ಸರಿಯಾಗಿ ಧ್ಯಾನ ಮಾಡಲು 5 ಸುಲಭವಾದ ಹೆಜ್ಜೆಗಳು

ಸರಿಯಾಗಿ ಧ್ಯಾನ ಮಾಡಲು 5 ಸುಲಭವಾದ ಹೆಜ್ಜೆಗಳು

 

ಅನೇಕರಿಗೆ “ಧ್ಯಾನ” ಎಂಬ ಪದವು ಸೋಲನ್ನು, ವಿಫಲತೆಯನ್ನು ಸೂಚಿಸುತ್ತದೆ. ನಾನು ನಿತ್ಯ ಧ್ಯಾನ ಮಾಡುತ್ತೇನೆ ಎಂದು ಸ್ನೇಹಿತರು ತಿಳಿದುಕೊಂಡಾಗ ಅವರೆಲ್ಲರೂ, “ನನಗೆ ಸ್ತಬ್ಧವಾಗಿ ಕುಳಿತುಕೊಳ್ಳಲು ಆಗಲೇ ಇಲ್ಲ”, “ಒಂದು ಸಲ ಪ್ರಯತ್ನಿಸಿದೆನಾದರೂ ನನ್ನ ಮನಸ್ಸು ಎಲ್ಲೆಡೆಯೂ ಓಡುತ್ತಿತ್ತು” ಎನ್ನುತ್ತಾರೆ. ಮಂತ್ರ ದೀಕ್ಷೆ ಪಡೆಯುವ ಮೊದಲು ಮತ್ತು ಧ್ಯಾನದ ಶಿಕ್ಷಕರಿಂದ ತರಬೇತಿಯನ್ನು ಪಡೆದುಕೊಳ್ಳುವ ಮೊದಲು, ಐದು ಸೆಕೆಂಡುಗಳಿಗಿಂತಲೂ ಹೆಚ್ಚಾಗಿ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಮನಸ್ಸು ಬಿಡುವುದಿಲ್ಲ ಎಂದೇ ಅನಿಸುತ್ತಿತ್ತು. ಧ್ಯಾನದ ಬಗ್ಗೆ ಅನೇಕ ರಾಶಿ ಪುಸ್ತಕಗಳನ್ನು ಓದಿದೆನಾದರೂ ಧ್ಯಾನದ ಅಭ್ಯಾಸವನ್ನು ಮಾಡುವಾಗ ನಾನು ಸೋತೆನೆಂದೇ ಅನಿಸುತ್ತಿತ್ತು.

ಶಿಕ್ಷಕರಿಂದ ಕಲಿತ ನಂತರ, ನನಗೆ ಸಾಮಥ್ರ್ಯ ಇದೆಯೊ ಇಲ್ಲವೊ ಎನ್ನುವುದಕ್ಕಿಂತಲೂ, ಧ್ಯಾನವನ್ನು ಮಾಡುವುದು ಹೇಗೆಂದು ಸರಿಯಾಗಿ ಅರ್ಥ ಮಾಡಿಕೊಂಡೆನೊ ಇಲ್ಲವೊ ಎನ್ನುವುದೇ ಮುಖ್ಯ ಎಂದು ತಿಳಿದುಕೊಂಡೆ. ಧ್ಯಾನವನ್ನು ಬೋಧಿಸುವ ಅನೇಕ ರೀತಿಗಳ ಶಾಲೆಗಳಿರುವಾಗ, ಉತ್ತಮವಾದ ಪ್ರಕ್ರಿಯೆಯನ್ನು ಕಂಡುಕೊಂಡು, ನೀವು ಸರಿಯಾಗಿ ಧ್ಯಾನ ಮಾಡುತ್ತಿರುವಿರೊ ಇಲ್ಲವೊ ಎಂದು ಕಂಡುಕೊಳ್ಳುವುದು ಕಷ್ಟ ಸಾಧ್ಯವೇ ಸರಿ. ನೀವು ಸರಿಯಾಗಿ ಧ್ಯಾನ ಮಾಡುತ್ತಿರುವಿರೆ, ಇಲ್ಲವೆ ಎಂದು ತಿಳಿಯಲು ಈ ಐದು ಲಕ್ಷಣಗಳ ಮೇಲೆ ಗಮನವನ್ನಿಡಿ.

1. ನಿರ್ದೇಶಿತ ಧ್ಯಾನಗಳಲ್ಲಿ ಸೂಚಿಗಳನ್ನು ಪಾಲಿಸುವುದು

ಕೆಲವು ನಿರ್ದೇಶಿತ ಸೂಚಿಗಳೊಡನೆ ಧ್ಯಾನದೊಳಗೆ ಆಳವಾಗಿ ಮುಳುಗುವುದು ಸುಲಭ ಎಂದು ಗಮನಿಸಿದಿರೆ? ಅನೇಕರಿಗೆ, ನಿರ್ದೇಶಿತ ಧ್ಯಾನಗಳು, ಧ್ಯಾನವನ್ನು ಮಾಡಲು ಆರಂಭಿಸುವ ಅತೀ ಸುಲಭ ಉಪಾಯಗಳಾಗುತ್ತವೆ. ನಿರ್ದೇಶಿತ ಧ್ಯಾನಗಳನ್ನು ಮಾಡುತ್ತಿರುವಾಗ, ಹೇಳಲಾಗುತ್ತಿರುವ ಎಲ್ಲಾ ಸೂಚಿಗಳನ್ನೂ ಪಾಲಿಸಿ. ನಿಮ್ಮ ಪರಮಾತ್ಮದೆಡೆಗೆ ನೀವು ಪಯಣಿಸುತಲಿರುವಾಗ, ನೀವು ದಾರಿ ತಪ್ಪಿ ಬೀಳದಂತೆ ತಡೆಯುವ ರೈಲ್ವೆಯ ಹಳಿಗಳಿವು.

2. ಯಾವ ಎದುರು ನೋಡುವಿಕೆಯನ್ನೂ ಹೊಂದಬೇಡಿ

ಗಾಡಿ ಓಡಿಸುತ್ತಿರುವಾಗ ಕೆಲವೊಮ್ಮೆ ಸುಂದರವಾದ ದೃಶ್ಯವನ್ನು ಕಾಣುವಿರಿ ಮತ್ತು ರಸ್ತೆಗಳಲ್ಲಿ ಇತರ ಗಾಡಿಗಳೇ ಇರುವುದಿಲ್ಲ. ಇನ್ನಿತರ ಸಮಯಗಳಲ್ಲಿ ವಾಹನ ದಟ್ಟಣೆಯ ನಡುವೆಯೇ ಸಿಲುಕಿಕೊಂಡಿರುತ್ತೀರಿ. ದಾರಿಯಲ್ಲಿ ಏನೇ ಆಗಲಿ, ನೀವು ತಲುಪಬೇಕಾದ ಸ್ಥಳಕ್ಕೆ ತಲುಪುತ್ತೀರಿ. ಅದೇ ರೀತಿಯಾಗಿ, ಧ್ಯಾನ ಮಾಡುವಾಗ ಮನಸ್ಸು ಕಾರ್ಯನಿರತವಾದ ಆಲೋಚನೆಗಳಿಂದ ತುಂಬಿರಬಹುದು ಅಥವಾ ಪ್ರಶಾಂತವಾದ ಆನಂದದ ಸ್ಥಿತಿಯಲ್ಲಿರಬಹುದು. ಮನಸ್ಸು ಹೇಗೆಯೇ ಇರಲಿ, ಧ್ಯಾನವು ಕೆಲಸ ಮಾಡುತ್ತದೆ, ವಿಶ್ರಾಂತಿಯನ್ನು ತರುತ್ತದೆ, ಶುದ್ಧಿಯನ್ನು ತರುತ್ತದೆ, ಚೈತನ್ಯವನ್ನು ವಿಸ್ತಾರ ಮಾಡುತ್ತದೆ.

ಧ್ಯಾನ ಮಾಡುತ್ತಿರುವಾಗ ಮನಸ್ಸು ಆಲ್ಲೋಲಕಲ್ಲೋಲತೆಯಿಂದ ತುಂಬಿದ್ದರೆ, ಆ ಅನುಭವದ ಬಗ್ಗೆ ತೀರ್ಪನ್ನು ನೀಡುವುದು ನಮ್ಮ ಪ್ರವೃತ್ತಿಯಾಗುತ್ತದೆ. ನೆಲೆನಿಲ್ಲದಂತಹ ಧ್ಯಾನವನ್ನು “ಒಳ್ಳೆಯದು” ಅಥವಾ “ಕೆಟ್ಟದು” ಎಂದು ತೀರ್ಪು ನೀಡುತ್ತಲಿರುವ ಬದಲಿಗೆ, ಧ್ಯಾನದಲ್ಲಿ ಆಗುವ ಪ್ರತಿಯೊಂದು ಆಗುವಿಕೆಯೂ ಸಹ, ಒತ್ತಡದ ಬಿಡುಗಡೆಯ ಪ್ರಕ್ರಿಯೆಯ ಭಾಗವಾಗಿದೆ ಎಂದು ಗುರುತಿಸಬೇಕು. ನಾವು ಛಿದ್ರಗೊಂಡಂತೆ ಅನಿಸಿದರೂ ಅಥವಾ ಆನಂದಮಯಾವಾಗಿದ್ದರೂ ಎಲ್ಲವೂ ಅನುಭವದ ಲಾಭದಾಯಕವಾದ ಭಾಗವೆ!

3. ದಿನನಿತ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವುದು

ಕಣ್ಣುಗಳನ್ನು ಮುಚ್ಚಿದಾಗ ಏನಾಗುತ್ತದೆಯೆಂಬುದರ ಮೇಲೆ ತಮ್ಮ ಧ್ಯಾನದ ಗುಣಮಟ್ಟದ ಬಗ್ಗೆ ಅನೇಕರು ತೀರ್ಪನ್ನು ನೀಡಿದರೂ ಸಹ, ಧ್ಯಾನದ ನಿಜವಾದ ಪರಿಣಾಮವನ್ನು ನಿಮ್ಮ ದಿನನಿತ್ಯದ ಜೀವನದ ಮೇಲೆ ಬೀರುತ್ತದೆ. ದಿನವಿಡೀ ವಿನಾಕಾರಣ ಸಂತೋಷದಿಂದಿದ್ದರೆ, ನೀವು ಮಾಡುತ್ತಿರುವ ಧ್ಯಾನ ಕೆಲಸ ಮಾಡುತ್ತಿದೆಯೆಂದಾಯಿತು. ನಿಮಗೆ ಯಾವ ಬದಲಾವಣೆ ಕಾಣದಿದ್ದರೂ ನೀವು ಸರಿಯಾಗಿಯೇ ಧ್ಯಾನ ಮಾಡುತ್ತಲಿರಬಹುದು; ಕೆಲವೊಮ್ಮೆ ಬದಲಾವಣೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ನಿಮಗೇನಾದರೂ ಸಂಶಯವಿದ್ದರೆ, ನಿಮ್ಮ ಆತಂಕಗಳನ್ನು ಧ್ಯಾನದ ಶಿಕ್ಷಕರಿಗೆ ತಿಳಿಸಿ.

4. ಬಯಕೆಗಳಿಂದ ಬಿಡುಗಡೆ

ಕೆಲವೊಮ್ಮೆ ನಿಮ್ಮ ಬಯಕೆಗಳಲ್ಲಿ, ಚಿಂತೆಗಳಲ್ಲಿ ಸಿಲುಕಿಕೊಂಡಿರುವಿರಿ ಅನಿಸುತ್ತದೆಯೆ? ಪ್ರತಿಯೊಬ್ಬರೂ ಬಯಕೆಗಳನ್ನು ಅನುಭವಿಸುತ್ತಾರೆ ಮತ್ತು ಎಲ್ಲಾ ಬಯಕೆಗಳನ್ನು ನಿವಾರಿಸಿಬಿಡುವುದೇ ಧ್ಯಾನದ ಗುರಿಯಲ್ಲ. ಆದರೆ ಸರಿಯಾದ, ದೀರ್ಘಕಾಲೀನ ಧ್ಯಾನ ಮಾಡಿದರೆ, ಬಯಕೆಗಳಿಂದ ಬಿಡುಗಡೆ ಹೊಂದಿದಂತೆ ಅನಿಸುತ್ತದೆ; ಬಯಕೆಗಳನ್ನು ನೀವು ನಿಯಂತ್ರಿಸುತ್ತಿರುವಿರಿ, ಬಯಕೆಗಳು ನಿಮ್ಮನ್ನು ನಿಯಂತ್ರಿಸುತ್ತಿಲ್ಲ ಎಂದು ಅರಿಯುವಿರಿ.

ಗುರುದೇವ್ ಶ್ರೀ ಶ್ರೀ ರವಿಶಂಕರರ ಪ್ರಕಾರ, “ನಿಮಗೆ ಬಯಕೆಗಳಿದ್ದರೆ ಯಾವ ಸಮಸ್ಯೆಯೂ ಇಲ್ಲ, ಆದರೆ ಬಯಕೆಗಳು ನಿಮ್ಮನ್ನು ಹಿಡಿದಿಟ್ಟುಕೊಳ್ಳಬಾರದಷ್ಟೆ. “ನನಗೇನೂ ಬೇಡ. ನಾನೀಗ ಏನನ್ನೂ ಮಾಡುವುದಿಲ್ಲ. ನಾನೇನೂ ಅಲ್ಲ” ಎಂಬ ಧೋರಣೆಯಿದ್ದರೆ ಧ್ಯಾನವಾಗುತ್ತದೆ” ಎನ್ನುತ್ತಾರೆ.

5. ಧ್ಯಾನ ಮಾಡುವಾಗ ಸುಖದಿಂದಿರುವುದು

ನೀವು ಧ್ಯಾನ ಮಾಡುವಾಗ ಕುಳಿತುಕೊಂಡೇ ಧ್ಯಾನ ಮಾಡಬೇಕು. ನೀವು ಸೋಫ ಮೇಲೆ ಕುಳಿತುಕೊಳ್ಳಲಿ, ಕುರ್ಚಿಯ ಮೇಲೆ, ಹಾಸಿಗೆಯ ಮೇಲೆ ಅಥವಾ ನೆಲದ ಮೇಲೆ ಕುಳಿತುಕೊಳ್ಳಲಿ, ನಿಮ್ಮ ದೇಹ ಒಂದು ಕಡೆಗೆ ಬಗ್ಗದಿರಲಿ ಅಥವಾ ಮಲಗಬೇಡಿ. ಮಲಗಿಕೊಂಡರೆ ನಿದ್ದೆ ಬರುತ್ತದೆ. ಮಲಗುವ ಭಂಗಿಗೆ ಹೊಕ್ಕ ಒಡನೆಯೇ ದೇಹವು ನಿದ್ದೆ ಮಾಡಲು ಬಯಸುತ್ತದೆ.

ಬೆನ್ನನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳುವುದು ಮುಖ್ಯ. ಆದರೆ ಆಳವಾದ, ಉತ್ತಮ ಗುಣಮಟ್ಟವುಳ್ಳ ಧ್ಯಾನಕ್ಕಾಗಿ ಸುಖವನ್ನು ಅನುಭವಿಸುವುದೂ ಸಹ ಮುಖ್ಯವೆ. ನೀವು ಚಡಪಡಿಸುತ್ತಲಿದ್ದರೆ ಅಥವಾ ದೇಹದ ನೋವಿನ ಮೇಲೆಯೇ ನಿಮ್ಮ ಗಮನವಿದ್ದರೆ, ದೈಹಿಕ ಒತ್ತಡವನ್ನು ಬಿಡುಗಡೆ ಮಾಡಲು, ಬಲ ಮತ್ತು ನಮ್ಯತೆಯನ್ನು ಕಾಲಕ್ರಮೇಣವಾಗಿ ಬೆಳೆಸಿಕೊಳ್ಳಲು, ಧ್ಯಾನ ಮಾಡುವ ಮೊದಲು ಯೋಗಾಸನಗಳನ್ನು ಮಾಡಿ. ಯೋಗಾಸನಗಳನ್ನು ಮಾಡಿದರೆ, ಧ್ಯಾನ ಮಾಡುವಾಗ ನೀವು ಕುಳಿತುಕೊಳ್ಳುವ ಭಂಗಿಯಲ್ಲಿ ವಿಶ್ರಮಿಸಬಹುದು.

ಗುರುದೇವ್ ಶ್ರೀ ಶ್ರೀ ರವಿಶಂಕರರು, “ಧ್ಯಾನವೆಂದರೆ ಏನನ್ನೂ ಮಾಡದಿರುವ, ಬಿಟ್ಟು ಬಿಡುವ ಕಲೆ” ಎನ್ನುತ್ತಾರೆ.

ಈಗಾಗಲೇ ಹೇಳಿದಂತೆ ಯಾವ ಒಳ್ಳೆಯ ಅಥವಾ ಕೆಟ್ಟ ಅನುಭವವು, ಪರಿಪೂರ್ಣವಾದ ಆಥವಾ ಸೋತುಹೋದ ಅಭ್ಯಾಸದ ಸೂಚಕವಲ್ಲ. ಆದರೆ ನೀವು ಸರಿಯಾದ ರೀತಿಯಲ್ಲಿ ಕಲಿಯಲು ನಿಮ್ಮ ಸಮೀಪದ ಸಹಜ ಸಮಾಧಿ ಧ್ಯಾನದ ಶಿಕ್ಷಕರನ್ನು ಸಂಪರ್ಕಿಸಿ. ಆಗ ನೀವು ಸರಿಯಾದ ರೀತಿಯನ್ನು ಕಲಿಯುವುದಲ್ಲದೆ, ನಿಮಗೆ ಒಂದು ಆಧಾರದ ವ್ಯವಸ್ಥೆಯೂ ದೊರತಂತಾಗುತ್ತದೆ ಮತ್ತು ನಿಮ್ಮಲ್ಲಿ ಏಳುವ ಯಾವುದೇ ಆತಂಕ ಅಥವಾ ಪ್ರಶ್ನೆಗಳಿಗೆ ಉತ್ತರ ನೀಡುವವರು ಸಿಗುತ್ತಾರೆ.

(ಗುರುದೇವ್ ಶ್ರೀ ಶ್ರೀ ರವಿಶಂಕರರ ಪ್ರವಚನಗಳಿಂದ ಸ್ಫೂರ್ತಿ ಪಡೆದದ್ದು)