾಡಲು ಯತ್ನಿಸಿ. ನಿಮಗೆ ಚಡಪಡಿಕೆ ಆಗುತ್ತಿದ್ದರೆ ಅದರೊಡನೆಯೇ ಇದ್ದು, ಆ ಚಡಪಡಿಕೆಯನ್ನು ಗಮನಿಸುತ್ತಾ ನಿಮ್ಮ 20 ನಿಮಿಷಗಳ ಧ್ಯಾನವನ್ನು ಮಾಡಿ ಮುಗಿಸಿ.
5) ನಿಮ್ಮ ಧ್ಯಾನದ ಮಂತ್ರ
“ನಾನು ಯಾರೂ ಅಲ್ಲ, ನನಗೇನೂ ಬೇಡ ಮತ್ತು ನಾನು ಏನನ್ನೂ ಮಾಡುವುದಿಲ್ಲ”. ಧ್ಯಾನದಿಂದ ನಿಮಗೆ ಬೇಸರಿಕೆ ಉಂಟಾಗಲು ಸಾಧ್ಯ, ಏಕೆಂದರೆ ನಿಮ್ಮ ಜೀವನದಲ್ಲಿ ಮೊದಲ ಸಲ ಏನನ್ನೂ ಬಯಸುತ್ತಿಲ್ಲ ಅಥವಾ ಏನನ್ನೂ ಬಯಸುತ್ತಿಲ್ಲ. ನಿಮ್ಮ ಅಭ್ಯಾಸದಿಂದ ನಿಮಗೇನಾದರೂ ಸಿಗಬೇಕೆಂದು ಬಯಸಿ ಧ್ಯಾನಕ್ಕೆ ಕುಳಿತರೂ ಸಹ ನಿಮ್ಮ ಧ್ಯಾನ ಕೆಲಸ ಮಾಡಲು ಸಾಧ್ಯವಿಲ್ಲ.
ಪರಿಣಾಮಕಾರವಾದ ಕಾರ್ಯ :- ಕೃತಜ್ಞತೆಯ ಭಾವದಿಂದ ಕುಳಿತುಕೊಳ್ಳಿ. ಆಲೋಚನೆಗಳು ಬಂದು ಹೋಗುತ್ತಲಿರುತ್ತವೆ. ಅವುಗಳನ್ನು ಓಡಿಸುವ ಪ್ರಯತ್ನವನ್ನಾಗಲಿ ಅಥವಾ ಅವುಗಳನ್ನು ನಿಯಂತ್ರಿಸುವ ಪ್ರಯತ್ನಗಳನ್ನಾಗಲಿ ಮಾಡಬೇಡಿ. ಯಾವ ಪ್ರತಿರೋಧವೂ ಇಲ್ಲದೆಯೆ ನಿಮ್ಮ ಆಲೋಚನೆಗಳನ್ನು ಗಮನಿಸುತ್ತಲಿದ್ದರೆ ನಿಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ಅತ್ಯಾವಶ್ಯಕವಾದ ವಿಶ್ರಾಂತಿ ಸಿಗುತ್ತದೆ. ಗಮನಿಸುತ್ತಲಿದ್ದರೆ ಆಲೋಚನೆಗಳು ತಾವಾಗಿಯೆ ಕರಗಿ ಹೋಗುತ್ತವೆಂದು ನೆನಪಿನಲ್ಲಿ ಇಟ್ಟುಕೊಳ್ಳಿ. ಅವುಗಳು ಸಾಗರದ ಅಲೆಗಳಂತೆ. ಬಂದು ಹೋಗುತಲಿರುತ್ತವೆ.
6) ಕೆಫೇನ್, ಮದ್ಯ ಮತ್ತು ಪರಿಷ್ಕೃತವಾದ ಆಹಾರಗಳನ್ನು ಕಡಿಮೆ ಮಾಡಿ
ಆಹಾರ ಮತ್ತು ಪೌಷ್ಠಿಕತೆಯ ಬಗ್ಗೆ ಗಮನವನ್ನು ನೀಡದಿದ್ದರೆ ಒಳ್ಳೆಯ ಧ್ಯಾನದ ಲಾಭಗಳು ಸೀಮಿತವಾಗಿ ಸಿಗುತ್ತವೆ. ಕೆಫೇನ್ ನಿಮ್ಮ ನಿದ್ದೆಗೆಡಿಸಿ, ಆತಂಕ ಮತ್ತು ಚಡಪಡಿಕೆಯನ್ನು ಹೆಚ್ಚಿಸುತ್ತದೆ. ಮದ್ಯವು ಸಮತೋಲನವನ್ನು, ಸ್ಥಿರತೆಯನ್ನು ಕೆಡಿಸಿ, ನರಗಳಿಗೆ ಮತ್ತು ಸ್ನಾಯುಗಳ ಸಂಯೋಜನೆಗೆ ಅವಶ್ಯಕವಾದ ಎಲೆಕ್ಟ್ರೊಲೈಟ್‍ಗಳ, ಖನಿಜಗಳ ಮಟ್ಟದಲ್ಲಿ ಏರುಪೇರನ್ನುಂಟು ಮಾಡುತ್ತದೆ. ಪರಿಷ್ಕೃತವಾದ ಆಹಾರವು ರಾಸಾಯನಿಕಗಳಿಂದ ಮತ್ತು ಪ್ರಿಸರ್‍ವೇಟಿವ್‍ಗಳಿಂದ ಕೂಡಿರುತ್ತದೆ.
ಪರಿಣಾಮಕಾರವಾದ ಕಾರ್ಯ :- ಕೆಫೇನನ್ನು ಮತ್ತು ಮದ್ಯವನ್ನು ತ್ಯಜಿಸಿ ಮತ್ತು ಸಾಕಷ್ಟು ತಾಜಾ ಆದ, ಪರಿಷ್ಕೃತವಾಗಿರದಂತಹ ಆಹಾರಗಳನ್ನೇ ಸೇವಿಸಿ.
7) ನಿಮ್ಮ ಅಭ್ಯಾಸಕ್ಕೆ ಗೌರವವನ್ನು ನೀಡಿ
ನಿಮ್ಮ ಧ್ಯಾನದ ಅಭ್ಯಾಸವನ್ನು ಗೌರವಿಸುವುದು ಮುಖ್ಯ. ನಿಮ್ಮ ದಿನನಿತ್ಯದ ಕ್ರೀಡಾ ತರಬೇತಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಧ್ಯಾನಕ್ಕೂ ಕೊಡಿ.
ಪರಿಣಾಮಕಾರವಾದ ಕಾರ್ಯ :- ನಿಮ್ಮ ಮೊಬೈಲನ್ನು ನಿಲ್ಲಿಸಿ. ನಿಮ್ಮ ಗಮನವನ್ನು ಅತ್ತಿತ್ತ ಸೆಳೆಯುವಂತಹ ಏನೇ ಆಗಲಿ, ಅದನ್ನು ನಿಲ್ಲಿಸಿ. ನಿಮ್ಮ ಧ್ಯಾನವನ್ನು 100% ಮಾಡಿ ಮತ್ತು ಗೌರವದಿಂದ ಮಾಡಿ ಮತ್ತು ಅರಿವಿನಿಂದ ಮಾಡಿ.
8) ಬಿಟ್ಟು ಬಿಡಬೇಡಿ
ನೀವು ಕೂಡಲೆ ಫಲಿತಾಂಶವನ್ನು ಕಾಣದಿದ್ದರೆ ನಿಮ್ಮ ಅಭ್ಯಾಸವನ್ನು ಸಂಶಯಿಸಿ, ಅದನ್ನು ಬಿಟ್ಟುಬಿಡಬೇಡಿ. ಯಾವುದು ಸಕಾರಾತ್ಮಕವಾಗಿರುತ್ತದೊ ಅದನ್ನೇ ಸಂಶಯಿಸುತ್ತೀರಿ. ಹಾರ್ವಾಡ್‍ನ ಸಂಶೋಧಕರು, ಯೋಗ ಮತ್ತು ಧ್ಯಾನವನ್ನು ಬಹಳ ಕಾಲದವರೆಗೆ ಅಭ್ಯಾಸ ಮಾಡುವವರಲ್ಲಿ, ರೋಗಗಳನ್ನು ನಿರೋಧಿಸುವ ಅನುವಂಶಿಕೆಗಳು ಬಹಳ
ಸಕ್ರಿಯವಾಗಿರುತ್ತವೆಂದೂ ಮತ್ತು ಯಾವುದೇ ರೀತಿಯ ವಿಶ್ರಾಂತಿಯ ಅಭ್ಯಾಸವನ್ನು ಮಾಡದವರಲ್ಲಿ ಇದು ಕಾಣುವುದಿಲ್ಲವೆಂದೂ ತಿಳಿಸಿದ್ದಾರೆ. ಇದನ್ನು “ವಿಶ್ರಾಂತಿಯ ಪ್ರಭಾವ” ಎಂದು ಕರೆದರು.
ಪರಿಣಾಮಕಾರವಾದ ಕಾರ್ಯ :- ಅದನ್ನು ಬಿಡಬೇಡಿ. ನಿಮ್ಮ ಧ್ಯಾನದ ಅಭ್ಯಾಸದಿಂದ ನಿಮಗೆ ಅರಿಯದಂತಹ, ಎಣಿಕೆಗೆ ಸಿಗದಂತಹ ರೀತಿಗಳಲ್ಲಿ ಮತ್ತು ಅನೇಕ ಹಂತಗಳಲ್ಲಿ ಲಾಭವನ್ನು ತರುತ್ತಿದೆ (ದೈಹಿಕ, ಮಾನಸಿಕ, ಭಾವನಾತ್ಮಕ) - ಸುಮ್ಮನೆ ನಂಬಿ !
ಲೇಖಕಿ : ಆಂಜೆಲಾ ಸಹೋಟ
ಇಂಪಾಕ್ಟ್ ಮಾಸಪತ್ರಿಕೆಯಲ್ಲಿ ಮೊದಲು ಪ್ರಕಟವಾಯಿತು.